ದೇಶದ ಅಡಿಕೆ ಉತ್ಪಾದನೆಯಲ್ಲಿ ಕರ್ನಾಟಕದ ಮೊದಲು – 75.47% ಉತ್ಪಾದನೆ, 71.56% ವಿಸ್ತೀರ್ಣದಲ್ಲಿ ಅಡಿಕೆ ಬೆಳೆ

August 4, 2026
11:23 PM
ದೇಶದ ಅಡಿಕೆ ಉತ್ಪಾದನೆ ಹಾಗೂ ಬೆಳೆ ವಿಸ್ತೀರ್ಣದಲ್ಲಿ ಕರ್ನಾಟಕವೇ ಅಗ್ರಸ್ಥಾನದಲ್ಲಿದೆ ಎಂದು ಕೇಂದ್ರ ಸರ್ಕಾರ ಲೋಕಸಭೆಗೆ ತಿಳಿಸಿದೆ. ಅಡಿಕೆ ರೋಗ ನಿಯಂತ್ರಣ ಹಾಗೂ ಆರೋಗ್ಯ ಸಂಶೋಧನೆಗೆ ಹೊಸ ಯೋಜನೆಗಳನ್ನೂ DASD ಜಾರಿಗೊಳಿಸುತ್ತಿದೆ.

ದೇಶದ ಅಡಿಕೆ ಬೆಳೆ ವಿಸ್ತೀರ್ಣ ಮತ್ತು ಉತ್ಪಾದನೆಯಲ್ಲಿ ಕರ್ನಾಟಕವು ಮೊದಲ ಸ್ಥಾನದಲ್ಲಿದೆ. ಕಳೆದ ಐದು ವರ್ಷಗಳ ಅವಧಿಯಲ್ಲಿ ದೇಶದ ಒಟ್ಟು ಅಡಿಕೆ ಬೆಳೆ ವಿಸ್ತೀರ್ಣದಲ್ಲಿ 71.56 ಶೇಕಡಾ ಹಾಗೂ ಒಟ್ಟು ಉತ್ಪಾದನೆಯಲ್ಲಿ 75.47 ಶೇಕಡಾ ಪಾಲು ಕರ್ನಾಟಕದ್ದಾಗಿದೆ ಎಂದು ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ರಾಜ್ಯ ಸಚಿವ  ರಾಮನಾಥ ಠಾಕೂರ್ ಅವರು ಲೋಕಸಭೆಯಲ್ಲಿ ತಿಳಿಸಿದ್ದಾರೆ. ಸಂಸದ ಬಿ.ವೈ. ರಾಘವೇಂದ್ರ ಅವರ ಪ್ರಶ್ನೆಗೆ ನೀಡಿದ ಲಿಖಿತ ಉತ್ತರದಲ್ಲಿ ಈ ಮಾಹಿತಿ ಲಭ್ಯವಾಗಿದೆ.

2025-26ರ ದ್ವಿತೀಯ ಮುಂಗಡ ಅಂದಾಜಿನ ಪ್ರಕಾರ, ದೇಶದಲ್ಲಿ ಒಟ್ಟು 11.06 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಅಡಿಕೆ ಬೆಳೆಯಲಾಗುತ್ತಿದ್ದು, 15.29 ಲಕ್ಷ ಮೆಟ್ರಿಕ್ ಟನ್ ಉತ್ಪಾದನೆಯಾಗಿದೆ. ಇದರಲ್ಲಿ ಕರ್ನಾಟಕದಲ್ಲೇ 7.99 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಅಡಿಕೆ ಬೆಳೆಯಲಾಗುತ್ತಿದ್ದು, 11.32 ಲಕ್ಷ ಮೆಟ್ರಿಕ್ ಟನ್ ಉತ್ಪಾದನೆ ದಾಖಲಾಗಿದೆ ಎಂದು ಉತ್ತರದಲ್ಲಿ ತಿಳಿಸಿದ್ದಾರೆ.

