ಬಹು ದಿನಗಳಿಂದ ನಿರೀಕ್ಷಿತ ಬಾಲಾಲಯದಿಂದ ಶಿಲಾಮಯವಾದ ರಾಮಾಲಯದೊಳಗೆ ರಾಮದೇವರ ಪ್ರತಿಷ್ಠಾ ಕಾರ್ಯ ಮಾಣಿ ಮಠದಲ್ಲಿ ನಡೆಯಿತು.
ಮಾಣಿಯೊಬ್ಬ ಪ್ರಾಯಪ್ರಬುದ್ಧನಾಗುವಾಗ ಸರ್ವತೋಮುಖವಾಗಿ ಬೆಳೆದು ಆದರ್ಶಪ್ರಾಯನಾಗುವ ತೆರದಿ ಇಂದು ನಮ್ಮ ಮಾಣಿ ಮಠ ಸರ್ವತೋಮುಖವಾಗಿ ಬೆಳೆದು ಸಮಾಜಕ್ಕೆ ಮಾದರಿಯಾಗಿ ನಿಂತಿದೆ. ಸಮಾಜದ ಎಲ್ಲಾ ಅಗತ್ಯಗಳನ್ನು ಪೂರೈಸುವಷ್ಟು ಚೆನ್ನಾಗಿ ಬೆಳೆದು ನಿಂತಿದೆ. ಎಲ್ಲವೂ ಪೂರ್ವ ನಿರ್ಧರಿತವಾದಂತೆ ಕ್ಲಪ್ತ ಸಮಯದಲ್ಲಿ ಯಾವುದೇ ಗೊಂದಲಗಳು ಇಲ್ಲದೆ ಪರಿಪೂರ್ಣ ಕಾರ್ಯಕ್ರಮ ವಾಗಿ ಹೊರಬಂತು. ನೆರೆದಿದ್ದ ಸಾವಿರಾರು ಮಂದಿ ಈ ಎಲ್ಲಾ ಕಾರ್ಯಕ್ರಮಗಳಿಗೆ ಸಾಕ್ಷಿಯಾದರು. ಅಷ್ಟೂ ಮಂದಿಗೆ ಸಂಪ್ರದಾಯಕ್ಕೆ ಯಾವುದೇ ಸಮಸ್ಯೆ ಆಗದಂತೆ ಕುಳಿತು ಮಾಡುವ ಭೋಜನ ವ್ಯವಸ್ಥೆ ಮಠಕ್ಕೊಂದು ಮೆರುಗು ನೀಡಿತ್ತು.
ಗಡಿಯಾರದ ಮುಳ್ಳು ಎರಡರ ಮೇಲೆ ಕುಳಿತ ತಕ್ಷಣ ಧರ್ಮಸಭೆ ಆರಂಭವಾಗಿತ್ತು. ಬಂದಿದ್ದ ಅತಿಥಿಗಳೆಲ್ಲರ ಮಾತುಗಳು ಸ್ಪೂರ್ತಿದಾಯವಾಗಿತ್ತು. ಆಚಾರ್ಯ ಶಂಕರರ ನೋಡಿಲ್ಲ, ಆ ಬಗ್ಗೆ ಹೆಚ್ಚು ಓದಿಲ್ಲ. ಹಿಂದೂ ಧರ್ಮದ ಪುನರುತ್ಥಾನದ ಕೆಲಸ ಮಾಡಿದ್ದಾರೆ ಎಂದು ಮಾತ್ರ ಗೊತ್ತಿದೆ. ಆ ತಪಸ್ವಿಗಳ ಸಾಲಿನಲ್ಲಿ ಧರ್ಮೋದ್ಧಾರದ ಕೆಲಸ ಮಾಡುತ್ತಿರುವ ಶಂಕರ ಪೀಠದ ಅಭಿನವ ಶಂಕರರಿಗೆ ಎಲ್ಲಾ ಅತಿಥಿಗಳ ಪ್ರಣಾಮಗಳು ನೆರೆದಿದ್ದವರ ಮನಸ್ಸಿಗೆ ಪುಳಕವಾಗಿಸಿತ್ತು.
