Advertisement
MIRROR FOCUS

ಅಂದಿಗೂ, ಇಂದಿಗೂ ಮತ್ತು ಮುಂದೆಯೂ ಅಡಿಕೆಯ ಜೊತೆ ಕೋಕೋ ಒಂದು ಸೂಕ್ತ ಉಪಬೆಳೆ

Share

ಕಳೆದ ಆರು ದಶಕಗಳಿಂದ ಈಚೆಗೆ ಕರಾವಳಿಯ ಅಡಿಕೆ ಮತ್ತು ತೆಂಗಿನ ತೋಟಗಳಲ್ಲಿ ಒಂದು ಉಪ ಬೆಳೆಯಾಗಿ ಹೊರಹೊಮ್ಮಿದ ಕೋಕೋ ಕೃಷಿಗೆ ಆಗಿಂದಾಗ್ಗೆ ಪ್ರಚೋದನೆಗಳು ಬರುತ್ತಿವೆ.ಇದಕ್ಕೆ ಮುಖ್ಯ ಕಾರಣ ಅಡಿಕೆ ಬೆಳೆ ಹಾಗೂ ಬೆಲೆಯಲ್ಲಿನ ಏರು ಪೇರು, ಅಡಿಕೆ ಕೃಷಿಯಲ್ಲಿ ಕಂಡು ಬರುತ್ತಿರುವ ನಾನಾ ರೀತಿಯ ಸಮಸ್ಯೆಗಳು, ಇಷ್ಟು ಮಾತ್ರವಲ್ಲದೆ ಭವಿಷ್ಯದ ದೃಷ್ಟಿಯಿಂದ ಅಡಿಕೆ ಕೃಷಿಕರಿಗರಿಗೆ ಸೂಕ್ತ ಉಪಬೆಳೆಯಾಗಿ ಅಳವಡಿಸಲು ಸಾಧ್ಯವಿರುವುದರಿಂದ ಇದಕ್ಕಿಂದು ಹೆಚ್ಚಿನ ಮಹತ್ವ ಬರುತ್ತಿದೆ.

ಆದರೆ ಈ ಬೆಳೆಯ ಬೆಳವಣಿಗೆಯ ದೃಷ್ಟಿಯಿಂದ ನೋಡುವುದಾದರೆ ಇದರ ವಿಸ್ತೀರ್ಣ ಮತ್ತು ಉತ್ಪಾದನೆ ಕರ್ನಾಟಕ ರಾಜ್ಯದಲ್ಲಿ ನಿರೀಕ್ಷಿತ ಮಟ್ಟದಲ್ಲಿ ಆಗಿಲ್ಲ.ಇದಕ್ಕೆ ಮುಖ್ಯ ಕಾರಣ ಅಡಿಕೆಗೆ ದೊರಕುತ್ತಾ ಬಂದ ಆಕರ್ಷಣೀಯ ಬೆಲೆ ಹಾಗೂ ಕೋಕೋ ಬೆಲೆಯಲ್ಲಿ ಕಂಡು ಬರುತ್ತಿರುವ ಏರು ಪೇರು.

ಜಾಗತಿಕ ಮಟ್ಟದಲ್ಲಿ ಕೋಕೋ ಕೃಷಿಯನ್ನು ಸುಮಾರು 50 ಕ್ಕಿಂತಲೂ ಹೆಚ್ಚು ರಾಷ್ಟ್ರಗಳಲ್ಲಿ ಮಾಡಲಾಗುತ್ತಿದೆ.ಇದರಲ್ಲಿ ಪಶ್ಚಿಮ ಆಫ್ರಿಕಾದ ರಾಷ್ಟ್ರಗಳ ಪಾಲು ಶೇಕಡಾ 70 ಆಗಿದೆ. ಭಾರತದಲ್ಲಿ ಇದರ ಕೃಷಿಯನ್ನು ಆಂಧ್ರ ಪ್ರದೇಶ, ಕೇರಳ, ಕರ್ನಾಟಕ ಮತ್ತು ತಮಿಳುನಾಡು ರಾಜ್ಯಗಳಲ್ಲಿ ಹೆಚ್ಚಾಗಿ ಮಾಡಲಾಗುತ್ತಿದೆ.ಒಟ್ಟಾಗಿ ನಮ್ಮಲ್ಲಿ ಇದರ ವಿಸ್ತೀರ್ಣ ಸುಮಾರು 111.04 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಇದ್ದು, ಇದರ ಉತ್ಪಾದನೆ ಸುಮಾರು 30.39 ಸಾವಿರ ಟನ್ ಆಗಿದೆ.

1998 ರ ತನಕ ಕೋಕೋ ಉತ್ಪಾದನೆಯಲ್ಲಿ ಹೆಸರಿಲ್ಲದ ಆಂಧ್ರ ಪ್ರದೇಶ ಇಂದು ಮೊದಲನೇ ಸ್ಥಾನಕ್ಕೆ ಏರಿದೆ.ಆಂಧ್ರಕ್ಕಿಂತ ಮೊದಲೇ ಉತ್ಪಾದನೆಯಲ್ಲಿ ಮುಂಚೂಣಿಯಲ್ಲಿದ್ದ ಕರ್ನಾಟಕದಲ್ಲಿ ಇದರ ಬೆಳವಣಿಗೆ ನಿರೀಕ್ಷೆಗೆ ತಕ್ಕಂತೆ ಆಗಿಲ್ಲ.ಇದಕ್ಕೆ ದಕ್ಷಿಣ ಕನ್ನಡ ಜಿಲ್ಲೆ ಹೊರತಲ್ಲ.

ಕೋಕೋ ಗೆ ಇರುವ ಬೇಡಿಕೆ :  ಪ್ರತಿಯೊಬ್ಬರೂ ಸವಿಯಲು ಇಚ್ಛಿಸುವ ನಾನಾ ರೀತಿಯ ಚಾಕಲೇಟು, ಪಾನೀಯ, ಬೇಕರಿ ತಿನಿಸುಗಳು, ಐಸ್ ಕ್ರೀಂ ಇತ್ಯಾದಿಗಳಲ್ಲಿ ಬಳಕೆಯಾಗುವ ಇದಕ್ಕೆ ನಮ್ಮಲ್ಲಿ ವರ್ಷದಿಂದ ವರ್ಷಕ್ಕೆ ಬೇಡಿಕೆ ಹೆಚ್ಚುತ್ತಿದೆ. ಒಂದು ಅಂದಾಜಿನ ಪ್ರಕಾರ ನಮ್ಮ ದೇಶ ಸುಮಾರು ಒಂದು ಲಕ್ಷ ಟನ್ ಇದನ್ನು ಆಮದು ಮಾಡಿಕೊಳ್ಳುತ್ತಿದೆ.

ದೇಶದಲ್ಲಿ ಚಾಕಲೇಟ್ ಮತ್ತು ಸಿಹಿತಿಂಡಿಗಳ ಉದ್ದಿಮೆಗಳ ಬೆಳವಣಿಗೆಯ ಗತಿ ಹೆಚ್ಚಾಗಿದ್ದು, ಇದರೊಂದಿಗೆ ಮಕ್ಕಳು ಹಾಗೂ ಯುವಜನಾಂಗದವರ ಸಂಖ್ಯೆಯೂ ಹೆಚ್ಚಿದೆ.ಇಷ್ಟು ಮಾತ್ರವಲ್ಲದೆ ಗ್ರಾಹಕರ ಆದಾಯ ಮತ್ತು ಒಲವು ಇದಕ್ಕೆ ಪೂರಕ ವಾತಾವರಣ ಸೃಷ್ಟಿಸಿದ್ದು ಇವೆಲ್ಲಾ ಭವಿಷ್ಯದಲ್ಲಿ ಕೋಕೋ ಕೃಷಿಗೆ ಒಳ್ಳೆಯ ಅವಕಾಶ ಕಲ್ಪಿಸಬಹುದು.

ಸಮಸ್ಯೆಗಳು: ಕೋಕೋ ಕೃಷಿಗೆ ನಮ್ಮಲ್ಲಿ ಉತ್ತಮ ಅವಕಾಶಗಳು ಇದ್ದರೂ, ಇದರ ಕೃಷಿಕರಿಗೆ ಸಮಸ್ಯೆಗಳು ತಪ್ಪಿಲ್ಲ.ಈ ಸಮಸ್ಯೆಗಳು ಕರಾವಳಿ ಭಾಗದಲ್ಲಿ ಆರಂಭದಿಂದಲೂ ಕಂಡುಬರುತ್ತಿದೆ.ಇವುಗಳೆಂದರೆ,

  1. ಕಳೆದ ಕೆಲವು ವರ್ಷಗಳಿಂದ ಈಚೆಗೆ ಕೋಕೋ ಬೆಳೆಯ ವಿಸ್ತೀರ್ಣ ಕಡಿಮೆಯಾಗಲು ಮುಖ್ಯ ಕಾರಣ ಅಡಿಕೆ ತೋಟಗಳಲ್ಲಿ ಎಡೆ ಗಿಡಗಳ ಬೆಳವಣಿಗೆ ಕುಂಠಿತಗೊಳ್ಳುವುದು.
  2. ಕೋಕೋ ಧಾರಣೆ ಏರು ಪೇರು ಆಗುತ್ತಿರುವುದು.
  3. ಹವಾಮಾನದ ಏರು ಪೇರು, ರೋಗ ಹಾಗೂ ಕೀಟಗಳ ಭಾದೆ.
  4. ಕೋಕೋ ಗಿಡಗಳಲ್ಲಿ ಉತ್ತಮ ಇಳುವರಿ ಪಡೆಯಲು, ಗಿಡದ ಸವರುವಿಕೆ ಅತೀ ಮುಖ್ಯ.ಆದರೆ ಇಲ್ಲಿ ಸಮಯಕ್ಕೆ ಸರಿಯಾಗಿ ಕಾರ್ಮಿಕರು ದೊರಕದೇ ಇರುವುದು ಮತ್ತು ಅವರ ಅಭಾವ ಅಲ್ಲದೇ ಹೆಚ್ಚುತ್ತಿರುವ ವೇತನ ಇವೆಲ್ಲಾ ಸಮಸ್ಯೆಗಳಾಗಿವೆ.
  5. ರಸಗೊಬ್ಬರ, ರಾಸಾಯನಿಕ, ಕೀಟನಾಶಕ ಇತ್ಯಾದಿಗಳ ಬೆಲೆ ಏರಿಕೆ.
  6. ಕೋತಿಗಳು ಮತ್ತು ಇತರ ಕಾಡು ಪ್ರಾಣಿಗಳ ಹಾವಳಿಯಿಂದಾಗಿ ಆಗುತ್ತಿರುವ ಬೆಳೆ ನಾಶ.

ಇನ್ನು ಬೆಲೆ ದೃಷ್ಟಿಯಿಂದ ನೋಡುವುದಾದರೆ

  1. ಕೋಕೋ ಬೆಲೆ ನಿರ್ದಾರವಾಗುವುದು ಅಂತರಾಷ್ಟ್ರೀಯ ಕೋಕೋ ಸಮುದಾಯದಿಂದ.ನಮ್ಮಲ್ಲಿ ಆಂತರಿಕ ಉತ್ಪಾದನೆ ಕಡಿಮೆ ಇದ್ದರೂ , ಅಲ್ಲದೇ ಹೆಚ್ಚಿನ ಬೇಡಿಕೆ ಇದ್ದರೂ , ಬೆಲೆ ಮಾತ್ರ ನಿರ್ಧಾರ ಆಗುವುದು ಹೊರಗಿನಿಂದ. ಇದರೊಂದಿಗೆ ಭಾರತವು ಹೆಚ್ಚಿನ ಪ್ರಮಾಣದಲ್ಲಿ ವಿದೇಶದಿಂದ ಆಮದು ಮಾಡಿಕೊಳ್ಳುತ್ತಿರುವುದರಿಂದ ಅದೇ ಬೆಲೆ ಇಲ್ಲಿಯೂ ಕೂಡ ಇರುತ್ತದೆ.
  2. ಕಳೆದ ಹಲವು ವರ್ಷಗಳಿಂದ ಕುಂಟುತ್ತಾ, ತೆವಳುತ್ತಾ ಇದ್ದ ಧಾರಣೆ ಒಮ್ಮಿಂದೊಮ್ಮೆಲೆ ಕಿಲೋ ಒಂದರ ರೂಪಾಯಿ ಮುನ್ನೂರ ಐವತ್ತು ದಾಟಿ ಬಳಿಕ ಇಳಿಕೆಯ ಹಾಡಿ ಹಿಡಿದು, ಇದೀಗ ರೂಪಾಯಿ ನೂರರ ಆಸುಪಾಸಿನಲ್ಲಿ ಇರುವ ಕಾರಣ ಮುಂದೆ ಬೆಳೆ ಹೆಚ್ಚಾಗಿ ಬೆಲೆ ಕುಸಿಯಬಹುದೆಂಬ ಭೀತಿ ಬೆಳೆಗಾರರಲ್ಲಿ ಮೂಡಿರುವುದು.
  3. ಸಾಗಣೆ ಸಮಸ್ಯೆ. ಮುಖ್ಯವಾಗಿ ಸಣ್ಣ ಬೆಳೆಗಾರರಿಗೆ.

ಒಟ್ಟಾರೆಯಾಗಿ ದೇಶದ ಬೇಡಿಕೆಗನುಗುಣವಾಗಿ ಕೋಕೋ ದ ಪೂರೈಕೆ ಆಗುತ್ತಿಲ್ಲ.ಈ ನಿಟ್ಟಿನಲ್ಲಿ ಇಲ್ಲಿನ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಕಂಡುಕೊಂಡು ಕನಿಷ್ಠ ಅಲ್ಪ ಪ್ರಮಾಣದ ಲಾಭ ಒದಗಿಸಬಲ್ಲ ಬೆಲೆ ದೊರಕುವಂತಾದರೆ ಇದರ ಕೃಷಿಗೆ ಹೆಚ್ಚಿನ ಆಸಕ್ತಿ ಮೂಡಬಹುದು.

ಇನ್ನೊಂದು ಬದಿಯಲ್ಲಿ ಕೋಕೋ ಆಧಾರಿತ ಬಡವರು ಖರೀದಿಸಬಲ್ಲ ಚಾಕಲೇಟು, ತಂಪು ಪಾನೀಯ, ಸಿಹಿತಿಂಡಿಗಳ ತಯಾರಿ ಇತ್ಯಾದಿಗಳು ಬೆಳೆಗಾರರದ್ದಾದ ಸಂಸ್ಥೆಯಿಂದ ಉತ್ಪಾದನೆ ಆದಲ್ಲಿ ಇವಕ್ಕಿರುವ ಮಾರುಕಟ್ಟೆ ವಿಸ್ತರಣೆಯಾಗಿ ಕೋಕೋ ಗೆ ಬೇಡಿಕೆ ಹೆಚ್ಚಾಗಿ ಧಾರಣೆ ಏರಿ ಅಡಿಕೆ ಬೆಳೆಗಾರರಿಗೆ ಸೂಕ್ತ ಉಪಬೆಳೆ ಆಗಬಹುದು.

ಬರಹ :
ಡಾ.ವಿಘ್ನೇಶ್ವರ ಭಟ್‌ ವರ್ಮುಡಿ

Cocoa has emerged as an important intercrop in arecanut and coconut plantations along Karnataka’s coastal region over the past six decades. Its potential is increasing because of growing domestic demand from the chocolate, beverage, bakery and confectionery industries, as well as the need for alternative income sources for arecanut growers. However, cocoa cultivation in Karnataka has not expanded as expected due to attractive arecanut prices, cocoa price volatility, labour shortages, rising input costs, climate-related problems, pests, diseases and wildlife damage. Strengthening market support, ensuring viable returns and promoting farmer-led value addition could help cocoa become a more sustainable intercrop for arecanut growers.

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
ಡಾ|ವಿಘ್ನೇಶ್ವರ ಭಟ್‌ ವರ್ಮುಡಿ

ಡಾ|ವಿಘ್ನಶ್ವರ ಭಟ್ ವರ್ಮುಡಿ ಅವರು ಕೃಷಿಕರು. ಪುತ್ತೂರಿನ ವಿವೇಕಾನಂದ ಮಹಾವಿದ್ಯಾಲಯದ ಅರ್ಥಶಾಸ್ತ್ರ ವಿಭಾಗದ ಪ್ರಾಧ್ಯಾಪಕರಾಗಿದ್ದವರು. ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧೀನ ಸಂಸ್ಥೆಯದ ಪೆರ್ಲದ ನಲಂದಾ ಮಹಾವಿದ್ಯಾಲಯದ ಪ್ರಾಂಶುಪಾಲರಾಗಿ ಕರ್ತವ್ಯ ನಿರ್ವಹಿಸಿದ್ದಾರೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಕೃಷಿ ಅರ್ಥಶಾಸ್ತ್ರಜ್ಞರಾಗಿ ಗುರುತಿಸಿಕೊಂಡಿದ್ದಾರೆ. ಹಲವು ಸಂಶೋಧನಾ ಬರಹಗಳು ಪ್ರಕಟವಾಗಿದೆ. ಅಡಿಕೆ ಮಾರುಕಟ್ಟೆ ಬಗ್ಗೆ ಅಧಿಕೃತವಾಗಿ ಮಾತನಾಡುವ ವ್ಯಕ್ತಿಯಾಗಿದ್ದಾರೆ. ಹಲವು ಸಂಘಟನೆಗಳಲ್ಲಿ ಸಕ್ರಿಯವಾಗಿ ಕೆಲಸ ಮಾಡಿದ್ದಾರೆ. ಅಡಿಕೆಯ ಬಗ್ಗೆ ವಿವಿಧ ಬರಹಗಳನ್ನು ಪ್ರಕಟಿಸಿದ್ದಾರೆ.

Published by
ಡಾ|ವಿಘ್ನೇಶ್ವರ ಭಟ್‌ ವರ್ಮುಡಿ

Recent Posts

ಅಡಿಕೆ ಕ್ಷೇತ್ರಕ್ಕೆ ಬೇಕಿದೆ ಹೊಸ ರಾಷ್ಟ್ರೀಯ ಸಮನ್ವಯ ಮಾದರಿ

ಅಡಿಕೆ ಕ್ಷೇತ್ರದಲ್ಲಿ ಉತ್ಪಾದನೆ, ದಾಸ್ತಾನು, ಬೇಡಿಕೆ, ಆಮದು, ಮಾರುಕಟ್ಟೆ ಮತ್ತು ಉತ್ಪಾದನಾ ವೆಚ್ಚದ…

1 hour ago

ಹವಾಮಾನ ವರದಿ | 07-10-2026 | ಮುಂಗಾರು ಮುಗಿದಿದೆ… ಹಿಂಗಾರು ಮಳೆಯ ಸರದಿ ಆರಂಭವಾಗುತ್ತಿದೆಯೇ?

ಕರ್ನಾಟಕದಿಂದ ನೈಋತ್ಯ ಮುಂಗಾರು ಸಂಪೂರ್ಣ ಹಿಂದೆ ಸರಿದಿದ್ದು, ಅ.11ರ ಸುಮಾರಿಗೆ ಹಿಂಗಾರು ಆರಂಭಕ್ಕೆ…

12 hours ago

ಗದಗದಲ್ಲಿ ಎಫ್‌ಎಕ್ಯೂ ಗುಣಮಟ್ಟದ ಸೂರ್ಯಕಾಂತಿ ಖರೀದಿ ; ಕ್ವಿಂಟಾಲ್‌ಗೆ ₹8,343 ಬೆಂಬಲ ಬೆಲೆ

ಗದಗ ಜಿಲ್ಲೆಯಲ್ಲಿ ಎಫ್‌ಎಕ್ಯೂ ಗುಣಮಟ್ಟದ ಸೂರ್ಯಕಾಂತಿಯನ್ನು ಬೆಂಬಲ ಬೆಲೆಯಲ್ಲಿ ಖರೀದಿಸಲು ಜಿಲ್ಲಾಡಳಿತ ನಿರ್ಧರಿಸಿದೆ.…

18 hours ago

ಯಾದಗಿರಿಯಲ್ಲಿ ಹೆಸರುಕಾಳು, ಸೋಯಾಬೀನ್, ಸೂರ್ಯಕಾಂತಿ ಖರೀದಿ ಕೇಂದ್ರ ಆರಂಭ

ಯಾದಗಿರಿ ಜಿಲ್ಲೆಯಲ್ಲಿ ಬೆಂಬಲ ಬೆಲೆ ಯೋಜನೆಯಡಿ ಹೆಸರುಕಾಳು, ಸೋಯಾಬೀನ್ ಹಾಗೂ ಸೂರ್ಯಕಾಂತಿ ಖರೀದಿಗೆ…

18 hours ago

ಕರಾವಳಿ–ಮಲೆನಾಡಿಗೆ ಪ್ರತ್ಯೇಕ ಪ್ರವಾಸೋದ್ಯಮ ನೀತಿ ; ಉದ್ಯೋಗ ಸೃಷ್ಟಿಗೆ ಸರ್ಕಾರದ ಒತ್ತು

ಕರಾವಳಿ ಮತ್ತು ಮಲೆನಾಡು ಭಾಗದ ಜನರು ಉದ್ಯೋಗಕ್ಕಾಗಿ ವಲಸೆ ಹೋಗುವುದನ್ನು ತಪ್ಪಿಸುವ ಉದ್ದೇಶದಿಂದ…

18 hours ago

ಹಾಲಿನ ದರ ಏರಿಕೆ ಕುರಿತು ಸಂಪುಟ ಸಭೆಯಲ್ಲಿ ಚರ್ಚೆ; ಪರಿಷತ್ ಚುನಾವಣೆ ಬಳಿಕ ಅಂತಿಮ ಘೋಷಣೆ

ಹಾಲಿನ ದರ ಹೆಚ್ಚಳ ಕುರಿತು ಸಚಿವ ಸಂಪುಟ ಸಭೆಯಲ್ಲಿ ಚರ್ಚೆ ನಡೆಸಿ ನಿರ್ಧಾರ…

18 hours ago