ರಾಜ್ಯದಲ್ಲಿ ವಿದ್ಯುತ್‌ ಸಂಕಷ್ಟದ ಸುಳಿವು – ರಾತ್ರಿ 6.30 ರಿಂದ 9ರವರೆಗೆ ಪೂರೈಕೆ ವ್ಯತ್ಯಯ ಸಾಧ್ಯತೆ

September 10, 2026
10:59 AM
ದುರ್ಬಲ ಮುಂಗಾರು ಮತ್ತು ಜಲ–ಪವನ ವಿದ್ಯುತ್‌ ಉತ್ಪಾದನೆ ಕುಸಿತದಿಂದ ರಾಜ್ಯದಲ್ಲಿ ವಿದ್ಯುತ್‌ ಪೂರೈಕೆಯ ಮೇಲೆ ಒತ್ತಡ ಹೆಚ್ಚಿದ್ದು, ಅಗತ್ಯ ಬಿದ್ದರೆ ಲೋಡ್‌ಶೆಡ್ಡಿಂಗ್‌ ಸೇರಿದಂತೆ ಕ್ರಮ ಕೈಗೊಳ್ಳುವ ಸುಳಿವನ್ನು ಸಚಿವ ಕೆ.ಜೆ. ಜಾರ್ಜ್‌ ನೀಡಿದ್ದಾರೆ. ಈ ನಡುವೆ ಈಗಾಗಲೇ ಕೆಲವು ಕಡೆ ವಿದ್ಯುತ್‌ ಕಡಿತ ಆರಂಭವಾಗಿದೆ.

ದುರ್ಬಲ ಮುಂಗಾರು, ಜಲಾಶಯಗಳಲ್ಲಿ ನೀರಿನ ಲಭ್ಯತೆ ಇಳಿಕೆ ಹಾಗೂ ಪವನ ವಿದ್ಯುತ್‌ ಉತ್ಪಾದನೆ ಕುಸಿತದ ಪರಿಣಾಮ ರಾಜ್ಯದ ವಿದ್ಯುತ್‌ ಪೂರೈಕೆಯ ಮೇಲೆ ಒತ್ತಡ ಹೆಚ್ಚಾಗಿದೆ. ಈ ನಡುವೆ ಅಗತ್ಯ ಬಿದ್ದರೆ ವಿದ್ಯುತ್‌ ಪೂರೈಕೆ ನಿರ್ವಹಿಸಲು ಲೋಡ್‌ಶೆಡ್ಡಿಂಗ್‌ ಸೇರಿದಂತೆ ಕ್ರಮ ಕೈಗೊಳ್ಳುವ ಸಾಧ್ಯತೆ ಬಗ್ಗೆ ಇಂಧನ ಸಚಿವ ಕೆ.ಜೆ. ಜಾರ್ಜ್‌ ಸುಳಿವು ನೀಡಿದ್ದಾರೆ. ಈ ನಡುವೆಯೇ ಎರಡು ದಿನಗಳಿಂದ ರಾಜ್ಯದ ವಿವಿದೆಡೆ ವಿದ್ಯುತ್‌ ಕಡಿತ ಆರಂಭವಾಗಿದೆ.

Advertisement

ಮುಂದಿನ 10 ರಿಂದ 15 ದಿನಗಳ ಅವಧಿಯಲ್ಲಿ ರಾತ್ರಿ 6.30 ರಿಂದ 9 ಗಂಟೆಯವರೆಗೆ ವಿದ್ಯುತ್‌ ಬೇಡಿಕೆ ಗರಿಷ್ಠ ಮಟ್ಟದಲ್ಲಿರುವುದರಿಂದ ಕೆಲವು ಪ್ರದೇಶಗಳಲ್ಲಿ ಪೂರೈಕೆ ವ್ಯತ್ಯಯ ಉಂಟಾಗುವ ಸಾಧ್ಯತೆ ಇದೆ ಎಂಬ ಮಾಹಿತಿ ಹರಿದಾಡುತ್ತಿದೆ. ರಾಜ್ಯದಲ್ಲಿ ವಿದ್ಯುತ್‌ ಕೊರತೆ ಎದುರಾಗದಂತೆ ಸರ್ಕಾರ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುತ್ತಿದೆ ಎಂದು ಸಚಿವರು ಕೂಡಾ ತಿಳಿಸಿದ್ದಾರೆ.

ಜಲ–ಪವನ ವಿದ್ಯುತ್‌ ಉತ್ಪಾದನೆಗೆ ಹೊಡೆತ :  ಈ ವರ್ಷದ ಮುಂಗಾರು ನಿರೀಕ್ಷಿತ ಪ್ರಮಾಣದಲ್ಲಿ ಆಗದಿರುವುದು ರಾಜ್ಯದ ವಿದ್ಯುತ್‌ ಉತ್ಪಾದನಾ ವ್ಯವಸ್ಥೆಯ ಮೇಲೂ ಪರಿಣಾಮ ಬೀರಿದೆ. ಜಲಾಶಯಗಳಲ್ಲಿ ನೀರಿನ ಲಭ್ಯತೆ ಕಡಿಮೆಯಾಗಿರುವುದರಿಂದ ಜಲವಿದ್ಯುತ್‌ ಉತ್ಪಾದನೆ ಇಳಿಕೆಯಾಗಿದೆ. ಇದೇ ವೇಳೆ ಪವನ ವಿದ್ಯುತ್‌ ಉತ್ಪಾದನೆಯಲ್ಲೂ ಇತ್ತೀಚೆಗೆ ಕುಸಿತ ಕಂಡುಬಂದಿದೆ. ಸೆ.9 ರಂದು ದಕ್ಷಿಣ ಕರ್ನಾಟಕದ ಕೆಲವು ಭಾಗಗಳಲ್ಲಿ ಪವನ ವಿದ್ಯುತ್‌ ಉತ್ಪಾದನೆ ಸುಮಾರು 2,000 ಮೆಗಾವ್ಯಾಟ್‌ನಷ್ಟು ಕುಸಿದಿರುವುದಾಗಿ ವರದಿಯಾಗಿದೆ. ಇದರಿಂದ ಬೇಡಿಕೆ–ಪೂರೈಕೆ ನಡುವಿನ ಅಂತರ ನಿರ್ವಹಿಸುವ ಸವಾಲು ಮತ್ತಷ್ಟು ಹೆಚ್ಚಾಗಿದೆ. ರಾಜ್ಯದ ಉಷ್ಣ ವಿದ್ಯುತ್‌ ಘಟಕಗಳಿಂದ ಉತ್ಪಾದನೆಯನ್ನು ಹೆಚ್ಚಿಸುವ ಪ್ರಯತ್ನ ನಡೆಯುತ್ತಿದ್ದರೂ, ಬೇಡಿಕೆಗೆ ಅನುಗುಣವಾಗಿ ನಿರಂತರ ಪೂರೈಕೆ ನಿರ್ವಹಿಸುವುದು ಸವಾಲಾಗಿದೆ.

ಅಗತ್ಯ ಬಿದ್ದರೆ ಹೊರರಾಜ್ಯದಿಂದ ವಿದ್ಯುತ್‌ ಖರೀದಿ : ವಿದ್ಯುತ್‌ ಕೊರತೆ ಉಂಟಾಗದಂತೆ ಸರ್ಕಾರ ಅಗತ್ಯ ಕ್ರಮ ಕೈಗೊಳ್ಳುತ್ತಿದೆ ಎಂದು ಸಚಿವ ಕೆ.ಜೆ. ಜಾರ್ಜ್‌ ಹೇಳಿದ್ದಾರೆ. ಕಳೆದ ಬೇಸಿಗೆಯಲ್ಲಿ ವಿದ್ಯುತ್‌ ವಿನಿಮಯ ಒಪ್ಪಂದಗಳ ಮೂಲಕ ಉತ್ತರ ಪ್ರದೇಶ, ಪಂಜಾಬ್‌ ಹಾಗೂ ಹರಿಯಾಣದಿಂದ ಹೆಚ್ಚುವರಿ ವಿದ್ಯುತ್‌ ಖರೀದಿಸಲಾಗಿತ್ತು.  ಮುಂದಿನ ದಿನಗಳಲ್ಲೂ ಅಗತ್ಯಕ್ಕೆ ಅನುಗುಣವಾಗಿ ಹೊರರಾಜ್ಯಗಳಿಂದ ವಿದ್ಯುತ್‌ ಖರೀದಿಸಲು ಸರ್ಕಾರ ಸಿದ್ಧವಿದೆ. ಅಗತ್ಯ ಬಿದ್ದರೆ ಮುಕ್ತ ಮಾರುಕಟ್ಟೆಯಿಂದಲೂ ವಿದ್ಯುತ್‌ ಖರೀದಿಸಲಾಗುವುದು; ಹೆಚ್ಚುವರಿ ವೆಚ್ಚವಾದರೂ ಸರ್ಕಾರ ಭರಿಸಲಿದೆ ಎಂದು ಸಚಿವರು ಭರವಸೆ ನೀಡಿದ್ದಾರೆ.

ಹೀಗಾಗಿ ಸದ್ಯ ಸರ್ಕಾರದ ಮುಖ್ಯ ಪ್ರಯತ್ನವು ವಿದ್ಯುತ್‌ ಕೊರತೆ ಉಂಟಾಗದಂತೆ ಹೊರಗಿನಿಂದ ವಿದ್ಯುತ್‌ ಪಡೆದು ಬೇಡಿಕೆ–ಪೂರೈಕೆ ಸಮತೋಲನ ಕಾಯ್ದುಕೊಳ್ಳುವುದಾಗಿದೆ. ಆದರೆ ಉತ್ಪಾದನೆ ಕುಸಿತ ಮತ್ತು ಬೇಡಿಕೆ ಹೆಚ್ಚಳ ಮುಂದುವರಿದರೆ ಲೋಡ್‌ಶೆಡ್ಡಿಂಗ್‌ ಅನಿವಾರ್ಯವಾಗಬಹುದೇ ಎಂಬ ಪ್ರಶ್ನೆ ಎದುರಾಗಿದೆ.

2030ಕ್ಕೆ 66 ಗಿಗಾವ್ಯಾಟ್‌ ಗುರಿ : ರಾಜ್ಯದಲ್ಲಿ ವಿದ್ಯುತ್‌ ಬೇಡಿಕೆ ಮುಂದಿನ ವರ್ಷಗಳಲ್ಲಿ ಮತ್ತಷ್ಟು ಹೆಚ್ಚುವ ನಿರೀಕ್ಷೆಯ ಹಿನ್ನೆಲೆಯಲ್ಲಿ 2030ರ ವೇಳೆಗೆ ಒಟ್ಟು ವಿದ್ಯುತ್‌ ಉತ್ಪಾದನಾ ಸಾಮರ್ಥ್ಯವನ್ನು 66 ಗಿಗಾವ್ಯಾಟ್‌ಗೆ ಹೆಚ್ಚಿಸುವ ಗುರಿಯನ್ನು ಸರ್ಕಾರ ಹೊಂದಿದೆ. ಸೌರ ಮತ್ತು ಪವನ ವಿದ್ಯುತ್‌ ಜತೆಗೆ ಬ್ಯಾಟರಿ ಸಂಗ್ರಹಣೆ ಹಾಗೂ ಪಂಪ್ಡ್‌ ಸ್ಟೋರೇಜ್‌ ಯೋಜನೆಗಳಿಗೂ ಒತ್ತು ನೀಡಲಾಗುತ್ತಿದೆ. ಪ್ರಸ್ತುತ ರಾಜ್ಯದ ವಿದ್ಯುತ್‌ ಬೇಡಿಕೆ ಸುಮಾರು 18,000 ಮೆಗಾವ್ಯಾಟ್‌ ಇದ್ದು, ಇದರ ಬಹುಪಾಲು ಬೇಡಿಕೆಯನ್ನು ನವೀಕರಿಸಬಹುದಾದ ಇಂಧನ ಮೂಲಗಳಿಂದ ಪೂರೈಸಲಾಗುತ್ತಿದೆ ಎಂದು ಸಚಿವರು ತಿಳಿಸಿದ್ದಾರೆ. ಪ್ರಸಕ್ತ ಹಣಕಾಸು ವರ್ಷದಲ್ಲಿ 12 ವಿದ್ಯುತ್‌ ಉಪಕೇಂದ್ರಗಳನ್ನು ನಿರ್ಮಿಸಲಾಗುತ್ತಿದ್ದು, ಮುಂದಿನ ಮೂರು ವರ್ಷಗಳಲ್ಲಿ 400 ಕ್ಕೂ ಹೆಚ್ಚು ಉಪಕೇಂದ್ರಗಳನ್ನು ನಿರ್ಮಿಸುವ ಯೋಜನೆಯೂ ಇದೆ.

ವಿದ್ಯುತ್‌ ಕಡಿತಕ್ಕೆ ವಿವಿದಡೆ ಆಕ್ರೋಶ:  ರಾಜ್ಯ ಮಟ್ಟದಲ್ಲಿ ವಿದ್ಯುತ್‌ ಪೂರೈಕೆಯ ಒತ್ತಡದ ಚರ್ಚೆ ನಡೆಯುತ್ತಿರುವ ಬೆನ್ನಲ್ಲೇ ಕೋಲಾರ ಜಿಲ್ಲೆಯ ಮುಳಬಾಗಿಲು ತಾಲ್ಲೂಕಿನಲ್ಲಿ ಲೋಡ್‌ಶೆಡ್ಡಿಂಗ್‌ ವಿರುದ್ಧ ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.  ತಾಲ್ಲೂಕಿನಲ್ಲಿ ಲೋಡ್‌ಶೆಡ್ಡಿಂಗ್‌ನಿಂದ ರೈತರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದು, ಸಮಸ್ಯೆಯನ್ನು ಕೂಡಲೇ ಬಗೆಹರಿಸಬೇಕು. ಇಲ್ಲದಿದ್ದರೆ ಬೆಸ್ಕಾಂ ಕಚೇರಿ ಎದುರು ಪ್ರತಿಭಟನೆ ನಡೆಸಲಾಗುವುದು ಎಂದು ಭಾರತೀಯ ಕಿಸಾನ್‌ ಸಂಘದ ಜಿಲ್ಲಾ ಉಪಾಧ್ಯಕ್ಷ ಅರಹಳ್ಳಿ ಶ್ರೀನಿವಾಸಗೌಡ ಎಚ್ಚರಿಕೆ ನೀಡಿದ್ದಾರೆ. ಇದೇ ವೇಳೆ ಮುಧೋಳ ತಾಲೂಕಿನ ಶಿರೋಳ ಗ್ರಾಮದಲ್ಲೂ ಕಳಪೆ ಗುಣಮಟ್ಟದ ವಿದ್ಯುತ್‌ ಸರಬರಾಜು ಖಂಡಿಸಿ ಪ್ರತಿಭಟನೆ ನಡೆದಿದೆ.

ರೈತರಿಗೆ ದೊಡ್ಡ ಸವಾಲು : ವಿದ್ಯುತ್‌ ಪೂರೈಕೆಯ ವ್ಯತ್ಯಯ ಮುಂದುವರಿದರೆ ಅದರ ನೇರ ಪರಿಣಾಮ ಕೃಷಿ ಪಂಪ್‌ಸೆಟ್‌ಗಳು ಮತ್ತು ನೀರಾವರಿ ವ್ಯವಸ್ಥೆಗಳ ಮೇಲೂ ಬೀಳಲಿದೆ. ಮಳೆ ಕೊರತೆಯಿರುವ ಪ್ರದೇಶಗಳಲ್ಲಿ ಈಗಾಗಲೇ ನೀರಿನ ಲಭ್ಯತೆ ಸವಾಲಾಗಿದ್ದು, ನೀರಾವರಿಗಾಗಿ ವಿದ್ಯುತ್‌ ಅವಲಂಬಿಸಿರುವ ರೈತರಿಗೆ ಪೂರೈಕೆಯ ಸಮಯ ಅತ್ಯಂತ ಮಹತ್ವದ್ದಾಗಿದೆ.

ಒಂದೆಡೆ ಮುಂಗಾರು ದುರ್ಬಲಗೊಂಡು ಮಳೆಯ ಕೊರತೆ ಎದುರಾಗಿದೆ. ಮತ್ತೊಂದೆಡೆ ವಿದ್ಯುತ್‌ ಉತ್ಪಾದನೆಯ ಪ್ರಮುಖ ಮೂಲಗಳಾದ ಜಲ ಮತ್ತು ಪವನ ವಿದ್ಯುತ್‌ ಉತ್ಪಾದನೆಯಲ್ಲೂ ಇಳಿಕೆಯಾಗಿದೆ.

ಗ್ರಾಹಕರು ಏನು ಮಾಡಬೇಕು? :  ರಾತ್ರಿ 6.30ರಿಂದ 9 ಗಂಟೆಯವರೆಗೆ ವಿದ್ಯುತ್‌ ಬೇಡಿಕೆ ಹೆಚ್ಚಾಗುವ ಅವಧಿಯಲ್ಲಿ ಅನಗತ್ಯ ವಿದ್ಯುತ್‌ ಉಪಕರಣಗಳ ಬಳಕೆಯನ್ನು ಕಡಿಮೆ ಮಾಡುವಂತೆ ಗ್ರಾಹಕರಿಗೆ ಮನವಿ ಮಾಡಲಾಗಿದೆ. ಸ್ಥಳೀಯವಾಗಿ ವಿದ್ಯುತ್‌ ಕಡಿತದ ಅಧಿಕೃತ ವೇಳಾಪಟ್ಟಿ ಪ್ರಕಟವಾದರೆ ಅದನ್ನು ಗಮನಿಸುವುದು ಅಗತ್ಯ.  ವಿದ್ಯುತ್‌ ಕೊರತೆ ತಪ್ಪಿಸಲು ಸರ್ಕಾರ ಹೊರಗಿನಿಂದ ವಿದ್ಯುತ್‌ ಖರೀದಿಸುವ ಭರವಸೆ ನೀಡಿದೆ. ಆದರೆ ಉತ್ಪಾದನೆ ಮತ್ತು ಬೇಡಿಕೆಯ ನಡುವಿನ ಅಂತರ ಹೆಚ್ಚಾದರೆ ರಾಜ್ಯದ ವಿವಿಧ ಭಾಗಗಳಲ್ಲಿ ಲೋಡ್‌ಶೆಡ್ಡಿಂಗ್‌ ಎಷ್ಟು ಪ್ರಮಾಣದಲ್ಲಿ ಜಾರಿಗೆ ಬರಲಿದೆ ಎಂಬುದೇ ಈಗ ಪ್ರಮುಖ ಪ್ರಶ್ನೆ. ಗೃಹಬಳಕೆಗೆ ಸೋಲಾರ್‌ ಕಡೆಗೂ ಗಮನಹರಿಸಬೇಕಾಗಬಹುದು, ಸರ್ಕಾರ ಕೂಡಾ ಇಂತಹ ಯೋಜನೆಗಳಿಗೆ ಹೆಚ್ಚು ನೆರವು ನೀಡಬೇಕಿದೆ.

ಪ್ರತಿದಿನ ಕೃಷಿ-ಗ್ರಾಮೀಣ-ಪರಿಸರ-ಹವಾಮಾನ ಬದಲಾವಣೆ ಹಾಗೂ ಇತರ ಮಾಹಿತಿಗಾಗಿ  ನಮ್ಮ “ದ ರೂರಲ್‌ ಮಿರರ್.ಕಾಂ”WhatsApp Channel  ಫಾಲೋಮಾಡಲು ಇಲ್ಲಿ ಕ್ಲಿಕ್‌ ಮಾಡಿ

Karnataka is facing increased pressure on power supply due to weak monsoon conditions, declining hydropower generation and a recent fall in wind power generation. Energy Minister K.J. George has indicated that the government may resort to measures including load shedding if required, while also preparing to purchase power from other states and the open market.

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಹವಾಮಾನ ವರದಿ | 10-09-2026 | ಕರ್ನಾಟಕದಲ್ಲಿ ಮಳೆ ಏಕೆ ಇಳಿಮುಖವಾಗುತ್ತಿದೆ..?
September 10, 2026
11:29 AM
by: ಸಾಯಿಶೇಖರ್ ಕರಿಕಳ
ಪರಿಸರ ಸ್ನೇಹಿ ಗೌರಿ-ಗಣೇಶ ಹಬ್ಬ : ಮಂಗಳೂರು ಮಹಾನಗರಪಾಲಿಕೆ ಸೂಚನೆ
September 9, 2026
9:26 PM
by: ದ ರೂರಲ್ ಮಿರರ್.ಕಾಂ
ಹವಾಮಾನ ವರದಿ | 09-09-2026 | ಕರ್ನಾಟಕದಲ್ಲಿ ಮಳೆಯ ಚಿತ್ರಣ ಬದಲಾಗುತ್ತಿದೆ – ಸೆ.11ರಿಂದ ಕರಾವಳಿಯಲ್ಲಿ ಬದಲಾವಣೆ
September 9, 2026
1:50 PM
by: ಸಾಯಿಶೇಖರ್ ಕರಿಕಳ
ಕ್ಯಾಂಪ್ಕೋ ಅಭಿವೃದ್ಧಿಯ ಹಾದಿಯಲ್ಲಿ: ₹2,900 ಕೋಟಿ ಅಡಿಕೆ ವ್ಯವಹಾರದ ನಡುವೆ ಮುಂದಿರುವ ಸವಾಲುಗಳೇನು?
September 9, 2026
6:43 AM
by: ಅರುಣ್‌ ಕುಮಾರ್ ಕಾಂಚೋಡು

You cannot copy content of this page - Copyright -The Rural Mirror