e- ರೂಪದಲ್ಲಿ ಗ್ರಂಥಾಲಯಗಳು

October 16, 2024
8:37 PM
ಇಂದು ಗ್ರಂಥಾಲಯದ ಪರಿಕಲ್ಪನೆಯೂ ಆಧುನೀಕರಣಗೊಂಡಿದೆ. ಇಂದು ಪಠ್ಯೇತರವಾಗಿ ಓದುವ ಆಸಕ್ತಿಯುಳ್ಳ ವಿದ್ಯಾರ್ಥಿಗಳು ಅಂತರ್ಜಾಲವನ್ನು ಅವಲಂಬಿಸುತ್ತಾರೆ. ಮೊಬೈಲಿನಲ್ಲೇ ಅನೇಕ ಮಾಹಿತಿಗಳು ಸಿಗುತ್ತವೆ. ಈಗಿನ ಯುವ ವಿದ್ಯಾರ್ಥಿಗಳಿಗೆ ಕ್ಷಿಪ್ರವಾಗಿ ತುಂಬಾ ಮಾಹಿತಿಗಳ ಸಂಗ್ರಹವಾಗಬೇಕು. ಇದಕ್ಕಾಗಿ ಗ್ರಂಥಾಲಯಗಳಲ್ಲಿ ಅನೇಕ ಬಹುಬಳಕೆಯ ಪುಸ್ತಕಗಳನ್ನು ಡಿಜಿಟಲೀಕರಣಗೊಳಿಸಲಾಗಿದೆ. ಓದುವುದಕ್ಕೂ ಡಿಜಿಟಲ್ ಮಾಧ್ಯಮಗಳನ್ನು ಒದಗಿಸಲಾಗಿದೆ.

“ಇಲ್ಲಿಗೆ ಯಾರೂ ಓದುವುದಕ್ಕೆ ಬರುವುದಿಲ್ಲವಾ?” ಎಂದು ಕೇಳುವ ಸ್ಥಿತಿ ನನ್ನದಾಗಿತ್ತು. ಎತ್ತರವಾದ ಬೆಟ್ಟದ ತುದಿಯಲ್ಲಿ ನಿರ್ಮಿಸಲಾಗಿದ್ದ ಆ ವಿಸ್ತಾರವಾದ ಸುಸಜ್ಜಿತ ಗ್ರಂಥ ಭಂಡಾರದಲ್ಲಿ ಯಾವ ಓದುಗನೂ ಇರಲಿಲ್ಲ. ಬಾಗಿಲನ್ನು ತೆರೆದಿಟ್ಟಿದ್ದ ಒಬ್ಬನೇ ಒಬ್ಬ ಕುರ್ಚಿಯಲ್ಲಿ ಕುಳಿತು ಸ್ಥಿತಪ್ರಜ್ಞನಂತೆ ಹೊರಗೆ ನೋಡುತ್ತಿದ್ದ. ಆತನೂ ಏನನ್ನೂ ಓದುತ್ತಿರಲಿಲ್ಲ. ವಿಶಾಲವಾದ ಹಾಲ್‍ನಲ್ಲಿ ಉತ್ತಮವಾದ ಕಪಾಟುಗಳಲ್ಲಿ ಒಪ್ಪ ಓರಣವಾಗಿ ಜೋಡಿಸಿಟ್ಟಿದ್ದ ಸಾವಿರಾರು ಪುಸ್ತಕಗಳು ಆ ಗ್ರಂಥಾಲಯದ ಸಿರಿವಂತಿಕೆಯನ್ನು ಹೆಚ್ಚಿಸಿದ್ದುವು. ಆದರೆ ಫಲಾನುಭವಿಗಳಾಗಿ ಅಲ್ಲಿಗೆ ಯಾರೂ ಬಂದಿರಲಿಲ್ಲ. ಆ ಖಾಲಿ ವಾತಾವರಣವು ಸಹಜವಾಗಿ ನನ್ನಲ್ಲಿ ಮೇಲಿನ ಪ್ರಶ್ನೆಯನ್ನು ಮೂಡಿಸಿತ್ತು.

Advertisement
Advertisement
Advertisement

“ಈಗ ಯಾವ ಗ್ರಂಥಾಲಯಕ್ಕೆ ಜನ ಓದಲು ಬರುತ್ತಾರೆ?” ಎಂದು ಸಹಜ ಧ್ವನಿಯಲ್ಲಿ ನಿರ್ಲಿಪ್ತ ಭಾವದಿಂದ ಆತ ಮರು ಪ್ರಶ್ನೆ ಹಾಕಿದ್ದ. ಬೆಟ್ಟಕ್ಕೆ ಓದುಗರು ಬಾರದಿದ್ದ ಬಗ್ಗೆ ಆತನಿಗೆ ಯಾವುದೇ ಚಿಂತೆ ಇರಲಿಲ್ಲ. ಆತನ ಪ್ರಶ್ನೆಗೆ ನನ್ನಲ್ಲಿ ಉತ್ತರವಿರಲಿಲ್ಲ. ಮತ್ತೆ ಮುಂದುವರಿಸಿ ಆತ ಹೇಳಿದ, “ನಗರಗಳ ಮಧ್ಯದಲ್ಲಿರುವ ಗ್ರಂಥಾಲಯಗಳಲ್ಲಿ ಪುಸ್ತಕ ಓದಲು ಜನ ಬರುತ್ತಾರೆಯೆ? ಇಲ್ಲ, ಬರುವುದಿಲ್ಲ. ಯಾಕೆ ಬರುವುದಿಲ್ಲ? ಏಕೆಂದರೆ ಪುಸ್ತಕ ಓದಲು ಯಾರಿಗೂ ಆಸಕ್ತಿ ಇಲ್ಲ. ಓದಿ ಪಡೆಯುವುದಕ್ಕೇನಿದೆ? ಓದದೇ ಪಡೆದಿರುವ ಪದವಿ, ಉದ್ಯೋಗ, ಸಂಪತ್ತು ಮತ್ತು ಸೌಲಭ್ಯಗಳು ಸಿಗುತ್ತಿರುವಾಗ ಮತ್ಯಾವ ಸುಖಕ್ಕಾಗಿ ಓದುವುದು. ಹಾಗಾಗಿ ಗ್ರಂಥಾಲಯಗಳಲ್ಲಿ ಕುಳಿತು ಓದುವುದು ಹಿಂದಿನ ವಿಷಯವಾಯಿತು” ಎನ್ನುತ್ತ ಒಂದು ಕಿರುನಗೆ ಬೀರಿದ.

Advertisement

ಕೇವಲ ಚಡ್ಡಿ ಮತ್ತು ಮಾಸಿದ ಟೀ-ಶರ್ಟ್ ಧರಿಸಿದ್ದ, ವಯಸ್ಸಿನಲ್ಲಿ ವೃದ್ಧನಂತಿದ್ದ ಆತ ಅಲ್ಲಿಯ ನೌಕರನಿರಬೇಕು ಎಂದು ಅನ್ನಿಸಿತು. ಹಾಗಾಗಿ ಕೇಳಿದೆ, “ನೀವು ಇಲ್ಲಿ ಒಬ್ಬರೇ ಕುಳಿತಿದ್ದೀರಲ್ಲ? ಯಾರೂ ಬಾರದಿದ್ದರೂ ನೀವು ಇಲ್ಲಿ ಕುಳಿತಿರಬೇಕಾ? ನಿಮಗೆ ಇಲ್ಲಿ ಕಾಯುವ ನೇಮಕಾತಿ ನೀಡಿದ್ದಾರಾ?” ಎಂದೆ. “ಇಲ್ಲ. ನಾನು ಇಲ್ಲಿಯ ಮಾಲಿಕ” ಎಂದಾಗ ಅಚ್ಚರಿಯಾಯ್ತು. ಆತನಲ್ಲಿ ಹೆಚ್ಚಿನ ಎಂದು ವಿವರಣೆ ಕೇಳಿದೆ: “ಅದು ಹೇಗೆ?” “ಇದು ನನ್ನ ಅಪ್ಪನದು. ನಾನು ಇದನ್ನು ನೋಡಿ ಕೊಳ್ಳುತ್ತಿದ್ದೇನೆ. ನಾನು ಇರುವುದೂ ಇಲ್ಲೇ. ಆ ಮೂಲೆಯ ಕೋಣೆಯಲ್ಲೇ ನನ್ನ ವಾಸ. ಹೊಟ್ಟೆಗೆ ಗಂಜಿ ಬೇಯಿಸಿಕೊಳ್ಳುತ್ತೇನೆ. ಗಂಜಿಯಲ್ಲೇ ನನಗೆ ಸಂತೃಪ್ತಿ ಇದೆ.”

“ಸಂತೃಪ್ತಿ ಎಂಬುದು ನಮ್ಮಲ್ಲೇ ಇರುವುದಲ್ವಾ? ಕೆಲವರಿಗೆ ಎಷ್ಟಿದ್ದರೂ ಸಂತೃಪ್ತಿ ಇರುವುದಿಲ್ಲ” ಎನ್ನುತ್ತ ಕಿರುನಗೆ ಬೀರಿದ ಆತ. ವಿಷಾದವೆಲ್ಲ ಕಳೆದ ಮೇಲೆ ಉಳಿಯುವ ಸಂತೃಪ್ತಿಯ ಛಾಯೆ ಮುಖದಲ್ಲಿ ಕಂಡಿತು.

Advertisement

ಇದು ಗೋಕರ್ಣದ ಸಮುದ್ರ ತೀರದಲ್ಲಿರುವ ಕಿರುಬೆಟ್ಟದ ಮೇಲೆ ಸ್ಥಾಪಿಸಲ್ಪಟ್ಟಿರುವ ಒಂದು ಗ್ರಂಥಾಲಯ. ಅಲ್ಲಿದ್ದ ವಿದ್ವಾಂಸ ಮಹಾಬಲ ಗಣಪತಿ ವೇದೇಶ್ವರ ಎಂಬವರಲ್ಲಿದ್ದ ಅಪಾರ ಪುಸ್ತಕಗಳನ್ನು ಸಂರಕ್ಷಿಸಿಟ್ಟ ಗ್ರಂಥಾಲಯ ಅದು. ಫ್ರ್ರಾನ್ಸ್ ದೇಶದ ಅವರ ಅಭಿಮಾನಿಯೊಬ್ಬ ತನ್ನ ಆಧ್ಯಾತ್ಮ ಗುರುಗಳ ಪುಸ್ತಕಗಳು ಹಾಳಾಗಬಾರದೆಂದು ಸುಭದ್ರವಾದ ಮತ್ತು ವಿಶಾಲವಾದ ಕಟ್ಟಡವನ್ನು ಕಟ್ಟಿಸಿ ಕೊಟ್ಟಿದ್ದಾನೆ. ಆತನ ಈ ದಾನವು ಪಾಳುಬಿದ್ದ ಕಟ್ಟಡವಾಗಬಾರದೆಂದು ವೇದೇಶ್ವರರ ಮಗನೇ ಅದನ್ನು ಸ್ವಚ್ಚವಾಗಿಟ್ಟು ಪುಸ್ತಕಗಳನ್ನು ಸಂರಕ್ಷಿಸುತ್ತ ಆಗಮಿಸುವ ವಿರಳ ಓದುಗರಿಗೆ ನೀಡುವ ಗ್ರಂಥಪಾಲಕನಾಗಿಯೂ ದುಡಿಯುತ್ತಿದ್ದಾರೆ. ಅವರಿಗೆ ಅದರಿಂದ ಆದಾಯವೇನೂ ಇಲ್ಲ. ಜೀವನ ನಿರ್ವಹಣೆಗೆ ತನ್ನ ಮೂಲಮನೆಯಲ್ಲಿ ಪೌರೋಹಿತ್ಯದ ಆದಾಯದಲ್ಲಿ ಒಂದಿಷ್ಟು ಪಾಲು ಸಿಗುತ್ತದೆ. ಅದರಲ್ಲಿ ಅವರಿಗೆ ತೃಪ್ತಿ ಇದೆ.
ಗೋಕರ್ಣದ ಮುಖ್ಯ ಬೀಚ್‍ನ ದಕ್ಷಿಣಕ್ಕೆ ಇರುವ ಬೆಟ್ಟದ ಬುಡದಲ್ಲಿ ರಾಮಲಕ್ಷ್ಮಣರ ಗುಡಿ ಇದೆ. ಅಲ್ಲಿಂದ ಸುಮಾರು ನೂರಿಪ್ಪತ್ತು ಮೆಟ್ಟಿಲುಗಳನ್ನು ಹತ್ತಿ ಬೆಟ್ಟದ ತುದಿಗೆ ಏರಿದರೆ ಅಲ್ಲಿ ಸಮತಟ್ಟಾದ ಪದವಿನಲ್ಲಿ ರಾಮನ ಪಾದುಕೆಗಳನ್ನು ಪೂಜಿಸುವ ಭರತನ ಗುಡಿ ಇದೆ. ಅಲ್ಲಿ ಬೆಳೆದಿರುವ ಕುರುಚಲು ಗಿಡಗಳ ನಡುವೆ ಈ ಗ್ರಂಥಾಲಯ ಇದೆ. ಅಂದರೆ ಅದೀಗ ಭಾಗಶಃ ಇತಿಹಾಸಕ್ಕೆ ಸರಿದಿದೆ. ಇನ್ನು ಕೆಲವು ವರ್ಷಗಳ ಕಾಲ ಅದು ಬಾಗಿಲನ್ನು ತೆರೆದಿಟ್ಟು ಓದುಗರಿಗೆ ಮುಕ್ತವಾಗಿ ಲಭ್ಯವಾಗಬಹುದು. ಸಂಸ್ಕೃತದಲ್ಲಿ ಮುದ್ರಿತವಾದ ಪ್ರಾಚೀನ ವೇದಗಳು, ಕಾವ್ಯಗಳು, ಇಂಗ್ಲಿಷ್ ಸಾಹಿತ್ಯದ ವಿವಿಧ ಪ್ರಕಾರಗಳ ಪುಸ್ತಕಗಳು, ಕನ್ನಡದ ಡಿ.ವಿ.ಜಿ., ಮಾಸ್ತಿ, ಕಾರಂತ, ಕುವೆಂಪು ಮುಂತಾದ ದಿಗ್ಗಜರ ಸಾಹಿತ್ಯ ಕೃತಿಗಳು ಈ ಗ್ರಂಥಭಂಡಾರದಲ್ಲಿ ಇವೆ. ಆದರೆ “ಅವೆಲ್ಲ ಯಾರಿಗೆ ಬೇಕು?” ಎಂದು ಕೇಳುವ ಈ ವ್ಯಕ್ತಿ ಆರೋಗ್ಯವಾಗಿ ಇರುವವರೆಗೆ ಅವೆಲ್ಲವೂ ಸುರಕ್ಷಿತವಾಗಿರುತ್ತವೆ, ಕಟ್ಟಡವೂ ಭದ್ರವಾಗಿರುತ್ತದೆ. ಆಮೇಲೆ ಏನಾಗುತ್ತದೆ ಎಂಬ ಪ್ರಶ್ನೆಗೆ ಮಹಾಬಲ ಗಣಪತಿ ವೇದೇಶ್ವರರ ಅಭಿಮಾನಿ ಅದನ್ನು e-library ಮಾಡುವುದರ ಮೂಲಕ ಅದಕ್ಕೆ ಆಧುನಿಕತೆಯ ಸ್ಪರ್ಶ ನೀಡಿದ್ದಾನೆ ಎಂಬುದು ಸಮಾಧಾನಕರ ಅಂಶ.

ಗ್ರಂಥಾಲಯಗಳೆಂದರೆ ಕೇವಲ ಪುಸ್ತಕಗಳ ಸಂಗ್ರಹಾಲಯಗಳಲ್ಲ. ಅವು ಕಾಲಕಾಲಕ್ಕೆ ವಿಕಸನಗೊಂಡ ಮಾನವನ ಆಲೋಚನೆಗಳ ದಾಖಲೆಗಳು. ತತ್ವಶಾಸ್ತ್ರ, ಜೀವಶಾಸ್ತ್ರ, ಶರೀರಶಾಸ್ತ್ರ, ಭೌತಶಾಸ್ತ್ರ, ರಸಾಯನಶಾಸ್ತ್ರ ಇತ್ಯಾದಿಗಳಲ್ಲದೆ ವಿಶ್ವದ ವಿವಿಧ ಭಾಗಗಳಲ್ಲಿ ವಿಕಸನಗೊಂಡ ಚಿಂತನೆಗಳ ಪ್ರಕಟಿತ ಸಾಹಿತ್ಯದ ಸಂಗ್ರಹ ಸಿಗುವುದೇ ಗ್ರಂಥಾಲಯಗಳಲ್ಲಿ. ಮುಖ್ಯವಾಗಿ ಅವು ಓದುಗರಿಗೆ ಸ್ವಾಧ್ಯಾಯದ ಕೇಂದ್ರಗಳು. ವಿದ್ಯಾರ್ಥಿಗಳಿಗೆ ತಾವು ಪಠ್ಯದಲ್ಲಿ ಕಲಿತದ್ದನ್ನು ಬಲಪಡಿಸಿಕೊಳ್ಳಲು ಸ್ವಾಧ್ಯಾಯವು ಅಗತ್ಯವಾಗಿದೆ. ಶಿಕ್ಷಕರಿಗೂ ಸ್ವಾಧ್ಯಾಯವು ತೀರಾ ಅಗತ್ಯ. ಅದು ಅವರ ವೈಚಾರಿಕ ಸಾಮಥ್ರ್ಯವನ್ನು ಹೆಚ್ಚಿಸುತ್ತದೆ. ಅವರಿಗೆ ಪರಿಕಲ್ಪನೆಗಳ ಅರ್ಥ ಹಾಗೂ ಆನ್ವಯಿಕ ನೆಲೆಗಳ ಸ್ಪಷ್ಟತೆಯನ್ನು ಒದಗಿಸುತ್ತದೆ. ಅಲ್ಲದೆ ಪ್ರತಿಯೊಂದು ಕೃತಿಯ ಓದು ಹೊಸ ಕುತೂಹಲ ಹಾಗೂ ಶೋಧನೆಯ ಜಾಡಿನ ಮೇಲೆ ಹೊಸ ಬೆಳಕು ಚೆಲ್ಲುತ್ತದೆ. ಇದು ಹೊಸತೊಂದು ಕೃತಿಯನ್ನು ಹುಡುಕಿ ಓದಲು ಪ್ರೇರಣೆ ನೀಡುತ್ತದೆ. ಹಾಗಾಗಿಯೇ ಎಲ್ಲ ಶಿಕ್ಷಣ ಸಂಸ್ಥೆಗಳಲ್ಲೂ ಗ್ರಂಥಾಲಯ ಇರುವುದು ಕಡ್ಡಾಯವಾಗಿದೆ.

Advertisement

ನಾಡಿನ ವಿವಿಧ ಶಿಕ್ಷಣ ಸಂಸ್ಥೆಗಳ ಗ್ರಂಥಾಲಯಗಳಲ್ಲಿ ಇಟ್ಟಿರುವ ದಾಖಲೆಗಳ ಪ್ರಕಾರ ಇಂದಿನ ದಿನಗಳಲ್ಲಿ ಗ್ರಂಥಾಲಯಗಳಿಗೆ ಭೇಟಿ ನೀಡಿ ಓದುವವರ ಸಂಖ್ಯೆ ಕಡಿಮೆಯಾಗುತ್ತಿದೆ. ಕಾಲೇಜು ಮತ್ತು ವಿಶ್ವವಿದ್ಯಾಲಯಗಳ ಪ್ರಸ್ತುತ ವಿದ್ಯಾರ್ಥಿಗಳೂ ಬರುತ್ತಿಲ್ಲ, ಶಿಕ್ಷಕರೂ ಗ್ರಂಥಾಲಯಗಳಲ್ಲಿ ಕಾಣಿಸಿಕೊಳ್ಳುತ್ತಿಲ್ಲ. ವಿದ್ಯಾರ್ಥಿಗಳಿಗೆ ಪರೀಕ್ಷೆಯಲ್ಲಿ ಗಳಿಸುವ ಅಂಕಗಳೇ ಅವರ ಯಶಸ್ಸಿನ ಮಾನದಂಡವಾಗಿರುವುದರಿಂದ ಅವರೆಲ್ಲರೂ ಪಠ್ಯಪುಸ್ತಕಗಳನ್ನು ಹಾಗೂ ಶಿಕ್ಷಕರು ತರಗತಿಗಳಲ್ಲಿ ಓದಿ ಹೇಳುವ ನೋಟ್ಸ್ ಗಳನ್ನಷ್ಟೇ ಅವಲಂಬಿಸುತ್ತಾರೆ. ಏಕೆಂದರೆ ಪರೀಕ್ಷೆಗಳಲ್ಲಿ ಅಂಕಗಳನ್ನು ಪಡೆಯಲು ನಿಗದಿತ ಪಠ್ಯಗಳ ಓದು ಸಾಕಾಗುತ್ತದೆ. ಆದರೆ ಇಂತಹ ಧೊರಣೆ ಸರಿಯಲ್ಲ. ಸ್ಪರ್ಧಾತ್ಮಕವಾಗಿ ಯಶಸ್ವಿಯಾಗಲು ಸ್ವಾಧ್ಯಾಯದಿಂದ ಪಡೆದ ಜ್ಞಾನ ಅಗತ್ಯ. ಹಾಗಾಗಿ ವಿದ್ಯಾರ್ಥಿಗಳಿಗೆ ಪ್ರಾಥಮಿಕ ಶಿಕ್ಷಣದ ಹಂತದಿಂದಲೇ ಪಠ್ಯೇತರವಾಗಿ ಗ್ರಂಥಾಲಯಗಳಲ್ಲಿ ಓದುವ ಅಭ್ಯಾಸವನ್ನು ಬೆಳೆಸಬೇಕು. ಆದರೆ ನಮ್ಮ ಶಿಕ್ಷಣದಲ್ಲಿ ಅದಿಲ್ಲ. ಅದಿರಬೇಕಾದರೆ ಪಠ್ಯಪೂರಕವಾಗಿ ಇತರ ಪುಸ್ತಕಗಳನ್ನು ಓದುವ ಹವ್ಯಾಸವನ್ನು ಪ್ರಾಥಮಿಕ ಹಂತದಿಂದಲೇ ಶಾಲೆ ಮತ್ತು ಮನೆಗಳಲ್ಲೇ ಬೆಳೆಸಬೇಕು.

ಇಂದು ಗ್ರಂಥಾಲಯದ ಪರಿಕಲ್ಪನೆಯೂ ಆಧುನೀಕರಣಗೊಂಡಿದೆ. ಇಂದು ಪಠ್ಯೇತರವಾಗಿ ಓದುವ ಆಸಕ್ತಿಯುಳ್ಳ ವಿದ್ಯಾರ್ಥಿಗಳು ಅಂತರ್ಜಾಲವನ್ನು ಅವಲಂಬಿಸುತ್ತಾರೆ. ಮೊಬೈಲಿನಲ್ಲೇ ಅನೇಕ ಮಾಹಿತಿಗಳು ಸಿಗುತ್ತವೆ. ಈಗಿನ ಯುವ ವಿದ್ಯಾರ್ಥಿಗಳಿಗೆ ಕ್ಷಿಪ್ರವಾಗಿ ತುಂಬಾ ಮಾಹಿತಿಗಳ ಸಂಗ್ರಹವಾಗಬೇಕು. ಇದಕ್ಕಾಗಿ ಗ್ರಂಥಾಲಯಗಳಲ್ಲಿ ಅನೇಕ ಬಹುಬಳಕೆಯ ಪುಸ್ತಕಗಳನ್ನು ಡಿಜಿಟಲೀಕರಣಗೊಳಿಸಲಾಗಿದೆ. ಓದುವುದಕ್ಕೂ ಡಿಜಿಟಲ್ ಮಾಧ್ಯಮಗಳನ್ನು ಒದಗಿಸಲಾಗಿದೆ. ಕಂಪ್ಯೂಟರ್‍ನಲ್ಲಿ ಆಕರ ಗ್ರಂಥದ ಪುಟಗಳನ್ನು ತೆರೆದು ಅದರ ಪ್ರತಿ ತೆಗೆದು ತಮ್ಮ ಪುಟಕ್ಕೆ ಅಂಟಿಸಿ ವಿದ್ಯಾರ್ಥಿಗಳು ಸಂಗ್ರಹಿಸುತ್ತಾರೆ. ಅದನ್ನು ಮನೆಯಲ್ಲೇ ಕುಳಿತು ಓದುತ್ತಾರೆ. ಇದರಿಂದಾಗಿ ಒಂದೊಂದೇ ಪುಸ್ತಕವನ್ನು ಗ್ರಂಥಾಲಯದಲ್ಲಿ ಕುಳಿತು ಓದುವ ಅಗತ್ಯ ಬೀಳುವುದಿಲ್ಲ. ಮಾಹಿತಿ ಮಾತ್ರವಲ್ಲದೆ, ಅಗತ್ಯದ ಫೋಟೋಗಳನ್ನು ಕೂಡಾ ಕಾಪಿ ಮಾಡಲು ಸಾಧ್ಯವಿರುವ “ಡಿಜಿಟಲ್ ಗ್ರಂಥಾಲಯಗಳು” e-library ಗಳು ಇಂದಿನ ಓದುಗರ ಆಕರ್ಷಣೆಯಾಗಿವೆ. ಏನಿದ್ದರೂ ಸಣ್ಣ ಮಕ್ಕಳ ಕೈಗೆ ಮೊಬೈಲ್ ಕೊಟ್ಟು ಪುಸ್ತಕ ಓದು ಎನ್ನುವುದು ಅಪಾಯ ಎಂಬ ಹೆತ್ತವರ ಆತಂಕ ಸಹಜ. ಹಾಗಾಗಿ ಅವರಿಗಾಗಿ ಶಾಲೆಗಳಲ್ಲಿ ಮುದ್ರಿತ ಪುಸ್ತಕಗಳ ಗ್ರಂಥಾಲಯಗಳೇ ಬೇಕು.

Advertisement
ಬರಹ :
ಚಂದ್ರಶೇಖರ ದಾಮ್ಲೆ

 

