Advertisement
ಅನುಕ್ರಮ

ಆಕೆ ಏಕೆ ತನ್ನ ನೋವನ್ನು ಯಾರಿಗೂ ಹೇಳುವುದಿಲ್ಲ..?

Share

ಈಚೆಗೆ ಮಂಗಳೂರಿನಲ್ಲಿ ನಡೆದ ಚೆಸ್‌ ಪಂದ್ಯಾಟವೊಂದರಲ್ಲಿ ಪೋಷಕನಾಗಿ ಭಾಗವಹಿಸಿದ್ದೆ. ನೂರಾರು ಮಕ್ಕಳು, ಅವರೊಂದಿಗೆ ಬಂದ ಪೋಷಕರು, ಎಲ್ಲರ ಮುಖದಲ್ಲೂ ನಿರೀಕ್ಷೆ, ಆತಂಕ, ಸಂತೋಷ… ಹೀಗೆ ಹಲವು ಭಾವನೆಗಳು.

ಅಲ್ಲಿಯೇ ದೂರದಿಂದ ಬಂದಿದ್ದ ಒಬ್ಬ ತಾಯಿ ನನ್ನ ಗಮನ ಸೆಳೆದರು. ಮಗುವಿನ ಆಟ ಆರಂಭವಾಗಿತ್ತು. ಇದ್ದಕ್ಕಿದ್ದಂತೆ ಆ ತಾಯಿಯ ಆರೋಗ್ಯದಲ್ಲಿ ಏರುಪೇರಾಯಿತು. ಮೊದಲಿಗೆ ಯಾರಿಗೂ ಹೇಳದೆ ಮೌನವಾಗಿ ಚಡಪಡಿಸಿಕೊಂಡು ಕುಳಿತರು. ನೋವನ್ನು ಮರೆಮಾಚುತ್ತಾ, ಯಾರಿಗೂ ಗೊತ್ತಾಗದಂತೆ ಸಹಿಸಿಕೊಂಡರು. ಆದರೆ ಸಮಯ ಕಳೆದಂತೆ ಅವರ ಸ್ಥಿತಿ ಹದಗೆಡತೊಡಗಿತು. ಅಲ್ಲಿದ್ದ ಇತರ ಪೋಷಕರು ಗಮನಿಸಿದರು. “ಮನೆಗೆ ತಿಳಿಸೋಣವೇ?”, “ಆಸ್ಪತ್ರೆಗೆ ಹೋಗೋಣವೇ”  ಎಂದು ಅಲ್ಲಿದ್ದ ಮಹಿಳೆಯರು ಕೇಳಿದರು.

ಆ ಕ್ಷಣ ಅವರ ಉತ್ತರ ಹೀಗಿತ್ತು, “ಬೇಡ… ಮನೆಗೆ ಹೇಳಬೇಡಿ… ಮಗುವಿಗೂ ಹೇಳಬೇಡಿ… ನನ್ನ ಪತಿ ಗಾಬರಿಯಾಗುತ್ತಾರೆ… ಮಗುವಿನ ಆಟ ಹಾಳಾಗುತ್ತದೆ… ಸ್ವಲ್ಪ ಹೊತ್ತಿನಲ್ಲಿ ಸರಿಯಾಗುತ್ತದೆ…”.  ತಮ್ಮ ನೋವಿಗಿಂತ ಮೊದಲು ಅವರಿಗೆ ನೆನಪಾದದ್ದು ಮನೆಯವರು. ಮಗುವಿನ ಕನಸು. ಆದರೆ ಪರಿಸ್ಥಿತಿ ಸುಧಾರಿಸಲಿಲ್ಲ. ಅಲ್ಲಿದ್ದ ವೈದ್ಯರು ಮತ್ತು ಇತರರು ಸೇರಿ ಅವರನ್ನು ಆಸ್ಪತ್ರೆಗೆ ಕರೆದೊಯ್ದರು. ಬಳಿಕ ಆರೋಗ್ಯ ಸುಧಾರಿಸಿಕೊಂಡರು.

ಆ ಕ್ಷಣದಿಂದ ನನ್ನ ಮನಸ್ಸಿನಲ್ಲಿ ಒಂದು ಪ್ರಶ್ನೆ ಕಾಡುತ್ತಿತ್ತು. ಈ ಜಗತ್ತಿನಲ್ಲಿ ಅಮ್ಮಂದಿರು ಹೀಗೆ ಯಾಕೆ ಬದುಕುತ್ತಾರೆ?

