ಗ್ರಾಮೀಣ ಭಾಗಗಳ ನೆಟ್ವರ್ಕ್ ಸಮಸ್ಯೆ ನಿವಾರಣೆಗೆ ಈಗಾಗಲೇ ಹಲವು ಸಭೆಗಳು ನಡೆದವು. ಅಚ್ಚರಿ ಎಂದರೆ ಸಭೆ ನಡೆದ ಮರುದಿನವೇ ನೆಟ್ವರ್ಕ್ ಗಳು ಅಯೋಮಯ….!. ಹಾಗಿದ್ದರೆ ಸಮಸ್ಯೆ ಇರುವುದು ಎಲ್ಲಿ ಎನ್ನುವುದು ಪತ್ತೆಯಾಗಬೇಕು. ಅದರ ಹೊರತಾಗಿ ಎಲ್ಲಾ ನಡೆಯುತ್ತದೆ ಎನ್ನುವುದೇ ಅಚ್ಚರಿ.
ಸುಳ್ಯ ತಾಲೂಕಿನ ಗುತ್ತಿಗಾರು ಗ್ರಾಮದ ಮೊಗ್ರ, ಬಳ್ಳಕ್ಕ ಪ್ರದೇಶದ ವಿದ್ಯಾರ್ಥಿನಿಯೊಬ್ಬಳು ಮಳೆಯ ನಡುವೆಯೇ ರಸ್ತೆ ಬದಿಗೆ ತಂದೆಯ ಜೊತೆಗೆ ಬಂದು ಕೊಡೆ ಹಿಡಿದು ಆನ್ ಲೈನ್ ಕ್ಲಾಸ್ ಕೇಳುತ್ತಾಳೆ. ಆಕೆ ಎಸ್ ಎಸ್ ಎಲ್ ಸಿ. ನೆಟ್ವರ್ಕ್ ಇಲ್ಲ, ಸಿಗ್ನಲ್ ಇಲ್ಲ ಎಂದು ಕೂತರೆ ಈಡೀ ಭವಿಷ್ಯವೇ ಹಾಳಾಗುತ್ತದೆ. ಮೊದಲೇ ಕೊರೋನಾ ಮಕ್ಕಳ ಭವಿಷ್ಯವನ್ನು ಹಾಳು ಮಾಡಿದೆ. ಈಗ ನೆಟ್ವರ್ಕ್ ಇಲ್ಲ, ಸಿಗ್ನಲ್ ಇಲ್ಲ ಎಂದು ಕೂತರೆ ಇಡೀ ಭವಿಷ್ಯದ ಚಿಂತೆ. ಹಾಗಾಗಿಯೇ ಆ ವಿದ್ಯಾರ್ಥಿನಿ ತಂದೆಯ ಜೊತೆಗೆ ರಸ್ತೆ ಬಂದು ಮಳೆಯ ನಡುವೆಯೇ ಪಾಠ ಕೇಳುತ್ತಾಳೆ, ಓದಲು ಬೇಕಾದ ಪಠ್ಯವನ್ನು ಡೌನ್ ಲೋಡ್ ಮಾಡುತ್ತಾಳೆ. ವಿಚಾರಿಸಿದರೆ ಹೇಳುತ್ತಾರೆ , ಸುಮಾರು 20 ಮಕ್ಕಳು ಹೀಗೇ ಪಾಠ ಕೇಳಲು ಗುಡ್ಡದ ತುದಿಗೆ ರಸ್ತೆಯ ಬದಿಗೆ ಬರುತ್ತಾರೆ…!. ಇದು ಗ್ರಾಮೀಣ ಭಾಗದ ಆನ್ ಲೈನ್ ಸ್ಟೋರಿ.
ಆ ಕಡೆ ನೋಡಿದರೆ ಸರಕಾರಗಳು ಜನಪ್ರತಿನಿಧಿಗಳು ಆಗಾಗ ಗ್ರಾಮೀಣ ಭಾಗದ ನೆಟ್ವರ್ಕ್ ಸಮಸ್ಯೆ ನಿವಾರಣೆಗೆ ಬೊಬ್ಬೆ ಹೊಡೆಯುತ್ತಾರೆ. ತಕ್ಷಣವೇ ಗ್ರಾಮೀಣ ಭಾಗಗಳ ನೆಟ್ವರ್ಕ್ ಸಮಸ್ಯೆ ನಿವಾರಣೆಯಾಗಬೇಕು ಎಂದು ಹೇಳುತ್ತಾರೆ. ಅದಾದ ಬಳಿಕ ಯಥಾ ಪ್ರಕಾರ ಪರಿಸ್ಥಿತಿ ಹಾಗೇ ಇರುತ್ತದೆ. ಜನರು ಮನವಿ ನೀಡಿದಾಕ್ಷಣ ಭರವಸೆ ನೀಡುತ್ತಾರೆ, ಅಲ್ಲಿಗೆ ಆ ಕತೆಯೂ ಮುಗಿಯಿತು..!. ನಿಜವಾಗಿಯೂ ಸಭೆಯ ಬದಲಾಗಿ ನಡೆಯಬೇಕಾದ್ದು ಮೂಲಭೂತ ಸಮಸ್ಯೆಗಳ ಪರಿಹಾರ. ಸರಕಾರಿ ಸ್ವಾಮ್ಯದ ಬಿ ಎಸ್ ಎನ್ ಎಲ್ ಟವರ್, ವಿನಿಮಯ ಕೇಂದ್ರಗಳಿಗೆ ಇಂದಿಗೂ ಸರಿಯಾಗಿ ಡೀಸೆಲ್ ಪೂರೈಕೆ ಆಗುತ್ತಿಲ್ಲ, ಬ್ಯಾಟರಿ, ಪವರ್ ಪ್ಲಾಂಟ್ ಸರಿ ಇಲ್ಲ. ವ್ಯವಸ್ಥಿತ ರೀತಿಯಲ್ಲಿ ವಿದ್ಯುತ್ ಸರಬರಾಜು ಕೂಡಾ ಇಲ್ಲ. ನೆಟ್ವರ್ಕಿಂಗ್ ವ್ಯವಸ್ಥೆ ಇನ್ನೂ ಸರಿ ಇಲ್ಲ. ಯಾವುದೇ ವಿನಿಮಯ ಕೇಂದ್ರ ಆಫ್ ಆದಾಗ ಇಡೀ ವ್ಯವಸ್ಥೆ ಹದಗೆಡುತ್ತದೆ, ಬಹುದೊಡ್ಡ ಕೇಬಲ್ ಜಾಲ ಹೊಂದಿರುವ ಬಿ ಎಸ್ ಎನ್ ಎಲ್ ನೆಟ್ವರ್ಕಿಂಗ್ ಸಮಸ್ಯೆ ಇನ್ನೂ ಇದೆ. ತಾಂತ್ರಿಕವಾಗಿ ಬಹಳ ಹಿಂದಿದೆ. ಖಾಸಗೀಕರಣದ ಭರಾಟೆಯಲ್ಲಿ ಈಗಲೂ ಮೂಲಭೂತ ವ್ಯವಸ್ಥೆಗಳ ಪೂರೈಕೆಯೇ ಆಗುತ್ತಿಲ್ಲ.
ಇನ್ನು ಖಾಸಗಿ ಸಂಸ್ಥೆಗಳು ನಷ್ಟದ ಹಾದಿಗೆ ಎಂದಿಗೂ ಹಿಡಿಯುವುದಿಲ್ಲ. ಅಲ್ಲಿ ಸೇವೆಯೇ ಮುಖ್ಯ ಉದ್ದೇಶವಲ್ಲ, ಲಾಭ ಇಲ್ಲದೇ ಇದ್ದರೆ ಯಾವುದೇ ಖಾಸಗೀ ಸಂಸ್ಥೆಗಳು ಲಕ್ಷ ಲಕ್ಷ ಸುರಿದ ನಷ್ಟ ಮಾಡಿಕೊಳ್ಳಲು ಸಿದ್ಧರಿಲ್ಲ. ಅದರ ಜೊತೆಗೆ ಅಂತಹ ಖಾಸಗೀ ವ್ಯವಸ್ಥೆಗಳಿಗೂ ಮೂಲಭೂತವಾದ ವ್ಯವಸ್ಥೆ ಒದಗಿಸಲು ಪಂಚಾಯತ್ ಮಟ್ಟದಿಂದಲೂ ಸಹಕಾರ ಇಲ್ಲ. ಹೀಗಾಗಿ ಗ್ರಾಮೀಣ ಭಾಗದ ಕಡೆಗೆ ಸೇವೆಗೆ ಖಾಸಗಿ ಸಂಸ್ಥೆಗಳೂ ಮುಂದೆ ಬರುತ್ತಿಲ್ಲ. ಅದಕ್ಕೆ ಅರಣ್ಯ, ಜನಸಂಖ್ಯೆ ಕೊರತೆ ಇತ್ಯಾದಿ ಕಾರಣಗಳನ್ನು ನೀಡುತ್ತವೆ.
ಈಚೆಗೆ ಮೊಬೈಲ್ ನೆಟ್ವರ್ಕ್ ಸುಧಾರಣೆಗಾಗಿ ಪ್ರಧಾನಿಗಳವರೆಗೆ ಪತ್ರ ಬರೆದು ಹಿಂಬರಹ ಬಂದಿರುವ ಹಾಗೂ ವಿವಿಧ ಮಾಧ್ಯಮಗಳಲ್ಲೂ ಪ್ರಕಟವಾಗಿರುವ ವರದಿಯ ಪರಿಣಾಮದಿಂದ ಹಿಂಬರಹ ಬಂದಿತೇ ವಿನಃ ಯಾವುದೇ ಪ್ರಯೋಜನವಾಗಿಲ್ಲ ಎಂದು ಹೇಳುವ ವಿನಾಯಕ್ ಅವರು ಜನಪ್ರತಿನಿಧಿಗಳು ಈ ಬಗ್ಗೆ ತಾಂತ್ರಿಕ ಸಲಹೆ ಪಡೆದು ಕೆಲಸ ಮಾಡಿದರೆ ಯಶಸ್ಸು ಸಾಧ್ಯವಿದೆ. ಬಿ ಎಸ್ ಎನ್ ಎಲ್ ಸಂಸ್ಥೆಯಿಂದಲೇ ಗ್ರಾಮೀಣ ಭಾಗದಲ್ಲೂ ಉತ್ತಮ ಸೇವೆ ಪಡೆಯಲು ಸಾದ್ಯವಿದೆ ಎನ್ನುತ್ತಾರೆ.
ಅನಗತ್ಯವಾಗಿ ಗ್ರಾಮೀಣ ಭಾಗಗಳ ನೆಟ್ವರ್ಕ್ ಸಮಸ್ಯೆ ಪರಿಹಾರ ಎಂದು ಜನರನ್ನು ಮತ್ತೆ ಮತ್ತೆ ನಂಬಿಸುವ ನಾಟಕ ಮಾಡುವ ಬದಲಾಗಿ ಸಮಸ್ಯೆ ಪರಿಹಾರಕ್ಕೆ ತಾಂತ್ರಿಕವಾದ ಸಲಹೆಯೊಂದಿಗೆ ಪರಿಹಾರ ಕಂಡುಕೊಳ್ಳುವುದು ಸೂಕ್ತವಾಗಿದೆ.
ಅಡಿಕೆ ನಮ್ಮ ಆರ್ಥಿಕ, ಸಾಂಸ್ಕೃತಿಕ, ಮತ್ತು ಸಾಮಾಜಿಕ ಜೀವತಂತ್ರದ ಒಂದು ಅವಿಭಾಜ್ಯ ಭಾಗವಾಗಿದೆ.…
WHO ನಿಲುವನ್ನುಮರುಪರಿಶೀಲಿಸುವಂತೆ ಮಾಡಲು ICMR, ICAR, AIUMS, CSIR, CFTRI ಮೈಸೂರು ಅಥವಾ…
ಸುಳ್ಯ ತಾಲೂಕಿನ ಗುತ್ತಿಗಾರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ಶತಮಾನೋತ್ಸವ ಕಾರ್ಯಕ್ರಮ…
ರಾಜ್ಯದಲ್ಲಿ ಅತಿ ಹೆಚ್ಚು ನಕಲಿ ವೈದ್ಯರು ಕೋಲಾರ ಜಿಲ್ಲೆಯಲ್ಲಿದ್ದಾರೆ. ಇಂತಹ ನಕಲಿ ವೈದ್ಯರ…
ನಬಾರ್ಡ್ ಸಾಲದ ಮಿತಿ ಹೆಚ್ಚಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ದೆಹಲಿಯಲ್ಲಿ ಕೇಂದ್ರ ಹಣಕಾಸು…