ಇಂದು ಅಡಿಕೆ ಬೆಳೆಗಾರರು ವಿವಿಧ ಸಮಸ್ಯೆಗಳಿಂದ ಬಳಲುತ್ತಿದ್ದಾರೆ. ಎಲೆಚುಕ್ಕಿ ರೋಗ, ಹಳದಿ ಎಲೆರೋಗದ ಜೊತೆಗೆ ಈಗ ಅಡಿಕೆ ಮರ ಸಾಯುವುದು ಕೂಡಾ ಕೇಳಿಬರುತ್ತಿದೆ. ಇದರ ಜೊತೆಗೆ ಅಡಿಕೆ ಹಾನಿಕಾರಕ ಎನ್ನುವ ಬಗ್ಗೆಯೂ ಅಪವಾದಗಳು ಬರುತ್ತಲೇ ಇವೆ. ಹೀಗಾಗಿ ಎಲ್ಲಾ ಅಂಶಗಳನ್ನೂ ಸೇರಿಸಿಕೊಂಡು ಅಡಿಕೆ ಬೆಳೆಗಾರರ ಸಮಸ್ಯೆಯನ್ನು ಬಗೆಹರಿಸುವ ನಿಟ್ಟಿನಲ್ಲಿ ವೈಜ್ಞಾನಿಕವಾಗಿ ಹಾಗೂ ಅದಕ್ಕೆ ಪೂರಕವಾಗಿ ಮಾಡಬೇಕಾದ ಅಗತ್ಯ ಕೆಲಸಗಳನ್ನು ಜೊತೆಯಾಗಿ ಮಾಡೋಣ ಎಂದು ಅಡಿಕೆ ಸಂಶೋಧನೆ ಮತ್ತು ಅಭಿವೃದ್ಧಿ ಪ್ರತಿಷ್ಟಾನದ ಅಧ್ಯಕ್ಷ ಡಾ.ಡಿ.ವೀರೇಂದ್ರ ಹೆಗ್ಗಡೆ ಹೇಳಿದರು.
ಅವರು ಸೋಮವಾರದಂದು ಧರ್ಮಸ್ಥಳದಲ್ಲಿ ನಡೆದ ಅಡಿಕೆ ಸಂಶೋಧನೆ ಮತ್ತು ಅಭಿವೃದ್ಧಿ ಪ್ರತಿಷ್ಟಾನ(ARDF) ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಸಭೆಯಲ್ಲಿ ಅಡಿಕೆ ಹಾನಿಕಾರಕ ಎನ್ನುವುದನ್ನು ಅಂತರಾಷ್ಟ್ರೀಯ ಮಟ್ಟದಲ್ಲಿ ಬಿಂಬಿಸುತ್ತಿರುವುದರ ವಿರುದ್ಧ ಸೂಕ್ತ ರೀತಿಯಲ್ಲಿ ಪ್ರತಿಕ್ರಿಯೆ ನೀಡಲು ಯೋಜಿಸಲು ಚಿಂತನೆ ನಡೆಯಿತು. 2008 ರಲ್ಲಿ ಅಡಿಕೆಯ ಬಗ್ಗೆ ಸಭೆ ನಡೆದಿತ್ತು, ಈಗಲೂ ಅದೇ ಮಾದರಿಯಲ್ಲಿ ಅಡಿಕೆಯ ಉತ್ತಮ ಅಂಶಗಳ ಬಗ್ಗೆ ತಜ್ಞರನ್ನೊಳಗೊಂಡ ಸಮಿತಿಯ ಮೂಲಕ ದಾಖಲೀಕರಣ ಮಾಡಿ ಎಲ್ಲಾ ಸಂಸ್ಥೆಗಳು ಜೊತೆಯಾಗಿ ಅಂತರಾಷ್ಟ್ರೀಯ ಮಟ್ಟದ ಸೆಮಿನಾರ್ ಮಾಡುವ ಬಗ್ಗೆ ಚರ್ಚಿಸಲಾಯಿತು. ಅಡಿಕೆಯ ಉತ್ತಮ ಅಂಶಗಳ ಬಗ್ಗೆ ಈಗಾಗಲೇ ಸಿಪಿಸಿಆರ್‌ಐ ಹಾಗೂ ಇತರ ತಜ್ಞರ ತಂಡ ಅಧ್ಯಯನ ಆರಂಭಿಸಿದೆ, ಈ ಬಗ್ಗೆ ಸಭೆ ನಡೆಸಿ ವಿಜ್ಞಾನಿಗಳೊಂದಿಗೆ ಮಾಹಿತಿ ತಿಳಿಯುವುದರ ಜೊತೆಗೇ ಎಲೆಚುಕ್ಕಿ ರೋಗ ನಿವಾರಣೆಗೆ ತಕ್ಷಣದ ಪರಿಹಾರ ಹಾಗೂ ಅಧ್ಯಯನದ ಬಗ್ಗೆಯೂ ಮಾಹಿತಿ ಪಡೆಯಲು ನಿರ್ಧರಿಸಲಾಯಿತು. ಮಹಾರಾಷ್ಟ್ರ ಸರ್ಕಾರ ಸುಪಾರಿ ಬ್ಯಾನ್,ತೆರವಿಗೆ ಸಂಸ್ಥೆಯ ಮೂಲಕ ಹಾಗೂ ಜನಪ್ರತಿನಿಧಿಗಳ ಮೂಲಕ ಮಹಾರಾಷ್ಟ್ರ ಸರ್ಕಾರಕ್ಕೆ ಮನವಿ ಮಾಡಲು ನಿರ್ಧರಿಸಲಾಯಿತು. ಪ್ರತಿದಿನ ಕೃಷಿ-ಗ್ರಾಮೀಣ-ಪರಿಸರ ಹಾಗೂ ಇತರ ಮಾಹಿತಿಗಾಗಿ ನಮ್ಮ “ದ ರೂರಲ್ ಮಿರರ್.ಕಾಂ”WhatsApp Channel ಗೆ ಇಲ್ಲಿ ಕ್ಲಿಕ್ ಮಾಡಿ
ಸಭೆಯಲ್ಲಿ ಅಡಿಕೆ ಸಂಶೋಧನೆ ಮತ್ತು ಅಭಿವೃದ್ಧಿ ಪ್ರತಿಷ್ಟಾನದ ಟ್ರಸ್ಟಿಗಳಾದ ಕ್ಯಾಂಪ್ಕೊ ಅಧ್ಯಕ್ಷ ಸತೀಶ್ಚಂದ್ರ ಎಸ್ ಆರ್, ಅಡಿಕೆ ಮಹಾಮಂಡಳದ ಅಧ್ಯಕ್ಷ ಅರಗ ಜ್ಞಾನೇಂದ್ರ, ಟಿಎಸ್‌ಎಸ್ ಅಧ್ಯಕ್ಷ ಗೋಪಾಲಕೃಷ್ಣ ವೆಂಕಟ್ರಮಣ ವೈದ್ಯ, ಮ್ಯಾಮ್ಕೋಸ್ ಉಪಾಧ್ಯಕ್ಷ ಮಹೇಶ್ ಎಸ್ ಎಚ್, ಕ್ಯಾಂಪ್ಕೋ ಆಡಳಿತ ನಿರ್ದೇಶಕ ಸತ್ಯನಾರಾಯಣ, ಕೃಷಿಕ ಬದನಾಜೆ ಶಂಕರ ಭಟ್,ಅಖಿಲ ಭಾರತ ಅಡಿಕೆ ಬೆಳೆಗಾರರ ಸಂಘದ ಅಧ್ಯಕ್ಷ ಮಹೇಶ್ ಪುಚ್ಚಪ್ಪಾಡಿ, ತುಮ್ಕೋಸ್ ಅಧ್ಯಕ್ಷ ಎಸ್ ಎಚ್ ಶಿವಕುಮಾರ್, ಅಡಿಕೆ ಸಂಶೋಧನೆ ಮತ್ತು ಅಭಿವೃದ್ಧಿ ಪ್ರತಿಷ್ಟಾನದ ಕಾರ್ಯನಿರ್ವಹಣಾಧಿಕಾರಿ ಡಾ. ಎಸ್ ಕೇಶವ ಭಟ್ ಹಾಗೂ ವಿಶೇಷ ಆಹ್ವಾನಿತರಾಗಿ ಬೆಳ್ತಂಗಡಿ ಶಾಸಕ ಹರೀಶ್ ಪೂಂಜ, ಕ್ಯಾಂಪ್ಕೊ ಮಾಜಿ ಅಧ್ಯಕ್ಷ ಕಿಶೋರ್ ಕುಮಾರ್ ಕೊಡ್ಗಿ, ನಿವೃತ್ತ ಉಪನ್ಯಾಸಕ ಡಾ.ವಿಘ್ನೇಶ್ವರ ಭಟ್ ವರ್ಮುಡಿ, ಅಕ್ವಾ ಬಯೋ ಸೊಲ್ಯೂಶನ್ ಸಿಇಒ ಆತ್ರೇಯ ಮೊದಲಾದವರು ಇದ್ದರು. ಪ್ರತಿದಿನ ಕೃಷಿ-ಗ್ರಾಮೀಣ-ಪರಿಸರ ಹಾಗೂ ಇತರ ಮಾಹಿತಿಗಾಗಿ ನಮ್ಮ “ದ ರೂರಲ್ ಮಿರರ್.ಕಾಂ”WhatsApp Channel ಗೆ ಇಲ್ಲಿ ಕ್ಲಿಕ್ ಮಾಡಿ


