Advertisement
ಅನುಕ್ರಮ

ಕನ್ನಡವನ್ನು ಅಳಿಸಲು ವಿಲೀನೀಕರಣದ ತಂತ್ರ

Share

ಭಾರತದಲ್ಲಿ ಅಸ್ಪೃಶ್ಯತೆ ಬಹು ದೊಡ್ಡ ಸಾಮಾಜಿಕ ಪಿಡುಗು. ಅದರ ಹುಟ್ಟು ಮತ್ತು ಸಾಕಣೆಗೆ ಮೇಲ್ಜಾತಿಗಳ ಮಡಿವಂತಿಕೆ ಕಾರಣವಾಗಿತ್ತು. ಈಗ ಮೇಲ್ ವರ್ಗದ ಮಡಿವಂತಿಕೆ ಹೊಸ ಬಗೆಯ ಅಸ್ಪೃಶ್ಯತೆಯನ್ನು ವಿಸ್ತರಿಸುತ್ತಿದೆ. ಹಿಂದೆ ವರ್ಣ ವ್ಯವಸ್ಥೆಯಲ್ಲಿದ್ದ ಅಸ್ಪೃಶ್ಯತೆಯು ಈಗ ಶಿಕ್ಷಣ ವ್ಯವಸ್ಥೆಯನ್ನು ಕಾಡುತ್ತಿದೆ. ಕನ್ನಡ ಮಾಧ್ಯಮವೇ ಕಳಂಕದಂತೆ ಆಗಿದೆ. ಈ ಕಳಂಕ ನಿವಾರಣೆಗೆ ಸರಕಾರವು ಕನ್ನಡ ಶಾಲೆಗಳ ಸುಧಾರಣೆಯ ಉಪಾಯವನ್ನು ಯೋಜಿಸುತ್ತಿಲ್ಲ. ಬದಲಿಗೆ ಇಂಗ್ಲಿಷ್ ಮಾಧ್ಯಮದ ಬಣ್ಣ ಕೊಟ್ಟು ಚಂದ ತೋರಿಸುವ ಉಪಾಯ ಮಾಡುತ್ತಿದೆ. ಕರ್ನಾಟಕ ಪಬ್ಲಿಕ್ ಸ್ಕೂಲ್ ಎಂಬುದು ಇನ್ನು ಸರಕಾರಿ ಕನ್ನಡ ಶಾಲೆಗಳ ಹೆಸರಾಗಲಿದೆ. ಏಕೆಂದರೆ ಇನ್ನು ಮಕ್ಕಳ ಸಂಖ್ಯೆ ಕಡಿಮೆ ಇರುವ ಗ್ರಾಮೀಣ ಸರಕಾರಿ ಶಾಲೆಗಳನ್ನು ವಿಲೀನಗೊಳಿಸಿ ದೂರ ದೂರದಲ್ಲೊಂದೊಂದು ಕೆ.ಪಿ.ಎಸ್. ಅಸ್ತಿತ್ವಕ್ಕೆ ಬರಲಿದೆ. ಈ ಪರಿವರ್ತನೆಯಿಂದಾಗಿ ಶಿಕ್ಷಣವು ಖರ್ಚು ಮಾಡಿ ಪಡೆಯುವವರಿಗೆ ಇದೆ; ಬಡವರಿಗೆ ಮರೀಚಿಕೆಯಾಗಲಿದೆ.

ಈ ಅಸ್ಪಶ್ಯತೆಯ ಚಿಗುರು ನಾಲ್ಕು ದಶಕಗಳ ಹಿಂದೆಯೇ ಮೂಡಿದೆ. ಅದಕ್ಕೆ ಉಳ್ಳವರು ನೀರೆರೆದು ಬೆಳೆಸುತ್ತಿದ್ದರು. ನಾನು ನನ್ನ ಮಗನನ್ನು 1980ರ ದಶಕದಲ್ಲಿ ಸುಳ್ಯದಲ್ಲಿ ಸರಕಾರಿ ಕನ್ನಡ ಮಾಧ್ಯಮ ಶಾಲೆಗೆ ಸೇರಿಸಿದಾಗಲೇ ಅನೇಕ ಉಳ್ಳವರು ನನ್ನಲ್ಲಿ ಅಚ್ಚರಿಯಿಂದ ಕೇಳಿದ್ದರು, “ನೀವು ಆ ಶಾಲೆಗೆ ಮಗನನ್ನು ಸೇರಿಸಿದ್ದೀರಾ? ನಿಮಗೆ ಮಗನ ಭವಿಷ್ಯದ ಚಿಂತೆ ಇಲ್ಲವೇ?”. ಈ ಪ್ರಶ್ನೆ ಸಹಜವೆಂಬಂತೆ ತಿಳಿದು ನನ್ನದೇ ಕಾರಣಗಳನ್ನು ಹೇಳಿದ್ದೆ. ಆದರೆ ಆ ಪ್ರಶ್ನೆಯ ಆಳದಲ್ಲಿ ಅಸ್ಪೃಶ್ಯತೆಯ ಲೇಪ ಇದ್ದದ್ದನ್ನು ನಾನು ಗುರುತಿಸಿರಲಿಲ್ಲ. ನಂತರದ ದಶಕಗಳಲ್ಲಿ ಆ ಶಾಲೆಗೆ ಸೇರುವ ಊರಿನ ಮಕ್ಕಳೇ ಕಡಿಮೆಯಾಗುತ್ತ ಬಂದು ಇತ್ತೀಚೆಗೆ ಅದು ಉತ್ತರ ಕರ್ನಾಟಕದಿಂದ ಬರುವ ವಲಸೆ ಕೆಲಸಗಾರರ ಮಕ್ಕಳಿಗೆ ಸೀಮಿತವಾಗಿದೆ.

ಯಾವ ಶಾಲೆ ಊರಿನ ಶ್ರೀಮಂತರ ಮತ್ತು ಬಡವರ ಮಕ್ಕಳನ್ನು ಸಮಾನವಾಗಿ ಬೆಳೆಸಿ ಡಾಕ್ಟರ್, ಇಂಜಿನಿಯರ್, ಅಕೌಂಟೆಂಟ್, ಲಾಯರ್, ಲೆಕ್ಚರರ್, ಆಫೀಸರ್, ಮಾಸ್ತರ್ ಇತ್ಯಾದಿಯಾಗಿ ವಿವಿಧ ಹುದ್ದೆಗಳನ್ನು ಪಡೆಯಲು ಹಾಗೂ ಉನ್ನತ ಆದಾಯವನ್ನು ಗಳಿಸಲು ಅರ್ಹತೆಯನ್ನು ಒದಗಿಸಿ ಕೊಟ್ಟಿತೋ ಆ ಶಾಲೆಗೆ ಕನ್ನಡ ಮಾಧ್ಯಮದ್ದೆಂಬ ಕಾರಣದಿಂದ ಅವರು ತಮ್ಮ ಮಕ್ಕಳನ್ನು ಕಳಿಸಲಿಲ್ಲ. ತಾವು ಕಲಿತ ಶಾಲೆ ಎಂಬ ಅಭಿಮಾನವನ್ನೇ ಇಟ್ಟುಕೊಳ್ಳದೆ ಅದನ್ನು ಬೆಳೆಸಲಿಲ್ಲ. ಊರಿನ ಬಡ ಮಕ್ಕಳಿಗಾದರೂ ಇರಲಿ ಎಂಬ ಉದ್ದೇಶದಿಂದ ಶಾಲೆಯ ಅಭಿವೃದ್ಧಿಗೆ ನೆರವಾಗಲಿಲ್ಲ. ಹೀಗೆ ಮೂಲೆಗುಂಪಾದ ಶಾಲೆಗೆ ಬಂದ ಇನ್ನೊಂದು ಆತಂಕವೆಂದರೆ ತನ್ನಿಂದ ಒಂದು ಕಿ.ಮೀ. ದೂರದಲ್ಲಿರುವ ಸರಕಾರಿ ಶಾಲೆಯನ್ನು ಕರ್ನಾಟಕ ಪಬ್ಲಿಕ್ ಸ್ಕೂಲ್ ಮಾಡಿದರು. ಅಲ್ಲಿ ಸರಕಾರವೇ ಉಚಿತವಾಗಿ ಇಂಗ್ಲಿಷ್ ಮಾಧ್ಯಮವನ್ನು ಅಳವಡಿಸಿತು. ಸಹಜವಾಗಿಯೇ ಈ ಶಾಲೆಯ ವ್ಯಾಪ್ತಿಯೊಳಗಿದ್ದು ಇಲ್ಲಿಗೇ ಸೇರಲಿದ್ದ ಬಡವರ ಮಕ್ಕಳೂ ಆ ಶಾಲೆಗೆ ಸೇರಿದರು. ಅಂದರೆ ಸರಕಾರವೇ ಈ ಕನ್ನಡ ಶಾಲೆ ಪ್ರಸ್ತುತವಲ್ಲ ಎಂಬುದನ್ನು ಛಾಪಿಸಿತು. ನಂತರ ಒಂದೆರಡೇ ವರ್ಷಗಳಲ್ಲಿ ಕಡಿಮೆಯಾದ ಮಕ್ಕಳ ಪ್ರಮಾಣಕ್ಕೆ ಅನುಗುಣವಾಗಿ ಅಲ್ಲಿನ ಶಿಕ್ಷಕರ ಸಂಖ್ಯೆಯನ್ನು ಇಳಿಸಲಾಯಿತು. ಅದರಿಂದಾಗಿ ಆ ಶಾಲೆಯ ಪ್ರಸ್ತುತತೆ ಮತ್ತೂ ಕಡಿಮೆಯಾಯಿತು. ಅಲ್ಲಿನ ಶಿಕ್ಷಕಿಯರು ತಮ್ಮ ಹುದ್ದೆಗಳನ್ನು ಉಳಿಸಿಕೊಳ್ಳಲು ವಲಸೆ ಕಾರ್ಮಿಕರು ಬಾಡಿಗೆಗೆ ಇದ್ದ ಕಾಲೊನಿಗಳತ್ತ ಹೋಗಿ ಅಂಗಲಾಚಿದರು. ಆ ಮಕ್ಕಳು ಸೇರ್ಪಡೆಗೊಂಡು ಹಾಜರಿಗೆ ಇಲ್ಲದಿದ್ದರೂ ಪರವಾಗಿಲ್ಲ, ಸಂಖ್ಯೆಯನ್ನು ತುಂಬಿಸಲು ಸಾಕಾಗಿತ್ತು. ಇಂತಹ ಪರಕೀಯ ಅಸ್ತಿತ್ವದ ಅವಲಂಬನೆ ಸ್ಥಳೀಯ ಶಾಲೆಗೆ ಬರುವುದೆಂದರೆ ಅದೆಂತಹ ದುರಂತ!

ಇಂತಹ ದುರಂತಗಳಿಗೆ ಬಲಿಯಾದ ಶಾಲೆಗಳು ದಕ್ಷಿಣ ಕನ್ನಡ ಜಿಲ್ಲೆಯ ಎಲ್ಲಾ ಊರುಗಳಲ್ಲಿವೆ. ನಿಧಾನವಾಗಿ ಕಾಯಿಲೆಯು ವ್ಯಾಪಿಸುವಾಗ ಅದಕ್ಕೆ ಒಗ್ಗಿಕೊಂಡು ಜೀವಿಗಳು ಸಾಯುತ್ತವೆ. ಹಾಗೆಯೇ ಮಾಡು, ಗೋಡೆಗಳು ಶಿಥಿಲವಾಗಿ ಶಾಲೆಗಳು ಅಪಾಯಕಾರಿಯಾದಾಗ ಮಕ್ಕಳ ಸೇರ್ಪಡೆಯೂ ಕಡಿಮೆಯಾಗಿ, ಇದ್ದ ಶಿಕ್ಷಕರೂ ವರ್ಗಾವಣೆಗೊಂಡರೆ ಮತ್ತೆ ಶಾಲೆಯ ಉಳಿವು ಹೇಗೆ ಸಾಧ್ಯ? ಕನ್ನಡ ಮಾಧ್ಯಮಕ್ಕೆ ಬೆಲೆ ಕೊಡದೆ ಸರಕಾರ ಮಾಡಿದ ಇಂತಹ ಅಪರಾಧಕ್ಕೆ ಶಿಕ್ಷೆ ಯಾರಿಗೆ?

ಈ ಸಮಸ್ಯೆಗೆ ಸಂಬಂಧಿಸಿ “ಅಪರಾಧಿ ನಾನಲ್ಲ, ಅಪರಾಧವೆನಗಿಲ್ಲ” ಎಂದು ಹೇಳುವ ಅವಕಾಶ ಸರಕಾರಕ್ಕೂ ಇದೆ, ಲಾಭಕ್ಕಾಗಿ ಶಾಲೆ ಮಾಡಿದವರಿಗೂ ಇದೆ, ಪಕ್ಕದಲ್ಲಿರುವ ಸರಕಾರಿ ಶಾಲೆಯನ್ನು ಬಿಟ್ಟು ದೂರದ ಇಂಗ್ಲಿಷ್ ಖಾಸಗಿ ಶಾಲೆಗಳಿಗೆ ಮಕ್ಕಳನ್ನು ಕಳಿಸುವ ಹೆತ್ತವರಿಗೂ ಇದೆ. ವಾಸ್ತವದಲ್ಲಿ ಇವರೆಲ್ಲರೂ ಅಪರಾಧಿಗಳೇ. ಆದರೆ ಗುರುತಿಸಲ್ಪಡದೆ ಕಳ್ಳಾಟ ಆಡಿದ ಅಪರಾಧಿ ಎಂದರೆ ಶಿಕ್ಷಣ ಇಲಾಖೆ. ಐ.ಎ.ಎಸ್. ಪದವೀಧರರಾದ ಆಯುಕ್ತರು, ಕಮಿಶನರ್ರು, ಕೆ.ಎ.ಎಸ್. ಆದ ಡಿಡಿಪಿಐ ಇವರೆಲ್ಲ ರಾಜಕಾರಣಿಗಳ ತಾಳಕ್ಕೆ ತಕ್ಕಂತೆ ಕುಣಿದರು. ಹಾಗಾಗಿಯೇ ಮುಖ್ಯಮಂತ್ರಿಯಾಗಿದ್ದು ತಮ್ಮ ಅಧಿಕಾರ ಮುಗಿದು ಚುನಾವಣೆಗೆ ಹೋಗುವ ಹೊತ್ತಿನಲ್ಲಿ ಅವಸರವಸರವಾಗಿ 2007ರಲ್ಲಿ ಒಂದು ಜನಪ್ರಿಯ ಕಾರ್ಯಕ್ರಮವೆಂಬ ಊಹನೆಯಿಂದ ಮಾನ್ಯ ಶ್ರೀ ಎಚ್ ಡಿ ಕುಮಾರಸ್ವಾಮಿಯವರು ಸರಕಾರಿ ಶಾಲೆಗಳನ್ನು ಇಂಗ್ಲಿಷ್ ಮೀಡಿಯಂ ಶಾಲೆಗಳಾಗಿ ಪರಿವರ್ತಿಸುವ ನಿರ್ಧಾರ ಮಾಡಲು ಸಾಧ್ಯವಾಯಿತು. ಆಗ ಅವರಿಗೆ ಇಂತಹ ಪ್ರಯೋಗದ ವಾಸ್ತವಿಕ ದುಷ್ಪರಿಣಾಮಗಳನ್ನು ಮತ್ತು ಸಂಪನ್ಮೂಲಗಳ ಪೂರೈಕೆಯ ಸವಾಲುಗಳನ್ನು ಶಿಕ್ಷಣ ಇಲಾಖೆಯ ಆಯುಕ್ತರು ಹಾಗೂ ಕಮಿಶನರ್‍ಗಳು, ಡಿ.ಡಿ.ಪಿ.ಐಗಳು ತಿಳಿಸಬೇಕಿತ್ತು. ಬದಲಾಗಿ ಅವರೆಲ್ಲರೂ ಸರಕಾರದ ಹಣವನ್ನು ವೆಚ್ಚ ಮಾಡುವ ಸುಗ್ರ್ರಾಸದ ಅವಕಾಶವಾಗಿ ಕೆ.ಪಿ.ಎಸ್.ಗಳ ಸ್ಥಾಪನೆಯನ್ನು ಬೆಂಬಲಿಸಿದರು. ‘ಕರ್ನಾಟಕ ಪಬ್ಲಿಕ್ ಸ್ಕೂಲ್’ ಎಂಬುದಾಗಿ ಕರೆದದ್ದರಿಂದ ಅದು ಇಂಗ್ಲಿಷ್ ಮಿಡಿಯಂ ಶಾಲೆ ಎಂದೇ ಜನಜನಿತವಾಯಿತು. ಇದು ಖಾಸಗಿ ಶಾಲೆಗಳ ಆಟಾಟೋಪವನ್ನು ನಿಲ್ಲಿಸುವ ಒಂದು ಪ್ರಯೋಗವೆಂಬ ವಿವರಣೆ ನೀಡಲಾಯಿತು. ಹೀಗೆ ಆರಂಭವಾದ ಒಂದು ಹೊಸ ಬೆಳವಣಿಗೆ ಪ್ರಚಾರ ಪಡೆದಷ್ಟು ವ್ಯಾಪಕವಾಗದಿದ್ದರೂ ಕೆಲವೊಂದು ಸೈಡ್‍ಇಫೆಕ್ಟ್‍ಗಳಿಗೆ ಕಾರಣವಾಯ್ತು.

