ಮುಂಗಾರು ಮಳೆಯ ಕೊರತೆಯಿಂದ ಜಲಾಶಯಗಳಲ್ಲಿ ನೀರಿನ ಸಂಗ್ರಹ ಕುಸಿದಿರುವ ಹಿನ್ನೆಲೆಯಲ್ಲಿ, ಕೃಷ್ಣಾ ಮೇಲ್ದಂಡೆ ಯೋಜನೆ ವ್ಯಾಪ್ತಿಯ ಜಿಲ್ಲೆಗಳಿಗೆ ಹಿಂಗಾರು ಬೆಳೆಗಳಿಗಾಗಿ ಕಾಲುವೆಗಳ ಮೂಲಕ ನೀರು ಹರಿಸದಿರಲು ನೀರಾವರಿ ಸಲಹಾ ಸಮಿತಿ ಮಹತ್ವದ ನಿರ್ಧಾರ ಕೈಗೊಂಡಿದೆ. ಇದರಿಂದ ಬಾಗಲಕೋಟೆ, ವಿಜಯಪುರ, ರಾಯಚೂರು, ಯಾದಗಿರಿ ಮತ್ತು ಕಲಬುರಗಿ ಜಿಲ್ಲೆಗಳ ರೈತರಿಗೆ ಹಿಂಗಾರು ಬೆಳೆಗಳ ನೀರಾವರಿಗೆ ಸಂಕಷ್ಟ ಎದುರಾಗುವ ಸಾಧ್ಯತೆಯಿದೆ.
ಕೃಷ್ಣಾ ಮೇಲ್ದಂಡೆ ಯೋಜನೆಯ ಮುಂಗಾರು ಹಾಗೂ ಹಿಂಗಾರು ಹಂಗಾಮಿನ ನೀರಾವರಿ ಸಲಹಾ ಸಮಿತಿ ಸಭೆಯು ವಿಕಾಸಸೌಧದಲ್ಲಿ ಸಮಿತಿ ಅಧ್ಯಕ್ಷ ಹಾಗೂ ಸಚಿವ ವಿಜಯಾನಂದ ಕಾಶಪ್ಪನವರ್ ಅವರ ಅಧ್ಯಕ್ಷತೆಯಲ್ಲಿ ನಡೆಯಿತು. ಸಭೆಯಲ್ಲಿ ಜಲಾಶಯಗಳಲ್ಲಿನ ನೀರಿನ ಲಭ್ಯತೆ, ಕುಡಿಯುವ ನೀರಿನ ಅಗತ್ಯ ಮತ್ತು ಹಿಂಗಾರು ಹಂಗಾಮಿನ ನೀರಾವರಿ ಬೇಡಿಕೆ ಕುರಿತು ಚರ್ಚಿಸಲಾಯಿತು.
ನೀರಾವರಿಗೆ ಲಭ್ಯವಿರುವುದು 21 ಟಿಎಂಸಿ ಅಡಿ ಮಾತ್ರ : ಆಲಮಟ್ಟಿ ಮತ್ತು ನಾರಾಯಣಪುರ ಜಲಾಶಯಗಳಲ್ಲಿ ಒಟ್ಟು 85.61 ಟಿಎಂಸಿ ಅಡಿ ನೀರು ಸಂಗ್ರಹವಿದೆ. ಇದರಲ್ಲಿ ಅನಿವಾರ್ಯ ಬಳಕೆಗಳಿಗಾಗಿ 47.29 ಟಿಎಂಸಿ ಅಡಿ ಹಾಗೂ ಹೆಚ್ಚುವರಿ ಕುಡಿಯುವ ನೀರು, ಆವೀಕರಣ ಮತ್ತು ಇತರ ಅಗತ್ಯಗಳಿಗಾಗಿ 11.38 ಟಿಎಂಸಿ ಅಡಿ ನೀರನ್ನು ಮೀಸಲಿಡಬೇಕಿದೆ.
ಈ ಲೆಕ್ಕಾಚಾರದ ಪ್ರಕಾರ, ನೀರಾವರಿಗೆ ಲಭ್ಯವಾಗಬಹುದಾದ ನೀರಿನ ಪ್ರಮಾಣ ಸುಮಾರು 21 ಟಿಎಂಸಿ ಅಡಿ ಮಾತ್ರವಾಗಿದೆ. ಆದರೆ ಹಿಂಗಾರು ಹಂಗಾಮಿನ ಬೆಳೆಗಳಿಗೆ ಸುಮಾರು 80 ಟಿಎಂಸಿ ಅಡಿ ನೀರಿನ ಅಗತ್ಯವಿದೆ. ಹೀಗಾಗಿ, ಲಭ್ಯವಿರುವ ನೀರು ಮತ್ತು ಬೇಡಿಕೆಯ ನಡುವೆ ಭಾರಿ ಅಂತರವಿರುವುದರಿಂದ ಸದ್ಯಕ್ಕೆ ಕಾಲುವೆಗಳ ಮೂಲಕ ನೀರು ಹರಿಸದಿರಲು ನಿರ್ಧರಿಸಲಾಗಿದೆ.
ಐದು ಜಿಲ್ಲೆಗಳ ರೈತರಿಗೆ ಸಂಕಷ್ಟ : ಈ ನಿರ್ಧಾರದಿಂದ ಬಾಗಲಕೋಟೆ, ವಿಜಯಪುರ, ರಾಯಚೂರು, ಯಾದಗಿರಿ ಮತ್ತು ಕಲಬುರಗಿ ಜಿಲ್ಲೆಗಳ ಕೃಷಿ ಚಟುವಟಿಕೆಗಳ ಮೇಲೆ ಪರಿಣಾಮ ಉಂಟಾಗುವ ಸಾಧ್ಯತೆಯಿದೆ. ಕಾಲುವೆ ನೀರನ್ನು ಅವಲಂಬಿಸಿ ಹಿಂಗಾರು ಬೆಳೆ ಬೆಳೆಯಲು ಸಿದ್ಧತೆ ನಡೆಸಿರುವ ರೈತರು ಪರ್ಯಾಯ ನೀರಿನ ಮೂಲಗಳು ಹಾಗೂ ಬೆಳೆ ನಿರ್ವಹಣೆಯ ಬಗ್ಗೆ ಮುನ್ನೆಚ್ಚರಿಕೆ ವಹಿಸಬೇಕಾದ ಪರಿಸ್ಥಿತಿ ಎದುರಾಗಿದೆ.
ಆದರೆ ಮುಂದಿನ ದಿನಗಳಲ್ಲಿ ಹಿಂಗಾರು ಮಳೆಯಾಗಿ ಜಲಾಶಯಗಳಿಗೆ ಒಳಹರಿವು ಹೆಚ್ಚಾದರೆ ಪರಿಸ್ಥಿತಿಯನ್ನು ಮರುಪರಿಶೀಲಿಸಿ, ಕಾಲುವೆಗಳಿಗೆ ನೀರು ಹರಿಸುವ ಕುರಿತು ನಿರ್ಧಾರ ಕೈಗೊಳ್ಳಲಾಗುವುದು ಎಂದು ಸಭೆಯಲ್ಲಿ ತಿಳಿಸಲಾಗಿದೆ.
ಕುಡಿಯುವ ನೀರು ಮತ್ತು ಜಾನುವಾರುಗಳಿಗೆ ಆದ್ಯತೆ : ಜಲಾಶಯಗಳಲ್ಲಿ ನೀರಿನ ಕೊರತೆ ಇರುವುದರಿಂದ ಕುಡಿಯುವ ನೀರು, ಜಾನುವಾರುಗಳ ಅಗತ್ಯ ಹಾಗೂ ಇತರ ಅನಿವಾರ್ಯ ಬಳಕೆಗಳಿಗೆ ಆದ್ಯತೆ ನೀಡಲು ತೀರ್ಮಾನಿಸಲಾಗಿದೆ. ನೀರಿನ ಲಭ್ಯತೆಯನ್ನು ಗಮನದಲ್ಲಿಟ್ಟುಕೊಂಡು ರೈತರು ಸರ್ಕಾರದ ನಿರ್ಧಾರಕ್ಕೆ ಸಹಕರಿಸುವಂತೆ ಮನವಿ ಮಾಡಲಾಗಿದೆ.
ಸಭೆಯಲ್ಲಿ ಸಚಿವರಾದ ಎಂ.ಬಿ. ಪಾಟೀಲ್, ಅಜಯ್ ಸಿಂಗ್, ಡಾ. ಶರಣಪ್ರಕಾಶ್ ಪಾಟೀಲ್, ಮಾಜಿ ಸಚಿವ ಶರಣ ಬಸಪ್ಪ ದರ್ಶನಪುರ, ಶಾಸಕರಾದ ಉಮೇಶ್ ಮೇಟಿ, ಜೆ.ಟಿ. ಪಾಟೀಲ್, ಜಗದೀಶ್ ಗುಡಗುಂಟಿ ಸೇರಿದಂತೆ ಜನಪ್ರತಿನಿಧಿಗಳು ಹಾಗೂ ನಿಗಮದ ಅಧಿಕಾರಿಗಳು ಭಾಗವಹಿಸಿದ್ದರು.
The Krishna Upper Krishna Project Irrigation Advisory Committee has decided not to release canal water for rabi crops in the project command area due to reduced reservoir storage following deficient monsoon rainfall. The Almatti and Narayanpur reservoirs together hold 85.61 TMC of water, but only about 21 TMC is estimated to be available for irrigation after essential allocations. Rabi cultivation requires approximately 80 TMC. The decision affects farmers in Bagalkot, Vijayapura, Raichur, Yadgir and Kalaburagi districts. The committee may reconsider the decision if subsequent rabi rainfall increases reservoir inflows. Drinking water, livestock needs and other essential uses will receive priority.
ಉತ್ತರ ಭಾರತದಿಂದ ಶುಷ್ಕ ಗಾಳಿ ಬೀಸುವ ಸಾಧ್ಯತೆ ಹಾಗೂ ಬಂಗಾಳಕೊಲ್ಲಿಯಲ್ಲಿ ಉಂಟಾಗಬಹುದಾದ ವಾಯುಮಂಡಲದ…
ಕರ್ನಾಟಕ ಸರ್ಕಾರವು ಆರ್ಟ್ ಪಾರ್ಕ್ಗೆ ಈವರೆಗೆ ₹62 ಕೋಟಿಗೂ ಅಧಿಕ ನೆರವು ನೀಡಿದ್ದು,…
ಪಡಿತರ ಚೀಟಿ ಫಲಾನುಭವಿಗಳ ಇ-ಕೆವೈಸಿ ಪೂರ್ಣಗೊಳಿಸುವ ಗಡುವನ್ನು ನವೆಂಬರ್ 10ರವರೆಗೆ ವಿಸ್ತರಿಸಲಾಗಿದೆ. ‘ಅನ್ನ…
ಮುಂದಿನ ಜೂನ್ನಿಂದ ರಾಜ್ಯದಲ್ಲಿ 1,225 ಕರ್ನಾಟಕ ಪಬ್ಲಿಕ್ ಶಾಲೆಗಳನ್ನು ಆರಂಭಿಸಿ, ಅಲ್ಲಿಗೆ ತೆರಳುವ…
ಕರಾವಳಿ ಮತ್ತು ಮಲೆನಾಡು ಜಿಲ್ಲೆಗಳಲ್ಲಿ ಅಕ್ಟೋಬರ್ 25ರವರೆಗೆ ಮಳೆಯ ಸಾಧ್ಯತೆ ಮುಂದುವರಿದಿದ್ದು, ಅಕ್ಟೋಬರ್…
ಮಹಾನವಮಿಯ ನಿಜವಾದ ಸಂದೇಶವೆಂದರೆ ರಾವಣ ಮತ್ತು ಮಹಿಷಾಸುರರ ಸಂಹಾರವನ್ನು ಸ್ಮರಿಸುವುದಷ್ಟೇ ಅಲ್ಲ, ನಮ್ಮೊಳಗಿನ…