ಅಡಿಕೆ ಮಾರುಕಟ್ಟೆಯಲ್ಲಿ ಸಮನ್ವಯ ಸಾಧಿಸಲು ಜಿಎಸ್‌ಟಿಯನ್ನು 5 ಶೇಕಡಾದಿಂದ 2 ಶೇಕಡಾಕ್ಕೆ ಇಳಿಕೆ ಮಾಡಬೇಕು, ಅಡಿಕೆ ಸಂಶೋಧನೆ ಹಾಗೂ ಅಭಿವೃದ್ಧಿ ಸಂಸ್ಥೆಗೆ 5 ಕೋಟಿ ರೂಪಾಯಿ ಅನುದಾನ ಅಗತ್ಯವಿದೆ, ಅಡಿಕೆ ಹಳದಿ ಎಲೆರೋಗ ಬಾಧಿತ ಪ್ರದೇಶದ ರೈತರ ಸಾಲಮನ್ನಾ ಹಾಗೂ ಪರ್ಯಾಯ ಬೆಳೆಗೆ ಸಹಕಾರ , ಕಾರ್ಬನ್ ಫೈಬರ್ ದೋಟಿಗೆ ಕಸ್ಟಮ್ ಸುಂಕ ಕಡಿಮೆ ಮಾಡುವುದು, ಎಲ್ಲಾ ತಾಮ್ರದ ಸಲ್ಫೇಟ್ ಮೇಲೆ ಜಿಎಸ್ ಟಿ ದರ ಶೇ 5 ಮಾಡುವಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಕ್ಯಾಂಪ್ಕೋ ಅಧ್ಯಕ್ಷ ಕಿಶೋರ್ ಕುಮಾರ್ ಕೊಡ್ಗಿ ಅವರು ಅಡಿಕೆ ಬೆಳೆಗಾರರ ಪರವಾಗಿ ಮನವಿ ಮಾಡಿದ್ದಾರೆ.
ಮಂಗಳೂರಿನಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಕ್ಯಾಂಪ್ಕೋ ಅಧ್ಯಕ್ಷ ಕಿಶೋರ್ ಕುಮಾರ್ ಕೊಡ್ಗಿ ನೇತೃತ್ವದಲ್ಲಿ ಕ್ಯಾಂಪ್ಕೋ ವ್ಯವಸ್ಥಾಪಕ ನಿರ್ದೇಶಕ ಎಚ್ ಎಂ ಕೃಷ್ಣಕುಮಾರ್, ನಿರ್ದೇಶಕ ಕೃಷ್ಣಪ್ರಸಾದ್ ಮಡ್ತಿಲ ಅವರು ಮಂಗಳವಾರ ಭೇಟಿಯಾದರು. ಈ ಸಂದರ್ಭ ಅಡಿಕೆ ಬೆಳೆಗಾರರ ಸಮಸ್ಯೆಯನ್ನು ಮುಖ್ಯಮಂತ್ರಿಗಳ ಗಮನಕ್ಕೆ ತಂದರು.
ಸಹಕಾರಿ ಸಂಸ್ಥೆಗಳು ಮಾತ್ರ 100 % ಜಿ ಎಸ್ ಟಿ ಸರ್ಕಾರಕ್ಕೆ ಪಾವತಿಸುತ್ತಿದೆ. ಇಡೀ ಅಡಿಕೆ ಮಾರುಕಟ್ಟೆಯಲ್ಲಿ ಸಹಕಾರಿ ಸಂಘಗಳ ಪಾಲು ಶೇ.15 ರಷ್ಟು ಮಾತ್ರ ಇರುವುದರಿಂದ ಸಹಕಾರಿ ಸಂಘಗಳಿಂದ ರೈತರಿಗೆ ನ್ಯಾಯ ಒದಗಿಸಲು ಸಾಧ್ಯವಾಗುತ್ತಿಲ್ಲ. ಆದ್ದರಿಂದ ಅಡಿಕೆ ಮಾರುಕಟ್ಟೆಯಲ್ಲಿ ಸಮನ್ವಯ ಸಾಧಿಸಲು ಜಿಎಸ್‌ಟಿಯನ್ನು 5% ರಿಂದ 2% ಕ್ಕೆಇಳಿಸಲು ಮನವಿ ಮಾಡಿದರು.
ಎಆರ್‌ಡಿಎಫ್ ಸಂಸ್ಥೆಯು ಅಡಿಕೆ ಬೆಳೆಗಾರರ ಅನುಕೂಲಕ್ಕಾಗಿ ಯಂತ್ರಮೇಳ ಹಾಗೂ ಅಡಿಕೆ ಬಗ್ಗೆ ವೈಜ್ಜಾನಿಕವಾಗಿ ಸಂಶೋಧನೆ ನಡೆಸಿದ್ದುಈ ಹಿಂದೆ ಯಡಿಯೂರಪ್ಪನವರು ಮುಖ್ಯಮಂತ್ರಿಗಳಾಗಿದ್ದಾಗ ಈ ಸಂಸ್ಥೆಗೆ ಒಂದು ಕೋಟಿ ರೂಪಾಯಿ ನೀಡಿದ್ದರು. ಇದೀಗ ಕ್ಯಾಂಪ್ಕೋ ಸಂಸ್ಥೆಗೆ ಬಾಕಿ ಇರುವ ಕೆಲಸಕ್ಕೆ ಸರ್ಕಾರದಿಂದ 5 ಕೋಟಿ ರೂಪಾಯಿ ಮಂಜೂರು ಮಾಡಬೇಕಾಗಿ ಮನವಿ ಮಾಡಿದರು.
