ಅಂಕಗಳಾಚೆಗೂ ಒಂದು ಲೋಕವಿದೆ : ಇದು ಮಕ್ಕಳಿಗೆ ಬದುಕನ್ನು ಕಲಿಸುವ ಶಿಕ್ಷಣ

January 29, 2026
9:31 PM

ಶಾಲೆಯ ಹಂತದಲ್ಲಿ ಮಕ್ಕಳಿಗೆ ಕಲಿಸಬೇಕಾದ ಶಿಕ್ಷಣ ಏನು..?.  ಈ ಪ್ರಶ್ನೆಗೆ ಹಲವರದು ಹಲವು ಉತ್ತರಗಳು, ಪ್ರಶ್ನೆ ಇದೆ. ಇಂದು ಮಕ್ಕಳಿಗೆ ಶಿಕ್ಷಣ ಎಂದರೆ ಕೇವಲ ಪಾಠ ಕಲಿಸುವುದು ಅಲ್ಲ. ಅದು ಬದುಕನ್ನು ಕಲಿಸುವುದು ಆಗಬೇಕು. ಚಿಂತನೆ, ಆತ್ಮವಿಶ್ವಾಸ ಮತ್ತು ಮಾನವೀಯತೆಯನ್ನು ಬೆಳೆಸುವ ಶಿಕ್ಷಣವೇ ನಾಳಿನ ಸಮಾಜ ಕಟ್ಟುತ್ತದೆಯೇ ಹೊರತು ದ್ವೇಷವನ್ನು ಹರಡುವ ಯಾವ ಶಿಕ್ಷಣವೂ ನಾಳೆಯ ಬದುಕನ್ನು, ನಾಳೆಯ ಸಮಾಜವನ್ನು ಸುಂದರವಾಗಿಸಲು. ಹಾಗಿದ್ದರೆ ಇಂತಹ ಸಮಾಜ ನಿರ್ಮಾಣಕ್ಕೆ ಏನು ಮಾಡಬಹುದು ನಾವು, ಅದಕ್ಕೇನು ಕೊಡಬಹುದು..?

Advertisement
Advertisement

ಈ ದೃಷ್ಟಿಯಲ್ಲಿ ಗಮನಿಸಿದರೆ ದಕ್ಷಿಣ ಕನ್ನಡ ಚೆಸ್‌ ಎಸೋಸಿಯೇಶನ್‌ ಹೊಸದೊಂದು ಚಿಂತನೆಯನ್ನು ತೆರೆದಿದೆ.  ದಕ್ಷಿಣ ಕನ್ನಡ ಜಿಲ್ಲೆಯ ಸರ್ಕಾರಿ ಶಾಲಾ ಮಕ್ಕಳಿಗೆ ಚೆಸ್ ಆಟವನ್ನು ಪರಿಚಯಿಸುವ ಉದ್ದೇಶದಿಂದ “ಚೆಸ್‌ ಇನ್‌ ಸ್ಕೂಲ್”‌ ಎನ್ನುವ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ. ಪ್ರಾಯೋಗಿಕವಾಗಿ ಕೆಲವು ಸರ್ಕಾರಿ ಶಾಲೆಗಳನ್ನು ಆಯ್ಕೆ ಮಾಡಿದೆ. ತಮಿಳುನಾಡಿನಲ್ಲಿ ಈಗಾಗಲೇ ಮಕ್ಕಳನ್ನು ಈ ದೃಷ್ಟಿಯಿಂದ ಬೆಳೆಸಲಾಗುತ್ತಿದೆ. ಹೀಗೆ ಮಕ್ಕಳನ್ನು ಬೆಳೆಸುವುದರಿಂದ ಪ್ರಯೋಜನ ಏನು..? ಚೆಸ್‌ನಿಂದ ಏನು ಲಾಭ..? ಈ ಪ್ರಶ್ನೆ ಜೊತೆಗೇ ಬರುತ್ತದೆ ಬಿಡಿ..!.  ಚೆಸ್‌ ಅಥವಾ ಬೇರೆ ಯಾವುದೇ ಚಟುವಟಿಕೆಯಲ್ಲಿ ಮಕ್ಕಳು ತೊಡಗಿಸಿಕೊಳ್ಳುವುದರಿಂದ ಅವರ ಭವಿಷ್ಯ ಹಾಳಾಗದು, ಕೇಸುಗಳು ಆಗದು ಎಂಬುದಷ್ಟೇ ಇದಕ್ಕೆ ಒಂದು ಸಾಲಿನ ಉತ್ತರ..!. “ಚೆಸ್ ಇನ್ ಸ್ಕೂಲ್” ಅಂತಹ  ಕಾರ್ಯಕ್ರಮಗಳು ಮಕ್ಕಳನ್ನು ಕೇವಲ ಆಟಗಾರರನ್ನಾಗಿ ಅಲ್ಲ, ಚಿಂತಿಸುವವರಾಗಿಯೂ ಬೆಳೆಸಬಲ್ಲುದು.

ಪಾಠ ಪುಸ್ತಕ ಓದುವುದು ಅಷ್ಟೇ ಶಿಕ್ಷಣ ಅಲ್ಲ.ಅದನ್ನು ಜೀವನದಲ್ಲಿ ಬಳಸುವ ಸಾಮರ್ಥ್ಯ ಬೇಕು. ಈ ಸಾಮರ್ಥ್ಯಕ್ಕೆ ಕೌಶಲ್ಯವೂ ಬೇಕು. ಎಷ್ಟೇ ಓದಿದರೂ ಅತ್ಯುನ್ನತ ಅಂಕ ಪಡೆದರೂ ಕೌಶಲ್ಯವೇ ಇರದಿದ್ದರೆ..?. ಹೀಗಾಗಿ  ಶಿಕ್ಷಣ ಮಕ್ಕಳನ್ನು ಒಳ್ಳೆಯ ಉದ್ಯೋಗಿಗೆ ಮಾತ್ರವಲ್ಲ, ಒಳ್ಳೆಯ ಮನುಷ್ಯನಾಗಿಯೂ, ಕೌಶಲ್ಯ ಭರಿತ ವ್ಯಕ್ತಿಯಾಗಿಯೂ ರೂಪಿಸಬೇಕು. ಕೇವಲ ಅಂಕವೇ ಅಲ್ಲ ಎನ್ನುವುದೂ ಗೊತ್ತಿರಬೇಕು. ನಮ್ಮೊಳಗೇ ನಾವು ಮಕ್ಕಳನ್ನು ಮೌಲ್ಯಮಾಪನ ಮಾಡಿದರೆ ಅರಿವಾಗುತ್ತದೆ, ನಮ್ಮ ಮಗುವಿನಲ್ಲಿ ಕೌಶಲ್ಯ ಇದೆಯೇ ಎಂದು…!

ಇಂದು ಅನೇಕ ಸಂದರ್ಭ ಮಕ್ಕಳಲ್ಲಿ ಆತ್ಮವಿಶ್ವಾಸದ ಕೊರತೆ ಕಾಣುತ್ತೇವೆ. ಸ್ವತಂತ್ರ ಚಿಂತನೆಯೂ ಇಲ್ಲವಾಗಿರುತ್ತದೆ. ಮಕ್ಕಳು ತಾವೇ ನಿರ್ಧಾರ ಮಾಡುವ ಶಕ್ತಿ ಹೊಂದಬೇಕು ಇದಕ್ಕೆ ಪೂರಕ ವಾತಾವರಣ ಸೃಷ್ಟಿಯಾಗಬೇಕು. ಅದು ಹೇಗೆ..?. ಶಿಕ್ಷಣ ಯಾವತ್ತೂ ಒತ್ತಡ ಆಗಬಾರದು , ಅದು ಸಮಗ್ರ  ಬೆಳವಣಿಗೆಯಾಗಬೇಕು.  ಇದಕ್ಕಾಗಿ ಮಕ್ಕಳಿಗೂ ತಮ್ಮ ಸುತ್ತಲಿನ ಸಮಾಜವನ್ನು, ಜನರನ್ನು ಅರ್ಥಮಾಡಿಕೊಳ್ಳುವ ಅವಕಾಶಗಳನ್ನು ಸೃಷ್ಟಿಸಬೇಕು, ಇದಕ್ಕಾಗಿ ಸ್ವತಂತ್ರ ಚಿಂತನೆಗಳು ಬೆಳೆಯಬೇಕು. ಇವತ್ತು ಶಿಕ್ಷಣ ಅಂದರೆ ಬಹುಮಂದಿಗೆ ಇನ್ನೂ ಪಠ್ಯ–ಪರೀಕ್ಷೆ–ಅಂಕ ಎಂಬ ಚೌಕಟ್ಟು. ಮಗುವಿಗೆ ಇಷ್ಟ ಇದೆಯೋ.. ಇಲ್ಲವೋ ಗೊತ್ತಿಲ್ಲ, ಒತ್ತಡವೋ ಒತ್ತಡ.

