ಭಾರತದ ಅಡಿಕೆ ಕ್ಷೇತ್ರವು ಮಹತ್ವದ ಪರಿವರ್ತನೆಯ ಹಂತದಲ್ಲಿದೆ. ಅಡಿಕೆ ಬೆಳೆಯುವ ಪ್ರದೇಶವೂ ಉತ್ಪಾದನೆಯೂ ವಿಸ್ತರಿಸುತ್ತಿರುವ ಸಂದರ್ಭದಲ್ಲಿ, ಅದಕ್ಕೆ ಅನುಗುಣವಾಗಿ ಮಾರುಕಟ್ಟೆ, ಸಂಸ್ಕರಣೆ, ದೇಶೀಯ ಬಳಕೆ, ದಾಸ್ತಾನು, ಆಮದು, ಉತ್ಪಾದನಾ ವೆಚ್ಚ ಮತ್ತು ಭವಿಷ್ಯದ ಪೂರೈಕೆಯ ಕುರಿತು ವಿಶ್ವಾಸಾರ್ಹ ಹಾಗೂ ಸಮಗ್ರ ಮಾಹಿತಿ ವ್ಯವಸ್ಥೆಯೂ ಬೆಳೆಯಬೇಕಾಗಿದೆ. ಅಡಿಕೆಯ ಬೆಲೆ ಏರಿಳಿತವನ್ನು ಕೇವಲ ಆ ದಿನದ ಮಾರುಕಟ್ಟೆ ಆಗಮನ ಅಥವಾ ಬೇಡಿಕೆಯ ಆಧಾರದ ಮೇಲೆ ಅರ್ಥಮಾಡಿಕೊಳ್ಳುವುದು ಈಗ ಸಾಕಾಗುವುದಿಲ್ಲ. ದೀರ್ಘಾವಧಿಯ ತೋಟಗಾರಿಕಾ ಬೆಳೆಯಾಗಿರುವ ಅಡಿಕೆಯಲ್ಲಿ ಇಂದಿನ ಬೆಲೆ ನಾಳಿನ ನೆಡುವಿಕೆಯನ್ನು, ಇಂದಿನ ನೆಡುವಿಕೆ ಮುಂದಿನ ವರ್ಷಗಳ ಪೂರೈಕೆಯನ್ನು ಮತ್ತು ಆ ಪೂರೈಕೆ ಭವಿಷ್ಯದ ಬೆಲೆಯನ್ನು ಪ್ರಭಾವಿಸುತ್ತದೆ. ಹೀಗಾಗಿ ಅಡಿಕೆಯ ಆರ್ಥಿಕತೆಯನ್ನು ಕ್ಷಣಿಕ ಬೆಲೆ ಚಲನೆಯ ಬದಲಿಗೆ ದೀರ್ಘಾವಧಿಯ ಪೂರೈಕೆ–ಬೇಡಿಕೆ ವ್ಯವಸ್ಥೆಯಾಗಿ ನೋಡುವ ಅಗತ್ಯವಿದೆ.
ಸಮಗ್ರ ದೃಷ್ಟಿಯ ಐತಿಹಾಸಿಕ ಹಿನ್ನೆಲೆ: ಅಡಿಕೆ ಕ್ಷೇತ್ರವನ್ನು ರಾಷ್ಟ್ರೀಯ ಮಟ್ಟದಲ್ಲಿ ಸಮಗ್ರವಾಗಿ ನೋಡುವ ಪ್ರಯತ್ನ ಸ್ವಾತಂತ್ರ್ಯಾನಂತರವೇ ಆರಂಭವಾಯಿತು. 1947ರಲ್ಲಿ ಅಡಿಕೆ ಕ್ಷೇತ್ರದ ಸಮಸ್ಯೆಗಳನ್ನು ಅಧ್ಯಯನ ಮಾಡಲು ಸಮಿತಿ ರಚನೆಯಾದ ನಂತರ, 1949ರಲ್ಲಿ Indian Central Arecanut Committee (ICAC) ಸ್ಥಾಪನೆಯಾಯಿತು. ಉತ್ಪಾದನೆ, ಸಂಶೋಧನೆ, ಅಭಿವೃದ್ಧಿ, ವಿಸ್ತರಣಾ ಚಟುವಟಿಕೆ ಮತ್ತು ಮಾರುಕಟ್ಟೆಯನ್ನು ಪರಸ್ಪರ ಸಂಬಂಧಿಸಿದ ವಿಷಯಗಳಾಗಿ ಪರಿಗಣಿಸುವುದು ಅದರ ಪ್ರಮುಖ ಲಕ್ಷಣವಾಗಿತ್ತು.
1960ರ ದಶಕದಲ್ಲಿ ಕೃಷಿ ಸಂಶೋಧನಾ ವ್ಯವಸ್ಥೆಯ ಮರುಸಂಘಟನೆ ನಡೆಯಿತು. 1965ರಲ್ಲಿ ICAC ವಿಸರ್ಜನೆಯಾದ ನಂತರ ಅಡಿಕೆ ಕ್ಷೇತ್ರದ ವಿವಿಧ ಕಾರ್ಯಗಳು ವಿಭಿನ್ನ ಪರಿಣತಿ ಸಂಸ್ಥೆಗಳ ಮೂಲಕ ಮುಂದುವರಿದವು. ಇದನ್ನು ಕೇವಲ ಒಂದು ಸಂಸ್ಥೆಯ ಅಂತ್ಯವೆಂದು ನೋಡುವ ಬದಲು, ಕಾರ್ಯಗಳ ವಿಶೇಷೀಕರಣದ ಹಂತವೆಂದು ಪರಿಗಣಿಸುವುದು ಸೂಕ್ತ. ಸಂಶೋಧನೆ ಒಂದು ಕಡೆ, ಅಭಿವೃದ್ಧಿ ಮತ್ತು ದತ್ತಾಂಶ ಮತ್ತೊಂದು ಕಡೆ, ಮಾರುಕಟ್ಟೆ ಮತ್ತೊಂದು ಕಡೆ ಎಂಬಂತೆ ಪರಿಣತಿ ವಿಸ್ತರಿಸಿತು.
ಆದರೆ ವಿಶೇಷೀಕರಣಕ್ಕೆ ಒಂದು ಸಹಜ ಸವಾಲಿದೆ. ಸಂಸ್ಥೆಗಳು ತಮ್ಮ ಕ್ಷೇತ್ರಗಳಲ್ಲಿ ಪರಿಣತಿ ಗಳಿಸಿದಂತೆ ಅವುಗಳ ನಡುವಿನ ಸಮನ್ವಯದ ಅಗತ್ಯವೂ ಹೆಚ್ಚುತ್ತದೆ. ಮಾಹಿತಿ ಬೇರೆ ಬೇರೆ ಕಡೆ ಸಂಗ್ರಹವಾಗಿದ್ದರೂ ಅದು ಒಂದೇ ನಿರ್ಧಾರ ವ್ಯವಸ್ಥೆಯಾಗಿ ರೂಪಾಂತರಗೊಳ್ಳದಿದ್ದರೆ, ಸಂಸ್ಥೆಗಳ ಒಟ್ಟು ಸಾಮರ್ಥ್ಯ ಅದರ ಪೂರ್ಣ ಪ್ರಮಾಣದಲ್ಲಿ ಬಳಸಿಕೊಳ್ಳಲು ಸಾಧ್ಯವಾಗುವುದಿಲ್ಲ.
