ಪಶ್ಚಿಮ ಘಟ್ಟವು ಜೀವ ವೈವಿಧ್ಯದ ಅಪಾರ ಭಂಡಾರ. ಅನೇಕ ಅಪರೂಪದ ಔಷಧೀಯ ಸಸ್ಯಗಳು, ಕಾಡು ಹಣ್ಣುಗಳು ಹಾಗೂ ಸ್ಥಳೀಯ ತಳಿಗಳ ತಾಣವಾಗಿರುವ ಈ ಪ್ರದೇಶದಲ್ಲಿ ಕಂಡುಬರುವ ವಿಶೇಷ ಹಣ್ಣುಗಳಲ್ಲಿ ಕೋಳಿಜುಟ್ಟು (ಮೈಂದಪುಳಿ) ಕೂಡ ಒಂದು. ಕಾಡಿನೊಳಗೆ ಮಾತ್ರ ಬೆಳೆಯುತ್ತಿದ್ದ ಈ ಅಪರೂಪದ ಹಣ್ಣು ಇದೀಗ ರೈತರ ತೋಟಗಳಲ್ಲೂ ಫಲ ನೀಡಲು ಆರಂಭಿಸಿರುವುದು ಸಂರಕ್ಷಣೆಯ ಯಶೋಗಾಥೆಯಾಗಿದೆ.
ಈ ಹಣ್ಣಿನ ತಳಿಯನ್ನು ಗುರುತಿಸಿ, ಸಂರಕ್ಷಿಸಿ, ನಾಡಿಗೆ ಪರಿಚಯಿಸುವಲ್ಲಿ ಅರಣ್ಯ ಇಲಾಖೆಯ ಅಧಿಕಾರಿ ಪ್ರವೀಣ್ ಕುಮಾರ್ ಶೆಟ್ಟಿ ಅವರ ಪಾತ್ರ ಮಹತ್ವದ್ದಾಗಿದೆ. ಸುಳ್ಯದಲ್ಲಿ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಯಾಗಿ (ACF) ಕಾರ್ಯನಿರ್ವಹಿಸುತ್ತಿದ್ದ ವೇಳೆ ಅವರು ಈ ತಳಿಯನ್ನು ಉಳಿಸುವ ಕಾರ್ಯಕ್ಕೆ ಮುಂದಾಗಿದ್ದರು.
ಕಾಡಿನಿಂದ ನರ್ಸರಿಗೆ, ನರ್ಸರಿಯಿಂದ ರೈತರ ತೋಟಕ್ಕೆ : ಸುಳ್ಯ ಮತ್ತು ಕಡಬ ತಾಲೂಕಿನ ಪಶ್ಚಿಮ ಘಟ್ಟದ ಕಾಡುಗಳಲ್ಲಿ ಸಹಜವಾಗಿ ಬೆಳೆಯುತ್ತಿದ್ದ ಕೋಳಿಜುಟ್ಟು ಮರವು ಮಂಗ ಸೇರಿದಂತೆ ಅನೇಕ ಕಾಡುಪ್ರಾಣಿಗಳ ಆಹಾರವಾಗಿತ್ತು. ಆದರೆ ಅರಣ್ಯ ನಾಶ ಮತ್ತು ಸೀಮಿತ ವಾಸಸ್ಥಳದಿಂದ ಈ ತಳಿ ನಿಧಾನವಾಗಿ ಅಪಾಯದತ್ತ ಸಾಗುತ್ತಿತ್ತು.
ಪಂಜ ಅರಣ್ಯ ವಲಯದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಪ್ರವೀಣ್ ಕುಮಾರ್ ಶೆಟ್ಟಿ ಅವರು ಬಳ್ಪ ಕಾಡಿನಲ್ಲಿ ಈ ಗಿಡವನ್ನು ಗುರುತಿಸಿ, ಮಂಗಳೂರಿನ ಪಿಲಿಕುಳದ ಹಿರಿಯ ವಿಜ್ಞಾನಿಗಳಾದ ಡಾ. ಸೂರ್ಯಪ್ರಕಾಶ್ ಹಾಗೂ ರಾಮಕೃಷ್ಣ ಅವರ ಗಮನಕ್ಕೆ ತಂದರು. ಪರಿಶೀಲನೆಯ ಬಳಿಕ ಇದರ ವೈಜ್ಞಾನಿಕ ಹೆಸರು Baccaurea courtallensis ಎಂಬುದು ದೃಢಪಟ್ಟಿತು.
ಅದಾದ ಬಳಿಕ ಗಿಡದ ಬೀಜ ಸಂಗ್ರಹಿಸಿ ಅರಣ್ಯ ಇಲಾಖೆಯ ನರ್ಸರಿಗಳಲ್ಲಿ ಸಸಿಗಳನ್ನು ಬೆಳೆಸುವ ಕಾರ್ಯ ಆರಂಭವಾಯಿತು. 2015ರಿಂದ ಇಲಾಖೆಯ ನರ್ಸರಿಗಳಲ್ಲಿ ಈ ಗಿಡಗಳು ಲಭ್ಯವಾಗುತ್ತಿದ್ದು, ಈಗಾಗಲೇ ಲಕ್ಷಕ್ಕೂ ಅಧಿಕ ಗಿಡಗಳನ್ನು ಕಾಡು ಹಾಗೂ ರೈತರ ಜಮೀನುಗಳಲ್ಲಿ ನೆಡಲಾಗಿದೆ.
ಕಾಂಡದಲ್ಲೇ ಹಣ್ಣು ಬಿಡುವುದು ವಿಶೇಷತೆ : ಕೋಳಿಜುಟ್ಟು ಮರವು ಸುಮಾರು 15 ರಿಂದ 25 ಅಡಿ ಎತ್ತರ ಬೆಳೆಯುತ್ತದೆ. ಏಪ್ರಿಲ್‌ನಲ್ಲಿ ಕಾಂಡದಿಂದ ಬಿಳಲುಗಳಂತೆ ಹೂ ಬಿಡುತ್ತದೆ. ಜೂನ್‌ನಲ್ಲಿ ಕಾಯಿಗಳು ಬೆಳೆಯುತ್ತವೆ. ಜುಲೈದಿಂದ ಸೆಪ್ಟೆಂಬರ್ ಆರಂಭದವರೆಗೆ ಕಡು ಕೆಂಪು ಬಣ್ಣದ ಹಣ್ಣುಗಳು ಕಾಣಸಿಗುತ್ತವೆ.
ಈ ಮರದ ಅತ್ಯಂತ ವಿಶಿಷ್ಟ ಲಕ್ಷಣವೆಂದರೆ ಕಾಂಡದಲ್ಲಿಯೇ ಹಣ್ಣು ಬಿಡುವುದು. ಹಣ್ಣಿನ ಹೊರಭಾಗ ಗಟ್ಟಿಯಾದ ಕೆಂಪು ಸಿಪ್ಪೆ ಹೊಂದಿದ್ದು, ಒಳಗೆ ಬಿಳಿ ಅಥವಾ ತಿಳಿ ಗುಲಾಬಿ ಬಣ್ಣದ ರಸಭರಿತ ತಿರುಳು ಇರುತ್ತದೆ. ಒಂದೇ ಹಣ್ಣಿನಲ್ಲಿ ಒಂದರಿಂದ ನಾಲ್ಕು ಬೀಜಗಳಿರುತ್ತವೆ. ಹಣ್ಣಿನ ರುಚಿ ಹುಳಿ ಮತ್ತು ಸಿಹಿಯ ಸಂಯೋಜನೆಯಾಗಿದ್ದು, ನೇರವಾಗಿ ತಿನ್ನುವುದರ ಜೊತೆಗೆ ಜ್ಯೂಸ್ ತಯಾರಿಸಿಯೂ ಸೇವಿಸಬಹುದು. ಪ್ರತಿದಿನ ಕೃಷಿ-ಗ್ರಾಮೀಣ-ಪರಿಸರ-ಹವಾಮಾನ ಬದಲಾವಣೆ ಹಾಗೂ ಇತರ ಮಾಹಿತಿಗಾಗಿ ನಮ್ಮ “ದ ರೂರಲ್ ಮಿರರ್.ಕಾಂ”WhatsApp Channel ಫಾಲೋಮಾಡಲು ಇಲ್ಲಿ ಕ್ಲಿಕ್ ಮಾಡಿ
ಪೌಷ್ಟಿಕಾಂಶಗಳ ಭಂಡಾರ : ಕೇರಳದಲ್ಲಿ ಈ ಹಣ್ಣನ್ನು ಪುನರ್ಪುಳಿಗೆ ಪರ್ಯಾಯವಾಗಿ ಬಳಸಲಾಗುತ್ತದೆ. ಅಲ್ಲಿನ ಕೆಲವು ರೈತರು ವಾಣಿಜ್ಯ ಉದ್ದೇಶಕ್ಕೂ ಬೆಳೆಸುತ್ತಿದ್ದಾರೆ. ಮಲಯಾಳಂನಲ್ಲಿ ಇದನ್ನು ಮೂಟ್ಟಿಪಳಂ ಅಥವಾ ಮೂಟ್ಟಿಪುಳಿ ಎಂದು ಕರೆಯುತ್ತಾರೆ. ಮಾಹಿತಿ ಪ್ರಕಾರ ಈ ಹಣ್ಣಿನಲ್ಲಿ, ವಿಟಮಿನ್ ‘ಸಿ’ ಸಮೃದ್ಧವಾಗಿದೆ, ಫೈಬರ್ ಅಂಶ ಹೆಚ್ಚಿದ್ದು ಜೀರ್ಣಕ್ರಿಯೆಗೆ ನೆರವಾಗಬಹುದು. ರೋಗನಿರೋಧಕ ಶಕ್ತಿ ಹೆಚ್ಚಿಸಲು ಕೂಡಾ ಸಹಕಾರಿಯಾಗಬಹುದು. ಕಡಿಮೆ ಕ್ಯಾಲರಿ ಇರುವುದರಿಂದ ತೂಕ ನಿಯಂತ್ರಣ ಆಹಾರದಲ್ಲೂ ಬಳಸಬಹುದು. ಪೊಟ್ಯಾಶಿಯಂ ಸಮೃದ್ಧ ಮಣ್ಣಿನಲ್ಲಿ ಬೆಳೆಯುವ ಮರಗಳ ಹಣ್ಣುಗಳು ಇನ್ನಷ್ಟು ಸಿಹಿಯಾಗಿರುತ್ತವೆ ಎಂಬ ಅಭಿಪ್ರಾಯವೂ ಇದೆ.
ಅಳಿವಿನಂಚಿನ ತಳಿಗೆ ಸಂರಕ್ಷಣೆ ಅಗತ್ಯ : ಕೋಳಿಜುಟ್ಟು ಮರವು ಕರ್ನಾಟಕದ ಕೊಡಗು, ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳ ಪಶ್ಚಿಮ ಘಟ್ಟ ಪ್ರದೇಶಗಳು, ಕೇರಳ ಹಾಗೂ ತಮಿಳುನಾಡಿನ ಕನ್ಯಾಕುಮಾರಿವರೆಗಿನ ಮಳೆಕಾಡುಗಳಲ್ಲಿ ಸಹಜವಾಗಿ ಬೆಳೆಯುತ್ತದೆ. ಅರಣ್ಯ ನಾಶ ಮತ್ತು ಸೀಮಿತ ವಾಸಸ್ಥಳದ ಪರಿಣಾಮ ಈ ತಳಿಯನ್ನು ಅಂತರರಾಷ್ಟ್ರೀಯ ಪ್ರಕೃತಿ ಸಂರಕ್ಷಣಾ ಒಕ್ಕೂಟ (IUCN) ತನ್ನ ಕೆಂಪು ಪಟ್ಟಿಯಲ್ಲಿ Near Threatened (ಅಳಿವಿನಂಚಿನ ಹತ್ತಿರದ ತಳಿ) ಎಂದು ವರ್ಗೀಕರಿಸಿದೆ. ಆದ್ದರಿಂದ ಕಾಡಿನಲ್ಲೂ ಈ ತಳಿಯನ್ನು ಸಂರಕ್ಷಿಸುವುದು ಹಾಗೂ ನಾಡಿನಲ್ಲೂ ವ್ಯಾಪಕವಾಗಿ ಬೆಳೆಸುವುದು ಅಗತ್ಯವಾಗಿದೆ.
ಕೃಷಿಕರ ತೋಟದಲ್ಲೂ ಮೊದಲ ಇಳುವರಿ : ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನ ಸುಬ್ರಹ್ಮಣ್ಯ ಸಮೀಪದ ಬಿಳಿನೆಲೆಯ ವಾಸ್ತು ತಜ್ಞ ಎಸ್.ಎಂ. ಪ್ರಸಾದ್ ಮುನಿಯಂಗಳ ಅವರು ಮೂರು ವರ್ಷಗಳ ಹಿಂದೆ ಅರಣ್ಯ ಇಲಾಖೆಯ ನರ್ಸರಿಯಿಂದ ಕೋಳಿಜುಟ್ಟು ಗಿಡಗಳನ್ನು ಪಡೆದು ತಮ್ಮ ಜಮೀನಿನಲ್ಲಿ ನೆಟ್ಟಿದ್ದರು. ನೂರಕ್ಕೂ ಹೆಚ್ಚು ಗಿಡಗಳನ್ನು ನೆಟ್ಟಿರುವ ಅವರು, ಈ ವರ್ಷ ಮೊದಲ ಬಾರಿಗೆ ಒಂದೆರಡು ಗಿಡಗಳಲ್ಲಿ ಹಣ್ಣು ಪಡೆದಿದ್ದಾರೆ. ತೋಟದ ಅಂಚಿನಲ್ಲಿ ಹಾಗೂ ನೀರಾವರಿ ಸೌಲಭ್ಯವಿಲ್ಲದ ಪ್ರದೇಶದಲ್ಲಿಯೂ ಹೆಚ್ಚಿನ ಆರೈಕೆ ಇಲ್ಲದೆ ಗಿಡಗಳು ಉತ್ತಮವಾಗಿ ಬೆಳೆಯುತ್ತಿರುವುದಾಗಿ ಅವರು ಹೇಳುತ್ತಾರೆ. ಭವಿಷ್ಯದಲ್ಲಿ ನೀರಿನ ಕೊರತೆ ಹೆಚ್ಚಾಗುವ ಹಿನ್ನೆಲೆಯಲ್ಲಿ ಇಂತಹ ಸ್ಥಳೀಯ ಕಾಡು ಹಣ್ಣುಗಳನ್ನು ಕೃಷಿಯ ಭಾಗವಾಗಿಸಿಕೊಳ್ಳುವುದು ಉತ್ತಮ ಆಯ್ಕೆಯಾಗಬಹುದು ಎನ್ನುವುದು ಅವರ ಅಭಿಪ್ರಾಯ. ಪ್ರತಿದಿನ ಕೃಷಿ-ಗ್ರಾಮೀಣ-ಪರಿಸರ-ಹವಾಮಾನ ಬದಲಾವಣೆ ಹಾಗೂ ಇತರ ಮಾಹಿತಿಗಾಗಿ ನಮ್ಮ “ದ ರೂರಲ್ ಮಿರರ್.ಕಾಂ”WhatsApp Channel ಫಾಲೋಮಾಡಲು ಇಲ್ಲಿ ಕ್ಲಿಕ್ ಮಾಡಿ
‘ನಾಡಿನಲ್ಲೂ ಬೆಳೆದರೆ ತಳಿಯೂ ಉಳಿಯುತ್ತದೆ’: ಈ ಕುರಿತು ಅರಣ್ಯ ಇಲಾಖೆಯ ಅಧಿಕಾರಿ ಪ್ರವೀಣ್ ಕುಮಾರ್ ಶೆಟ್ಟಿ ಮಾತನಾಡಿ, ಬಳ್ಪ ಕಾಡಿನಲ್ಲಿ ಕಂಡುಬಂದ ಈ ಅಪರೂಪದ ಗಿಡವನ್ನು ಸಂರಕ್ಷಿಸುವ ಉದ್ದೇಶದಿಂದ ಇಲಾಖೆಯ ನರ್ಸರಿಗಳಲ್ಲಿ ಬೆಳೆಸಿ 2015ರಿಂದ ಕಾಡು ಹಾಗೂ ರೈತರಿಗೆ ವಿತರಿಸಲಾಗುತ್ತಿದೆ. ಈಗಾಗಲೇ ಹಲವಾರು ರೈತರು ಯಶಸ್ವಿಯಾಗಿ ಬೆಳೆಸಿದ್ದು, ಮುಂದಿನ ದಿನಗಳಲ್ಲಿ ನಾಡಿನಲ್ಲೂ ಹೆಚ್ಚಿನ ಪ್ರಮಾಣದಲ್ಲಿ ಬೆಳೆಯಬೇಕಿದೆ ಎಂದು ಹೇಳುತ್ತಾರೆ.
The rare Western Ghats wild fruit Kolojuttu (Baccaurea courtallensis), once confined to rainforest ecosystems, is now fruiting in farmers’ fields in Karnataka. Conservation efforts initiated by Forest Department officer Praveen Kumar Shetty since 2015 have helped propagate more than one lakh saplings through forest nurseries. Listed as Near Threatened by the IUCN, the species is valued for its biodiversity importance, nutritional benefits, and potential as a climate-resilient fruit crop.

