ಮಿಜೋರಾಂ ಅಂತರರಾಷ್ಟ್ರೀಯ ಗಡಿ ಮೂಲಕ ನಡೆಯುತ್ತಿರುವ ಮಾದಕ ವಸ್ತು ಮತ್ತು ಅಕ್ರಮವಾಗಿ ಅಡಿಕೆ ಸಾಗಾಟದ ಪ್ರಕರಣ ಪತ್ತೆ ಮಾಡಿದ್ದು 5 ಚೀಲಗಳಲ್ಲಿ ಸಾಗಿಸಲಾಗುತ್ತಿದ್ದ ಒಟ್ಟು 3,600 ಕೆ.ಜಿ. ಬರ್ಮಾ ಅಡಿಕೆಯನ್ನು ವಶಪಡಿಸಿಕೊಂಡಿದೆ. ಈ ಸಂಬಂಧ ಮ್ಯಾನ್ಮಾರ್ ಪ್ರಜೆಯೊಬ್ಬ ಸೇರಿದಂತೆ ನಾಲ್ವರನ್ನು ಬಂಧಿಸಲಾಗಿದೆ.
ಅಸ್ಸಾಂ ರೈಫಲ್ಸ್ ಮತ್ತು ಮಿಜೋರಾಂ ಪೊಲೀಸರು ಜಂಟಿಯಾಗಿ ಚಂಫೈ ಜಿಲ್ಲೆಯ ನಾರ್ತ್ ಡಿಲ್ಟ್ಲಾಂಗ್ ಗ್ರಾಮದಲ್ಲಿ ಅಕ್ರಮವಾಗಿ ಸಾಗಿಸಲಾಗುತ್ತಿದ್ದ ಒಣ ಅಡಕೆಯನ್ನು ವಶಪಡಿಸಿಕೊಂಡಿದ್ದಾರೆ. ಒಟ್ಟು 3,600 ಕೆ.ಜಿ. ಅಡಿಕೆಯನ್ನು ಜಪ್ತಿ ಮಾಡಲಾಗಿದ್ದು, ಈ ಪ್ರಕರಣದಲ್ಲಿ ಮೂವರನ್ನು ಬಂಧಿಸಲಾಗಿದೆ. ಅಡಿಕೆ ಸಾಗಾಟಕ್ಕೆ ಬಳಸಲಾಗಿದೆ ಎನ್ನಲಾದ ಮೂರು ಬೊಲೆರೊ ಪಿಕಪ್ ವಾಹನಗಳನ್ನೂ ವಶಪಡಿಸಿಕೊಳ್ಳಲಾಗಿದೆ.
ಮ್ಯಾನ್ಮಾರ್ನೊಂದಿಗೆ ಉದ್ದವಾದ ಅಂತರರಾಷ್ಟ್ರೀಯ ಗಡಿಯನ್ನು ಹಂಚಿಕೊಂಡಿರುವ ಮಿಜೋರಾಂ ಮತ್ತು ಮಣಿಪುರ ರಾಜ್ಯಗಳು ಮಾದಕ ವಸ್ತುಗಳ ಕಳ್ಳಸಾಗಣೆಯ ಪ್ರಮುಖ ಮಾರ್ಗಗಳಾಗಿ ಗುರುತಿಸಿಕೊಂಡಿವೆ. ಮಿಜೋರಾಂ ಮತ್ತು ಮಣಿಪುರದ ಒಟ್ಟು 11 ಜಿಲ್ಲೆಗಳು ಮ್ಯಾನ್ಮಾರ್ನೊಂದಿಗೆ ಸುಮಾರು 910 ಕಿ.ಮೀ. ಉದ್ದದ ಗಡಿಯನ್ನು ಹಂಚಿಕೊಂಡಿವೆ. ಗಡಿಯ ಬಹುಭಾಗಕ್ಕೆ ಬೇಲಿ ಇಲ್ಲದಿರುವುದರಿಂದ ಅಕ್ರಮ ಸಾಗಾಟವನ್ನು ತಡೆಯುವುದು ಭದ್ರತಾ ಸಂಸ್ಥೆಗಳಿಗೆ ಸವಾಲಾಗಿದೆ.
ಮಾದಕ ವಸ್ತುಗಳ ಕಳ್ಳಸಾಗಣೆ ತಡೆಯುವುದರ ಜೊತೆಗೆ ವಿದೇಶಿ ಮೂಲದ ಅಡಿಕೆಯ ಅಕ್ರಮ ಆಮದು ಮತ್ತು ಸಾಗಾಟವನ್ನು ನಿಯಂತ್ರಿಸಲು ಗಡಿ ಪ್ರದೇಶದಲ್ಲಿ ನಿಗಾ ಹಾಗೂ ಜಂಟಿ ಕಾರ್ಯಾಚರಣೆಗಳನ್ನು ಹೆಚ್ಚಿಸಲಾಗಿದೆ ಎಂದು ವರದಿ ತಿಳಿಸಿದೆ.