ಕರ್ನಾಟಕದ ಜಿಲ್ಲೆಗಳ ಸಾಧನೆ:  ಕರ್ನಾಟಕದಲ್ಲಿ ಅಡಿಕೆ ವಿಸ್ತೀರ್ಣದಲ್ಲಿ ಶಿವಮೊಗ್ಗ ಜಿಲ್ಲೆ ಮೊದಲ ಸ್ಥಾನದಲ್ಲಿದ್ದು, 1.35 ಲಕ್ಷ ಹೆಕ್ಟೇರ್ ಸಮೀಪದ ಪ್ರದೇಶದಲ್ಲಿ ಅಡಿಕೆ ಬೆಳೆಯಲಾಗಿದೆ. ಉತ್ಪಾದನೆಯಲ್ಲಿ ದಾವಣಗೆರೆ ಜಿಲ್ಲೆ ಅಗ್ರಸ್ಥಾನದಲ್ಲಿದ್ದು, 1.83 ಲಕ್ಷ ಮೆಟ್ರಿಕ್ ಟನ್ ಅಡಿಕೆ ಉತ್ಪಾದನೆಯಾಗಿದೆ. ಚಿಕ್ಕಮಗಳೂರು, ಶಿವಮೊಗ್ಗ ಹಾಗೂ ದಕ್ಷಿಣ ಕನ್ನಡ ಜಿಲ್ಲೆಗಳು ನಂತರದ ಸ್ಥಾನಗಳನ್ನು ಪಡೆದಿವೆ. ಸದ್ಯ ಕರ್ನಾಟಕ ರಾಜ್ಯದಲ್ಲಿ  ಒಟ್ಟು 798.677 ಸಾವಿರ ಹೆಕ್ಟೇರ್ ವಿಸ್ತೀರ್ಣದಲ್ಲಿ ಅಡಿಕೆ ಬೆಳೆಯುತ್ತಿದ್ದು 1132.389 ಸಾವಿರ ಮೆಟ್ರಿಕ್ ಟನ್ ಅಡಿಕೆ ಉತ್ಪಾದನೆಯಾಗುತ್ತಿದೆ.  ಮಾಹಿತಿಯಂತೆ ರಾಜ್ಯದಲ್ಲಿ ಈ ಕೆಳಗಿನಂತೆ ಅಡಿಕೆ ಬೆಳೆ ಹಾಗೂ ಉತ್ಪಾದಕತೆ ಇದೆ.

ಜಿಲ್ಲೆ ವಿಸ್ತೀರ್ಣ (ಸಾವಿರ ಹೆ.) ಉತ್ಪಾದನೆ (ಸಾವಿರ ಟನ್) ಉತ್ಪಾದಕತೆ (ಟನ್/ಹೆ.)
ಬಾಗಲಕೋಟೆ 0.017 0.034 2.00
ಬೆಂಗಳೂರು ನಗರ 0.856 1.498 1.75
ಬೆಂಗಳೂರು ಗ್ರಾಮಾಂತರ 4.576 5.720 1.25
ಬೆಳಗಾವಿ 0.075 0.112 1.49
ಬಳ್ಳಾರಿ 0.335 0.168 0.50
ವಿಜಯಪುರ 0.001 0.001 1.00
ಚಾಮರಾಜನಗರ 2.026 3.038 1.50
ಚಿಕ್ಕಬಳ್ಳಾಪುರ 1.173 1.806 1.54
ಚಿಕ್ಕಮಗಳೂರು 100.440 167.734 1.67
ಚಿತ್ರದುರ್ಗ 78.724 125.958 1.60
ದಕ್ಷಿಣ ಕನ್ನಡ 107.900 141.349 1.31
ದಾವಣಗೆರೆ 109.673 183.153 1.67
ಧಾರವಾಡ 0.427 0.404 0.95
ಗದಗ 0.173 0.453 2.62
ಕಲಬುರಗಿ 0.0004 0.001 1.26
ಹಾಸನ 22.134 27.668 1.25
ಹಾವೇರಿ 25.532 40.885 1.60
ಕೊಡಗು 21.457 34.515 1.61
ಕೋಲಾರ 0.069 0.069 1.00
ಕೊಪ್ಪಳ 0.035 0.044 1.26
ಮಂಡ್ಯ 4.414 5.738 1.30
ಮೈಸೂರು 5.969 8.953 1.50
ರಾಮನಗರ 4.927 6.307 1.28
ಶಿವಮೊಗ್ಗ 134.692 149.593 1.11
ತುಮಕೂರು 101.665 117.377 1.16
ಉಡುಪಿ 26.573 39.859 1.50
ಉತ್ತರ ಕನ್ನಡ 39.354 59.031 1.50
ವಿಜಯನಗರ 5.460 10.921 2.00
ಯಾದಗಿರಿ 0.001 0.001 1.00

ಅಡಿಕೆ ಅಭಿವೃದ್ಧಿಗೆ ಪ್ರತ್ಯೇಕ ಯೋಜನೆ ಇಲ್ಲ :  ಕೇಂದ್ರ ಸರ್ಕಾರದ ಸಮಗ್ರ ತೋಟಗಾರಿಕೆ ಅಭಿವೃದ್ಧಿ ಮಿಷನ್ (MIDH) ಅಡಿಯಲ್ಲಿ ಅಡಿಕೆ ಬೆಳೆ ವಿಸ್ತೀರ್ಣ ಹೆಚ್ಚಳಕ್ಕೆ ಪ್ರತ್ಯೇಕ ನೆರವು ಇಲ್ಲ. ಆದರೆ ಅಡಿಕೆ ಮತ್ತು ಮಸಾಲೆ ಅಭಿವೃದ್ಧಿ ನಿರ್ದೇಶನಾಲಯ (DASD) ಮೂಲಕ ಅಡಿಕೆ ಅಭಿವೃದ್ಧಿ, ಸಮನ್ವಯ ಹಾಗೂ ತಾಂತ್ರಿಕ ಕಾರ್ಯಕ್ರಮಗಳ ಅನುಷ್ಠಾನಕ್ಕೆ ಅನುದಾನ ನೀಡಲಾಗುತ್ತಿದೆ. ಕಳೆದ ಐದು ವರ್ಷಗಳಲ್ಲಿ DASDಗೆ ₹12 ಕೋಟಿಯಿಂದ ₹24 ಕೋಟಿವರೆಗೆ ಅನುದಾನ ಮಂಜೂರಾಗಿದ್ದು, 2025-26ರಲ್ಲಿ ₹14 ಕೋಟಿ ಬಿಡುಗಡೆ ಮಾಡಲಾಗಿದೆ.

DASD ಕೈಗೊಂಡಿರುವ ಪ್ರಮುಖ ಕಾರ್ಯಕ್ರಮಗಳು :  ಅಡಿಕೆ ಆಧಾರಿತ ಬಹುಬೆಳೆ ಪದ್ಧತಿ, ಕೊಳೆರೋಗ, ರೋಗ ನಿಯಂತ್ರಣ, ಬೇರು ಹುಳು ನಿರ್ವಹಣೆ, ಕುಬ್ಜ ಸಂಕರ ತಳಿಗಳ ಪ್ರೋತ್ಸಾಹ, ಹಳದಿ ಎಲೆ ರೋಗ ನಿರ್ವಹಣೆ, ಎಲೆಚುಕ್ಕೆ ರೋಗದ ಸಮುದಾಯ ಆಧಾರಿತ ನಿಯಂತ್ರಣ, ರೋಗ ಮುನ್ಸೂಚನೆ ವ್ಯವಸ್ಥೆ, ಅಡಿಕೆ–ಆರೋಗ್ಯ ಸಂಬಂಧಿತ ವೈಜ್ಞಾನಿಕ ಸಂಶೋಧನೆ ಹಾಗೂ ಅಡಿಕೆ ಮೌಲ್ಯ ಅಧ್ಯಯನ ಸೇರಿದಂತೆ ಹಲವು ಕಾರ್ಯಕ್ರಮಗಳನ್ನು DASD ಜಾರಿಗೊಳಿಸುತ್ತಿದೆ.