ಅಡಿಕೆ ಹಳದಿ ಎಲೆರೋಗದಿಂದ ಸಂಪೂರ್ಣನಾಶವಾಗಿರುವ ,ಸುಳ್ಯ, ಕೊಪ್ಪ, ಮಡಿಕೇರಿ ಭಾಗದ ಅಡಿಕೆ ಬೆಳೆಗಾರರು ಸಹಕಾರಿ ಸಂಘಗಳಿಂದ ಪಡೆದ ಸಾಲಮನ್ನಾ ಮಾಡಿ ಹೊಸ ಕೃಷಿ ಮಾಡಲು ಆ ಭಾಗದ ರೈತರಿಗೆ ಆರ್ಥಿಕ ಸಹಕಾರ ನೀಡಲು ಮನವಿಯಲ್ಲಿ ಕ್ಯಾಂಪ್ಕೋ ಒತ್ತಾಯ ಮಾಡಿದೆ.
ಪಾನ್ ಮಸಾಲಕ್ಕೆ 28% + ಸೆಸ್ 60% ತೆರಿಗೆ ಮತ್ತು 66% ಸೆಸ್ ಇದ್ದು ಹೆಚ್ಚಿನ ಪಾನ್ ಮಸಾಲ ಉತ್ಪಾದಕರು ತೆರಿಗೆ ವಂಚಿಸುತ್ತಿದ್ದು ಸಹಕಾರಿ ಸಂಸ್ಥೆಗಳು ಶೇಕಡಾ 100 ತೆರಿಗೆ ಕಟ್ಟುವುದರಿಂದ ವ್ಯವಹಾರ ಮಾಡಲು ಸಾಧ್ಯವಾಗುತ್ತಿಲ್ಲ ಮತ್ತು ದೇಶದ ಆರ್ಥಿಕ ಸಂಪನ್ಮೂಲಕ್ಕೆ ಭಾರಿ ನಷ್ಟವಾಗುವುದರಿಂದ ತೆರಿಗೆಯನ್ನು 12% ಗೆ ಇಳಿಸಬೇಕಾಗಿ ಕ್ಯಾಂಪ್ಕೋ ಅಧ್ಯಕ್ಷರು ಮನವಿ ಮಾಡಿದರು.
ಅಡಿಕೆ ಬೆಳೆಗಾರನಿಗೆ ಕಾರ್ಮಿಕರ ಕೊರತೆಯಿದ್ದು, ಹೊಸತಾಗಿ ಮಾರುಕಟ್ಟೆಗೆ ಬಂದಿರುವ ಕಾರ್ಬನ್ ಫೈಬರ್ ದೋಟಿಯ ಕಸ್ಟಮ್ಸ ಸುಂಕವನ್ನು ಕಡಿಮೆ ಮಾಡುವ ನಿರ್ಧಾರ ತೆಗೆದುಕೊಳ್ಳುವಂತೆ ಮುಖ್ಯಮಂತ್ರಿಗಳನ್ನು ಕ್ಯಾಂಪ್ಕೋ ಒತ್ತಾಯಿಸಿತು.
ಕೋಪರ್ ಸಲ್ಫೇಟ್ ಮುಖ್ಯವಾಗಿ ಪ್ಲಾಂಟೇಶನ್ ಮತ್ತು ತೋಟಗಾರಿಕೆ ಬೆಳೆಗಳಲ್ಲಿ ವಿಶೇಷವಾಗಿ ಕಾಫಿ, ಅಡಿಕೆ, ರಬ್ಬರ್, ಏಲಕ್ಕಿ, ಮೆಣಸು ಮತ್ತು ಶುಂಠಿಗಳಲ್ಲಿ ಶಿಲೀಂಧ್ರ ರೋಗಗಳನ್ನು ನಿಯಂತ್ರಿಸಲು ಬಳಸಲಾಗುತ್ತದೆ. ಇದಕ್ಕೆ ಶೇ.18 ಜಿಎಸ್‌ಟಿ ನಿಗದಿಪಡಿಸಲಾಗಿದೆ. ಕೃಷಿಯಲ್ಲಿ ಬಳಸಲಾಗುವ CIB/FCO 1985 ಪರವಾನಗಿಗಳ ಅಡಿಯಲ್ಲಿ ತಯಾರಿಸಲಾದ ಎಲ್ಲಾ ತಾಮ್ರದ ಸಲ್ಫೇಟ್‌ಗಳ ಮೇಲೆ ಜಿಎಸ್ ಟಿ ದರ 5% ನಿಗದಿಪಡಿಸುವುದು ರೈತಸಮುದಾಯಕ್ಕೆ ಹೆಚ್ಚಿನ ಪ್ರಮಾಣದಲ್ಲಿ ಸಹಾಯ ಮಾಡುತ್ತದೆ ಎಂದು ಕ್ಯಾಂಪ್ಕೋ ಅಧ್ಯಕ್ಷರು ಮುಖ್ಯಮಂತ್ರಿಗಳ ಗಮನಕ್ಕೆ ತಂದರು.
ಈ ಮನವಿಗೆ ಮುಖ್ಯಮಂತ್ರಿಗಳು ಸಕಾರಾತ್ಮಕವಾಗಿ ಸ್ಪಂದಿಸುತ್ತಾರೆ ಎಂದು ಕ್ಯಾಂಪ್ಕೋ ಆಶಿಸುತ್ತದೆ ಹಾಗೂ ಅಡಿಕೆ ಬೆಳೆಗಾರರ ಪರವಾಗಿ ತನ್ನ ಪ್ರಯತ್ನ ಮುಂದುವರಿಸುತ್ತದೆ ಎಂದು ಕ್ಯಾಂಪ್ಕೋ ಅಧ್ಯಕ್ಷ ಕಿಶೋರ್ ಕುಮಾರ್ ಕೊಡ್ಗಿ ಹೇಳಿದ್ದಾರೆ.