ಶ್ರೀ ಗುರುಗಳ ಆಶೀರ್ವಚನವಂತೂ ಪ್ರೀತಿದಾಯಕವೂ ಸ್ಪೂರ್ತಿದಾಯಕವೂ ಆಗಿ ಹೃದಯ ತುಂಬಿ ಬಂತು. *ಸುಂದರವಾದ ದೇಹ ಪ್ರಾಯ ಸಂದಂತೆ ಸೌಂದರ್ಯ ಉಳಿಸಿಕೊಳ್ಳದೆ ಕುರೂಪವಾಗುತ್ತದೆ. ದೇಹದೊಳಗಿನ ಮೂಳೆಗಳು ವರ್ಷಗಳ ಕಾಲ ಬಾಳಿಕೆ ಬಂದರೂ, ಕುರೂಪವೇ ಆಗಿರುತ್ತದೆ. ದೀರ್ಘ ಬಾಳಿಕೆಯೂ ಸೌಂದರ್ಯವೂ ಕೂಡಿದ್ದರೆ ಸತ್ಯಂ ಶಿವಂ ಸುಂದರಂ ಆಗುತ್ತದೆ. ಆ ರೂಪದಿಂದ ಇಂದು ಪ್ರತಿಷ್ಠಾಪನೆಯಾದ ರಾಮಾಲಯ ನಿತ್ಯ, ಸತ್ಯಂ ಶಿವಂ ಸುಂದರಂ ಆಗಿರುತ್ತದೆ. ಪೋರ್ಚುಗೀಸರ ದಾಳಿಗೊಳಗಾಗಿ ಅಶೋಕೆಯ ನಮ್ಮ ಮೂಲಮಠ ನಶಿಸಿಹೋಗಿತ್ತು. ಅಲ್ಲಿದ್ದ ಬ್ರಾಹ್ಮಣ ಅಗ್ರಹಾರದ ಕುರುಹೇ ಇಂದಿಲ್ಲ. ಆದರೆ ಮಣ್ಣಿನಡಿಯಲ್ಲಿ ಹೂತು ಹೋಗಿದ್ದ ಮಠದ ಪಂಚಾಂಗದ ಕಲ್ಲುಗಳು ಇಂದೂ ಇವೆ. ದಾಳಿ ಕೋರರು ಸಾಮಾನ್ಯ ಮಂದಿರಗಳನ್ನು ಸುಟ್ಟು ನಾಶಪಡಿಸಬಹುದು, ಶಿಲಾಮಯಗೊಳಿಸಿದ ಮಂದಿರಗಳನ್ನು ಭಂಗಿಸಬಹುದೇ ವಿನಃ ಕುರುಹೇ ಇಲ್ಲದಂತೆ ಸಂಪೂರ್ಣ ಸುಟ್ಟು ನಾಶಪಡಿಸಲು ಸಾಧ್ಯವಿಲ್ಲ. ಆ ಕಾರಣದಿಂದಲೂ ಇದು ಸುಂದರ ಎಂದು ವರ್ಣಿಸಿದರು
ಶ್ರೀರಾಮಚಂದ್ರ ರಾಜಾಧಿರಾಜ. ಮಹಾರಾಜರಿಗೆ ಕಪ್ಪ ಕೊಡುವ ಕರ್ತವ್ಯ ಪ್ರಜೆಗಳದ್ದು. ಇಂದು ಮಹಾರಾಜನಿಗೆ ಪ್ರಜೆಗಳೆಲ್ಲಾ ಸೇರಿ ಕೊಟ್ಟಿರುವ ಅತ್ಯಂತ ದೊಡ್ಡ ಕಪ್ಪವಿದು. ಕಪ್ಪವನ್ನು ಕೊಡುವ ಸಂಪ್ರದಾಯ ವರುಷ ವರುಷವೂ ಮುಂದುವರಿಯಲಿ. ಪ್ರಜೆಗಳಿಗೂ ಹೊರೆಯಾಗದೆ, ಮಹಾರಾಜನಿಗೆ ಕೊಡುವ ಕಪ್ಪದ ಬಗ್ಗೆ ಮಾರ್ಮಿಕ ಸಲಹೆ ಒಂದನ್ನಿತ್ತರು. ಪ್ರತಿಯೊಬ್ಬರೂ ಮಾಡುವ ಅನಗತ್ಯ ವೆಚ್ಚಗಳನ್ನು ಎರಡೆರಡು ಬಾರಿ ಇದು ಬೇಕೆ? ಎಂದು ಯೋಚಿಸಿ ಮಾಡಿ . ಬೇಡವೆಂದರೆ ಬಿಟ್ಟುಬಿಡಿ. ಉಳಿತಾಯಗೊಂಡ ಹಣ ತೆಗೆದಿರಿಸಿ ಶ್ರೀರಾಮನಿಗೆ ಕಪ್ಪವಾಗಿ ಸಮರ್ಪಿಸಿದರೆ ವಿಷ್ಣುಗುಪ್ತ ವಿಶ್ವ ವಿದ್ಯಾ ಪೀಠದಿಂದ ಹಿಡಿದು ಎಲ್ಲಾ ಕಾರ್ಯಗಳು ರಾಮಾಲಯದಂತೆ ದೃಢವಾಗಿ ನಿಲ್ಲುತ್ತದೆ ಎಂದು ಆಶೀರ್ವದಿಸಿದರು. ಬಲ್ಲವರೇ ಬಲ್ಲರು ಗುರು ಸೂಕ್ಷ್ಮವ. ನಮ್ಮೆಲ್ಲರ ದೌರ್ಬಲ್ಯವನ್ನು ಬಲು ಸೂಕ್ಷ್ಮವಾಗಿ ಎತ್ತಿ ತೋರಿಸಿದರೆಂದು ಸ್ಪಷ್ಟವಾಗಿತ್ತು.
