ಒಂದಾನೊಂದು ಊರಿತ್ತು. ಅಲ್ಲೊಂದು ಶಾಲೆ ಇತ್ತು. ಊರಿನ ಗಣ್ಯರು ಉಚಿತವಾಗಿ ನೀಡಿದ ಜಾಗದಲ್ಲಿ ಊರಿನವರೇ ಶ್ರಮ ದಾನ ಮಾಡಿ ಅದನ್ನು ಕಟ್ಟಿದ್ದರು. ಆ ಊರಿನ ಮಕ್ಕಳೆಲ್ಲರೂ ಆ ಶಾಲೆಗೇ ಹೋಗುತ್ತಿದ್ದರು. ಅಲ್ಲಿ ಒಳ್ಳೆಯ ವೃತ್ತಿಪರರಾದ ಶಿಕ್ಷಕರಿದ್ದರು. ಅಲ್ಲಿ ಕಲಿತವರನೇಕರು ಉನ್ನತ ಶಿಕ್ಷಣ ಪಡೆದು ವೈದ್ಯರಾದರು, ಇಂಜಿನಿಯರರಾದರು, ವಿಜ್ಞಾನಿಗಳಾದರು, ಸರಕಾರಿ ಅಧಿಕಾರಿಗಳಾದರು, ಉದ್ಯಮಿಗಳಾದರು, ವ್ಯಾಪಾರಿಗಳಾದರು, ಹೆಚ್ಚಿನ ಹುಟ್ಟುವಳಿ ಇರುವ ಕೃಷಿಕರಾದರು, ದೇವಸ್ಥಾನಗಳ ಮುಕ್ತೇಸರರಾದರು, ರಾಜಕಾರಣಿಗಳಾದರು. ಹೀಗೆ ಹೆಚ್ಚಿನವರ ಆದಾಯ ಮೂಲಗಳು ವಿಸ್ತಾರಗೊಂಡವು. ಅವರ ಸ್ಥಾನಮಾನಗಳಲ್ಲಿ ಏರಿಕೆ ಕಂಡಿತು. ವಿವಾಹಕ್ಕೆ ದೂರದ ಸಂಬಂಧಗಳು ಕೂಡಿ ಬಂದುವು. ಇದರೊಂದಿಗೆ ವಿದೇಶಗಳ ಸಂಸ್ಕೃತಿ ಮತ್ತು ಭಾಷೆಯ ಆಕರ್ಷಣೆ ಹೆಚ್ಚಿತು. ನಗರಗಳಲ್ಲಿ ಮನೆಮಾಡಿದ ಪಾಲುದಾರರು ಹಳ್ಳಿಯಲ್ಲಿದ್ದವರಿಗೆ ಮಾದರಿಯಾದರು. ಮಕ್ಕಳ ವಿದ್ಯಾಭ್ಯಾಸದ ಬಗ್ಗೆ ಹೊಸ ಯೋಜನೆಗಳು ಬಂದುವು. ಇಂಗ್ಲಿಷ್ ಮೀಡಿಯಂ ಅನಿವಾರ್ಯವೆನ್ನಿಸಿತು. ಊರಿನಲ್ಲಿ ಕನ್ನಡ ಶಿಕ್ಷಣ ಸಾಧಾರಣವೆನ್ನಿಸಿತು. ನಗರಗಳ ಶಾಲೆಗಳಿಗೆ ಕಳಿಸಲು ಹಾಸ್ಟೆಲುಗಳನ್ನು ಅವಲಂಬಿಸಿದರು. ಅದಕ್ಕಿಂತಲೂ ಉತ್ತಮ ಉಪಾಯವೆಂದು ಹಳ್ಳಿಗಳಲ್ಲೇ ಆಂಗ್ಲ ಮಾಧ್ಯಮದ ಖಾಸಗಿ ಅನುದಾನ ರಹಿತ ಶಾಲೆಯನ್ನೇ ಸ್ಥಾಪಿಸಿದರು. ಇದಕ್ಕೆ ಸ್ಥಳೀಯವಾಗಿ ಬೆಂಬಲವೂ ಸಿಕ್ಕಿತು. ಸರಕಾರಿ ಶಾಲೆಗೆ ಸೇರಬೇಕಾಗಿದ್ದ ಮಕ್ಕಳು ಖಾಸಗಿ ಶಾಲೆಗೆ ದುಬಾರಿ ಶುಲ್ಕ ನೀಡಿ ಇಂಗ್ಲಿಷ್ ಮೀಡಿಯಂಗೆ ಸೇರಿಸಲ್ಪಟ್ಟರು. ಈ ಪ್ರಕ್ರಿಯೆ ಆರಂಭವಾಗಿ ಎರಡೇ ದಶಕಗಳಲ್ಲಿ ನಮ್ಮೂರ ಶಾಲೆಯಲ್ಲಿ ಊರಿನವರ ಮಕ್ಕಳೇ ಇಲ್ಲ. ಬದಲಿಗೆ ಉತ್ತರ ಕರ್ನಾಟಕದಿಂದ ಬಂದು ಸಣ್ಣ ಗುಡಿಸಲುಗಳಲ್ಲಿ ಬಾಡಿಗೆಗೆ ನಿಂತಿರುವ ಕಾರ್ಮಿಕರ ಮಕ್ಕಳು ಮಾತ್ರ ಸೇರಿದ್ದಾರೆ. ಅವರನ್ನು ತಮ್ಮ ಉದ್ಯೋಗದ ಉಳಿವಿಗಾಗಿ ಶಿP್ಪ್ಷಕಿಯರು ಒತ್ತಾಯಿಸಿ ಕರೆತಂದು ಸೇರಿಸಿದ್ದಾರೆ. ಆ ಮಕ್ಕಳು ತಮ್ಮ ಊರಿಗೆ ಹೋಗಿ ಬರಲು ತಡ ಮಾಡಿದರೂ ಹಾಜರಿ ಪಡೆಯುತ್ತಾರೆ. ಅವರು ಏನನ್ನೂ ಕಲಿಯದಿದ್ದರೂ ತೇರ್ಗಡೆಯಾಗುತ್ತಾರೆ. ಏಳನೇಯಿಂದ ತೇರ್ಗಡೆಗೊಳಿಸಿದಲ್ಲಿಗೆ ಶಾಲೆಯ ಉದ್ದೇಶ ಈಡೇರುತ್ತದೆ. ಅದರ ಅಸ್ತಿತ್ವ ಮುಂದುವರೆಯುತ್ತದೆ. ಊರಿನವರಿಗೆ ಶಾಲೆಯ ಬಗ್ಗೆ ಲಕ್ಷ್ಯವೇ ಇರುವುದಿಲ್ಲ. ನಿಧಾನಕ್ಕೆ ಮಕ್ಕಳ ಸಂಖ್ಯೆ ಕಡಿಮೆಯಾಗಿ ಶಾಲೆ ಮುಚ್ಚಲ್ಪಡುತ್ತದೆ. ಆಗ ಈ ಮರಣಕ್ಕೆ ಮರುಗುವವರಿಲ್ಲ.
ಇದು ಒಂದಾನೊಂದು ಊರಿನ ಕಥೆ ಅಲ್ಲ. ಇದೀಗ ಅನೇಕ ಊರುಗಳಲ್ಲಿ ಸಂಭವಿಸುತ್ತಿರುವ ಕಥೆ. ನೇರ ಶಬ್ದಗಳಲ್ಲಿ ಹೇಳುವುದಾದರೆ ಇದು ಕನ್ನಡ ಭಾಷಾ ಮಾಧ್ಯಮದ ಶಾಲೆಗಳನ್ನು ಮುಚ್ಚುವ ಪ್ರಕ್ರಿಯೆ. ಇದಕ್ಕೆ ಪೂರ್ವಭಾವಿಯಾಗಿ ಕನ್ನಡ ಮಾಧ್ಯಮದ ಶಾಲೆಗಳಿಗೆ ವಿದ್ಯಾರ್ಥಿಗಳ ಕೊರತೆ ಕಾಡುತ್ತಿದೆ ಎಂಬ ಪುಕಾರು ಹಬ್ಬಿಸಿ ಅದರಲ್ಲಿ ಮೊದಲಾಗಿ ಶಿಕ್ಷಕರ ಸಂಖ್ಯೆಯನ್ನು ಕಡಿತಗೊಳಿಸಿ ಶಿಕ್ಷಣದ ಗುಣಮಟ್ಟವನ್ನು ಇಳಿಸಿ ಹೊಸ ವಿದ್ಯಾರ್ಥಿಗಳು ಸೇರದಂತೆ ಮಾಡುತ್ತಾರೆ. ಆದರೂ ಸೇರುವವರಿಗೆ ಉಚಿತ ಬಟ್ಟೆ, ಚೀಲ, ಪುಸ್ತಕ, ಸಾಕ್ಸ್, ಶೂ, ಅಕ್ಷರ ದಾಸೋಹ, ಮೊಟ್ಟೆ, ಬಾಳೆಹಣ್ಣು ಹೀಗೆ ಆಮಿಶಗಳನ್ನು ತೋರಿಸುತ್ತ, ತೇರ್ಗಡೆಯ ಅಂಕಗಳನ್ನು ಕಡಿತಗೊಳಿಸುವ ಆಸೆಯನ್ನು ಹುಟ್ಟಿಸಿ ಒಟ್ಟಾರೆಯಾಗಿ ಶಿಕ್ಷಣದ ಗುಣಮಟ್ಟವನ್ನು ಮೂರಾಬಟ್ಟೆಯಾಗಿಸುವ ವಿದ್ಯಮಾನ ನಡೆಯುತ್ತಿದ್ದರೂ ದೇಶದ ಸಾಕ್ಷಿಪ್ರಜ್ಞೆಗಳೇಕೆ ಧ್ವನಿಯೆತ್ತುತ್ತಿಲ್ಲ? ಬದಲಾಗಿ ಅವರಲ್ಲಿ ಒಂದು ಸಮಾಧಾನಿಸುವ ಉತ್ತರವಿದೆ. ಅದೆಂದರೆ “ಕನ್ನಡವು ಅನ್ನದ ಭಾಷೆ ಅಲ್ಲ” ಎನ್ನುವುದು. ಹೀಗೆ ಹೇಳಿ ಕನ್ನಡ ಶಾಲೆಗಳ ಬೆಂಬಲಕ್ಕೆ ನಿಂತವರ ಬಾಯಿ ಮುಚ್ಚಿಸುತ್ತ ಇದು ಅನಿವಾರ್ಯ ಪರಿಸ್ಥಿತಿಯೆಂದು ಬಿಂಬಿಸುತ್ತ ಇಂಗ್ಲಿಷ್ ಮಾಧ್ಯಮದ ವ್ಯಾಪಾರೀಕರಣಕ್ಕೆ ಗಿರಾಕಿಗಳನ್ನು ಮಾಡಿಕೊಡುವ ದಳ್ಳಾಳಿಗಳಾಗಿರುವ ಸಾಹಿತಿಗಳು ಕನ್ನಡ ಭಾಷೆ ಮತ್ತು ಸಂಸ್ಕೃತಿಯ ಹನನದ ಅಪಖ್ಯಾತಿಯನ್ನು ಹೊರಬೇಕಾಗುತ್ತದೆ.
ಕನ್ನಡ ಅನ್ನದ ಭಾಷೆ ಅಲ್ಲ ಎನ್ನುತ್ತ ಇಂಗ್ಲಿಷನ್ನು ಬೆಂಬಲಿಸುವ ಜಾಣ ದ್ರೋಹಿಗಳಿದ್ದಾರೆ. ಕನ್ನಡ ಸಾಹಿತಿಗಳೇ ಇದ್ದಾರೆ. ಇದೊಂದು ಎಡಪಂಥೀಯರ ಹುನ್ನಾರ. ಅವರಿಗೆ ಸ್ಥಳೀಯ ಭಾಷೆಗಳು ಸಾಯಬೇಕು ಮತ್ತು ಸಂಸ್ಕೃತಿ ಅಳಿಯಬೇಕು. ಅದಕ್ಕಾಗಿ ಇಂಗ್ಲಿಷ್ ಬೇಕು ಎನ್ನುತ್ತಾರೆ. ಕನ್ನಡಕ್ಕೆ ಜೀವ ಇಲ್ಲ ಎನ್ನುತಾರೆ. ಇಂಗ್ಲಿಷ್ ಮಾಧ್ಯಮದ ಶಾಲೆಗಳ ಹಬ್ಬುವಿಕೆಗೆ ಪರೋಕ್ಷ ಬೆಂಬಲ ಕೊಡುತ್ತಾರೆ. ಅಂದರೆ ಶಿಕ್ಷಣವನ್ನು ಸರಕಾಗಿ ಮಾಡಿದ ಬಂಡವಾಳಶಾಹಿಗಳಿಗೆ ಪ್ರಚಾರಕರಾಗುತ್ತಾರೆ. ಯಾವುದೇ ಪಕ್ಷದ ಸರಕಾರವು ಬಂಡವಾಳಶಾಹಿಗಳ ಕೈಯಲ್ಲೇ ಇರುತ್ತದೆ. ಅವರೇ ಆಡಂಬರದ ಇಂಗ್ಲಿಷ್ ಮಾಧ್ಯಮದ ಶಾಲೆಗಳ ಸ್ಥಾಪಕರೂ ಸಂಚಾಲಕರೂ ಆಗಿರುತ್ತಾರೆ. ಅವರಿಗೆ ಕೇವಲ ಹಣ ಬೇಕು. ಭಾಷೆ-ಸಂಸ್ಕೃತಿಗಳ ಬಗ್ಗೆ ಲಕ್ಷ್ಯವಿಲ್ಲ. ಹಾಗಾಗಿ ಅವರು ಸರಕಾರಿ ಕನ್ನಡ ಶಾಲೆಗಳನ್ನು ಮುಚ್ಚುವ ಉಪಾಯ ಮಾಡಿದರು. ಅದಕ್ಕಾಗಿ ಸುಧಾರಣೆಯ ಭರವಸೆಗಳೊಂದಿಗೆ ಕೆಲವೇ ಕೆಲವು ಶಾಲೆಗಳನ್ನು ಇಂಗ್ಲಿಷ್ ಮಾಧ್ಯಮ ಮಾಡಿದರು. ಅವುಗಳಿಗೆ ಕರ್ನಾಟಕ ಪಬ್ಲಿಕ್ ಸ್ಕೂಲ್‍ಗಳೆಂಬ ಹೆಸರನ್ನಿಟ್ಟರು. ಇಷ್ಟು ದಿನ ಅದೇ ಶಾಲೆಗಳಲ್ಲಿ ಕನ್ನಡದಲ್ಲಿ ಕಲಿಸುತ್ತಿದ್ದ ಟೀಚರ್‍ಗಳನ್ನೇ ಇಂಗ್ಲಿಷ್ ಟೀಚರ್‍ಗಳನ್ನಾಗಿ ಮಾಡಿದರು. ಅವರು ತಮ್ಮ ಉದ್ಯೋಗ ಭದ್ರತೆಗಾಗಿ ತಮಗೆ ಸರಿಯಾಗಿ ಗೊತ್ತಿಲ್ಲದ ಇಂಗ್ಲಿಷ್‍ನಲ್ಲಿ ಕಲಿಸುವ ನಾಟಕ ಶುರು ಮಾಡಿದರು. ಅದಕ್ಕೆ ಅವರಿಗೆ ಅನುಕೂಲವಾಗಲಿ ಎಂದು ಶಿಕ್ಷಣ ಇಲಾಖೆಯು ಉಭಯ ಭಾಷೆಗಳಲ್ಲಿ ಪಠ್ಯಪುಸ್ತಕಗಳನ್ನು ತಯಾರಿಸಿ ಪೂರೈಸಿತು. ಅಂದರೆ ಇಂಗ್ಲಿಷ್‍ನಲ್ಲಿ ಪಾಠ ನೀಡಿ ಅದರ ಕನ್ನಡ ತರ್ಜುಮೆಯನ್ನು ಕೊಡಲಾಯಿತು. ಈ ಪುಸ್ತಕಗಳನ್ನು ಬೈಲಿಂಗ್ವಲ್ (Bi-lingual) ಎಂದರೆ ಉಭಯ ಭಾಷಾ ಪಠ್ಯಗಳಾಗಿ ಕರೆಯಲಾಯಿತು. ಈ ವ್ಯವಸ್ಥೆಯಲ್ಲಿ ಮಕ್ಕಳು ಇಂಗ್ಲಿಷ್ ಕಷ್ಟವಾದಾಗ ಕನ್ನಡವನ್ನು ಅವಲಂಬಿಸಲು ತೊಡಗಿದರು. ಅರ್ಥಾತ್ ನಿಜವಾಗಿ ಇಂಗ್ಲಿಷ್ ಭಾಷೆಯನ್ನು ಕಲಿಸುವ ಬದಲು ಅಪಮಾರ್ಗವನ್ನು ಅನುಸರಿಸಿದರು. ಹೀಗೆ ತಮ್ಮ ಮಕ್ಕಳು ಇಂಗ್ಲಿಷ್ ಮೀಡಿಯಂನಲ್ಲಿ ಕಲಿಯುತ್ತಿದ್ದಾರೆ ಎಂದು ನಂಬಿದ ಪೆÇೀಷಕರಿಗೆ ಸರಕಾರವೇ ಮೋಸ ಮಾಡಿದೆ. ಈ ಮೋಸದೊಂದಿಗೆ ಅಕ್ಕಪಕ್ಕದ ಕನ್ನಡ ಮಾಧ್ಯಮದ ಕಿರಿಯ ಪ್ರಾಥಮಿಕ ಶಾಲೆಗಳನ್ನು ದುರ್ಬಲಗೊಳಿಸಿದೆ. ಈ ವಿದ್ಯಮಾನದ ಬಗ್ಗೆ ಚಕಾರ ಶಬ್ದ ಎತ್ತದ ಎಡಪಂಥೀಯ ಕನ್ನಡ ಸಾಹಿತಿಗಳು ಕನ್ನಡ ಅನ್ನದ ಭಾಷೆ ಅಲ್ಲ ಅನ್ನುತ್ತಿರುವುದು ಅದೆಂತಹ ಭಾಷಾದ್ರೋಹ! ಅದನ್ನು ಅನೇಕ ಕನ್ನಡ ಸಾಹಿತಿಗಳು, ಉದ್ಯಮಿಗಳು, ಸ್ವಾಮಿಗಳು, ಹಿಂದೂ ಪುನರುತ್ಥಾನವಾದಿಗಳು ಕೂಡಾ ನಂಬಿ ಪುನರುಚ್ಚರಿಸುತ್ತಿರುವುದು ವಿಪರ್ಯಾಸ!
ಕನ್ನಡವು ಅನ್ನದ ಭಾಷೆ ಅಲ್ಲ ಎಂಬ ಅವಹೇಳನ ಹಾಗೂ ಕನ್ನಡ ಮಾಧ್ಯಮ ಶಾಲೆಗಳ ಅವನತಿಯನ್ನು ನಾವು ಕರ್ನಾಟಕದಲ್ಲಿ ಕಾಣುತ್ತಿದ್ದೇವೆ. ಆದರೆ ಇದೇ ರೀತಿಯ ವಿದ್ಯಮಾನವು ಭಾರತದ ಎಲ್ಲಾ ರಾಜ್ಯಗಳಲ್ಲಿದೆ. ಅಂದರೆ ದೇಶವ್ಯಾಪಿಯಾಗಿ ಇಂಗ್ಲಿಷ್ ಮಾಧ್ಯಮದ ಹರಡುವಿಕೆಯೊಡನೆ ಸ್ಥಳಿಯ ಭಾಷೆಗಳನ್ನು ನಿರ್ಮೂಲಗೊಳಿಸುವ ಷಡ್ಯಂತ್ರ ಜಾರಿಯಲ್ಲಿದೆ. ಇದರ ಹಿಂದೆ ಎಡಪಂಥೀಯ ಸಿದ್ಧಾಂತವಾದಿಗಳ ಜಾಲ ಕಾರ್ಯ ನಿರತವಾಗಿದೆ. ಏಕೆಂದರೆ ಭಾರತೀಯ ಬಾಷೆಗಳ ಮಾಧ್ಯಮದ ಶಾಲೆಗಳಲ್ಲಿ ಜೀವನ ಮೌಲ್ಯಗಳು, ದೇಶಭಕ್ತಿ, ಭಾಷಾಪ್ರೇಮ ಮುಂತಾದುವುಗಳನ್ನು ಕಲಿಸುತ್ತಾರೆ. ಇವೆಲ್ಲವೂ ಹಿಂದೂ ಧರ್ಮದ ಸಂಗತಿಗಳೆಂಬುದಾಗಿ ವಿರೋಧಿಸುವ ಎಡಪಂಥೀಯರಿಗೆ ಅವುಗಳನ್ನು ನಿವಾರಿಸಲು ಪ್ರಾದೇಶಿಕ ಭಾಷಾ ಮಾಧ್ಯಮವನ್ನೇ ಇಲ್ಲವಾಗಿಸುವ ಅಜೆಂಡಾ ಹುಟ್ಟಿಕೊಂಡಿರಬೇಕು. ಅದಲ್ಲವಾದರೆ ಸ್ವತಂತ್ರ ಭಾರತದಲ್ಲಿ 1950 ಜನವರಿ 26ರಂದು ಸಂವಿಧಾನವನ್ನು ಸ್ವೀಕರಿಸಿದಂದಿನಿಂದಲೇ ಶಿಕ್ಷಣವನ್ನು ಬಲಪಡಿಸಲು ಎಲ್ಲರೂ ಹೋರಾಡಬೇಕಿತ್ತು. ಸಂವಿಧಾನದಲ್ಲಿ ಶಿಕ್ಷಣವು ಉಚಿತವಾಗಿ ಕಡ್ಡಾಯವಾಗಿ ಸಾರ್ವತ್ರಿಕ ನೆಲೆಯಲ್ಲಿ 10 ವರ್ಷಗಳಲ್ಲಿ ಎಲ್ಲರಿಗೂ ಒದಗಬೇಕೆಂದು ಹೇಳಲಾಗಿತ್ತು. ಆ ದೃಷ್ಠಿಯಿಂದ ಸಂವಿಧಾನವನ್ನು ಗೌರವಿಸುವುದಕ್ಕಾಗಿ ಕೇಂದ್ರ ಮತ್ತು ರಾಜ್ಯ ಸರಕಾರಗಳು ಸಾರ್ವತ್ರಿಕ ಸಮಾನತೆಯ ಅವಕಾಶವಿದ್ದ ಶಿಕ್ಷಣವನ್ನು ನೀಡಬೇಕಿತ್ತು. ಅರ್ಥಾತ್ ಪ್ರತಿ ಮಗುವಿಗೂ ಉತ್ತಮ ಗುಣಮಟ್ಟದ ಶಿಕ್ಷಣ, ಪುಸ್ತಕ, ಅನ್ನ ದಾಸೋಹ ಇತ್ಯಾದಿಗಳನ್ನು ನೀಡುವ ಹೊಣೆಯನ್ನು ಸರಕಾರವೇ ತನ್ನ ಕೈಗೆ ತೆಗೆದುಕೊಳ್ಳಬೇಕಿತ್ತು. ಮುಂದಿನ ಹತ್ತು ವರ್ಷಗಳಲ್ಲಿ ಈ ಸಾಧನೆ ಆಗಬೇಕೆಂಬುದು ಸಂವಿಧಾನದ ಆಶಯವಾಗಿತ್ತು. ಆದರೆ ಹಾಗಾಗಲಿಲ್ಲ. ಬ್ರಿಟಿಷರು ಬಿಟ್ಟು ಹೋದ ಅಂಚೆ, ರೆವಿನ್ಯೂ ಇತ್ಯಾದಿ ಅನೇಕ ಆಡಳಿತ ವ್ಯವಸ್ಥೆಗಳಂತೆಯೇ ಶಿಕ್ಷಣದ ಆಡಳಿತವು ಮುಂದುವರಿಯಿತು. ಖಾಸಗಿ ಅನುದಾನಿತ ಶಾಲೆಗಳಿಗೆ ಸರಕಾರವು ಶಿಕ್ಷಕರ ವೇತನಕ್ಕಾಗಿ ನೀಡುತ್ತಿದ್ದ ಅನುದಾನವನ್ನು ಹಾಗೆಯೇ ಮುಂದುವರಿಸಲಾಯಿತು. ಶಿಕ್ಷಣದ ಆಡಳಿತಕ್ಕಾಗಿ ಈ ಹಿಂದಿನಂತೆಯೇ ಶಿಕ್ಷಣ ಇಲಾಖೆಯೂ ಮುಂದುವರಿದು ಬಂತು. ಹೀಗಾಗಿ 1960 ರ ಬಳಿಕವೂ, ಅಂದರೆ ಸಂವಿಧಾನ ವಿಧಿಸಿದ್ದ ಗಡುವು ಮೀರಿದ ಬಳಿಕವೂ ಸಾರ್ವಜನಿಕ ಶಿಕ್ಷಣದ ಹೊಣೆಗಾರಿಕೆಗೆ ಸರಕಾರವು ಮುಂದಾಗಲಿಲ್ಲ. ಹಾಗೆಂದು ಬಡವರ ಸಬಲೀಕರಣಕ್ಕಾಗಿ ವಾದಿಸುತ್ತಿದ್ದ ಎಡಪಂಥೀಯರೂ ಒತ್ತಡ ಹಾಕಲಿಲ್ಲ. ಹಾಗಾಗಿ ಸ್ವಾತಂತ್ರ್ಯೋತ್ತರ ಭಾರತದಲ್ಲಿ ಶಿಕ್ಷಣದಿಂದ ಪ್ರಯೋಜವಿದೆಯೆಂದು ತಿಳಿದಿದ್ದ ಮೇಲ್ವರ್ಗದವರು ಮಕ್ಕಳನ್ನು ಕೆಲಸಕ್ಕೆ ಕಳಿಸಿದರು. “ಶಿಕ್ಷಣ ಪಡೆದು ಏನಾಗಬೇಕಾಗಿದೆ?” ಎಂಬ ಪ್ರಶ್ನೆಗೆ ಉತ್ತರ ಸಿಗದಿದ್ದವರು ಮಕ್ಕಳನ್ನು ಕೆಲಸಕ್ಕೆ ಕಳಿಸಿದರು. ಈಗಲೂ ಈ ಮನೋಧರ್ಮದ ಬಡವರ್ಗದವರು ಇದ್ದಾರೆ. ಹೀಗಾಗಿಯೇ ಇತ್ತೀಚೆಗೆ ಮಗುವನ್ನು ಶಾಲೆಗೆ ಕಳಿಸದಿರುವುದು ಅಪರಾಧವೆಂಬ ಶಾಸನ ಮಾಡಬೇಕಾಯಿತು.
ಸರಕಾರವು ಹಿಂದೂ ಮೇಲ್ವರ್ಗದವರ ಕೈಯಲ್ಲೇ ಇತ್ತು. ಆಳುಗಳಿಗೆ ಶಿಕ್ಷಣ ಕೊಟ್ಟರೆ ಕೆಲಸಕ್ಕೆ ಜನ ಯಾರು ಎಂಬ ಚಿಂತೆ ಅವರದಾಗಿತ್ತು. ಹಾಗಾಗಿ ಬಲಪಂಥೀಯ ಹಿಂದೂಗಳು ಶಿಕ್ಷಣದ ರಾಷ್ಟ್ರೀಕರಣಕ್ಕಾಗಿ ಸರಕಾರವನ್ನು ಒತ್ತಾಯಿಸಲಿಲ್ಲ. ಈ ನಡುವೆ ಸ್ವಾತಂತ್ರ್ಯ ಹೋರಾಟದಲ್ಲಿ ಬೆಂಬಲ ನೀಡಿದ್ದ ಸ್ಥಳೀಯ ನಾಯಕರು ಖಾಸಗಿ ಶಾಲೆಗಳನ್ನು ಸ್ಥಾಪಿಸಿ ಶಿಕ್ಷಣ ಪ್ರಸರಣಕ್ಕಾಗಿ ಭೂಮಿ ಕೊಟ್ಟರು ಹಾಗೂ ಕಟ್ಟಡಗಳನ್ನು ಕಟ್ಟಿಸಿಕೊಟ್ಟರು. ಸಾಕ್ಷರತೆಯ ಕೊರತೆಯನ್ನು ನೀಗಿಸಲು ಸರಕಾರಿ ವಲಯದಲ್ಲಿ ಪ್ರತಿ ಮಗುವಿಗೆ 1 ಕಿ.ಮೀ. ಒಳಗೆ ಶಾಲೆ ಸಿಗುವಂತೆ ಮಾಡಬೇಕೆಂಬ ಚಿಂತನೆ ಹರಡತೊಡಗಿತು. ಇದಕ್ಕೆ ಸ್ಪಂದನ ಎಂಬಂತೆ 1965 ರಿಂದ ಕರ್ನಾಟಕದಲ್ಲಿ ಶಾಸಕರುಗಳು ಹಳ್ಳಿ-ಹಳ್ಳಿಗಳಲ್ಲಿ ಶಾಲೆಗಳನ್ನು ತೆರೆದರು. ಆದರೆ ಅವರ ಅವಸರ ಹೇಗಿತ್ತೆಂದರೆ ಶಾಲೆಗಾಗಿ ಒಂದು ಸ್ಥಳವನ್ನು ನಿಗದಿ ಮಾಡದೆ ಕಟ್ಟಡ ಕಟ್ಟುವ ತಯಾರಿಯೂ ಇಲ್ಲದೆ ವರ್ಗಾವಣೆಯ ಮೂಲಕ ಶಿಕ್ಷಕರನ್ನು ನೇಮಿಸಿ ಹಳ್ಳಿಯಲ್ಲಿ ಲಭ್ಯವಿದ್ದ ಸಾಧಾರಣ ಕಟ್ಟಡಗಳಲ್ಲಿ ಶಾಲೆಗಳು ಆರಂಭವಾದುವು. ಮುಂದೆ ಹತ್ತು-ಹದಿನೈದು ವರ್ಷಗಳಲ್ಲಿ ಜಾಗವೊಂದು ಗುರುತಿಸಲ್ಪಟ್ಟು ಶಾಲಾ ಕೊಠಡಿಗಳನ್ನು ಕಟ್ಟಿದ ಅನೇಕ ಉದಾಹರಣೆಗಳಿವೆ. ಅವುಗಳಲ್ಲಿ ಹೆಚ್ಚಿನವುಗಳು ಕಿರಿಯ ಪ್ರಾಥಮಿಕ ಶಾಲೆಗಳಾಗಿ ಮುಂದುವರಿದು ಈಗ ಅಳಿವಿನಂಚಿನಲ್ಲಿವೆ. ಅವುಗಳ ಜಾಗ ಮತ್ತು ಕಟ್ಟಡಗಳು ಯಾರ ಪಾಲಾಗುತ್ತದೆನ್ನುವುದರ ನಿರ್ಧಾರವಿಲ್ಲ. (…ಮುಂದುವರಿಯುವುದು………)


