ರಾಜ್ಯದಾದ್ಯಂತ ವರುಣ ಮತ್ತೆ ಅಬ್ಬರಿಸಿದ್ದಾರೆ. ಅದರಲ್ಲೂ ಪಶ್ಚಿಮಘಟ್ಟದ ತಪ್ಪಲು ಹಾಗೂ ಪಶ್ಚಿಮ ಘಟ್ಟದಲ್ಲಿ ಭಾರೀ ಮಳೆಯಾಗುತ್ತಿದೆ. ಭಾರೀ ಮಳೆಗೆ ಹಳ್ಳ ಕೊಳ್ಳಗಳು ತುಂಬಿ ಜಲ ಪ್ರಳಯದ ಪರಿಸ್ಥಿತಿ ಉಂಟಾಗಿದೆ. ಜನ ಜೀವನ ಅಸ್ಥವ್ಯಸ್ಥಗೊಂಡಿದೆ. ಶಿರಾಡಿ ಘಾಟಿಯಲ್ಲಿ ಗುಡ್ಡ ಕುಸಿತಗೊಂಡಿದೆ. ಕೊಡಗಿನಲ್ಲೂ ಭಾರೀ ಮಳೆಯಾಗುತ್ತಿದೆ, ಸಂಪಾಜೆ ಘಾಟಿ ರಸ್ತೆಯೂ ಸಂಚಾರ ಸ್ಥಗಿತದ ಭೀತಿಯಲ್ಲಿದೆ. ಚಾರ್ಮಾಡಿಯಲ್ಲಿ ಮರ ಬಿದ್ದು ಚಿಕ್ಕಮಗಳೂರು-ಮಂಗಳೂರು ಮಾರ್ಗ ಸಂಪೂರ್ಣ ಬಂದ್ ಆಗಿದೆ. ಬೆಳಗಾವಿ ಜಿಲ್ಲೆಯ ಘಟಪ್ರಭಾ ನದಿಯ ಅಬ್ಬರಕ್ಕೆ ಗೋಕಾಕ್ ತಾಲೂಕಿನ ಮೆಳವಂಕಿ ಗ್ರಾಮದಲ್ಲಿರುವ 500ಕ್ಕೂ ಹೆಚ್ಚು ಮನೆಗಳು ಜಲಾವೃತವಾಗಿದೆ.
ಭಾರೀ ಮಳೆಗೆ ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನ ಶಿರಾಡಿ ಘಾಟಿಯಲ್ಲಿ ಭಾರೀ ಅನಾಹುತ ಸಂಭವಿಸಿದೆ. ಶಿರಾಡಿ ಘಾಟ್‌ನ ದೊಡ್ಡತಪ್ಲೆ ಬಳಿ ರಾಷ್ಟ್ರೀಯ ಹೆದ್ದಾರಿ 75 ರಲ್ಲಿ ಭಾರೀ ಪ್ರಮಾಣದ ಭೂಕುಸಿತ ಸಂಭವಿಸಿದ್ದು, ರಸ್ತೆ ಬದಿಯ ಭೂಕುಸಿತಕ್ಕೆ ಲಾರಿ ಉರುಳಿ ಬಿದ್ದಿದ್ದು ಲಾರಿಯ ಸಮೀಪ ಮಂಗಳೂರಿಗೆ ಹೋಗುತ್ತಿದ್ದ ಎರಡು ಕಾರುಗಳು ಮತ್ತು ಟ್ಯಾಂಕರ್ ಸಿಲುಕಿವೆ.ಆತಂಕದ ವಾತಾವರಣ ಸೃಷ್ಟಿಯಾಗಿದೆ. ಸಕಲೇಶಪುರ- ಸುಬ್ರಹ್ಮಣ್ಯ ರೈಲ್ವೇ ಹಳಿಗೆ ಗುಡ್ಡ ಕುಸಿದು ಮಂಗಳೂರು- ಬೆಂಗಳೂರು ರೈಲು ಸ್ಥಗಿತಗೊಂಡಿದೆ. ಮಳೆಯಿಂದ ಚಾರ್ಮಾಡಿ ಘಾಟಿಯ ರಾಷ್ಟ್ರೀಯ ಹೆದ್ದಾರಿ 173ರಲ್ಲಿ ಬೃಹತ್ ಮರವೊಂದು ರಸ್ತೆಗುರುಳಿದೆ. ಇದರಿಂದಾಗಿ ಚಿಕ್ಕಮಗಳೂರು-ಮಂಗಳೂರು ಮಾರ್ಗ ಸಂಪೂರ್ಣ ಬಂದ್ ಆಗಿದೆ.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನೇತ್ರಾವತಿ ಹಾಗೂ ಕುಮಾರಧಾರಾ ನದಿ ತುಂಬಿ ಹರಿಯುತ್ತಿದೆ. ಉಪ್ಪಿನಂಗಡಿ ಬಳಿ ಎರಡೂ ನದಿಗಳು ಸಂಗಮವಾಗುವ ಸ್ಥಳದಲ್ಲಿ ನೀರು ಉಕ್ಕಿ ಹರಿಯುತ್ತಿದೆ. ಸಂಗಮ ಕ್ಷೇತ್ರದಲ್ಲಿ ಎರಡೂ ನದಿ ಸಂಗಮವಾಗುವ ಲಕ್ಷಣ ಇದೆ.