ಎಲೆಚುಕ್ಕೆ ರೋಗ ನಿಯಂತ್ರಣಕ್ಕಾಗಿ ಕರ್ನಾಟಕದ 10 ಅಡಿಕೆ ಬೆಳೆಗಾರಿಕೆ ತಾಲೂಕುಗಳಲ್ಲಿ ಮೂರು ವರ್ಷಗಳ ಅವಧಿಗೆ ₹6.32 ಕೋಟಿ ವೆಚ್ಚದ ಕಾರ್ಯಕ್ರಮ ಕೈಗೊಳ್ಳಲಾಗಿದೆ. ಅಡಿಕೆ ಮತ್ತು ಮಾನವ ಆರೋಗ್ಯದ ಸಂಬಂಧ ಕುರಿತು ICAR-CPCRI ಹಾಗೂ ವಿವಿಧ ರಾಷ್ಟ್ರೀಯ ವೈದ್ಯಕೀಯ ಸಂಸ್ಥೆಗಳ ಸಹಯೋಗದಲ್ಲಿ ಮೂರು ವರ್ಷಗಳ ಅವಧಿಗೆ ₹9.99 ಕೋಟಿ ವೆಚ್ಚದ ಸಂಶೋಧನಾ ಯೋಜನೆಯೂ ಆರಂಭಿಸಲಾಗಿದೆ ಎಂದು ಉತ್ತರದಲ್ಲಿ ತಿಳಿಸಿದ್ದಾರೆ.

ಭಾರತದಲ್ಲಿ ಅತಿ ಹೆಚ್ಚು ಅಡಿಕೆ ಬೆಳೆಯುವ ರಾಜ್ಯ ಕರ್ನಾಟಕವಾಗಿದೆ.  ದೇಶದ ಒಟ್ಟು 1,106.29 ಸಾವಿರ ಹೆಕ್ಟೇರ್ ಅಡಿಕೆ ವಿಸ್ತೀರ್ಣದಲ್ಲಿ 798.68 ಸಾವಿರ ಹೆಕ್ಟೇರ್ ಕರ್ನಾಟಕದಲ್ಲಿದೆ.  ದೇಶದ ಒಟ್ಟು 1,529.20 ಸಾವಿರ ಮೆಟ್ರಿಕ್ ಟನ್ ಉತ್ಪಾದನೆಯಲ್ಲಿ 1,132.39 ಸಾವಿರ ಮೆಟ್ರಿಕ್ ಟನ್ ಕರ್ನಾಟಕದಲ್ಲಾಗುತ್ತಿದೆ.  ತ್ರಿಪುರಾ (3.42 ಟನ್/ಹೆ.), ಅರುಣಾಚಲ ಪ್ರದೇಶ (3.46 ಟನ್/ಹೆ.) ಮತ್ತು ಅಂಡಮಾನ್-ನಿಕೋಬಾರ್ (3.38 ಟನ್/ಹೆ.) ರಾಜ್ಯಗಳಲ್ಲಿ ಪ್ರತಿ ಹೆಕ್ಟೇರ್‌ಗೆ ಉತ್ಪಾದಕತೆ ಕರ್ನಾಟಕಕ್ಕಿಂತ ಹೆಚ್ಚಾಗಿದೆ. ಆದರೆ ವಿಸ್ತೀರ್ಣ ಮತ್ತು ಒಟ್ಟು ಉತ್ಪಾದನೆಯಲ್ಲಿ ಕರ್ನಾಟಕವೇ ದೇಶದ ಅಗ್ರಸ್ಥಾನದಲ್ಲಿದೆ. ದೇಶದಲ್ಲಿ ಅಡಿಕೆ ಬೆಳೆಯುವ ಪ್ರದೇಶ ಹೀಗಿದೆ..

ರಾಜ್ಯ 2025-26 ವಿಸ್ತೀರ್ಣ (ಸಾವಿರ ಹೆ.) ಉತ್ಪಾದನೆ (ಸಾವಿರ ಟನ್) ಉತ್ಪಾದಕತೆ (ಟನ್/ಹೆ.)
ಕರ್ನಾಟಕ 798.68 1132.39 1.42
ಕೇರಳ 97.51 88.43 0.91
ಮೇಘಾಲಯ 55.93 87.26 1.56
ಅಸ್ಸಾಂ 72.03 57.65 0.80
ಮಿಜೋರಾಂ 21.42 33.54 1.57
ತಮಿಳುನಾಡು 17.11 29.56 1.73
ತ್ರಿಪುರಾ 7.30 24.93 3.42
ಪಶ್ಚಿಮ ಬಂಗಾಳ 12.48 24.76 1.98
ಆಂಧ್ರ ಪ್ರದೇಶ 10.44 18.27 1.75
ಅಂಡಮಾನ್-ನಿಕೋಬಾರ್ 4.31 14.57 3.38
ಅರುಣಾಚಲ ಪ್ರದೇಶ 1.73 6.00 3.46
ಮಹಾರಾಷ್ಟ್ರ 3.35 4.81 1.44
ಗೋವಾ 2.09 3.54 1.69
ಒಡಿಶಾ 0.73 1.64 2.23
ನಾಗಾಲ್ಯಾಂಡ್ 0.97 1.63 1.69
ಮಣಿಪುರ 0.15 0.15 0.98
ಪುದುಚೇರಿ 0.05 0.07 1.53
ಭಾರತ ಒಟ್ಟು 1106.29 1529.20 1.38

ಪ್ರತಿದಿನ ಕೃಷಿ-ಗ್ರಾಮೀಣ-ಪರಿಸರ-ಹವಾಮಾನ ಬದಲಾವಣೆ ಹಾಗೂ ಇತರ ಮಾಹಿತಿಗಾಗಿ  ನಮ್ಮ “ದ ರೂರಲ್‌ ಮಿರರ್.ಕಾಂ”WhatsApp Channel  ಫಾಲೋಮಾಡಲು ಇಲ್ಲಿ ಕ್ಲಿಕ್‌ ಮಾಡಿ

Karnataka continues to dominate India’s arecanut sector, accounting for 71.56% of the total cultivated area and 75.47% of national production over the last five years, according to the Union Government’s reply in the Lok Sabha. The government also highlighted ongoing DASD programmes on disease management, value-chain studies, and scientific research on arecanut and human health

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಕಳಪೆ ವಿದೇಶಿ ಅಡಿಕೆ ಆಮದು ನಿಯಂತ್ರಿಸಿ – ಕೋಟ ಶ್ರೀನಿವಾಸ ಪೂಜಾರಿ ಒತ್ತಾಯ
August 4, 2026
9:14 PM
by: ದ ರೂರಲ್ ಮಿರರ್.ಕಾಂ
ಹವಾಮಾನ ವರದಿ | 04-08-2026 | ರಾಜ್ಯದಲ್ಲಿ ಆಗಸ್ಟ್‌ 12 ರವರೆಗೆ ಮಳೆ ಸಾಧ್ಯತೆ – ಮುಂಗಾರು ದುರ್ಬಲವಾಗುವ ಲಕ್ಷಣ
August 4, 2026
2:07 PM
by: ಸಾಯಿಶೇಖರ್ ಕರಿಕಳ
ಗ್ರಾಮೀಣ ಭಾರತದ ಆದಾಯಕ್ಕೆ ಹಿನ್ನಡೆ – ಕಳೆದ ವರ್ಷ ಅರ್ಧದಷ್ಟು ಕುಟುಂಬಗಳ ಆದಾಯದಲ್ಲಿ ಏರಿಕೆಯಾಗಿಲ್ಲ
August 4, 2026
7:45 AM
by: ದ ರೂರಲ್ ಮಿರರ್.ಕಾಂ
ಮುಂದುವರಿದ ಮಳೆ ಅಬ್ಬರ : ಆಗಸ್ಟ್‌ 4ರಂದು ದ ಕ -ಉಡುಪಿ-ಕಾಸರಗೋಡು ಜಿಲ್ಲೆಯ ಕೆಲವು ಶಾಲೆ-ಕಾಲೇಜುಗಳಿಗೆ ರಜೆ ಘೋಷಣೆ
August 3, 2026
10:48 PM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror