ಒಂದಗಳು ಹೆಚ್ಚಿರದು
ಒಂದಗಳು ಕೊರೆಯಿರದು
ತಿಂದು ನಿನ್ನನ್ನ ತೀರುತಲೆ ಪಯಣ
ಹಿಂದಾಗದೊಂದು ಚಣ
ಮುಂದಕುಂ ಕಾದಿರದು
ಸಂದ ಲೆಕ್ಕವದೆಲ್ಲ ಮಂಕುತಿಮ್ಮ.
ಎಷ್ಟು ಚೆನ್ನಾಗಿ ಕವಿ ಡಿವಿಜಿಯವರು ಕಗ್ಗದ ಅನುಸಂಧಾನದಲ್ಲಿ ಪಯಣದ ಹಿನ್ನೆಲೆಯನ್ನು ವಿವರಿಸಿದ್ದಾರಲ್ಲವೇ….ಹೌದು ಪಯಣದ ಪ್ರತೀ ಕ್ಷಣವೂ ಅಷ್ಟೇ, ನಮ್ಮ ಅನ್ನದ ಋಣ ತೀರಿತೆಂದರೆ ಹೊರಡಲೇ ಬೇಕು, ಋಣ ಮುಕ್ತನಾಗದೆ ಹೊರಡುವಂತಿಲ್ಲ. ಅಂತೆಯೇ ಸಮಯವೂ ಕೂಡಾ ನಮ್ಮ ಸಮಯ ಬಂದಾಗ ಎದ್ದೋಡುವುದಷ್ಟೇ, ಸಮಯ ಬಾರದೆ ಒಂದಿನಿತೂ ಮುಂದೆ ಸಾಗದು, ಇದನ್ನೆಲ್ಲಾ ವಿಧಿ ಜೋಡಿಸಿಯೇ ನಮ್ಮನ್ನು ಈ ಲೋಕಜೀವನಕ್ಕೆ ಬಿಟ್ಟಿರುತ್ತಾನೆ ಎಂದು ಪಯಣದ ಅನುಭವದಿಂದ ಮನಸ್ಸಿಗೆ ತೋಚುತ್ತದೆ.
ಕುಂಭಮೇಳದತ್ತಣ ಪಯಣದ ಕೊನೆಯ ದಿನ, ದಿನದ ಪಯಣದ ದಾರಿ ಕೊಂಚ ದೀರ್ಘವಿತ್ತು, ಊರು ತಲುಪಲು ಸುಮಾರು 950 ಕಿಮೀ ಸಾಗಬೇಕಿತ್ತು ಅಂತೆಯೇ , ತಾರೀಕು ಪೆಬ್ರವರಿ 21, ಬೆಳಗಿನ ಆರು ಗಂಟೆಗೇ ಹೊರಟು ತಯಾರಾಗಿದ್ದ ನಾವು ನಮ್ಮ ವಸತಿಯ ಊರು ನಾದೇಂಡಿನಿಂದ ಕಾರನ್ನೇರಿ ಹೊರಟೇಬಿಟ್ಟೆವು, ನಾದೇಂಡಿನಿಂದ ಕರ್ನಾಟಕದ ಗಡಿ ಝಳ್ಕಿಗೆ ಸುಮಾರು 300+ ಕಿಮೀಗಳಿತ್ತು, ಕಾರು ವೇಗವಾಗಿ ರಸ್ತೆಯಲ್ಲಿ ಮುನ್ನುಗ್ಗುತಿತ್ತು, ಜನಜೀವನ ತಮ್ಮ ನಿತ್ಯಕಾಯಕಕ್ಕೆ ಮುನ್ನಡಿಯಿಡುತಿದ್ದರು, ಮನೆಯ ಮಾತೆಯರು ಮನೆ ಮುಂದಲಗಿನಲ್ಲಿ ನೆಲ ಸಾರಿಸಿ ರಂಗೋಲಿಯಿಡುತ್ತಾ ದಿನದ ಶುಭ ಘಳಿಗೆಗಳನ್ನು ಸ್ವಾಗತಿಸುತಿದ್ದರು, ಗಂಡಸರು ಹೊಲದಲ್ಲಿ ಕಾಯಕಯೋಗಿಗಳಾಗಿ ತರಕಾರಿ,ಹಣ್ಣುಹಂಪಲುಗಳನ್ನು ಆಯುತಿದ್ದರು, ನಾಲೆಯಲ್ಲಿ ಬಂದು ಲಭ್ಯವಿದ್ದ ನೀರೂಡಿಸುತಿದ್ದರು, ಜಾನುವಾರುಗಳು ಆಹಾರಕ್ಕಾಗಿ ಕೂಗುತಿದ್ದವು, ಹಾಲೂಡಲು ತಯಾರಾಗಿದ್ದವು, ಬರಡುಬರಡಾದ ವಿಸ್ತಾರವಾದ ಪ್ರದೇಶಗಳಲ್ಲಿ ಅಳವಡಿಸಿದ ಗಾಳಿಯಂತ್ರಗಳು ಗಿರಗಿರನೆ ತಿರುಗಿ ವಿದ್ಯುತ್ ಉತ್ಪಾದನೆ ಮಾಡುತಿದ್ದವು,ನಮ್ಮ ಕಾರು ಬಾವ ಶಂಕರರ ಏಕಾಂಗಿ ಸಾರಥ್ಯದಲ್ಲಿ ಓಡೋಡುತಿತ್ತು…….
ಪೂರ್ವ ದಿಗಂತದಲ್ಲಿ ಸೂರ್ಯನದೇವ ಮೆಲ್ಲಮೆಲ್ಲಗೆ ಇಣುಕಿ ಜಗಕೆ ಬೆಳಕೀವ ಕಾಯಕಕ್ಕೆ ಅಣಿಯಾಗುತಿದ್ದನು. ವೇಗವಾಗಿ ಸಾಗುತಿದ್ದ ಕಾರು ಮೂವತ್ತು ವರ್ಷಗಳ ಹಿಂದೆ ಭೀಕರ ಭೂಕಂಪವಾಗಿದ್ದ ಊರು ಲಾತೂರಿನ ಕಿಲ್ಹಾರಿಯನ್ನು ದಾಟಿತ್ತು. ಈಗ ಲಾತೂರು ಅಭಿವೃದ್ಧಿಗೊಂಡಿದೆ, ಕೃಷಿ, ಮತ್ತು ಔದ್ಯಮಿಕ ಕ್ರಾಂತಿ ಸಾಗಿದೆ,ಅಂತೂ ತುಳಜಾಪುರಕ್ಕೆ ತಲುಪಿ ರಾಷ್ಟ್ರೀಯ ಹೆದ್ದಾರಿಯ ಮೇಲೆಹಾರು (ಪ್ಲೈ ಒವರ್) ರಸ್ತೆಯನ್ನೇರುವಲ್ಲಿ ತಪ್ಪಾಗಿ ಪೇಟೆಯೊಳಗೆ ಕಾಲಿಟ್ಟ ನಾವು, ಸ್ಥಳೀಯ ಜನರಲ್ಲಿ ಕೇಳಿ ಪುನಃ ನಮ್ಮ ರಸ್ತೆಗೆ ಸೇರಿ ಕಾರು ಮುಂದೋಡಿದಾಗ ಕರುನಾಡ ಗಡಿಭಾಗ ಬಿಸಿಲ ಝಳದ ಊರು ಝಳಕಿ ನಮ್ಮನ್ನು ಕೈ ಬೀಸಿ ಸ್ವಾಗತಿಸಿದಂತೆ ಸುತ್ತಲೂ ಕನ್ನಡದ ಫಲಕಗಳು ಕಂಡುಬಂದಾಗ ಗಂಟೆ ಹತ್ತಾಗಿತ್ತು,ಹೊಟ್ಟ್ಟೆ ಬೆಳಗಿನ ಉಪಾಹಾರಕ್ಕಾಗಿ ತಾಳ ಹಾಕುತಿದ್ದರೂ ವಿಜಯಪುರಕ್ಕೆ ತಲುಪಿ ಅಲ್ಲಿನ ಕಾಮತ್ ರೆಸ್ಟೊರೆಂಟದಲ್ಲೇ ತಿಂಡಿ ಮಾಡುವುದೆಂದು ನಿಶ್ಚಯಿಸಿ ಹನ್ನೊಂದು ಗಂಟೆಗೆ ವಿಜಯಪುರ ತಲುಪಿ ಶುಚಿರುಚಿಯಾದ ಕಾಮತ ಹೊಟೇಲದಲ್ಲಿ ಮನಸ್ಸಿಗೊಫ್ಪುವ ಇಡ್ಲಿ ವಡೆ, ದೋಸೆ, ಪೋಹಾಗಳನ್ನು ಸ್ವಲ್ಪ ಹೆಚ್ಚಾಗಿಯೇ ಭುಂಜಿಸಿ ಮುಂದಕ್ಕೆ ಸಾಗಿದಾಗ ಅಲಮಟ್ಟಿ ಜಲಾಶಯದಲ್ಲಿ ತುಂಬಿಕೊಂಡು ಊರಿಗೆ ತಂಪೆರಲ ಊಡುತಿದ್ದ ಕೃಷ್ಣಾ ಭೀಮೆಯರ ಮೇಲಿನ ಸೇತುವೆ ದಾಟಿ ಸಾಗಿದೆವು, ದ್ರಾಕ್ಷಿ, ಕಬ್ಬು, ಜೋಳ ಮುಂತಾಗಿ ರೈತರು ಬೆಳೆಬೆಳೆದು ನೆಲ ಸಮೃದ್ದವಾಗಿತ್ತು.
ಸಾಗುತಿದ್ದಂತೆಯೇ ಹುಬ್ಬಳ್ಳಿಯ ಹೊರವರ್ತುಲದಲ್ಲಿದ್ದ ನಾವು ಕಲಘಟಿಕಿ ಯಲ್ಲಾಪುರ ದಾಟಿ ರಾಮಂಗುಳಿಯಿಂದ ಮುಂದೆ ಮಾದನಗೇರಿಗೆ ಸನಿಹವಾಗಬಹುದೋ ಎಂದು ತೋರುತಿದ್ದ ,ಗಂಗಾವಳೀ ನದಿ ತಟದಲ್ಲೇ ಸಾಗುವ ಒಳ ರಸ್ತೆಯಲ್ಲಿ ಸಾಗಿದಾಗ ರಸ್ತೆಯ ನಿಜಮುಖ ದರ್ಶನವಾಗಿತ್ತು….ಕಾಡುದಾರಿಯ ರಸ್ತೆ ಸಂಪೂರ್ಣ ಕೆಟ್ಟು ಕೆರ ಹಿಡಿದಿತ್ತು….ಅಂತೂ ರಾಜಕಾರಣಕ್ಕೆ ಇಲಾಖೆಗಳಿಗೆ ದೋಷಾರೋಪಣೆ ಮಾಡುತ್ತಾ ಇಳಿದಾಗ ಮಾದನಗೇರಿ ಬಂದಿತ್ತು….ಗಂಟೆ ಸಂಜೆ ಐದಾಗಿತ್ತು…..ಹೊಟ್ಟೆ ಮೌನವಾಗಿ ಕುಳಿತು ಊರು ಸೇರುವ ತವಕಕ್ಕೆ ಇಂಬುನೀಡುತಿತ್ತು. ಅಂತೂ ಪುಟಿದೋಡಿದ ಕಾರು ಶಿರಾಲಿಯ ರಸ್ತೆಯ ಬದಿಯಲ್ಲಿ ಕಂಡುಬಂದ ಹೋಟೇಲದ ಹತ್ತಿರ ನಿಂತೇಬಿಟ್ಟಿತು. ನನ್ನ ಬಾವ ವಿಜಯಪುರದ ಪೋಹಾದ ಮಸ್ತ್ ಮಸ್ತಿಯಿಂದ ಹೊರಬರಲಾರದೆ ಕೇವಲ ಚಾ ಹೀರಿದರು ಮತ್ತು ನಾವು ಲಘು ಉಪಾಹಾರ ಸೇವಿಸಿದ ಹೊರಟೇಬಿಟ್ಟೆವು….ಮರವಂತೆ ಬೀಚ್ ರಸ್ತೆಯ ಎಡಗಡೆ ರಾತ್ರಿಯ ನಶೆಯಲ್ಲಿ ಸಮುದ್ರರಾಜ ತನ್ನೊಳಗಿನ ಕೊಳೆಯನ್ನು ಮಥಿಸಿಕೊಂಡು ಶುಭ್ರನಾಗುತ್ತಲೇ ಇದ್ದ…….
ನಮ್ಮ ಕಾರಿನಲ್ಲಿ ನಾವೈವರು ಪಯಣದ ಮೆಲುಕು ಹಾಕುತ್ತಾ ಕುಂದಾಪುರ, ಉಡುಪಿ ಮಂಗಳೂರು ಮೂಲಕ ನಾವು ಹದಿನೈದನೇ ತಾರೀಕಿನ ಬೆಳಗಿನ ಜಾವ ಹೊರಟ ನನ್ನಜ್ಜನ ಮನೆ ಧರ್ಭೆಯ ಮನೆ ಅಂಗಳದಲ್ಲಿದ್ದೆವು, ಗಂಟೆ ಹತ್ತಾಗಿತ್ತು, ಬಾವ ಶಂಕರ ಪಯಣದುದ್ದಕ್ಕೂ ನೆನೆಸಿಕೊಳ್ಳುತಿದ್ದ ತನ್ನ ಪ್ರಿಯತಮೆ ರಾಧಿಕೆಯನ್ನು ಮತ್ತು ಮಕ್ಕಳನ್ನು ಕಾಣುವ ಕೂಡುವ ತವಕದಲ್ಲಿದ್ದಂತೆ ಕಂಡುಬರುತಿದ್ದರು. ಅತ್ತೆಯವರು ಹೊರಬಂದು ಬಾಯಾರಿಕೆ ಹಸಿವಿನ ಅಗತ್ಯತೆಗಳನ್ನು ಪೂರೈಸಿ, ನಮ್ಮ ಪಯಣದ ಸಂತಸವನ್ನು ಹಂಚಿಕೊಂಡು, ಪ್ರೀತಿಯ ಬಾವ ಶಂಕರರಿಗೆ ನಾವೆಲ್ಲರೂ ಪ್ರೀತಿಯ ನುಡಿಗಳನ್ನು ಹೇಳಿ ಶುಭ ಹಾರೈಸುತ್ತಾ, ನಮ್ಮ ನಮ್ಮ ಕಾರುಗಳಿಗೇರಿ ರಾತ್ರಿ ಹತ್ತೂ ಮುಕ್ಕಾಲಿಗೆ ನಮ್ಮ ನಮ್ಮ ಮನೆ ತಲುಪಿ, ಸ್ನಾನಾದಿ ಪೂರೈಸಿ, ಮನೆದೇವರ ಸನಿಹ ಮಾತೆ ಗಂಗೆಯನ್ನಿರಿಸಿ , ನಮಿಸಿದಲ್ಲಿಗೆ ನಮ್ಮ ಮಹಾ ಕುಂಭಮೇಳದತ್ತಣ ಪಯಣ ಸುಸಂಪನ್ನವಾಗಿತ್ತು.
ಹೆಚ್ಚಿನ ಮಾಹಿತಿಗಾಗಿ ರಾಯರ ಪರಮ ಭಕ್ತರದಾ ಜ್ಯೋತಿಷ್ಗಳನ್ನು ಸಂಪರ್ಕಿಸಿ 9535156490
ಮಾರುಕಟ್ಟೆಯಲ್ಲಿ ಅಡಿಕೆ ಇರುವ ಕೊರತೆ ಬಗ್ಗೆ ವಿದೇಶದಲ್ಲೂ ಚರ್ಚೆ ಆರಂಭವಾಗಿದೆ. ಹೀಗಾಗಿ ಭಾರತದ…
ಬಿಸಿಯಾದ ಅನ್ನದ ಜೊತೆ, ದೋಸೆ ಜೊತೆ ಹಲಸಿನಕಾಯಿ ರಚ್ಚೆಯ ಚಟ್ನಿ ಬಲು ಸೂಪರ್.
ಲೋಕ ಅದಾಲತ್‌ನಲ್ಲಿ ಐದು ಜಿಲ್ಲೆಗಳಲ್ಲಿ 31 ಸಾವಿರಕ್ಕೂ ಅಧಿಕ ಪ್ರಕರಣ ಇತ್ಯರ್ಥಗೊಳಿಸಲಾಗಿದೆ. ಚಿತ್ರದುರ್ಗದಲ್ಲಿ…
ಬನ್ನೇರುಘಟ್ಟ ಜೈವಿಕ ಉದ್ಯಾನದಲ್ಲಿ ಇತ್ತೀಚೆಗೆ ಎರಡು ಹುಲಿಗಳು ಒಟ್ಟು 6 ಮರಿಗಳಿಗೆ ಜನ್ಮ…
ಪವಿತ್ರ ಕುಮಾರಧಾರಾ ನದಿಯನ್ನೂ ಮಲಿನ ಮಾಡಲು ಹೊರಟಿದೆಯಾ ಭಕ್ತ ಸಮೂಹ..? ಅದಕ್ಕೆ ಕೆಲವು…