ಕೇರಳದಲ್ಲಿ ತೆಂಗಿನಕಾಯಿ ಉತ್ಪಾದನೆಯಲ್ಲಿಕುಸಿತ ಕಂಡಿದೆ. ತೆಂಗು ಉತ್ಪಾದನೆಗೆ ವಿವಿಧ ರೀತಿಯಲ್ಲಿ ಪ್ರಯತ್ನ ನಡೆಯುತ್ತಿದೆ. ಈಗಾಗಲೇ ತೆಂಗು ಇಳುವರಿ ಕುಸಿತದ ಹಿನ್ನೆಲೆಯಲ್ಲಿ ತೆಂಗಿನ ಧಾರಣೆ ಏರಿಕೆ ಕಂಡಿದೆ. ಇದೇ ವೇಳೆ ಕೊಬ್ಬರಿಯ ತೀವ್ರ ಕೊರತೆಯನ್ನೂ ಎದುರಿಸುತ್ತಿದೆ ಕೇರಳ. ಇತಿಹಾಸದಲ್ಲಿ ಮೊದಲ ಬಾರಿಗೆ ಕೇರಳ ಕೊಬ್ಬರಿ ಆಮದು ಮಾಡಿಕೊಳ್ಳುವ ಸಾಧ್ಯತೆ ಇದೆ. ಈ ಎಲ್ಲಾ ಕಾರಣಗಳಿಂದ ಇದೀಗ ತೆಂಗು ಅಭಿವೃದ್ಧಿ ಮಂಡಳಿಯು ಉತ್ಪಾದಕತೆಯನ್ನು ಹೆಚ್ಚಿಸಲು ಹಲವಾರು ಯೋಜನೆಗಳನ್ನು ರೂಪಿಸಿದೆ. ಇದಕ್ಕಾಗಿಯೇ ಹೊಸಕೋರ್ಸ್ ಆರಂಭಿಸಲು ಚಿಂತನೆ ನಡೆಸಿದೆ.
ತೆಂಗು ಅಭಿವೃದ್ಧಿ ಮಂಡಳಿಯ ಈ ಯೋಜನೆಯಲ್ಲಿ ತೆಂಗಿನ ನರ್ಸರಿಗಳು ಮತ್ತು ತೆಂಗಿನ ಬೀಜದ ತೋಟಗಳಿಗೆ ಸಬ್ಸಿಡಿ, ಕ್ಲಸ್ಟರ್ ಆಧಾರಿತವಾಗಿ ಉತ್ಪಾದಕತೆ ಹೆಚ್ಚಿಸಲು ಯೋಜನೆ ಮತ್ತು ತೆಂಗು ಪ್ರದೇಶದ ವಿಸ್ತರಣೆಗೆ ಸಹಾಯ ಮೊದಲಾದ ಅಂಶಗಳು ಸೇರಿವೆ. ಇದಲ್ಲದೆ, ಕೊಕೊಮಿತ್ರ ಎಂಬ ಹೊಸ ಯೋಜನೆಯಡಿಯಲ್ಲಿ ತೆಂಗು ಮರ ಏರುವ ಕಾರ್ಯಪಡೆಗಳನ್ನು ರಚಿಸಲಾಗುತ್ತಿದೆ. ಅಲ್ಲಿ 10 ವ್ಯಕ್ತಿಗಳ ಗುಂಪು ಸಹಕಾರಿ ಸಂಘದಂತಹ ಕಾನೂನು ಘಟಕವನ್ನು ರಚಿಸಬಹುದು , ಉಪಕರಣಗಳು ಮತ್ತುಇತರ ಚಟುವಟಿಕೆಗಳ ಬೆಂಬಲಕ್ಕಾಗಿ 2.5 ಲಕ್ಷ ರೂ.ಗಳ ಆರ್ಥಿಕ ಸಹಾಯವನ್ನು ಕೂಡಾ ಪಡೆಯಬಹುದು. ಇದು ಸದ್ಯ ರೂಪಿಸಿರುವ ಯೋಜನೆ.
ಗುಣಮಟ್ಟದ ಸಸಿಗಳ ಲಭ್ಯತೆಯನ್ನು ಅಭಿವೃದ್ಧಿಪಡಿಸುವ ಯೋಜನೆಯಡಿಯಲ್ಲಿ, ಪ್ರತಿ ಸಸಿಗೆ 90 ರೂ.ಗಳ ಆರ್ಥಿಕ ಸಹಾಯ ಮತ್ತು ಖಾಸಗಿ ವಲಯಕ್ಕೆ ಅದರ ಅರ್ಧದಷ್ಟು ಆರ್ಥಿಕ ಸಹಾಯವನ್ನು ಒದಗಿಸಲಾಗುತ್ತದೆ. ಒಂದು ಎಕರೆಯಲ್ಲಿ 25,000 ಸಸಿಗಳ ಗರಿಷ್ಠ ಉತ್ಪಾದನಾ ಸಾಮರ್ಥ್ಯ ಹೊಂದಿಬಹುದು. 25 ಸೆಂಟ್ಸ್ ಭೂಮಿಯಲ್ಲಿ ಕನಿಷ್ಠ ಉತ್ಪಾದನಾ ಸಾಮರ್ಥ್ಯ ವರ್ಷಕ್ಕೆ 6,250 ಸಸಿಗಳಾಗಿರಬೇಕು. 20,000 ಕ್ಕೂ ಹೆಚ್ಚು ಗುಣಮಟ್ಟದ ಸಸಿಗಳನ್ನು ತಯಾರು ಮಾಡುವ ಸಾಮರ್ಥ್ಯವಿರುವ ನರ್ಸರಿಗೆ ‘ತೆಂಗಿನಕಾಯಿ ನರ್ಸರಿ ಮಾನ್ಯತೆ ಮತ್ತು ರೇಟಿಂಗ್’ ಎಂಬ ಯೋಜನೆಯಡಿಯಲ್ಲಿ ಮಾನ್ಯತೆ ನೀಡಲಾಗುತ್ತಿದೆ.
ತೆಂಗಿನ ಬೆಳೆಗಾರರಿಗೆ ತೆಂಗು ಬೀಜ ತೋಟಗಳನ್ನು ಸ್ಥಾಪಿಸಲು ಪ್ರತಿ ಹೆಕ್ಟೇರ್‌ಗೆ 3.60 ಲಕ್ಷ ರೂ.ಗಳ ಆರ್ಥಿಕ ಸಹಾಯವನ್ನು ನೀಡಲಾಗುವುದು. ತೆಂಗು ಬೀಜ ತೋಟಕ್ಕೆ ಅಗತ್ಯವಿರುವ ಕನಿಷ್ಠ ಪ್ರದೇಶ ಎರಡು ಹೆಕ್ಟೇರ್‌ಗಳಾಗಿದ್ದು, ಗರಿಷ್ಠ ಸಹಾಯವನ್ನು ನಾಲ್ಕು ಹೆಕ್ಟೇರ್ ಪ್ರದೇಶದವರೆಗೆ ವಿಸ್ತರಿಸಲಾಗುತ್ತದೆ.
ಸಮಗ್ರ ವಿಧಾನದ ಮೂಲಕ ತೆಂಗಿನ ಹಿಡುವಳಿದಾರರ ಉತ್ಪಾದಕತೆಯನ್ನು ಸುಧಾರಿಸುವುದು ಇನ್ನೊಂದು ಯೋಜನೆ. ಸಬ್ಸಿಡಿ ಮೊತ್ತವು ಪ್ರತಿ ಹೆಕ್ಟೇರ್‌ಗೆ 42,000 ರೂ.ಗಳಾಗಿದ್ದು, ಪ್ರತಿ ಫಲಾನುಭವಿಗೆ ಎರಡು ಸಮಾನ ವಾರ್ಷಿಕ ಕಂತುಗಳಲ್ಲಿ, ಗರಿಷ್ಠ ಎರಡು ಹೆಕ್ಟೇರ್‌ಗಳಿಗೆ ಸೀಮಿತವಾಗಿರುತ್ತದೆ.
ಈ ಯೋಜನೆಯನ್ನುಕೇರಳ ರಾಜ್ಯ ಸರ್ಕಾರದ ಕೃಷಿ ಇಲಾಖೆಯ ಮೂಲಕ ಅಥವಾ ನೇರವಾಗಿ ತೆಂಗು ಅಭಿವೃದ್ಧಿ ಮಂಡಳಿ ಮೂಲಕ ಕ್ಲಸ್ಟರ್ ಆಧಾರದ ಮೇಲೆ ವಿತರಿಸುತ್ತದೆ. ಕ್ಲಸ್ಟರ್ ಕನಿಷ್ಠ 25 ಹೆಕ್ಟೇರ್ ತೆಂಗಿನ ಮರಗಳನ್ನು ಹೊಂದಿರಬೇಕು ಮತ್ತು ಗರಿಷ್ಠ 200 ಹೆಕ್ಟೇರ್ ಹೊಂದಿರಬೇಕು.
