ಕಾಂಗ್ರೆಸ್ (Congress) ಪಕ್ಷದ ನೂತನ ಅಧ್ಯಕ್ಷರಾಗಿ ಮಲ್ಲಿಕಾರ್ಜುನ ಖರ್ಗೆ(Mallikarjuna Kharge) ಅಧಿಕಾರ ಸ್ವೀಕರಿಸಿದ್ದಾರೆ. ದೆಹಲಿಯಲ್ಲಿರುವ ಕಾಂಗ್ರೆಸ್ ಪ್ರಧಾನ ಕಚೇರಿಯಲ್ಲಿ ಸೋನಿಯಾ ಗಾಂಧಿ (Sonia Gandhi) ಅವರು ಖರ್ಗೆಗೆ ಅಧಿಕಾರ ಹಸ್ತಾಂತರಿಸಿದ್ದಾರೆ. ಕಳೆದ ವಾರ ನಡೆದ ಚುನಾವಣೆಯಲ್ಲಿ ಖರ್ಗೆ ತಮ್ಮ ಪ್ರತಿಸ್ಪರ್ಧಿ ಶಶಿ ತರೂರ್ರನ್ನು ಸೋಲಿಸಿ ಕಾಂಗ್ರೆಸ್ ಅಧ್ಯಕ್ಷರಾಗಿ ಆಯ್ಕೆಯಾಗಿದ್ದರು.ಕಾಂಗ್ರೆಸ್ ಪಕ್ಷದ 137 ವರ್ಷಗಳ ಇತಿಹಾಸದಲ್ಲಿ ಆರನೇ ಬಾರಿಗೆ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆದಿತ್ತು.ಕಳೆದ 24 ವರ್ಷಗಳಲ್ಲಿ ಗಾಂಧಿಯೇತರ ಮೊದಲ ಕಾಂಗ್ರೆಸ್ ಅಧ್ಯಕ್ಷರಾಗಿ ಮಲ್ಲಿಕಾರ್ಜುನ ಖರ್ಗೆ ಆಯ್ಕೆಯಾಗಿದ್ದಾರೆ.
ಈ ಸಮಾರಂಭದಲ್ಲಿ ಕೆಸಿ ವೇಣುಗೋಪಾಲ್, ರಾಹುಲ್ ಗಾಂಧಿ, ಸೋನಿಯಾ ಗಾಂಧಿ ಮತ್ತಿತರ ಕಾಂಗ್ರೆಸ್ ನಾಯಕರು ಉಪಸ್ಥಿತರಿದ್ದರು. ನೂತನವಾಗಿ ಆಯ್ಕೆಯಾದ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಸೋನಿಯಾ ಗಾಂಧಿ ಅಭಿನಂದಿಸಿದರು. ಅಧಿಕಾರ ಸ್ವೀಕರಿಸುವ ಮುನ್ನ ಕಾಂಗ್ರೆಸ್ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ರಾಜ್ ಘಾಟ್ ಗೆ ಭೇಟಿ ನೀಡಿ ಮಹಾತ್ಮಾಗಾಂಧಿ ಸ್ಮಾರಕಕ್ಕೆ ನಮನ ಸಲ್ಲಿಸಿದರು. ಇದೇ ವೇಳೆ ಮಾಜಿ ಪ್ರಧಾನಿಗಳಾದ ಜವಾಹರಲಾಲ್ ನೆಹರು, ಲಾಲ್ ಬಹದ್ದೂರ್ ಶಾಸ್ತ್ರಿ, ಇಂದಿರಾ ಗಾಂಧಿ ಮತ್ತು ರಾಜೀವ್ ಗಾಂಧಿ ಅವರ ಸ್ಮಾರಕಗಳಿಗೆ ಭೇಟಿ ನೀಡಿದ್ದಾರೆ.