ವೈವಾಹಿಕ ಸಂಬಂಧಗಳಲ್ಲಿ ಸೌಹಾರ್ದ ಮತ್ತು ಸ್ಥಿರತೆಗಳು ಅಚಲವಾಗಿದ್ದ ಒಂದು ಕಾಲವಿತ್ತು. ಆ ಕಾಲದಲ್ಲಿ ಹೆಣ್ಣಿನ ಶೋಷಣೆಯೂ ಇತ್ತು ಎಂಬ ಚರ್ಚೆ ಇದೆ. ಇದಕ್ಕೆ ಪ್ರ್ರತಿಯಾಗಿ ಆಧುನಿಕ ಯುಗದಲ್ಲಿ ವಿವಾಹಿತರಲ್ಲಿ ಚಂಚಲತೆ ಹೆಚ್ಚಾಗಿದೆ. ಅದರ ಅನೇಕ ಝಲಕ್‍ಗಳು ಈಗ ರೀಲ್ಸ್‍ಗಳ ರೂಪದಲ್ಲಿ ಬರುತ್ತಿವೆ. ಅವು ನಿರ್ದೇಶಕರಿಂದ ನಿರ್ಮಿಸಲ್ಪಟ್ಟ ಚಿತ್ರೀಕರಣಗಳಾಗಿದ್ದರೂ ವಾಸ್ತವತೆಗೆ ಹತ್ತಿರ ಇರುವುದರಿಂದ ಇಲ್ಲಿ ವಿಶ್ಲೇಷಿಸಲು ಬಯಸುತ್ತೇನೆ.
ಒಂದು ರೀಲ್ ಹೀಗಿದೆ: ಸಂಜೆಯ ಹೊತ್ತಿನಲ್ಲಿ ಗಂಡ ಮತ್ತು ಅತ್ತೆ ಹಜಾರದಲ್ಲಿ ಮಾತಾಡುತ್ತಿದ್ದಾಗ ಮನೆಯ ಸೊಸೆ ಮೇನಕಾ ಅಲ್ಲಿಗೆ ಬರುತ್ತಾಳೆ. ಅರ್ಧ ಎದೆ ಮತ್ತು ತೊಡೆಗಳು ಕಾಣಿಸುವಂತಹ ಸಣ್ಣ ಫ್ರಾಕ್‍ನಲ್ಲಿ ಬಂದ ಆಕೆ ತಾನು ಗೆಳತಿಯ ಜತೆ ಪಾರ್ಟಿಗೆ ಹೋಗುವುದಾಗಿ ಹೇಳುತ್ತಾಳೆ. ಅವರು ಬೇಡವೆನ್ನುವುದಿಲ್ಲ. ಆಕೆ ಧರಿಸಿದ್ದ ಅರೆಬರೆ ಮೈ ಕಾಣುತ್ತಿದ್ದ ಅದೇ ಡ್ರೆಸ್‍ನಲ್ಲಿ ತಾನು ಹೋಗುವುದಾಗಿ ಹೇಳುತ್ತಾಳೆ. ಅವರು ಆಕ್ಷೇಪಿಸುವುದಿಲ್ಲ. ಪಾರ್ಟಿಯಲ್ಲಿ ಕುಡಿತ ಮತ್ತು ಕುಣಿತ ಇರುತ್ತದೆ, ನಾನೂ ಭಾಗವಹಿಸಬೇಕಾಗುತ್ತದೆ ಎನ್ನುತ್ತಾಳೆ. ಆಗಲಿ ಎನ್ನುತ್ತಾರೆ. ನಾನು ತಡವಾದರೆ ಅಲ್ಲೇ ಉಳಿದುಕೊಳ್ಳಬೇಕಾಗುತ್ತದೆ ಎನ್ನುತ್ತಾಳೆ. ಹಾಗೇ ಮಾಡು ಎನ್ನುತ್ತಾರೆ. ಗಂಡ ಮತ್ತು ಅತ್ತೆ ಯಾವುದೇ ಪ್ರಶ್ನೆಗಳನ್ನೆತ್ತದೆ ಸುಲಭವಾಗಿ ಒಪ್ಪುತ್ತಿರುವುದು ಅವಳಿಗೆ ಹೊರಡಲು ಅನುಕೂಲವಾಗುತ್ತದೆ. ತಾನು ಉಳಿದುಕೊಳ್ಳುವಲ್ಲಿ ಸ್ನೇಹಿತೆಯರು ಮಾತ್ರವಲ್ಲ, ಸ್ನೇಹಿತರೂ ಇರುತ್ತಾರೆ ಎನ್ನುತ್ತಾಳೆ. ಅದು ಅನಿವಾರ್ಯವಲ್ಲವೇ ಎನ್ನುತ್ತಾನೆ ಗಂಡ. ನನಗೆ ಹಣಬೇಕು ಎಂದು ಆಕೆ ಕೇಳುತ್ತಾಳೆ. ಎಷ್ಟು ಬೇಕು ಎಂದಾಗ ನಲ್ವತ್ತು ಸಾವಿರ ಎನ್ನುತ್ತಾಳೆ. ಅದನ್ನು ಒಪ್ಪಿದ ಗಂಡ ತನ್ನ ಎಟಿಎಂ ಕಾರ್ಡನ್ನು ಕೊಟ್ಟು ಬೇಕಾದಷ್ಟು ತೆಗೆದುಕೊ ಎನ್ನುತ್ತಾನೆ. ಇದಕ್ಕೆ ಅತ್ತೆ ಆಕ್ಷೇಪಿಸುವುದಿಲ್ಲ. ಆಕೆಗೆ ಎಲ್ಲವೂ ಸಲೀಸಾಗಿ ಚರ್ಚೆ ಬೈಗುಳಗಳಿಲ್ಲದೆ ಸಂಭವಿಸುತ್ತದೆ. ಆಕೆಯನ್ನು ಆಹ್ವಾನಿಸಲು ಬಂದ ಗೆಳತಿಯೊಂದಿಗೆ ಆಕೆ ಬಾಗಿಲು ತೆರೆದು ಮನೆಯಿಂದ ಹೋಗುತ್ತಾಳೆ.
ಆಕೆಯ ಗೆಳತಿಯೂ ಅರೆಬರೆ ಮೈ ತೋರುವ ಪೋಷಾಕಿನಲ್ಲಿ ಇರುತ್ತಾಳೆ. ಇಬ್ಬರೂ ನಡೆದುಕೊಂಡು ಕಾರಿನ ಬಳಿಗೆ ಹೋಗುತ್ತಿದ್ದಂತೆ ಮೇನಕಾ ಒಮ್ಮೆಲೇ ನಿಲ್ಲುತ್ತಾಳೆ. ಗೆಳತಿಯಲ್ಲಿ ತಾನು ಬರುವುದಿಲ್ಲ. ಏಕೋ ಮನಸ್ಸು ಒಪ್ಪುತ್ತಿಲ್ಲ ಎನ್ನುತ್ತಾಳೆ. ಯಾಕೆಂದು ಕೇಳಿದ ಗೆಳತಿಯಲ್ಲಿ “ನನ್ನ ಗಂಡ ಮತ್ತು ಅತ್ತೆ ಯಾವುದೇ ಆಕ್ಷೇಪವನ್ನು ಹೇಳದೆ ಏನೊಂದೂ ಪ್ರಶ್ನೆಯನ್ನು ಕೇಳದೆ ನನ್ನನ್ನು ಕಳಿಸಿದ್ರು. ನನಗೆ ಬೇಕು ಬೇಕಾದಂತೆ ಮಾಡಲು ಸ್ವಾತಂತ್ರ್ಯವನ್ನು ಏಕೆ ಕೊಟ್ಟರು? ಯಾಕೆ ಹೀಗೆ ಮಾಡಿದ್ರು?” ಎಂದು ಕಸಿವಿಸಿಯಿಂದ ಹೇಳಿದಳು. ಮೇನಕಾನ ಆತಂಕ ನೋಡಿ ಗೆಳತಿಗೆ ಅಚ್ಚರಿಯಾಯಿತು. “ಹೇಗೂ ಅವರು ಅಡ್ಡ ಮಾತಾಡಿಲ್ಲವಲ್ಲ. ನೀನು ಬಾ” ಎಂದು ಗೆಳತಿ ಒತ್ತಾಯಿಸಿದರೂ ಒಪ್ಪದೆ ಮೇನಕಾ ಮನೆಗೆ ಹಿಂದಿರುಗಿದಳು.
ಹಜಾರದಲ್ಲೇ ಕುಳಿತಿದ್ದ ಅತ್ತೆಗೂ ಗಂಡನಿಗೂ ಆಕೆಯನ್ನು ನೋಡಿ ಅಚ್ಚರಿಯಾಯಿತು. “ಯಾಕೆ ವಾಪಸು ಬಂದೆ. ಏನಾಯಿತು?” ಎಂದರು. ಮೇನಕಾ ಈ ಹಿಂದಿನ ಘಟನೆ ನೆನಪಿಸಿದಳು. ಹೀಗೆಯೇ ತಾನು ಪಾರ್ಟಿಗೆ ಹೊರಟಿದ್ದಾಗ ಸೊಸೆಯ ಸ್ಥಾನಮಾನ ಮತ್ತು ಮನೆಯ ಮರ್ಯಾದೆಯ ಬಗ್ಗೆ ಅತ್ತೆ ಬೋಧಿಸಿದ್ದು ಸರಿಯೆಂದು ಆಗ ಅನ್ನಿಸಿರಲಿಲ್ಲ. ಈಗ ಅನ್ನಿಸಿದೆ. ಸೊಸೆ ಎಂದ ಬಳಿಕ ವೇಷಭೂಷಣ ಮತ್ತು ಸಾಮಾಜಿಕ ನಡವಳಿಕೆಗಳಲ್ಲಿ ಘನತೆ ಇರಬೇಕು. ನಾನು ಮಾಡಿದ್ದು ತಪ್ಪಾಯಿತು. ಇನ್ನು ಮುಂದೆ ಹೀಗೆ ಮಾಡುವುದಿಲ್ಲ. ಸೊಸೆ ಹೇಗಿರಬೇಕೋ ಹಾಗೇ ಇರುತ್ತೇನೆ” ಎಂದು ಅಳಲಾರಂಭಿಸಿದಳು. ಮೇನಕಾಳನ್ನು ಅತ್ತೆ ಸಮಾಧಾನಿಸಿದರು. ಗಂಡನೂ ಕ್ಷಮಿಸಿ ಒಂದಾಗಿ ಬಾಳುವ ನಿರ್ಧಾರ ಮಾಡಿದರು. ಬದುಕು ಮತ್ತೆ ಗಟ್ಟಿಯಾಯಿತು.
ಇಂದಿನ ಯುಗದಲ್ಲಿ ಇಷ್ಟೊಂದು ಮುಕ್ತತೆ ಮತ್ತು ಹೊಂದಾಣಿಕೆಗಳು ಕುಟುಂಬದ ದೃಢತೆಗೆ ಬೇಕಾಗುತ್ತದೆ ಎಂಬುದನ್ನು ಈ ಕಿರುಚಿತ್ರ ತಿಳಿಸುತ್ತದೆ. ಇದಕ್ಕೆ ಹತ್ತಿರವಾದ ಕಥಾಹಂದರದ ಅನೇಕ ರೀಲ್‍ಗಳು ಸಿಗುತ್ತವೆ. ಆದರೆ ಇವಕ್ಕೆ ತೀರಾ ವಿರುದ್ಧವಾದ ಸತ್ಯ ಘಟನೆಯೊಂದು ಇತ್ತೀಚೆಗೆ ವರದಿಯಾಯ್ತು. ಅದು ನಿಜಕ್ಕೂ ಕಲ್ಪನೆಗೆ ಸಿಗದ ವಾಸ್ತವ. ಒಬ್ಬಾಕೆ ಸುಂದರ ಹೆಣ್ಣು ಆಧುನಿಕ ಶಿಕ್ಷಣ ಪಡೆದು ತುಂಬಾ ಸ್ಮಾರ್ಟ್ ಎಂದು ಗುರುತಿಸಲ್ಪಟ್ಟ ಹುಡುಗಿ ಹಳ್ಳಿಯ ಒಬ್ಬ ಯುವಕನನ್ನು ಮದುವೆಯಾಗಲು ಬಯಸಿದಳು. ತಾನಾಗಿ ಆ ಇಚ್ಛೆಯನ್ನು ಮುಂದಿಟ್ಟಳು. ಅದು ನಿಜಕ್ಕೂ ಅಚ್ಚರಿಯ ವಿಷಯವಾಗಿತ್ತು. ಏಕೆಂದರೆ ಆಕೆ ಬಯಸಿದ್ದ ಆ ಹಳ್ಳಿಯ ಹುಡುಗ ವಿದ್ಯೆಯಲ್ಲಿಯೂ, ಆರ್ಥಿಕತೆಯಲ್ಲಿಯೂ ಆಕೆಗಿಂತ ಕಡಿಮೆ ಅಂತಸ್ತು ಹೊಂದಿದ್ದ. ಆದರೂ ಆಕೆ ಅವನನ್ನ್ನು ಆಯ್ದುಕೊಂಡದ್ದು ಒಂದು