‘ಅರ್ಥ’ ಮತ್ತು ‘ಅಪಾರ್ಥ’ದ ನಡುವೆ ಇರುವ ‘ಪಾ’ ಯಾವುದು?

September 1, 2026
7:02 AM
ಅಪಾರ್ಥವಾಗುವುದು ಮಾನವ ಸಹಜ; ಆದರೆ ಅಪಾರ್ಥವಾಯಿತೆಂಬ ಅರಿವು ಬಂದ ನಂತರ ಮತ್ತೆ ‘ಅರ್ಥ’ದೆಡೆಗೆ ಮರಳಲು ಮನಸ್ಸು ಸಿದ್ಧವಾಗಿರಬೇಕು. ಅದಕ್ಕೆ ಸ್ವಾರ್ಥ, ಅಹಂ ಮತ್ತು ಪೂರ್ವಗ್ರಹಗಳನ್ನು ಸ್ವಲ್ಪ ಬದಿಗಿಡುವ ಮನೋಭಾವ ಬೇಕು ಎಂದು ಬರಹಗಾರ ಜಯಪ್ರಕಾಶ ಎ ನಾಕೂರು ಹೇಳುತ್ತಾರೆ.

ಅರ್ಥವೆಂಬ ಪದಕ್ಕೆ ನಾನಾರ್ಥಗಳು ಪ್ರಚಲಿತದಲ್ಲಿವೆ. ಅವು – ಶಬ್ದದ ಅಭಿಪ್ರಾಯ, ಮನಸಿನ ಭಾವ, ಆಶಯ, ವಿಚಾರ,ಉದ್ದೇಶ ಇತ್ಯಾದಿ. ಜಿಜ್ಞಾಸುಗಳನ್ನು ಬಹುವಾಗಿ ಕಾಡುವ ಸಂಗತಿಗಳಲ್ಲಿ ಅರ್ಥದಂತೆಯೇ ಅಪಾರ್ಥವೂ ಪ್ರಮುಖವಾದುದಾಗಿದೆ. ಅರ್ಥಕ್ಕೆ ಪ್ರಧಾನವಾಗಿ ಎರಡು ಮುಖ. ಒಂದು, ಭೌತಿಕಾರ್ಥ(Materialistic),ಇನ್ನೊಂದು ಬೌದ್ಧಿಕಾರ್ಥ(Intellectual). ಭೌತಿಕಾರ್ಥವು ಸ್ವಾಭಾವಿಕವಾದುದು(Natural). ಆದ ಕಾರಣ ಅದನ್ನು ಯಾರಿಂದಲೂ ತಿದ್ದಲಾಗದು. ಒಂದು ವೇಳೆ ತಿದ್ದಿದರೂ ನಿರ್ದಿಷ್ಟ ಭೌತಿಕ ವಸ್ತುವಿನ ಸ್ವರೂಪವೇನೂ ಬದಲಾಗದು. ಹಾಗೆಂದು, ಭೌತಿಕಾರ್ಥವು ಕೂಡಾ ಹೊಳೆದದ್ದು ಮನುಷ್ಯ ಸಾಮಾನ್ಯನ ಸಾಮಾನ್ಯಬುದ್ಧಿಗೇ ಎಂಬುದನ್ನು ನಿರಾಕರಿಸಲಾಗದು. ಆದರೆ, ಬೌದ್ಧಿಕಾರ್ಥ ಹಾಗಲ್ಲ. ಅದು ಬುದ್ಧಿಯ ಬಳಕೆಯಿಂದ ಮೊಳೆಯುವ, ಹೊಳೆಯುವ ಅರ್ಥ! ಅದು ಅಸಾಮಾನ್ಯ ಮನುಷ್ಯನ ಅಸಾಮಾನ್ಯವಾದ ವ್ಯವಸ್ಥಿತ ಬುದ್ಧಿಗೆ ಗೋಚರಿಸುವಂಥದ್ದು. ಅರ್ಥವಾಗಲೀ,ಅಪಾರ್ಥವಾಗಲೀ ಗ್ರಹಿಕೆ(Perception)ಯಿಂದ ಉಂಟಾಗುವಂಥವು. ( ಆಸಕ್ತರು ಎಪ್ರಿಲ್ 2026ರ ‘ತುಷಾರ’ ಮಾಸಪತ್ರಿಕೆಯಲ್ಲಿ ಪ್ರಕಟವಾದ ಪ್ರಕೃತ ಲೇಖಕನ ‘ಅರ್ಥಮೀಮಾಂಸಾ: ಅರ್ಥವಾಗದೆಂದರೆ ಏನರ್ಥ?’ ಎಂಬ ಲೇಖನವನ್ನು ಪರಿಶೀಲಿಸಬಹುದು)

ಅಪಾರ್ಥ ಎಂದರೇನು? ತಪ್ಪು ಅರ್ಥ,ಅರ್ಥವಿಲ್ಲದ,ಪ್ರಯೋಜನವಿಲ್ಲದ,ವ್ಯರ್ಥವಾದ – ಹೀಗೆ ಅಪಾರ್ಥಕ್ಕೂ ನಾನಾರ್ಥಗಳಿವೆ. ಅರ್ಥ ಮೊದಲು ಹುಟ್ಟಿದ್ದೋ ಅಥವಾ ಅಪಾರ್ಥ ಮೊದಲು ಹುಟ್ಟಿದ್ದೋ? ಇದನ್ನು ತಿಳಿಯಬೇಕಾದರೆ ಇನ್ನಷ್ಟು ಮೂಲವನ್ನು ಶೋಧಿಸಬೇಕಾಗುತ್ತದೆ. ಮೊದಲು ಹುಟ್ಟಿದ್ದು ಇವೆರಡೂ ಅಲ್ಲ! ಬರೇ ಶಬ್ದ ಮಾತ್ರ. ಶಬ್ದವನ್ನು ಅನುಸರಿಸಿ ಅರ್ಥ ಹುಟ್ಟಿದ್ದು ಎನ್ನಲಾದೀತೇ? ಆಗದು, ಏಕೆಂದರೆ, ಶಬ್ದ ಮತ್ತು ಅರ್ಥಗಳು ಒಂದನ್ನೊಂದು ಬಿಟ್ಟಿಲ್ಲವಲ್ಲ!(ವಾಗರ್ಥವು ಅದ್ವೈತ ತತ್ತ್ವ!) ಹಾಗಾಗಿ ಅವು ಒಟ್ಟಿಗೇ ಹುಟ್ಟಿದವು. ಹಾಗೆ ಹುಟ್ಟಿದ ಅವೆರಡೂ ಮನುಷ್ಯನ ಭಾವ – ಬುದ್ಧಿಗೆ ಬಂದಂಥವು. ಭಾವವು ಶಬ್ದವನ್ನು ಗ್ರಹಿಸಿತು, ಬುದ್ಧಿಯು ಅರ್ಥವನ್ನು ಗ್ರಹಿಸಿತು. ಮನುಷ್ಯ ಮೊದಲು ಕೇಳಿದ್ದು ಶಬ್ದವನ್ನು. ಬಳಿಕ ಗ್ರಹಿಸಿದ್ದು ಅರ್ಥವನ್ನು! ಹಾಗಾದರೆ, ಅಪಾರ್ಥ ಹುಟ್ಟಿದ್ದು ಎಲ್ಲಿಂದ? ಅದು ತಪ್ಪು ಗ್ರಹಿಕೆ/ತಿಳಿವಳಿಕೆಯಿಂದ (Misunderstanding) ಮತ್ತು ಅಷ್ಟೇ ಸಹಜವಾಗಿ ತಪ್ಪು ಮಾತಿನಿಂದ ಯಾ ಕೃತಿಯಿಂದ! ತಪ್ಪುಗ್ರಹಿಕೆಯಾಗಲೀ ತಪ್ಪು ಮಾತು-ಕೃತಿಗಳಾಗಲೀ ಅಪ್ರಜ್ಞೆಯಿಂದ ಸಂಭವಿಸಿದಲ್ಲಿ ಕ್ಷಮ್ಯ. ಪ್ರಜ್ಞೆಯಿಂದಲೇ ಹೌದಾದಲ್ಲಿ ಅಕ್ಷಮ್ಯ.

ಅಪಾರ್ಥದ ಶಾಬ್ದಿಕ ವಿಡಂಬನೆ: ಆಕ್ಷರಿಕವಾಗಿ/ಶಾಬ್ದಿಕವಾಗಿ, ಅರ್ಥಕ್ಕೂ ಅಪಾರ್ಥಕ್ಕೂ ನಡುವೆ ಬಹಳ ವ್ಯತ್ಯಾಸವೇನೂ ಇಲ್ಲ!ಕೇವಲ ಒಂದು ದೀರ್ಘಾಕ್ಷರವಷ್ಟೇ ವ್ಯತ್ಯಾಸ! ‘ಅ‌’ ಮತ್ತು ‘ರ್ಥ’ಗಳ ನಡುವೆ ‘ ಪಾ’ ಅನ್ನು ಸೇರಿಸಿದರೆ ‘ಅಪಾರ್ಥ’. ‘ಪಾ’ ಅನ್ನು ತೆಗೆದರೆ ‘ಅರ್ಥ’.ಆದರೆ,ಬೌದ್ಧಿಕಾವಲೋಕನಕ್ಕೆ ಕೇವಲ ಅಕ್ಷರಜ್ಞಾನ ಸಾಲದಲ್ಲಾ! ಅಕ್ಷರವು ಸಂಕೇತಮಾತ್ರ. ಆ ಸಂಕೇತದ ಪೂರ್ವಾಪರ ಸಂಗತಿಗಳು ಅದೆಷ್ಟಿಲ್ಲ? ‘ಅರ್ಥ’ವನ್ನು ಸೃಜಿಸಬೇಕಾದರೆ ಪೂರ್ವಾಪರ ಬುದ್ಧಿಗಳೆರಡರ ನಡುವೆ ಹೊಂದಾಣಿಕೆ ಬೇಕು. ‘ಅಪಾರ್ಥ’ಕ್ಕಾದರೆ ಈ ಗೊಡವೆಯಿಲ್ಲ. ಅಜ್ಞಾನಾಂಧಕಾರಗಳಿಂದಾಗಿ ಅಪಾರ್ಥವುಂಟಾದಲ್ಲಿ ಅದನ್ನು ಬೋಧಜನನದ್ವಾರಾ ಸರಿಪಡಿಸಿಕೊಳ್ಳಬಹುದು. ಅದಕ್ಕೆ ಮನಸಾ ಸಿದ್ಧವಿರಬೇಕು, ಸ್ವಾರ್ಥ ಮತ್ತು ಸ್ವಾತಂತ್ರ್ಯಗಳ ತ್ಯಾಗವೂ ಬೇಕಾದೀತು. ಆದರೆ, ಈಗ ನಮ್ಮದು Democratic set up ತಾನೇ? ನಮಗೆ ಸಾಂವಿಧಾನಿಕವಾಗಿ ಲಬ್ಧವಾದ ಅಭಿವ್ಯಕ್ತಿ ಸ್ವಾತಂತ್ರ್ಯ(Freedom of expression)ದಂತೆ ಸ್ವ- ವಿದಿತವಾದ ‘ಗ್ರಹಿಕಾಸ್ವಾತಂತ್ರ್ಯ'(Freedom of Understanding / Freedom of perception)ವೂ ಇದೆಯಷ್ಟೇ! ಆದ ಕಾರಣ ಅಭಿವ್ಯಕ್ತಿಕಾರ/ಕೃತಿಕಾರ/ಮಾತುಗಾರ ನಮ್ಮ ‘ಅನಿವಾರ್ಯ ಸಂಬಂಧಿ’/ ಸಹವಾಸಿ’ ಆಗಿದ್ದರೆ ‘ಅ’ ಮತ್ತು ‘ರ್ಥ’ಗಳ ನಡುವೆ ಏನೇ ಆದರೂ ‘ಪಾ’ ವನ್ನು ತರಲಿಕ್ಕಿಲ್ಲ. ಸಾಂಬಂಧಿಕ ಅನಿವಾರ್ಯತೆಯಿಲ್ಲದಿದ್ದರೆ ‘ಅ’ ಮತ್ತು ‘ರ್ಥ’ಗಳ ನಡುವೆ ಹಿಂದುಮುಂದು ನೋಡದೆ ‘ಪಾ’ವನ್ನು ತರುವುದೇ! ಛೇ,ಪಾಪ! ‘ಅರ್ಥ’ಕ್ಕಾಗಲೀ ‘ಅಪಾರ್ಥ’ಕ್ಕಾಗಲೀ ‘ತಮ್ಮ ಅರ್ಥ’ ಗೊತ್ತಿದೆಯೇ? ಅವೆರಡೂ ಮುಗ್ಧವೇ! ಅಭಿವ್ಯಕ್ತಿಕಾರ ಅವುಗಳನ್ನು ತನಗೆ ಬೇಕಾದಂತೆ ಬಳಸಿಕೊಳ್ಳುತ್ತಾನೆ. ಕಾರಣ ಅಭಿವ್ಯಕ್ತಿ ಸ್ವಾತಂತ್ರ್ಯ! ಮತ್ತೆ ಗ್ರಾಹಕನಿಗೆ, ಗ್ರಹಿಕಾಸ್ವಾತಂತ್ರ್ಯವಂತೂ ಇದ್ದೇ ಇದೆ. ಮತ್ತೆ ,ಅದು ಅಭಿವ್ಯಕ್ತಿ ಸ್ವಾತಂತ್ರ್ಯಕ್ಕಿಂತಲೂ ಸ್ವತಂತ್ರ. ಅಪಾರ್ಥವು ಅನರ್ಥಹೇತುಕವಾಗದಿದ್ದರೆ ಸಮಸ್ಯೆಯೇನಿಲ್ಲ! ಅಪಾರ್ಥವಾಯಿತೆಂಬ ಅರಿವುಂಟಾದರೆ ಮರಳಿ ‘ಅರ್ಥ’ದೆಡೆಗೆ ಸಾಗಲಂತೂ ಅವಕಾಶವಿದ್ದೇ ಇದೆ. ಸಿದ್ಧರಿರಬೇಕಷ್ಟೇ! ಏನಂತೀರಿ? ಇದು ಮರ್ತ್ಯಲೋಕವಯ್ಯಾss!

✍️ ಜಯಪ್ರಕಾಶ ಎ ನಾಕೂರು

Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಬೆಂಗಳೂರಿನಲ್ಲಿ ಭಾರತದ ಅತಿದೊಡ್ಡ ಕಾಫಿ ಉತ್ಸವ- ತೋಟದಿಂದ ಕಪ್‌ವರೆಗೆ ಭಾರತದ ಕಾಫಿಯ ಹೊಸ ಪಯಣ
September 1, 2026
7:42 AM
by: ದ ರೂರಲ್ ಮಿರರ್.ಕಾಂ
ಹವಾಮಾನ ವರದಿ | 31-08-2026 | ಸೆ.3ರಿಂದ ದಕ್ಷಿಣ ಒಳನಾಡಿನಲ್ಲಿ ಗುಡುಗು ಸಹಿತ ಮಳೆ ಸಾಧ್ಯತೆ
August 31, 2026
2:46 PM
by: ಸಾಯಿಶೇಖರ್ ಕರಿಕಳ
ತೆಂಗು–ಅಡಿಕೆ ನಡುವೆ ಏಲಕ್ಕಿ, ಮೆಣಸು, ಅರಿಶಿಣ | ತುಮಕೂರಿನಲ್ಲೂ ಬೆಳೆಗಾರರು ಪರ್ಯಾಯ ಆದಾಯದ ಕಡೆಗೆ ಹೆಜ್ಜೆ
August 30, 2026
10:38 PM
by: ದ ರೂರಲ್ ಮಿರರ್.ಕಾಂ
ಮಳೆ ಕೊರತೆ ನೀಗಿಸಲು ಕರ್ನಾಟಕದಲ್ಲಿ ಮೋಡ ಬಿತ್ತನೆ
August 30, 2026
10:18 PM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror