ಮದುವೆ ಎಂದರೆ ಹೆದರಿಕೆ

February 5, 2026
10:03 PM

ಮದುವೆಯಾಗಿ ಎರಡು ತಿಂಗಳು ಪ್ರೀತಿಸುತ್ತ ಜೊತೆಗಿದ್ದು ಯಾರಿಗೂ ಹೇಳದೆ ಪರಾರಿಯಾದ ಪತ್ನಿಯ ವಂಚನೆಯಿಂದ ನೊಂದ ಪತಿಯ ಆತ್ಮಹತ್ಯೆ, ಅದೇ ಹೊತ್ತಿನಲ್ಲಿ ಆ ವಂಚಕಿಯ ತಾಯಿಯ ಮನೆಯಲ್ಲಿ ಆಕೆಯ ಸೋದರ ಮಾವನೂ ನೇಣಿಗೆ ಶರಣಾಗಿದ್ದ. ತನ್ನ ಒಂದು ದುಷ್ಕೃತ್ಯಕ್ಕೆ ಆಕೆ ಎರಡು ಸಮರ್ಥ ಜೀವಗಳ ಬಲಿ ಪಡೆದಿದ್ದಳು. ಆಕೆಯ ಹೆಸರು ರಂಜಿತಾ ಎಂತ ಇದ್ದದ್ದು ಕಾಕತಾಳೀಯ.

ಈ ಪ್ರಕರಣದ ವಾರ್ತೆ ಕನ್ನಡದ ಹೆಚ್ಚಿನ ವಾಹಿನಿಗಳಲ್ಲಿ 27-01-2026 ರಂದು ಪ್ರಸಾರವಾಯಿತು. ಕರ್ನಾಟಕದ ಒಂದು ಊರಿನಲ್ಲಿ ನಡೆದ ಘಟನೆ ಇದು. ನಾನು ಆ ಊರಿನ ಹೆಸರು ಉಲ್ಲೇಖಿಸಲು ಬಯಸುವುದಿಲ್ಲ. ಏಕೆಂದರೆ ಮದುವೆಯಾಗಿ ಬಂದ ಒಬ್ಬರ ಕೃತ್ಯಗಳಿಂದಾಗಿ ಊರಿನ ಹೆಸರು ಹಾಳು ಮಾಡುವುದೇಕೆ? ಅಲ್ಲದೆ ಸದ್ಯದ ಸಾಮಾಜಿಕ ನೈತಿಕ ವಾತಾವರಣದಲ್ಲಿ ಯಾವ ಊರಿನಲ್ಲೂ ಸಂಭವಿಸಬಹುದಾದ ಅನೈತಿಕತೆಯ ಪ್ರಕರಣ ಇದು. ನಮ್ಮ ಸಮಾಜ ಇಷ್ಟೊಂದು ಹದಗೆಟ್ಟಿದೆಯಾ ಎಂದು ಪಕ್ಕದವರನ್ನು ತಟ್ಟಿ ಕೇಳುವಷ್ಟು ಗಂಭೀರ ಪ್ರಕರಣ ಇದು.

ಆತ್ಮಹತ್ಯೆಗೆ ಶರಣಾದ ಹಸಿ ಮದುಮಗ ಮಧುಕರನಿಗೆ ಪ್ರೀತಿಯೆಂಬುದೂ ಹಸಿ ಹಸಿಯಾಗಿಯೇ ಇತ್ತು. ಅಂದರೆ ಆತ ಸುಖದ ಖಯಾಲಿಗಳಿಗೆ ಬಲಿ ಬೀಳದೆ ಶುದ್ಧ ನೈತಿಕತೆಯಿಂದ ಬೆಳೆದ ಸದೃಢ ಸುಂದರ ಯುವಕನಾಗಿದ್ದ. ಹೆಣ್ಣುಗಳ ಜಾಲಕ್ಕೆ ಬಿದ್ದವನಲ್ಲ. ಹೆಣ್ಣಿನ ಪ್ರೀತಿ ಮತ್ತು ಸ್ನೇಹದ ಸ್ನಿಗ್ಧತೆಯ ಅರಿವಾದದ್ದೇ ವಿವಾಹದ ನಿಶ್ಚಿತಾರ್ಥದ ಬಳಿಕ ವಧುವಿನ ಇಚ್ಛೆಯಂತೆ ವಿವಾಹಕ್ಕೆ ಮೊದಲಿನ ಫೋಟೋ ಶೂಟ್‍ನ ಸಂದರ್ಭದಲ್ಲಿ ಆಕೆ ನೀಡಿದ ಮಾದಕ ಅನುಭವಕ್ಕೆ, ಪ್ರೇಮ ಸಲ್ಲಾಪಗಳಿಗೆ ಆತ ಮನ ಸೋತಿದ್ದ. ಸಂಪೂರ್ಣವಾಗಿ ಆಕೆ ಆತನ ಬದುಕಿನ ಸರ್ವಸ್ವ ಎಂಬಂತಾಗಿದ್ದಳು. ಸಾಕಷ್ಟು ಅಬ್ಬರದಲ್ಲಿ ನಡೆದ ವಿವಾಹದ ಬಳಿಕ ದಂಪತಿಗಳು ಜತೆಯಲ್ಲಿ ಕಳೆದಿದ್ದ ಎರಡು ತಿಂಗಳುಗಳಲ್ಲಿ ಸ್ವರ್ಗಸುಖದ ರುಚಿ ನೀಡಿದ್ದಳು. ಆದರೆ ಎರಡು ತಿಂಗಳಾಗುತ್ತಲೇ ಒಮ್ಮಿಂದೊಮ್ಮೆಲೇ ಮನೆಯಿಂದ ಕಾಣೆಯಾದ ಆಕೆಯನ್ನು ಹುಡುಕಿಯೇ ಆತನ ಮನೆಯವರು ಬಸವಳಿದಿದ್ದರು. ಅಪವಾದ, ಬಂಧನ ಇತ್ಯಾದಿ ಅನೇಕ ಬಗೆಯ ಆತಂಕಗಳು ಅವರನ್ನು ಹಿಂಡಿ ಹಿಪ್ಪೆ ಮಾಡಿದ್ದುವು. ಕೊನೆಗೆ ಸಿ.ಸಿ.ಟಿ.ವಿ. ಒಂದರಲ್ಲಿ ಆಕೆಯ ಆಟ ಬಯಲಾಯಿತು. ಸಣ್ಣ ಕೈಚೀಲ ಹಿಡಿದು ನಡೆದುಕೊಂಡು ಹೋದ ಆಕೆ ತನ್ನ ವಿವಾಹಪೂರ್ವದ ಪ್ರಿಯಕರನ ಕಾರಿನಲ್ಲಿ ಹತ್ತಿ ಕುಳಿತ ದೃಶ್ಯ ಸೆರೆಯಾಗಿತ್ತು. ಆ ಕಾರಿನಲ್ಲಿ ಆಕೆಯೇನೋ ಸುಖವಾಗಿ ಸಾಗಿರಬಹುದು. ಆದರೆ ಇತ್ತ ಈ ಮದುಮಗ ವಂಚನೆಯ ವೇದನೆಯನ್ನು ತಡೆಯಲಾಗದೆ ನೇಣಿಗೆ ಕೊರಳೊಡ್ಡಿ ಆತ್ಮಹತ್ಯೆ ಮಾಡಿಕೊಂಡ. ತನ್ನನ್ನು ಬೆಳೆಸಿದ ತಂದೆ ತಾಯಿಗೂ ಕುಟುಂಬಕ್ಕೂ ಇಲ್ಲವಾದ. ಅವನನ್ನು ಪೆÇೀಷಿಸಿ ಬೆಳೆಸಿದ ಮನೆ ಖಾಲಿಯಾದಂತಾಯಿತು.

ಇದೇ ಘಟನೆಯಿಂದ ನೊಂದು ಆತ್ಮಹತ್ಯೆಗೆ ಶರಣಾದ ಇನ್ನೊಬ್ಬರು ಆಕೆಯ ತಾಯಿಯ ತಮ್ಮ ಸುಧಾಕರ, ಅಂದರೆ ಸೋದರ ಮಾವ. ತನ್ನ ಅಕ್ಕನ ಮಗಳು ಬಹಳ ಒಳ್ಳೆಯವಳೆಂದು ಹೇಳಿ ಒಂದು ಒಳ್ಳೆಯ ಮನೆತನದ ಸಾಭ್ಯಸ್ಥ ಹುಡುಗನಿಗೆ ಮದುವೆ ಸಂಬಂಧ ಬೆಸೆಯುವುದರಲ್ಲಿ ಅವರು ಪ್ರಮುಖ ಪಾತ್ರ ವಹಿಸಿದ್ದರು. ಅವರು  ಸರಸ್ವತಿಯ ನಡೆನುಡಿಗಳ ಬಗ್ಗೆ ಪೂರ್ತಿ ವಿಶ್ವಾಸ ಹೊಂದಿದ್ದರು. ಆದರೆ ಆಕೆ ಒಮ್ಮಿಂದೊಮ್ಮೆಲೇ ತನ್ನ ಮಾಜಿ ಪ್ರಿಯಕರನೊಂದಿಗೆ ಓಡಿದಳೆಂದು ತಿಳಿದಾಗ ಅವರು  ಅಪ್ರತಿಭರಾದರು. ತಾನು ಸೊಸೆಯ ಮೇಲೆ ಇಟ್ಟಿದ್ದ ನಂಬಿಕೆಯ ಸೌಧ ಕುಸಿದಿತ್ತು. ತಾನು ಶಿಫಾರಸು ಮಾಡಿದ ತನ್ನ ಅಕ್ಕನ ಮಗಳೇ ಹೀಗೆ ಮಾಡಿದಾಗ ಅವರಿಂದ ನಂಬಿಕೆದ್ರೋಹದ ವೇದನೆಯನ್ನು ಸಹಿಸಲಾಗಲಿಲ್ಲ. ಮರ್ಯಾದೆ ಗೌರವಗಳಿಲ್ಲದ ಬದುಕು ಬೇಡವೆಂದು ಜೀವ ಕಳೆದುಕೋಡ ಅವರ ಕುಟುಂಬವೂ ಆಧಾರವನ್ನು ಕಳೆದುಕೊಂಡಿತು.

ಬಾಲ್ಯದಿಂದಲೇ ಒಳ್ಳೆಯ ಹುಡುಗನೆಂದು ಗುರುತಿಸಲ್ಪಟ್ಟು ಉತ್ತಮ ವಿದ್ಯಾರ್ಥಿಯಾಗಿ ಉನ್ನತ ಶಿಕ್ಷಣದಲ್ಲಿ ಡಿಸ್ಟಿಂಕ್ಷನ್ ಪಡೆದು ತೇರ್ಗಡೆಯಾಗಿ ಮಧುಕರನು ಆಕರ್ಷಕ ಆದಾಯದ ಉದ್ಯೋಗ ಪಡೆದಿದ್ದರೂ ಯಾವುದೇ ಹೆಣ್ಣುಗಳ ಜಾಲಕ್ಕೆ ಸಿಲುಕಿರದಿದ್ದುದರಿಂದ ತನ್ನ ಅಕ್ಕನ ಮಗಳಿಗೆ ಯೋಗ್ಯ ವರ ಎಂಬುದಾಗಿ ತೀರ್ಮಾನಿಸಿದ ಸುಧಾಕರ ಮಾವನು ಶಿಫಾರಸು ಮಾಡಿದ್ದ ಹುಡುಗಿಯಾಗಿದ್ದಳು ರಂಜಿತಾ. ನೋಡೋದಕ್ಕೆ ಆಕರ್ಷಕ ರೂಪಿನ  ಹುಡುಗಿ ವಿದ್ಯಾವಂತಳೂ, ಶ್ರೀಮಂತಳೂ ಆಗಿದ್ದಳು. ಹಾಗಾಗಿ ಈ ವಿವಾಹ ಸಂಬಂಧದ ಬಗ್ಗೆ ನೆಂಟರಿಷ್ಟರು ಗುಣಾತ್ಮಾಕ ಪ್ರಶಂಸೆಯನ್ನೇ ಮಾಡಿದ್ದರು. ಮಧುಕರನ ತಂದೆ ತಾಯಿಗಳಿಗೆ ಭವಿಷ್ಯದ ಸುಂದರ ದಿನಗಳ ಕನಸು ಚಿಗುರಿತ್ತು.

ಈ ಮಧ್ಯೆ ವಿವಾಹ ಪೂರ್ವ ಫೋಟೋ ಶೂಟ್‍ನ ಸಿದ್ಧತೆ ರಂಜಿತಾಳ ಕಡೆಯಿಂದ ನಡೆಯಿತು. ಸಂಪ್ರದಾಯದ ಕುಟುಂಬವಾದರೂ ಅದನ್ನು ಮಧುಕರನ ಹೆತ್ತವರು ನಿರಾಕರಿಸಲಿಲ್ಲ. ನಿರ್ಧಾರವನ್ನು ಮಗನಿಗೇ ಬಿಟ್ಟರು. ಹೆಣ್ಣಿನ ಮಾರ್ದವತೆ ಏನು ಮತ್ತು ಚುಂಬಕ ಶಕ್ತಿ ಹೇಗಿರುತ್ತದೆಂಬ ಮೊದಲ ಅನುಭವ ಮಧುಕರನಿಗಾದುದು ಇಲ್ಲೇ. ಏನಿದ್ದರೂ ನೈತಿಕ ನಿಯಮಗಳಾಚೆಗೆ ಹೋಗದಂತಹ ಸಂಯಮ ಕಾಪಾಡಿಕೊಂಡದ್ದು ಭಾರತೀಯ ಸಾಂಸ್ಕೃತಿಕ ತಳಹದಿಗೆ ಸರಿಯಾಗಿಯೇ ಇತ್ತು.

ವಿವಾಹದ ಬಳಿಕ ಅತಿಥಿ ಸತ್ಕಾರದ  ಕಾರ್ಯಕ್ರಮ ಮುಗಿದು ನೆಂಟರಿಷ್ಟರ ಮನೆಗಳಲ್ಲಿ ಸಮ್ಮಾನಗಳಾಗುತ್ತ ಇಪ್ಪತ್ತು ದಿನಗಳು ಕಳೆದದ್ದೇ ತಿಳಿಯಲಿಲ್ಲ. ಅಷ್ಟರಲ್ಲೇ ಒಂದು ಆಘಾತ ನಡೆದು ಹೋಯಿತು. ರಂಜಿತಾ ಗಂಡನ ಮನೆಯಿಂದ ನಾಪತ್ತೆಯಾಗಿದ್ದಳು ಎಲ್ಲಿ ಹುಡುಕಿದರೂ ಸಿಗದಿದ್ದಾಗ ಅದು ಅನೇಕ ಅನುಮಾನ ಹಾಗೂ ಊಹಾಪೋಹಗಳಿಗೆ ಕಾರಣವಾಯಿತು. ವಧುವಿನ ಕೊಲೆ ಮಾಡಿ ಅಪರಾಧವನ್ನು ಮುಚ್ಚಿಟ್ಟ ಪ್ರಕರಣವಾಗಿದ್ದು ಗಂಡಿನ ಕಡೆಯವರೆಲ್ಲರನ್ನೂ ಬಂಧಿಸುವ ಎಲ್ಲ ಬೆಳವಣಿಗೆಗಳಾದಾಗ ಪ್ರಕರಣಕ್ಕೆ  ಹೊಸ ಟ್ವಿಸ್ಟ್ ಒಂದು ಸಿಕ್ಕಿತು. ಅಂದರೆ ರಂಜಿತಾಳು ಒಂದು ಚೀಲದೊಂದಿಗೆ ರಸ್ತೆಯಲ್ಲಿ ನಡೆಯುತ್ತ ಹೋಗಿ ಕಾಯುತ್ತಿದ್ದ ಕಾರಿನ ತೆರೆದ ಬಾಗಿಲ ಮೂಲಕ ಒಳಸೇರಿ ಬಾಗಿಲನ್ನು ಹಾಕಿಕೊಳ್ಳುತ್ತಿದ್ದಂತೆ ಕಾರು ಚಲಿಸಿದ ಚಿತ್ರಣ ಸಿ.ಸಿ.ಟಿ.ವಿ. ಕೆಮರಾವೊಂದರಲ್ಲಿ ಸೆರೆಯಾಗಿತ್ತು ಅಂದರೆ ಆಕೆ ತನ್ನ ಇಚ್ಛಾನುಸಾರ ಗಂಡನ ಮನೆ ಬಿಟ್ಟು ತೆರಳಿದ್ದಳು. ಅರ್ಥಾತ್ ಗಂಡನ ಮನೆಯಿಂದ ಆಕೆಯ ನಿರ್ಗಮನವು ಪೂರ್ವಯೋಜಿತವಾಗಿತ್ತು. ತನ್ನ ಕೃತ್ಯಕ್ಕೊಂದು ಪರಿಣಾಮವಿದೆಯೆಂಬ ಯಾವ ಯೋಚನೆಯೂ ಇಲ್ಲದೆ ಆಕೆ ಸಾಗಿದ್ದಳು. ನಲ್ಮೆಯ ಮಾತು, ಸಮರ್ಪಣೆಯ ಬೆಸುಗೆ, ಜೀವನ ಪಥದ ನೀಲನಕ್ಷೆಯ ಚರ್ಚೆ ಇತ್ಯಾದಿಗಳಿಂದ ಸ್ವಪ್ನ ಲೋಕದಲ್ಲಿ ತೇಲುತ್ತಿದ್ದ ಮಧುಕರನಿಗೆ ಮಹಾಪತನದ ಅನುಭವವಾಯಿತು. ತನ್ನ ಮತ್ತು ತಂದೆ ತಾಯಿಯ ಬಂಧನ ಭೀತಿಯಿಂದ ಮುಕ್ತನಾದರೂ ರಂಜಿತಾಳಿಂದ ಮೋಸಕ್ಕೊಳಗಾದ ನೋವು ಆತನನ್ನು ಜಿಗುಪ್ಸೆಯ ಪರಾಕಾಷ್ಠೆಗೆ ಒಯ್ದಿತು. ತನ್ನ ಸಾವು ತನ್ನ ಹೆತ್ತವರಿಗೆ ಉಂಟುಮಾಡುವ ನಷ್ಟದ ಲೆಕ್ಕಾಚಾರವನ್ನೇ ಮಾಡದ ಆತನಿಗೆ ಜೀವ-ಜೀವನದ ವಿವೇಚನೆಯೇ  ಗೋಚರಿಸಲಿಲ್ಲ. ಕೊನೆಗೆ ಬದುಕಿನ ಆಧಾರವನ್ನು ಕಳೆದುಕೊಂಡ ಆತನ ಹೆತ್ತವರ ಸಂಕಟ ರಂಜಿತಾಗೆ ಅರ್ಥವಾದೀತೇ?

ಇಲ್ಲಿ ಉಲ್ಲೇಖಿಸಲ್ಪಟ್ಟ ಎರಡು ಆತ್ಮಹತ್ಯೆಗಳಿಗೆ ಕಾರಣಗಳೇನು? ರಂಜಿತಾಳ ಸ್ವಂತ ಸುಖದ ಸ್ವಾರ್ಥ ಕಾರಣವೇ ಅಥವಾ ಭಾರತೀಯ ಸಮಾಜದಲ್ಲಿ ಸಮಾಜವನ್ನು ಎದುರಿಸಲಾಗದ ಅಪಧೈರ್ಯ ಕಾರಣವೇ?  ವಾಸ್ತವದಲ್ಲಿ ಇವೆರಡೂ ಬೆಸೆದುಕೊಂಡ ಕಾರಣಗಳಾಗಿವೆ. ಹೆಣ್ಣಿನ ವಿದ್ಯೆ, ಉದ್ಯೋಗ ಮತ್ತು ಸ್ವಾತಂತ್ರ್ಯಗಳು ಕುಟುಂಬದ ಭದ್ರತೆಗೆ ಆಧಾರವಾಗಬೇಕಿತ್ತು. ಅನೇಕ ಸಂದರ್ಭಗಳಲ್ಲಿ ಹಾಗೆ ಆದದ್ದಿದೆ. ಆದರೆ ಅದೇ ವ್ಯವಸ್ಥೆಯಲ್ಲಿ ಬೆಳೆದ ಯುವಜನರ ವಿಕೃತ ಕೃತ್ಯಗಳ ಪರಿಣಾಮಗಳ ಪ್ರಕರಣಗಳೂ ಕಾಣಿಸುತ್ತಿವೆ. ಇಂದಿನ ಪದವಿಯು ಹೆಣ್ಣಿಗೆ ವಿನಯವನ್ನು ಕೊಡದ ವಿದ್ಯೆಯಾಗಿವೆ. ಅದಕ್ಕೆ ಪೂರಕವಾಗಿ ಉದ್ಯೋಗ, ಆದಾಯ ಮತ್ತು ಬದಲಾದ ಸ್ಥಾನಮಾನಗಳು ಅಹಂಕಾರವನ್ನು ತುಂಬಿಸಿದ್ದಲ್ಲದೆ ಸ್ವಚ್ಛಂದ ಪ್ರವೃತ್ತಿಗೆ ಎಡೆ ಮಾಡಿಕೊಟ್ಟಿದೆ. ಇದು ತಾವು ಮದುವೆಯಾಗಿ ತುಂಬಿದ ಮನೆಯಲ್ಲಿ ಕುಟುಂಬ ಛಿದ್ರತೆಯ ಪರಿಣಾಮಗಳನ್ನುಂಟು ಮಾಡಿದೆ. ಇಂತಹ ಮನೋಧರ್ಮದ ಹೆಣ್ಣುಗಳು ತಮ್ಮ ಗಂಡನ ಮನೆಯ ಗೌರವ, ಸಂಘಟನೆ ಹಾಗೂ ಸ್ವಾಸ್ಥ್ಯದ ಬಗ್ಗೆ ಯಾವುದೇ ಕಾಳಜಿ ಹೊಂದಿರುವುದಿಲ್ಲ. ಬದಲಾಗಿ ಗಂಡನ ತಂದೆ ತಾಯಿಗೆ ಅಗೌರವದ ನೋವನ್ನು ನೀಡಿ ತಮ್ಮ ಸ್ವಾರ್ಥಕ್ಕಾಗಿ ವಿಚ್ಛೇದನವನ್ನು ನೀಡದೆ ಸತಾಯಿಸುತ್ತಾರೆ. ಇಂದಿನ ಕಾನೂನು ಹೆಣ್ಣಿನ ಪರವಾಗಿ ಇರುವುದರಿಂದ ವಿಚ್ಛೇದನಕ್ಕಾಗಿ ಅಪಾರ ಹಣದ ಬೇಡಿಕೆ ಇಡುವುದಲ್ಲದೆ ಅತ್ತೆ, ಮಾವ ಹಾಗೂ ಗಂಡನ ಸಹೋದರ ಹಾಗೂ ಸಹೋದರಿಯನ್ನು  ಜೈಲಿಗೆ ಕಳಿಸುವಂತಹ ಮಟ್ಟಕ್ಕೂ ಮುಟ್ಟುತ್ತಾರೆ. ಹೆಣ್ಣು ಮಕ್ಕಳಿಗೆ ವಿವಾಹದ ಬಗ್ಗೆ ಗೌರವವೂ ಇಲ್ಲದೆ ವಿಚ್ಛೇದನದ ಬಗ್ಗೆ ಅಪಮಾನವೂ ಇಲ್ಲದೆ ಇಂದು ಭಾರತೀಯ ಕುಟುಂಬಗಳು ಅಭದ್ರವಾಗಿವೆ. ಇಂತಹ ವಿದ್ಯಮಾನಗಳನ್ನು ಕಂಡ ಸಾಂಪ್ರದಾಯಿಕ ಮನಸ್ಸಿನ ಪುರುಷರು ಅಪಧೈರ್ಯ ಹಾಗೂ ಖಿನ್ನತೆಗೆ ಒಳಗಾಗುತ್ತಾರೆ. ದಿನನಿತ್ಯವೂ ಎಂಬಂತೆ ಕೌಟುಂಬಿಕ ಕಲಹ ಹಾಗೂ ತ್ಯಜಿಸುವಿಕೆಯ ಪ್ರಕರಣಗಳು ಅಲ್ಲಲ್ಲಿ ಕೇಳಿ ಬರುತ್ತಿವೆ. ಪ್ರತಿದಿನ ಕೃಷಿ-ಗ್ರಾಮೀಣ-ಪರಿಸರ ಹಾಗೂ ಇತರ ಮಾಹಿತಿಗಾಗಿ  ನಮ್ಮ “ದ ರೂರಲ್‌ ಮಿರರ್.ಕಾಂ”WhatsApp Channel  ಗೆ ಇಲ್ಲಿ ಕ್ಲಿಕ್‌ ಮಾಡಿ

ವೈಯಕ್ತಿಕ ಸ್ವಾರ್ಥ, ಸಂಪತ್ತಿನ ದುರಾಸೆ ಹಾಗೂ ಸಾಮಾಜಿಕ ಗೌರವದ ಬಗ್ಗೆ ಅಲಕ್ಷ್ಯ ಹೊಂದಿದ ಯುವಜನರ ಗುಣಗಳು ಭಾರತೀಯ ಕುಟುಂಬದ ಅಭದ್ರತೆಗೆ ಕಾರಣವಾಗಿವೆ. ಕಳೆದ ಕೆಲವು ವರ್ಷಗಳಲ್ಲಿ ವರದಕ್ಷಿಣೆಯ ಪಿಡುಗಿನ ಕಾರಣದಿಂದಾಗಿ ಸೊಸೆಯಾಗಿ ಬಂದವಳ ಜೀವ ಮತ್ತು ಮಾನಕ್ಕೆ ಬೆಲೆ ಕೊಡದೆ ಸತಾಯಿಸಿ ಸಾಯಿಸಿದ ಪ್ರಕರಣಗಳೇ ಹೆಚ್ಚಿದ್ದುವು. ಈ ಮಧ್ಯೆ ಪ್ರೇಮ ವಿವಾಹಗಳಿಗೆ ಕಡಿವಾಣವೆಂಬ ಹೆಸರಿನಲ್ಲಿ ಮರ್ಯಾದಾ ಹತ್ಯೆಗಳು ನಡೆದುವು. ಇತ್ತೀಚೆಗೆ ಹೆಂಡತಿಯ ಪೀಡನೆಯಿಂದ ಮನನೊಂದು ಗಂಡಸು ಆತ್ಮಹತ್ಯೆ ಮಾಡಿಕೊಳ್ಳುವ ಪ್ರಕರಣಗಳು ಹೆಚ್ಚಾಗುತ್ತಿವೆ. ಹೀಗಾಗಿ “ಮದುವೆ ಎಂದರೆ ಹೆದರಿಕೆ” ಎಂಬ ಸ್ಥಿತಿ ಹೆಣ್ಣಿಗೂ ಗಂಡಿಗೂ ಪೋಷಕರಿಗೂ ಉಂಟಾಗಿರುವುದು ಒಂದು ಸಾಮಾಜಿಕ ದುರಂತವೇ ಹೌದು. (ಇದು ನಡೆದ ಪ್ರಕರಣವೇ ಆದರೂ ಇಲ್ಲಿ ಕೊಟ್ಟಿರುವ ಹೆಸರುಗಳು ಕಾಲ್ಪನಿಕ. ಇತ್ತೀಚಿನ ಮಾಹಿತಿಯ ಪ್ರಕಾರ ಮಹಿಳೆಯನ್ನು ಮತ್ತು ಆಕೆಯ ಪ್ರಿಯಕರನನ್ನು ಬಂಧಿಸಲಾಗಿದೆ)

ಇದನ್ನೂ ಓದಿ…

ಗ್ರಾಮೀಣ ವಲಸೆ ಕಡಿಮೆಯಾದರೂ, ಹಳ್ಳಿ–ನಗರ ಅಂತರ ಇನ್ನೂ ಏಕೆ ಕಡಿಮೆಯಾಗಿಲ್ಲ…?

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ಡಾ.ಚಂದ್ರಶೇಖರ ದಾಮ್ಲೆ

ಡಾ. ಚಂದ್ರಶೇಖರ ದಾಮ್ಲೆಯವರು ಸುಳ್ಯದ ನೆಹರು ಮೆಮೋರಿಯಲ್ ಕಾಲೇಜ್ ನಲ್ಲಿ ಸಮಾಜಶಾಸ್ತ್ರ ಪ್ರಾಧ್ಯಾಪಕರಾಗಿ 35 ವರ್ಷಗಳಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದವರು. ವೃತ್ತಿಯಲ್ಲಿರುವಾಗಲೇ ರಾಷ್ಟ್ರೀಯ ಸೇವಾ ಯೋಜನಾಧಿಕಾರಿಯಾಗಿ ಸಮಾಜಸೇವೆಯಲ್ಲಿ ತೊಡಗಿಕೊಂಡವರು. ಸಾಂಸ್ಕೃತಿಕ ಸಂಘದ ಮೂಲಕ ಮಕ್ಕಳಿಗೆ ಯಕ್ಷಗಾನ ನಿರ್ದೇಶಕನ, ಸುಳ್ಯದಲ್ಲಿ ಯಕ್ಷಗಾನ ಹಿತರಕ್ಷಣಾ ವೇದಿಕೆಯ ಸ್ಥಾಪನೆ, ಸಂಪೂರ್ಣ ಸಾಕ್ಷರತಾ ಆಂದೋಲನದಲ್ಲಿ ಸಂಪನ್ಮೂಲ ವ್ಯಕ್ತಿ, ಕನ್ನಡಮಾಧ್ಯಮದಲ್ಲಿ ಸ್ನೇಹ ಶಿಕ್ಷಣ ಸಂಸ್ಥೆಯ ಸ್ಥಾಪನೆ ಮುಂತಾದ ಸಮಾಜಮುಖಿ ಕಾರ್ಯಗಳಲ್ಲಿ ಸೇವೆ ನೀಡಿದವರು. ಶಿಕ್ಷಣದಲ್ಲಿ ಸೃಜನಶೀಲತೆಗೆ ಒತ್ತು ನೀಡುವ ದಾಮ್ಲೆಯವರು ಸಂಶೋಧಕರಾಗಿದ್ದು ಕನ್ನಡ ಇಂಗ್ಲಿಷ್ ಭಾಷೆಗಳಲ್ಲಿ ಕೃತಿ ರಚನೆ ಮಾಡಿದವರು. 'ನೆಲದನಂಟು' ಮತ್ತು "ಶಾಲೆ ಎಲ್ಲಿದೆ?" ಇವು ಇವರ ಪ್ರಸಿದ್ಧ ಕಾದಂಬರಿಗಳು. ಅನೇಕ ಪ್ರಶಸ್ತಿ ಸಮ್ಮಾನಗಳಿಂದ ಗೌರವಿಸಲ್ಪಟ್ಟ ದಾಮ್ಲೆಯವರಿಗೆ ಅಸಾಮಾನ್ಯ ಕನ್ನಡಿಗ ಪ್ರಶಸ್ತಿ, ಯಕ್ಷಮಂಗಳ ಪ್ರಶಸ್ತಿ, ಅರಣ್ಯಮಿತ್ರ ಮತ್ತು ಜಲಮಿತ್ರ ಪ್ರಶಸ್ತಿ, Nation Builder ಪ್ರಶಸ್ತಿ ಮುಂತಾದುವು ಲಭಿಸಿವೆ. ಹೊಸದಿಗಂತ ಪತ್ರಿಕೆಯಲ್ಲಿ "ಇದ್ಯಾಕೆ ಹೀಗೆ " ಅಂಕಣವನ್ನು ಬರೆಯುತ್ತಿದ್ದರು.

ಇದನ್ನೂ ಓದಿ

ಹವಾಮಾನ ವರದಿ | 25.03.2026 | ಕರಾವಳಿಯಲ್ಲಿ ಇಂದು ಸಂಜೆ ಮಳೆ ಸಾಧ್ಯತೆ | ಏಪ್ರಿಲ್‌ 5ರವರೆಗೆ ಬೇಸಿಗೆ ಮಳೆ ಸಕ್ರಿಯ!
March 25, 2026
12:30 PM
by: ಸಾಯಿಶೇಖರ್ ಕರಿಕಳ
ಹವಾಮಾನ ವರದಿ | 24-03-2026 | ಕರ್ನಾಟಕದಲ್ಲಿ ಮತ್ತೆ ಮಳೆ ಅಲರ್ಟ್‌ | ಈ ದಿನದಿಂದ ಮಳೆ ವ್ಯಾಪ್ತಿ ಹೆಚ್ಚಳ ಸಾಧ್ಯತೆ..!
March 24, 2026
12:24 PM
by: ಸಾಯಿಶೇಖರ್ ಕರಿಕಳ
ರಾಜ್ಯದ ವಿಶ್ವವಿದ್ಯಾಲಯಗಳಲ್ಲಿ 4 ಸಾವಿರ ಹುದ್ದೆಗಳು ಖಾಲಿ – ಆರಂಭದಲ್ಲಿ 1 ಸಾವಿರ ಹುದ್ದೆಗಳ ಭರ್ತಿಗೆ ಕ್ರಮ
March 24, 2026
7:12 AM
by: ಮಿರರ್‌ ಡೆಸ್ಕ್
ಇನ್ಸ್ಪೈರ್ ಅವಾರ್ಡ್ ಗೆ ಅಜ್ಜಾವರ ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿಗಳು ಆಯ್ಕೆ
March 23, 2026
10:18 PM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror