ಕನ್ನಡವನ್ನು ಕಲುಷಿತ ಮಾಡಿರುವ ಪರಕೀಯ ಶಬ್ದಗಳನ್ನು ಅವರಿಗೇ ಬಿಟ್ಟುಬಿಡೋಣ. ಶುದ್ಧ ಕನ್ನಡದ ಸುಂದರ ಪದಗಳೇ ಕನ್ನಡ ತಾಯಿಗೆ ಶೋಭೆ. ಮರೆತು ಹೋದ ಕನ್ನಡ ಪದಗಳನ್ನು ಮತ್ತೆ ಚಾಲ್ತಿಗೆ ತರುವ ಜತೆಗೆ ಹೊಸ ಅನ್ವೇಷಗಣೆಗಳಿಗೆ ಪದಸೃಷ್ಟಿಯ ಮೂಲಕ ಕನ್ನಡಾಂಬೆಯ ಸೇವೆ ಮಾಡೋಣ ಎಂದು ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀರಾಘವೇಶ್ವರಭಾರತೀಮಹಾಸ್ವಾಮೀಜಿ ಕರೆ ನೀಡಿದರು.
ಅಶೋಕೆಯಲ್ಲಿ ಸ್ವಭಾಷಾ ಚಾತುಮಾಸ್ಯ ವ್ರತ ಕೈಗೊಂಡಿರುವ ಶ್ರೀಗಳು 40ನೇ ದಿನವಾದ ಸೋಮವಾರ ಸಾಗರದ ಎನ್.ಎನ್.ಶ್ರೀಧರ್ ಕುಟುಂಬದಿಂದ ಸರ್ವಸೇವೆ ಸ್ವೀಕರಿಸಿ ಆಶೀರ್ವಚನ ಅನುಗ್ರಹಿಸಿದರು. ದಿನಕ್ಕೊಂದು ಆಂಗ್ಲ ಶಬ್ದ ತ್ಯಾಗ ಅಭಿಯಾನದಲ್ಲಿ ಸ್ಕ್ರೀನ್‍ಶಾಟ್ ಅಥವಾ ಅಥವಾ ಸ್ಕ್ರೀನ್‍ಗ್ರಾಫ್ ಪದ ಕೈಬಿಡುವಂತೆ ಸಲಹೆ ಮಾಡಿದರು. ಇದು ಚರವಾಣಿ ಯುಗ. ನಮ್ಮ ಜೀವನದ ಅವಿಭಾಜ್ಯ ಅಂಗವಾಗಿ ಬೆಳೆದಿರುವ ಚರವಾಣಿಗೆ ಸಂಬಂಧಿಸಿದಂತೆ ಈ ಎರಡು ಪದಗಳು ವ್ಯಾಪಕ ಬಳಕೆಯಲ್ಲಿದೆ. ಮೇಲ್ನೋಟಕ್ಕೆ ಕನ್ನಡ ಪದವೇ ಇಲ್ಲ ಎಂಬಂತೆ ಕಂಡುಬರುತ್ತದೆ. ಆದರೆ ಸುಂದರ ಶಬ್ದಗಳು ಕನ್ನಡದವಲ್ಲಿವೆ ಎಂದು ಹೇಳಿದರು.
ಸ್ಕ್ರೀನ್‍ಶಾಟ್ ಬದಲು ತೆರೆ ಸೆರೆ ಎಂಬ ಸರಳ- ಸುಂದರ ಪದ ತೆರೆಯ ಚಿತ್ರವನ್ನು ಸೆರೆಹಿಡಿಯುವ ಅರ್ಥವನ್ನು ಚೆನ್ನಾಗಿ ಬಿಂಬಿಸುತ್ತದೆ. ಈ ಹೃಸ್ವ ಶಬ್ದದಲ್ಲಿ, ಪ್ರಾಸವಿದೆ. ಉಚ್ಚರಣೆಗೂ ಸುಲಭ. ಈ ಸುಂದರ ಪದ ಬಳಕೆಯನ್ನೇ ಚಾಲ್ತಿಗೆ ತರೋಣ ಎಂದು ಕರೆ ನೀಡಿದರು. ತೆರೆಯಚ್ಚು, ತೆರೆ ಚಿತ್ರ, ಪರದೆ ಚಿತ್ರ, ತೆರೆ ಹಿಡಿತ ಮುಂತಾದ ಪದ್ಯಗಳನ್ನೂ ಬಳಸಬಹುದು. ಶುದ್ಧ ಕನ್ನಡ ಭಾಷೆಯ ಈ ಪದವನ್ನು ಬಳಸೋಣ. ಕನ್ನಡಾಂಬೆಯೂ ಇದರಿಂದ ಸಂತೋಷಪಡುತ್ತಾಳೆ. ಪರಕೀಯವಾದದ್ದು ಅವರ ಬಳಿಯೇ ಇರಲಿ. ಕನ್ನಡದ ಸುಂದರ ಪದಗಳು ವಿಜೃಂಭಿಸಲಿ ಎಂದು ಆಶಿಸಿದರು.
ಗೋವಾದ ಶ್ರೀ ಶಿವದತ್ತನಾಥ ಮಹಾರಾಜ್ ಅವರು ಅಪಾರ ಶಿಷ್ಯಸಮೂಹದೊಂದಿಗೆ ಅಶೋಕೆಗೆ ಆಗಮಿಸಿ, ವ್ರತನಿರತರಾದ ಶ್ರೀಗಳ ದರ್ಶನ ಆಶೀರ್ವಾದ ಪಡೆದರು. ಚಾತುರ್ಮಾಸ್ಯದ ಅಂಗವಾಗಿ ನಡೆಯತ್ತಿರುವ ಚತುಃಸಂಹಿತಾ ಯಾಗದಲ್ಲೂ ಶ್ರೀ ಶಿವದತ್ತನಾಥರು ಪಾಲ್ಗೊಂಡು, ಪುರಾತನ ಮಲ್ಲಿಕಾರ್ಜುನ ದೇವಾಲಯಕ್ಕೆ ಭೇಟಿ ನೀಡಿದರು. ಪ್ರತಿದಿನ ಕೃಷಿ-ಗ್ರಾಮೀಣ-ಪರಿಸರ ಹಾಗೂ ಇತರ ಮಾಹಿತಿ ಮತ್ತು ನ್ಯೂಸ್ ಎಲರ್ಟ್ ಗಾಗಿ ನಮ್ಮ WhatsApp Channel ಗೆ ಇಲ್ಲಿ ಕ್ಲಿಕ್ ಮಾಡಿ ಸೇರಿಕೊಳ್ಳಿ

ಚಾತುರ್ಮಾಸ್ಯದಲ್ಲಿ ಋಗ್ವೇದ ಪಾರಾಯಣ ಕೈಗೊಂಡ ವೇದಮೂರ್ತಿ ನಾಗನರಸಿಂಹ ಭಟ್ ಅವರನ್ನು ಶ್ರೀಗಳು ಸನ್ಮಾನಿಸಿದರು. ಚಾತುರ್ಮಾಸ್ಯ ತಂಡದ ಶ್ರೀಕಾಂತ್ ಪಂಡಿತ್, ಅರವಿಂದ ಧರ್ಬೆ, ವಿವಿವಿ ಆಡಳಿತಾಧಿಕಾರಿ ಡಾ.ಟಿ.ಜೆ.ಪ್ರಸನ್ನ ಕುಮಾರ್, ಹಿರಿಯ ಲೋಕಸಂಪರ್ಕಾಧಿಕಾರಿ ಜಿ.ಕೆ.ಹೆಗಡೆ, ಶ್ರೀಮಠದ ಶಾಸ್ತ್ರಿಗಳಾದ ಸುಬ್ರಾಯ ಅಗ್ನಿಹೋತ್ರಿ, ಶ್ರೀಕಾರ್ಯದರ್ಶಿ ಮಧು ಜಿ.ಕೆ. ಮತ್ತಿತರು ಉಪಸ್ಥಿತರಿದ್ದರು. ಗುಡಿಗಾರ ಸಮಾಜದಿಂದ ಸ್ವರ್ಣಪಾದುಕಾ ಸೇವೆ ನೆರವೇರಿತು. ಸರ್ವಸಮಾಜ ಸಂಯೋಜಕ ಕೆ.ಎನ್.ಹೆಗಡೆ, ಸಮಾಜದ ಗಣ್ಯರಾದ ವಾಸುದೇವ ಶೆಟ್ಟರು, ದೇವಿದಾಸ ಶೆಟ್ಟರು, ನಂದೂ ಶೆಟ್ಟರು ಪಾಲ್ಗೊಂಡಿದ್ದರು.