CPCRI: ವೈಜ್ಞಾನಿಕ ನೆಲೆ : ವಿಟ್ಲದಲ್ಲಿ Central Arecanut Research Station ಸ್ಥಾಪನೆಯಾಗಿ ಅಡಿಕೆ ಸಂಶೋಧನೆಗೆ ಬಲವಾದ ವೈಜ್ಞಾನಿಕ ನೆಲೆ ನಿರ್ಮಾಣವಾಯಿತು. 1970ರಲ್ಲಿ Central Plantation Crops Research Institute (CPCRI) ಸ್ಥಾಪನೆಯಾದ ನಂತರ ಅಡಿಕೆ ಸಂಶೋಧನೆಗೆ ರಾಷ್ಟ್ರೀಯ ಮಟ್ಟದ ಸಂಸ್ಥಾತ್ಮಕ ಬಲ ದೊರೆಯಿತು.
ತಳಿ ಅಭಿವೃದ್ಧಿ, ಉತ್ಪಾದಕತೆ, ಪೋಷಕಾಂಶ ನಿರ್ವಹಣೆ, ಮಣ್ಣು ಮತ್ತು ನೀರಿನ ನಿರ್ವಹಣೆ, ರೋಗ–ಕೀಟ ನಿಯಂತ್ರಣ, ಕೊಯ್ಲೋತ್ತರ ತಂತ್ರಜ್ಞಾನ ಹಾಗೂ ಹವಾಮಾನ ಹೊಂದಾಣಿಕೆ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಸಂಶೋಧನೆ ನಡೆಯುತ್ತಿದೆ. ಆದರೆ ಭವಿಷ್ಯದ ಸವಾಲು ಕೇವಲ ಉತ್ಪಾದಕತೆಯನ್ನು ಹೆಚ್ಚಿಸುವುದಲ್ಲ. ಮಾರುಕಟ್ಟೆಯಲ್ಲಿ ಎದುರಾಗುತ್ತಿರುವ ನೈಜ ಸಮಸ್ಯೆಗಳು ಸಂಶೋಧನೆಯ ಆದ್ಯತೆಗಳನ್ನೂ ನಿರ್ಧರಿಸುವಂತಾಗಬೇಕು.
ಕಾರ್ಮಿಕ ವೆಚ್ಚ ಹೆಚ್ಚಾದರೆ ಕಾರ್ಮಿಕ ಉಳಿತಾಯ ತಂತ್ರಜ್ಞಾನ, ರೋಗದ ಅಪಾಯ ಹೆಚ್ಚಾದರೆ ಪರಿಣಾಮಕಾರಿ ಮುನ್ನೆಚ್ಚರಿಕಾ ನಿರ್ವಹಣೆ, ಗುಣಮಟ್ಟದ ಆಧಾರದ ಮೇಲೆ ಬೆಲೆ ವ್ಯತ್ಯಾಸವಿದ್ದರೆ ವೈಜ್ಞಾನಿಕ ಗ್ರೇಡಿಂಗ್ ಮತ್ತು ಕೊಯ್ಲೋತ್ತರ ತಂತ್ರಜ್ಞಾನ, ಹವಾಮಾನ ಬದಲಾವಣೆ ಹೆಚ್ಚಾದರೆ ಹವಾಮಾನ ಸಹಿಷ್ಣು ಕೃಷಿ ಪದ್ಧತಿಗಳು, ಅಡಿಕೆ ಯ ಮೌಲ್ಯ ವರ್ಧನೆ, ಪರ್ಯಾಯ ಬಳಕಯ ಅನ್ವೇಷಣೆ—ಇವೆಲ್ಲವೂ ಮಾರುಕಟ್ಟೆ ಸಂಕೇತ ಮತ್ತು ಸಂಶೋಧನೆಯ ನಡುವಿನ ನೇರ ಸಂಪರ್ಕವನ್ನು ಅಗತ್ಯಗೊಳಿಸುತ್ತವೆ.
DASD: ರಾಷ್ಟ್ರೀಯ ದತ್ತಾಂಶದ ಕೊಂಡಿ : 1966ರಲ್ಲಿ ಸ್ಥಾಪನೆಯಾದ Directorate of Arecanut and Spices Development (DASD) ಅಡಿಕೆ ಮತ್ತು ಮಸಾಲೆ ಬೆಳೆಗಳ ಅಭಿವೃದ್ಧಿಯಲ್ಲಿ ರಾಷ್ಟ್ರೀಯ ಮಟ್ಟದ ಸಮನ್ವಯ ಪಾತ್ರವನ್ನು ವಹಿಸುತ್ತದೆ. ರಾಜ್ಯಗಳು, ಕೃಷಿ ವಿಶ್ವವಿದ್ಯಾಲಯಗಳು ಮತ್ತು ಸಂಶೋಧನಾ ಸಂಸ್ಥೆಗಳೊಂದಿಗೆ ಸಂಪರ್ಕ ಸಾಧಿಸುವುದರ ಜೊತೆಗೆ ಪ್ರದೇಶ, ಉತ್ಪಾದನೆ, ಉತ್ಪಾದಕತೆ ಮತ್ತು ಬೆಲೆ ಸೇರಿದಂತೆ ಹಲವು ಅಂಕಿ-ಅಂಶಗಳ ಸಂಗ್ರಹ ಮತ್ತು ಸಮನ್ವಯದಲ್ಲೂ ಅದರ ಪಾತ್ರವಿದೆ.
ಹೀಗಾಗಿ National Arecanut Council ಎಂಬ ಪರಿಕಲ್ಪನೆಯು DASDಗೆ ಪರ್ಯಾಯವಾಗಬಾರದು. ಈಗಾಗಲೇ ಲಭ್ಯವಿರುವ ಅಧಿಕೃತ ದತ್ತಾಂಶವನ್ನು ಇನ್ನಷ್ಟು ವಿಸ್ತರಿಸಿ, ಸಂಶೋಧನಾ ಮಾಹಿತಿ, ಮಾರುಕಟ್ಟೆ ವ್ಯವಹಾರಗಳ ಮಾಹಿತಿ, ದಾಸ್ತಾನು ಅಂದಾಜು, ಆಮದು–ರಫ್ತು ಮತ್ತು ಬಳಕೆ ಸಮೀಕ್ಷೆಗಳೊಂದಿಗೆ ಜೋಡಿಸುವುದು ಇದರ ಉದ್ದೇಶವಾಗಬೇಕು.
ಪ್ರಶ್ನೆ “ದತ್ತಾಂಶ ಇದೆಯೇ?” ಎಂಬುದಲ್ಲ. “ವಿವಿಧ ಮೂಲಗಳಲ್ಲಿರುವ ದತ್ತಾಂಶವನ್ನು ಒಂದೇ ರಾಷ್ಟ್ರೀಯ ನಿರ್ಧಾರ ವ್ಯವಸ್ಥೆಯಾಗಿ ಪರಿವರ್ತಿಸಬಹುದೇ?” ಎಂಬುದಾಗಿದೆ.
CAMPCO: ಮಾರುಕಟ್ಟೆಯ ತಳಮಟ್ಟದ ಅನುಭವ : 1970–73ರ ಅಡಿಕೆ ಬೆಲೆ ಕುಸಿತದ ಹಿನ್ನೆಲೆಯಲ್ಲಿ ರೈತರ ಹಿತಾಸಕ್ತಿಯನ್ನು ರಕ್ಷಿಸಲು ಸಂಘಟಿತ ಮಾರುಕಟ್ಟೆ ವ್ಯವಸ್ಥೆಯ ಅಗತ್ಯ ತೀವ್ರವಾಯಿತು. ಕರ್ನಾಟಕ ಮತ್ತು ಕೇರಳದ ಸಹಕಾರದೊಂದಿಗೆ 1973ರಲ್ಲಿ CAMPCO ಸ್ಥಾಪನೆಯಾಯಿತು.
CAMPCOದ ಪ್ರಮುಖ ಶಕ್ತಿ ಅದರ ಮಾರುಕಟ್ಟೆ ಸಂಪರ್ಕ. ರೈತರು ಯಾವ ಸಂದರ್ಭದಲ್ಲಿ ಮಾರಾಟ ಮಾಡುತ್ತಾರೆ, ಯಾವ ಗುಣಮಟ್ಟದ ಅಡಿಕೆ ಮಾರುಕಟ್ಟೆಗೆ ಬರುತ್ತದೆ, ಖರೀದಿ ಹೇಗೆ ಬದಲಾಗುತ್ತದೆ, ದಾಸ್ತಾನು ಯಾವ ದಿಕ್ಕಿನಲ್ಲಿ ಚಲಿಸುತ್ತದೆ ಮತ್ತು ಬೆಲೆ ಬದಲಾವಣೆಗೆ ಮಾರುಕಟ್ಟೆ ಹೇಗೆ ಪ್ರತಿಕ್ರಿಯಿಸುತ್ತದೆ ಎಂಬುದರ ಕುರಿತು ದೀರ್ಘಕಾಲದ ಅನುಭವಾಧಾರಿತ ಮಾಹಿತಿ ಅದರ ಬಳಿ ಇದೆ.
ಈ ಮಾಹಿತಿಯನ್ನು ಕೇವಲ ವ್ಯಾಪಾರ ನಿರ್ಧಾರಗಳಿಗೆ ಸೀಮಿತಗೊಳಿಸದೆ ರಾಷ್ಟ್ರೀಯ ಮಾರುಕಟ್ಟೆ ಬುದ್ಧಿವಂತಿಕೆ ಯ ಭಾಗವನ್ನಾಗಿ ಮಾಡಿದರೆ ಅದರ ಮೌಲ್ಯ ಇನ್ನಷ್ಟು ಹೆಚ್ಚಬಹುದು.
ಮೂರು ಸಂಸ್ಥೆಗಳು, ಮೂರು ವಿಭಿನ್ನ ಶಕ್ತಿಗಳು: CPCRI, DASD ಮತ್ತು CAMPCO ಒಂದೇ ರೀತಿಯ ಸಂಸ್ಥೆಗಳಲ್ಲ. CPCRI ವಿಜ್ಞಾನ ಮತ್ತು ತಂತ್ರಜ್ಞಾನವನ್ನು ಪ್ರತಿನಿಧಿಸುತ್ತದೆ. DASD ರಾಷ್ಟ್ರೀಯ ಅಭಿವೃದ್ಧಿ ಮತ್ತು ದತ್ತಾಂಶ ಸಮನ್ವಯದ ಪ್ರಮುಖ ಕೊಂಡಿಯಾಗಿದೆ. CAMPCO ರೈತ ಮತ್ತು ಮಾರುಕಟ್ಟೆಯ ನಡುವಿನ ನೇರ ಸಂಪರ್ಕವನ್ನು ಪ್ರತಿನಿಧಿಸುತ್ತದೆ.
ಈ ವಿಭಿನ್ನತೆಯೇ ಅವುಗಳ ಶಕ್ತಿ. ಆದರೆ 2026ರ ಸವಾಲು ಅವುಗಳನ್ನು ಒಂದೇ ಸಂಸ್ಥೆಯಾಗಿ ಪರಿವರ್ತಿಸುವುದಲ್ಲ. ಅವುಗಳ ಪರಿಣತಿಯನ್ನು ಒಂದೇ ರಾಷ್ಟ್ರೀಯ ಮಾಹಿತಿ ಮತ್ತು ನಿರ್ಧಾರ ವ್ಯವಸ್ಥೆಯಲ್ಲಿ ಜೋಡಿಸುವುದಾಗಿದೆ.
ಉತ್ಪಾದನೆ ಮತ್ತು ಪೂರೈಕೆ ಒಂದೇ ಅಲ್ಲ: ಅಡಿಕೆ ಮಾರುಕಟ್ಟೆಯನ್ನು ಅರ್ಥಮಾಡಿಕೊಳ್ಳುವಾಗ ವಾರ್ಷಿಕ ಉತ್ಪಾದನೆಯನ್ನೇ ಒಟ್ಟು ಪೂರೈಕೆಯಾಗಿ ಪರಿಗಣಿಸುವುದು ಅಪೂರ್ಣ. ಹಿಂದಿನ ವರ್ಷದ ದಾಸ್ತಾನು, ರೈತರ ದಾಸ್ತಾನು, ವ್ಯಾಪಾರಿಗಳ ಸಂಗ್ರಹ, ಸಹಕಾರಿ ಸಂಸ್ಥೆಗಳ ದಾಸ್ತಾನು, ಸಂಸ್ಕರಣಾ ಘಟಕಗಳ ಸಂಗ್ರಹ ಮತ್ತು ಆಮದು—ಇವೆಲ್ಲವೂ ಮಾರುಕಟ್ಟೆಗೆ ಲಭ್ಯವಾಗುವ ಒಟ್ಟು ಪೂರೈಕೆಯನ್ನು ಪ್ರಭಾವಿಸುತ್ತವೆ.
ಹೀಗಾಗಿ “ದೇಶದಲ್ಲಿ ಎಷ್ಟು ಅಡಿಕೆ ಉತ್ಪಾದನೆಯಾಯಿತು?” ಎಂಬ ಪ್ರಶ್ನೆಯ ಜೊತೆಗೆ “ಆ ಉತ್ಪಾದನೆಯಲ್ಲಿ ಎಷ್ಟು ಪ್ರಮಾಣ ಯಾವ ಸಮಯದಲ್ಲಿ ಮಾರುಕಟ್ಟೆಗೆ ಬರುತ್ತದೆ?” ಎಂಬ ಪ್ರಶ್ನೆಯೂ ಮುಖ್ಯವಾಗುತ್ತದೆ.
ಇಲ್ಲಿಯೇ ರಾಷ್ಟ್ರೀಯ ದಾಸ್ತಾನು ಅಂದಾಜು ವ್ಯವಸ್ಥೆಯ ಅಗತ್ಯ ಕಾಣಿಸುತ್ತದೆ. ಮಾರುಕಟ್ಟೆಯಲ್ಲಿ ತಕ್ಷಣ ಗೋಚರಿಸದ ದಾಸ್ತಾನು ವಾಸ್ತವದಲ್ಲಿ ಭವಿಷ್ಯದ ಪೂರೈಕೆಯ ಒಂದು ಭಾಗ. ಅದರ ಪ್ರಮಾಣದ ಬಗ್ಗೆ ಸ್ಪಷ್ಟತೆ ಇಲ್ಲದಿದ್ದರೆ ಬೆಲೆ ಮತ್ತು ಪೂರೈಕೆ–ಬೇಡಿಕೆ ವಿಶ್ಲೇಷಣೆಯೂ ಅಪೂರ್ಣವಾಗುತ್ತದೆ.
ಇಂದಿನ ಬೆಲೆ ನಾಳಿನ ಪೂರೈಕೆಯನ್ನು ರೂಪಿಸುತ್ತದೆ: ಅಡಿಕೆ ದೀರ್ಘಾವಧಿಯ ಬೆಳೆ. ಹೀಗಾಗಿ ಬೆಲೆ ಮತ್ತು ಪೂರೈಕೆಯ ನಡುವಿನ ಸಂಬಂಧ ತಕ್ಷಣದದ್ದಲ್ಲ. ಹೆಚ್ಚಿನ ಬೆಲೆ ರೈತರ ಆದಾಯವನ್ನು ಹೆಚ್ಚಿಸುವುದರ ಜೊತೆಗೆ ಹೊಸ ನೆಡುವಿಕೆಗೆ ಪ್ರೋತ್ಸಾಹ ನೀಡಬಹುದು. ಆ ಹೊಸ ತೋಟಗಳು ಹಲವು ವರ್ಷಗಳ ನಂತರ ಉತ್ಪಾದನೆಗೆ ಬರುತ್ತವೆ.
ಹೀಗಾಗಿ ಒಂದು ಆರ್ಥಿಕ ಚಕ್ರ ರೂಪುಗೊಳ್ಳುತ್ತದೆ: ಇದು ಅಡಿಕೆ ಮಾರುಕಟ್ಟೆಯ dynamic supply response ಅನ್ನು ತೋರಿಸುತ್ತದೆ. ಆದ್ದರಿಂದ ಇಂದಿನ ಬೆಲೆಯನ್ನು ಮಾತ್ರ ವಿಶ್ಲೇಷಿಸುವ ವ್ಯವಸ್ಥೆಯಿಂದ ಭವಿಷ್ಯದ ಪೂರೈಕೆ ಒತ್ತಡವನ್ನು ಮುಂಚಿತವಾಗಿ ಗುರುತಿಸಲು ಸಾಧ್ಯವಿಲ್ಲ.
ಇದಕ್ಕಾಗಿ ರಾಷ್ಟ್ರೀಯ ಮಟ್ಟದಲ್ಲಿ ಹೊಸ ನೆಡುವಿಕೆ, ತೋಟದ ವಯೋವಿನ್ಯಾಸ ಮತ್ತು ಭವಿಷ್ಯದ ಉತ್ಪಾದನಾ ಸಾಮರ್ಥ್ಯದ ನಿರಂತರ ಸಮೀಕ್ಷೆ ಅಗತ್ಯ.
ಒಟ್ಟು ಪ್ರದೇಶಕ್ಕಿಂತ ತೋಟದ ವಯೋವಿನ್ಯಾಸ ಮುಖ್ಯ: ಅಡಿಕೆಯ ಭವಿಷ್ಯದ ಪೂರೈಕೆಯನ್ನು ಅಂದಾಜಿಸಲು ಒಟ್ಟು ಬೆಳೆ ಪ್ರದೇಶದ ಮಾಹಿತಿ ಮಾತ್ರ ಸಾಕಾಗುವುದಿಲ್ಲ. ಹೊಸದಾಗಿ ನೆಡಲಾದ ತೋಟಗಳು ಎಷ್ಟು? ಉತ್ಪಾದನೆಗೆ ಪ್ರವೇಶಿಸುತ್ತಿರುವ ತೋಟಗಳ ಪ್ರಮಾಣ ಎಷ್ಟು? ಪೂರ್ಣ ಉತ್ಪಾದನಾ ಹಂತದಲ್ಲಿರುವ ಪ್ರದೇಶ ಎಷ್ಟು? ಹಳೆಯ ತೋಟಗಳ ಪ್ರಮಾಣ ಎಷ್ಟು? ರೋಗ, ಉತ್ಪಾದಕತೆ ಕುಸಿತ ಅಥವಾ ಇತರ ಕಾರಣಗಳಿಂದ ಉತ್ಪಾದನೆಯಿಂದ ಹೊರಬರುವ ಪ್ರದೇಶ ಎಷ್ಟು? ಈ ಮಾಹಿತಿಯ ಆಧಾರದ ಮೇಲೆ ಮಾತ್ರ ಮುಂದಿನ ಹಲವು ವರ್ಷಗಳ ಉತ್ಪಾದನಾ ಸಾಮರ್ಥ್ಯವನ್ನು ಹೆಚ್ಚು ವೈಜ್ಞಾನಿಕವಾಗಿ ಅಂದಾಜಿಸಬಹುದು.
ಬೇಡಿಕೆಯ ನಿಖರ ಚಿತ್ರವೂ ಅಗತ್ಯ: ಉತ್ಪಾದನೆಯ ಅಂಕಿ-ಅಂಶಗಳ ಜೊತೆಗೆ ದೇಶೀಯ ಬಳಕೆಯ ಕುರಿತ ಸಮಗ್ರ ಅಧ್ಯಯನವೂ ಅಗತ್ಯ. ಯಾವ ರಾಜ್ಯದಲ್ಲಿ ಎಷ್ಟು ಬಳಕೆ ಇದೆ, ಎಷ್ಟು ಅಡಿಕೆ ಸಂಸ್ಕರಣೆಗೆ ಹೋಗುತ್ತದೆ, ಯಾವ ದರ್ಜೆಗೆ ಹೆಚ್ಚಿನ ಬೇಡಿಕೆ ಇದೆ, ಮೌಲ್ಯವರ್ಧಿತ ಉತ್ಪನ್ನಗಳ ಪಾತ್ರ ಎಷ್ಟು ಮತ್ತು ಬಳಕೆಯ ಮಾದರಿ ಹೇಗೆ ಬದಲಾಗುತ್ತಿದೆ ಎಂಬ ಪ್ರಶ್ನೆಗಳಿಗೆ ವಿಶ್ವಾಸಾರ್ಹ ಉತ್ತರ ಬೇಕಾಗಿದೆ.
ಬೇಡಿಕೆಯ ನಿಖರ ಚಿತ್ರವಿಲ್ಲದೆ ಪೂರೈಕೆ–ಬೇಡಿಕೆ ಸಮತೋಲನವನ್ನು ಸಂಪೂರ್ಣವಾಗಿ ಅರ್ಥಮಾಡಿಕೊಳ್ಳಲು ಸಾಧ್ಯವಿಲ್ಲ. ಆದ್ದರಿಂದ National Arecanut Consumption and Utilisation Survey ಅಡಿಕೆ ಕ್ಷೇತ್ರದ ಭವಿಷ್ಯದ ನೀತಿ ರೂಪಣೆಯ ಪ್ರಮುಖ ಆಧಾರವಾಗಬಹುದು.
