ಭಾರತದ ವೈಜ್ಞಾನಿಕ ಸಾಧನೆಯ ಗೌರವವನ್ನು ಮತ್ತಷ್ಟು ಎತ್ತರಕ್ಕೇರಿಸುವ ಮಾನವ ಸಹಿತವಾದ ಗಗನಯಾನದ ನೌಕೆ Axiom-4 Mission (25-6-2025) ರಂದು ಮಧ್ಯಾಹ್ನ (ಭಾರತೀಯ ಕಾಲಮಾನ) 12ಗಂಟೆ 1 ನಿಮಿಷಕ್ಕೆ ಗಗನಕ್ಕೆ ಚಿಮ್ಮಿತು. ಇದೊಂದು ಐತಿಹಾಸಿಕ ದಿನ. ಬೆಳಗ್ಗಿನಿಂದಲೇ ಸಿದ್ಧತೆಗಳು ನಡೆದು ನೌಕೆಯೊಳಗೆ ನಾಲ್ಕು ಮಂದಿ ಗಗನಯಾತ್ರಿಗಳನ್ನು ಭದ್ರಪಡಿಸಿ ಬಾಗಿಲು ಮುಚ್ಚಿ ಸರಿಯಾದ ಸಮಯಕ್ಕೆ ಆಕಾಶಕ್ಕೆ ಈ ನೌಕೆ ನೆಗೆಯಿತು. ಈ ಗಗನಯಾತ್ರಿಗಳ ತಂಡದ ಕೇಪ್ಟನ್ ಶುಭಾಂಶು ಶುಕ್ಲಾ ಭಾರತೀಯ ವಾಯುಪಡೆಯ ಗ್ರೂಪ್ ಕೇಪ್ಟನ್. ಇವರೊಂದಿಗೆ ಹಂಗೇರಿ, ಪೋಲೇಂಡ್ ಮತ್ತು ಯು.ಎಸ್.ಎ.ಯ ಇತರ ಮೂವರು ಗಗನಯಾತ್ರಿಗಳಿದ್ದಾರೆ. ಈ ಮೊದಲು ಮೂರ್ನಾಲ್ಕು ಬಾರಿ ನಿಗದಿಯಾಗಿದ್ದ ಪಯಣವು ಸಣ್ಣ ಸಣ್ಣ ನ್ಯೂನತೆಗಳಿಂದ ಬಾಕಿಯಾಗಿ ಇಂದು ಯಶಸ್ವಿಯಾಗಿ ಉಡಾವಣೆಯಾಯಿತು. ಈ ಯಾತ್ರೆಯ ಮೂಲಕ ಶುಭಾಂಶು ಶುಕ್ಲಾರವರು ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ಹೋಗಿ ಬರುವ ಪ್ರಪ್ರಥಮ ಭಾರತೀಯ ಎಂಬ ಶ್ರೇಯಸ್ಸನ್ನು ಪಡೆಯಲಿದ್ದಾರೆ. ಈ ಹಿಂದೆ 1984 ರಲ್ಲಿ ಮಾನವ ಸಹಿತ ನೌಕೆಯಲ್ಲಿ ಗಗನಯಾನ ನಡೆಸಿದ್ದ ರಾಕೇಶ ಶರ್ಮಾ ಪ್ರಥಮ ಭಾರತೀಯ ಎಂಬ ಖ್ಯಾತಿ ಹೊಂದಿದ್ದಾರೆ. ಆದರೆ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ತೆರಳಿರುವ ಮೊದಲ ಭಾರತೀಯನೆಂಬ ಖ್ಯಾತಿ ಶುಭಾಂಶು ಶುಕ್ಲಾರಿಗೆ ಸಲ್ಲುತ್ತದೆ.
