Advertisement
Opinion

ಮಕರ ಸಂಕ್ರಾಂತಿ | ಎಲ್ಲರ ಬಾಳಲ್ಲಿ ತರಲಿ ಸುಖಶಾಂತಿ | ಎಳ್ಳುಬೆಲ್ಲ ಸವಿದು ಒಳ್ಳೆಯದು ಮಾತಾಡಿ |

Share

“ಬಂದಿತು ಬಂದಿತು ಸಂಕ್ರಾಂತಿ(Makara sankranthi) ತಂದಿತು ತಂದಿತು ಸುಖಶಾಂತಿ” ಎಂಬ ಕವಿವಾಣಿಯಂತೆ ಸಂಕ್ರಾಂತಿ ಬಂತೆಂದರೆ ಜನರಲ್ಲಿ ನವೋತ್ಸಾಹ ಚಿಮ್ಮುತ್ತದೆ. ಈವರೆಗಿನ ದಕ್ಷಿಣಾಯನದಲ್ಲಿ ಬರುವ ಮಳೆಗಾಲದ ಮಳೆ(rainy season), ಚಳಿಗಾಲದ ಚಳಿಗಾಳಿಯ(winter) ಕೊರೆತದಿಂದ ಬರಡಾದ ಜೀವಕ್ಕೆ, ಕೊರಡಾದ ಗಿಡ-ಬಳ್ಳಿಗಳಿಗೆ, ಸಂಕ್ರಾಂತಿಯು ನವಚೇತನವನ್ನು ತುಂಬುತ್ತದೆ. ವಸಂತದ ಸ್ವಾಗತಕ್ಕೆ ಸಿದ್ಧತೆ ನಡೆಯುತ್ತದೆ. ಉತ್ತರಾಯಣದ ಹಿತಕರವಾದ ವಾಯುಗುಣ, ಪ್ರಕೃತಿಯ ವಿಕಾಸ-ವಿಲಾಸ, ಸುಗ್ಗಿಯ ಹಿಗ್ಗು, ಆರೋಗ್ಯ-ಭಾಗ್ಯ, ದವಸ-ಧಾನ್ಯಗಳ ತುಂಬಿರುವಿಕೆ ಸಂಕ್ರಾಂತಿಯ ಕಾಲವನ್ನು ಪುಣ್ಯಕಾಲವನ್ನಾಗಿಸಿದೆ.

Advertisement
Advertisement
Advertisement

ಹಾಗಾದರೆ ಸಂಕ್ರಾಂತಿ ಎಂದರೇನು? : ಜಗಚ್ಚಕ್ಷುವಾದ ಸೂರ್ಯನು ಒಂದುರಾಶಿಯಿಂದಮತ್ತೊಂದು ರಾಶಿಯನ್ನು ಪ್ರವೇಶಿಸುವ ಸಂಧಿಕಾಲಕ್ಕೆ ಸಂಕ್ರಾಂತಿ ಅಥವಾ ಸಂಕ್ರಮಣ ಎಂದು ಹೆಸರು. ಸೌರಮಾನದ ಪ್ರಕಾರ ಸೂರ್ಯನು ಮೇಷಾದಿ ಹನ್ನೆರಡು ರಾಶಿಗಳನ್ನು ಪ್ರವೇಶಿಸುವಾಗಲೂ ಸಂಕ್ರಾಂತಿ ಬರುತ್ತದೆ. ಆದರೆ ಕರ್ಕಾಟಕ ಸಂಕ್ರಾಂತಿ ಹಾಗೂ ಮಕರ ಸಂಕ್ರಾಂತಿಗಳು, ದಕ್ಷಿಣಾಯನ-ಉತ್ತರಾಯಣಗಳ ಪ್ರಾರಂಭದದಿನಗಳಾದ್ದರಿಂದ ವಿಶೇಷ ಮಹತ್ವ ಹೊಂದಿವೆ. ಸಂಕ್ರಾಂತಿ ಒಂದು ವಿಧದಲ್ಲಿ ಸೂರ್ಯಾರಾಧನೆ.