Advertisement

ಒಂದನೇಯದಾಗಿ, ಹತ್ತಿರದ ಸರಕಾರಿ ಶಾಲೆಗಳ ಮಕ್ಕಳನ್ನು ತನ್ನಲ್ಲಿಗೆ ಸೆಳೆದು ಆ ಶಾಲೆಗಳಲ್ಲಿ ವಿದ್ಯಾರ್ಥಿಗಳ ಕೊರತೆ ಬಾಧಿಸತೊಡಗಿತು. ಎರಡನೇಯದಾಗಿ, ಇಂಗ್ಲಿಷನ್ನು ಸಮರ್ಪಕವಾಗಿ ಕಲಿಸುವ ಶಿಕ್ಷಕರಿಲ್ಲದೆ ಇಂಗ್ಲಿಷ್ ಮೀಡಿಯಂ ಎಂಬುದು ಘೋಷಣೆಗೆ ಅಷ್ಟೇ ಸೀಮಿತವಾಯಿತು. ಮೂರನೇಯದಾಗಿ, ಬೈಲಿಂಗ್ಪಲ್ ಎಂದರೆ ಕನ್ನಡ ಮತ್ತು ಇಂಗ್ಲಿಷ್ ಎರಡೂ ಭಾಷೆಗಳಲ್ಲಿ ಪಠ್ಯವನ್ನು ನೀಡಿದ್ದರಿಂದ ಶಿಕ್ಷಕರು ಇಂಗ್ಲಿಷ್‍ನಲ್ಲಿ ಕಲಿಸದಿದ್ದರೂ ಪರವಾಗಿಲ್ಲವೆಂಬ ಅನುಕೂಲ ನೋಡಿದರು. ನಾಲ್ಕನೇಯದಾಗಿ ಕೆಪಿಎಸ್‍ಗಳಲ್ಲಿ ಏರುತ್ತಿದ್ದ ವಿದ್ಯಾರ್ಥಿಗಳ ಸಂಖ್ಯೆಗನುಗುಣವಾಗಿ ಕಟ್ಟಡದ ಸೌಲಭ್ಯವನ್ನಾಗಲೀ ಇತರ ತಾಂತ್ರಿಕ ಸೌಲಭ್ಯಗಳನ್ನಾಗಲೀ ನೀಡುವಲ್ಲಿ ಶಿಕ್ಷಣ ಇಲಾಖೆ ಕ್ರಿಯಾಶೀಲವಾಗಿ ಇರದಿದ್ದುದು ಖಾಸಗಿ ಶಾಲೆಗಳನ್ನು ಮಟ್ಟ ಹಾಕುವಲ್ಲಿ ಈ ಪ್ರಯೋಗ ವಿಫಲವಾಯಿತು. ಹಾಗಿದ್ದರೂ ಕೆ.ಪಿ.ಎಸ್ ಶಾಲೆಗಳು ಸಮೀಪದ ಸರಕಾರಿ ಶಾಲೆಗಳನ್ನು ದುರ್ಬಲಗೊಳಿಸಿದುವು. ಐದನೇಯದಾಗಿ, ಕೆಲವು ಸರಕಾರಿ ಶಾಲೆಗಳ ಅಭಿವೃದ್ಧಿ ಮಂಡಳಿಗಳು ತಾವಾಗಿಯೇ ಇಂಗ್ಲಿಷ್ ಮಾಧ್ಯಮಕ್ಕೆ ಪರಿವರ್ತಿಸುವ ನಿರ್ಧಾರ ಮಾಡಿ ಅನುಮತಿಗೆ ಅರ್ಜಿ ಸಲ್ಲಿಸಿದರು. ಅಂತೂ ಗ್ರಾಮೀಣ ಶಾಲೆಗಳನ್ನು ಉಳಿಸಿಕೊಳ್ಳಲು ಇಂಗ್ಲಿಷ್ ಮಾಧ್ಯಮಕ್ಕೆ ಪರಿವರ್ತಿಸಿದರಷ್ಟೇ ಸಾಧ್ಯ ಎಂಬ ಮಿಥ್ಯಾ ಪ್ರಚಾರ ಯಥೇಷ್ಟವಾಗಿ ಆಯಿತು.

ಕೆ.ಪಿ.ಎಸ್.ಗಳ ಸ್ಥಾಪನೆಯು ಶಿಕ್ಷಣ ಸುಧಾರಣೆಯನ್ನು ಮಾಡಿದ ಕೀರ್ತಿ ನೀಡುತ್ತದೆಂಬ ಭಾವನೆ ಬಿ.ಜೆ.ಪಿ ಸರಕಾರದ ಶಿಕ್ಷಣ ಮಂತ್ರಿಗಳಾದ ಶ್ರೀ ಸುರೇಶ ಕುಮಾರ್‍ರವರಿಗೂ ಇತ್ತು. ಅವರೂ ಕೆಲವು ಶಾಲೆಗಳನ್ನು ಕೆ.ಪಿ.ಎಸ್. ಮಾಡುವ ಘೋಷಣೆ ಮಾಡಿದರು. ಅವರು ಕೂಡಾ ಅದರ ಋಣಾತ್ಮಕ ಪರಿಣಾಮಗಳನ್ನು ಲಕ್ಷಿಸಲಿಲ್ಲ. ಇನ್ನು, ಪ್ರಸ್ತುತ ಕಾಂಗ್ರೆಸ್ ಸರಕಾರದ ಶಿಕ್ಷಣ ಸಚಿವರಾದ ಶ್ರೀ ಮಧು ಬಂಗಾರಪ್ಪರವರು ಮುಂದಿನ ವರ್ಷ 700 ಸುಧಾರಿತ ಕೆ.ಪಿ.ಎಸ್. (ಒಚಿgಟಿeಣ) ಶಾಲೆಗಳನ್ನು ಸ್ಥಾಪಿಸಲು ಹೊರಟಿದ್ದಾರೆ. ಅದರಲ್ಲಿ ಉತ್ತಮ ಕಟ್ಟಡ, ಗುಣಮಟ್ಟದ ಕಲಿಕೆ. ಕೃತಕ ಬುದ್ಧಿಮತ್ತೆ, ಡಿಜಿಟಲ್ ಬೋರ್ಡ್ ಇತ್ಯಾದಿ ಸೌಲಭ್ಯಗಳನ್ನು ನೀಡುವ ಭರವಸೆ ನೀಡಿದ್ದಾರೆ. ಆದರೆ ಇಂತಹ ಕೆ.ಪಿ.ಎಸ್. ಶಾಲೆಗಳಿಗೆ ಸಮೀಪದ ಸರಕಾರಿ ಶಾಲೆಗಳನ್ನು ವಿಲೀನಗೊಳಿಸುವ ಗುಟ್ಟನ್ನು ಇಟ್ಟುಕೊಂಡಿದ್ದಾರೆ. ಈ ಗುಟ್ಟನ್ನು ಕನ್ನಡಪ್ರಭ ಪತ್ರಿಕೆ ಬಹಿರಂಗಗೊಳಿಸಿದ್ದು ಇಂತಹ ಕ್ರಮದಿಂದಾಗಿ ಕರ್ನಾಟಕದ ಸುಮಾರು 7000 ಶಾಲೆಗಳನ್ನು ಬಂದ್ ಮಾಡುವ ಹುನ್ನಾರ ನಡೆದಿದೆ ಎಂಬುದು ಈಗ ಜಗಜ್ಜಾಹೀರಾಗಿದೆ. ಯಾವುದೇ ಕೆ.ಪಿ.ಎಸ್. ನ 6-7 ಕಿ.ಮೀ ವ್ಯಾಪ್ತಿಯಲ್ಲಿರುವ ಶಾಲೆಗಳಲ್ಲಿ ಸಹಜವಾಗಿಯೇ ಮಕ್ಕಳ ಸಂಖ್ಯೆ ಕಡಿಮೆಯಾಗುತ್ತದೆ. ಹಾಗೆ 50ಕ್ಕಿಂತ ಕಡಿಮೆ ಮಕ್ಕಳಿರುವ ಶಾಲೆಗಳನ್ನು ಕೆ.ಪಿ.ಎಸ್.ನೊಂದಿಗೆ ವಿಲೀನ ಮಾಡಬೇಕೆಂಬ ಶಿಕ್ಷಣ ಇಲಾಖೆಯ ಕ್ರಮದ ಒಂದು ಪುರಾವೆ ಪತ್ರಿಕೆಗೆ ಸಿಕ್ಕಿದೆ. ಅದರ ಪ್ರಕಾರ “ಖಾಸಗಿ ಶಾಲೆಗಳಿಂದ ಸರ್ಕಾರಿ ಶಾಲೆಗಳಿಗೆ ಮಕ್ಕಳನ್ನು ಸೆಳೆಯಲು ಈ ಉನ್ನತೀಕರಣ” ಎಂಬ ಸಚಿವರ ಮಾತಿನಲ್ಲಿ ಸತ್ಯವಿಲ್ಲ. ಬದಲಿಗೆ 50ಕ್ಕಿಂತ ಕಡಿಮೆ ಮಕ್ಕಳಿರುವ ಸುಮಾರು 25,000 ಗ್ರಾಮೀಣ ಸರಕಾರಿ ಕನ್ನಡ ಶಾಲೆಗಳನ್ನು ಮುಚ್ಚುವ ಹುನ್ನಾರವಿದೆಯೆಂದು ಕನ್ನಡಪ್ರಭ ಪತ್ರಿಕೆ ಪ್ರತಿಪಾದಿಸಿದೆ. ಇದಕ್ಕೆ 15-10-2025ರಂದು ಸರ್ಕಾರ ಹೊರಡಿಸಿರುವ ಆದೇಶ ಸಂಖ್ಯೆ ಐಪಿ 64 ಎಂಪಿಇ 2024 ಪ್ರಕಾರ 1ರಿಂದ 5 ಕಿ.ಮೀ ವ್ಯಾಪ್ತಿಯ ಒಳಗಿನ ಚಿಕ್ಕ ಶಾಲೆಗಳನ್ನು ವಿಲೀನಗೊಳಿಸುವ ಸೂಚನೆ ಇದೆ. ಉದಾಹರಣೆಗೆ ಚೆನ್ನಪಟ್ಟಣ ತಾಲೂಕಿನ ಹೊಂಗನೂರಿನಲ್ಲಿ ಪೈಲೆಟ್ ಯೋಜನೆ ಪ್ರಾರಂಭಗೊಂಡಿದ್ದು ಶಿಕ್ಷಣ ಇಲಾಖೆಯು ಸಮೀಪದ ಆರು ಕಿಮೀ ವ್ಯಾಪ್ತಿಯಲ್ಲಿರುವ ಏಳು ಶಾಲೆಗಳ ವಿಲೀನೀಕರಣಕ್ಕೆ ಆಜ್ಞೆ ಹೊರಡಿಸಿದೆ. ಇದು ಹೊಂಗನೂರಿನ ಶಾಲೆಗೆ ಸಂಬಂಧಿಸಿದ್ದಾಗಿದೆ. ಹಿಂದಿನ ರಾಮನಗರ ಜಿಲ್ಲೆಯ ಚೆನ್ನಪಟ್ಟಣ ತಾಲೂಕಿನ ಹೊಂಗನೂರಿನ ಹೈಸ್ಕೂಲಿಗೆ ಅಲ್ಲಿನ ಹಳೆವಿದ್ಯಾರ್ಥಿ ಡಾ. ವೆಂಕಟಪ್ಪರು 14 ಕೋಟಿ ವೆಚ್ಚದಲ್ಲಿ 50 ಕೊಠಡಿಗಳ ಕಟ್ಟಡ ನಿರ್ಮಿಸಿ ಅದರಲ್ಲಿ 40 ಕಂಪ್ಯೂಟರ್‍ಗಳ ಸಹಿತ ಗಣಿತ ಮತ್ತು ವಿಜ್ಞಾನಗಳ ಪ್ರಯೋಗಾಲಯಗಳು, ಡಿಜಿಟಲ್ ಬೋರ್ಡ್‍ಗಳು, ಗ್ರಂಥಾಲಯ ಹಾಗೂ ಕ್ರೀಡಾಸಲಕರಣೆಗಳ ಸಹಿತ ತಾನು ಕಲಿತ ಶಾಲೆಯನ್ನು ಉನ್ನತೀಕರಣಗೊಳಿಸಿ ಕೊಡುಗೆ ನೀಡಿದ್ದಾರೆ. ಈಗ ಶಿಕ್ಷಣ ಇಲಾಖೆಯು ಆ ಶಾಲೆಯನ್ನು ಕೆಪಿಎಸ್ ಎಂದು ಪರಿಗಣಿಸಿ ಅದಕ್ಕೆ ಸುತ್ತಮುತ್ತಲಿನ ಏಳು ಸಣ್ಣ ಶಾಲೆಗಳ ವೀಲೀಕರಣಕ್ಕೆ ಆದೇಶ ಹೊರಡಿಸಿದೆ. ಆದರೆ ಡಾ. ವೆಂಕಟಪ್ಪರು ತನ್ನ ಹಳೆಯ ಶಾಲೆಗೆ ಕೊಡುಗೆ ನೀಡಿರುವುದು ಹತ್ತಿರದ ಶಾಲೆಗಳನ್ನು ಮುಚ್ಚುವುದಕ್ಕಲ್ಲ. ಇತರ ಶಾಲೆಗಳ ಅಭಿವೃದ್ಧಿಗೆ ಒಂದು ಮಾದರಿ ಇರಲಿ ಎಂಬುದು ಅವರ ಉದ್ದೇಶ ಇರಬೇಕು. ಆದರೆ ಇದೀಗ ಆದೇಶದಲ್ಲಿ ಡಾ. ವೆಂಕಟಪ್ಪರ ಹೆಸರೇ ಇಲ್ಲದೆ ಶಿಕ್ಷಣ ಇಲಾಖೆಯು ಅವರು ನೀಡಿದ ಕೊಡುಗೆಯನ್ನು ಉಲ್ಲೇಖಿಸದೆ ಕನ್ನಡ ಶಿಕ್ಷಣವನ್ನು ಮುಚ್ಚುವ ಹುನ್ನಾರ ನಡೆಸಿದೆ.

ರಾಜ್ಯದಲ್ಲಿ ಈಗಾಗಲೇ 307 ಕೆಪಿಎಸ್ ಶಾಲೆಗಳು ಕಾರ್ಯ ನಿರ್ವಹಿಸುತ್ತಿದ್ದು ಇನ್ನು ಮುಂದಿನ ವರ್ಷ 700 ಶಾಲೆಗಳನ್ನು ವ್ಯಾಪಿಸಿ ಸರಾಸರಿ 7ರಿಂದ 10 ಶಾಲೆಗಳು ಮುಚ್ಚಿದರೆ ಕನಿಷ್ಟ 7000 ಶಾಲೆಗಳು ಮುಚ್ಚುವುದು ಗ್ಯಾರಂಟಿಯಾಗುತ್ತದೆ. ಹೀಗೆ ಪ್ರಕ್ರಿಯೆ ಮುಂದುವರಿದರೆ ಮುಂದಿನ ವರ್ಷ 50 ಕ್ಕಿಂತ ಕಡಿಮೆ ಮಕ್ಕಳಿರುವ 25,000 ಸಣ್ಣ ಶಾಲೆಗಳು ನಾಪತ್ತೆಯಾಗಲಿವೆ! ಇದು ಶಿಕ್ಷಣವನ್ನು ಅಂದರೆ ಪರೋಕ್ಷವಾಗಿ ಕನ್ನಡವನ್ನು ಕೊಲ್ಲುವುದೇ ಆಗುತ್ತದೆ. ಈ ಮಧ್ಯೆ ಕನ್ನಡ ಪ್ರಭದಲ್ಲಿ ಶುಭವಾರ್ತೆಯೆಂದು ಬಂದಿದೆ. ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಅಧ್ಯಕ್ಷರು ನೋಟೀಸ್ ನೀಡಿ ಶಿಕ್ಷಣ ಇಲಾಖೆಯ ಕ್ರಮದ ಬಗ್ಗೆ ಕಾರಣಗಳೊಂದಿಗೆ ಸೂಕ್ತ ಸ್ಪಷ್ಟನೆ ನೀಡಲು ತಿಳಿಸಿದ್ದಾರೆ. ಶಿಕ್ಷಣ ಇಲಾಖೆ ಹೇಗೆ ಸ್ಪಂದಿಸುತ್ತದೆಂದು ನೋಡಬೇಕು.

ನಾನು ಐದನೇ ತರಗತಿಯಲ್ಲಿ (ಸುಮಾರು 1960) ಇದ್ದಾಗ “ಕನ್ನಡಕೆ ಹೋರಾಡು ಕನ್ನಡದ ಕಂದ” ಎಂಬ ಪದ್ಯದ ಕೊನೆಗೆ “ಕನ್ನಡವ ಕೊಲುವ ಮುನ್ ಓ ನನ್ನ ಕೊಲ್ಲು” ಎಂತ ರಾಷ್ಟ್ರಕವಿ ಕುವೆಂಪು ಬರೆದದ್ದನ್ನು ನಮ್ಮ ಮಾಸ್ತರ್ರು ವಿವರಿಸಿದಾಗ “ಯಾಕಪ್ಪಾ ಹೀಗೆ ಬರೆದಿದ್ದಾರೆ? ಅಂತಹದ್ದೇನು ಆತಂಕವಿದೆ” ಎಂದು ನನಗೆ ಅನ್ನಿಸಿತ್ತು. ಆದರೆ ಇಂದು ಖಡ್ಗದ ಧಾರೆಗೆ ಕನ್ನಡ ಭಾಷೆಯೇ ಕೊರಳನ್ನು ಕೊಡಬೇಕಾದ ಸ್ಥಿತಿ ಇದೆ. ಆದರೆ ಆತ್ಮಾಹುತಿ ನೀಡಲು ಕವಿ ಇಲ್ಲ.

 

Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
Advertisement
ಡಾ.ಚಂದ್ರಶೇಖರ ದಾಮ್ಲೆ

ಡಾ. ಚಂದ್ರಶೇಖರ ದಾಮ್ಲೆಯವರು ಸುಳ್ಯದ ನೆಹರು ಮೆಮೋರಿಯಲ್ ಕಾಲೇಜ್ ನಲ್ಲಿ ಸಮಾಜಶಾಸ್ತ್ರ ಪ್ರಾಧ್ಯಾಪಕರಾಗಿ 35 ವರ್ಷಗಳಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದವರು. ವೃತ್ತಿಯಲ್ಲಿರುವಾಗಲೇ ರಾಷ್ಟ್ರೀಯ ಸೇವಾ ಯೋಜನಾಧಿಕಾರಿಯಾಗಿ ಸಮಾಜಸೇವೆಯಲ್ಲಿ ತೊಡಗಿಕೊಂಡವರು. ಸಾಂಸ್ಕೃತಿಕ ಸಂಘದ ಮೂಲಕ ಮಕ್ಕಳಿಗೆ ಯಕ್ಷಗಾನ ನಿರ್ದೇಶಕನ, ಸುಳ್ಯದಲ್ಲಿ ಯಕ್ಷಗಾನ ಹಿತರಕ್ಷಣಾ ವೇದಿಕೆಯ ಸ್ಥಾಪನೆ, ಸಂಪೂರ್ಣ ಸಾಕ್ಷರತಾ ಆಂದೋಲನದಲ್ಲಿ ಸಂಪನ್ಮೂಲ ವ್ಯಕ್ತಿ, ಕನ್ನಡಮಾಧ್ಯಮದಲ್ಲಿ ಸ್ನೇಹ ಶಿಕ್ಷಣ ಸಂಸ್ಥೆಯ ಸ್ಥಾಪನೆ ಮುಂತಾದ ಸಮಾಜಮುಖಿ ಕಾರ್ಯಗಳಲ್ಲಿ ಸೇವೆ ನೀಡಿದವರು. ಶಿಕ್ಷಣದಲ್ಲಿ ಸೃಜನಶೀಲತೆಗೆ ಒತ್ತು ನೀಡುವ ದಾಮ್ಲೆಯವರು ಸಂಶೋಧಕರಾಗಿದ್ದು ಕನ್ನಡ ಇಂಗ್ಲಿಷ್ ಭಾಷೆಗಳಲ್ಲಿ ಕೃತಿ ರಚನೆ ಮಾಡಿದವರು. 'ನೆಲದನಂಟು' ಮತ್ತು "ಶಾಲೆ ಎಲ್ಲಿದೆ?" ಇವು ಇವರ ಪ್ರಸಿದ್ಧ ಕಾದಂಬರಿಗಳು. ಅನೇಕ ಪ್ರಶಸ್ತಿ ಸಮ್ಮಾನಗಳಿಂದ ಗೌರವಿಸಲ್ಪಟ್ಟ ದಾಮ್ಲೆಯವರಿಗೆ ಅಸಾಮಾನ್ಯ ಕನ್ನಡಿಗ ಪ್ರಶಸ್ತಿ, ಯಕ್ಷಮಂಗಳ ಪ್ರಶಸ್ತಿ, ಅರಣ್ಯಮಿತ್ರ ಮತ್ತು ಜಲಮಿತ್ರ ಪ್ರಶಸ್ತಿ, Nation Builder ಪ್ರಶಸ್ತಿ ಮುಂತಾದುವು ಲಭಿಸಿವೆ. ಹೊಸದಿಗಂತ ಪತ್ರಿಕೆಯಲ್ಲಿ "ಇದ್ಯಾಕೆ ಹೀಗೆ " ಅಂಕಣವನ್ನು ಬರೆಯುತ್ತಿದ್ದರು.

Published by
ಡಾ.ಚಂದ್ರಶೇಖರ ದಾಮ್ಲೆ

Recent Posts

ಕಿಸಾನ್ ಪಾಠಶಾಲೆ ಮೂಲಕ 20 ಲಕ್ಷ ರೈತರಿಗೆ ಆಧುನಿಕ ಕೃಷಿ ತರಬೇತಿ

ಉತ್ತರ ಪ್ರದೇಶ ಸರ್ಕಾರವು ಕಿಸಾನ್ ಪಾಠಶಾಲೆ ಕಾರ್ಯಕ್ರಮದ ಮೂಲಕ 2025–26 ಹಂಗಾಮಿನಲ್ಲಿ 20.15…

7 hours ago

ಕೀಟನಾಶಕ ಕಾಯ್ದೆಯಲ್ಲಿ ಮಹತ್ವದ ಬದಲಾವಣೆ | ಕೇಂದ್ರ ಸರ್ಕಾರದಿಂದ ಹೊಸ ಕರಡು ಮಸೂದೆ

ಕರಡು ಪೆಸ್ಟಿಸೈಡ್ಸ್ ಮ್ಯಾನೇಜ್ಮೆಂಟ್ ಬಿಲ್–2025 ಕುರಿತು ಸಾರ್ವಜನಿಕ ಅಭಿಪ್ರಾಯಕ್ಕೆ ಕೇಂದ್ರ ಆಹ್ವಾನ ಮಾಡಿದೆ.…

8 hours ago

ಕುರಿ ಸಾಕಾಣಿಕ ಘಟಕ ಸ್ಥಾಪನೆಗೆ ಸಹಾಯಧನ

ಕುರಿಸಾಕಾಣಿಕೆ ಅದೇಷ್ಟೋ ಯುವಕರು ತಮ್ಮ ಸ್ವಂತ ಉದ್ಯಮವಾಗಿ ಆಯ್ಕೆ ಮಾಡಿಕೊಂಡಿದ್ದಾರೆ. ಇದರಿಂದ ಹೆಚ್ಚು…

9 hours ago

ವೃತ್ತಿಯಲ್ಲಿ ಇಂಗ್ಲಿಷ್ ಪ್ರೊಫೆಸರ್- ಕೃಷಿಕನಾಗಿಯೂ ಯಶಸ್ಸು…!

ಯಾವುದೇ ವೃತ್ತಿಯಲ್ಲಿದ್ದರೂ ಕೃಷಿಯನ್ನು ಬಿಡಬಾರದು ಎಂಬ ಹಠದಿಂದ ಜೀವನದಲ್ಲಿ ಯಶಸ್ಸು ಕಂಡವರಲ್ಲಿ ಅಮರಾವತಿ…

9 hours ago

ಯಶಸ್ವಿನಿ ಕಾರ್ಡ್ ಅರ್ಜಿ ಪ್ರಾರಂಭ

ಆರ್ಥಿಕವಾಗಿ ದುರ್ಬಲ ಹೊಂದಿರುವ ಕುಟುಂಬದ ಸದಸ್ಯರಿಗೆ ಆರೋಗ್ಯದಲ್ಲಿ ಏರುಪೇರು ಉಂಟಾದದ ದೊಡ್ಡ ಮಟ್ಟದ…

9 hours ago

ಹೊಟ್ಟೆಯ ಕೊಬ್ಬು ಕರಗಿಸಲು ಸೋರೆಕಾಯಿ ಜ್ಯೂಸ್

ಅಧಿಕ ಎಣ್ಣೆ ಅಂಶವುಳ್ಳ ತಿಂಡಿಗಳು, ಶೇಖರಿಸಿಕೊಂಡಿರುವ ಆಹಾರಗಳ ಸೇವನೆಯು ಹೊಟ್ಟೆಯ ಬೊಜ್ಜಿಗೆ ಕಾರಣವಾಗುತ್ತದೆ.…

9 hours ago