ಈಚೆಗೆ ಶಾಲೆಯಲ್ಲಿ ಮಕ್ಕಳ ಪ್ರಗತಿ ಪರಿಶೀಲನಾ ಸಭೆ ನಡೆಯುತ್ತಿತ್ತು. ಒಬ್ಬ ತಾಯಿ ಕಣ್ಣಿರು ಹಾಕುತ್ತಿದ್ದರು, ಮಗು ಕೂಡಾ ಅಳುತ್ತಿತ್ತು. ಏನೆಂದು ಕುತೂಹಲದಿಂದ ನೋಡುತ್ತಿದ್ದೆ. ಶಿಕ್ಷಕರು ನಿನಗೆ ಸಾಧ್ಯ ಇದೆ ಎನ್ನುತ್ತಿದ್ದರು. ನಂತರ ಗೊತ್ತಾಯಿತು, ಆ ಬಾಲಕಿಗೆ ಶೇ.96 ಅಂಕ ಇತ್ತು, ಕೆಲವು ವಿಷಯಗಳಲ್ಲಿ ಅಂಕ ಕಡಿಮೆಯಾಗಿದೆ ಎಂದು…!. ಆ ಬಾಲಕಿ ಪಠ್ಯದ ಹೊರತಾದ ಯಾವ ಚಟುವಟಿಕೆಯಲ್ಲೂ ಇಲ್ಲ ಎನ್ನುವುದೂ ಗೊತ್ತಾಗಬೇಕಾದ ವಿಷಯ.

ಇಂದು ಮಕ್ಕಳನ್ನು ಅಳತೆ ಮಾಡುವ ಸಾಧನವೂ ಅಂಕವೇ ಆಗಿರುವುದು ಇನ್ನೊಂದು ದುರಂತ. ಅಂಕ ಹೆಚ್ಚು ಬಂದರೆ ಪ್ರತಿಭಾವಂತ, ಕಡಿಮೆ ಬಂದರೆ ಹಿಂದುಳಿದ ಎಂಬ ತೀರ್ಪು ತಕ್ಷಣ…!.

ಪೋಷಕರೊಬ್ಬರು ಚೆಸ್‌ ಟೂರ್ನಮೆಂಟ್‌ನಲ್ಲಿ ಸಿಕ್ಕಿದರು. ಅವರು ಬಹಳ ವಿಸ್ತಾರವಾಗಿ ಯೋಚಿಸುತ್ತಾ, ಮಗನಿಗೆ ಆಸಕ್ತಿ ಇದೆ. ಹೀಗಾಗಿ ಬರ್ತಾ ಇದ್ದೇನೆ. ಓದಿ ಏನು ಬೇಕಾದರೂ ಹುದ್ದೆ ಗಳಿಸಬಹುದು. ಆದರೆ ಪಾಠದ ಹೊರತಾದ ಕಲೆಯನ್ನು ಬೆಳೆಸಿಕೊಳ್ಳುವುದು ಕೆಲವರಿಗಷ್ಟೇ ಸಾಧ್ಯ ಎನ್ನುತ್ತಿದ್ದರು.