ಇದಿಷ್ಟು ದೇಶದ ಗೌರವದ ಮಾತಾಯಿತು. ಇದು ನಮಗಿರಬೇಕಾದ ಸಾಮಾನ್ಯ ಜ್ಞಾನ (General Knowledge). ಇದರ ಉದ್ದೇಶ ಮತ್ತು ಸಾಧನೆಗಳ ವಿವರಣೆಗೆ ಪ್ರತ್ಯೇಕ ಲೇಖನವೇ ಬೇಕು. ಆದರೆ ಇಲ್ಲಿಗ ನಾನು ಬರೆಯುತ್ತಿರುವುದು ‘ಮಾತೃ ತಂತು’ವಿನ ಸ್ಪಂದನೆಯ ಬಗ್ಗೆ. ನಾಸಾದ ಉಸ್ತುವಾರಿಯಲ್ಲಿ ಜಾನ್ ಆಫ್ ಕೆನೆಡಿ ಬಾಹ್ಯಾಕಾಶ ನಿಲ್ದಾಣದಿಂದ ಈ Axiom-4 Mission ನ್ನು ಹಾರಿಸುವ ಸಂದರ್ಭದಲ್ಲಿ ಆಯ್ದ ಕುಟುಂಬಸ್ಥರಿಗೆ ಹಾಗೂ ವಿಜ್ಞಾನಿಗಳಿಗೆ ಪೇಕ್ಷಕರಾಗಿ ಭಾಗವಹಿಸುವ ಅವಕಾಶವಿತ್ತು. ಸುಧಾಂಶು ಶುಕ್ಲಾರವರ ತಂದೆ ತಾಯಿಯೂ ಅವರ ಮಧ್ಯೆ ಇದ್ದರು. ನೌಕೆ ನೆಗೆಯುವ ಗತ್ತು ಎಲ್ಲರಿಗೂ ರೋಮಾಂಚನ ಉಂಟು ಮಾಡುವ ಹೊತ್ತು. ಆ ಸಂದರ್ಭದಲ್ಲಿ ಶುಕ್ಲಾರವರ ತಂದೆ ತಾಯಿಯವರ ಭಾವನೆಗಳ ಚಿತ್ರಣವು ನಿಜಕ್ಕೂ ಆತಂಕ-ಆನಂದಗಳ ಮಿಶ್ರಣವಾಗಿ ಕಂಡು ಬಂತು. ಮಾತೃತ್ವದ ತಂತು ಮನದಾಳದಲ್ಲಿ ಅದೆಷ್ಟು ಮಮತೆಯ ಮಿಡಿತದ ನಾಡಿಯಾಗಿರುತ್ತದೆ ಎಂಬುದೂ ಕಂಡು ಬಂತು. ಅವರ ತಂದೆಯ ಕೈಗಳು ಚಪ್ಪಾಳೆ ತಟ್ಟುವ ಬಯಕೆ ಇದ್ದರೂ ಸಪ್ಪಳವಿಲ್ಲದಂತೆ ಜೋಡಿಸಲ್ಪಡುತ್ತಿದ್ದುದೂ ಕಂಡು ಬಂತು.
ಒಂದು ಜೀವ ತನ್ನ ಗರ್ಭಕ್ಕೆ ಇಳಿದು ಬರುವುದು ಯಾವ ತಂತುವಿನಿಂದ ಎಂಬುದರ ಅರಿವು ತಾಯಿಗೇ ಆಗದಂತಹ ವಿಸ್ಮಯ ಮಗುವಿನ ಹುಟ್ಟಿನಲ್ಲಿದೆ. ಆದರೆ ಗರ್ಭಸ್ಥ ಶಿಶುವನ್ನು ಪೋಷಿಸಿ ಜನ್ಮ ನೀಡಿ ಬೆಳೆಸುವ ಪ್ರಕ್ರಿಯೆಯಲ್ಲಿ ತಾಯಿಯ ಭಾವಬಂಧವು ಮತ್ಯಾರಿಗೂ ಇರಲು ಸಾಧ್ಯವಿಲ್ಲ. ಮಗು ದೊಡ್ಡವನಾಗಿ ಪ್ರಸಿದ್ಧನಾಗಿ ಬೆಳೆದು ಇನ್ನು ಹೆಚ್ಚಿನ ಶ್ರೇಯಸ್ಸಿನತ್ತ ದಾಪುಗಾಲು ಹಾಕುತ್ತಿದ್ದರೂ ತಾಯಿಗೆ ಮಡಿಲ ಮಗುವಿನಂತೆ ಮಮತೆಯ ಒರತೆ ಚಿಮ್ಮುತ್ತದೆ. ಅಂತಹ ಒಂದು ದೃಶ್ಯ Axiom-4 ಮಿಶನ್ ಕೆಳಗೆ ಹೊಗೆಯುಗುಳುತ್ತ ವಿಶಾಲ ಗಗನದಲ್ಲಿ ಮೇಲೇರಿದ ಹೊತ್ತಿನಲ್ಲಿ ಕಂಡುಬಂತು. ಎಲ್ಲರೂ ಯಶಸ್ಸಿನ ಆನಂದದಲ್ಲಿ ತೇಲುತ್ತಿದ್ದರೆ ಏರುತ್ತಿದ್ದ ಗಗನ ನೌಕೆಯನ್ನು ನೋಡುತ್ತಿದ್ದವರ ಮುಖದಲ್ಲಿ ಆತಂಕದ ಗೆರೆಗಳು ಕಂಡದ್ದು ಒಬ್ಬಾಕೆ ಮಹಿಳೆಯಲ್ಲಿ ಮಾತ್ರ. ಯಾವುದೋ ಒಂದು ತಂತುವಿನಿಂದ ತನ್ನೊಳಗೆ ಸೇರಿದ ಈ ಜೀವ ಈಗ ಮೇಲೇರುತ್ತಿದ್ದ ವಾಹನವೇ ಸಪೂರ ನೂಲಿನಂತಾಗಿ ದಿಗಂತದಲ್ಲಿ ಕಾಣದಾಗುವ ಚಿತ್ರವನ್ನು ಅರಗಿಸಿಕೊಳ್ಳಲು ಆಕೆಗೆ ಕಷ್ಟವಾಗಿತ್ತು. ಆಕೆಯ ಹಣೆಯಲ್ಲಿ ಮತ್ತು ಗಲ್ಲದಲ್ಲಿ ಮೂಡಿದ ಗೆರೆಗಳಲ್ಲಿ ಹಾಗೂ ತುಟಿಗಳಲ್ಲಿ ಚಿಂತೆಯ ಆಳ ಪ್ರಕಟವಾಗಿತ್ತು. ಪಕ್ಕದಲ್ಲಿದ್ದ ಗಂಡ ಶುಕ್ಲಾರವರು ಕೂಡಾ ದಿಗ್ಮೂಢರಾಗಿ ನೌಕೆ ಮೇಲೇರುವುದನ್ನೇ ತದೇಕ ಚಿತ್ತದಿಂದ ನೋಡುತ್ತಿದ್ದರು. ಬರಿಗಣ್ಣಿಗೆ ನೌಕೆ ಕಾಣದಾದ ಬಳಿಕ ಮುಂದೆ ಅದರ ಸಮಾಚಾರವನ್ನು ಇಸ್ರೋ ಕೇಂದ್ರದಿಂದಲೇ ಎಲ್ಲರಂತೆ ಅವರೂ ತಿಳಿಯುತ್ತಾರೆ. ಆದರೆ ಮಗ ಹಿಂದಿರುಗುವವರೆಗೆ ತಾಯಿಯ ಹೃದಯದ ಹೊರೆ ಇಳಿಯುವುದಿಲ್ಲ.