ಆಮದು ಪ್ರಮಾಣಕ್ಕಿಂತ ಪರಿಣಾಮ ಮುಖ್ಯ : ಅಡಿಕೆ ಆಮದು ಕುರಿತು ಚರ್ಚೆಯೂ ಹೆಚ್ಚು ವೈಜ್ಞಾನಿಕವಾಗಬೇಕು. ಆಮದು ಎಷ್ಟು ಬಂದಿದೆ ಎಂಬುದರ ಜೊತೆಗೆ ಅದು ಯಾವ ಬೆಲೆಗೆ ಬಂದಿದೆ, ಯಾವ ಸಮಯದಲ್ಲಿ ಬಂದಿದೆ, ಯಾವ ದರ್ಜೆಯ ಅಡಿಕೆಗೆ ಸ್ಪರ್ಧಿಸಿದೆ ಮತ್ತು ಆಮದು ನಂತರ ದೇಶೀಯ ಮಾರುಕಟ್ಟೆ ಬೆಲೆಯಲ್ಲಿ ಎಷ್ಟು ಬದಲಾವಣೆ ಕಂಡುಬಂದಿದೆ ಎಂಬುದನ್ನು ವಿಶ್ಲೇಷಿಸಬೇಕು.
ಇದು price transmissionನ ಪ್ರಶ್ನೆ. ಆಮದು ಪ್ರಮಾಣವನ್ನು ಮಾತ್ರ ಆಧರಿಸಿ ದೇಶೀಯ ಬೆಲೆ ಚಲನೆಯ ಕಾರಣವನ್ನು ನಿರ್ಧರಿಸುವ ಬದಲು, ಆಮದು ಬೆಲೆ, ದೇಶೀಯ ದಾಸ್ತಾನು, ಮಾರುಕಟ್ಟೆ ಆಗಮನ ಮತ್ತು ಬೇಡಿಕೆಯೊಂದಿಗೆ ಅದರ ಸಂಬಂಧವನ್ನು ಅಳೆಯುವ ವ್ಯವಸ್ಥೆ ಅಗತ್ಯ. ಇಂತಹ ದತ್ತಾಂಶಾಧಾರಿತ ವಿಶ್ಲೇಷಣೆಯೇ ಆಮದು ನೀತಿಯನ್ನು ಹೆಚ್ಚು ಸಾಕ್ಷ್ಯಾಧಾರಿತಗೊಳಿಸಬಲ್ಲದು.
ಬೆಲೆಗಿಂತ ರೈತನ ಆರ್ಥಿಕ ಹೆಚ್ಚುವರಿ ಮುಖ್ಯ: ಮಾರುಕಟ್ಟೆ ಬೆಲೆ ಏರಿಕೆಯೇ ರೈತನ ಆರ್ಥಿಕ ಸ್ಥಿತಿಯ ಸಂಪೂರ್ಣ ಸೂಚಕವಲ್ಲ. ಉತ್ಪಾದನಾ ವೆಚ್ಚವೂ ಸಮಾನವಾಗಿ ಮುಖ್ಯ. ಕಾರ್ಮಿಕ, ಗೊಬ್ಬರ, ಕೀಟನಾಶಕ, ನೀರಾವರಿ, ರೋಗ ನಿರ್ವಹಣೆ, ಕೊಯ್ಲು, ಒಣಗಿಸುವಿಕೆ, ಸಾಗಾಟ, ಬಡ್ಡಿ ಮತ್ತು ಭೂಮಿಯ ಅವಕಾಶ ವೆಚ್ಚಗಳನ್ನು ಪರಿಗಣಿಸಿದ ನಂತರ ರೈತನಿಗೆ ಉಳಿಯುವ ಆರ್ಥಿಕ ಹೆಚ್ಚುವರಿಯೇ ಕೃಷಿಯ ನಿಜವಾದ ಸ್ಥಿರತೆಯನ್ನು ತೋರಿಸುತ್ತದೆ.
ಆದ್ದರಿಂದ ರಾಜ್ಯ ಮತ್ತು ಪ್ರದೇಶವಾರು Cost of Cultivation Index ರೂಪಿಸಿ ಅದನ್ನು ಮಾರುಕಟ್ಟೆ ಬೆಲೆಯೊಂದಿಗೆ ನಿರಂತರವಾಗಿ ಹೋಲಿಸುವ ವ್ಯವಸ್ಥೆ ಅಗತ್ಯ. ಇದರಿಂದ ಅಡಿಕೆ ಬೆಲೆ ರೈತನಿಗೆ ನಿಜವಾಗಿ ಎಷ್ಟು ಆರ್ಥಿಕ ಭದ್ರತೆ ನೀಡುತ್ತಿದೆ ಎಂಬುದನ್ನು ಅರ್ಥಮಾಡಿಕೊಳ್ಳಬಹುದು.
ಮಾಹಿತಿಯ ಅಸಮತೋಲನ ಕಡಿಮೆಯಾಗಬೇಕು: ಅಡಿಕೆ ಮಾರುಕಟ್ಟೆಯಲ್ಲಿ ರೈತ, ವ್ಯಾಪಾರಿ, ಸಹಕಾರಿ, ಸಂಸ್ಕರಣಾ ಘಟಕ ಮತ್ತು ಸರ್ಕಾರ—ಪ್ರತಿಯೊಬ್ಬರ ಬಳಿಯೂ ವಿಭಿನ್ನ ಮಾಹಿತಿ ಇರುತ್ತದೆ. ಈ ಮಾಹಿತಿಯ ಅಸಮಾನ ಹಂಚಿಕೆ ಮಾರುಕಟ್ಟೆಯ ನಿರ್ಧಾರಗಳನ್ನು ಪ್ರಭಾವಿಸಬಹುದು. ಅರ್ಥಶಾಸ್ತ್ರದಲ್ಲಿ ಇದನ್ನು information asymmetry ಎಂದು ಕರೆಯಲಾಗುತ್ತದೆ.
ವ್ಯಾಪಾರಿಗೆ ತಕ್ಷಣದ ಮಾರುಕಟ್ಟೆ ಬೇಡಿಕೆಯ ಬಗ್ಗೆ ಮಾಹಿತಿ ಇರಬಹುದು. ರೈತನಿಗೆ ತನ್ನ ದಾಸ್ತಾನು ಮತ್ತು ಉತ್ಪಾದನೆಯ ಬಗ್ಗೆ ಮಾಹಿತಿ ಇರುತ್ತದೆ. ಸಹಕಾರಿಗೆ ಖರೀದಿ ಮತ್ತು ಮಾರಾಟದ ಹರಿವಿನ ಮಾಹಿತಿ ಇರುತ್ತದೆ. ಸಂಶೋಧನಾ ಸಂಸ್ಥೆಗೆ ರೋಗ ಮತ್ತು ಉತ್ಪಾದನಾ ಅಪಾಯದ ಮಾಹಿತಿ ಇರಬಹುದು. ಸರ್ಕಾರಕ್ಕೆ ಅಧಿಕೃತ ಉತ್ಪಾದನಾ ಅಂಕಿ-ಅಂಶಗಳಿರಬಹುದು.
ಈ ಮಾಹಿತಿಗಳು ಒಂದೇ ವ್ಯವಸ್ಥೆಯಲ್ಲಿ ಸೇರುವುದಿಲ್ಲವಾದರೆ ಮಾರುಕಟ್ಟೆಯ ವಿವಿಧ ಭಾಗಗಳು ಅಪೂರ್ಣ ಮಾಹಿತಿಯ ಮೇಲೆ ನಿರ್ಧಾರ ತೆಗೆದುಕೊಳ್ಳುತ್ತವೆ. ಹೀಗಾಗಿ ರಾಷ್ಟ್ರೀಯ ಅಡಿಕೆ ಪರಿಷತ್ತಿನ ಪ್ರಮುಖ ಉದ್ದೇಶಗಳಲ್ಲಿ ಒಂದು information asymmetry ಅನ್ನು ಕಡಿಮೆ ಮಾಡುವುದು ಆಗಬೇಕು.
National Arecanut Data Grid ಅಗತ್ಯ: ರಾಷ್ಟ್ರೀಯ ಅಡಿಕೆ ಪರಿಷತ್ತಿನ ಮೊದಲ ಆದ್ಯತೆ ಮತ್ತೊಂದು ದೊಡ್ಡ ಆಡಳಿತಾತ್ಮಕ ವ್ಯವಸ್ಥೆಯನ್ನು ನಿರ್ಮಿಸುವುದಲ್ಲ; National Arecanut Data Grid ಅನ್ನು ನಿರ್ಮಿಸುವುದಾಗಿರಬೇಕು.
ಉತ್ಪಾದನೆ, ತೋಟದ ವಯಸ್ಸು, ಹೊಸ ನೆಡುವಿಕೆ, ದಾಸ್ತಾನು, ಮಾರುಕಟ್ಟೆ ಆಗಮನ, ಗುಣಮಟ್ಟ, ಬೆಲೆ, ದೇಶೀಯ ಬಳಕೆ, ಸಂಸ್ಕರಣೆ, ಆಮದು–ರಫ್ತು, ಉತ್ಪಾದನಾ ವೆಚ್ಚ, ಹವಾಮಾನ ಮತ್ತು ರೋಗ–ಕೀಟಗಳ ಮಾಹಿತಿಯನ್ನು ನಿರಂತರವಾಗಿ ಸಂಗ್ರಹಿಸಿ ಪರಸ್ಪರ ಜೋಡಿಸಬೇಕು.
ಈ ದತ್ತಾಂಶದ ಮೇಲೆ ಸಂಖ್ಯಾಶಾಸ್ತ್ರೀಯ ಮಾದರಿಗಳು ಮತ್ತು ಆಧುನಿಕ forecasting ತಂತ್ರಜ್ಞಾನಗಳನ್ನು ಬಳಸಿಕೊಂಡು ಪೂರೈಕೆ, ಬೇಡಿಕೆ ಮತ್ತು ಅಪಾಯದ ಮುನ್ಸೂಚನೆಗಳನ್ನು ರೂಪಿಸಬಹುದು.
ಮುನ್ಸೂಚನೆ ಎಂದರೆ ಬೆಲೆ ಭವಿಷ್ಯವಾಣಿ ಅಲ್ಲ: ರಾಷ್ಟ್ರೀಯ ಅಡಿಕೆ ಪರಿಷತ್ತು ನಿರ್ದಿಷ್ಟ ಭವಿಷ್ಯದ ಬೆಲೆಯನ್ನು ಘೋಷಿಸುವ ಸಂಸ್ಥೆಯಾಗಬಾರದು. ಮಾರುಕಟ್ಟೆಯ ಅನಿಶ್ಚಿತತೆಯನ್ನು ಗಮನಿಸಿದರೆ ಅಂಥ ನಿಖರ ಭವಿಷ್ಯವಾಣಿ ವೈಜ್ಞಾನಿಕವಾಗಿರುವುದಿಲ್ಲ. ಅದರ ಬದಲಿಗೆ ವಿವಿಧ ಪರಿಸ್ಥಿತಿಗಳ ಆಧಾರದ ಮೇಲೆ scenario analysis ರೂಪಿಸಬಹುದು—ಸಾಮಾನ್ಯ ಉತ್ಪಾದನೆ ಮತ್ತು ಬೇಡಿಕೆ, ಹೆಚ್ಚಿನ ಬೇಡಿಕೆ ಮತ್ತು ಕಡಿಮೆ ಮಾರುಕಟ್ಟೆ ಆಗಮನ, ಹೆಚ್ಚಿನ ಉತ್ಪಾದನೆ ಮತ್ತು ಹೆಚ್ಚಿನ ದಾಸ್ತಾನು, ಅಥವಾ ಹೆಚ್ಚಿನ ಆಮದು ಮತ್ತು ದುರ್ಬಲ ದೇಶೀಯ ಬೇಡಿಕೆ.
ಇದರಿಂದ ಬೆಲೆಯನ್ನು ನಿಖರವಾಗಿ ಹೇಳುವುದಕ್ಕಿಂತ ಮಾರುಕಟ್ಟೆಯ ಅಪಾಯದ ದಿಕ್ಕನ್ನು ಮುಂಚಿತವಾಗಿ ಗುರುತಿಸಲು ಸಾಧ್ಯವಾಗುತ್ತದೆ.
1973ರ ಪ್ರಶ್ನೆಗಿಂತ 2026ರ ಪ್ರಶ್ನೆ ಭಿನ್ನ: 1973ರಲ್ಲಿ ಪ್ರಮುಖ ಪ್ರಶ್ನೆ ರೈತನ ಅಡಿಕೆಗೆ ಮಾರುಕಟ್ಟೆ ಒದಗಿಸುವುದಾಗಿತ್ತು. ಸಂಘಟಿತ ಖರೀದಿ ಮತ್ತು ಸಹಕಾರಿ ಮಾರುಕಟ್ಟೆ ವ್ಯವಸ್ಥೆ ಅದಕ್ಕೆ ಪ್ರಮುಖ ಪ್ರತಿಕ್ರಿಯೆಯಾಯಿತು.
2026ರಲ್ಲಿ ಪ್ರಶ್ನೆ ಹೆಚ್ಚು ಸಂಕೀರ್ಣವಾಗಿದೆ. ಮುಂದಿನ ವರ್ಷ ಎಷ್ಟು ಉತ್ಪಾದನೆ ಬರಲಿದೆ? ಐದು ವರ್ಷಗಳ ನಂತರ ಎಷ್ಟು? ರೈತರ ಬಳಿ ಎಷ್ಟು ದಾಸ್ತಾನು ಇದೆ? ವ್ಯಾಪಾರಿಗಳ ಬಳಿ ಎಷ್ಟು? ದೇಶೀಯ ಬೇಡಿಕೆ ಎಷ್ಟು? ಆಮದು ಎಷ್ಟು? ಸಂಸ್ಕರಣಾ ಸಾಮರ್ಥ್ಯ ಎಷ್ಟು? ಉತ್ಪಾದನಾ ವೆಚ್ಚ ಯಾವ ದಿಕ್ಕಿನಲ್ಲಿ ಸಾಗುತ್ತಿದೆ?
ಹೀಗಾಗಿ 1973ರ ಪ್ರಮುಖ ಅಗತ್ಯ market intervention ಆಗಿದ್ದರೆ, 2026ರ ಅಗತ್ಯ market intelligence ಮತ್ತು risk management.
National Arecanut Council: ಮತ್ತೊಂದು ಮಂಡಳಿ ಅಲ್ಲ : National Arecanut Council ಮತ್ತೊಂದು ಸರ್ಕಾರಿ ಮಂಡಳಿಯಾಗಬಾರದು. CPCRIಯ ಸಂಶೋಧನಾ ಕಾರ್ಯವನ್ನು ಅದು ಪುನರಾವರ್ತಿಸಬಾರದು. DASDಯ ಅಧಿಕೃತ ಜವಾಬ್ದಾರಿಯನ್ನು ತೆಗೆದುಕೊಳ್ಳಬಾರದು. CAMPCOದ ವ್ಯಾಪಾರ ಕಾರ್ಯದಲ್ಲಿಯೂ ಹಸ್ತಕ್ಷೇಪ ಮಾಡಬಾರದು. ಅದರ ಬದಲಿಗೆ ಅದು National Coordination and Intelligence Platform ಆಗಬೇಕು.
CPCRIಯ ವೈಜ್ಞಾನಿಕ ಜ್ಞಾನ, DASDಯ ರಾಷ್ಟ್ರೀಯ ದತ್ತಾಂಶ, CAMPCOಯ ಮಾರುಕಟ್ಟೆ ಅನುಭವ, ರಾಜ್ಯಗಳ ತೋಟಮಟ್ಟದ ಮಾಹಿತಿ, ಕೃಷಿ ವಿಶ್ವವಿದ್ಯಾಲಯಗಳ ಸಂಶೋಧನೆ, ರೈತರ ಅನುಭವ, ವ್ಯಾಪಾರ ಕ್ಷೇತ್ರದ ಮಾಹಿತಿ ಹಾಗೂ ಆಮದು–ರಫ್ತು ದತ್ತಾಂಶಗಳನ್ನು ಒಂದೇ ರಾಷ್ಟ್ರೀಯ ವ್ಯವಸ್ಥೆಯಲ್ಲಿ ಜೋಡಿಸುವುದು ಅದರ ಕೇಂದ್ರ ಕಾರ್ಯವಾಗಬೇಕು.
ವಾರ್ಷಿಕ ‘India Arecanut Outlook’ ಅಗತ್ಯ: ಪ್ರತಿ ವರ್ಷ India Arecanut Outlook Report ಪ್ರಕಟಿಸುವ ವ್ಯವಸ್ಥೆಯನ್ನೂ ರೂಪಿಸಬಹುದು. ಅದರಲ್ಲಿ ಉತ್ಪಾದನೆ, ಪ್ರದೇಶ, ತೋಟದ ವಯೋವಿನ್ಯಾಸ, ಉತ್ಪಾದನಾ ವೆಚ್ಚ, ರೈತರ ಆದಾಯ, ದಾಸ್ತಾನು, ಬಳಕೆ, ಸಂಸ್ಕರಣೆ, ಆಮದು–ರಫ್ತು, ಹೊಸ ನೆಡುವಿಕೆ, ಬೆಲೆ ಪ್ರವೃತ್ತಿ ಮತ್ತು ಮುಂದಿನ ಮೂರು–ಐದು ವರ್ಷಗಳ supply-demand outlook ಇರಬೇಕು.
ಇದು ರೈತರಿಗೆ ಮಾತ್ರವಲ್ಲ; ಸರ್ಕಾರ, ಸಹಕಾರಿ ಸಂಸ್ಥೆಗಳು, ಬ್ಯಾಂಕುಗಳು, ಸಂಸ್ಕರಣಾ ಉದ್ಯಮ, ವ್ಯಾಪಾರಿಗಳು ಮತ್ತು ಸಂಶೋಧನಾ ಸಂಸ್ಥೆಗಳಿಗೆ ಸಾಮಾನ್ಯ ಉಲ್ಲೇಖ ದಾಖಲೆಯಾಗಬಹುದು.
ಬೆಲೆ ಸ್ಥಿರೀಕರಣಕ್ಕಿಂತ ಅಪಾಯ ನಿರ್ವಹಣೆ: ಮಾರುಕಟ್ಟೆ ಬೆಲೆ ಸದಾ ಒಂದೇ ಮಟ್ಟದಲ್ಲಿರಬೇಕು ಎಂಬುದು ಸಾಧ್ಯವೂ ಅಲ್ಲ, ಅಗತ್ಯವೂ ಅಲ್ಲ. ಬೆಲೆ ಏರಿಳಿತ ಮಾರುಕಟ್ಟೆಯ ಸಹಜ ಲಕ್ಷಣ. ಆದರೆ ಅತಿಯಾದ ಮತ್ತು ಅನಿರೀಕ್ಷಿತ volatility ರೈತ ಮತ್ತು ಮಾರುಕಟ್ಟೆಯ ಇತರ ಭಾಗಗಳಿಗೆ ಅಪಾಯವನ್ನು ಹೆಚ್ಚಿಸುತ್ತದೆ. ಹೀಗಾಗಿ ನೀತಿಯ ಗುರಿ price fixing ಆಗಬಾರದು; risk reduction ಆಗಬೇಕು.
ಮುಂಚಿತವಾಗಿ ಮಾಹಿತಿ ದೊರೆತರೆ ರೈತ ಮಾರಾಟದ ಸಮಯವನ್ನು ಮರುಪರಿಶೀಲಿಸಬಹುದು. ಸಹಕಾರಿ ಸಂಸ್ಥೆ ದಾಸ್ತಾನು ಯೋಜಿಸಬಹುದು. ಸರ್ಕಾರ ಆಮದು ನೀತಿಯ ಪರಿಣಾಮವನ್ನು ಮುಂಚಿತವಾಗಿ ಪರಿಶೀಲಿಸಬಹುದು. ಸಂಶೋಧನಾ ಸಂಸ್ಥೆಗಳು ಹೊಸ ಸಮಸ್ಯೆಗಳನ್ನು ಆದ್ಯತೆಯಾಗಿ ಪರಿಗಣಿಸಬಹುದು. ಇದೇ ಮಾರುಕಟ್ಟೆ ಬುದ್ಧಿವಂತಿಕೆಯ ಆರ್ಥಿಕ ಮೌಲ್ಯ.
ಸಮನ್ವಯವೇ ಮುಂದಿನ ಸ್ಪರ್ಧಾತ್ಮಕ ಶಕ್ತಿ: ಅಡಿಕೆ ಕ್ಷೇತ್ರದ ಸಮಸ್ಯೆ ಸಂಸ್ಥೆಗಳ ಕೊರತೆಯಲ್ಲ. CPCRI ಯಲ್ಲಿ ವೈಜ್ಞಾನಿಕ ಸಾಮರ್ಥ್ಯವಿದೆ. DASD ಯಲ್ಲಿ ರಾಷ್ಟ್ರೀಯ ಮಟ್ಟದ ಅಭಿವೃದ್ಧಿ ಮತ್ತು ದತ್ತಾಂಶ ಸಮನ್ವಯದ ವ್ಯವಸ್ಥೆಯಿದೆ. CAMPCO ಗೆ ದೀರ್ಘಕಾಲದ ಮಾರುಕಟ್ಟೆ ಅನುಭವವಿದೆ. ರಾಜ್ಯಗಳು ಮತ್ತು ಕೃಷಿ ವಿಶ್ವವಿದ್ಯಾಲಯಗಳ ಬಳಿ ತಳಮಟ್ಟದ ಮಾಹಿತಿ ಮತ್ತು ಸಂಶೋಧನಾ ಸಾಮರ್ಥ್ಯವಿದೆ. ಈಗಿನ ಸವಾಲು ಈ ಸಾಮರ್ಥ್ಯಗಳನ್ನು ಒಂದೇ ರಾಷ್ಟ್ರೀಯ ಮಾಹಿತಿ ವ್ಯವಸ್ಥೆಯಾಗಿ ಪರಿವರ್ತಿಸುವುದಾಗಿದೆ.
