ಇಂದು ನವೆಂಬರ್ 1 ಕನ್ನಡ ರಾಜ್ಯೋತ್ಸವ ದಿನ. ಕರ್ನಾಟಕ ನಾಮಕರಣ ಮಾಡಿದ ದಿನ. ಕನ್ನಡಿಗರಾದ ನಾವೆಲ್ಲರೂ ಹೆಮ್ಮೆ ಪಡಬೇಕಾದ ದಿನ. ಆದರೆ…. ಆದರೆ….. ಆದರೆ…. ನಿಜವಾಗಿಯೂ ನಾವು ಹೆಮ್ಮೆ ಪಡುತ್ತಿದ್ದೇವೆಯೇ? ಹೆಮ್ಮೆ ಪಡುವಂತೆ ಇಂದು ಕನ್ನಡದ ಸ್ಥಿತಿ ಇದೆಯೇ? ಹೀಗೊಂದು ಪ್ರಶ್ನೆ ನನ್ನ ಮನಸ್ಸಿನಲ್ಲಿ ಮೂಡಿ ಬಂತು.
ನಾವೆಲ್ಲಾ ವಿದ್ಯಾಭ್ಯಾಸ ಮಾಡುವ ಕಾಲದಲ್ಲಿ ಇದ್ದುದು ಕನ್ನಡ ಮಾಧ್ಯಮ ಶಾಲೆಗಳು. ಕನ್ನಡ ಕಂದನ ಮುದ್ದಿನ ಮಾತುಗಳು ಶಾಲೆಗಳಲ್ಲಿ ಅನುರಣಿಸುತ್ತಿದ್ದವು. ಹತ್ತನೇ ತರಗತಿಯವರೆಗೆ ಕನ್ನಡದಲ್ಲಿ ಕಲಿತು ನಂತರ ಆಂಗ್ಲ ಮಾಧ್ಯಮದಲ್ಲಿ ಉಚ್ಛ ಶಿಕ್ಷಣ ನಡೆಯುತ್ತಿತ್ತು. ಹಾಗೆ ಕಲಿತವರು ಮುಂದೆ ಮಹಾ ಮಹಾ ಮೇಧಾವಿಗಳಾಗಿದ್ದಾರೆ. ದೇಶದಲ್ಲಿ ಅತ್ಯುನ್ನತ ಸ್ಥಾನಗಳನ್ನು ಅಲಂಕರಿಸಿದ್ದಾರೆ. ಅವರ ಬುದ್ಧಿವಂತಿಕೆಗೆ ಸಾಮರ್ಥ್ಯಕ್ಕೆ ಕನ್ನಡ ಮಾಧ್ಯಮ ಎಂದೂ ಅಡ್ಡಿ ಬರಲಿಲ್ಲ. ಭಾಷೆ ಇರುವುದು ಸಂವಹನಕ್ಕೆ ವಿನಹ: ಬುದ್ಧಿವಂತಿಕೆಗೆ ಅಲ್ಲ ಎಂಬುದು ಇದರಿಂದ ರುಜುವಾತಾಗುತ್ತದೆ.
ಹೀಗಿದ್ದ ಶಾಲೆಗಳಲ್ಲಿ ಹಂತಹಂತವಾಗಿ ಇಂಗ್ಲೀಷ್ ಮಾಧ್ಯಮವನ್ನು ಹೇರಲಾಯಿತು. ಕನ್ನಡ ಮಾತೃಭಾಷೆಯ ಮುದ್ದಿನ ಮಕ್ಕಳು ಭಾಷೆಯ ಅರಿವು ಆಗದೆ ಕಣ್ಣೀರು ಹಾಕುವುದನ್ನು ನಾನು ಕಂಡಿದ್ದೇನೆ. ದೇಶದ ಬಹುತೇಕ ರಾಜ್ಯದ ಆಡು ಭಾಷೆಯಾದ ಹಿಂದಿಯನ್ನು ರಾಷ್ಟ್ರಭಾಷೆ ಮಾಡಿದಾಗ ಮತ್ತು ಆ ಭಾಷೆಯನ್ನು ಕನ್ನಡ ಶಾಲೆಗಳಲ್ಲಿ ಕಲಿಸಲು ಹೊರಟಾಗ ವಿರೋಧ ವ್ಯಕ್ತಪಡಿಸಿದ್ದನ್ನು ನೋಡಿದ್ದೇನೆ. ಅಲ್ಲೆಲ್ಲಾ ವಿರೋಧ ವ್ಯಕ್ತಪಡಿಸಿದ ನಾವುಗಳು ಪರಕೀಯ ಭಾಷೆಯಾದ ಆಂಗ್ಲಭಾಷೆಯನ್ನು ನೆಚ್ಚಿಕೊಂಡಿದ್ದು ಮತ್ತು ಅದಕ್ಕಾಗಿಯೇ ಹೋರಾಟವನ್ನು ಮಾಡುತ್ತಿರುವುದನ್ನು ಕಾಣುತ್ತಿದ್ದೇವೆ. ಈ ಮೂಲಕ ಕನ್ನಡ ಮಾಧ್ಯಮದ ಶಾಲೆಗಳನ್ನು ಹಂತಹಂತವಾಗಿ ಕೊಲೆ ಮಾಡುತ್ತಾ ಬಂದಿದ್ದೇವೆ.
ನವೆಂಬರ್ 1 ಬಂದಾಗ ಕನ್ನಡವನ್ನು ಉಳಿಸಿ ಬೆಳೆಸಿ ಎಂದು ಘೋಷಿಸುತ್ತೇವೆ. ಶುಭಾಶಯಗಳನ್ನು ವಿನಿಮಯ ಮಾಡಿಕೊಳ್ಳುತ್ತೇವೆ. ಅಲ್ಲಿಗೆ ರಾಜ್ಯೋತ್ಸವವೆಂಬ,ಕನ್ನಡ ಅಭಿಮಾನವೆಂಬ ಪ್ರಹಸನ ಮುಗಿದುಹೋಗುತ್ತದೆ. ಕವಿ ದುಂಡಿರಾಜರ ಚುಟುಕು ನೆನಪಾಗುತ್ತದೆ.
ಹೇಳುತ್ತಲೆ ಇದ್ದಳು ಕನ್ನಡಾಂಬೆ,
ಎದ್ದೇಳಿ ಕನ್ನಡಿಗರೆ ಬೆಳಗಾಯಿತು ಬೆಳಗಾಯಿತು,
ಈಗಲೂ ಹೇಳುತ್ತಿದ್ದಾಳೆ,
ಇನ್ನಾದರೂ ಏಳಿ ಬೆಳ್ಳಗಾಯಿತು ಗಡ್ಡ ಬೆಳ್ಳಗಾಯಿತು.
ಬೆಳ್ಳಗಾದ ಗಡ್ಡದ ನಾನು ಖಂಡಿತವಾಗಿಯೂ ಆಂಗ್ಲಭಾಷೆಯ ವಿರೋಧಿಯಲ್ಲ. ಅದ್ಭುತವಾದ ಜ್ಞಾನಭಂಡಾರವಿರುವ ಕನ್ನಡ ಯಾವ ಭಾಷೆಗೂ ಕಮ್ಮಿ ಇಲ್ಲ. ಒಂದು ಭಾಷೆಯನ್ನು ಬೆಳೆಸುವಾಗ ಇನ್ನೊಂದು ಭಾಷೆಯನ್ನು ಕೊಲೆ ಮಾಡುವುದು ಪರಮ ಅಪರಾಧ. ಭಾಷೆಯೊಂದರ ಅವಸಾನ ವೆಂದರೆ ಮಹಾ ಜ್ಞಾನವೊಂದರ,ಮಹಾ ಸಂಸ್ಕೃತಿಯೊಂದರ ಅವನತಿ ಎಂದೇ ಅರ್ಥ .
ಕವಿ ಅಡಿಗರು ಅಂದಂತೆ….
ಹೊಸನೆತ್ತರುಕ್ಕುಕ್ಕಿ ಆರಿಹೋಗುವ ಮುನ್ನ,
ಹರೆಯದೀ ಮಾಂತ್ರಿಕನ ಮಾಟ ಮಸುಳುವ ಮುನ್ನ,
ಉತ್ಸಾಹ ಸಾಗರದ ಉತ್ತುಂಗ ವೀಚಿಗಳ
ಈ ಕ್ಷುಬ್ಧ ಸಾಗರವು ಬತ್ತಿಹೋಗುವ ಮುನ್ನ,
ಕಟ್ಟುವೆವು ನಾವು ಹೊಸ ನಾಡೊಂದನು…
ಈ ಮಾತುಗಳನ್ನು ಸತ್ಯವಾಗಿಸಲು ನಾವೆಲ್ಲ ಕನ್ನಡ ಶಾಲೆಗೆ ನಮ್ಮ ಮಕ್ಕಳನ್ನು ಮೊಮ್ಮಕ್ಕಳನ್ನು ಕಳಿಸಿ ಉಳಿಸಬೇಕಾಗಿದೆ.
ಕನ್ನಡಕೆ ಹೋರಾಡು ಕನ್ನಡದ ಕಂದ,
ಕನ್ನಡವ ಕಾಪಾಡು ನನ್ನ ಆನಂದ.
ಕನ್ನಡಾಂಬೆಯ ಕರೆಗೆ ನಾವೆಲ್ಲಾ ಓ ಗೊಡೋಣ.
# ಎ.ಪಿ.ಸದಾಶಿವ ಮರಿಕೆ.
ಕೃಷಿಗಾಗಿ, ಕೃಷಿ ಉಳಿಸುವುದಕ್ಕಾಗಿ ಸುರಂಗ ಕೊರೆದು ನೀರು ಹರಿಸಿದ ವಿಶೇಷ ಸಾಧನೆಯನ್ನು ಮಾಡಿದ್ದಾರೆ…
ದೇಶಾದ್ಯಂತ ಅಳಿವಿನಂಚಿಗೆ ತಲುಪಿರುವ ಗುಬ್ಬಚ್ಚಿ ಸಂಕುಲದ ರಕ್ಷಣೆಗೆ ಪ್ರಧಾನಿ ನರೇಂದ್ರ ಮೋದಿ ಅವರು…
ಸ್ವಾವಲಂಬನೆಯ ಜೀವನ ಕಟ್ಟಿಕೊಳ್ಳುತ್ತಿರುವ ಅನೇಕ ಮಹಿಳಾ ಉದ್ಯಮಿದಾರರಿಗೆ ಎನ್‍ಆರ್ ಎಲ್‍ಎಮ್ ಯೋಜನೆಯು ಸ್ಪೂರ್ತಿಯ…
ಕೊಡಗು ಜಿಲ್ಲೆಯಲ್ಲಿ ಅಕ್ರಮ ಲಾಟರಿ, ಇತರೆ ರಾಜ್ಯದ ಲಾಟರಿಗಳು, ಮಟ್ಕಾಗೆ ಪೂರ್ಣ ಪ್ರಮಾಣದಲ್ಲಿ…
ಹಾನಿಯಾದ ಮನೆ ಮತ್ತು ಬೆಳೆಗಳಿಗೆ ತ್ವರಿತವಾಗಿ ಪರಿಹಾರ ನೀಡಿ, ಯಾವುದೇ ಪ್ರಕರಣಗಳು ಬಾಕಿ…
ಭಾರತದ ಸ್ವಚ್ಛತಾ ಅಭಿಯಾನಕ್ಕೆ ವೇಗ ದೊರೆಯುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ತಿಳಿಸಿದ್ದಾರೆ.…