ಸಮಾಜದಲ್ಲಿ ನಾವು ಪ್ರತಿದಿನ ಅನೇಕ ಸುದ್ದಿಗಳನ್ನು ಕೇಳುತ್ತೇವೆ. ಮಕ್ಕಳನ್ನು ಬಿಟ್ಟು ಹೋದ ತಾಯಿ…, ಪತ್ನಿಯನ್ನು ಬಿಟ್ಟು ಹೋದ ಪತಿ…, ಪತಿಯನ್ನು ತೊರೆದ ಪತ್ನಿ… , ತಂದೆ-ತಾಯಿಯನ್ನು ಮನೆಯಿಂದ ಹೊರಹಾಕಿದ ಮಕ್ಕಳು… ಇಂತಹ ಘಟನೆಗಳು ಬೇಗ ಸುದ್ದಿಯಾಗುತ್ತವೆ. ಚರ್ಚೆಯಾಗುತ್ತವೆ. ಕೆಲವೊಮ್ಮೆ ತೀರ್ಪುಗಳೂ ಬರುತ್ತವೆ.

ಆದರೆ ಸುದ್ದಿಯಾಗದ ಲಕ್ಷಾಂತರ ಕಥೆಗಳಿವೆ.  ತನ್ನ ನೋವನ್ನು ಮರೆಮಾಚಿಕೊಂಡು ಕುಟುಂಬದ ನಗುವನ್ನು ಉಳಿಸುವ ಅಮ್ಮಂದಿರ ಕಥೆಗಳು. ಅವು ಸುದ್ದಿಯಾಗುವುದಿಲ್ಲ. ಅವುಗಳ ಬಗ್ಗೆ ಯಾರೂ ಮಾತನಾಡುವುದಿಲ್ಲ. ಅವು ಪ್ರೇರಣೆಯಾಗಬೇಕಾದ ಸುದ್ದಿಗಳು.

ಅಮ್ಮನನ್ನು ಒಂದು ಕ್ಷಣ ಗಮನಿಸಿ.

ಮಗುವಿನ ಮೊದಲ ಶಾಲೆ ಅವಳು.  ಮೊದಲ ವೈದ್ಯೆ ಅವಳು. ಮೊದಲ ಶಿಕ್ಷಕಿ ಅವಳು. ಮೊದಲ ಸ್ನೇಹಿತೆ ಅವಳು. ಮೊದಲ ಮನೋವೈದ್ಯೆ ಕೂಡ ಅವಳೇ. ಮಗು ನಿದ್ರಿಸಿದ ಮೇಲೂ ಅವಳ ಕೆಲಸ ಮುಗಿಯುವುದಿಲ್ಲ. ಮಗು ಎದ್ದೇಳುವ ಮೊದಲೇ ಅವಳ ದಿನ ಆರಂಭವಾಗುತ್ತದೆ.

ಬೆಳಗಿನ ನಾಲ್ಕು ಗಂಟೆಗೆ ಎದ್ದು ಅಡುಗೆ ಮಾಡುವುದು… ಮಕ್ಕಳ ಶಾಲೆಯ ಟಿಫನ್‌ ಬಾಕ್ಸ್ ಸಿದ್ಧಪಡಿಸುವುದು…‌ , ಗಂಡನ ಕೆಲಸದ ತಯಾರಿ…,  ಮನೆಯ ಹಿರಿಯರ ಔಷಧಿ…, ಮನೆಯ ಶುಚಿತ್ವ…, ತನ್ನ ಉದ್ಯೋಗ ಇದ್ದರೆ ಅದಕ್ಕೂ ಓಡುವುದು…

ಸಂಜೆ ಮತ್ತೆ ಮನೆ. ಎಲ್ಲರೂ ಊಟ ಮುಗಿಸಿದ ಮೇಲೆ ಮಾತ್ರ ಅವಳ ಊಟ. ಎಲ್ಲರೂ ಮಲಗಿದ ಮೇಲೆ ಮಾತ್ರ ಅವಳ ವಿಶ್ರಾಂತಿ. ಆದರೂ ಬೆಳಿಗ್ಗೆ ಮತ್ತೆ ಅದೇ ಚಕ್ರ. ಅಂದರೆ ಇಡೀ ಮನೆಯನ್ನು “ತಾಂಗು”ವುದೇ ಅವಳೇ.

ಈ ಎಲ್ಲದರ ಮಧ್ಯೆ ಯಾರಾದರೂ ಕೇಳಿದರೆ… “ಹೇಗಿದ್ದೀಯಾ?” ಅವಳ ಉತ್ತರ ಸಾಮಾನ್ಯವಾಗಿ ಒಂದೇ. “ಚೆನ್ನಾಗಿದ್ದೇನೆ.” ಅಷ್ಟೇ.

ಆ “ಚೆನ್ನಾಗಿದ್ದೇನೆ” ಎಂಬ ಎರಡು ಪದಗಳ ಹಿಂದೆ ಎಷ್ಟು ಆಯಾಸ, ಎಷ್ಟು ನೋವು, ಎಷ್ಟು ತ್ಯಾಗ ಇರುತ್ತದೆ ಎಂಬುದನ್ನು ಬಹುಶಃ ಯಾರೂ ಕೇಳುವುದಿಲ್ಲ.

ನನಗೆ ಗೊತ್ತಿರುವ ಮತ್ತೊಬ್ಬ ಅಮ್ಮ.  ವರ್ಷಗಳ ಕಾಲ ಮನೆ, ಮಕ್ಕಳು, ಕುಟುಂಬ ಎನ್ನುವುದರಲ್ಲೇ ಬದುಕಿದರು. ಮನೆಯ ಪ್ರತಿಯೊಬ್ಬರ ಬೆಳವಣಿಗೆಗಾಗಿ ತಮ್ಮ ಆಸೆಗಳನ್ನು ನಿಧಾನವಾಗಿ ಬದಿಗಿಟ್ಟರು. ಮಕ್ಕಳನ್ನು ಓದಿಸಿದರು. ಅವರು ದೊಡ್ಡ ಹುದ್ದೆಗಳಿಗೆ ಹೋದರು. ಕುಟುಂಬ ಸುಭದ್ರವಾಯಿತು.

ಇನ್ನು ನೆಮ್ಮದಿಯಿಂದ ಬದುಕಬೇಕಾದ ವಯಸ್ಸು. ಆಗ ದೊಡ್ಡ ಕಾಯಿಲೆ ಪತ್ತೆಯಾಯಿತು. ವೈದ್ಯರು ಹೇಳಿದ್ದು ಒಂದು ಮಾತು. “ಇದು ಹೊಸದಾಗಿ ಬಂದ ಕಾಯಿಲೆಯಲ್ಲ. ಬಹಳ ದಿನಗಳಿಂದ ಇತ್ತು.” ಮಕ್ಕಳು ಕೇಳಿದರು.

“ಅಮ್ಮ, ಮೊದಲೇ ಯಾಕೆ ಹೇಳಲಿಲ್ಲ?” ಅವಳು ನಗುತ್ತಾ ಹೇಳಿದಳು. “ನಿಮಗೆ ಆಗ ಓದು ಇತ್ತು… ನಂತರ ಕೆಲಸದ ಒತ್ತಡ… ಮನೆಯಲ್ಲೂ ಸಾಕಷ್ಟು ಖರ್ಚು… ನಾನು ಹೇಳಿದ್ದರೆ ಎಲ್ಲರೂ ಚಿಂತಿಸುತ್ತಿದ್ದಿರಿ…” ಆಗ ಕಾಲ ಮೀರಿತ್ತು.

ಇದು ಕೇವಲ ಒಂದು ಮನೆಯ ಕಥೆಯಲ್ಲ. ಇದು ಸಾವಿರಾರು ಮನೆಗಳ ಕಥೆ.

ಅನೇಕ ಅಮ್ಮಂದಿರು ತಮ್ಮ ಆರೋಗ್ಯವನ್ನು ಕೊನೆಯ ಸ್ಥಾನದಲ್ಲಿ ಇಡುತ್ತಾರೆ. ಮಕ್ಕಳಿಗೆ ಜ್ವರ ಬಂದರೆ ತಕ್ಷಣ ಆಸ್ಪತ್ರೆಗೆ ಹೋಗುತ್ತಾರೆ. ಗಂಡನಿಗೆ ತಲೆನೋವಾದರೂ ಔಷಧಿ ಕೊಡುತ್ತಾರೆ. ಮನೆಯ ಹಿರಿಯರಿಗೆ ತಿಂಗಳಿಗೊಮ್ಮೆ ಆರೋಗ್ಯ ತಪಾಸಣೆ ಮಾಡಿಸುತ್ತಾರೆ. ಆದರೆ ತಮ್ಮ ದೇಹದ ನೋವನ್ನು ಮಾತ್ರ ತಿಂಗಳುಗಳ ಕಾಲ, ಕೆಲವೊಮ್ಮೆ ವರ್ಷಗಳ ಕಾಲ ಮರೆಮಾಚುತ್ತಾರೆ. ಒತ್ತಡದಲ್ಲೇ ಬದುಕುತ್ತಾರೆ.