ಭಾಗ್ಯವೆಂದು ಜನ ಅಂದುಕೊಂಡರು. ಹುಡುಗನ ಮನೆಯವರು ಒಪ್ಪಿದರು. ಅದೇ ಹೊತ್ತಿಗೆ ಹುಡುಗಿಯ ತಂದೆ ತಾಯಿಯೂ ಬಂದು ಮನೆ ನೋಡಿ ಒಪ್ಪಿಗೆ ಸೂಚಿಸಿದರಲ್ಲದೆ ಹುಡುಗನನ್ನು ಅವರು ಮೆಚ್ಚಿಕೊಂಡರು. ಎರಡೂ ಮನೆಯವರ ನೆಂಟರಿಷ್ಟರ ಸಮ್ಮುಖದಲ್ಲಿ ವಿವಾಹ ಸಮಾರಂಭವು ಅದ್ದೂರಿಯಾಗಿ ಜರಗಿತು.
ಮದುವೆಯ ಬಳಿಕ ಎರಡು ವಾರಗಳ ಕಾಲ ಎಲ್ಲವೂ ಸರಿಯಾಗಿತ್ತು. ಬಳಿಕ ಸೊಸೆಯ ಖತರಾಗಳು ಆರಂಭವಾದುವು. ಹೇಳದೆ ಕೇಳದೆ ಮನೆಯಿಂದ ಹೊರಗೆ ಹೋಗುವುದು, ಅವೇಳೆಯಲ್ಲಿ ಹಿಂದಿರುಗುವುದು ಆರಂಭವಾಯಿತು. ಮೊದಲೇ ಶ್ರೀಮಂತಳಾದ ಹಾಗೂ ವಿದ್ಯಾವಂತಳಾದ ಆಕೆಯಲ್ಲಿ “ಏಕೆ ಹೀಗೆ ಮಾಡುತ್ತೀ” ಎಂದು ಕೇಳಲೂ ಗಂಡನ ಮನೆಯವರು ಹೆದರಿದರು. ಈ ವಿದ್ಯಮಾನ ಆರಂಭವಾದ ಎರಡೇ ದಿನಗಳಲ್ಲಿ ಆಕೆ ತನ್ನ ಮಾಜಿ ಪ್ರಿಯಕರನೊಡನೆ ಮುಂಬೈಗೆ ಹಾರಿದಳು. ಈ ಕುರಿತಾದ ಹೆಚ್ಚಿನ ವಿಚಾರಣೆ ನಡೆದಾಗ ತಿಳಿದ ಕತೆ ರೋಚಕವಾದದ್ದು. ಆಕೆಗೆ ತನ್ನ ಗೆಳೆಯನೊಂದಿಗೆ ಮದುವೆಯಾಗುವುದರ ವಿರುದ್ಧ ಹೆತ್ತವರ ಆಕ್ಷೇಪವಿತ್ತು. ಅವರಿಂದ ಬಿಡಿಸಿಕೊಳ್ಳಲು ಅವಳು ಮಾಡಿದ ಉಪಾಯ ಇದಾಗಿತ್ತು. ಅವಳೊಂದು ಮದುವೆಯಾದರೆ ಆಗ ಆಕೆಯ ಹೆತ್ತವರಿಗೆ ವಿರೋಧಿಸುವ ಅಧಿಕಾರವಿಲ್ಲ. ಈಗ ಮದುವೆಯಾಗಿರುವ ಬಡವರ ಮನೆಯವರು ವಿರೋಧಿಸಲು ಶಕ್ತರಲ್ಲ. ಹಾಗಾಗಿ ಅವಳಿಗೆ ತನ್ನ ಇಷ್ಟದ ಹುಡುಗನೊಂದಿಗೆ ಮಹಾನಗರದಲ್ಲಿ ಬದುಕಲು ಸ್ವಾತಂತ್ರ್ಯ ಸಿಕ್ಕಿತು. ಒಂದು ಬಡವರ ಮನೆಯ ಮರ್ಯಾದೆ ಹಾಗೂ ಬಡ ಹುಡುಗನ ಜೀವನ ಸಂಕಷ್ಟಕ್ಕೆ ಬಿದ್ದ ಬಗ್ಗೆ ಪಾಪಪ್ರಜ್ಞೆ ಇಲ್ಲದ ಆಕೆ ತನ್ನ ಸ್ವಾತಂತ್ರ್ಯಕ್ಕಾಗಿ ಮದುವೆಯಾದ ನೈಜ ಘಟನೆ ಇದು. ಮದುವೆ ಒಂದು ಬಂಧನ ಎಂಬ ಪ್ರಚಲಿತ ಮಾತಿಗೆ ಮದುವೆಯನ್ನೇ ಸ್ವಾತಂತ್ರ್ಯ ಪಡೆಯುವ ಉಪಾಯವಾಗಿ ಮಾಡಿಕೊಂಡಿದ್ದಳು.
ಆದರೆ ಈಕೆ ಆಧುನಿಕ ಕಾನೂನುಗಳ ಅಡಿಯಲ್ಲಿ ರಕ್ಷಣೆ ಪಡೆಯುವ ಮಾರ್ಗವನ್ನು ಕಂಡು ಹುಡುಕಿದ ತಂತ್ರ ನಿಜಕ್ಕೂ ಅಪಾಯಕಾರಿಯೇ. ಏಕೆಂದರೆ ಆಕೆ ಮದುವೆಯಾದ ಗಂಡನನ್ನು ಷಂಡ ಎಂದು ಕರೆದು ಅವಮಾನಿಸುವ ಅಪಾಯವೂ ಇರುವುದರಿಂದ ಬಡವರು ನ್ಯಾಯಾಲಯದ ಮೆಟ್ಟಲನ್ನು ಹತ್ತುವುದಿಲ್ಲ. ಈ ಪ್ರಕರಣವು ಇನ್ಯಾರಾದರೂ ಹೆಣ್ಮಕ್ಕಳ ತಲೆಹೊಕ್ಕರೆ ಮತ್ತೆ ಹೆಚ್ಚು ಬಡ ಕುಟುಂಬಗಳು ಆತಂಕಕ್ಕೆ ಒಳಗಾಗುವುದು ನಿಶ್ಚಿತ.
ಆಧುನಿಕ ಭಾರತದಲ್ಲಿ ಹಕ್ಕು ಮತ್ತು ಸ್ವಾತಂತ್ರ್ಯವೆಂಬ ಪರಿಕಲ್ಪನೆಗಳು ಅನೇಕ ರೀತಿಯಲ್ಲಿ ದುರುಪಯೋಗವಾಗುತ್ತಿವೆ. ಮಹಿಳೆಯರ ಸುರಕ್ಷೆಗಾಗಿ ರೂಪಿಸಿದ ಕಾನೂನುಗಳು ದುರ್ಬಳಕೆಯಾದ ಅನೇಕ ಪ್ರಕರಣಗಳು ವರದಿಯಾಗುತ್ತಿವೆ. ಪುರುಷರು ಮಹಿಳೆಯರನ್ನು ಶೋಷಣೆಗೊಳಪಡಿಸಿದ ಘಟನೆಗಳನ್ನು ಮೀರಿಸುವಂತೆ ಪುರುಷರನ್ನು ಮಾನಸಿಕ ಹಿಂಸೆಗೊಳಪಡಿಸಿದ ಪ್ರಕರಣಗಳು ನ್ಯಾಯಾಲಯದ ಮೆಟ್ಟಲನ್ನೇರುತ್ತಿವೆ. ಇದರಲ್ಲಿ ಕೇವಲ ಗಂಡನನ್ನಷ್ಟೇ ಅಲ್ಲದೆ ಆತನ ತಂದೆ, ತಾಯಿ, ಸೋದರ ಸೋದರಿಯರೂ ಸಂಕಷ್ಟಕ್ಕೆ ಒಳಗಾದ ಘಟನೆಗಳೂ ಜರಗಿವೆ. ಇನ್ನು, ಒಪ್ಪಿಗೆಯ ವಿಚ್ಛೇದನಕ್ಕೆ ಲಕ್ಷಾಂತರ ಮೊತ್ತದ ಜೀವನಾಂಶಕ್ಕಾಗಿ ಬೇಡಿಕೆ ಇಟ್ಟದ್ದು ವರದಿಯಾಗಿದೆ. ಕೋಟಿಗಳ ಮೊತ್ತದಲ್ಲಿ ಜೀವನಾಂಶ ಕೇಳಿದಾಗ ಅದನ್ನು ಸರಿಯಲ್ಲವೆಂದು ನ್ಯಾಯಾಧೀಶರೇ ಪತ್ನಿಯ ಮನವಿಯನ್ನು ತಳ್ಳಿ ಹಾಕಿದ್ದಾರೆ. ಇನ್ನು ಪತ್ನಿಯ ಪೀಡನೆಯನ್ನು ತಾಳಲಾಗದೆ ತಮ್ಮ ಡೆತ್‍ನೋಟ್‍ನ್ನು ಧ್ವನಿ ಮುದ್ರಣ ಮಾಡಿ ಆತ್ಮಹತ್ಯೆಗೆ ಶರಣಾದ ಇಂಜಿನಿಯರ್ ಗಳ ಉದಾಹರಣೆಗಳೇ ಇತ್ತೀಚೆಗೆ ವರದಿಯಾಗಿವೆ. ಅಂದರೆ ಹೆಣ್ಣಿಗೆ ಅನ್ಯಾಯವಾಗಬಾರದು ಎಂಬ ದೃಷ್ಠಿಯಿಂದ ಮಾಡಲಾಗಿರುವ ಶಾಸನವು ವರದಕ್ಷಿಣೆ, ಹೆಂಡತಿಯನ್ನು ಆಳಿನಂತೆ ನಡೆಸಿಕೊಳ್ಳುವಲ್ಲಿ, ಹೊಡೆದು ಹಿಂಸಿಸುವಲ್ಲಿ ಉಪಯೋಗ ಆಗಬೇಕು. ಆದರೆ ಅಂತಹವರು ಎಷ್ಟು ಮಂದಿ ನ್ಯಾಯಾಲಯಕ್ಕೆ ಹೋಗುತ್ತಾರೆ? ಆದರೆ ತನಗೆ ತರಕಾರಿ ಹಚ್ಚಲು ಬರುವುದಿಲ್ಲ, ನೆಲ ಒರೆಸಲು ಬರುವುದಿಲ್ಲ, ಅಡುಗೆ ಮಾಡಲು ಗೊತ್ತಿಲ್ಲ ಎನ್ನುವ ಶಿಕ್ಷಿತ ಉನ್ನತವರ್ಗದ ಹೆಣ್ಮಕ್ಕಳು ಗಂಡನನ್ನು ಆಳಿನಂತೆ ಕಾಣುತ್ತಾರೆ. ಅದಲ್ಲದೆ ಗಂಡನ ಮನೆಯವರನ್ನು ಹೆದರಿಸುವುದಕ್ಕಾಗಿ ಶಾಸನದ ಉಪಯೋಗ ಮಾಡಿದ್ದು ಕಂಡು ಬರುತ್ತದೆ. ಇಂತಹ ಕಾರಣಗಳಿಂದ ಕುಟುಂಬಗಳ ಸೌಹಾರ್ದ ಮರೆಯಾಗಿ ವಿಚ್ಛೇದನಗಳು ಸಂಭವಿಸುತ್ತಿವೆ.
ಕುಟುಂಬ ಎಂಬುದು ಸಮಾಜದ ಆಧಾರ ಸ್ಥಂಭ. ಮದುವೆ ಎಂಬುದು ಈ ಸ್ಥಂಭದ ತಳಪಾಯ. ಅದು ದುರ್ಬಲವಾಗಬಾರದು. ಹಾಗಾಗಿ ಮದುವೆ ಎಂಬ ಸಂಬಂಧದೊಳಗೆ ಸೇರಿಕೊಳ್ಳುವ ಮೊದಲೇ ಸರಿಯಾದ ನಿರ್ಧಾರ ತಾಳುವ ಅಗತ್ಯವಿದೆ. ಕೇವಲ ವಿದ್ಯಾವಂತರೆಂಬ ಪದವಿಗಳಿದ್ದರೆ ಸಾಲದು. ತಮ್ಮದೇ ಭಾವ ಪ್ರಪಂಚದ ಸರ್ವೆ ಮಾಡಬೇಕು. ತಾನು ಇರುವ ಲೋಕ ಮತ್ತು ಬಯಸುವ ಕಲ್ಪನಾ ಲೋಕಗಳ ನಡುವೆ ಇರುವ ಅಂತರವನ್ನು ಅರ್ಥಮಾಡಿಕೊಳ್ಳಬೇಕು. ಹುಡುಗ ಮತ್ತು ಹುಡುಗಿಯಲ್ಲಿ ತಾಳ್ಮೆ, ಕ್ಷಮೆ, ಸಹನೆ, ಶೇರಿಂಗ್, ಸಂಸ್ಕೃತಿ ಚಿಂತನೆ, ಬದುಕಿನ ಕನಸು ಮುಂತಾದುವುಗಳ ಬಗ್ಗೆ ಇರುವ ಆಲೋಚನೆಗಳ ಚರ್ಚೆ ನಡೆಯಬೇಕು. ಇಂತಹ ವಿಚಾರ ವಿನಿಮಯಗಳಿಗೆ ವಿದ್ಯಾವಂತರು ಅವಕಾಶ ಪಡೆಯುತ್ತಾರೆ. ಆದರೆ ಇದು ನಾಟಕೀಯವಾಗುವ ಸಂದರ್ಭಗಳಾದಾಗ ವಿವಾಹವಾದ ಬಳಿಕ ಒಬ್ಬರಲ್ಲ ಒಬ್ಬರು ಮೊಸಕ್ಕೆ ಒಳಗಾಗುತ್ತಾರೆ. ಹಾಗಾಗಿ ಮಕ್ಕಳ ವ್ಯಕ್ತಿತ್ವದಲ್ಲಿ ಪ್ರಾಮಾಣಿಕತೆಯನ್ನು ಬೆಳೆಸುವ ಒಂದು ಎಚ್ಚರವನ್ನು ಹೆತ್ತವರು ಇಟ್ಟುಕೊಂಡರೆ ಈ ಅಪಾಯದಿಂದ ಪಾರಾಗಬಹುದು.
ಕಾಸರಗೋಡು CPCRI ತನ್ನ 110ನೇ ಸಂಸ್ಥಾಪನಾ ದಿನಾಚರಣೆಯ ಅಂಗವಾಗಿ ಜನರೇಷನ್ Z ಗಾಗಿ…
ಮಹಿಳಾ ಉದ್ಯಮಶೀಲತೆ, ತೆಂಗು ಮೌಲ್ಯವರ್ಧನೆ ಹಾಗೂ ರೈತರ ಆದಾಯ ವೃದ್ಧಿಯಲ್ಲಿ ತೆಂಗು ಅಭಿವೃದ್ಧಿ…
ತೆಂಗಿನಕಾಯಿ ಬೆಲೆ ಇಳಿಕೆ ಆತಂಕ ಹೆಚ್ಚಾಗಿದೆ. ಉತ್ಪಾದನೆ ಏರಿಕೆ ನಡುವೆಯೇ ರಫ್ತು ಮತ್ತು…
ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಸಚಿವ ಶಿವರಾಜ್ ಸಿಂಗ್ ಚೌಹಾನ್ ಅವರು…
ಚಳಿಗಾಲದಲ್ಲಿ ಆಹಾರ ಪದ್ಥತಿಯಲ್ಲೂ ಬದಲಾವಣೆ ಮಾಡಿಕೊಂಡರೆ ಉತ್ತಮ. ಅದರಲ್ಲಿ ಎಳ್ಳು ಸೇವನೆಯೂ ಒಂದು.…
ರಾಜ್ಯ ಸರ್ಕಾರ, ರಾಜಧಾನಿ ಬೆಂಗಳೂರಿನ ನಂತರ ಇದೀಗ ರಾಜ್ಯಾದ್ಯಂತ ಆಸ್ತಿ ಮಾಲೀಕರಿಗೆ ಸಿಹಿ…