ಒಂದು ಕಾಲದಲ್ಲಿ “ಹವಾಮಾನ ಬದಲಾವಣೆ” ಎಂಬ ಪದ ಕೇಳಿದಾಗ ಅದು ದೂರದ ದೇಶಗಳ, ವಿಜ್ಞಾನಿಗಳ ಅಥವಾ ಜಾಗತಿಕ ಸಮ್ಮೇಳನಗಳ ವಿಷಯವೆಂದು ಅನಿಸುತ್ತಿತ್ತು. ಆದರೆ ಇಂದು ಅದು ನಮ್ಮ ಮನೆಯ ಬಾಗಿಲಿಗೆ ಬಂದು ನಿಂತಿರುವ ವಾಸ್ತವವಾಗಿದೆ. ಮಳೆಯ ಅವ್ಯವಸ್ಥೆ, ಅತಿಯಾದ ಬಿಸಿಲು, ಏಕಾಏಕಿ ಪ್ರವಾಹ, ಭೂಕುಸಿತ, ನೀರಿನ ಕೊರತೆ, ಬೆಳೆ ಹಾನಿ – ಇವೆಲ್ಲವೂ ಹವಾಮಾನ ಬದಲಾವಣೆಯ ನೇರ ಪರಿಣಾಮಗಳಾಗಿವೆ.
ಹವಾಮಾನ ಬದಲಾವಣೆಯ ಪರಿಣಾಮಗಳನ್ನು ಎದುರಿಸಲು ಹಾಗೂ ವಿವಿಧ ಇಲಾಖೆಗಳ ಸಮನ್ವಯದ ಮೂಲಕ ಕಾರ್ಯಯೋಜನೆಗಳನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸುವ ಉದ್ದೇಶದಿಂದ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ನೇತ್ರಾವತಿ ಸಭಾಂಗಣದಲ್ಲಿ “ಹವಾಮಾನ ಬದಲಾವಣೆಯ ಕುರಿತ ಕರ್ನಾಟಕ ರಾಜ್ಯ ಕ್ರಿಯಾ ಯೋಜನೆ” ಕುರಿತು ವಿಶೇಷ ತರಬೇತಿ ಕಾರ್ಯಾಗಾರ ನಡೆಯಿತು.
ಪರಿಸರ ನಿರ್ವಹಣೆ ಮತ್ತು ನೀತಿ ಸಂಶೋಧನಾ ಸಂಸ್ಥೆ (EMPRI) ವತಿಯಿಂದ ಕರ್ನಾಟಕ ರಾಜ್ಯ ವಿಜ್ಞಾನ ಮತ್ತು ತಂತ್ರಜ್ಞಾನ ಮಂಡಳಿಯ ಸಹಯೋಗದಲ್ಲಿ ಈ ತರಬೇತಿ ಆಯೋಜಿಸಲಾಗಿತ್ತು. ಕರ್ನಾಟಕ ಸರ್ಕಾರದ ನಿರ್ದೇಶನದಂತೆ ತಯಾರಿಸಲಾದ “ಹವಾಮಾನ ಬದಲಾವಣೆಯ ಕುರಿತ ಕರ್ನಾಟಕ ರಾಜ್ಯ ಕ್ರಿಯಾ ಯೋಜನೆ”ಗೆ 2024ರಲ್ಲಿ ಕೇಂದ್ರ ಅರಣ್ಯ, ಪರಿಸರ ಮತ್ತು ಹವಾಮಾನ ಬದಲಾವಣೆ ಸಚಿವಾಲಯ ಅನುಮೋದನೆ ನೀಡಿರುವ ಹಿನ್ನೆಲೆಯಲ್ಲಿ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಜಾಗೃತಿ ಹಾಗೂ ಸಾಮರ್ಥ್ಯ ವೃದ್ಧಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ಪ್ರತಿದಿನ ಕೃಷಿ-ಗ್ರಾಮೀಣ-ಪರಿಸರ-ಹವಾಮಾನ ಬದಲಾವಣೆ ಹಾಗೂ ಇತರ ಮಾಹಿತಿಗಾಗಿ ನಮ್ಮ “ದ ರೂರಲ್ ಮಿರರ್.ಕಾಂ”WhatsApp Channel ಗೆ ಇಲ್ಲಿ ಕ್ಲಿಕ್ ಮಾಡಿ
2025-2030ರ ಅವಧಿಗೆ ವಿವಿಧ ಇಲಾಖೆಗಳು ಪ್ರಮುಖ ಕಾರ್ಯಕ್ಷಮತೆ ಸೂಚಕಗಳನ್ನು ಗುರಿಗಳೊಂದಿಗೆ ನಿಗದಿಪಡಿಸಿದ್ದು, ಅವುಗಳ ಅನುಷ್ಠಾನ ಹಾಗೂ ಪ್ರಗತಿ ಕುರಿತಾಗಿ ಜಿಲ್ಲಾ ಮಟ್ಟದ ಅಧಿಕಾರಿಗಳು, ಸಂಘ ಸಂಸ್ಥೆಗಳು, ಶಿಕ್ಷಣ ಸಂಸ್ಥೆಗಳು ಹಾಗೂ ವಿವಿಧ ಕ್ಷೇತ್ರಗಳ ಪ್ರತಿನಿಧಿಗಳಿಗೆ ತರಬೇತಿ ನೀಡಲಾಗುತ್ತಿದೆ.
ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ಜಯಲಕ್ಷ್ಮಿ ರಾಯಕೋಡ, “ಪರಿಸರದ ಒಂದು ಭಾಗವಾಗಿರುವ ಮನುಷ್ಯನೇ ಪರಿಸರದ ದುರ್ಬಳಕೆ ಹಾಗೂ ತ್ಯಾಜ್ಯ ಹೆಚ್ಚಳದ ಮೂಲಕ ಹವಾಮಾನ ಬದಲಾವಣೆಗೆ ಕಾರಣನಾಗುತ್ತಿದ್ದಾನೆ. ಈ ಹಿನ್ನೆಲೆಯಲ್ಲಿ ಇಲಾಖೆಗಳಷ್ಟೇ ಅಲ್ಲದೆ ಸಾಮಾನ್ಯ ಜನರೂ ಪರಿಸರ ಸಂರಕ್ಷಣೆಯ ಜವಾಬ್ದಾರಿಯನ್ನು ಹೊತ್ತುಕೊಳ್ಳಬೇಕು” ಎಂದು ಹೇಳಿದರು.
ಡಾ. ಶೃತಿ ಬಿ.ವಿ ಅವರು ಕರ್ನಾಟಕ ರಾಜ್ಯ ಹವಾಮಾನ ಕ್ರಿಯಾ ಯೋಜನೆಯ ಉದ್ದೇಶ, ಕಾರ್ಯತಂತ್ರಗಳು ಹಾಗೂ ವಿವಿಧ ಇಲಾಖೆಗಳ ಪಾತ್ರದ ಕುರಿತು ವಿವರಿಸಿದರು. ಜೊತೆಗೆ ಅಲ್ಪಾವಧಿಯ ಹವಾಮಾನ ಮಾಲಿನ್ಯಕಾರಕಗಳ ಪರಿಣಾಮಗಳು ಮತ್ತು ದಕ್ಷಿಣ ಕನ್ನಡ ಜಿಲ್ಲೆಯಲ್ಲಿನ ಸಂಬಂಧಿತ ಅಂಕಿ-ಅಂಶಗಳ ಕುರಿತು ಮಾಹಿತಿ ನೀಡಿದರು.
ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದ ಡಾ. ಸೋಮಶೇಖರ್ ರಾವ್ ಅವರು ಹವಾಮಾನ ಕ್ರಿಯಾ ಯೋಜನೆಗಳ ಪ್ರಾಯೋಗಿಕ ಅನುಷ್ಠಾನ ಹಾಗೂ ಸ್ಥಳೀಯ ಮಟ್ಟದ ಕ್ರಮಗಳ ಕುರಿತು ಮಾಹಿತಿ ಹಂಚಿಕೊಂಡರು.
