ಕುಂಭಸ್ನಾನ ಮುಗಿಸಿದ ನಾವೆಲ್ಲರೂ ಅರೈಲ್ ಘಾಟಿನಲ್ಲಿ ಪಾರ್ಕಿಂಗ್ ಮಾಡಿದ್ದ ನಮ್ಮ ಕಾರಿನ ಹತ್ತಿರ ಬಂದು ಬಟ್ಟೆ ಬದಲಾಯಿಸಿದಾಗ ಹೊಟ್ಟೆ ತಾಳ ಹಾಕುತಿತ್ತು. ಮುನ್ನಾ ದಿನ ರಾತ್ರಿ ಹನ್ನೆರಡು ಗಂಟೆಗೆ ಚಿತ್ರಕೂಟದಲ್ಲಿ ರೋಟಿ ಊಟ ಮಾಡಿದವರು ಇಪ್ಪತ್ತನಾಲ್ಕು ಗಂಟೆಗಳ ಕಾಲ ನಮ್ಮ ಕಾರಿನಲ್ಲಿ ಊರಿನಿಂದ ತಂದ ಒಣ ದ್ರಾಕ್ಷಿ, ಖರ್ಜೂರ, ಬಾಳೆಹಣ್ಣು, ಮುಸುಂಬಿ ,ಮತ್ತು ಮನೆ ನೀರನ್ನೇ ಸೇವಿಸುತ್ತಾ ಶಕ್ತಿ ಸಂಚಯನ ಮಾಡುತಿದ್ದೆವು. ಪುನಃ ಕಾರಿನಲ್ಲಿದ್ದ ಒಂದಷ್ಟು ಹಣ್ಣುಗಳನ್ನು ಸೇವಿಸಿ, ನೀರು ಕುಡಿದು, ಹೊರ ಸಾಗಲು ಸಂಗಮ ಪ್ರದೇಶಕ್ಕೆ ಒಳ ಬಂದ ಚಕ್ರವ್ಯೂಹದಂತಿದ್ದ ರಸ್ತೆಯನ್ನು ಗೂಗಲಣ್ಣನ ಮೂಲಕ ಅಧ್ಯಯನ ಮಾಡಿ ಹೊರ ಹೊರಟಾಗ ರಾತ್ರಿ ಗಂಟೆ ಏಳಾಗಿತ್ತು.ಧೂಳುಮಯವಾದ ಸಪುರಾದ, ಕಡಿದಾದ ಅದೇ ರಸ್ತೆ….………ಮುಂದೆ ಓದಿ……..
ಮುಖ್ಯ ರಸ್ತೆಗೆ ಸೇರಲು ಎಂಟತ್ತು ಕಿಮೀ ಹಳ್ಳಿಗಾಡಿನ, ಗದ್ದೆ ಬದುಗಳ, ಯಮುನೆಯ ತಟದ ಅದೇ ರಸ್ತೆಯಲ್ಲಿ ಸುತ್ತಲೇಬೇಕಿತ್ತು….ನಿಧಾನವಾಗಿ ಸಾಗುತಿದ್ದ ವಾಹನ ಸಾಲುಗಳು ಘಕ್ಕನೆ ನಿಂದಾಗ ಇನ್ನೇನಪ್ಪಾ ದೇವಾ ಎಂದು ನಮ್ಮೆಲ್ಲರ ತಲೆ ಗಿರ್ರನೆ ತಿರುಗಲಾರಂಬಿಸಿತು. ನಮ್ಮ ಅನತಿ ದೂರದಲ್ಲಿ ಮುಂದೆ ಸಾಗುತಿದ್ದ ವಾಹನಗಳು ಡಿಕ್ಕಿಯಾಗಿದ್ದವು, ರಸ್ತೆ ಬಂದ್ ಆಗಿತ್ತು….ಈ ಕಗ್ಗತ್ತಲಲ್ಲಿ ವಾಹನಗಳ ತಲೆಬೆಳಕಿನ ಹೊರತು ಬೇರೇನೂ ಕಾಣಿಸುತಿರಲಿಲ್ಲ. ನನ್ನ ಬಾವ ಶಂಕರರು ಗರ್ರನೆ ರಿವರ್ಸ್ ಗೇರ್ ಹಾಕಿ ಅಲ್ಲೇ ಬಲಕ್ಕೆ ಹಾದು ಹೋಗುತಿದ್ದ ದಾರಿಗೆ ಕಾರನ್ನು ತಿರುಗಿಸಿ ಗೂಗಲಣ್ಣನಲ್ಲಿ ಚರ್ಚಿಸುತ್ತಾ ಸಾಗಿದಾಗ ಇನ್ನು ಸ್ವಲ್ಪದರಲ್ಲೇ ದೊಡ್ಡ ರಸ್ತೆ ಇದೆ , ಮುಂದಕ್ಕೆ ಸಾಗಿ ಎಂದು ಗೂಗಲಣ್ಣ ಹೇಳಿದಂತೆ ಸಾಗಿದಾಗ, ವಾಹನ ದಟ್ಟಣೆಯಿಂದ ಕಾದು ಕೆಂಪಾದ ದೊಡ್ಡ ರಸ್ತೆ ಬಂದೇಬಿಟ್ಟಿತ್ತು…. ಅಬ್ಬ, ಬದುಕಿದೆಯಾ ಬಡಜೀವವೇ ಎಂದು ನೋಡುತ್ತಿದ್ದಂತೆಯೇ ಟ್ರಾಫಿಕ್ ಟೆರಿಫಿಕ್ ಆಗಿ ಬ್ಲಾಕ್ ಆಗಿತ್ತು.
ಗಂಟೆ ಎಂಟಾಗಿತ್ತು….ನಮ್ಮ ಗುರಿ ನೂರಿಪ್ಪತ್ತು ಕಿಮೀ ದೂರದ ರೇವಾ ತಲುಪುವುದಾಗಿತ್ತು. ಎರಡೂ ರಸ್ತೆಯಿಡೀ ವಾಹನಗಳೇ ವಾಹನ….ಅಂತೂ ನಿಧಾನವಾಗಿ ವಾಹನಗಳು ಚಲಿಸಲಾರಂಭಿಸಿದವು…… ಸಾಗುತ್ತಾ ಸುಮಾರು ಹತ್ತದಿನೈದು ಕಿಮೀ ಆದಾಗ ರಸ್ತೆಯ ಬದಿಯಲ್ಲೊಂದು ಹೋಟೆಲ್ ಇದೆಯೆಂದು ಕಂಡುಬಂದು, ಅಲ್ಲಿ ನಿಲ್ಲಿಸಿ ಊಟಕ್ಕೆ ಹೋದೆವು, ಹೋಟೆಲ್ ಒಳಗೆ ಜನವೋ ಜನ, ಅಂತೂ ನಮ್ಮ ಸರತಿ ಬಂದು ರೋಟಿ,ಧಾಲ್, ಅನ್ನ,ಮೊಸರು, ಸಲಾಡ್ ಸೇವಿಸಿದಾಗ ಶರೀರದ ಎಂಜಿನ್ ಟರ್ಬೋ ಚಾರ್ಜ್ ಆಗಿತ್ತು. ಬಿಲ್ ಪಾವತಿಸಿ, ವಸತಿಗಾಗಿ ಗೂಗಲಣ್ಣನ ಮೂಲಕ, ಮನೆಯಲ್ಲಿದ್ದ,ಮಗ, ಅಳಿಯರ ಮೂಲಕ ರೂಮ್ ಅರಸುತ್ತಾ ಸಾಗಿದ್ದೇ ಸಾಗಿದ್ದು, ಎಲ್ಲಾ ವಸತಿ ರೂಮುಗಳು ತುಂಬಿ ತುಳುಕುತಿದ್ದವು…ಅಂತೂ ನಡು ರಾತ್ರಿ ರೇವಾಕ್ಕೆ ತಲುಪಿದ ನಾವು ಸಿಕ್ಕ ಸಿಕ್ಕ ಹೋಟೇಲ್ ಗಳಲ್ಲಿ ರೂಮ್ ವಿಚಾರಿಸುತ್ತಾ, ಕೊನೇಗೆ ಬಾವ ಶಂಕರರು ಓಯೋ ಅಂತ ಒಂದು ಏಪಿನಲ್ಲಿ ತಡಕಾಡಿದಾಗ ಮೂಲೆಯಲ್ಲೊಂದೆರಡು ರೂಮುಗಳಿವೆಯೆಂದು ತಿಳಿದು ಸಾಗಿ, ಆ ರೂಮಿನ ಮಹಾಶಯನಿಗೆ ಬಲಿಬಿದ್ದ ಬಕ್ರಾಗಳಾಗಿ ದುಪ್ಪಟ್ಟು ಹಣ ಪಾವತಿಸಿ ರೂಮಿನೊಳ ಸಾಗಿ ನಿತ್ಯಕರ್ಮ ಮುಗಿಸಿ ಹಾಸಿಗೆ ಮೇಲೆ ಬಿದ್ದಂತೆಯೇ ನಿದ್ರಾದೇವಿ ನಮ್ಮನ್ನು ಆಲಿಂಗಿಸಿದ್ದಳು.
