Adina Cordifolia ಎಂಬ ಬೊಟಾನಿಕಲ್ ಹೆಸರುಳ್ಳ ಇದೊಂದು ಕಾಡುಗಿಡವಾಗಿದೆ. ಅಂಗೈ ಅಗಲದ ಹೃದಯದಾಕಾರದ ಹಸಿರು ಎಲೆಗಳನ್ನು ಹೊಂದಿರುವ ಅಣವು ಗಿಡದ ಎಲೆಗಳು ಮೊದಲ ನೋಟಕ್ಕೆ ಉಪ್ಪಳಿಗೆ ಎಲೆಗಳಂತೆ ಕಾಣುತ್ತವೆ. ಆದರೆ ಸೂಕ್ಷ್ಮವಾಗಿ ಗಮನಿಸಿದಾಗ ಅವುಗಳ ನಡುವೆ ಇರುವ ವ್ಯತ್ಯಾಸ ಗೊತ್ತಾಗುತ್ತದೆ. ಉಪ್ಪಳಿಗೆ ಎಲೆಗಳಿಗಿಂತ ಅಣವಿನ ಎಲೆಗಳು ಮೃದುವಾಗಿರುತ್ತವೆ. ಅಣವಿನ ಚಿಗುರುಗಳಲ್ಲಿ ನಸುಕಂದು ಬಣ್ಣ ಕಾಣಿಸುತ್ತದೆ.
ಪೊದರು ಪೊದರಾಗಿ ಬೆಳೆಯುವ ಅಣವು ನಿತ್ಯ ಹರಿದ್ವರ್ಣದ ಬೆಟ್ಟಗಳಲ್ಲಿ ತಾನಾಗಿ ಬೆಳೆಯುತ್ತದೆ. ಮಳೆಗಾಲ ಮುಗಿದು ಗುಡ್ಡಗಳಲ್ಲಿ ತುಂಬಿದ ಕುರುಚಲು ಗಿಡಗಳನ್ನು ಕಡಿಯುವಾಗ ಈ ಗಿಡದ ಪರಿಚಯ ಇಲ್ಲದ ಆಳುಗಳು ಅದನ್ನು ಕಾಡು ಜಾತಿಯದೆಂದು ಕಡಿದೇ ಬಿಡುತ್ತಾರೆ. ನಮ್ಮಲ್ಲಿದ್ದ ಒಂದೇ ಒಂದು ಗಿಡಕ್ಕೂ ಆ ಗತಿ ಬಂದಿತ್ತು. ನಂತರ ಅದರ ಗೆಲ್ಲುಗಳಲ್ಲಿ ಚಿಗುರು ಮೂಡಿತು. ಅ ಬಳಿಕ ನಾನು ಆ ಗಿಡವನ್ನು ಕೆಲಸದವರಿಗೂ ಪರಿಚಯಿಸಿ ಕೊಟ್ಟು ಸಂರಕ್ಷಿಸಿದ್ದೇನೆ. ಏಕೆಂದರೆ ಇದು ಉಬ್ಬಸ ಆಥವಾ ನೇವಸ ನಿವಾರಣೆಯಲ್ಲಿ ತುಂಬಾ ಉಪಯುಕ್ತ ಸಸ್ಯ.