“ಇನ್ನೂ ಸ್ವಲ್ಪ ದಿನ ನೋಡೋಣ…” “ಕೆಲಸ ಮುಗಿದ ಮೇಲೆ ಹೋಗುತ್ತೇನೆ…” “ಇದೂ ಹೋಗಿಬಿಡುತ್ತದೆ…” ಎಂದು ಮುಂದೂಡುತ್ತಾ ಹೋಗುತ್ತಾರೆ. ಆ ಮಧ್ಯೆ ಕಾಯಿಲೆ ಮಾತ್ರ ಮುಂದೂಡದೇ ತನ್ನ ಕೆಲಸ ಮಾಡುತ್ತಿರುತ್ತದೆ.

ಪ್ರತಿಯೊಂದು ದೊಡ್ಡ ಸಾಧನೆಯ ಹಿಂದೆ ಅಪ್ಪನ ಶ್ರಮವಿದೆ ಎಂದು ಹೇಳುತ್ತೇವೆ. ಅದು ಸತ್ಯ. ಆದರೆ ಅಪ್ಪನಿಗೆ ಆ ಶ್ರಮ ಮಾಡಲು ಅವಕಾಶ ಕೊಟ್ಟಿರುವುದು ಅನೇಕ ಬಾರಿ ಅಮ್ಮನ ತ್ಯಾಗ.

ವೇದಿಕೆಯ ಮೇಲೆ ಪ್ರಶಸ್ತಿ ಸ್ವೀಕರಿಸುವ ಮಗನ ಹಿಂದೆ… ವಿದೇಶದಲ್ಲಿ ವಿಜ್ಞಾನಿಯಾಗಿರುವ ಮಗಳ ಹಿಂದೆ… ಒಳ್ಳೆಯ ವೈದ್ಯ, ಶಿಕ್ಷಕ, ರೈತ, ಅಧಿಕಾರಿ, ಕ್ರೀಡಾಪಟು, ಉದ್ಯಮಿ… ಯಾರೇ ಆಗಿರಲಿ… ಅವರ ಯಶಸ್ಸಿನ ಅಡಿಪಾಯದಲ್ಲಿ ಒಂದು ಅಮ್ಮನ ನಿದ್ರೆಯಿಲ್ಲದ ರಾತ್ರಿಗಳಿರುತ್ತವೆ. ಅವಳ ಬಿಟ್ಟುಕೊಟ್ಟ ಕನಸುಗಳಿರುತ್ತವೆ. ಅವಳ ಹೇಳದೇ ನುಂಗಿಕೊಂಡ ಕಣ್ಣೀರು ಇರುತ್ತದೆ.

ಇಂದು ಸಮಾಜದಲ್ಲಿ ಎಲ್ಲವೂ ವೇಗವಾಗಿದೆ. ಕೆಲಸದ ಒತ್ತಡ,  ಮೊಬೈಲ್, ಸಾಮಾಜಿಕ ಜಾಲತಾಣ, ಹಣ, ಸ್ಪರ್ಧೆ. ಆದರೆ ಇದೇ ವೇಗದಲ್ಲಿ ನಾವು ಮನೆಯೊಳಗಿನ ಅತ್ಯಮೂಲ್ಯ ವ್ಯಕ್ತಿಯನ್ನು ಗಮನಿಸುವುದನ್ನು ಮರೆತಿದ್ದೇವೆ.

ಅಮ್ಮ ಆಯಾಸಗೊಂಡಿದ್ದಾಳೆಯೇ?, ಊಟ ಮಾಡಿದ್ದಾಳೆಯೇ?, ಅವಳ ಆರೋಗ್ಯ ಹೇಗಿದೆ?, ಅವಳು ಕೊನೆಯದಾಗಿ ವೈದ್ಯರನ್ನು ಯಾವಾಗ ಭೇಟಿ ಮಾಡಿದ್ದಳು?, ಈ ಪ್ರಶ್ನೆಗಳು ಮನೆಯ ಚರ್ಚೆಯಾಗುವುದೇ ಇಲ್ಲ.

ಸಣ್ಣ ಸಣ್ಣ ಕಾರಣಕ್ಕೆ ಜಗಳವಾಗುತ್ತದೆ. ಕೋಪ ಬರುತ್ತದೆ. ಮಾತುಗಳು ಕಟುವಾಗುತ್ತವೆ. ಆದರೆ ಒಂದು ಕ್ಷಣ ನಿಂತು ಯೋಚಿಸಿ. ಈ ಮನೆಯಲ್ಲಿ ಅಮ್ಮ ಇಲ್ಲದಿದ್ದರೆ?

ಈ ಪ್ರಶ್ನೆಗೆ ಉತ್ತರ ಹುಡುಕಲು ಪ್ರಯತ್ನಿಸಿದರೆ ಬಹಳ ಜಗಳಗಳು ಅಲ್ಲಿಯೇ ಮುಗಿದು ಹೋಗಬಹುದು. ಏಕೆಂದರೆ ಮನೆಯ ಗೋಡೆಗಳನ್ನು ಹಣ ಕಟ್ಟಬಹುದು. ಆದರೆ ಮನೆಯ ಆತ್ಮವನ್ನು ಕಟ್ಟುವುದು ಅಮ್ಮ. ಅವಳಿರುವುದರಿಂದಲೇ ಮನೆ ಮನೆ ಆಗುತ್ತದೆ. ಅಮ್ಮನಿಗೆ ದುಬಾರಿ ಉಡುಗೊರೆ ಬೇಕಿಲ್ಲ. ಪ್ರತಿದಿನ ಹೊಗಳಿಕೆಯೂ ಬೇಕಿಲ್ಲ.

ಆದರೆ ಕೆಲವೊಮ್ಮೆ… “ಅಮ್ಮ, ನೀನು ಊಟ ಮಾಡಿದ್ದೀಯಾ?”, “ಇಂದು ನೀನು ವಿಶ್ರಾಂತಿ ತೆಗೆದುಕೋ.”, “ಬಾ, ಆಸ್ಪತ್ರೆಗೆ ಹೋಗಿ ಆರೋಗ್ಯ ತಪಾಸಣೆ ಮಾಡಿಸೋಣ.”, “ನಿನ್ನಿಂದಲೇ ನಾವು ಇಲ್ಲಿದ್ದೇವೆ.” ಎಂಬ ನಾಲ್ಕು ಮಾತುಗಳು ಸಾಕು. ಆ ನಾಲ್ಕು ಮಾತುಗಳು ಅವಳಿಗೆ ಔಷಧಿಗಿಂತ ದೊಡ್ಡ ಶಕ್ತಿ ಕೊಡುತ್ತವೆ.

ಮಂಗಳೂರಿನ ಚೆಸ್‌ ಪಂದ್ಯಾಟ ಹೊರಗೆ ಕಂಡ ಆ ತಾಯಿಯ ಮುಖ ಇಂದಿಗೂ ನನ್ನ ಕಣ್ಣ ಮುಂದೆ ಬರುತ್ತದೆ. ಅವರು ಯಾರು ಗೊತ್ತಿಲ್ಲ. ತನ್ನ ನೋವನ್ನು ಮರೆತು ಮಗುವಿನ ಕನಸನ್ನು ಉಳಿಸಿಕೊಳ್ಳಲು ಪ್ರಯತ್ನಿಸುತ್ತಿದ್ದ ಆ ತಾಯಿ, ನನಗೆ ಒಬ್ಬ ವ್ಯಕ್ತಿಯಲ್ಲ. ಅವಳು ಈ ದೇಶದ ಲಕ್ಷಾಂತರ ಅಮ್ಮಂದಿರ ಪ್ರತಿರೂಪ. ಹಾಗಂತ, ಎಲ್ಲಾ ಅಮ್ಮಂದಿರೂ ಹೀಗೆಯಾ ಅಂತಲೂ ಕೆಲವೊಮ್ಮೆ ಸಣ್ಣ ಜಿಜ್ಞಾಸೆಯೂ ಇದೆ.

ಕುಟುಂಬವನ್ನು ತನ್ನ ಭುಜದ ಮೇಲೆ ಹೊತ್ತುಕೊಂಡು ನಡೆಯುವ, ತನ್ನ ಕಣ್ಣೀರನ್ನು ಮರೆಮಾಚಿ ಮನೆಯವರ ನಗುವನ್ನು ಉಳಿಸುವ ಪ್ರತಿಯೊಬ್ಬ ಅಮ್ಮನ ಪ್ರತಿಬಿಂಬ. ನಾವು ಬದುಕಿನಲ್ಲಿ ಅನೇಕ ಸಾಧನೆಗಳನ್ನು ಹುಡುಕುತ್ತೇವೆ. ಆದರೆ ಬದುಕಿನ ದೊಡ್ಡ ಸಾಧನೆ ಎಂದರೆ… ನಮ್ಮ ಮನೆಯ ಅಮ್ಮನನ್ನು ಬದುಕಿರುವಾಗಲೇ ಅರ್ಥ ಮಾಡಿಕೊಳ್ಳುವುದು. ಅವಳ ತ್ಯಾಗಕ್ಕೆ ಕೃತಜ್ಞತೆ ಹೇಳುವುದು. ಅವಳ ಆರೋಗ್ಯವನ್ನು ಕಾಪಾಡುವುದು. ಅವಳನ್ನು ಪ್ರೀತಿಯಿಂದ ನೋಡಿಕೊಳ್ಳುವುದು. ಅಷ್ಟೇ…

ಮನೆಯನ್ನು ಕಟ್ಟುವುದು ಗೋಡೆಗಳು, ಆದರೆ, ಕುಟುಂಬವನ್ನು ಕಟ್ಟುವುದು ಗೋಡೆಗಳಲ್ಲ… ಅಮ್ಮ. ಕುಟುಂಬದ ಶಕ್ತಿ ಹಣವೇ ಅಲ್ಲ.. ಅಮ್ಮ. ಅದನ್ನು ಅರಿತುಕೊಳ್ಳುವ ಕ್ಷಣವೇ… ಬದುಕಿನ ನಿಜವಾದ “ತಿರುವು”.

ಪ್ರತಿದಿನ ಕೃಷಿ-ಗ್ರಾಮೀಣ-ಪರಿಸರ-ಹವಾಮಾನ ಬದಲಾವಣೆ ಹಾಗೂ ಇತರ ಮಾಹಿತಿಗಾಗಿ  ನಮ್ಮ “ದ ರೂರಲ್‌ ಮಿರರ್.ಕಾಂ”WhatsApp Channel  ಫಾಲೋಮಾಡಲು ಇಲ್ಲಿ ಕ್ಲಿಕ್‌ ಮಾಡಿ

A deeply emotional opinion column reflecting on mothers who silently bear pain to protect their families. Inspired by a real incident at a chess tournament in Mangaluru, the article urges families to recognize, respect, and care for the health and sacrifices of mothers before it is too late.

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
ಮಹೇಶ್ ಪುಚ್ಚಪ್ಪಾಡಿ

ಕೃಷಿಕ ಹಾಗೂ ಕೃಷಿ ಪತ್ರಕರ್ತ | 2007 ರಿಂದ ವಿವಿಧ ಮಾಧ್ಯಮ ಕ್ಷೇತ್ರದಲ್ಲಿ ಕೆಲಸ ಮಾಡಿದ್ದಾರೆ. ಉಷಾಕಿರಣ, ಹೊಸದಿಗಂತ, ವಿಜಯವಾಣಿ ಹಾಗೂ ಸುವರ್ಣ ನ್ಯೂಸ್‌ ಚಾನೆಲ್‌ನಲ್ಲಿ ವರದಿಗಾರರಾಗಿ, ವಿಭಾಗ ಮುಖ್ಯಸ್ಥರಾಗಿ ಕೆಲಸ ಮಾಡಿದ್ದಾರೆ. ಗ್ರಾಮೀಣಾಭಿವೃದ್ಧಿ ಹಾಗೂ ಕೃಷಿ ಇವರ ಆಸಕ್ತಿಯ ವಿಷಯವಾಗಿದೆ.  

Published by
ಮಹೇಶ್ ಪುಚ್ಚಪ್ಪಾಡಿ

Recent Posts

ಅಡಿಕೆ ರೋಗ ನಿಯಂತ್ರಣಕ್ಕೆ ಕೇಂದ್ರದ ಬೆಂಬಲ – ಕ್ಯಾ. ಚೌಟಗೆ ಸಚಿವ ಶಿವರಾಜ್‌ ಸಿಂಗ್‌ ಚೌಹಾಣ್ ಭರವಸೆ

ಕರಾವಳಿ ಮತ್ತು ಮಲೆನಾಡಿನ ಅಡಿಕೆ ತೋಟಗಳಲ್ಲಿ ಕಾಣಿಸಿಕೊಳ್ಳುತ್ತಿರುವ ಎಲೆಚುಕ್ಕೆ, ಹಳದಿ ಎಲೆ ಹಾಗೂ…

29 minutes ago

ಹವಾಮಾನ ವರದಿ | 23-08-2026 | ಆಗಸ್ಟ್ 25 ರವರೆಗೆ ಮಳೆ – ಕರಾವಳಿ-ಮಲೆನಾಡಿನಲ್ಲಿ ಉತ್ತಮ ಮಳೆ ಸಾಧ್ಯತೆ

ಕರ್ನಾಟಕದಲ್ಲಿ ಮುಂಗಾರು ಮತ್ತೆ ಚುರುಕಾಗಿದ್ದು, ಕರಾವಳಿ ಮತ್ತು ಮಲೆನಾಡಿನಲ್ಲಿ ಆಗಸ್ಟ್ 25ರವರೆಗೆ ಮಳೆ…

5 hours ago

ಅಳಿವಿನಂಚಿನಲ್ಲಿದ್ದ ಪೆರಿಯಾರ್ ಹಸುವಿಗೆ ರಾಷ್ಟ್ರೀಯ ತಳಿ ಮಾನ್ಯತೆ – ಕೇರಳದ ಎರಡನೇ ದೇಶಿ ಗೋತಳಿ

ಅಳಿವಿನಂಚಿನಲ್ಲಿದ್ದ ಕೇರಳದ ಪೆರಿಯಾರ್ ಕುಳ್ಳನ್ ಹಸುವಿಗೆ ಭಾರತೀಯ ಕೃಷಿ ಸಂಶೋಧನಾ ಮಂಡಳಿಯ ರಾಷ್ಟ್ರೀಯ…

6 hours ago

ಪಿಒಪಿ ಗಣಪತಿಗೆ ಬ್ರೇಕ್..? ಕರಾವಳಿಯ 90–95% ಪರಿಸರ ಸ್ನೇಹಿ ಮಾದರಿ ರಾಜ್ಯಕ್ಕೆ ಪಾಠ

ರಾಜ್ಯದ ಗ್ರಾಮೀಣ ಪ್ರದೇಶಗಳಲ್ಲಿ ಪರಿಸರ ಸ್ನೇಹಿ ಗಣಪತಿ ಮೂರ್ತಿಗಳನ್ನೇ ಪ್ರತಿಷ್ಠಾಪಿಸಿ ಗಣೇಶೋತ್ಸವ ಆಚರಿಸುವಂತೆ…

8 hours ago

ಪಶ್ಚಿಮ ಘಟ್ಟ ಸಂರಕ್ಷಣೆ ಹೆಸರಿನಲ್ಲಿ ಕೃಷಿಕರಿಗೆ ನಿರ್ಬಂಧ ಬೇಡ – ಕಸ್ತೂರಿ ರಂಗನ್ ವರದಿ ಸಂಪೂರ್ಣ ತಿರಸ್ಕರಿಸಲು ಆಗ್ರಹ

ಪಶ್ಚಿಮ ಘಟ್ಟ ಸಂರಕ್ಷಣೆಯ ಹೆಸರಿನಲ್ಲಿ ಕೃಷಿಕರ ಜೀವನೋಪಾಯಕ್ಕೆ ನಿರ್ಬಂಧ ಹೇರಬಾರದು, ಕಸ್ತೂರಿ ರಂಗನ್…

9 hours ago

ಮುಂಗಾರು ಬೇಗನೆ ವಿದಾಯ ಹೇಳುತ್ತಿದೆಯೇ..? ಸೆಪ್ಟೆಂಬರ್‌ನಲ್ಲಿ ಮಳೆ ಕಡಿಮೆಯಾಗುವ ಮುನ್ಸೂಚನೆ..?

ಸೆಪ್ಟೆಂಬರ್ 5–10ರ ನಂತರ ದೇಶದ ಹಲವು ಭಾಗಗಳಲ್ಲಿ ಮುಂಗಾರು ಮಳೆ ಗಣನೀಯವಾಗಿ ಕಡಿಮೆಯಾಗುವ…

22 hours ago