ಪ್ರೇಯಸಿಯ ಹತ್ಯೆಯಾದ ಬಳಿಕವೇ ಪ್ರೇಮ ವೈಫಲ್ಯದ ಪ್ರಕರಣ ಬಯಲಾಗುವ ವಿದ್ಯಮಾನವು ಇತ್ತೀಚೆಗೆ ಹೆಚ್ಚಾಗುತ್ತಿದೆ. ಅಂತಹ ವರದಿಗಳು ದಿನಕ್ಕೊಂದೆರಡು ಹೊಸತು ಹೊಸತು ಬರುತ್ತಿವೆ. ಲಿವ್-ಇನ್-ರಿಲೇಶನ್‍ನಲ್ಲಿ ಮನೆಯೊಳಗಿದ್ದವರ ನಡುವಿನ ಸಂಬಂಧಗಳು ಬಿರುಕುಗೊಂಡ ಸುಳಿವು ಯಾರಿಗೂ ಸಿಗುವುದಿಲ್ಲ. ಅದರ ವಾಸನೆ ಬರುವುದು ಹೆಣ ಕೊಳೆತಾಗಲೇ ಎಂಬುದು ಇಂದಿನ ದುರಂತ. ಒಬ್ಬರ ಘಾತಕತನದ ಅರಿವೇ ಇಲ್ಲದೆ ಇನ್ನೊಬ್ಬರು ಸಾಯುವುದೆಂದರೆ ಅದೆಂತಹ ಮರಣ? ನಿದ್ರೆಯ ಮಾತ್ರೆ ಕೊಟ್ಟು ಅಥವಾ ಅನ್ನದಲ್ಲಿ ವಿಷ ಹಾಕಿ ನೋವಿನ ಅನುಭವವನ್ನೇ ನೀಡದೆ ಕೊಂದಿದ್ದರೆ ಅದನ್ನು ಮೌನ ಮರಣವೆಂದೂ ಹೇಳಬಹುದು. ಆದರೆ ರೇಪ್ ಮಾಡಿ ಬಾಯಿಗೆ ಬಟ್ಟೆ ತುರುಕಿ ಬೊಬ್ಬಿಡಲೂ ಬಿಡದೆ ಹೆದರಿಸಿ ಹೊಡೆದು ಕಡಿದು ಕೊಂದಿದ್ದರೆ ಅದನ್ನು ‘ನಿಸ್ವರದ’ ಸಾವು ಎನ್ನಬೇಕಷ್ಟೇ. ಅಂದರೆ ಸಾಯುವವರಿಗೆ ಉಸಿರೆತ್ತಲೂ ಅವಕಾಶ ನೀಡದೆ ಮುಗಿಸಿಬಿಡುವ ಕೊಲೆ ಇದು. ಕೊಂದ ಬಳಿಕ ಹೆಣದೊಂದಿಗೆ ಕೊಲೆಗಾರ ಮಲಗಿರುವ ಘಟನೆಗಳೂ ವರದಿಯಾಗಿವೆ. ಆನಂತರವೇ ದೇಹವನ್ನು ತುಂಡು ತುಂಡು ಮಾಡಿ ಫ್ರಿಜ್‍ನಲ್ಲಿಟ್ಟು ದಿನಾಲೂ ಒಂದೆರಡು ಕಡೆಗಳಲ್ಲಿ ಆ ತುಂಡುಗಳನ್ನು ಎಸೆದು ಮುಗಿಸುವಷ್ಟರವರೆಗೂ ಕ್ರೌರ್ಯದ ಜ್ವರ ಆರುವುದಿಲ್ಲವೆಂಬುದೇ ವಿಶೇಷ. ಅಂದರೆ ಸಂಬಂಧಗಳು ಹಳಸಿದ ಬಳಿಕ ಕ್ರೌರ್ಯವು ಕುದಿಯಲು ಎಷ್ಟು ದಿನಗಳು ಬೇಕಾಗುತ್ತವೆ ಎಂಬುದು ಅಧ್ಯಯನಕ್ಕೆ ಸಿಗದ ವಿಷಯ.
ಮುಂಬೈಯಲ್ಲಿ ಮೇಲೆ ಹೇಳಿದಂತಹ ಕ್ರೌರ್ಯವನ್ನು ಮೆರೆದ ಒಬ್ಬ ಪಾಗಲ್ ಪ್ರೇಮಿ ತನ್ನ ಪ್ರೇಯಸಿಯ ದೇಹದ ಭಾಗಗಳನ್ನು ಚೀಲದಲ್ಲಿ ತುಂಬಿಕೊಂಡು ಜನಸಂಚಾರ ಇಲ್ಲದ ಜಾಗಗಳಲ್ಲಿ ಎಸೆದು ತಾನೊಬ್ಬನೇ ಬದುಕುವ ಪ್ರಯತ್ನ ಮಾಡಿದ. ಆದರೆ ಕೊಲೆಪಾತಕಿ ಏನಾದರೂ ಸುಳಿವು ಬಿಟ್ಟಿರುತ್ತಾನೆಂಬ ಮಾತು ನಿಜವಾಯಿತು. ತನಿಖೆಯ ಬಳಿಕ ತಿಳಿದ ಪ್ರಕಾರ ಆ ಹುಡುಗಿ ಪ್ರೇಮದ ಹುಚ್ಚಿನಲ್ಲಿ ಹೆತ್ತವರನ್ನು ಬಿಟ್ಟು ಮುಂಬೈಗೆ ಬಂದು ಪೂರ್ಣ ವಿಶ್ವಾಸವಿಟ್ಟು ವಿವಾಹಪೂರ್ವ ಸಂಬಂಧಕ್ಕೆ ಒಳಗಾಗಿದ್ದಳು. ಆದರೆ ಅವಳ ವಿಧಿ ಬೇರೆಯೇ ಇತ್ತು. ಸಂಸ್ಕಾರಕ್ಕೂ ಆಕೆಯ ದೇಹ ಸಿಗದ ರೀತಿಯಲ್ಲಿ ಕಣ್ಮರೆಯಾದಳು.
ಪ್ರೇಮಕ್ಕೆ ಅಪವಿತ್ರತೆಯ ಲೇಪ ಹಚ್ಚಿದ ಪಾಪಿಯ ಇಂತಹ ದುಷ್ಟತನ ಯಾರಿಗೂ ಅನುಕರಣೀಯವಲ್ಲ. ಆದರೆ ಅದನ್ನೇ ಮಾದರಿಯಾಗಿ ಇಟ್ಟುಕೊಂಡು ಪ್ರೇಯಸಿಯನ್ನು ಹತ್ಯೆ ಮಾಡುವ ಹುನ್ನಾರವನ್ನೇ ಮನಸ್ಸಿನೊಳಗಿಟ್ಟುಕೊಂಡು ಕೊಲೆ ಮಾಡಿದವರಿದ್ದಾರೆ. ಪ್ರಿಯಕರನ ಮೋಡಿಗೆ ಒಳಗಾಗಿ ಆತನ ಕಾಮಕ್ಕೂ ಕತ್ತಿಗೂ ಬಲಿಯಾದವರಿದ್ದಾರೆ. ಇನ್ನು ತನ್ನ ಹುಡುಗನ ಕೆಟ್ಟ ಯೋಚನೆಯ ಸುಳಿವು ಸಿಕ್ಕಿದ ಹುಡುಗಿಯೊಬ್ಬಳು ಅತನನ್ನು ದೂರ ಮಾಡತೊಡಗಿದಾಗ ಆಕೆಯನ್ನು ಅಮ್ಮನ ಎದುರೇ ಕಾಲೇಜಿನ ಅಂಗಳದಲ್ಲೇ ಚಾಕುವಿನಿಂದ ಕೊಚ್ಚಿ ಕೊಂದ ಪ್ರಕರಣ ಹುಬ್ಬಳ್ಳಿಯಲ್ಲಿ ವರದಿಯಾಯಿತು. ಬೆಂಗಳೂರಲ್ಲಿ ಒಬ್ಬ ವಿವಾಹಿತೆ ಗಂಡನನ್ನು ಬಿಟ್ಟು ಒಬ್ಬಂಟಿಯಾಗಿದ್ದವಳು ಬೇರೊಬ್ಬಾತನನ್ನು ತನ್ನ ಜಾಲಕ್ಕೆ ಕೆಡವಿದರೂ ಆತನೇ ಆಕೆಯ ಜೀವಕ್ಕೆ ಮೃತ್ಯುವಾದ. ಅಷ್ಟೇ ಅಲ್ಲ, ಆಕೆಯನ್ನು ತುಂಡುತುಂಡಾಗಿ ಕತ್ತರಿಸಿದ. ಯಾಕೆ ಹುಡುಗಿಯರು ಇಂತಹ ದಾರುಣ ಹತ್ಯೆಗೆ ಒಳಗಾಗುತ್ತಾರೆ? ಅವರಿಗೆ ತಮ್ಮ ಪ್ರಿಯಕರನ ಹೃದಯದಲ್ಲಿ ಇರುವ ವಿಷದ ವಾಸನೆಯೇ ಬರುವುದಿಲ್ಲವೇ?
ಹೆಣ್ಣು ತನ್ನನ್ನು ಸಮರ್ಪಿಸಿಕೊಂಡಳೆಂದರೆ ಆಕೆಯ ಶರಣಾಗತಿಯ ಬಗ್ಗೆ ಗಂಡಿಗೆ ಅದಕ್ಕಿಂತ ಹೆಚ್ಚಿನ ಪುರಾವೆ ಬೇಕಾಗುವುದಿಲ್ಲ. ಆದರೆ ಹೆಣ್ಣು ತನ್ನ ಸಮರ್ಪಣೆಯಲ್ಲೇ ಸಂಬಂಧ ಪರಿಪೂರ್ಣವಾಯಿತು ಎಂತ ತಿಳಿಯುತ್ತಾಳೆ. ಅದೇ ಆಕೆ ತನ್ನ ಜೀವಕ್ಕೆ ಅಪಾಯ ತಂದುಕೊಳ್ಳುವ ಮುಗ್ಧತೆಯಾಗುತ್ತದೆ. ಆದರೆ ಸಂಬಂಧಗಳು ಬರೇ ಪ್ರೀತಿಯ ಮೇಲೆ ಇರುವುದಿಲ್ಲ. ಅವುಗಳ ತಳಹದಿಯು ಪರಸ್ಪರ ವಿಶ್ವಾಸದ ಮೇಲೆ ನಿಂತಿರಬೇಕಾಗುತ್ತದೆ. ಆದರೆ ಈ ನೆಲೆಗೆ ತಲುಪುವ ಮೊದಲೇ ಅವರು ಜೊತೆ ಸೇರಿರುತ್ತಾರೆ. ಅಲ್ಲಿಂದ ಹೆಣ್ಣಿನ ಸಮರ್ಪಣೆ ಮತ್ತು ಗಂಡಿನಿಂದ ಶೋಷಣೆ ಶುರುವಾಗುತ್ತದೆ. ಸಮಾನತೆಯ ಶರ್ತದಲ್ಲೇ ಅವರು ಒಂದಾಗಿದ್ದರೂ ಅಸಮಾನತೆ ಮತ್ತು ತಾರತಮ್ಯದ ಮುಳ್ಳುಗಳು ಚುಚ್ಚತೊಡಗುತ್ತವೆ. ಆದರೆ ನೋವನ್ನು ಹೇಳಿಕೊಳ್ಳುವಂತಿಲ್ಲ. ತಂದೆಯ ಮನೆಯ ಆಶ್ರಯವನ್ನು ಕಳಕೊಂಡ ಹೆಣ್ಣುಮಕ್ಕಳಿಗೆ ದೈನ್ಯತೆ ಮತ್ತು ಭಯ ಅನಿವಾರ್ಯವಾಗುತ್ತದೆ. ಅವರು ತಮ್ಮ ಅಸಹಾಯಕತೆ ಹಾಗೂ ಗಂಡಿನ ಮೇಲೆ ಅವಲಂಬನೆಯ ಭಾವವನ್ನು ತೋರಿಸುವ ಹಂತಕ್ಕೆ ತಲುಪಿದಲ್ಲಿಂದ ಅವರ ಪತನ ಆರಂಭವಾಗುತ್ತದೆ. ಸಮಾನತೆಯ ತರ್ಕಕ್ಕೆ ತುಕ್ಕು ಹಿಡಿಯುತ್ತದೆ. ನಂಬಿದ್ದ ಗಂಡಿನಿಂದ ತಪ್ಪಿಸಿಕೊಂಡು ಸಮಾಜದಲ್ಲಿ ಬದುಕುವ ದಾರಿಗಳು ಗೋಚರಿಸದಷ್ಟು ಕತ್ತಲೆಯಲ್ಲಿ ಅವರು ದಿನ ಕಳೆಯುತ್ತಿರುತ್ತಾರೆ. ತಮ್ಮ ನಿಷ್ಠೆಯ ಭ್ರಮೆಯಲ್ಲಿ ತಮಗೆ ಆಗುತ್ತಿರುವ ಅನಿಷ್ಟವು ಅವರ ಗಮನಕ್ಕೆ ಬರುವುದಿಲ್ಲ. ಇಂತಹ ಹೆಣ್ಣುಗಳು ಮೌನಸಾವು ಅಥವಾ ನಿಸ್ವರದ ನಾವು ಎದುರಿಸಿ ಕಣ್ಮರೆಯಾಗುತ್ತಾರೆ. ಹೆಣ್ಣನ್ನು “ಹಾಸ್ಯುಂಡು ಬೀಸಿ ಒಗೆಧಾಂಗ” ಎಂಬ ಸಂಚಿಯ ಹೊನ್ನಮ್ಮನ ಮಾತು ನೆನಪಾಗುತ್ತದೆ.
ಲಿವ್-ಇನ್-ರಿಲೇಶನ್‍ಗೆ ತಯಾರಾಗುವ ಹೆಣ್ಣು ತಾನು ಮೆಚ್ಚಿದ ಗಂಡಿನ ವಿಶ್ವಾಸಾರ್ಹತೆಯನ್ನು ಪರೀಕ್ಷಿಸಬೇಕು. ಅದರ ಒಂದು ಸಾಧ್ಯತೆಯನ್ನು ಒಬ್ಬ ಕಿಲಾಡಿಯು (Prank) ಸಣ್ಣ ರೀಲ್ಸ್‍ನಲ್ಲಿ ತೋರಿಸಿದ್ದಾರೆ. ಪಾರ್ಕ್‍ನಲ್ಲಿ ಆತ್ಮೀಯವಾಗಿ ಮಾತಾಡಿಕೊಂಡು ಬರುತ್ತಿದ್ದ ಒಂದು ಜೋಡಿಯನ್ನು ಆತ ಮಾತಾಡಿಸುತ್ತಾನೆ. ತಾವಿಬ್ಬರೂ ಪ್ರೀತಿಸುತ್ತಿರುವುದಾಗಿಯೂ ಇನ್ನು ಆರು ತಿಂಗಳಲ್ಲಿ ಮದುವೆಯಾಗುವುದಾಗಿಯೂ ಅವರಿಬ್ಬರೂ ಹೇಳುತ್ತಾರೆ. ಅದಕ್ಕಾಗಿ ಅವರನ್ನು ಅಭಿನಂದಿಸಿದ ಆ ಕಿಲಾಡಿ “ಬಹಳ ಒಳ್ಳೆಯ ಜೋಡಿ ನಿಮ್ಮದು. ಆದರೆ ನಾನು ಒಂದು ಸಣ್ಣ ಟಾಸ್ಕ್ ಕೊಡುತ್ತೇನೆ. ಉತ್ತರ ಸರಿಯಾದರೆ ನಾನು ಇಪ್ಪತ್ತು ಸಾವಿರ ಬಹುಮಾನ ಕೊಡುತ್ತೇನೆ” ಎಂಬುದಾಗಿ ಹೇಳುತ್ತಾನೆ. ಅವರಿಬ್ಬರೂ “ಹಣವೇನೂ ಬೇಡ, ಆದರೆ ಖುಷಿಗಾಗಿ ಟಾಸ್ಕ್ ಎದುರಿಸುವುದಾಗಿ” ಹೇಳುತ್ತಾರೆ. ಮೊದಲಿಗೆ ಗಂಡಿನ ಬಳಿ “ನಿನಗೆ ಆಕೆಯ ಫೋನ್ ಒಪನ್ ಮಾಡಲು ಗೊತ್ತಾ” ಎಂದು ಕೇಳುತ್ತಾನೆ. “ಹೌದು ಗೊತ್ತು” ಎಂದ ಹುಡುಗನಲ್ಲಿ “ಆಕೆಯ ವಾಟ್ಸಾಪ್, ಇನ್‍ಸ್ಟಾಗ್ರಾಂ ಮೆಸೇಜ್‍ಗಳನ್ನು ಓದುತ್ತೀಯಾ” ಎಂದಾಗ ಹೌದೆನ್ನುತ್ತಾನೆ. ಆಕೆಯಲ್ಲಿ “ನಿನ್ನದೇನೂ ಅಭ್ಯಂತರ ಇಲ್ಲವೇ?” ಎಂದಾಗ “ಯಾಕೆ ಅಭ್ಯಂತರ? ನನ್ನ ಗಂಡನಾಗುವವನಲ್ಲಿ ಮುಚ್ಚಿಡುವುದಕ್ಕೇನಿದೆ?” ಎನ್ನುತ್ತಾಳೆ. “ಅದು ಒಳ್ಳೆಯ ಉತ್ತರ. ನೀನು ಗೆದ್ದೆ. ನಿನಗೆ ಇಪ್ಪತ್ತು ಸಾವಿರ ಕೊಡುತ್ತೇನೆ” ಎಂದು ಪ್ರಾಂಕ್ ಹೇಳಿದಾಗ ಆಕೆ ನಿರಾಕರಿಸುತ್ತಾಳೆ. ನಂತರ ಹುಡುಗನಲ್ಲಿ ನಿನ್ನ ಫೋನನ್ನು ಅವಳಲ್ಲಿ ಕೊಡು. ಓಪನ್ ಮಾಡಲಿ” ಎನ್ನುತ್ತಾನೆ ಪ್ರಾಂಕ್. ಆ ಹುಡುಗ ಹಿಂಜರಿಯುತ್ತಾನೆ. “ನಿನಗೆ ಆತನ ಪಾಸ್‍ವರ್ಡ್ ಗೊತ್ತಾ?” ಎಂದು ಆಕೆಯಲ್ಲಿ ಕೇಳುತ್ತಾನೆ. ಆಕೆ “ಇಲ್ಲ” ಎಂದಾಗ ಮತ್ತೆ ನಿನ್ನ ಪೇಟರ್ನ್ ಅವನಿಗೆ ಹೇಗೆ ಗೊತ್ತಿತ್ತು?” ಎಂದಾಗ “ನಾನು ಹೇಳಿದ್ದೆ. ಆದರೆ ಅವನದ್ದನ್ನು ಕೇಳ್ಳಿಲ್ಲ” ಎಂದಳು. “ಇರಲಿ”, ಎಂದ ಪ್ರಾಂಕ್ ಆ ಹುಡುಗನಲ್ಲಿ “ನೀನೇ ನಿನ್ನ ಫೋನನ್ನು ಒಪನ್ ಮಾಡಿಕೊಡು. ಆಕೆ ನಿನ್ನ ವಾಟ್ಸಾಪ್ ಮೆಸೇಜ್‍ಗಳನ್ನು ನೋಡಲಿ” ಎಂದ. ಅವಳು ತಯಾರಾದಳು. ಆದರೆ ಆ ಹುಡುಗ ಒಪ್ಪಲಿಲ್ಲ. “ಅದರಲ್ಲಿ ನಮ್ಮ ಕಂಪೆನಿಯ ಬಿಸಿನೆಸ್ ವಿಷಯಗಳಿವೆ”ಎಂದ. “ಅದರಲ್ಲೇನು? ಇವಳು ನಿನ್ನಲ್ಲಿ ಏನನ್ನೂ ಮುಚ್ಚಿಟ್ಟಿಲ್ಲ. ನೀನು ಯಾಕೆ ಮುಚ್ಚಿಡುತ್ತಿದ್ದೀಯಾ?” ಎಂದಾಗಲೂ ಹುಡುಗ ತನ್ನ ಫೋನ್‍ನಲ್ಲಿರುವ ಮೆಸೇಜ್‍ಗಳನ್ನು ನೋಡಲು ಬಿಡಲಿಲ್ಲ. ಪ್ರಾಂಕ್ ತುಂಬಾ ಒತ್ತಾಯಿಸಿದಾಗ ಏನೋ ಫೋನ್ ಬಂದಿರುವಂತೆ ನಟಿಸುತ್ತ ಆತ ದೂರ ಹೋಗುತ್ತಾನೆ. ಹೋದವನು ಎಷ್ಟು ಹೊತ್ತಾದರೂ ಬಾರದಿದ್ದಾಗ ಫ್ರಾಂಕ್ ಆಕೆಗೆ ಹೇಳುತ್ತಾನೆ, “ನೋಡು, ನೀನು ಆತನ ಮೇಲೆ ಪೂರ್ಣ ವಿಶ್ವಾಸ ಇಟ್ಟಿದ್ದೀಯಾ. ಆದರೆ ಆತ ನಿನ್ನೆಡೆಗೆ ವಿಶ್ವಾಸ ಇಟ್ಟಿಲ್ಲ. ಇದು ಏಕಪಕ್ಷೀಯ ವಿಶ್ವಾಸವಾಗುತ್ತದೆ. ಅವನು ಬರುವುದಿದ್ದರೆ ಇನ್ನು ಸ್ವಲ್ಪ ಹೊತ್ತಿನಲ್ಲಿ ಬರಬೇಕು. ನಿನ್ನನ್ನು ಒಬ್ಬಳನ್ನೇ ಬಿಟ್ಟು ಆತ ಹೋಗಿಯೇ ಬಿಟ್ಟದ್ದು ಸರಿಯಲ್ಲ”. ಪ್ರಾಂಕ್‍ನ ಮಾತುಗಳನ್ನು ಕೇಳಿದಾಗ ಆಕೆಯ ಕಣ್ಣಲ್ಲಿ ನೀರು ಒಸರಿತು. “ತಾನು ಆ ಹುಡುಗನ ಬದ್ಧತೆಯನ್ನು ಸರಿಯಾಗಿ ಪರೀಕ್ಷಿಸಬೇಕಿತ್ತು” ಎಂದಳು. ಪ್ರಾಂಕ್‍ನ ಸಕಾಲಿಕ ಸಹಾಯದಿಂದ ಅವಳೇನೋ ಬಚಾವಾದಳು. ಆದರೆ ಹೆಚ್ಚಿನ ಹುಡುಗಿಯರು ಈ ಏಕಮುಖೀ ಬದ್ಧತೆಯಿಂದ ಬದುಕಿನಲ್ಲಿ ವಂಚಿತರಾಗುವುದು ತಪ್ಪುವುದಿಲ್ಲ. ಹಾಗಾಗಿ ಹುಡಗನೂ ಹುಡುಗಿಯೂ ಪರಸ್ಪರ ವಿಶ್ವಾಸಾರ್ಹತೆಯ ಪರೀಕ್ಷೆ ಮಾಡಬೇಕು. ಅದಕ್ಕೆ ಮೊಬೈಲನ್ನು ಪರಿಶೀಲಿಸುವ ಉಪಾಯವಾದರೂ ಆದೀತು.
ಇನ್ನು, ಲಿವ್-ಇನ್-ರಿಲೇಶನ್‍ಶಿಪ್ ಎಂಬುದು ಇಬ್ಬರದೇ ನಿರ್ಧಾರವಾದರೂ ಅದಕ್ಕೆ ಕಾನೂನಿನ ರಕ್ಷಣೆ ಇರಬೇಕು. ಅಂದರೆ ಅದನ್ನು ಕೂಡಾ ರಿಜಿಸ್ಟ್ರೇಶನ್ ಮಾಡುವ ವ್ಯವಸ್ಥೆ ಇರಬೇಕು. ಹೊಂದಿ ಬರುವುದಿಲ್ಲವಾದರೆ ಕಾನೂನುಬದ್ಧವಾಗಿಯೇ ಬಿಡುಗಡೆಯಾಗಲು ಹಾಗೂ ಎಷ್ಟು ವರ್ಷಗಳ ಕಾಲ ಜೊತೆಯಲ್ಲಿದ್ದರು ಎಂಬುದರ ದಾಖಲಾತಿಗೂ ರಿಜಿಸ್ಟ್ರೇಶನ್ ಸಹಾಯವಾಗುತ್ತದೆ. ಪರಸ್ಪರ ಸಂಶಯ ಬಂದಾಗ ಪೋಲೀಸ್ ರಕ್ಷಣೆ ಪಡೆಯುವುದಕ್ಕೂ ಸಾಧ್ಯವಿದೆ. ಇನ್ನು, ಪ್ರೇಮಿಯ ಕೊಲೆಯಾದಾಗ ಅಪರಾಧಿಯ ಪತ್ತೆಗೆ ಅನುಕೂಲವಾಗುತ್ತದೆ. ಅಥವಾ ಹೆಣ್ಣು ಸುಪಾರಿ ನೀಡಿ ಗಂಡನನ್ನು ಕೊಲ್ಲಿಸಿದರೆ ಆಗ ಆಕೆಯ ಬಂಧನಕ್ಕೂ ರಿಜಿಸ್ಟ್ರೇಶನ್ ಎಂಬುದು ಅನುಕೂಲಕರವಾಗಿದೆ. ಹೆತ್ತವರ ಸಾಕ್ಷಿಯಲ್ಲಿ ಇಬ್ಬರೂ ರಿಜಿಸ್ಟ್ರೇಶನ್‍ಗೆ ಒಪ್ಪುವುದೇ ವಿಶ್ವಾಸಾರ್ಹತೆಯ ಒಂದು ಪರೀಕ್ಷೆ ಎನ್ನಬಹುದು.
ಬರಹ :
ಚಂದ್ರಶೇಖರ ದಾಮ್ಲೆ
Advertisement
Advertisement
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel
Advertisement