ಒಂದೂರಿಗೆ ಒಂದು ದೇವಸ್ಥಾನ. ಅದು ಆ ಊರಿನ ಶ್ರದ್ಧೆಯ ಕೇಂದ್ರ ಮಾತ್ರವಲ್ಲ ಜನರೆಲ್ಲಾ ಸೇರುವ ಕ್ಷೇತ್ರ. ಅಷ್ಟೇ ಅಲ್ಲ, ಊರಿನ ಎಲ್ಲಾ ಆಗುಹೋಗುಗಳಿಗೂ ದೇವಸ್ಥಾನವೇ ಪ್ರಮುಖ ತಾಣ. ಗ್ರಾಮೀಣ ಭಾಗದಲ್ಲಿ ಅಂತಹ ದೇವಸ್ಥಾನಗಳು ನಿಜವಾಗಿಯೂ ಭಕ್ತರ ಎಲ್ಲಾ ಇಷ್ಟಾರ್ಥಗಳನ್ನು ಈಡೇರಿಸುವ ಕ್ಷೇತ್ರ. ಇಂತಹದೊಂದು ಕ್ಷೇತ್ರ ಇರುವುದು ಸುಳ್ಯ ತಾಲೂಕಿನ ಕೊಲ್ಲಮೊಗ್ರ ಗ್ರಾಮದ ಕಟ್ಟದಲ್ಲಿ. ಇಲ್ಲಿ ಕೊಚ್ಚಿಲ ಮಯೂರ ವಾಹನ ಸುಬ್ರಹ್ಮಣ್ಯ ದೇವಸ್ಥಾನ ಇದೆ. ಇದು ಈ ಊರಿನ ಶ್ರದ್ಧಾ ಕೇಂದ್ರ.
ಸುಳ್ಯ ತಾಲೂಕಿನ ತೀರಾ ಹಿಂದುಳಿದ ಗ್ರಾಮ, ಕುಗ್ರಾಮ ಅಂತೆಲ್ಲಾ ವರದಿಗಳು ಬಂದರೆ ಅದರಲ್ಲಿ ಕೊಲ್ಲಮೊಗ್ರವೂ ಸೇರಿಕೊಳ್ಳುತ್ತದೆ. ಬಹುಪಾಲು ಕಾಡುಗಳಿಂದಲೇ ಆವೃತವಾದ ಪ್ರದೇಶ. ಮೂಲಭೂತ ಸೌಲಭ್ಯ ಮರೀಚಿಕೆಯೇ ಆಗಿದೆ. ಮೊಬೈಲ್ ನೆಟ್ವರ್ಕ್ ಸ್ವಲ್ಪ ದೂರವೇ. ವಿದ್ಯುತ್ ಕೈಕೊಟ್ಟರೆ ಮತ್ತೆ ದುರಸ್ತಿಯಾಗಲು ಒಂದೆರಡು ದಿನ ಬೇಕು. ಅರಣ್ಯದ ನಡುವೆಯೇ ವಿದ್ಯುತ್ ತಂತಿ ಹಾದು ಹೋಗುವ ಪ್ರದೇಶಗಳೇ ಈ ಗ್ರಾಮದಲ್ಲಿ ಹೆಚ್ಚು. ಕಾಡುಪ್ರಾಣಿಗಳ ಕಾಟವೂ ಹೆಚ್ಚಿದೆ. ಕೃಷಿಯೇ ಪ್ರಧಾನ ವ್ಯವಸ್ಥೆ. ಅದರಲ್ಲೂ ಅಡಿಕೆಯೇ ಪ್ರಮುಖ. ಈಗ ಅಡಿಕೆಗೂ ಹಳದಿ ಎಲೆರೋಗ ಬಾಧಿಸುತ್ತಿದೆ. ರಸ್ತೆಯ ಪಾಡು ಹಲವು ಕಡೆ ಅವ್ಯವಸ್ಥೆ. ಇಂತದೊಂದು ಊರಲ್ಲಿ ದೇವಸ್ಥಾನ. ಆ ದೇವಸ್ಥಾನ ಊರಿನ ಎಲ್ಲಾ ಜನರ ಶ್ರದ್ಧೆ. ಹೀಗಾಗಿ ಪೂಜೆ, ಸೇವೆಗೆ ಇಲ್ಲಿಗೆ ಬರುತ್ತಾರೆ.
