ಪ್ರಕೃತಿಯೊಡಲು ವಿಸ್ಮಯದ ಕಡಲು..! ಇಲ್ಲಿ ದೃಷ್ಟಾದೃಷ್ಟ ಸಂಗತಿಗಳು ಅದೆಷ್ಟೋ..!ಮುಕ್ತತೆಯನ್ನೂ ನಿಗೂಢತೆಯನ್ನೂ ಒಟ್ಟಾಗಿ ಬೆಸೆದುಕೊಂಡಿರುವ ಪ್ರಕೃತಿಯು ಆಗಾಗ್ಗೆ ನಮ್ಮ ಗಮನ/ಕಣ್ಮನ ಸೆಳೆಯುವಂಥ ಸಂಗತಿಗಳನ್ನು ಯಾವುದೋ ಒಂದು ರೂಪದಿಂದ ಪ್ರಕಟಿಸುತ್ತಲೇ ಇರುತ್ತದೆ. ಅದಕ್ಕೊಂದು ಪುಟ್ಟ ನಿದರ್ಶನ ಈಚೆಗೆ ಮನೆಯಲ್ಲಿ ಕಂಡುಬಂದ ಪುಟ್ಟಚಿಟ್ಟೆ.
ದೂರದಿಂದ ಗಮನಿಸಿದಾಗ ಸಾಮಾನ್ಯ ಹಾತೆಯಂತೆ ಗೋಚರಿಸಿದ ಆ ಪಾತರಗಿತ್ತಿಯನ್ನು ಸಮೀಪದಿಂದ ಕಂಡ ನಾನು ಮಡದಿಮಕ್ಕಳ ಸಹಿತ ಬೆರಗಾದೆ. ಅದರ ರೆಕ್ಕೆಯ ಮೇಲೆ ಕಣ್ಣು , ಮೂಗು , ಮೀಸೆ, ಬಾಯಿ , ಸಪೂರವಾದ ದಂತಪಂಕ್ತಿಯಂಥ ರಚನೆಯ ಜೊತೆಗೆ ರೇಖಾವಿನ್ಯಾಸವೂ ಇದೆ. ಒಟ್ಟು ರಚನೆಯು ಕಲಾವಿದನೋರ್ವನ ಕುಂಚದಲ್ಲಿ ಮೂಡಿಬಂದ ಚಿತ್ರದಂತಿದೆ. (ನನಗೂ ನಮ್ಮ ಮನೆಯವರಿಗೂ ಯಕ್ಷಗಾನದ ಬಣ್ಣದ ವೇಷದ ಬಣ್ಣಗಾರಿಕೆಯಂತೆಯೂ ರಕ್ಕಸದೂತನ ಬಣ್ಣಗಾರಿಕೆಯಂತೆಯೂ ಕಂಡಿತು.) ಆದರೆ ಅದು ಚಿತ್ರವಾಗಿರಲಿಲ್ಲವೆಂಬುದೇ ವಿಸ್ಮಯ! ಚಿಟ್ಟೆಯದು ಜೀವಂತ! ಅದರ ರೆಕ್ಕೆಯ ಮೇಲಣ ಕಲೆಯೂ ಸಜೀವ! ಕಲೆಯು ಕಟ್ಟೋಣವಲ್ವೇ? ಕಟ್ಟೋಣಕ್ಕೆ ಕೌಶಲ ಬೇಕು ತಾನೇ? ಕಲಾವಿದನು ಕುಶಲಿಯು, ಸೃಜನಶೀಲನು! ಆದರೆ, ಎಂತೆಂಥ ಬಣ್ಣ ಬಣ್ಣದ ಜೀವಿಗಳನ್ನು ಸೃಷ್ಟಿಸಿರುವ ಜಡವನ್ನೂ ಜೀವವನ್ನಾಗಿ ಪರಿವರ್ತಿಸಬಲ್ಲ ತಾಕತ್ತುಳ್ಳ ಪರಮಾತ್ಮನೇ ಅಲ್ವೇ ಪರಮಕಲಾವಿದ? ‘ಮಾನವಕಲಾವಿದ’ನಿಗೆ ‘ಪರಮಕಲಾವಿದ’ನ ಪ್ರಸಾದವಷ್ಟೇ! ಭಗವಂತನಂಥ ಸೃಜನಶೀಲತೆ ಯಕಃಶ್ಚಿತ್ ಮಾನವನಿಗೆಲ್ಲಿಂದ ಬರಬೇಕು?
ಬೆಳೆಯುತ್ತಿರುವ ಮಕ್ಕಳು ಶೈಶವಾಸ್ಥೆಯಿಂದಲೇ ತಮ್ಮ ಸುತ್ತುಮುತ್ತಲಿನ ಪ್ರಕೃತಿ-ಪರಿಸರಗಳನ್ನು ಬೆರಗುಗಣ್ಣಿನಿಂದ ನೋಡುತ್ತಾ ಅಚ್ಚರಿಪಡುವುದು ಮತ್ತು ಇಲ್ಲಿನ ಆಗುಹೋಗುಗಳನ್ನರ್ಥೈಸಿಕೊಳ್ಳಲು ಪ್ರಯತ್ನಿಸುವುದು ಸಹಜವಷ್ಟೇ! ವಯಸ್ಕರನ್ನು ಕೂಡಾ ಅಚ್ಚರಿಗೊಳಪಡಿಸುವ ಸಂಗತಿಗಳು ಅಗಾಗ್ಗೆ ಕಾಣಸಿಗುತ್ತವೆಯೆಂಬುದು ಹೊಸವಿಚಾರವೇನಲ್ಲ. ಆದರೊಂದು, ವಯಸ್ಕರ ಮಟ್ಟಿಗೆ – ಬಾಹ್ಯದೃಷ್ಟಿಯ ಜೊತೆಗೇ ಅಂತರ್ದೃಷ್ಟಿಯೂ ಜಾಗೃತವಾಗಿದ್ದು ಚಕ್ಷುನಾಲ್ಕನ್ನೂ (ಚರ್ಮಚಕ್ಷು2 + ಅಂತಃಚಕ್ಷು/ಜ್ಞಾನಚಕ್ಷು 2) ತೆರೆದು ನೋಡಿದರೆ ಮಾತ್ರ ವಿಸ್ಮಯಾನಂದಕ್ಕೊಳಗಾಗಬಹುದು ಅಥವಾ ಮುಗ್ಧಭಾವದಿಂದ , ಶಿಶುಕೌತುಕ ದೃಷ್ಟಿಯಿಂದ ನೋಡಿದರೂ ಆದೀತು ; ಅದು ಆಗಬೇಕು.
ಹಲ್ಲಿಯ ಆಕ್ರಮಣಕ್ಕೊಳಗಾಗಲಿದ್ದ ಆ ಪಾತರಗಿತ್ತಿಯನ್ನು ನನ್ನಾಕೆ ಬಹಳ ಜಾಗ್ರತೆಯಿಂದ ರಕ್ಷಿಸಿ ಹೊರಕ್ಕೆ (ಪ್ರಕೃತಿಯೊಳಕ್ಕೆ ?)ಬಿಟ್ಟಾಗ ಅದೇನೋ ಸಮಾಧಾನ ನಮಗೆಲ್ಲ! ಜೀವವಾಗಲೀ ಜಡವಾಗಲೀ ಎಲ್ಲವೂಪ್ರಕೃತಿಯೇ ಹೌದಲ್ಲ!ನಾವೂ ಅಷ್ಟೇ ತಾನೇ?
ಮಳೆ ಕೊರತೆಯಿಂದ ಬರ ಪರಿಸ್ಥಿತಿ ಎದುರಾಗಿರುವ ಹಿನ್ನೆಲೆಯಲ್ಲಿ ಜಾನುವಾರುಗಳಿಗೆ ಮೇವಿನ ಕೊರತೆಯಾಗದಂತೆ ರಾಜ್ಯ…
ಗುಜರಾತ್‌ನ ನೀರಿನ ಆಡಳಿತದ ಅನುಭವಗಳನ್ನು ಆಧರಿಸಿದ ‘ಗುಜರಾತ್‌ನಿಂದ ಭಾರತಕ್ಕೆ ಜಗತ್ತಿಗೆ ನೀರಿನ ಪಾಠಗಳು’…
ಅಡಿಕೆ ಮತ್ತು ತೆಂಗಿನ ತೋಟಗಳಲ್ಲಿ ಉಪಬೆಳೆಯಾಗಿ ಕೋಕೋಗೆ ಉತ್ತಮ ಅವಕಾಶಗಳಿದ್ದರೂ ಬೆಲೆ ಏರಿಳಿತ,…
ಅಡಿಕೆ ಕ್ಷೇತ್ರದಲ್ಲಿ ಉತ್ಪಾದನೆ, ದಾಸ್ತಾನು, ಬೇಡಿಕೆ, ಆಮದು, ಮಾರುಕಟ್ಟೆ ಮತ್ತು ಉತ್ಪಾದನಾ ವೆಚ್ಚದ…
ಕರ್ನಾಟಕದಿಂದ ನೈಋತ್ಯ ಮುಂಗಾರು ಸಂಪೂರ್ಣ ಹಿಂದೆ ಸರಿದಿದ್ದು, ಅ.11ರ ಸುಮಾರಿಗೆ ಹಿಂಗಾರು ಆರಂಭಕ್ಕೆ…
ಗದಗ ಜಿಲ್ಲೆಯಲ್ಲಿ ಎಫ್‌ಎಕ್ಯೂ ಗುಣಮಟ್ಟದ ಸೂರ್ಯಕಾಂತಿಯನ್ನು ಬೆಂಬಲ ಬೆಲೆಯಲ್ಲಿ ಖರೀದಿಸಲು ಜಿಲ್ಲಾಡಳಿತ ನಿರ್ಧರಿಸಿದೆ.…