ಅದು ದೇಶವೆಲ್ಲಾ ಲಾಕ್‍ಡೌನ್ ಸರಪಳಿಯಲ್ಲಿ ಬಂಧಿಯಾದ ದಿನಗಳು. ದುಬೈಯಲ್ಲಿ ನೆಲೆಸಿರುವ ಗೆಳತಿ ವಾಟ್ಸಾಪ್‍ಲ್ಲಿ ಮಾತಿಗೆ ಸಿಕ್ಕಿದ್ದಳು. ಅಲ್ಲಿಯ ಸ್ಥಿತಿ ಗತಿ, ಇಲ್ಲಿಯ ವಾತಾವರಣ ಹೀಗೆ ಕುಶಲೋಪಚಾರಗಳ ವಿನಿಮಮಯಗಳ ನಂತರ “ಕೊರೋನಾದಿಂದಾಗಿ ಊರಿಗೆ ಬರಲು ಸಾಧ್ಯವಿಲ್ಲ. ನೀನಂತು ದುಬೈ ಲೈಫ್‍ಗೆ ಗುಡ್ ಬೈ ಹೇಳಿ ಹಳ್ಳಿ ಜೀವನಕ್ಕೆ ಮರಳಿ ಗೆದ್ದುಬಿಟ್ಟೆ” ಅಂದಳು.
ಎಂದೂ ಫಾರಿನ್ ಕನಸು ಕಾಣದವಳಿಗೆ ವಿವಾಹವಾಗಿ ಪತಿಯೊಡನೆ ದುಬೈಯಲ್ಲಿ ನೆಲೆಸುವ ಸುಯೋಗ ಒದಗಿ ಬಂದಿತ್ತು. ಬರೋಬ್ಬರಿ ಆರು ವರ್ಷಗಳ ಕಾಲ ದುಬೈ ಜೀವನ. ಹಳ್ಳಿಯ ಪರಿಶುದ್ಧವಾದ ವಾತಾವರಣದಲ್ಲಿ ಹುಟ್ಟಿ ಬೆಳೆದವಳಾದರೂ ಪತಿಯ ಸಹಕಾರದಿಂದ ಮರುಭೂಮಿಯಲ್ಲಿ ಅರಳಿದ ಹೊಸಜೀವನಕ್ಕೆ ಒಗ್ಗಲು ಕಷ್ಟವೇನು ಆಗಲಿಲ್ಲ. ಯು.ಎ.ಇ.ಯ ಎಲ್ಲಾ ಪ್ರಸಿದ್ಧ ಜಾಗಗಳನ್ನು ಸುತ್ತಾಡಿದ್ದು, ಸ್ನೇಹಿತರೆಲ್ಲಾ ಸೇರಿ ಮಾಡುತ್ತಿದ್ದಗೆಟ್ ಟುಗೆದರ್‍ಗಳ ಸವಿ ಕ್ಷಣಗಳು ಈಗ ಕನಸಿನಂತೆ ಭಾಸವಾಗುತ್ತಿದೆ.
ಪತಿ ಆಫೀಸ್ ಕೆಲಸಕ್ಕೆ ರಿಸೈನ್ ಕೊಟ್ಟಾಗ ಸ್ನೇಹಿತರು, ಕುಟಂಬದ ಆತ್ಮೀಯರದ್ದೆಲ್ಲಾ ಒಂದೇ ಸಜೆಷನ್ “ಯು.ಎ.ಇಯ ಸರಕಾರಿ ಉದ್ಯೋಗವನ್ನು ಬಿಟ್ಟು ಕೃಷಿಗೆ ಹೋಗಿ ಕಷ್ಟ ಪಡುತ್ತೀಯಲ್ಲಾ ಮಾರಾಯಾ..ದಿರ್ಹಾಂನಲ್ಲಿ ಸಂಬಳ ಎಣಿಸುತ್ತಾ ಆರಾಮದಲ್ಲಿರು. ನಮ್ಮಂತೆ ಕೃಷಿಯ ಕಷ್ಟಕ್ಕೆ ಸಿಲುಕಬೇಡ” ಎಂದು. ಆದರೆ ಹೊರ ಪ್ರಪಂಚದ ಅನುಭವಕ್ಕಾಗಿ ದುಡಿದಾಗಿದೆ. ಒಂದು ಸಂಸಾರಕ್ಕೆ ಆರಾಮವಾಗಿ ಜೀವನ ಸಾಗಿಸಲು ಬೇಕಾಗುವಷ್ಟು ಭೂಮಿ ಇದೆ. ನಮ್ಮಇತಿಮಿತಿಗಳಿಗೆ ನಾವೇ ಚೌಕಟ್ಟು ಹಾಕಬೇಕೆನ್ನುವ ಪತಿ. ಕೊನೆಗೂ ಇಬ್ಬರೂ ಗಟ್ಟಿ ನಿರ್ಧಾರ ಮಾಡಿ ಮೊದಲೇ ನಿರ್ಧರಿಸಿದಂತೆ ಮಗಳ ಶಾಲಾ ಜೀವನದ ಪ್ರಾರಂಭದ ಸಮಯದಲ್ಲಿ ಹಳ್ಳಿಗೆ ಬಂದು ಅತ್ತೆ ಮಾವನವರು ಮಾಡುತ್ತಿದ್ದ ಕೃಷಿ ಕಾಯಕಕ್ಕೆ ಕೈ ಜೋಡಿಸಿದೆವು.