ಹವಾಮಾನ ಬದಲಾವಣೆ ಇತ್ತೀಚಿನ ವರ್ಷಗಳಲ್ಲಿ ಕೃಷಿ, ನೀರಿನ ಲಭ್ಯತೆ, ಮಳೆ ಮಾದರಿ ಹಾಗೂ ಸಾರ್ವಜನಿಕ ಆರೋಗ್ಯದ ಮೇಲೂ ನೇರ ಪರಿಣಾಮ ಬೀರುತ್ತಿರುವ ಹಿನ್ನೆಲೆಯಲ್ಲಿ ಇಂತಹ ತರಬೇತಿಗಳು ಸ್ಥಳೀಯ ಮಟ್ಟದಲ್ಲಿ ಜಾಗೃತಿ ಹಾಗೂ ಯೋಜಿತ ಕಾರ್ಯಚಟುವಟಿಕೆಗಳಿಗೆ ನೆರವಾಗಲಿವೆ ಎಂಬ ಅಭಿಪ್ರಾಯ ವ್ಯಕ್ತವಾಯಿತು.
ಮಂಗಳೂರಿನಲ್ಲಿ ನಡೆದ ಹವಾಮಾನ ಬದಲಾವಣೆಯ ಕುರಿತ ತರಬೇತಿ ಕಾರ್ಯಾಗಾರವು ಕೇವಲ ಒಂದು ಸರ್ಕಾರಿ ಕಾರ್ಯಕ್ರಮವಲ್ಲ; ಅದು ಭವಿಷ್ಯದ ಬದುಕಿನ ಕುರಿತು ನೀಡಿದ ಎಚ್ಚರಿಕೆಯ ಸಂದೇಶವೂ ಹೌದು. ವಿವಿಧ ಇಲಾಖೆಗಳ ಅಧಿಕಾರಿಗಳು, ಶಿಕ್ಷಣ ಸಂಸ್ಥೆಗಳು, ಸಂಘ ಸಂಸ್ಥೆಗಳು ಮತ್ತು ಸ್ಥಳೀಯ ಪ್ರತಿನಿಧಿಗಳನ್ನು ಒಂದೇ ವೇದಿಕೆಗೆ ತರಲು ನಡೆದ ಪ್ರಯತ್ನವು ಹವಾಮಾನ ಸಮಸ್ಯೆಯನ್ನು ಕೇವಲ ಪರಿಸರ ಇಲಾಖೆಯ ಜವಾಬ್ದಾರಿ ಎಂದು ನೋಡದೇ, ಎಲ್ಲರ ಜವಾಬ್ದಾರಿಯೆಂದು ಪರಿಗಣಿಸಲು ಪ್ರೇರೇಪಿಸುತ್ತದೆ. ಪ್ರತಿದಿನ ಕೃಷಿ-ಗ್ರಾಮೀಣ-ಪರಿಸರ-ಹವಾಮಾನ ಬದಲಾವಣೆ ಹಾಗೂ ಇತರ ಮಾಹಿತಿಗಾಗಿ ನಮ್ಮ “ದ ರೂರಲ್ ಮಿರರ್.ಕಾಂ”WhatsApp Channel ಗೆ ಇಲ್ಲಿ ಕ್ಲಿಕ್ ಮಾಡಿ
A climate action training workshop was organized in Mangaluru to strengthen district-level implementation of the Karnataka State Action Plan on Climate Change. Officials, institutions, and stakeholders were trained on climate strategies, environmental protection, and departmental responsibilities.
Climate change is no longer a distant issue but a reality affecting Karnataka through irregular rains, heat, floods, and crop damage. The state’s climate action initiatives and district-level training programmes highlight the urgent need for both government action and public participation in environmental protection.

