ಕುಂಭಮೇಳ | ಜಯಜಯ ಗಂಗೇ….. ಜಯಜಯ ಗಂಗೇ

March 8, 2025
6:03 AM
ನಾವೂ ದೋಣಿಯಿಂದ ಕುಂಭಸ್ನಾನದ ಪುಣ್ಯ ಸ್ಥಳಕ್ಕೆ ಇಳಿದು, ಜಯಜಯ ಗಂಗೇ..............ಜಯಜಯ ಗಂಗೇ .........ಜೈ ಮಹಾದೇವ ಎಂದೆವು...

ಎರಡು ಕಿಮೀಗಳಷ್ಟು ದೂರ ಯಮುನೆಯ ತಟದಲ್ಲೇ ನಡೆದ ನಾವು, ಸಂಗಮ ಕ್ಷೇತ್ರಕ್ಕೆ ಭಕ್ತಜನರನ್ನ ಕರೆದೊಯ್ಯುತಿದ್ದ ನಾವೆಗಳನ್ನು ಕಂಡೆವು ಮತ್ತು ನಾವೆಗಳ ಮೂಲಕ ಸಂಗಮದ ಮಂಗಲ ಪ್ರದೇಶಕ್ಕೆ ಹೋಗುವುದೆಂದು ನಿಶ್ಚಯಿಸಿ ದೋಣಿಗಾರರಲ್ಲಿ ದರದ ಬಗ್ಗೆ ವಿಚಾರಿಸಿದಾಗ ಒಬ್ಬೊಬ್ಬ ಒಂದೊಂದು, ದುಪ್ಪಟ್ಟು ದರ , ಹೇಳಿದಾಗ ಮತ್ತೂ ಮುಂದಕ್ಕೆ ನಡೆದು ವಿಚಾರಿಸಿದಾಗ ತಲಾ ಒಂದು ಸಾವಿರದಂತೆ ಸಂಗಮ ಪ್ರದೇಶಕ್ಕೆ ಕರೆದೊಯ್ದು, ಕರೆತರುವ ಮಾತಿನಂತೆ ಒಪ್ಪಿ, ನಾವೆಯನ್ನು ಏರಿ, ಸೂಕ್ತ ರಕ್ಷಕ ಕೋಟುಗಳನ್ನು ಧರಿಸಿ, ದೋಣಿಯ ಎರಡೂ ಬದಿಗಳಲ್ಲಿ ಸಮಾನವಾಗಿ ಹಂಚಿ ಕುಳಿತುಕೊಂಡೆವು ಮತ್ತು ದೋಣಿಯಲ್ಲಿ ಹತ್ತು ಜನರಾದ ಕೂಡಲೇ ದೋಣಿಗಾರರು ಚುಕ್ಕಾಣಿ ಹಲಗೆ ಮೂಲಕ ದೋಣಿಗೆ ಚಾಲನೆ ಕೊಟ್ಟರು ತಟದಿಂದ ಯಮುನೆಯ ಮಧ್ಯ ಬಾಗಕ್ಕೆ ಸಾಗಿದ ದೋಣಿ ಅಲ್ಲಿಂದ ಸಂಗಮದತ್ತ ನಿಧಾನವಾಗಿ ಚಲಿಸುತಿತ್ತು.………ಮುಂದೆ ಓದಿ……..

Advertisement

ಯಮುನೆಗೆ ಗಂಗೆಯನ್ನು ಸಂಗಮಿಸುವ ಆತುರ,ಘನಗಂಭೀರಳಾಗಿ ಹರಿದೇ ಹರಿಯುತಿದ್ದಳು…ತನ್ನೊಡನೆ ನಮ್ಮನ್ನೂ ಕರೆದೊಯ್ಯುತಿದ್ದಳು. ಸಾವಿರ ಸಾವಿರ ಸಂಖ್ಯೆಯಲ್ಲಿ ಶ್ವೇತವರ್ಣದ ಕೊಕ್ಕರೆಗಳು,ಜಲಪಕ್ಷಿಗಳು ದೇವಲೋಕದಿಂದ ಬಂದಿಳಿದ ದೇವ ಕಿನ್ನರರೋ ಎಂಬಂತೆ ಈಜಾಟ, ಹಾರಾಟ ಮಾಡುತಿದ್ದವು, ಲಕ್ಷೋಪ ಲಕ್ಷ ಜನ, ಜೀವಚರಗಳನ್ನು ತನ್ನಲ್ಲಿ ಅಡಕಗೊಳಿಸಿ ಯಮುನೆ ಓಡೋಡಿ ಗಂಗೆಯತ್ತ ಸಾಗುತ್ತಿರಬೇಕಾದರೆ, ಆಕಾಶದೆತ್ತರದಲ್ಲಿ ಕಣ್ಗಾವಲು ಮಾಡುತಿದ್ದ ಹೆಲಿಕಾಪ್ಟರ್ ಗಳು, ಡ್ರೋನ್ ಗಳು ಹಾರಾಡುತಿದ್ದವು, ಯಾಂತ್ರೀಕೃತ ಬೋಟ್ ಗಳಲ್ಲಿ ಪೋಲೀಸರು ಎಚ್ಚರಿಕೆ ನೀಡುತ್ತಾ, ಗಂಭೀರವಾಗಿ, ಯಾವುದೇ ತೊಂದರೆ ಘಟನೆ ನಡೆಯದಂತೆ ಕಣ್ಗಾವಲು, ಮಾಡುತಿದ್ದರು….

ಅಂತೂ ಸುಮಾರು ಒಂದುವರೆ ಕಿಮೀ ದೋಣಿ ಸಂಚಾರ ಮಾಡಿ ನಾವೈವರು ಸಂಗಮದ ಪುಣ್ಯ ತಾಣಕ್ಕೆ ತಲುಪಿದ್ದೆವು. ಅಲ್ಲಿ ಮೊದಲೇ , ತಜ್ಞರ ಮೂಲಕ ಆಯ್ಕೆ ಮಾಡಿದ ವಿಸ್ತಾರವಾದ ಪ್ರದೇಶದಲ್ಲಿ ಹಲವಾರು ದೊಡ್ಡ ದೊಡ್ಡ ದೋಣಿಗಳನ್ನು ಒಂದಕ್ಕೊಂದು ಬಿಗಿದು, ನದಿಯಾಳದಲ್ಲಿ ಭದ್ರವಾಗಿಸಿದ್ದ ಕಂಬಗಳಿಗೆ ಬಂದಿಸಿ, ಕುಂಬ ಸ್ನಾನಕ್ಕಾಗಿ ಜನರ ಕರೆ ತರುವ ಸಣ್ಣ ದೋಣಿಗಳನ್ನು ನಿಲ್ಲಿಸಿಕೊಳ್ಳುವ ವ್ಯವಸ್ಥೆ ಮಾಡಿದ್ದರು. ಅಂತೆಯೇ ನಮ್ಮ ದೋಣಿಯೂ ಆ ನೆಲೆಗೆ ತಲುಪಿದಾಗ, ದೋಣಿಗಾರರು‌ ನಾವು ಇದ್ದ ದೋಣಿಯನ್ನು ‌ಎಳೆದೆಳೆದು, ಕುಂಭ ಸ್ನಾನದ ಸ್ಥಾನದಲ್ಲಿ‌ ಬಂಧಿಯಾಗಿಸಿ, ನಮ್ಮನ್ನು ಕುಂಭಸ್ನಾಕ್ಕೆ ಜಾಗರೂಕತೆಯಿಂದ ಹೋಗಿರೆಂದು ಸೂಚಿಸಿದರು.ಯಮುನೆಯ ಜಲಧಿಯಲ್ಲಿ ಓಲಾಡುತಿದ್ದ ದೊಣಿಗಳಿಂದ ಕೆಳಗಿಳಿತುವ ಆತುರ,ತವಕದಲ್ಲಿ ದೋಣಿಯಿಂದ ಎಲ್ಲರೂ ಎದ್ದಾಗ ದೋಣಿ ಸಹಜವಾಗಿ ಅಸಮತೋಲನ ಗೊಂಡು ಓಲಾಡುತಿತ್ತು, ನಮ್ಮ ಕಣ್ಣೆದುರೇ ಒಬ್ಬ ತಾಯಿ ಓಲಾಡುತಿದ್ದ ತನ್ನ ದೋಣಿಯಲ್ಲಿ ದೊಪ್ಪೆಂದು ಬಿದ್ದಾಗ ನಮ್ಮೆಲ್ಲರ ಎದೆ ಒಂದು ಕ್ಷಣ ನಿಂತೇಹೋಗಿತ್ತು, ಕಣ್ಣುಕತ್ತಲೆ ಹೋದ ಆ ತಾಯಿ ಕೊನೆಗೂ ಸಾವರಿಸಿ ಎದ್ದಾಗ ಜಯಜಯ ಗಂಗೇ, ಜಯ ಮಹಾದೇವಾ ಎಂಬ ಘೋಷ ಮುಗಿಲು ಮುಟ್ಟಿತ್ತು.

ನಾವೂ ದೋಣಿಯಿಂದ ಕುಂಭಸ್ನಾನದ ಪುಣ್ಯ ಸ್ಥಳಕ್ಕೆ ಇಳಿದು
ಜಯಜಯ ಗಂಗೇ
ಜಯಜಯ ಗಂಗೇ
ಜೈ ಮಹಾದೇವ
ಎನ್ನುತ್ತಾ , ನಮ್ಮ ಪುರೋಹಿರಲ್ಲಿ ಕೇಳಿ ತಿಳಿದುಕೊಂಡಂತೆ ಗಂಗಾ ಯಮುನಾ ಸರಸ್ವತಿಯರ ಸಂಗಮ ಜಲಧಿಯಲ್ಲಿ ಮೂರು ಬಾರಿ ಮುಳುಗು ಹಾಕಿ, ಅಸ್ತಮಿಸುತಿದ್ದ ಸೂರ್ಯ ದೇವನನ್ನು ಮನದಲ್ಲಿ ಪ್ರಾರ್ಥನೆ ಮಾಡುತ್ತಾ ಅರ್ಘ್ಯ ಪ್ರಧಾನ ಮಾಡಿ ದಕ್ಷಿಣದತ್ತ ಮುಖ ಮಾಡಿ ಪಿತೃಗಳಿಗೆಲ್ಲ ತರ್ಪಣ ಪ್ರಧಾನ ಮಾಡಿ, ಜೀವನದ ಪ್ರತೀ ಹಂತದಲ್ಲೂ ಅನ್ಯಾನ್ಯ ರೀತಿಗಳಲ್ಲಿ, ಪ್ರತ್ಯಕ್ಷ ಪರೋಕ್ಷವಾಗಿ ಕೈ ಹಿಡಿದು ನಡೆಸಿದ , ಸ್ವರ್ಗ ಲೋಕ ವಾಸಿಗಳಾದ ಎಲ್ಲರನ್ನೂ ಮನದಲ್ಲಿ ನೆನೆದು ತರ್ಪಣ ಬಿಡುವುದರೊಂದಿಗೆ ಜನ್ಮಕಾಲದ ಮಹಾಪುಣ್ಯಪ್ರದ ಕುಂಭಸ್ನಾನ ಸುಸಂಪನ್ನವಾಗಿತ್ತು, ಮನಸ್ಸು ಹಗುರವಾಗಿತ್ತು….ಮನದಣಿಯೆ ಮುಳುಗು ಹಾಕಿ ಕುಂಭಸ್ನಾನ ಮಾಡಿ ಒದ್ದೆಯಾಗಿದ್ದ ಬಟ್ಟೆಗಳನ್ನು ಹಿಂಡುತ್ತಾ, ದೋಣಿಯ ಮೇಲೆರಿದಾಗ ಇಳಿ ಸಂಜೆ ಗಂಟೆ ಐದಾಗಿತ್ತು.

ಪುನಃ ದೋಣಿಗಾರ ನಮ್ಮನ್ನು ದಡದತ್ತ ಸಾಗಹಾಕುತಿದ್ದ. ಆಗಸದಲ್ಲಿ ಅನತಿಯಲ್ಲಿ ಸೂರ್ಯದೇವ ಪಶ್ಚಿಮದ ಕಡಲಲ್ಲಿ ಮುಳುಗಲು ಕಾತರನಾಗಿದ್ದ. ಆಗಸದಲ್ಲಿ ಬೆಳ್ಕೊಕ್ಕರೆಗಳು ತಮ್ಮ ದಿನದ ಕಾಯಕ ಮುಗಿಸಿ ತಮ್ಮ ತಮ್ಮ ನೆಲೆಗಳಿಗೆ ಪುಂಡು ಪುಂಡಾಗಿ ಹಾರುತ್ತಾ ಚಿತ್ತಾರ ಮೂಡಿಸುತಿದ್ದವು. ನೂರಾರು ದೋಣಿಗಳು ಸಾವಿರಾರು ಜನರನ್ನು ಸಂಗಮ ಸ್ಥಳಕ್ಕೂ, ಸಂಗಮದಿಂದ ದಡಕ್ಕೂ ಸಾಗಿಸುತಿದ್ದವು, ದೋಣಿಕಾರರ ಬೆವರು ಕಾಂಚಾಣರೂಪ ಪಡೆದು ಅವರ ಶ್ರಮದ ಫಲ ಸಾರ್ಥಕ್ಯ ಕಾಣುತಿತ್ತು. ನಾವೂ ಪುನಃ ಯಮುನೆಯ ದಂಡೆಗಿಳಿದು, ದೋಣಿಕಾರನಿಗೆ ಹಣ ಪಾವತಿಸಿ ಪುನಃ ನಮ್ಮೂರಿನೆಡೆಗೆ ಪಯಣಿಸುವ ತರಾತುರಿಯಲ್ಲಿ ಒದ್ದೆ ಬಟ್ಟೆಗಳನ್ನು ಬದಲಾಯಿಸುವ ಗೋಜಿಗೇ ಹೋಗಲಿಲ್ಲ, ಹಾಗೂ ಬಟ್ಟೆಗಳು ದೇಹದ ಶಾಖಕ್ಕೆ ಒಣಗಿಯೇ ಬಿಟ್ಟಿತ್ತು.

ಸುಮಾರು ಎರಡು ಕಿಮೀ ದಾರಿ ನಾವು ನಡೆದೇ ಸಾಗಿದೆವು. ರಸ್ತೆಯ ಇಕ್ಕೆಲಗಳಲ್ಲೂ ಹಲವು ಸೇವಾ ಚಟುವಟಿಕೆಗಳನ್ನು ಕಂಡೆವು, ಮುಖ್ಯವಾಗಿ ಶೌಚಾಲಯಗಳನ್ನು ಕ್ಷಣ ಕ್ಷಣಕ್ಕೂ ಪೈಪ್ ಮುಖೇನ ನೀರು ಬಿಟ್ಟು ಶುಚಿಗೊಳಿಸುತಿದ್ದವರ,ಪ್ರತಿಫಲಾಪೇಕ್ಷೆ ಇಲ್ಲದ ಸೇವಾ ತತ್ಪರತೆ ಗಂಗೆಯೊಡಲಲ್ಲಿ ಮುಳುಗಿ ಕಳಕೊಂಡ/ಪಡಕೊಂಡ ಪಾಪ ಪುಣ್ಯಕ್ಕಿಂತ ಮಿಗಿಲಾಗಿ ಕಂಡುಬಂತು. ಅವರಿಗೂ ಮನಸಾ ನಮಿಸುತ್ತಾ, ಸಂಗಮಿತ ಮಹಾ ಜಲಧಿಯ ಮಡಿಲನ್ನು ತಿರುತಿರುಗಿ ನೋಡುತ್ತಾ,ಸುತ್ತಲಿನ ಪರಿಸರಗಳನ್ನು ಮನದಲ್ಲಿ ಚಿತ್ರೀಕರಿಸುತ್ತಾ ಸಾಗಿದಾಗ ನಿಶಾದೇವಿಯ ಪ್ರವೇಶವೇ ಅರಿವಿಗೆ ಬಾರದಂತೆ ಬಾನೆತ್ತರದ ಬೆಳಕು ಕಂಬಗಳಲ್ಲಿ ಅಳವಡಿಸಿದ ದೀಪಗಳು ಜಗಮಗಿಸಲಾರಂಭಿಸಿದವು. ನಾವು ಬೈಕಿನಿಂದ ಇಳಿದ ಪೋಲಿಸ್ ಚೌಕಿಯ ಆವಾರದಲ್ಲಿದ್ದೆವು,ಜನರ ಕರೆದೊಯ್ಯುವ ಬೈಕುಗಳನ್ನು ನಿಗದಿಗೊಳಿಸಿ ಕಾರು ಪಾರ್ಕಿಂಗ್ ಮಾಡಿದ್ದ ಅರೇಲ್ ಘಾಟ್ ನತ್ತ ದೌಡಾಯಿಸುವಾಗ ನಮ್ಮ ಬೈಕ್ ಎದುರು ಬರುತಿದ್ದ ಬೈಕಿಗೆ ಡಿಕ್ಕಿ ಹೊಡೆಯಿತು. ಆದರೆ ನಮಗಾರಿಗೂ ಒಂದಿನಿತೂ ತೊಂದರೆ ಅಗಲಿಲ್ಲ ಹಾಗೂ ಆ ಬೈಕ್ ವಾಲಾಗಳು ಜಗಳವನ್ನೂ ಮಾಡಿಕೊಳ್ಳಲಿಲ್ಲ….ಪರಸ್ಪರ ನಮಸ್ಕಾರ ಹೇಳುತ್ತಾ ಮುಂದೆ ಸಾಗಿದ ಬೈಕುಗಳು ನಮ್ಮ ಕಾರಿನ ಬಳಿ ನಮ್ಮನ್ನಿಳಿಸಿದ್ದವು.

(ಮುಂದುವರಿಯುವುದು. ನಾಳೆ ಊರಿನತ್ತ ಪಯಣ.)

ಬರಹ :
ಸುರೇಶ್ಚಂದ್ರ ತೊಟ್ಟೆತ್ತೋಡಿ.

Advertisement

Advertisement

Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ಟಿ ಆರ್ ಸುರೇಶ್ಚಂದ್ರ ತೊಟ್ಟೆತ್ತೋಡಿ

‌ ಪ್ರಗತಿಪರ ಕೃಷಿಕ, ಬರಹಗಾರ

ಇದನ್ನೂ ಓದಿ

ಬದರೀನಾಥ ಧಾಮ ಯಾತ್ರಾ ಆರಂಭ | ಭಾರೀ ಪ್ರಮಾಣದಲ್ಲಿ ಆಗಮಿಸಿರುವ ಭಕ್ತರು | ಸುರಕ್ಷತೆಗಾಗಿಅರೆಸೇನಾ ಪಡೆ ನಿಯೋಜನೆ
May 5, 2025
12:21 PM
by: The Rural Mirror ಸುದ್ದಿಜಾಲ
ಭಕ್ತರಿಗಾಗಿ ತೆರೆದ ಕೇದಾರನಾಥ ದ್ವಾರ | ಮೊದಲ ದಿನ ಸುಮಾರು 10 ಸಾವಿರ ಜನರಿಂದ ದೇವರ ದರ್ಶನ
May 2, 2025
9:13 PM
by: The Rural Mirror ಸುದ್ದಿಜಾಲ
ಯುದ್ಧ……
April 27, 2025
10:33 AM
by: ವಿವೇಕಾನಂದ ಎಚ್‌ ಕೆ
ಪ್ರಕೃತಿ ಸೌಂದರ್ಯ ಮತ್ತು ಧಾರ್ಮಿಕತೆ ಮೇಳೈಸಿದ ಸ್ಥಳ ನಾಕೂರುಗಯ | ಭಕ್ತಿ ಪ್ರಕೃತಿಗಳ ಸಂಗಮ
April 24, 2025
6:05 AM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror

Join Our Group