ಸಂಸತ್ತಿನ ಮುಂಗಾರು ಅಧಿವೇಶನವನ್ನು ವಿಜಯೋತ್ಸವದ ಅಧಿವೇಶನದ ರೂಪದಲ್ಲಿ ನಾವು ನೋಡಬಹುದಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.…… ಮುಂದೆ ಓದಿ……
ಸಂಸತ್ ಕಲಾಪ ಆರಂಭಕ್ಕೂ ಮುನ್ನ ಸಂಸತ್ ಭವನದ ಆವರಣದಲ್ಲಿ ಅವರು, ಮೊದಲ ಬಾರಿಗೆ ಅಂತಾರಾಷ್ಟ್ರೀಯ ಬಾಹ್ಯಾಕಾಶದಲ್ಲಿ ತ್ರಿವರ್ಣ ಧ್ವಜ ಹಾರಾಡುವಂತಾಗಿದ್ದು, ಶುಭಾಂಶು ಶುಕ್ಲಾ ಅಂತರಿಕ್ಷ ಯಾನವನ್ನು ಯಶಸ್ವಿಯಾಗಿ ಪೂರ್ಣಗೊಳಿಸಿ ವಿಶ್ವದಲ್ಲಿ ದೇಶದ ಗೌರವವನ್ನು ಹೆಚ್ಚಿಸಿದ್ದಾರೆ ಎಂದರು. ಆಪರೇಷನ್ ಸಿಂಧೂರ್ ಕಾರ್ಯಾಚರಣೆಯಿಂದ ಇಡೀ ವಿಶ್ವಕ್ಕೆ ಸೇನಾ ಸಾಮರ್ಥ್ಯ ಏನೆಂಬುದು ತಿಳಿದಿದೆ. ಭಯೋತ್ಪಾದಕರ ಕೋಟೆಯೊಳಗೆ ನುಗ್ಗಿ ಕಡಿಮೆ ಅವಧಿಯಲ್ಲಿ ಯಶಸ್ವಿ ಕಾರ್ಯಾಚರಣೆ ನಡೆಸಿದ ನಮ್ಮ ಸೇನಾಶಕ್ತಿ ಅನಾವರಣಗೊಂಡಿದೆ. ಈ ಹಿನ್ನೆಲೆಯಲ್ಲಿ ನಮ್ಮ ವಿಜಯದ ಭಾವನೆಯನ್ನು ಒಂದೇ ಸ್ವರದಲ್ಲಿ ವ್ಯಕ್ತಪಡಿಸಲು ಈ ಸದನ ವಿಜಯೋತ್ಸವದ ವೇದಿಕೆ ಎಂಬಂತಾಗಿದೆ ಎಂದು ಹೇಳಿದರು.
ದೇಶಾದ್ಯಂತ ಮುಂಗಾರು ಚುರುಕಾಗಿದ್ದು, ಎಲ್ಲೆಡೆ ಉತ್ತಮ ವಾತಾವರಣವಿದೆ. ಕೃಷಿಗೆ ಹೆಚ್ಚು ಲಾಭದಾಯಕವಾಗಿದ್ದು, ರೈತರು, ಗ್ರಾಮೀಣ ಪ್ರದೇಶದ ಜನತೆ, ಕುಟುಂಬ ವರ್ಗ ಹಾಗೂ ದೇಶದ ಅರ್ಥವ್ಯವಸ್ಥೆಗೆ ಪೂರಕವಾಗಿದೆ. ಈ ಮುಂಗಾರು ಅಧಿವೇಶನ ರಾಷ್ಟ್ರಕ್ಕೆ ಗೌರವಪೂರ್ಣ ಹಾಗೂ ವಿಜಯೋತ್ಸವವಾಗಿದೆ ಎಂದು ತಿಳಿಸಿದರು.
ದೇಶದ ಕೆಲವೆಡೆ ನಕ್ಸಲ್ ಸಮಸ್ಯೆ ಇನ್ನೂ ಇದೆ. ಈಗಾಗಾಲೇ ಹಲವಾರು ಪ್ರದೇಶಗಳು ನಕ್ಸಲ್ ಮುಕ್ತವಾಗಿವೆ. ಮುಂಬರುವ ದಿನಗಳಲ್ಲಿ ಮಾವೋವಾದವನ್ನು ಸಂಪೂರ್ಣವಾಗಿ ನಿರ್ಮೂಲನೆಗೊಳಿಸಲಾಗುವುದು. ದೇಶದ ಹಿತಾಸಕ್ತಿ ದೃಷ್ಟಿಯಿಂದ ಈ ಕಲಾಪದಲ್ಲಿ ಎಲ್ಲ ಸದಸ್ಯರು ಉತ್ತಮ ಚರ್ಚೆಯಲ್ಲಿ ಪಾಲ್ಗೊಳ್ಳಬೇಕು. ಭಾರತ ವಿಶ್ವದ ಮೂರನೇ ಅರ್ಥವ್ಯವಸ್ಥೆ ದೇಶವಾಗುವತ್ತ ಮುನ್ನಡೆದಿದೆ. ದೇಶದ ಉಜ್ವಲ ಭವಿಷ್ಯ ಸ್ಪಷ್ಟವಾಗಿ ಕಾಣುತ್ತಿದೆ ಎಂದು ಹೇಳಿದರು.