ಮಕ್ಕಳ ಬೆಳವಣಿಗೆಯಲ್ಲಿ ತಾಯಿ ನಿರ್ವಹಿಸುವ ಪಾತ್ರ ಏನೆಂಬುದಕ್ಕೆ ಸಿಲೆಬಸ್ ಇಲ್ಲ. ಅದು ಕಲಿತು ಬರುವಂತಹುದಲ್ಲ. ಒಬ್ಬೊಬ್ಬ ಸಾಧಕನ ಬದುಕಿನ ಹಿಂದೆ ಅವರ ತಾಯಿಯ ಪಾತ್ರ ಇದ್ದೇ ಇರುತ್ತದೆ. ಅದು ದಾಖಲಾಗದೆ ಹೋಗಬಹುದು, ಸಾಂದರ್ಭಿಕವಾಗಿ ದಾಖಲಾಗಲೂ ಬಹುದು. ಅಂತಹ ಒಂದು ಘಟನೆ ಸುಂದರ್ ಪಿಚ್ಚಾಯಿಯವರ ತಾಯಿಯ ತ್ಯಾಗದ ಕಥೆಯಲ್ಲಿದೆ. ಆಕೆ ಚೆನ್ನೈನ ಎರಡು ಕೋಣೆಗಳ ಸಾಧಾರಣ ಮನೆಯಲ್ಲಿ ತನ್ನ ಮಕ್ಕಳನ್ನು ಬೆಳೆಸಿದಳು. ಅದರ ಗೋಡೆಗಳು ಮಂಕಾಗಿ ಬಣ್ಣ ಕಳೆದು ಕೊಂಡಿದ್ದುವು. ಗಂಡ ಇಲೆಕ್ಟ್ರಿಕಲ್ ಕೆಲಸ ಮಾಡಿಕೊಂಡಿದ್ದರು. ಮಕ್ಕಳಿಗೆ ಆಡಲು ಅವರು ಸರ್ಕ್ಯೂಟ್ ಡಯಾಗ್ರಮ್‍ಗಳು, ಸೋಲ್ಡರಿಂಗ್ ವಯರ್‍ಗಳು, ಕೆಟ್ಟುಹೋದ ರೇಡಿಯೋಗಳನ್ನಷ್ಟೇ ಕೊಡುತ್ತಿದ್ದರು. ತಾಯಿ ಅಕ್ಕಿ ಕಾಳುಗಳುಗಳನ್ನು ಉಪಯೋಗಿಸಿ ಮಗನಿಗೆ ಗಣಿತ ಕಲಿಸುತ್ತಿದ್ದರು. ಮಗು ಸುಂದರ್ ತುಂಬಾ ಜಾಣನೆಂದು ಅವರಿಗೆ ಗೊತ್ತಿತ್ತು. ಆ ಮನೆಯಲ್ಲಿ ಗಾಳಿ ಬೀಸದ್ದರಿಂದ ಮಕ್ಕಳಿಗೆ ತಾಯಿಯೇ ರಟ್ಟಿನಿಂದ ಗಾಳಿ ಬೀಸಿ ಮಲಗಿಸುತ್ತಿದ್ದರು. ಮಗನ ಶಿಕ್ಷಣಕ್ಕೆ ತನ್ನ ಬಳೆಗಳನ್ನು ಮಾರಿ ಶುಲ್ಕ ಕಟ್ಟುತ್ತಿದ್ದರು.
ಸುಂದರ್ ಗೆ ಅಮೇರಿಕಾದಲ್ಲಿ ಅಧ್ಯಯನ ಮಾಡಲು ವಿದ್ಯಾರ್ಥಿವೇತನ ಸಿಕ್ಕಿತು. ಆದರೆ ವಿಮಾನಯಾನದ ಖರ್ಚನ್ನು ಭರಿಸಲು ದುಡ್ಡಿರಲಿಲ್ಲ. ಆಗ ಆಕೆ ಮಗನಿಗೆ ತಿಳಿಯದಂತೆ ತನ್ನ ಕೊನೆಯ ಬಳೆಗಳನ್ನೇ ಮಾರಾಟ ಮಾಡಿ ದುಡ್ಡು ಹೊಂದಿಸಿದ್ದರು. ಮುಂದೆ ಅಮೇರಿಕಾದಲ್ಲಿ ತನ್ನ ಪರೀಕ್ಷೆಗಳಲ್ಲಿ ಉನ್ನತ ಸಾಧನೆಗಳನ್ನು ಮಾಡಿ ವಿಶ್ವದ ದೈತ್ಯ ಸಾಪ್ಟ್ ವೇರ್ ಸಂಸ್ಥೆ ಗೂಗಲ್‍ನ ಸಿಇಒ ಆದ ಸುಂದರ್ ಪಿಚೈ ಯವರ ಸಾಧನೆಗೆ ದೇಶವೇ ಹೆಮ್ಮೆಪಡುವಂತಾಯಿತು.
ಈ ಸಾಧಕನಿಗೆ ದೆಹಲಿಯ ಕನ್‍ವೆನ್‍ಶನ್ ಸೆಂಟರ್ ನಲ್ಲಿ ಪ್ರಧಾನಿ ಮೋದಿಯವರಿಂದಲೇ ಸನ್ಮಾನ ಏರ್ಪಾಡಾಗಿತ್ತು. ಸಭಿಕರ ಮೂರನೇ ಸಾಲಿನ ಕೊನೆಯಲ್ಲಿ ಸಾಧಾರಣ ಹತ್ತಿಯ ನೂಲಿನ ಸೀರೆಯುಟ್ಟ ತಾಯಿ ಸಮಾರಂಭದ ಸಂಭ್ರಮವನ್ನು ಅನುಭವಿಸುತ್ತಿದ್ದರು. ಅವರು ಯಾರೆಂಬ ಬಗ್ಗೆ ಯಾರೂ ಗಮನ ಹರಿಸಿರಲಿಲ್ಲ. ಆದರೆ ಪ್ರಧಾನಿ ಮೋದಿಯವರು “ನಾವು ಈ ದಿನ ಕೇವಲ ಸುಂದರ್ ಪಿಚ್ಚೈ ಅವರನ್ನು ಗೌರವಿಸುತ್ತಿಲ್ಲ. ಮಗನ ಅಧ್ಯಯನಕ್ಕಾಗಿ ತನ್ನ ಊಟವನ್ನು ತ್ಯಾಗ ಮಾಡಿದ ಮಹಾತಾಯಿ ಒಬ್ಬಳ ಜೀವನ ಪ್ರಯಾಣವನ್ನು ಗೌರವಿಸುತ್ತಿದ್ದೇವೆ” ಎಂದರು. ನಂತರ ವೇದಿಕೆಯ ಮೇಲಿಂದ ಕೆಳಗಿಳಿದು ಬಂದು ಆ ತಾಯಿಗೆ ನಮಸ್ಕರಿಸಿ ಕೈ ಹಿಡಿದು ವೇದಿಕೆಯನ್ನೇರಿಸಿದರು. ಸುಂದರ್ ಪಿಚೈ ಗೆ ಇದು ಅನೂಹ್ಯ ಘಟನೆಯಾಗಿತ್ತು. ತನ್ನ ಭಾಷಣದಲ್ಲಿ ಮೋದಿಯವರು ಆ ಅಮ್ಮನಲ್ಲಿ “ಕೇವಲ ನಿಮ್ಮ ತ್ಯಾಗದಿಂದ ಅಷ್ಟೇ ಇದು ಸಾಧ್ಯವಾಯಿತು” ಎಂದರು. ಮಗನ ಕೈಯನ್ನು ಬಿಗಿಯಾಗಿ ಹಿಡಿದ ಆ ತಾಯಿ “ನೀನು ಹಿಂದಿನದನ್ನೆಲ್ಲ ನೆನಪಿಟ್ಟುಕೊಂಡಿದ್ದೀಯಲ್ಲ. ಅಷ್ಟು ಸಾಕು” ಎಂದು ಮಗನ ಕಿವಿಯಲ್ಲಿ ಉಸುರಿದರು.
ಮಾತೃ ವಾತ್ಸಲ್ಯದ ಅನೇಕ ಕಥೆಗಳು ಮಹಾತ್ಮರೆಲ್ಲರ ಬದುಕಿನಲ್ಲಿಯೂ ಇವೆ. ಅವರ ಜೀವನ ಚರಿತ್ರೆಗಳಿಂದ ಅದು ತಿಳಿಯುತ್ತದೆ. ನಾವು ನಮ್ಮ ತಾಯಿ ನೀಡಿದ ಪೋಷಣೆಯನ್ನು ಸ್ಮರಣೆಯಲ್ಲಿಟ್ಟುಕೊಳ್ಳಬೇಕು. ಅದೇ ಭಾರತದ ಸಂಸ್ಕಾರ.
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
ಡಾ.ಚಂದ್ರಶೇಖರ ದಾಮ್ಲೆಡಾ. ಚಂದ್ರಶೇಖರ ದಾಮ್ಲೆಯವರು ಸುಳ್ಯದ ನೆಹರು ಮೆಮೋರಿಯಲ್ ಕಾಲೇಜ್ ನಲ್ಲಿ ಸಮಾಜಶಾಸ್ತ್ರ ಪ್ರಾಧ್ಯಾಪಕರಾಗಿ 35 ವರ್ಷಗಳಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದವರು. ವೃತ್ತಿಯಲ್ಲಿರುವಾಗಲೇ ರಾಷ್ಟ್ರೀಯ ಸೇವಾ ಯೋಜನಾಧಿಕಾರಿಯಾಗಿ ಸಮಾಜಸೇವೆಯಲ್ಲಿ ತೊಡಗಿಕೊಂಡವರು. ಸಾಂಸ್ಕೃತಿಕ ಸಂಘದ ಮೂಲಕ ಮಕ್ಕಳಿಗೆ ಯಕ್ಷಗಾನ ನಿರ್ದೇಶಕನ, ಸುಳ್ಯದಲ್ಲಿ ಯಕ್ಷಗಾನ ಹಿತರಕ್ಷಣಾ ವೇದಿಕೆಯ ಸ್ಥಾಪನೆ, ಸಂಪೂರ್ಣ ಸಾಕ್ಷರತಾ ಆಂದೋಲನದಲ್ಲಿ ಸಂಪನ್ಮೂಲ ವ್ಯಕ್ತಿ, ಕನ್ನಡಮಾಧ್ಯಮದಲ್ಲಿ ಸ್ನೇಹ ಶಿಕ್ಷಣ ಸಂಸ್ಥೆಯ ಸ್ಥಾಪನೆ ಮುಂತಾದ ಸಮಾಜಮುಖಿ ಕಾರ್ಯಗಳಲ್ಲಿ ಸೇವೆ ನೀಡಿದವರು. ಶಿಕ್ಷಣದಲ್ಲಿ ಸೃಜನಶೀಲತೆಗೆ ಒತ್ತು ನೀಡುವ ದಾಮ್ಲೆಯವರು ಸಂಶೋಧಕರಾಗಿದ್ದು ಕನ್ನಡ ಇಂಗ್ಲಿಷ್ ಭಾಷೆಗಳಲ್ಲಿ ಕೃತಿ ರಚನೆ ಮಾಡಿದವರು. 'ನೆಲದನಂಟು' ಮತ್ತು "ಶಾಲೆ ಎಲ್ಲಿದೆ?" ಇವು ಇವರ ಪ್ರಸಿದ್ಧ ಕಾದಂಬರಿಗಳು. ಅನೇಕ ಪ್ರಶಸ್ತಿ ಸಮ್ಮಾನಗಳಿಂದ ಗೌರವಿಸಲ್ಪಟ್ಟ ದಾಮ್ಲೆಯವರಿಗೆ ಅಸಾಮಾನ್ಯ ಕನ್ನಡಿಗ ಪ್ರಶಸ್ತಿ, ಯಕ್ಷಮಂಗಳ ಪ್ರಶಸ್ತಿ, ಅರಣ್ಯಮಿತ್ರ ಮತ್ತು ಜಲಮಿತ್ರ ಪ್ರಶಸ್ತಿ, Nation Builder ಪ್ರಶಸ್ತಿ ಮುಂತಾದುವು ಲಭಿಸಿವೆ. ಹೊಸದಿಗಂತ ಪತ್ರಿಕೆಯಲ್ಲಿ "ಇದ್ಯಾಕೆ ಹೀಗೆ " ಅಂಕಣವನ್ನು ಬರೆಯುತ್ತಿದ್ದರು.