ಇದು ಮಕ್ಕಳಿಗೆ ಪಾಠವಷ್ಟೇ ಅಲ್ಲ, ಅಂಕ ಅಷ್ಟೇ ಅಲ್ಲ, ಅದರಾಚೆಗೂ ಒಂದು ಲೋಕ ಇದೆ ಎಂದು ಯೋಚಿಸುವ ದಾರಿಗಳು.

ಈಚೆಗೆ ಮತ್ತೊಬ್ಬರು ಪೋಷಕರು ಮಾತನಾಡುತ್ತಾ, ತಮ್ಮ ಮಕ್ಕಳಿಗೆ ಅವಕಾಶವನ್ನು ಕಲ್ಪಿಸುವುದಕ್ಕಾಗಿ, ಕೆಲವು ಪಂದ್ಯಾಟಗಳಲ್ಲಿ ಭಾಗವಹಿಸುವುದಕ್ಕಾಗಿ  ಕರೆದುಕೊಂಡು ಹೋಗುತ್ತಿದ್ದರು. ಆಸುಪಾಸಿನ ಕೆಲವರು ವ್ಯಂಗ್ಯ ಮಾಡುತ್ತಿದ್ದರಂತೆ. ಇಂತಹದ್ದೂ ಕೂಡಾ ಇದೆ ಎನ್ನುತ್ತಿದ್ದರು. ಆದರೆ, ಅನೇಕ ಬಾರಿ ಇದೊಂದು ಬದುಕಿನ ಪಾಠ ಅಂತ ಅನಿಸುವುದಿಲ್ಲ…!. ಲಾಭ-ನಷ್ಟ ಕಾಣುತ್ತದೆ. ಅಂಕದ ಮುಂದೆ ಬದುಕಿನ ಲೆಕ್ಕವಿಲ್ಲ..!.

ಹಾಗಾದರೆ, ಇಂದು ಮಕ್ಕಳಿಗೆ ಬೇಕಾದ ಶಿಕ್ಷಣ ಯಾವುದು.? ಅಂಕಗಳಿಗಾಗಿ ಓದುವ ಶಿಕ್ಷಣವೇ?  ಅಥವಾ ಬದುಕನ್ನು ಕಟ್ಟುವ ಶಿಕ್ಷಣವೇ? ಈ ಪ್ರಶ್ನೆ ಸದಾ ಕಾಡುತ್ತದೆ.  ಶಿಕ್ಷಣ ಮಕ್ಕಳನ್ನು ಕೇವಲ ಉದ್ಯೋಗಕ್ಕೆ ತಯಾರಿಸುವ ಯಂತ್ರವನ್ನಾಗಿ ಮಾಡಬಾರದು ಎನ್ನುವುದು ನಿಲುವಾಗಿರಬೇಕು.  ಪಠ್ಯ ಪುಸ್ತಕದಾಚೆಗೂ ಒಂದು ಲೋಕವಿದೆ ಅಲ್ಲಿಯೂ ಅಲ್ಲಿ ಮಕ್ಕಳ ಭವಿಷ್ಯ ಕಾದಿದೆ. ಶಿಕ್ಷಣ ಆ ಲೋಕಕ್ಕೆ ಬಾಗಿಲು ತೆರೆದಾಗಲೇ ಅದು ನಿಜವಾದ ಶಿಕ್ಷಣ. ಅದು ಅವರನ್ನು ಒಳ್ಳೆಯ ಮನುಷ್ಯ, ಚಿಂತಕ, ನಿರ್ಧಾರಶೀಲ ವ್ಯಕ್ತಿಯಾಗಿ ರೂಪಿಸಬೇಕು.  ಮಕ್ಕಳಿಗೆ ಬೇಕಾಗಿರುವುದು ಪಠ್ಯ ಪುಸ್ತಕದ ಸಾಲುಗಳಷ್ಟೇ ಅಲ್ಲ, ಅವರಿಗೆ ಬೇಕಾಗಿರುವುದು , ಜೀವನದಲ್ಲಿ ಎದುರಾಗುವ ಸಂಕಷ್ಟಗಳನ್ನು ಪರಿಹರಿಸುವ ಸಾಮರ್ಥ್ಯ, ಆ ಕ್ಷಣದಲ್ಲಿ ತಾರ್ಕಿಕವಾಗಿ ಯೋಚಿಸುವ ಶಕ್ತಿ, ತಮ್ಮೊಳಗಿನ ಆತ್ಮವಿಶ್ವಾಸ, ಮತ್ತೊಬ್ಬರ ನೋವಿಗೆ ಸ್ಪಂದಿಸುವ ಮಾನವೀಯತೆ ಇಷ್ಟೇ. ಉಳಿದದ್ದೆಲ್ಲಾ ಮಕ್ಕಳೇ ಮಾಡಿಕೊಳ್ಳುತ್ತಾರೆ.

ಮಕ್ಕಳಿಗೆ ಮಾರ್ಗದರ್ಶನ ನೀಡಬೇಕಾದ್ದು ಪೋಷಕರು. ಆಯ್ಕೆ ಎಲ್ಲಿದೆ… ಅವಕಾಶ ಎಲ್ಲಿದೆ…? ಇದನ್ನು ಪೋಷಕರು ಗಮನಿಸಬೇಕು. ಪ್ರೋತ್ಸಾಹ ಕೂಡಾ ಅಗತ್ಯ. ಮಕ್ಕಳಲ್ಲಿ ಆಸಕ್ತಿ ಬೆಳೆಯಲು ಏನೆಲ್ಲಾ ಮಾಡಬೇಕು..? ಇದೂ ಕೂಡಾ ಪೋಷಕರ ಕಣ್ಣ ಮುಂದೆ ಇರಲೇಬೇಕು. ಒಂದಷ್ಟು ಸಮಯವೂ ನೀಡಬೇಕು, ಮಕ್ಕಳ ವರ್ತನೆಯನ್ನು ಗಮನಿಸುತ್ತಲೂ ಇರಬೇಕು. ಯಾವುದೇ ಕಾರಣಕ್ಕೂ ಮಕ್ಕಳ ಒಳಗೆ ಮತ್ಸರ, ತಾತ್ಸಾರ, ಮೇಲುಕೀಳು ಹೇಳಿಕೊಡುವ ಬದಲಾಗಿ ಆದಷ್ಟು ಮೌನವನ್ನು, ತಾಳ್ಮೆಯನ್ನು, ಸಹನೆ, ಸಹಬಾಳ್ವೆ, ಹೊಂದಾಣಿಕೆಯನ್ನು ತಿಳಿಸಿಕೊಡುವಂತಾಗಬೇಕು. ಒಂದು ವೇಳೆ ಪೋಷಕರು ಮಾರ್ಗದರ್ಶನ ನೀಡದೇ ಇದ್ದರೆ ಬೇರೆಯವರು ಮಾರ್ಗದರ್ಶನ ಮಾಡುತ್ತಾರೆ. ಇದು ಅಪಾಯಕಾರಿಯಾಗಿ ಬದಲಾಗುತ್ತದೆ. ವ್ಯಕ್ತಿಗೂ-ಸಮಾಜಕ್ಕೂ.

ಇಂತಹ ಹೊತ್ತಲ್ಲಿ ಚೆಸ್‌ನಂತಹ ಆಟಗಳನ್ನು ಒಂದು ಸಂಸ್ಥೆಯಾಗಿ ದಕ್ಷಿಣ ಕನ್ನಡ ಚೆಸ್‌ ಎಸೋಸಿಯೇಶನ್‌ ಸರ್ಕಾರಿ ಶಾಲೆಯ ಮಕ್ಕಳಿಗೆ ಕಲಿಸಿಕೊಡುತ್ತಿರುವುದು ಮಕ್ಕಳಲ್ಲಿ ಚಿಂತನೆಯನ್ನು ಬೆಳೆಸುವುದಕ್ಕೆ ಸಹಕಾರಿಯಾಗುತ್ತದೆ. ಇಲ್ಲಿ ಚೆಸ್‌ ಒಂದು  ಆಟ ಮಾತ್ರವಲ್ಲ. ಮಕ್ಕಳಲ್ಲಿ ಏಕಾಗ್ರತೆ, ತಾಳ್ಮೆ, ತಂತ್ರಜ್ಞಾನ, ನಿರ್ಧಾರ ಸಾಮರ್ಥ್ಯ ಬೆಳೆಸುವ ಶಿಕ್ಷಣವಾಗಿ ಹರಡಬೇಕು. ಗ್ರಾಮೀಣ ಮತ್ತು ಸರ್ಕಾರಿ ಶಾಲೆಗಳಲ್ಲಿ ಇಂತಹ ಪ್ರಯೋಗಗಳು ಹೆಚ್ಚಾಗಬೇಕು. ಗ್ರಾಮೀಣ ಮಕ್ಕಳಿಗೂ ಅವಕಾಶ ಬೇಕು, ವೇದಿಕೆ ಬೇಕು, ಭವಿಷ್ಯ ಬೇಕು.

Advertisement
Advertisement
Advertisement

Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ಮಹೇಶ್ ಪುಚ್ಚಪ್ಪಾಡಿ

ಕೃಷಿಕ ಹಾಗೂ ಕೃಷಿ ಪತ್ರಕರ್ತ | 2007 ರಿಂದ ವಿವಿಧ ಮಾಧ್ಯಮ ಕ್ಷೇತ್ರದಲ್ಲಿ ಕೆಲಸ ಮಾಡಿದ್ದಾರೆ. ಉಷಾಕಿರಣ, ಹೊಸದಿಗಂತ, ವಿಜಯವಾಣಿ ಹಾಗೂ ಸುವರ್ಣ ನ್ಯೂಸ್‌ ಚಾನೆಲ್‌ನಲ್ಲಿ ವರದಿಗಾರರಾಗಿ, ವಿಭಾಗ ಮುಖ್ಯಸ್ಥರಾಗಿ ಕೆಲಸ ಮಾಡಿದ್ದಾರೆ. ಗ್ರಾಮೀಣಾಭಿವೃದ್ಧಿ ಹಾಗೂ ಕೃಷಿ ಇವರ ಆಸಕ್ತಿಯ ವಿಷಯವಾಗಿದೆ.  

ಇದನ್ನೂ ಓದಿ

ಮಕ್ಕಳಲ್ಲಿ ಗುಣ ಬೆಳೆಸುವ ಹೊಣೆ ಶಾಲೆಗಳಿಗಿಲ್ಲವೆ?
January 28, 2026
8:18 PM
by: ಡಾ.ಚಂದ್ರಶೇಖರ ದಾಮ್ಲೆ
ಹಳ್ಳಿ ಬದುಕು ಶಾಪವಲ್ಲ… ಸಮಾಜದ ಮನಸ್ಥಿತಿ ಶಾಪ…!
January 28, 2026
7:09 AM
by: ಮಹೇಶ್ ಪುಚ್ಚಪ್ಪಾಡಿ
ಹೊಸರುಚಿ – ಮನೆಯಅಡುಗೆ ಮಾತು | ಆರೋಗ್ಯಕರ ಓಟ್ಸ್ ಮಿಲ್ಕ್ ಶೇಕ್ ರೆಸಿಪಿ
January 24, 2026
6:26 AM
by: ದಿವ್ಯ ಮಹೇಶ್
ಆಧುನಿಕ ಸಮಾಜದಲ್ಲಿ ಸಾಂಸ್ಕೃತಿಕ ಸಂವೇದನೆಯ ಅಗತ್ಯ
January 23, 2026
9:14 AM
by: ಕುಮಾರಸುಬ್ರಹ್ಮಣ್ಯ ಮುಳಿಯಾಲ

You cannot copy content of this page - Copyright -The Rural Mirror