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ಡಾ.ಚಂದ್ರಶೇಖರ ದಾಮ್ಲೆ

ಡಾ. ಚಂದ್ರಶೇಖರ ದಾಮ್ಲೆಯವರು ಸುಳ್ಯದ ನೆಹರು ಮೆಮೋರಿಯಲ್ ಕಾಲೇಜ್ ನಲ್ಲಿ ಸಮಾಜಶಾಸ್ತ್ರ ಪ್ರಾಧ್ಯಾಪಕರಾಗಿ 35 ವರ್ಷಗಳಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದವರು. ವೃತ್ತಿಯಲ್ಲಿರುವಾಗಲೇ ರಾಷ್ಟ್ರೀಯ ಸೇವಾ ಯೋಜನಾಧಿಕಾರಿಯಾಗಿ ಸಮಾಜಸೇವೆಯಲ್ಲಿ ತೊಡಗಿಕೊಂಡವರು. ಸಾಂಸ್ಕೃತಿಕ ಸಂಘದ ಮೂಲಕ ಮಕ್ಕಳಿಗೆ ಯಕ್ಷಗಾನ ನಿರ್ದೇಶಕನ, ಸುಳ್ಯದಲ್ಲಿ ಯಕ್ಷಗಾನ ಹಿತರಕ್ಷಣಾ ವೇದಿಕೆಯ ಸ್ಥಾಪನೆ, ಸಂಪೂರ್ಣ ಸಾಕ್ಷರತಾ ಆಂದೋಲನದಲ್ಲಿ ಸಂಪನ್ಮೂಲ ವ್ಯಕ್ತಿ, ಕನ್ನಡಮಾಧ್ಯಮದಲ್ಲಿ ಸ್ನೇಹ ಶಿಕ್ಷಣ ಸಂಸ್ಥೆಯ ಸ್ಥಾಪನೆ ಮುಂತಾದ ಸಮಾಜಮುಖಿ ಕಾರ್ಯಗಳಲ್ಲಿ ಸೇವೆ ನೀಡಿದವರು. ಶಿಕ್ಷಣದಲ್ಲಿ ಸೃಜನಶೀಲತೆಗೆ ಒತ್ತು ನೀಡುವ ದಾಮ್ಲೆಯವರು ಸಂಶೋಧಕರಾಗಿದ್ದು ಕನ್ನಡ ಇಂಗ್ಲಿಷ್ ಭಾಷೆಗಳಲ್ಲಿ ಕೃತಿ ರಚನೆ ಮಾಡಿದವರು. 'ನೆಲದನಂಟು' ಮತ್ತು "ಶಾಲೆ ಎಲ್ಲಿದೆ?" ಇವು ಇವರ ಪ್ರಸಿದ್ಧ ಕಾದಂಬರಿಗಳು. ಅನೇಕ ಪ್ರಶಸ್ತಿ ಸಮ್ಮಾನಗಳಿಂದ ಗೌರವಿಸಲ್ಪಟ್ಟ ದಾಮ್ಲೆಯವರಿಗೆ ಅಸಾಮಾನ್ಯ ಕನ್ನಡಿಗ ಪ್ರಶಸ್ತಿ, ಯಕ್ಷಮಂಗಳ ಪ್ರಶಸ್ತಿ, ಅರಣ್ಯಮಿತ್ರ ಮತ್ತು ಜಲಮಿತ್ರ ಪ್ರಶಸ್ತಿ, Nation Builder ಪ್ರಶಸ್ತಿ ಮುಂತಾದುವು ಲಭಿಸಿವೆ. ಹೊಸದಿಗಂತ ಪತ್ರಿಕೆಯಲ್ಲಿ "ಇದ್ಯಾಕೆ ಹೀಗೆ " ಅಂಕಣವನ್ನು ಬರೆಯುತ್ತಿದ್ದರು.

ಇದನ್ನೂ ಓದಿ

ಮನೆಯು ಮತ್ತೊಮ್ಮೆ ಮೊದಲ ಪಾಠಶಾಲೆಯಾಗಲಿ
November 20, 2024
8:49 PM
by: ಡಾ.ಚಂದ್ರಶೇಖರ ದಾಮ್ಲೆ
ಭತ್ತ ಬೆಳೆಸುವ ಪ್ರಯೋಗ, ಅಕ್ಕಿ ತಯಾರಿಸುವ ಪ್ರಕ್ರಿಯೆ
November 13, 2024
9:43 PM
by: ಡಾ.ಚಂದ್ರಶೇಖರ ದಾಮ್ಲೆ
ಆಧುನಿಕ ಯುಗದಲ್ಲಿ ಭಾರತೀಯ ಪ್ರಜೆ
November 6, 2024
6:42 AM
by: ಡಾ.ಚಂದ್ರಶೇಖರ ದಾಮ್ಲೆ
ವಕ್ಫ್ ಆಸ್ತಿ ವಿವಾದ | ಕಾಂಗ್ರೇಸ್ಸಿನ ತುಷ್ಟೀಕರಣದ, ಬಿಜೆಪಿಯ ದ್ವೇಷ ರಾಜಕಾರಣದ ಮತ್ತು ಮಾಧ್ಯಮಗಳ ವಿವೇಚನಾ ರಹಿತ ಚರ್ಚೆಗಳ ಭಾವನಾತ್ಮಕ ಪ್ರನಾಳ ಶಿಶು……..
November 5, 2024
7:22 AM
by: ವಿವೇಕಾನಂದ ಎಚ್‌ ಕೆ

You cannot copy content of this page - Copyright -The Rural Mirror