ಈ ಸೇವೆಗೆ ಭಗವಂತ ಒಲಿಯುವ…!. ಹೀಗೆಂದು ಉದ್ಗಾರ ತೆಗೆದರು…!. ಅನೇಕರು ಸೇವಾರ್ಥಿಗೆ ನಮಿಸಿದರು….! ಇನ್ನೂ ಕೆಲವರು ಹುಬ್ಬೇರಿಸಿದರು…!. ಏಕೆಂದರೆ ಈ ಸೇವೆಯೇ ಹಾಗೆ…!. ಕುಕ್ಕೆ ಸುಬ್ರಹ್ಮಣ್ಯದಲ್ಲಿ ಚಂಪಾ ಷಷ್ಠಿಯ ಸಮಯದಲ್ಲಿ ನಡೆಯುವ ಬೀದಿಮಡೆಸ್ನಾನ. ಕುಮಾರಧಾರಾ ನದಿಯಲ್ಲಿ ಸ್ನಾನ ಮಾಡಿ ರಸ್ತೆಯಲ್ಲಿ ಉರುಳುತ್ತಾ ದೇವಸ್ಥಾನಕ್ಕೆ ತೆರಳುವುದು ಈ ಸೇವೆಯ ಮಹತ್ವ. 1992 ರಿಂದಲೂ ಉರುಳು ಸೇವೆ ಮಾಡುತ್ತಿರುವ ಸಿದ್ಧಿವಿನಾಯಕಭಟ್ ಚೂಂತಾರು ಅವರ ಅನುಭವ ಅನೇಕ ಭಕ್ತರಿಗೆ ರೋಮಾಂಚನವಾಗುತ್ತದೆ.
ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನವು ನಾಡಿನ ಶ್ರೀಮಂತ ದೇವಸ್ಥಾನ. ಅನೇಕ ಸೇವೆಗಳು ಭಗವಂತನಿಗೆ ನಡೆಯುತ್ತಿದೆ. ಈ ಸೇವೆ ವರ್ಷದಲ್ಲಿ ಕೆಲವೇ ದಿನ ಮಾತ್ರಾ ನಡೆಯುತ್ತದೆ. ಅದು ಬೀದಿ ಮಡೆಸ್ನಾನ. ದೇವಸ್ಥಾನಕ್ಕೆ ಯಾವುದೇ ಶುಲ್ಕ ನೀಡದೆ ಮಾಡುವ ಈ ಸೇವೆಯಲ್ಲಿ ಮನೋಬಲದ ಪರೀಕ್ಷೆ, ದೇಹ ಪರೀಕ್ಷೆಯನ್ನೂ ಭಗವಂತ ಮಾಡುವ….! ಏಕೆಂದರೆ ಸುಮಾರು ಎರಡು ಕಿಮೀ ದೂರ ರಸ್ತೆಯಲ್ಲಿ ಉರುಳುತ್ತಾ ಸಾಗುವುದು ಎಂದರೆ ಅದು ದೇಹದ ಪರೀಕ್ಷೆ ಹಾಗೂ ಮನಸ್ಸಿನ ಪರೀಕ್ಷೆಯೇ ಆಗಿದೆ. ಇಂತಹ ಪ್ರತೀ ಸೇವೆ ವರ್ಷ ಸುಮಾರು 200 ರಿಂದ 300 ಜನರು ಮಾಡುತ್ತಾರೆ.
ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವರಿಗೆ ಸಲ್ಲಿಸುವ ಈ ವಿಶಿಷ್ಟ ಸೇವೆ ಬೀದಿಮಡೆಸ್ನಾನ ಲಕ್ಷ ದೀಪೋತ್ಸವದ ರಥೋತ್ಸವದ ಬಳಿಕ ಆರಂಭಿಸಿ, ಚಂಪಾಷಷ್ಠಿ ಮಹಾರಥೋತ್ಸವದ ತನಕ ನೆರವೇರಿಸುತ್ತಾರೆ. ಭಕ್ತರು ಹಿಂದೆ ತಾವು ಪ್ರಾರ್ಥಿಸಿಕೊಂಡ ಇಷ್ಟಾರ್ಥ ನೆರವೇರಿದ ಬಳಿಕ ದೇವರ ಎದುರು ಪ್ರಾರ್ಥನೆ ಸಲ್ಲಿಸಿ ಅರ್ಚಕರಿಂದ ಪ್ರಸಾದವನ್ನು ಸ್ವೀಕರಿಸಿ ನಂತರ ಕುಮಾರಧಾರ ಸ್ನಾನ ಘಟ್ಟಕ್ಕೆ ತೆರಳಿ ನದಿಯಲ್ಲಿ ಮಿಂದು ಅಲ್ಲಿಂದ ಉರುಳು ಸೇವೆ ಪ್ರಾರಂಭ ಮಾಡುತ್ತಾರೆ. ರಸ್ತೆಯಲ್ಲಿ ಉರುಳುತ್ತಾ ರಥಬೀದಿ ತಲುಪಿ ದೇವಸ್ಥಾನದ ಒಳಾಂಗಣಕ್ಕೆ ಆಗಮಿಸಿ ದೇವಳಕ್ಕೆ ಪ್ರದಕ್ಷಿಣೆ ಹಾಕಿ ಮೂಡು ಬಾಗಿಲಿನಲ್ಲಿ ಹೊರ ಹೋಗಿ ಎದುರಿನ ದರ್ಪಣ ತೀರ್ಥ ನದಿಗೆ ಬಿದ್ದು ತಮ್ಮ ಉರುಳುಸೇವೆಯನ್ನು ಸಮಾಪ್ತಿ ಮಾಡುತ್ತಾರೆ. ದರ್ಪಣ ತೀರ್ಥದಲ್ಲಿ ಸ್ನಾನದ ನಂತರ ಶ್ರೀ ದೇವರ ದರ್ಶನ ಮಾಡಿ ಪ್ರಸಾದ ಸ್ವೀಕರಿಸುತ್ತಾರೆ.
ಈ ಸೇವೆಯನ್ನು ಭಕ್ತರು ಸ್ವಯಂ ಸ್ಪೂರ್ತಿಯಿಂದ ಮತ್ತು ಭಕ್ತಿಯಿಂದ ನೆರವೇರಿಸುತ್ತಾರೆ. ಈ ಸೇವೆಗೆ ಯಾವುದೇ ಶುಲ್ಕವಿರುವುದಿಲ್ಲ. ಸುಮಾರು 2 ಕಿಲೋಮೀಟರಿನಷ್ಟಿರುವ ದೂರವನ್ನು ಉರುಳು ಸೇವೆ ಮಾಡುವ ಭಕ್ತರು ಅವರವರ ಸಾಮರ್ಥ್ಯದ ಅನುಗುಣವಾಗಿ 1 ರಿಂದ 5 ಗಂಟೆ ವರೆಗೂ ತೆಗೆದುಕೊಳ್ಳುತ್ತಾರೆ.
#ಕುಕ್ಕೆಸುಬ್ರಹ್ಮಣ್ಯ ದಲ್ಲಿ ನಡೆಯುವ #ಬೀದಿಮಡೆಸ್ನಾನ ದ ಸೇವೆ
Advertisement– The Rural Mirror (@ruralmirror) 8 Dec 2021
ಉರುಳು ಸೇವೆ ಮಾಡುವವರು ವ್ರತವನ್ನು ಕೈಗೊಂಡಿರುತ್ತಾರೆ. ಕುಕ್ಕೆ ಸುಬ್ರಹ್ಮಣ್ಯ ದೇವರ ಆರಾಧನೆಯ ಅತೀ ದೊಡ್ಡ ಹಾಗೂ ಕಠಿಣ ಸೇವೆ ಇದಾಗಿದೆ. ಪುರುಷ, ಮಹಿಳೆ, ಮಕ್ಕಳು ಹಾಗೂ ವೃದ್ದರೂ ಈ ಸೇವೆಯನ್ನು ಮಾಡುತ್ತಾರೆ. ಹೀಗೆ ಉರುಳು ಸೇವೆ ಮಾಡುವವರ ಜೊತೆಯಲ್ಲಿ ದಾಸಯ್ಯರು ತಮ್ಮ ಶಂಖ ಜಾಗಟೆಯೊಂದಿಗೆ ಗೋವಿಂದಾ……. ಗೋವಿಂದಾ……. ಕೂಗುತ್ತಾ ದೇವರ ಪರಾಕುಗಳನ್ನು ಹೇಳುತ್ತಾ ಸಾಗುತ್ತಾರೆ. ಹೆಚ್ಚಾಗಿ ಮುಂಜಾನೆ ಮತ್ತು ಸಂಜೆಯ ಸಮಯದಲ್ಲಿ ಭಕ್ತರು ಈ ಸೇವೆಯನ್ನು ಆರಂಭಿಸುತ್ತಾರೆ. ಜಾತಿ, ಮತ, ಲಿಂಗ, ವರ್ಗ, ಪ್ರಾಯ, ಭೇದ ಮರೆತು ದೇವರಿಗೆ ಸಂಪೂರ್ಣ ಶರಣಾಗುವ ಈ ಸೇವೆ ಮಹತ್ವ ಪಡೆದಿದೆ.
ದೇವಸ್ಥಾನದ ಆಡಳಿತವು ಇಂತಹ ಸೇವಾರ್ಥಿಗಳಿಗೆ ಅನುಕೂಲವಾಗುವಂತೆ ಕುಮಾರಧಾರಾದಿಂದ ಸುಬ್ರಹ್ಮಣ್ಯದವರೆಗಿನ ರಸ್ತೆಯಲ್ಲಿ ಉತ್ತಮ ವ್ಯವಸ್ಥೆ ಮಾಡುತ್ತದೆ. ಈ ಬಾರಿ ಚತುಷ್ಟಥ ರಸ್ತೆಯ ಒಂದು ಬದಿಯನ್ನು ಉರುಳು ಸೇವೆ ಮಾಡುವವರಿಗಾಗಿಯೇ ವ್ಯವಸ್ಥೆ ಮಾಡಿದೆ. ಸ್ವಯಂಸೇವಕರು, ಸಂಘಸಂಸ್ಥೆಗಳು ಹಾಗೂ ದೇವಸ್ಥಾನದ ಆಡಳಿತ ಸೇರಿ ಇಡೀ ರಸ್ತೆ ಸ್ವಚ್ಛತೆಯ ಕಾರ್ಯವನ್ನೂ ಮಾಡಿದೆ. ಸಂಜೆಯ ವೇಳೆ ರಸ್ತೆಗೆ ನೀರು ಸುರಿಯುವ ಮೂಲಕ ರಸ್ತೆ ತೊಳೆದು ಸ್ವಚ್ಛ ಮಾಡಲಾಗಿದೆ.
ಅನೇಕ ವರ್ಷಗಳಿಂದ ನಡೆಯುತ್ತಿರುವ ಈ ಉರುಳು ಸೇವೆಯಲ್ಲಿ ಸಾಕಷ್ಟು ಭಕ್ತರು ತೊಡಗಿಸಿಕೊಂಡಿದ್ದಾರೆ. ಅದರಲ್ಲಿ ಚೊಕ್ಕಾಡಿ ಬಳಿಯ ಶೇಣಿಯ ಸಿದ್ಧಿವಿನಾಯಕ ಭಟ್ ಚೂಂತಾರು ಅವರು 1992 ರಿಂದ ಈ ಉರುಳು ಸೇವೆ ಮಾಡುತ್ತಿದ್ದಾರೆ. ತಮ್ಮ ಸಂಕಲ್ಪ ಈಡೇರಿಕೆಗಾಗಿ ಆರಂಭದಲ್ಲಿ ಸೇವೆ ಮಾಡಿದ ಅವರು ಆ ಬಳಿಕ ಸೇವಾ ನೆಲೆಯಲ್ಲಿ ಈ ಸೇವೆ ಮಾಡುತ್ತಿದ್ದಾರೆ. ನಾಡಿನ ಸಮಸ್ತರಿಗೂ ಒಳಿತಾಗಲಿ ,” ಲೋಕಾ ಸಮಸ್ತಾ ಸುಖೀನೋ ಭವಂತು…” ಎನ್ನುವುದೇ ಈಗಿನ ಸಂಕಲ್ಪ ಎನ್ನುವ ಸಿದ್ಧಿವಿನಾಯಕ ಭಟ್ ಅವರು ಅನುಭವ ಕೇಳಿದರೆ ಮೈ ರೋಮಾಂಚನವಾಗುತ್ತದೆ ಎಂದು ಹಲವು ಭಕ್ತರು ಹೇಳುತ್ತಾರೆ.
ಕುಮರಧಾರಾದಿಂದ ಉರುಳು ಸೇವೆ ಆರಂಭವಾದ ಬಳಿಕ ಸುಮಾರು ಒಂದು ಗಂಟೆಯಲ್ಲಿ ದೇವಸ್ಥಾನವನ್ನು ತಲಪುವ ಇವರು ಕಳೆದ ಹಲವಾರು ವರ್ಷಗಳಿಂದ ನಿರಂತರವಾಗಿ ಈ ಸೇವೆ ಮಾಡುತ್ತಿದ್ದಾರೆ.
ನೂರಾರು ಕೋಟಿ ರೂಪಾಯಿ ಖರ್ಚು ಮಾಡಿ ಮಲೆನಾಡಿನ ಗ್ರಾಮೀಣ ಭಾಗಕ್ಕೂ ಶುದ್ಧವಾಗಿರುವ ಕುಡಿಯುವ…
ದೇಶಾದ್ಯಂತ ನಗರೀಕರಣ ಬೆಳವಣಿಗೆಯಾದಂತೆ ಸಮುದಾಯದ ಸ್ಥಳಗಳು ಕಣ್ಮರೆಯಾಗಿವೆ. ಕರಾವಳಿ ನಗರದಾದ್ಯಂತ ಸುಮಾರು 250…
ರಾಜ್ಯದ ಕಾಡಂಚಿನ ಪ್ರದೇಶದಲ್ಲಿ ಮಾನವ ಮತ್ತು ವನ್ಯಜೀವಿ ಸಂಘರ್ಷ ತಡೆಯುವ ನಿಟ್ಟಿನಲ್ಲಿ ಸರ್ಕಾರ…
ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ನಾಳೆ ಮಂಡಿಸಲಿರುವ ಕೇಂದ್ರ ಬಜೆಟ್ 2025…
ಬೆಂಗಳೂರಿನ ಯಲಹಂಕ ತಾಲ್ಲೂಕಿನ ಒಟ್ಟು 5678 ಎಕರೆ ಗುಂಟೆ ಪ್ರದೇಶವನ್ನು ಪರಿಸರ ಸಂರಕ್ಷಣೆ…
ಬೆಳೆಗಾರರಿಗೆ ತರಬೇತಿ ನೀಡಲು ತರಬೇತಿ ಕೇಂದ್ರ ಸ್ಥಾಪನೆ ಮಾಡಲಾಗುವುದು ಎಂದು ಕರ್ನಾಟಕ ಕೊಳಚೆ…