ಸಾಗುವಳಿ ಪ್ರದೇಶವನ್ನು ವಿಸ್ತರಿಸುವ ಯೋಜನೆಯಡಿಯಲ್ಲಿ, ಹೊಸ ಪ್ರದೇಶಗಳಲ್ಲಿ ತೆಂಗಿನ ಸಸಿಗಳನ್ನು ನೆಡಲು ತೆಂಗು ಮಂಡಳಿ ಪ್ರತಿ ಹೆಕ್ಟೇರ್‌ಗೆ ರೂ. 56,000 ವನ್ನು ಎರಡು ಸಮಾನ ವಾರ್ಷಿಕ ಕಂತುಗಳಲ್ಲಿ ಒದಗಿಸುತ್ತದೆ. ಸಬ್ಸಿಡಿಯನ್ನು ಪ್ರತಿ ಫಲಾನುಭವಿಗೆ ಗರಿಷ್ಠ ಎರಡು ಹೆಕ್ಟೇರ್ ಮತ್ತು ಕನಿಷ್ಠ 25 ಸೆಂಟ್ಸ್ ಪ್ರದೇಶಕ್ಕೆ ವಿಸ್ತರಿಸಲಾಗಿದೆ.
ತೆಂಗು ಮಂಡಳಿಯು ‘ಕೊಕೊಮಿತ್ರʼ ಎಂಬ ತೆಂಗಿನಕಾಯಿ ಮರ ಏರುವವರ ಕಾರ್ಯಪಡೆ’ ಎಂಬ ಹೊಸ ಯೋಜನೆಯನ್ನು ಪರಿಚಯಿಸಲಿದೆ. ಇದು ತೋಟಗಳಲ್ಲಿ ಸಕಾಲಿಕ ಕೊಯ್ಲು, ಸಸ್ಯ ರಕ್ಷಣೆ ಮತ್ತು ಸಂಬಂಧಿತ ಕಾರ್ಯಾಚರಣೆಗಳನ್ನು ಒದಗಿಸುವ ಸಾಮರ್ಥ್ಯವಿರುವ, ತರಬೇತಿ ಪಡೆದ ತೆಂಗು ಮರ ಏರುವವರ ರಚನಾತ್ಮಕ, ಕೌಶಲ್ಯಪೂರ್ಣ ಮತ್ತು ಸೇವಾ-ಆಧಾರಿತ ಕಾರ್ಯಪಡೆಯನ್ನು ರಚಿಸುವ ಗುರಿಯನ್ನು ಹೊಂದಿದೆ. ಈ ಯೋಜನೆಯು 2011 ರಲ್ಲಿ ಪ್ರಾರಂಭವಾದ ಯೋಜನೆ ಒಂದು ಮುಂದುವರಿದ ಹೆಜ್ಜೆಯಾಗಿದೆ. ಕೇರಳವೊಂದರಲ್ಲಿಯೇ 33,000 ಕ್ಕೂ ಹೆಚ್ಚು ಜನರಿಗೆ ಈ ಯೋಜನೆಯ ಮೂಲಕ ತರಬೇತಿ ನೀಡಿದೆ.
ಕೇರಳದಲ್ಲಿ ತೆಂಗು ಉತ್ಪಾದಕತೆ ಹೆಚ್ಚಿಸಲು ವರ್ಷಕ್ಕೆ 20 ಕೋಟಿ ರೂ. ಖರ್ಚು ಮಾಡುತ್ತಿದ್ದರೂ, ತೆಂಗಿನಕಾಯಿ ಉತ್ಪಾದನೆಯಲ್ಲಿ ಕುಸಿತ ಕಂಡುಬಂದಿದೆ. ರಾಜ್ಯದಲ್ಲಿರುವ ಸುಮಾರು 38% ತೆಂಗಿನ ತೋಟ ಹಳೆಯದಾಗಿದೆ, ಹಳೆಯ ತೋಟಗಳಾಗಿವೆ. ಕೀಟಗಳು ಮತ್ತು ರೋಗಗಳಿಂದಾಗಿ ಉತ್ಪಾದಕತೆಯ ಮೇಲೆ ಪರಿಣಾಮ ಬೀರಿದೆ. ಆದ್ದರಿಂದ ನಾವು ಕೃಷಿ ಪ್ರದೇಶ ಮತ್ತು ಉತ್ಪಾದಕತೆಯನ್ನು ಹೆಚ್ಚಿಸಲು ನಿರ್ಧರಿಸಿದ್ದೇವೆ ಎಂದು ಇಂಡಿಯನ್ ಎಕ್ಸ್ ಪ್ರೆಸ್‌ಗೆ ನೀಡಿದ ಸಂದರ್ಶನದಲ್ಲಿ ತುಮಕೂರಿನ ಹಿರೇಹಳ್ಳಿಯಲ್ಲಿರುವ ಕೆವಿಕೆ ವಿಜ್ಞಾನಿಯಾಗಿ ಸೇವೆ ಸಲ್ಲಿಸಿ, ಸದ್ಯ ಕೇರಳ ತೆಂಗು ಅಭಿವೃದ್ಧಿ ಮಂಡಳಿಯ ಮುಖ್ಯ ತೆಂಗು ಅಭಿವೃದ್ಧಿ ಅಧಿಕಾರಿ ಬಿ ಹನುಮಂತೇಗೌಡ ಹೇಳಿದ್ದಾರೆ.