Advertisement

‘ಸೂರ್ಯಆತ್ಮಾ ಜಗತಸ್ತಸ್ಥುಷಶ್ಚ’ ಎಂಬ ವೇದವಾಣಿಯಂತೆ ಸೂರ್ಯದೇವ ವಿಶ್ವದ ಆತ್ಮ, ಜಗತ್ತಿನ ಕಣ್ಣು. ಮಳೆ ಬೀಳಲು, ಬೆಳೆ ಬೆಳೆಯಲು, ಇಳೆ ಬೆಳಗಲು, ಸೂರ್ಯನೇ ಕಾರಣ. ಆ ಸವಿತೃದೇವನ ದಿವ್ಯತೇಜಸ್ಸು ನಮಗೆಸಿದ್ಧಿ-ಬುದ್ಧಿ-ಸಮೃದ್ಧಿಗಳನ್ನು,ನೀಡಬಲ್ಲದು. ಸಾಮಾನ್ಯವಾಗಿ ‘ಪುಷ್ಯ’ ಮಾಸದಲ್ಲಿ ಬರುವ {ಜನವರಿ 14 ಅಥವಾ 15ತಾರೀಕಿನಂದು} ಮಕರಸಂಕ್ರಾಂತಿಯನ್ನು ‘ಉತ್ತರಾಯಣಪುಣ್ಯಕಾಲ’ವೆಂದು ಕರೆಯುತ್ತಾರೆ.

ಕೇವಲ ಬದುಕುವುದಕ್ಕೆ ಮಾತ್ರವೇ ಅಲ್ಲ, ವ್ಯಕ್ತಿಯ ಮರಣಕ್ಕೂ ಉತ್ತರಾಯಣ ಪುಣ್ಯಕಾಲ ಶ್ರೇಷ್ಠ. ಶರಶಯ್ಯೆಯಲ್ಲಿ ಮಲಗಿದ್ದ ಭೀಷ್ಮ,ಪ್ರಾಣಬಿಡಲು ಉತ್ತರಾಯಣ ಪುಣ್ಯಕಾಲಕ್ಕಾಗಿ ಹರಿಸ್ಮರಣೆ ಮಾಡುತ್ತಾ ಕಾಯುತ್ತಿದ್ದನೆಂದು, ಮಹಾಭಾರತದಲ್ಲಿ ಹೇಳಿದೆ. ಈ ಪುಣ್ಯ ಮುಹೂರ್ತದಲ್ಲಿ, ಗಂಗಾ, ತುಂಗಾ, ಕೃಷ್ಣ, ಕಾವೇರಿ ಮುಂತಾದ ಪುಣ್ಯ ತೀರ್ಥಗಳಲ್ಲಿ ಲಕ್ಷಾಂತರ ಆಸ್ತಿಕ ಜನರು ತೀರ್ಥಸ್ನಾನ ಮಾಡುತ್ತಾರೆ. ದಕ್ಷಿಣಾಯನದಲ್ಲಿ ಮುಚ್ಚಿದ್ದ ಸ್ವರ್ಗದ ಬಾಗಿಲನ್ನು ಈ ದಿನ ತೆರೆಯುತ್ತಾರಂತೆ. ಅಲ್ಲದೆ ಉತ್ತರಾಯಣವನ್ನು ದೇವತೆಗಳಹಗಲುಕಾಲವೆಂದೂ ಭಾವಿಸಲಾಗಿದೆ. ಆದ್ದರಿಂದ ಯಜ್ಞ-ಯಾಗಾದಿಗಳಿಗೆ, ಸಮಸ್ತ ದೇವತಾಕಾರ್ಯಗಳಿಗೆ,ಶುಭ-ಶೋಭನಮಂಗಳಕಾರ್ಯಗಳಿಗೆ ಉತ್ತರಾಯಣ ಪುಣ್ಯಕಾಲ ಸರ್ವಶ್ರೇಷ್ಠ.

Advertisement

ಇನ್ನು ಭೌಗೋಳಿಕ ಮಹತ್ವದ ಬಗ್ಗೆ ಅರಿಯಬೇಕೆಂದರೆ, ‘ಅಯನ’ ಎಂದರೆ ಚಲಿಸುವುದು ‘ಮಾರ್ಗ’ ಎಂದರ್ಥ. ಈವರೆಗೆ ದಕ್ಷಿಣದತ್ತ ವಾಲಿ ಚಲಿಸುವ ಸೂರ್ಯ, ಮಕರ ಸಂಕ್ರಮಣದಿಂದ ತನ್ನ ಮಾರ್ಗ ಬದಲಿಸಿ, ಉತ್ತರದ ಕಡೆ ವಾಲುತ್ತಾನೆ. ಸೂರ್ಯ ಮೇಲೆ ಏರಿ, ರಾತ್ರಿ ಕುಗ್ಗಿ ಹಗಲು ಹಿಗ್ಗಿದಂತೆ, ನಮ್ಮ ಬಾಳಿನಲ್ಲೂ ಕಾವು ಹೆಚ್ಚುತ್ತದೆ. ಇಂದಿನಿಂದ ದೇವತೆಗಳಿಗೆ ಹಗಲು, ರಾಕ್ಷಸರಿಗೆ ರಾತ್ರಿ ಆರಂಭವೆಂದು ಪುರಾಣಗಳು ಹೇಳುತ್ತವೆ. ಈ ಆನಂದದ ಸಂಕೇತವಾಗಿ ಎಳ್ಳೆಣ್ಣೆ ಹಚ್ಚಿ ಸ್ನಾನ ಮಾಡಿ, ಹೊಸವಸ್ತ್ರ ಧರಿಸಿ, ಪಕ್ವಾನ್ನ ಸವಿದು ಸಂತೋಷಿಸುತ್ತಾರೆ.

ಮಕರ ಸಂಕ್ರಾಂತಿ ಹಬ್ಬವನ್ನು ಕರ್ನಾಟಕದಲ್ಲಿ ಒಂದು ದಿನ, ಇನ್ನು ಕೆಲವೆಡೆ ಎರಡು ದಿನ ಆಚರಿಸಿದರೆ, ತಮಿಳುನಾಡು, ಆಂಧ್ರಗಳಲ್ಲಿ ಈ ಹಬ್ಬವನ್ನು ‘ಪೊಂಗಲ್’ ಎಂಬ ಹೆಸರಿನಿಂದ ಮೂರು ದಿನ ವಿಜೃಂಭಣೆಯಿಂದ ಆಚರಿಸುತ್ತಾರೆ. ಸಂಕ್ರಾಂತಿಯ ಹಿಂದಿನ ದಿನ ಭೋಗಿಪೊಂಗಲ್’ ಆಚರಿಸುತ್ತಾರೆ. ಭೋಗಿಹಬ್ಬದಲ್ಲಿ,ಋತುಗಳ ರಾಜ ಇಂದ್ರನನ್ನು ಪೂಜಿಸಲಾಗುವುದು. ಈ ಹಬ್ಬ ಹೊಸ ಋತುಆರಂಭವಾಗುತ್ತಿದೆ ಎನ್ನುವುದರ ಸೂಚನೆ. ವರ್ಷದ ಈ ಋತುವಿನಲ್ಲಿ ಹಳೇಎಲೆಗಳು ಉದುರಿ, ಹೊಸಎಲೆಗಳುಮತ್ತು ಹೂಗಳು ಬರುವ ಕಾಲ ಆರಂಭವಾಗುತ್ತದೆ.ಪ್ರಕೃತಿಯಂತೆ,ತಮ್ಮ ಜೀವನಕ್ಕೂ ಒಂದು ಹೊಸ ಕಳೆ ಬರಬೇಕೆಂದು ಮಾನವರು ಬಯಸುವರು. ಅಂದು ಮನೆಯ ಆಪ್ತೇಷ್ಟರೆಲ್ಲಾ ಸೇರಿ ಮೃಷ್ಟಾನ್ನ ಭೋಜನ ಸವಿದು ಸಂತೋಷಿಸುತ್ತಾರೆ,

Advertisement

ಸೂರ್ಯ ಪೊಂಗಲ್ : ಸಂಕ್ರಾಂತಿಯ ದಿನ ನಡೆಯುವ ಹಬ್ಬ. ಎಲ್ಲೆಲ್ಲೂ ಸಂಭ್ರಮವೋ ಸಂಭ್ರಮ. ಈ ದಿನ ಸೂರ್ಯನ ಪೂಜೆಗೆ ವಿಶೇಷ ಪ್ರಾಶಸ್ತ್ಯ. ಪೊಂಗಲ್ ಮತ್ತು ಕಬ್ಬಿನ ಜಲ್ಲೆಯನ್ನು ಸೂರ್ಯದೇವನಿಗೆ ನೈವೇದ್ಯ ಮಾಡುತ್ತಾರೆ. ಕರ್ನಾಟಕದಲ್ಲೂ ಈ ದಿನ ಹೆಣ್ಣು ಮಕ್ಕಳು ಹೊಸ ವಸ್ತ್ರ ಧರಿಸಿ, ಎಳ್ಳು ಬೀರಲು ಹೊರಡುತ್ತಾರೆ. ಗಂಡಸರು ಪೂಜೆ ಪುನಸ್ಕಾರ ಮಾಡಿ, ದೇವಾಲಯ ಸಂದರ್ಶಿಸುತ್ತಾರೆ. ವಿವಾಹಿತ ಮತ್ತು ಅವಿವಾಹಿತ ಹೆಣ್ಣುಮಕ್ಕಳು, ಎಳ್ಳು-ಬೆಲ್ಲ, ಕೊಬ್ಬರಿ, ನೆಲಗಡಲೆ, ಕಬ್ಬು, ಬಾಳೆಹಣ್ಣು, ಸಕ್ಕರೆ ಅಚ್ಚು, ಮುಂತಾದವುಗಳನ್ನು ಆಪ್ತೇಷ್ಟರಿಗೆಲ್ಲಾ ಹಂಚಿ, ಪರಸ್ಪರ, ವಿನಿಮಯಮಾಡಿಕೊಳ್ಳುತ್ತಾರೆ.

“ಎಳ್ಳು-ಬೆಲ್ಲ ಸವಿಯೋಣ, ಒಳ್ಳೆಯ ಮಾತನಾಡೋಣ” ಎಂದುಶುಭಾಶಯಕೋರುತ್ತಾರೆ
ಆಂಧ್ರದಲ್ಲಿ ಸಂಕ್ರಾಂತಿಯಂದು ವಿಶೇಷ ರೀತಿಯಲ್ಲಿ ಶ್ರೀರಾಮನ ಪೂಜೆ ಮಾಡುತ್ತಾರೆ. ಈ ದಿನ ರಾಮ ರಾವಣನನ್ನುಕೊಂದುಸೀತೆಯನ್ನು, ಬಂಧಮುಕ್ತಗೊಳಿಸಿದ ದಿನವೆಂದು ಹೇಳುತ್ತಾರೆ. ಅಲ್ಲದೆ ಸ್ವರ್ಗಸ್ಥರಾದ ಪಿತೃಗಳು ಅದೃಶ್ಯರಾಗಿ ಈ ದಿನ ತಮ್ಮ ಮನೆಯಂಗಳಕ್ಕೆಬರುತ್ತಾರೆಂದೂ ಹೇಳಲಾಗುತ್ತದೆ.

Advertisement

ಮಾಟ್ಟು ಪೊಂಗಲ್ : ಮಾಟ್ಟು’ ಎಂದರೆ ‘ಪಶು’ ಎಂದರ್ಥ. ಸಂಕ್ರಾಂತಿಯ ಮರುದಿನ ಹಸು, ಎತ್ತು, ಎಮ್ಮೆ, ಕೋಣ ಮುಂತಾದಪಶುಗಳನ್ನು ಸಿಂಗರಿಸಿ ಪೂಜಿಸಿ, ತಿಂಡಿತಿನಿಸು ನೀಡುತ್ತಾರೆ. ಇಡೀ ವರ್ಷ ಮನೆಮಂದಿಗೆಲ್ಲಾ ಉಪಕಾರ ಮಾಡಿದ ದನಕರುಗಳಿಗೆ ಕೃತಜ್ಞನೆ ಸೂಚಿಸುವುದೇ ಈ ದಿನದ ಉದ್ದೇಶ. ಕೆಲವೆಡೆ ಹೋರಿ ಕಾಳಗ ನಡೆಸಿ ವಿನೋದೋತ್ಸವ ಆಚರಿಸುತ್ತಾರೆ. ಕೊಬ್ಬಿದ ಹಾಯುವ ಗೂಳಿಯ ಕೋಡಿಗೆ, ದುಡ್ಡಿನ ಚೀಲವನ್ನೊ, ಬೆಳ್ಳಿಯ ಆಭರಣವನ್ನೋ ಹಾಕಿ, ಜನ ಸಮೂಹದಲ್ಲಿ ನುಗ್ಗಿಸುತ್ತಾರೆ. ಧೈರ್ಯವುಳ್ಳ ಯುವಕರು ಆ ಗೂಳಿಯನ್ನು ತಡೆದು ಹಣ, ಆಭರಣ ಬಿಚ್ಚಿಕೊಂಡು ತಮ್ಮದಾಗಿಸಿಕೊಳ್ಳುತ್ತಾರೆ. ಹೊಸದಾಗಿ ಬಂದ ಅಕ್ಕಿ, ಧಾನ್ಯಗಳಿಂದ ಸಾಮೂಹಿಕ ಭೋಜನ ಏರ್ಪಡಿಸಿ ಸಂತೋಷ ಹಂಚಿಕೊಳ್ಳುತ್ತಾರೆ.

ಕರ್ನಾಟಕದಲ್ಲಿ ಸಂಕ್ರಾಂತಿ ಎಳ್ಳುಬೀರುವ ಹಬ್ಬದಂತೇ ಕಿಚ್ಚಿನ ಹಬ್ಬವೂ ಹೌದು. ಬೆಂಕಿಯ ಕಿಚ್ಚಿನ ಮೇಲೆ ದನಗಳನ್ನು ಹಾಯಿಸದೆ ಹಳೇ ಮೈಸೂರು ಭಾಗದ ಸಂಕ್ರಾಂತಿ ಮುಗಿಯುವುದಿಲ್ಲ. ರೈತಾಪಿ ವರ್ಗಕ್ಕೆ ಇದು ಸುಗ್ಗಿಯ ಹಬ್ಬ. ಸಂಕ್ರಾಂತಿ ಹೊತ್ತಿಗೆ ರಾಗಿ ಹೊಲ ಕುರ್ಲಾಗಿ ಬಣವೆ ಒಟ್ಟುವ ಕೆಲಸ ಮುಗಿದಿರುತ್ತದೆ. ಹೊಲದಲ್ಲಿನ ರಾತ್ರಿ ಕುಯ್ಲು ಮುಗಿದಿದ್ದರೂ ಅಕಡಿ ಸಾಲಿನ ಅವರೆ ಗಿಡಗಳಲ್ಲಿ ಅವರೆಕಾಯಿ ಗೊಂಚಲುತೂಗುತ್ತಾಬೀಗುತ್ತಿರುತ್ತವೆ. ಸಂಕ್ರಾಂತಿಯಂದು ಕಣದಲ್ಲಿನ ಬಣವೆ ಪೂಜೆ ಮಾಡಿಬೇಯಿಸಿದ ಅವರೆಕಾಯಿ, ಕಡಲೆಕಾಯಿ, ಗೆಣಸನ್ನು ಬಣವೆಗೆ ನೈವೇದ್ಯ ಇಡುವುದು ಹಳೇ ಮೈಸೂರು ಭಾಗದಲ್ಲಿರುವ ಪದ್ಧತಿ. ಇಲ್ಲಿ ಕಣದ ಪೂಜೆಯಾಗದೆ, ರಾಸುಗಳ ಕಿಚ್ಚು ಹಾಯದೆ ಸಂಕ್ರಾಂತಿ ಹಬ್ಬವಿಲ್ಲ.

Advertisement

ಹಗಲೆಲ್ಲಾ ಎಳ್ಳು, ಬೆಲ್ಲ, ಕಬ್ಬು, ಅವರೆ, ಗೆಣಸಿನ ಸವಿಯ ಜೊತೆಗೆ ಕಣದ ಪೂಜೆಯ ಸಂಭ್ರಮವಾದರೆ, ಹೊತ್ತು ಇಳಿಯುತ್ತಿದ್ದಂತೆ ಕಿಚ್ಚು ಹಾಯಿಸುವ ಸಡಗರ ರಂಗೇರುತ್ತದೆ. ಮನೆಯ ರಾಸುಗಳಿಗೆ ಸಿಂಗರಿಸಿ, ಹೊತ್ತು ಇಳಿಯುವುದನ್ನೇ ಕಾಯುತ್ತಿದ್ದಂತೆ ಹುಡುಗರ ಗುಂಪು ಬತ್ತದ ಹುಲ್ಲಿನ ಹೊರೆ ತಂದು ಕಿಚ್ಚು ಹಾಯಿಸಲು ಊರಿನ ಮುಂದೆ ತಯಾರಿ ನಡೆಸುತ್ತದೆ. ಹುಲ್ಲಿನ ರಾಶಿ ಮಾಡಿ ಕಿಚ್ಚು ಹೊತ್ತಿಸುತ್ತಿದ್ದಂತೆ ಏಳುವ ದೊಡ್ಡ ಬೆಂಕಿಯಲ್ಲಿ ಮೊದಲು ಹಾಯುವ ಜೋಡಿಗೆ ಗೆಲುವಿನ ಸಂಭ್ರಮ. ಕೆಲವೊಮ್ಮೆ ಕಿಚ್ಚು ಕಂಡು ಬೆದರಿ ಮೂಗುದಾರ ಕಿತ್ತುಕೊಂಡು ಕತ್ತಲಲ್ಲಿ ನಾಪತ್ತೆಯಾಗುವ ದನಕರುಗಳನ್ನು ಹುಡುಕುವುದು ಸುಲಭದ ಮಾತಲ್ಲ.ಕೆಲವೊಮ್ಮೆ ಎಷ್ಟು ಹುಡುಕಿದರೂ ಸಿಗದ ದನಗಳು ಮಾರನೆಯ ದಿನದ ಹೊತ್ತಿಗೆ ಕೊಟ್ಟಿಗೆಯಲ್ಲಿ ಪ್ರತ್ಯಕ್ಷವಾಗಿರುತ್ತದೆ.ವರ್ಷವಿಡೀ ದುಡಿದ ರಾಸುಗಳನ್ನು ಸಂಕ್ರಾಂತಿಯಂದು ಸಿಂಗಾರ ಮಾಡುವ ಭೂತಾಯಿಯ ಮಗ ರಾಸುಗಳೊಂದಿಗೆ ಕಿಚ್ಚುಹಾಯ್ದು ತಾನೂ ಬೆಚ್ಚಗಾಗುತ್ತಾನೆ. ಹೀಗೆ ಸಂಕ್ರಾಂತಿ ಕೇವಲ ಸೂರ್ಯ ಪಥ ಬದಲಿಸುವ ಸಂಕ್ರಮಣ ಪರ್ವ ಮಾತ್ರವಲ್ಲ, ಮಣ್ಣಿನ ಮಕ್ಕಳು ಕಿಚ್ಚು ಹಾಯ್ದು ಬೆಚ್ಚಗಾಗುವ ಹಬ್ಬವೂ ಹೌದು. ಕೆಲವೆಡೆ ಗಾಳಿಪಟ ಉತ್ಸವಗಳೂ ನಡೆಯುತ್ತವೆ. ಶ್ರೀರಂಗಪಟ್ಟಣದ ‘ಆದಿರಂಗ’ ಎಂದೇ ಹೆಸರಾದ ಶ್ರೀರಂಗನಾಥ ಸ್ವಾಮಿ ಸನ್ನಿಧಿಯಲ್ಲಿ ಮಕರಸಂಕ್ರಾಂತಿ ಪ್ರಯುಕ್ತ ಹಲವು ದಶಕಗಳಿಂದ ಲಕ್ಷದೀಪೋತ್ಸವ ಆಚರಣೆ ನಡೆದುಕೊಂಡು ಬರುತ್ತಿದೆ. ‘ದಕ್ಷಿಣಕಾಶಿ’ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಶಿವಗಂಗೆಯ ಪುಣ್ಯಕ್ಷೇತ್ರದಲ್ಲಿ ಸಂಕ್ರಾಂತಿ ದಿನದ ಮುಂಜಾನೆ ಬೆಟ್ಟದ ಶಿಖರದಲ್ಲಿ ‘ಗಂಗೋತ್ಪತ್ತಿ’ ಆಗುವುದು.

ಮಾಹಿತಿ ಮೂಲ : ಡಿಜಿಟಲ್‌ ಮೀಡಿಯಾ

Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
Advertisement
The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು ‌theruralmirror@gmail.com ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

Published by
The Rural Mirror ಸುದ್ದಿಜಾಲ

Recent Posts

ಸಿರಿಧಾನ್ಯ  ಬಳಕೆ  ಕುರಿತು  ಕೃಷಿ ಇಲಾಖೆಯಿಂದ  ಸಿರಿಧಾನ್ಯ ಓಟ

ಸಿರಿಧಾನ್ಯಗಳ  ಬಳಕೆ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು  ಕೃಷಿ ಇಲಾಖೆ  “ಸಿರಿಧಾನ್ಯ ಓಟ…

4 hours ago

ಬೆಂಗಳೂರಿನಲ್ಲಿ ತುಂತುರು ಮಳೆ | ರಾಜ್ಯಾದ್ಯಂತ ಮುಂದಿನ ಐದು ದಿನ ಮಳೆ ಸಾಧ್ಯತೆ

ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ ಉಂಟಾಗಿರುವ ಹಿನ್ನೆಲೆಯಲ್ಲಿ ಬೆಂಗಳೂರು ಸೇರಿದಂತೆ ರಾಜ್ಯದ ಹಲವೆಡೆ…

4 hours ago

ಹವಾಮಾನ ವರದಿ | 19.01.2025 | ಇಂದು ಕೆಲವು ಕಡೆ ತುಂತುರು ಮಳೆ ಸಾಧ್ಯತೆ | ಕೃಷಿಕರೇ ಇರಲಿ ಎಚ್ಚರ |

20.01.2025ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ : ದಕ್ಷಿಣ ಕರಾವಳಿ,…

15 hours ago

ಸರ್ಕಾರದ ಯೋಜನೆಗಳನ್ನು ರೈತರು ಸದುಪಯೋಗಪಡಿಸಿಕೊಳ್ಳುವಂತೆ ಸಚಿವ ಈಶ್ವರ್ ಖಂಡ್ರೆ ಕರೆ

ಬೀದರ್ ನ ಪಶುವೈದ್ಯಕೀಯ, ಪಶು ಹಾಗೂ ಮೀನುಗಾರಿಕೆ ವಿಶ್ವವಿದ್ಯಾಲಯದ 20 ನೇ ಸಂಸ್ಥಾಪನಾ…

19 hours ago

ಅಡಿಕೆ ಬೆಳೆಗಾರರಿಗೆ ಆತಂಕ ಬೇಡ | ಅಡಿಕೆ ಬೆಳೆಗಾರರ ಸಮಸ್ಯೆ ಬಗಹೆರಿಸಲು ಸಿದ್ದ | ಕೇಂದ್ರ ಸಚಿವ ಶಿವರಾಜ್ ಸಿಂಗ್  ಚಾವ್ಙಾಣ್ ಭರವಸೆ |

ಕರ್ನಾಟಕದಲ್ಲಿ ಅಡಿಕೆಯು ಪ್ರಮುಖ ವಾಣಿಜ್ಯ ಬೆಳೆಯಾಗಿರುವುದು ಕೇಂದ್ರದ ಗಮನದಲ್ಲಿದೆ. ಈ ನಿಟ್ಟಿನಲ್ಲಿ ವಿದೇಶಗಳಿಂದ…

19 hours ago

ಕ್ಯಾಂಪ್ಕೋ ತಯಾರಿಕೆಯ ಕೊಬ್ಬರಿ ಎಣ್ಣೆ “ಕಲ್ಪ” 5 ಲೀಟರ್ ಕ್ಯಾನ್ ಬಿಡುಗಡೆ

ಸಹಕಾರಿ ಕ್ಷೇತ್ರದಲ್ಲಿ ಹೆಸರುವಾಸಿಯಾಗಿರುವ ಅಂತರಾಷ್ಟ್ರೀಯ ಮಟ್ಟದ ಕ್ಯಾಂಪ್ಕೊ ಸಂಸ್ಥೆ "ಕಲ್ಪ" ಕೊಬ್ಬರಿ ಎಣ್ಣೆ…

3 days ago