ಕೊಚ್ಚಿಲ ಮಯೂರ ವಾಹನ ಸುಬ್ರಹ್ಮಣ್ಯ ದೇವಸ್ಥಾನದ ಆಡಳಿತ, ಪೂಜಾ ಕಾರ್ಯವನ್ನು ನಾರಾಯಣಯ್ಯ ಕಟ್ಟ ನಡೆಸಿಕೊಂಡು ಬಂದಿದ್ದರು. ಸರ್ಕಾರದ ಸಿ ಗ್ರೇಡ್ ದೇವಸ್ಥಾನ. ಹೀಗಾಗಿ ಆಡಳಿತ ಮಂಡಳಿಯೂ ರಚನೆ ಆಗುತ್ತದೆ. ಈ ದೇವಸ್ಥಾನಕ್ಕೆ ಊರಿನ ಎಲ್ಲಾ ಜನರು ರಾಜಕೀಯ ರಹಿತವಾಗಿ ಸಹಕಾರ ನೀಡುತ್ತಾರೆ. ದೇವಸ್ಥಾನವು ಭಕ್ತರನ್ನು ಒಂದುಗೂಡಿಸಲು ಪ್ರಯತ್ನಿಸುತ್ತದೆ.
ಇಲ್ಲಿ ಒಂದು ಸಭಾಭವನ ಇದೆ. ಊರಿನ ಮಂದಿಗೆ ಶುಭ ಕಾರ್ಯಕ್ಕೆ ಇಲ್ಲಿ ಅವಕಾಶ ಇದೆ. ಈ ಹಾಲ್ ಬಾಡಿಗೆ ಕೇಳಿದರೆ ಅಚ್ಚರಿಯಾಗುತ್ತದೆ. ಕೇವಲ 10 ಸಾವಿರ. ಈ ಹಣದಲ್ಲಿ ಕಾರ್ಮಿಕರ ವೆಚ್ಚು, ಶುಚಿತ್ವ ಹೊರತುಪಡಿಸಿ ಎಲ್ಲವೂ ಸೇರಿತು..!. ಸುಮಾರು 1500 ಜನರಿಗೆ ಬೇಕಾಗುವಷ್ಟು ಪಾತ್ರಾ ಇತ್ಯಾದಿ. 700 ಚಯರ್, ಜನರೇಟರ್, ಟೇಬಲ್ ಲಭ್ಯವಿದೆ. ಸಾಕಷ್ಟು ವಿಶಾಲವಾದ ಜಾಗವೂ ಇದೆ. ಈಚೆಗಿನವರೆಗೆ ಹಾಲ್ ಬಾಡಿಗೆ ಕೇವಲ 5000 ರೂಪಾಯಿ ನಿಗದಿಯಾಗಿತ್ತು…!. ವಾಹನ ಪಾರ್ಕಿಂಗ್ ಸ್ಥಳಾವಕಾಶ ಸಾಕಷ್ಟಿದೆ. ಈ ಊರಿನ ಜನರಿಗಾಗಿ ದೇವಸ್ಥಾನದ ಆಡಳಿತ ವತಿಯಿಂದ ಸೇವಾ ವ್ಯವಸ್ಥೆ. ಆದರೆ ಸಮಸ್ಯೆ ಅಂತ ಭಾವಿಸಿಕೊಂಡರೆ ಇರುವುದು ಮುಖ್ಯ ರಸ್ತೆಯಿಂದ ಸುಮಾರ 2 ಕಿಮೀ ದೂರ ಇದೆ. ಮೊಬೈಲ್ ನೆಟ್ವರ್ಕ್ ಇಲ್ಲ…!. ಆದರೆ ದೇವಸ್ಥಾನದಲ್ಲಿ ವೈ ಪೈ ವ್ಯವಸ್ಥೆಯನ್ನು ಉಚಿತವಾಗಿ ನೀಡಲಾಗುತ್ತದೆ..!.
ದೇವಸ್ಥಾನದ ಅಭಿವೃದ್ಧಿಗೆ ಸರ್ಕಾರದಿಂದ ಹಣ ಬಂದಿಲ್ಲ, ಬರುವುದೂ ಇಲ್ಲ. ಹಾಗಿದ್ದರೆ ಅಭಿವೃದ್ಧಿ ಹೇಗೆ ಎಂಬುದರ ಬಗ್ಗೆ ಜಯಪ್ರಕಾಶ್ ಕಟ್ಟ ಹೇಳುತ್ತಾರೆ, ಊರಿನ ಎಲ್ಲಾ ಜನರ ಸಹಕಾರ. ಈಗ ಒಂದು ವ್ಯಾಟ್ಸಪ್ ಗುಂಪು ಮಾಡಿದ್ದಾರೆ. ಒಂದೆರಡು ಸೇವಾ ಸಂಘಗಳೂ ಇವೆ. ಈ ಗುಂಪುಗಳ ಮೂಲಕ ದೇವಸ್ಥಾನದ ಅಭಿವೃದ್ಧಿ ಕಾರ್ಯದ ಬಗ್ಗೆ ತಿಳಿಸಲಾಗುತ್ತದೆ. ಜನರು ದೇಣಿಗೆ ನೀಡುತ್ತಾರೆ, ವ್ಯವಸ್ಥೆ ಆಗುತ್ತದೆ. ಈ ಎಲ್ಲಾ ದಾನಗಳೂ ನಂತರ ಮತ್ತೆ ಪುನಃ ಜನರಿಗೆ ಸೇವಾ ರೂಪದಲ್ಲಿಯೇ ಲಭ್ಯವಾಗುತ್ತದೆ. ಇದಕ್ಕಾಗಿಯೇ ಕಡಿಮೆ ಬಾಡಿಗೆ…! ಎನ್ನುತ್ತಾರೆ. ಇಲ್ಲಿ ಎಲ್ಲರೂ ಒಂದಾಗಿ ಕೆಲಸ ಮಾಡುವುದೇ ದೇವಸ್ಥಾನದ ಅಭಿವೃದ್ಧಿಗೆ ಕಾರಣ ಎನ್ನುತ್ತಾರೆ ಅವರು.
ಕಳೆದ ವರ್ಷವ ನೆರೆ ಬಂದಾಗ ದೇವಸ್ಥಾನದ ತುಂಬಾ ನೀರು, ಕೆಲಸರು ತುಂಬಿತ್ತು. ಊರಿನ ಜನರ ಸೇವೆ ಹೇಗಿತ್ತೆಂದರೆ ಅರ್ಧ ದಿನದಲ್ಲಿ ಮಳೆ ಬಂದು ಕೆಸರಾಗಿದೆ, ಅಂಗಣಕ್ಕೆ ಕೆಸರು ಬಂದಿದೆ ಎನ್ನುವುದೇ ತಿಳಿಯದಷ್ಟು ಸ್ವಚ್ಛ ಮಾಡಿದ್ದಾರೆ ಎನ್ನುತ್ತಾರೆ ಸ್ಥಳೀಯರು. ಇಂತಹ ಕಾರ್ಯಗಳಿಂದಲೇ ಗ್ರಾಮೀಣ ಭಾಗದ ದೇವಸ್ಥಾನಗಳು ಇಂದಿಗೂ ಸೇವೆಯನ್ನು ನೀಡುತ್ತಿವೆ, ಸಕಲ ವ್ಯವಸ್ಥೆಯೊಂದಿ ಅತ್ಯಂತ ಕಡಿಮೆ ವೆಚ್ಚದಲ್ಲಿ ತೀರಾ ಸಾಮಾನ್ಯರೂ ಶುಭ ಕಾರ್ಯಕ್ರಮ ಸಂಭ್ರಮದಿಂದ ಮಾಡಲು ಸಾಧ್ಯವಾಗುತ್ತದೆ. ಗ್ರಾಮೀಣ ಭಾಗದ ಅಭಿವೃದ್ಧಿಗೆ ದೇವಸ್ಥಾನಗಳು ಹೀಗೂ ಕೊಡುಗೆ ನೀಡಬಹುದು.