ಸುಮಾರು ಐವತ್ತು ವರ್ಷಗಳ ಹಿಂದೆ ಕೂಡುಕುಟುಂಬದಲ್ಲಿ ವಾಸಿಸುತ್ತಿದ್ದ ನಮ್ಮ ಮನೆಯಲ್ಲಿ ನನ್ನ ಚಿಕ್ಕಪ್ಪನ 6 ತಿಂಗಳ ಮಗನಿಗೆ ಉಸಿರಾಟದ ಸಮಸ್ಯೆ ಜೋರಾಯಿತು. ಆಗ ನನ್ನಮ್ಮ ಗುಡ್ಡೆಗೆ ಹೋಗಿ ಅಣವು ಗಿಡದ ಎಳತು ಚಿಗುರುಗಳನ್ನು ತಂದು ಅವುಗಳನ್ನು ಚೆನ್ನಾಗಿ ಅರೆದು, ಜೇನುತುಪ್ಪವನ್ನು ಬೆರೆಸಿ ಮಗುವಿಗೆ ನೆಕ್ಕಿಸಿದರು. ಪುಟ್ಟ ಮಗುವಾದ ಕಾರಣ ಜೇನುತುಪ್ಪದ ಜತೆ ಸೇರಿಸಿ ಕೊಟ್ಟುದು. ದೊಡ್ಡವರಿಗೆ ಜೇನು ತುಪ್ಪ ಇಲ್ಲದೆಯೂ ಕೊಡಬಹುದು. ಮೂರು ದಿನ ಬೆಳಗ್ಗೆ ಸಂಜೆ ಈ ಔಷಧ ಸೇವನೆಯಿಂದ ತಮ್ಮನ ಉಸಿರಾಟದ ಸಮಸ್ಯೆ ಸಂಪೂರ್ಣ ಕಡಿಮೆಯಾಯಿತು. ಪುಟ್ಟ ಮಗುವಿನ ಉಬ್ಬಸದ ಕಾರಣದಿಂದ ಕಂಗಾಲಾಗಿದ್ದ ಮನೆಯ ಎಲ್ಲರಿಗೂ ಸಮಾಧಾನವಾಯ್ತು. ಈಗ ಅವನಿಗೆ 50 ವರ್ಷ. ಅಂದಿನಿಂದ ಇಂದಿನವರೆಗೆ ಅವನಿಗೆ ಮತ್ತೆ ಉಸಿರಾಟದ ಸಮಸ್ಯೆ ಕಾಣಿಸಿಕೊಂಡಿಲ್ಲ. ಪ್ರತಿದಿನ ಕೃಷಿ-ಗ್ರಾಮೀಣ-ಪರಿಸರ ಹಾಗೂ ಇತರ ಮಾಹಿತಿಗಾಗಿ ನಮ್ಮ “ದ ರೂರಲ್ ಮಿರರ್.ಕಾಂ”WhatsApp Channel ಗೆ ಇಲ್ಲಿ ಕ್ಲಿಕ್ ಮಾಡಿ.
ನಮ್ಮ ಶಾಲೆಯಲ್ಲಿ ಎಂಟು ವರ್ಷದ ವಿದ್ಯಾರ್ಥಿಯೊಬ್ಬನಿಗೆ ಹೀಗೆ ಉಸಿರಾಟದ ಸಮಸ್ಯೆ ಬಂದಾಗ ತಿಂಗಳಲ್ಲಿ ಮೂರು ದಿನದಂತೆ ಮೂರು ತಿಂಗಳ ಕಾಲ ಅವನಿಗೆ ಈ ಔಷಧ ಕೊಟ್ಟೆ. ಅಣವಿನ ಚಿಗುರುಗಳಿಗೆ ಜೀರಿಗೆ ಸೇರಿಸಿ ಕಷಾಯ ಮಾಡಿ ಕುಡಿಸಲು ಹೇಳಿದ್ದೆ. ಈ ಕಷಾಯ ಸೇವನೆಯಿಂದ ಆತನ ಉಸಿರಾಟದ ಸಮಸ್ಯೆ ಬಗೆಹರಿಯಿತು. ಉಸಿರಾಟದ ಸಮಸ್ಯೆಗಲ್ಲದೆ ಅಣವಿನ ಗಿಡದ ಎಲೆಗಳನ್ನು ಕಷಾಯ ಮಾಡಿ ಕುಡಿದರೆ ಶ್ವಾಸಕೋಶ ಶುದ್ಧೀಕರಣವಾಗುತ್ತದೆ. ಅಣವಿನ ಬೇರಿನ ಕಷಾಯ ಸೇವನೆಯು diarrhea, dysentery ಮುಂತಾದ ಸಮಸ್ಯೆಗಳನ್ನು ನಿವಾರಿಸಿ ಜೀರ್ಣಾಂಗ ವ್ಯವಸ್ಥೆಯನ್ನು ಉತ್ತಮಗೊಳಿಸುತ್ತದೆ. ಹೊಟ್ಟೆ ನೋವು, ಜಾಂಡಿಸ್, ಯಕೃತ್ತಿನ ಸಮಸ್ಯೆಗಳನ್ನು ಕಡಿಮೆ ಮಾಡುತ್ತದೆ. ಚರ್ಮದ ಕಾಯಿಲೆಗಳಲ್ಲಿ ಹಾಗೂ ವ್ರಣ ಮತ್ತು ಗಾಯಗಳ ಚಿಕಿತ್ಸೆಯಲ್ಲಿ ಇದರ ಸೊಪ್ಪನ್ನು ಬಳಸಲಾಗುತ್ತದೆ. ಜ್ವರ ನಿವಾರಣೆಗೆ, ಊತದ ಸಂದರ್ಭದಲ್ಲಿ, ಗಾಯವಾದಾಗ ರಕ್ತ ಹೆಪ್ಪುಗಟ್ಟಿಸಲು ಈ ಸಸ್ಯದ ಎಲೆಗಳನ್ನು ಬಳಸಲಾಗುತ್ತದೆ. ಅಣವು ತಾನಾಗಿ ಹುಟ್ಟಿ ಬೆಳೆಯುವ ಗಿಡವಾದುದರಿಂದ ಅದು ಗುಡ್ಡದಲ್ಲಿ ಕಂಡು ಬಂದಾಗ ಉಳಿಸಿಕೊಳ್ಳಬೇಕು. ಇತ್ತೀಚೆಗೆ ನಮ್ಮ ಸೂರ್ಯಾಲಯದಲ್ಲಿ ಪುಟ್ಟದೊಂದು ಅಣವಿನ ಗಿಡ ಹುಟ್ಟಿಕೊಂಡಿದೆ. ಇದನ್ನು ಉಳಿಸಿ, ಬೆಳೆಸಿ, ಬಳಸಿಕೊಳ್ಳುವ ಆಸಕ್ತಿ ನನ್ನದು.
ಕೃಷಿ ಮತ್ತು ರೈತರ ಕಲ್ಯಾಣ ಇಲಾಖೆಯ ಕೇಂದ್ರದ ಸಮಗ್ರ ಕೀಟ ನಿರ್ವಹಣಾ ಕೇಂದ್ರಗಳು…
ಮನಸ್ಸಿದ್ದರೆ ಮಾರ್ಗ ಎಂಬ ಗಾದೆ ಮಾತು ನಾವು ಕೇಳಿದ್ದೇವೆ. ಆದರೆ, ಕೆಲವು ಜನರ…
ಕೆಲವು ಕಡೆಗಳಲ್ಲಿ ರೈತರು ತಮ್ಮ ಜಮೀನಿಗೆ ಹೋಗಲು ಸರಿಯಾದ ದಾರಿಯಿಲ್ಲದೆ ಪರದಾಟ ನಡೆಸಬೇಕಾಗುತ್ತದೆ.…
ಕೃಷಿ ಇಲಾಖೆಯು ರೈತರಿಗೆಂದು ವಿವಿಧ ಸಬ್ಸಿಡಿ ಯೋಜನೆಗಳನ್ನು ಜಾರಿಗೆ ತಂದಿದೆ. ಇದಕ್ಕೆ ಯಾವ…
ಮಹಿಳೆಯರ ಏಳಿಗೆಗೆ ಸರ್ಕಾರವೂ ಹಲವಾರು ರೀತಿಯ ಯೋಜನೆಯನ್ನು ಜಾರಿಗೊಳಿಸಿದೆ. ಇದೀಗ ಗ್ರಾಮೀಣ ಮಹಿಳೆಯರಿಗೆ…
17.12.2025 ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ : ಕರಾವಳಿ…