ಅಂದ ಹಾಗೆ ಪತಿಯಲ್ಲಿದ್ದಆತ್ಮ ವಿಶ್ವಾಸ ಊರಿಗೆ ಬರುವಾಗ ನನ್ನಲ್ಲಿರಲಿಲ್ಲ. ಕೃಷಿ ಕೆಲಸಗಳು ನಮಗೆ ಒಗ್ಗಬಹುದೇ? ಹವಾಮಾನ ವೈಪರೀತ್ಯ, ಕೂಲಿ ಕಾರ್ಮಿಕರ ಸಮಸ್ಯೆ, ಬೆಳೆದ ಬೆಳೆಗಳಿಗೆ ಕಾಡುಪ್ರಾಣಿಗಳ ಉಪಟಳ ಇವೆಲ್ಲವುದರ ಮಧ್ಯೆ ಕೃಷಿ ಕೈ ಹಿಡೀದೀತೇ ಎನ್ನುವ ಗೊಂದಲ..ಹೀಗೆ ದುಬೈಯಲ್ಲಿ ಸಂಜೆಯ ಎಷ್ಟೋ ವಾಕಿಂಗ್‍ಗಳಲ್ಲಿ ನಮ್ಮ ಮಾತುಕತೆ ಇದರ ಕುರಿತೇ ನಡೆಯುತಿತ್ತು. ಆಗೆಲ್ಲಾ ಪತಿ ಹೇಳುತ್ತಿದ್ದುದು “ನನ್ನಜೊತೆ ಬಾ. ನಾನಿದ್ದೇನೆ ” ಎನ್ನುವ ಧೈರ್ಯ ತುಂಬಿದ ಮಾತು ನನ್ನ ಮನಸ್ಸನ್ನು ಗಟ್ಟಿ ಮಾಡುತ್ತಿತ್ತು.
ಇದಕ್ಕೆ ಕಾರಣವೂ ಇದೆ. ನನ್ನ ತವರು ಮನೆ ಕೃಷಿ ಕುಟುಂಬವೇ. ಅಪ್ಪಅಮ್ಮ ಮಾಡುವ ಕೆಲಸಗಳನ್ನು ನೋಡಿ ಕೃಷಿ ಕೆಲಸಗಳ ದೈಹಿಕ ಶ್ರಮದ ಅರಿವಿತ್ತು. ಅಪರೂಪಕ್ಕೆ ತೋಟದ ಕಡೆ ಹೋಗುತ್ತಿದ್ದೆ ಹೊರತು ಪೂರ್ಣ ಪ್ರಮಾಣದ ಅರಿವಿರಲಿಲ್ಲ. ಆದರೆ ನಮ್ಮ ಮನೆಯಲ್ಲಿ ಹಸುಗಳಿಗೆ ಹುಲ್ಲು ಮಾಡುವುದು, ಅಡಿಕೆ ಹೆಕ್ಕುವುದು, ಕೊಕ್ಕೋ ಕೀಳುವುದು, ಗಿಡಗಳಿಗೆ ಗೊಬ್ಬರ ಹಾಕುವುದು, ಅಡಿಕೆ ಸಿಪ್ಪೆ ತೆಗೆಯುವುದು ಮುಂತಾದ ಕೆಲಸಗಳನ್ನು ಅತ್ತೆ ಮಾವ ಮಾಡುತ್ತಿದ್ದರು. ದೈನಂದಿನ ಕೆಲಸಗಳಿಗೆ ಕೆಲಸಗಾರರನ್ನು ಅವಲಂಬಿಸುವುದು ಬಹು ಕಡಿಮೆ. ಇಂತಹ ದೈಹಿಕ ಶ್ರಮದ ಕೆಲಸಗಳನ್ನು ನಾನು ಮಾಡಲು ಸಾಧ್ಯವೇ ಎನ್ನುವ ಗೊಂದಲ ನನ್ನಲ್ಲಿತ್ತು. ಮನಸ್ಸಿದ್ದರೆ ಎಂತಹ ಕೆಲಸಗಳನ್ನು ಯಾರು ಬೇಕಾದರೂ ಮಾಡಲು ಸಾಧ್ಯ ಎನ್ನುವುದನ್ನು ಈ ನಾಲ್ಕು ವರ್ಷದ ಹಳ್ಳಿ ಜೀವನ ಕಲಿಸಿಕೊಟ್ಟಿದೆ ಎಂದರೆ ತಪ್ಪಲ್ಲ. ನನ್ನ ಮನೆಯ ವಾತಾವರಣ ನನ್ನನ್ನೂ ಕೃಷಿ ಕೆಲಸಗಳಿಗೆ ಕೈ ಜೋಡಿಸುವಂತೆ ಮಾಡಿತು. ಹಳ್ಳಿಯಲ್ಲಿ ಕೆಲಸಗಳಲ್ಲಿ ತೊಡಗಿಸಿಕೊಂಡರೆ ಮುಂಜಾನೆ ಬೇಗ ಏಳುವ ಪರಿಪಾಠ, ದೈಹಿಕವಾಗಿ ಸಿಗುವ ಶ್ರಮದ ಕೆಲಸ ಮಾನಸಿಕವಾಗಿಯೂ ಬ್ಯುಸಿ ಇರುವಂತೆ ನೋಡಿಕೊಳ್ಳುತ್ತದೆ. ಕೆಲಸಗಳಲ್ಲಿ ತೊಡಗಿಸಿಕೊಳ್ಳುವ ಆಸಕ್ತಿ ಇದ್ದರೆ ಪ್ರತಿದಿನದ ಲವಲವಿಕೆಗೆ ಹಳ್ಳಿಯ ಕೃಷಿ ಚಟುವಟಿಕೆ ಬೂಸ್ಟರ್‍ನಂತೆ ಕಾರ್ಯನಿರ್ವಹಿಸುತ್ತದೆ ಎನ್ನುವುದು ಅಕ್ಷರಷಃ ಸತ್ಯ.
-ವಂದನಾರವಿ ಕೆ.ವೈ.ವೇಣೂರು.
ಸಣ್ಣ ರೈತರ ಕೃಷಿಯಲ್ಲಿ ಕಾರ್ಮಿಕ ಕೊರತೆ, ವೆಚ್ಚ ಏರಿಕೆ ಸಮಸ್ಯೆ ನಿವಾರಣೆಗೆ ರೋಬೋಟಿಕ್ಸ್,…
ಕ್ಯಾನ್ಸರ್ ವಿರುದ್ಧ ಹೋರಾಟ ಎಂದರೆ ಕೇವಲ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡುವುದು ಮಾತ್ರವಲ್ಲ. ರೋಗ…
ರಾಜ್ಯದಲ್ಲಿ ಅಕ್ರಮ ವಲಸಿಗರು ಹಾಗೂ ಬಾಂಗ್ಲಾ ಅಕ್ರಮ ವಲಸಿಗರ ಬಗ್ಗೆ ಮಾಹಿತಿಯನ್ನು ವಿಧಾನಪರಿಷತ್…
ಪ್ರಯತ್ನ, ಪರಿಶ್ರಮ, ಛಲ ಇದ್ದರೂ ಸೋಲು ಬೆನ್ನತ್ತಿದರೆ ಕಾರಣವೇನು? ಹಿರಿಯರ ಪಾಪದ ಫಲ,…
ಮುಂಬರುವ ಬೇಸಿಗೆಯಲ್ಲಿ ಕುಡಿಯುವ ನೀರು ಪೂರೈಕೆಗೆ ಯಾವುದೇ ರೀತಿ ತೊಂದರೆಯಾಗದಂತೆ ಅಗತ್ಯ ಕ್ರಮ…
ಶಾಲೆಯ ಹಂತದಲ್ಲಿ ಮಕ್ಕಳಿಗೆ ಕಲಿಸಬೇಕಾದ ಶಿಕ್ಷಣ ಏನು..?. ಈ ಪ್ರಶ್ನೆಗೆ ಹಲವರದು ಹಲವು…