ನೆರೆದಿದ್ದ ಅಷ್ಟೂ ಮಂದಿಯಲ್ಲಿ ಧನ್ಯತಾಭಾವ ಒಬ್ಬೊಬ್ಬರಲ್ಲಿ ಒಂದೊಂದು ವಿಧ. ನಿಶ್ಚಿತ ಸಮಯದಲ್ಲಿ ರಾಮ ಕಾರ್ಯ ಪೂರ್ಣಗೊಂಡ ಧನ್ಯತಾಭಾವ, ರಾಮ ಸೇವೆಗಾಗಿ ಹೂ ಕಟ್ಟಿಕೊಡುವ ಮಹಿಳೆಯರ ಮುಖದಲ್ಲಿ ಒಂದು ಧನ್ಯತಾಭಾವ, ಕುಂಕುಮಾರ್ಚನೆ ಮಾಡಿದ ನಾರಿಯರ ಮುಖದಲ್ಲೂ ಒಂದಷ್ಟು ಧನ್ಯತಾಭಾವ, ಪ್ರತಿಷ್ಠಾ ಕಾರ್ಯದಲ್ಲಿ ಅಳಿಲ ಸೇವೆ ಸಲ್ಲಿಸಿದರೆಲ್ಲರಿಗೂ ಧನ್ಯತಾಭಾವ, ಭೋಜನ ವ್ಯವಸ್ಥೆಯನ್ನು ಅಚ್ಚುಕಟ್ಟಾಗಿ ನಿರ್ವಹಿಸಿದವರಲ್ಲಿ ಧನ್ಯತಾಭಾವ, ಹಿರಿಯರನೇಕರ ಮುಖದಲ್ಲಿ ಹಳೆಯ ಮಂದಿರ ಮತ್ತು ಹೊಸ ಮಂದಿರದ ಪ್ರತಿಷ್ಠಾಪನೆಯನ್ನು ನೋಡಿದ ಧನ್ಯತಾಭಾವ, ಕಿರಿಯರನೇಕರ ಮುಖದಲ್ಲಿ ನಮ್ಮ ಕಾಲದಲ್ಲಿ ಇಂತಹ ಸುಂದರ ಕಾರ್ಯಕ್ರಮ ನಡೆದು ಹೋಯಿತಲ್ಲ ಎನ್ನುವ ತೃಪ್ತಿಯ ಭಾವ ಸಮಾರಂಭದ ಕಳೆಯನ್ನು ಮತ್ತಷ್ಟು ಹೆಚ್ಚಿಸಿತ್ತು.ಇನ್ನೆರಡು ದಿನ ಬಾಕಿ ಇದೆ.ಧಾರ್ಮಿಕ ಕಾರ್ಯಗಳು ನಡೆಯಲಿದೆ. ಇಂದು ಭಾಗವಹಿಸಲು ಅಸಾಧ್ಯರಾದವರಿಗೆ ಇನ್ನೆರಡು ದಿನ ಅವಕಾಶವಿದೆ. ಸದ್ಯೋ ಭವಿಷ್ಯದಲ್ಲಿ ಮುಂದೆಂದೂ ಸಿಗದ ಕಾರ್ಯಕ್ರಮಗಳಿಗೆ ಸಾಕ್ಷಿಯಾಗಿ ಬನ್ನಿ.