1949ರಲ್ಲಿ ICAC ಅಡಿಕೆಯನ್ನು ಸಮಗ್ರ ದೃಷ್ಟಿಯಿಂದ ನೋಡುವ ಪ್ರಯತ್ನ ಮಾಡಿತು. ನಂತರದ ದಶಕಗಳಲ್ಲಿ ಕಾರ್ಯಗಳ ವಿಶೇಷೀಕರಣದಿಂದ ಪ್ರತ್ಯೇಕ ಸಂಸ್ಥೆಗಳು ಬಲಿಷ್ಠವಾದವು. ಈಗ ಮುಂದಿನ ಹಂತವು ವಿಶೇಷೀಕರಣವನ್ನು ಹಿಂತಿರುಗಿಸುವುದಲ್ಲ; ವಿಶೇಷೀಕರಣದ ಶಕ್ತಿಯನ್ನು ಸಮನ್ವಯದ ಶಕ್ತಿಯಾಗಿ ಪರಿವರ್ತಿಸುವುದು.
ಅಡಿಕೆಯ ಭವಿಷ್ಯವನ್ನು ಕೇವಲ ಉತ್ಪಾದನೆಯ ಪ್ರಮಾಣ ನಿರ್ಧರಿಸುವುದಿಲ್ಲ. ದತ್ತಾಂಶದ ಗುಣಮಟ್ಟ, ಸಂಶೋಧನೆಯ ಪ್ರಸ್ತುತತೆ, ಮಾರುಕಟ್ಟೆಯ ಪಾರದರ್ಶಕತೆ, ದಾಸ್ತಾನು ನಿರ್ವಹಣೆ, ದೇಶೀಯ ಬೇಡಿಕೆಯ ವಿಸ್ತರಣೆ, ಮೌಲ್ಯವರ್ಧನೆ, ಪರ್ಯಾಯ ಬಳಕೆ ಮತ್ತು ಸಮಯೋಚಿತ ನೀತಿ—ಇವೆಲ್ಲವೂ ಅದರ ಮೇಲೆ ಪರಿಣಾಮ ಬೀರುತ್ತವೆ.
ಆದ್ದರಿಂದ National Arecanut Council ಮತ್ತೊಂದು ಪ್ರತ್ಯೇಕ ಸಂಸ್ಥೆಯಾಗಿ ಅಲ್ಲ, ಈಗಾಗಲೇ ಇರುವ ಸಂಸ್ಥೆಗಳ ಜ್ಞಾನ, ದತ್ತಾಂಶ ಮತ್ತು ಮಾರುಕಟ್ಟೆ ಅನುಭವವನ್ನು ಜೋಡಿಸುವ ರಾಷ್ಟ್ರೀಯ ಸೇತುವೆಯಾಗಿ ರೂಪುಗೊಳ್ಳಬೇಕು.
ಅಡಿಕೆಯ ಬಿಕ್ಕಟ್ಟು ಬಂದ ನಂತರ ಪರಿಹಾರ ಹುಡುಕುವ ವ್ಯವಸ್ಥೆಯಿಂದ, ಬಿಕ್ಕಟ್ಟಿನ ಸೂಚನೆಗಳನ್ನು ಮುಂಚಿತವಾಗಿ ಗುರುತಿಸಿ ಸಿದ್ಧಗೊಳ್ಳುವ ವ್ಯವಸ್ಥೆಯತ್ತ ಸಾಗಬೇಕಾದ ಸಮಯ ಇದು. ಅಡಿಕೆಯ ಭವಿಷ್ಯವನ್ನು ಕೇವಲ ಬೆಲೆ ನಿರ್ಧರಿಸುವುದಿಲ್ಲ; ಅದನ್ನು ಮುಂಚಿತವಾಗಿ ಅರ್ಥಮಾಡಿಕೊಳ್ಳುವ ನಮ್ಮ ಸಾಮರ್ಥ್ಯವೂ ನಿರ್ಧರಿಸುತ್ತದೆ.
India’s arecanut sector needs a stronger national coordination and intelligence mechanism that can connect production, plantation age, inventory, domestic consumption, imports, market arrivals, prices, cultivation costs, research and climate risks. Instead of creating another regulatory body, a proposed National Arecanut Council could function as a coordination platform linking CPCRI’s scientific expertise, DASD’s national-level data systems, CAMPCO’s market experience, state-level information, agricultural universities, farmers and trade data. A National Arecanut Data Grid and an annual India Arecanut Outlook could help identify future supply-demand risks, improve transparency and support evidence-based policy. The objective should not be price fixing, but better forecasting, risk reduction and timely decision-making.
ಅಡಿಕೆ ಮತ್ತು ತೆಂಗಿನ ತೋಟಗಳಲ್ಲಿ ಉಪಬೆಳೆಯಾಗಿ ಕೋಕೋಗೆ ಉತ್ತಮ ಅವಕಾಶಗಳಿದ್ದರೂ ಬೆಲೆ ಏರಿಳಿತ,…
ಕರ್ನಾಟಕದಿಂದ ನೈಋತ್ಯ ಮುಂಗಾರು ಸಂಪೂರ್ಣ ಹಿಂದೆ ಸರಿದಿದ್ದು, ಅ.11ರ ಸುಮಾರಿಗೆ ಹಿಂಗಾರು ಆರಂಭಕ್ಕೆ…
ಗದಗ ಜಿಲ್ಲೆಯಲ್ಲಿ ಎಫ್‌ಎಕ್ಯೂ ಗುಣಮಟ್ಟದ ಸೂರ್ಯಕಾಂತಿಯನ್ನು ಬೆಂಬಲ ಬೆಲೆಯಲ್ಲಿ ಖರೀದಿಸಲು ಜಿಲ್ಲಾಡಳಿತ ನಿರ್ಧರಿಸಿದೆ.…
ಯಾದಗಿರಿ ಜಿಲ್ಲೆಯಲ್ಲಿ ಬೆಂಬಲ ಬೆಲೆ ಯೋಜನೆಯಡಿ ಹೆಸರುಕಾಳು, ಸೋಯಾಬೀನ್ ಹಾಗೂ ಸೂರ್ಯಕಾಂತಿ ಖರೀದಿಗೆ…
ಕರಾವಳಿ ಮತ್ತು ಮಲೆನಾಡು ಭಾಗದ ಜನರು ಉದ್ಯೋಗಕ್ಕಾಗಿ ವಲಸೆ ಹೋಗುವುದನ್ನು ತಪ್ಪಿಸುವ ಉದ್ದೇಶದಿಂದ…
ಹಾಲಿನ ದರ ಹೆಚ್ಚಳ ಕುರಿತು ಸಚಿವ ಸಂಪುಟ ಸಭೆಯಲ್ಲಿ ಚರ್ಚೆ ನಡೆಸಿ ನಿರ್ಧಾರ…