ಅಮ್ಮಾ, ನಿನ್ನನ್ನ ಸ್ತುತಿಸುವ ಮಂತ್ರಗಳಾಗಲಿ, ಯಂತ್ರಗಳಾಗಲಿ,ಮುದ್ರೆಗಳಾಗಲೀ,ಅಥವಾ ಕ್ಷೀಣವಾದ ಕೂಗಾಗಲೀ ನನಗರಿಯದು, ಆದರೆ, ಅಮ್ಮಾ ನಿನ್ನನ್ನ ಅನುಸರಿಸಿದರೆ ನೀನು ಕೈ ಬಿಡುವವಳಲ್ಲವೆಂಬ ದೃಢ ವಿಶ್ವಾಸವಿದೆಯಮ್ಮಾ……………ಮುಂದೆ ಓದಿ……..
ಎಂಬ ಶಾಂಕರ ಕ್ಷಮಾಪಣಾ ಸ್ತೋತ್ರದಂತೆ ನಮ್ಮನ್ನೂ ಪ್ರಯಾಗದೆಡೆಗೆ ಸೆಳೆದ ಅದ್ಭುತ ಶಕ್ತಿ ಯಾವುದು ಎಂಬುದು ವಿವರಣೆಗೆ ನಿಲುಕದ್ದು.ಹೌದು, ನೂರನಲ್ವತ್ತನಾಲ್ಕು ವರ್ಷಕ್ಕೊಮ್ಮೆ ಗುರುಗ್ರಹನ ಸೂರ್ಯದೇವನ ಸುತ್ತಲ ಪರಿಭ್ರಮಣ ಮುಗಿದಾಗ ಘಟಿಸುವ ಪೂರ್ಣಕುಂಭ ಮೇಳಕ್ಕೆ ನಮ್ಮ ಪಯಣ ಆಧ್ಯಾತ್ಮಿಕವೋ, ಸಾಂಸ್ಕೃತಿಕವೋ, ಮನರಂಜನವೋ ಎಂದು ವಿಮರ್ಷಿಸಿಕೊಂಡರೆ, ಅದು ಅವರವರ ಭಾವ ನಾವೆಯ ಭಾವದುತ್ತುಂಗ ಪಯಣವಷ್ಟೇ, ತುಂಗ ಬಿಂದುವಿನ ಅಳತೆ ಅವರವರ ಮನದ ಸಂವೇದನೆಯಷ್ಟೇ. ಈ ಕುಂಭಮೇಳದೆಡೆಗಿನ ಸೆಳೆತವಿದೆಯಲ್ಲಾ, ಹಲವು ಮಜಲುಗಳ ಯಾನ, ನಾನು ಸೊನ್ನೆ ನೀನು ಸನ್ನೆ, ನಾನು ಎಂಬುದು ಕೇವಲ ನಶ್ವರ ನಾವು ಎಂಬುದೇ ಪರಮ ಸತ್ಯ ಎಂಬ ನೋಟವನ್ನು ಸ್ಥಾಯೀಯಾಗಿಸಿದ ಭಾವ ಯಾನವಾಗಿತ್ತು.
ನಮ್ಮ ಪಯಣಕ್ಕೂ ಮುನ್ನ ತಯಾರಿ ತಯಾರಿ ತಯಾರಿ, ನಾನಿಲ್ಲದಾಗ ನಮ್ಮ ವ್ಯವಸ್ಥೆಗಳು ಹೇಗೆ ನಡೆದಾವೋ, ಉಳಿದಾವೋ ಎಂಬ ಆತಂಕ…. ನಾನಿಲ್ಲದಾಗ , ನಾನು ಮಾಡಿದ ಕೆಲಸ ಕಾರ್ಯಗಳು ಮುಂದುವರಿಯಬಹುದೇ ಎಂಬ ಮನದಾಳದ ದುಗುಡ……ಹೊರಟು ನಿಂತಾಗ ಮನದೊಳಗೆ ಭಾರ ಭಾರ ಛಾಯೆ….ಹೊರಟು ಮುಂದೆ ಮುಂದೆ ಸಾಗಿದಂತೆಯೇ ದುಗುಡಗಳೆಲ್ಲ ಮರೆಯಾಗಿ ಹೋಗಿ ಗಮ್ಯ ಸ್ಥಾನದತ್ತ ಕೇಂದ್ರೀಕೃತವಾಗಿ, ಆ ಪರಮ ವೈಭವದ ಮಹಾಮಾತೆ ಗಂಗೆಯ ಮಡಿಲಿಗೆ ತಲುಪಿದಾಗ ನಿರಾಳ ಭಾವ, ಮನಸ್ಸು ಹಗುರ ಹಗುರ….ನಾನೆಂಬುದು ಸೊನ್ನೆಯಾಗಿ ಪ್ರಾಪಂಚಿಕ ಭಾರವೇ ಮರೆತು ಹೋಗಿತ್ತು. ಅಮ್ಮನ ಮಡಿಲಲ್ಲಿ ಕುಳಿತ, ಪವಡಿಸಿದ ಮಗುವಿನ ನಿರಾಳತೆ ಮನಸ್ಸನ್ನು ತುಂಬಿತ್ತು…… ಅದ್ಭುತ ಸಾಮೂಹಿಕ ಜೀವ ಜಗತ್ತಿನ ನಿಜ ದರ್ಶನವಾಗಿತ್ತು. ಯಾವುದೇ ನಿಯತಿ ಶಾಸನಗಳ ಆವರಣವಿಲ್ಲ, ಆದೇಶಗಳಿಲ್ಲ, ಗೌಜು ಗದ್ದಲಗಳಿಲ್ಲ, ಹಗುರಾದ ಮನಸ್ಸಿನಿಂದ ಅನುಶಾಸನ ಪಾಲಕನಾಗಿ ತಲೆ ತಗ್ಗಿಸಿ ಗಮ್ಯ ಸ್ಥಾನದೆಡೆಗೆ ಮುನ್ನಡೆಯುದಷ್ಟೇ ನಮ್ಮ ಮನದ ಸೆಳೆತವಾಗಿತ್ತು.
ಹೌದಲ್ಲವೇ, ಕೊನೆಗೊಂದು ದಿನ ನಾನು ಇಲ್ಲದಾಗ ಕೂಡಾ ಇಷ್ಟೇ ಅಲ್ಲವೇ….ಗಮ್ಯದತ್ತ ಅನುಶಾಸನಾತ್ಮಕವಾಗಿ ಪಯಣವಷ್ಟೇ…ನಿರ್ಗಮಿತ ಸ್ಥಾನದಲ್ಲಿ ಅದೇ ಯಾಂತ್ರಿಕ ನಿಯತಿ ಪ್ರಭೃತಿ ಚಲನೆಗಳು ಮುಂದುವರಿದು ಕೊನೆಗೊಮ್ಮೆ ವಿಶ್ವಚೇತನದಲ್ಲಿ ಲಯಗೊಳ್ಳುವುದಷ್ಟೇ ಅಲ್ಲವೇ..
ಪಯಣದ ಮಾರ್ಗಕ್ಕೆ ಬರೋಣವಂತೆ…., ಹದಿನೈದನೇ ತಾರೀಕಿನ ಶುಭ ಶನಿವಾರದಂದು ಅರುಣೋದಯಕ್ಕೆ ಮುಂಚೆ ನಾವೈವರು ನನ್ನ ಸೋದರ ಬಾವ ಶಂಕರರ ಸಾರಥ್ಯದಲ್ಲಿ ಹೊರಟೇ ಬಿಟ್ಟೆವು.ಮೊದಲೇ ನಿರ್ಧರಿಸಿದಂತೆ ಪಯಣಿಸಿದ ನಾವು, ಪ್ರಯಾಗದಲ್ಲಿ ರವಿವಾರದ ಜನನಿಬಿಡತೆಯಿಂದ ತಪ್ಪಿಸಿಕೊಳ್ಳಲೋಸುಗ ನೇರವಾಗಿ ದೇಶದ ಪೂರ್ವ ಭಾಗದತ್ತ ಅಂದರೆ ಮಂಗಳೂರು, ಅಂಕೋಲಾ,ಖಾನಾಪುರ,ಬೆಳಗಾಮ್, ಕಿತ್ತೂರು ಸಂಕೇಶ್ವರದ ಮೂಲಕ ಮಹಾರಾಷ್ಟ್ರ ಪ್ರವೇಶಿಸಿ ಸಂಜೆ ಸುಮಾರು ಆರುವರೆಗೆ ಪಂಡರಾಪುರದ ವಿಠ್ಠಲನ ಸನ್ನಿಧಿ ತಲುಪಿದ್ದೆವು.ನೇರವಾಗಿ ವಿಠ್ಠಲ ದರ್ಶನಕ್ಕೆ ಹೋದ ನಾವು ಕಣ್ಣೆತ್ತದ ಸರತಿ ಸಾಲಿನಲ್ಲಿ ಕಾದು ಕುಳಿತ ಭಕ್ತ ಸಂದೋಹವನ್ನು ಕಂಡಾಗ ಬೆಚ್ಚಿದರೂ, ಧುತ್ತೆಂದು ನಮ್ಮೆದುರು ಪ್ರತ್ಯಕ್ಷನಾದ ವ್ಯಕ್ತಿಯೊಬ್ಬ ನಮ್ಮನ್ನು ನೋಡನೋಡುತ್ತಿದ್ದಂತೆಯೇ ವಿಠ್ಠಲನ ಮುಂದೆ ನಿಲ್ಲಿಸಿಬಿಟ್ಟಾಗ ಆಹಾ, ಮನಮೋಹಕನಾಗಿ ಅರಸಿನ ತಿಲಕದ ಮಧ್ಯೆ ಕೆಂಪು ತಿಲಕದಾರಿಯಾಗಿ, ಅರಸಿನ ಕಚ್ಚೆ ಪೀತಾಂಬರ ಉಟ್ಟು, ಭಕ್ತನ ಮೊರೆಯ ಆಲಿಸಲೋ ಎಂಬಂತೆ ಸೊಂಟಕ್ಕೆ ಕೈಯನಿಟ್ಟು, ಭಕ್ತನ ಮನೆಯ ಇಟ್ಟುಗೆಯ ಮೆಟ್ಟಲ ದಾಟಲೋ ಎಂಬಂತೆ ನಿಂತ ಜಗದೋದ್ಧಾರಕನ ಪ್ರಸನ್ನ ಮುಖ ದರ್ಶನವಾಯಿತು.ಧನ್ಯೋಸ್ಮಿ ಧನ್ಯೋಸ್ಮಿ…. ಮೊದಲ ದರ್ಶನ ಪಡೆದು ಹೊರಬಂದ ನಾವು ಮಗದೊಮ್ಮೆ ತಿರುಗಿ ಚೆಲುವ ಕಳ್ಳ ಕೃಷ್ಣನ ದರ್ಶನಕ್ಕಾಗಿ ಒಳಗೋಡಿದೆವು…ಪುನಃ ಪುನಃ ಪಂಡರೀಶನ ರೂಪ ಚೈತನ್ಯಗಳ ಮಧುರ ಸಾನ್ನಿಧ್ಯವನ್ನು ಮನದಣಿಯೆ ತುಂಬಿಕೊಳ್ಳುತ್ತಾ…..
ಕಾನಡಾ ರಾಜಾ ಪಂಡರಿಚಾ…
ವೇದಾ ನಾಹೀ ನಾಹೀ ಕಳ್ಹಲಾ
ಅಂತಪಾರಯಾ ಛಾ…ಕಾನಡಾ…Advertisement
ನಿರಾಕಾರ ತೋ ನಿರ್ಗುಣ ಈಶ್ವರ್ , ಕಸ ಪ್ರಕಟಲೋ ಅಸ ವಿಟೇವರ್..ಉಭಯ ಠೇವಿಲೇ ಹಾತ್ ಕಟೀವರ್….ಪುತಲಾ ಚೈತನ್ಯಾಚಾ…ಕಾನಡಾ ರಾಜಾ ಪಂಡರಿಚಾ..ಎಂಬ ಅಭಂಗ್ ಹಾಡಿನ ಮೂರ್ತರೂಪ ದರ್ಶನ ಪಡೆದಿದ್ದೆವು.ನಮ್ಮ ಮನದೊಳಗಿನ ಕುಂಭದಲ್ಲಿ ತುಂಬುವಷ್ಟು, ಮಹಾ ಮಹಿಮನ, ಪರಮಪುರುಷನ ಸಂದರ್ಶನವಾಗಿತ್ತು ಮನ ನಿರಾಳವಾಗಿತ್ತು….
ಅಲ್ಕಿಂದ ನೇರವಾಗಿ ರಾತ್ರಿ ಊಟ ಮುಗಿಸಿ, ವಸತಿ ಕೋಣೆಗೆ ಬಂದು, ಮರುದಿನದ ಉಜೈನಿ ಪಯಣದ ದೂರ ದಿಕ್ಕು ದೆಸೆಗಳ ಬಗ್ಗೆ ಮಾತನಾಡುತ್ತಾ ಇದ್ದಾಗ ನಿದ್ರಾದೇವಿ ನಮ್ಮನ್ನು ಆವರಿಸಿದ್ದಳು.
ಮುಂದುವರಿಯುವುದು... (ಉಜೈನಿಯತ್ತ ಪಯಣ, ಮಹಾಕಾಲನ ದರ್ಶನ, ಕುಂಭಮೇಳಕ್ಕೆ ಓಟ.)
ಈಗಿನಂತೆ ಮಾರ್ಚ್ 4 ಅಥವಾ 5 ರಿಂದ ಮೋಡದ ವಾತಾವರಣ ಹೆಚ್ಚಿರುವ ಸಾಧ್ಯತೆಗಳಿದ್ದು,…
ಅಭಿವೃದ್ಧಿ ಸವಾಲುಗಳ ನಡುವೆಯೂ ದೇಶದ ಎಲ್ಲ ತೈಲ ಉತ್ಪಾದನಾ ಕಂಪನಿಗಳು 2045ರ ವೇಳೆಗೆ…