ಅಂತೂ , ಇಪ್ಪತ್ತನೇ ತಾರೀಕಿನ ಬೆಳಗ್ಗೆ ಬೇಗನೆ ಎದ್ದವರು ಸ್ನಾನಾದಿಗಳನ್ನು ಮುಗಿಸಿ ಕಾರಿನಲ್ಲಿ ನಮ್ಮ ಸರಂಜಾಮುಗಳನ್ನು ತುಂಬಿಸಿ ,ಎದುರೇ ಚಾ ಮಾಡುತಿದ್ದ ದುಖಾನಿನಲ್ಲಿ ಚಾ ಸೇವಿಸಿ, ಮುಂದೆ ದಾರಿಯಲ್ಲಿ ಸಿಕ್ಕ ಹೋಟೆಲಲ್ಲಿ ಬೆಳಗಿನ ನಾಶ್ತಾ ಮಾಡುವುದೆಂದು ಒಪ್ಪಂದ ಮಾಡಿ ಹೊರಟೇಬಿಟ್ಟೆವು…. ಸಪಾಟಾದ ರಸ್ತೆಯಲ್ಲಿ ಕಾರು ವೇಗವಾಗಿ ಊರಿನೆಡೆ ಒಡುತಿತ್ತು…. ನೋಡನೊಡುತ್ತಲೇ ಕೆಲವು ಹೋಟೇಲುಗಳ ಎದುರು ಕಾರು ಅತ್ತ ಮುಖ ಕೂಡಾ ತಿರುಗಿಸದೇ ಓಡುತಿತ್ತು…. ಕೊನೆಗೂ ಹನ್ನೊಂದು ಗಂಟೆಯ ಹೊತ್ತಿಗೆ ಸಿಯೋನಿ ಎನ್ನುವ ಪ್ರದೇಶದಲ್ಲಿ ಒಂದು ಉತ್ತಮ ಹೋಟೇಲ್ ಸಿಕ್ಕಾಗ,ದಕ್ಷಿಣ ಭಾರತದ ತಿಂಡಿಗಳು ಲಭಿಸಿ, ಇಡ್ಲಿ ವಡೆ, ದೋಸೆ, ಊತಪ್ಪ,ಉಪ್ಮ ನಮ್ಮ ಟೇಬಲಿನಲ್ಲಿ ಠಿಕಾಣಿ ಹೂಡಿತ್ತು. ಅಂತೂ ಹೊಟ್ಟೆ ಗಟ್ಟಿ ಮಾಡಿ ಹೊರಟ ನಾವು ಸಾಗುತ್ತಾ ಊರುಗಳ ಪರಿಸರ ಗಮನಿಸುತ್ತಾ, ಜನ ಜೀವನ ಗಮನಿಸುತ್ತಾ ಸಾಗಿದ್ದೇ ಸಾಗಿದ್ದು.
ನಮ್ಮ ಗುರಿ , ರಾತ್ರಿಯ ವಸತಿ ಸುಮಾರು 850 ಕಿಮೀ ದೂರದ ಮಹಾರಾಷ್ಟ್ರದ ಲಾತೂರ್ ಆಗಿತ್ತು, ಯಾಕೆಂದರೆ ಮರು ದಿವಸದ ಪಯಣದ ದೂರ ಪುನಃ 850+ ಕಿಮೀಗಳಿದ್ದವು, ಅಂತೂ ಮಧ್ಯಾಹ್ನದ ಊಟ ತ್ಯಾಗ ಮಾಡಿ ನಾಗ್ಪುರ ದಾಟಿದ ನಾವು ಛತ್ರಪತಿ ಶಿವಾಜಿ ಮಹಾರಾಜ್ ಎಕ್ಸ್ಪ್ರೆಸ್ ವೇಯಲ್ಲಿದ್ದೆವು…. ಅದ್ಭುತ ರಸ್ತೆ…. ವಾಹನದ ಮತ್ತು ಚಾಲಕನ ತಾಕತ್ತಿನಷ್ಟು ವೇಗದಲ್ಲಿ ಸಾಗಬಹುದು…. ಅಂತೂ ಸುಮಾರು ಐವತ್ತು ಕಿಮೀ ಆ ಅದ್ಭುತ ರಸ್ತೆಯಲ್ಲಿ ಸಾಗಿ ವಾರ್ಧಾ ಎನ್ನುವಲ್ಲಿ ಆ ಮಹಾನ್ ಎಕ್ಸ್ಪ್ರೆಸ್ ವೇ ಯಿಂದ ಕೆಳಗಿಳಿದು ಲಾತೂರ್ ತುಲ್ಜಾಪುರ್ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಾಗಿದ್ದೇ ಸಾಗಿದ್ದು, ಮನೆಯಿಂದ ಪೋನ್ ಮೂಲಕ ನಾಗ್ಪುರ ಕಿತ್ತಳೆ ಕೊಳ್ಳಲು ಹೇಳಿದ ಮಾತು, ಊರಿಗೆ ಮುಟ್ಟುವ ಧಾವಂತದಲ್ಲಿ ಮರೆತೇ ಹೋಗಿತ್ತು…. ಅಂತೂ ಸಾಗುತ್ತಾ ಸಾಗುತ್ತಾ ಇಳಿ ಸಂಜೆಯಾಗಿ ಸೂರ್ಯದೇವ ತನ್ನ ಬೆಳಕನ್ನು ಡಿಮ್ ಮಾಡುತಿದ್ದ…. ರಾತ್ರಿಯೂ ಅವರಿಸಿಯೇ ಬಿಟ್ಟಿತು…. ನಾನ್ದೇಡ್ ಎಂಬ ಪಟ್ಟಣ ತಲುಪಿದ ನಮಗೆ ಹೊಟೇಲ್ ಏಕದಂತ ಬೋರ್ಡ್ ಕೈಬೀಸಿ ಕರೆದು ಒಳ ಹೋಗಿ ಕುಳಿತು ಓರ್ಡರ್ ಮಾಡುವಾಗ, ಅದೂ ಇಲ್ಲ ಇದೂ ಇಲ್ಲ, ಅನ್ನುತ್ತಾ, ಅವರಲ್ಲಿ ಇರುವುದನ್ನು ದಯವಿಟ್ಟು ಕೊಡಿ ಮಹಾಶಯರೇ ಎಂದಾಗ ರೋಟಿ, ಧಾಲ್,ಅನ್ನ , ಮೊಸರು ಸಿಕ್ಕಿದ್ದನ್ನು ಸೇವಿಸಿ, ಮುಂದೆ ಸಾಗಿ ರೂಮ್ ಒಂದನ್ನು ಪಡೆದು, ಮರುದಿವಸ ಊರಿನತ್ತಣ ರಸ್ತೆ ಬಗ್ಗೆ ಮಾತನಾಡಿಕೊಳ್ಳುತ್ತಾ ನಿದ್ದೆಗೆ ಜಾರಿದೆವು.
(ಮುಂದುವರಿಯುವುದು….. ಕನ್ನಡದ ನೆಲಕ್ಕೆ ತಲುಪುವ ತವಕ, ಕೊನೆಗೆ ಮನೆಗೆ ಮುಟ್ಟುವ ಧಾವಂತ)
ತಮ್ಮಂದಿರಿಗೆ ಅಣ್ಣನಾಗಿ, ಪ್ರಜೆಗಳಿಗೆ ರಾಜನಾಗಿ, ಧರ್ಮದ ಪ್ರತಿನಿಧಿಯಾಗಿ, ಪ್ರಾಮಾಣಿಕತೆಗೆ ಕನ್ನಡಿಯಾಗಿ, ಶುದ್ಧ ಚಾರಿತ್ರ್ಯವಂತನಾಗಿ,…
ಹೆಚ್ಚಿನ ಮಾಹಿತಿಗಾಗಿ ರಾಯರ ಪರಮ ಭಕ್ತರಾದ ಜ್ಯೋತಿಷಿಗಳನ್ನು ಸಂಪರ್ಕಿಸಿ 9535156490
ಕೃಷಿ ಪತ್ತಿನ ಸಹಕಾರಿ ಸಂಘಗಳು ಗ್ರಾಮೀಣ ಭಾಗದ ರೈತರ ಸಂಕಷ್ಟ ಕಾಲದಲ್ಲಿ ಕೈ…
ಪರಿಸರ ಇಲಾಖೆಯಿಂದ ಅನುಮತಿ ದೊರೆಯದ ತನಕ ಎತ್ತಿನಹೊಳೆ ಕಾಮಗಾರಿ ಮುಂದುವರೆಸಲು ಕಷ್ಟಕರವಾಗಿದೆ.
ಅಂತಾರಾಷ್ಟ್ರೀಯ ಮಹಿಳಾ ದಿನದ ಪ್ರಯುಕ್ತ, ದೇಶದ ಎಲ್ಲ ಜಿಲ್ಲೆಗಳಲ್ಲಿ ವಿವಾಹಪೂರ್ವ ಆಪ್ತ ಸಮಾಲೋಚನೆ…
ಸದ್ಯ ಬ್ಯಾಂಕಿಂಗ್ ಕ್ಷೇತ್ರದಲ್ಲಷ್ಟೇ ಸಿಬಿಲ್ ಮಾಹಿತಿ ಕೇಳಲಾಗ್ತಿದೆ.ಆದರೆ ಶೀಘ್ರವಾಗಿ ಸಹಕಾರಿ ಕ್ಷೇತ್ರದಲ್ಲೂ ಸಿಬಿಲ್…