ಪೋಷಕರಿಗೊಂದು ಮಾಹಿತಿ : ಮಕ್ಕಳ  ಪಠ್ಯಗಳನ್ನು ಓದಿ

October 29, 2025
9:55 PM
ಈ ಲೇಖನವನ್ನು ಓದುವುದರಿಂದ ನಮಗೇನು ಪ್ರಯೋಜನವೆಂಬ ಪ್ರಶ್ನೆ ಮೂಡಿತೇ? ಖಂಡಿತ ಪ್ರಯೋಜನವಿದೆ. ಅದಕ್ಕಾಗಿ ನೀವು ನಿಮ್ಮ ಮಕ್ಕಳಲ್ಲಿ ಪುಸ್ತಕಗಳನ್ನು ಕೇಳುತ್ತೀರಾ? ಮಕ್ಕಳ ಪಾಲಿಗೆ ಅದೊಂದು ಸಂಚಲನವನ್ನುಂಟು ಮಾಡುವ ಪ್ರಶ್ನೆ. ಅವರಿಗೆ ತಮ್ಮ ಪುಸ್ತಕಗಳನ್ನು ಚೆನ್ನಾಗಿ ಇಟ್ಟುಕೊಂಡಿದ್ದನ್ನು ತೋರಿಸಿ ಹೆಮ್ಮೆ ಪಡುವ ಸಂದರ್ಭವಾಗಿರಬಹುದು. ಹಾಗೇನಾದರೂ ಇದ್ದರೆ ನಿಮಗೂ ಮಗುವಿನ ಸದ್ಗುಣಗಳನ್ನು ಪ್ರಶಂಸಿಸುವ ವಿಶೇಷ ಅವಕಾಶ ಆಗಬಹುದು. ಇನ್ನು ಕೆಲವು ಮಕ್ಕಳಿಗೆ ತಮ್ಮ ಪುಸ್ತಕಗಳನ್ನು ಚೆನ್ನಾಗಿ ಇಟ್ಟುಕೊಂಡಿಲ್ಲದ್ದನ್ನು ತೋರಿಸಲು ಮುಜುಗರವಾಗಬಹುದು. ಅದನ್ನು ಗಮನಿಸುವ ನಿಮಗೆ ನೀವೇ ಎಚ್ಚರ ಮರೆತ ಒಂದು ಕರ್ತವ್ಯದ ಬಗ್ಗೆ ಜಾಗೃತಿ ಮೂಡಬಹುದು. ಮಕ್ಕಳಿಗೆ ಬುದ್ಧಿ ಹೇಳುವ ಅವಕಾಶ ಸಿಕ್ಕಬಹುದು. ಆದರೆ ಅದಕ್ಕಿಂತ ಮುಖ್ಯವಾಗಿ ಆ ಪುಸ್ತಕಗಳನ್ನು ತೆರೆದು ನೋಡುತ್ತೀರೋ ಅಥವಾ ಹಾಗೇ ಬ್ಯಾಗ್‌ನೊಳಗೆ ತೂರಿಸಿ ಬಿಡುತ್ತೀರೋ ಎಂಬುದೂ ಮುಖ್ಯವಾಗುತ್ತದೆ.  ಪುಸ್ತಕಗಳನ್ನು ಕೊಡವಿ ಮಡಚಿದ ಕಿವಿಗಳನ್ನು ತೆರೆದು ಹಾಗೆಯೇ ಬೇಗ್‍ನೊಳಗೆ ತುಂಬಿಸಿಟ್ಟರೆ ನಾನು ಮುಂದೆ ಹೇಳಲಿರುವ ಯಾವುದೇ ಪ್ರಯೋಜನವು ನಿಮಗೆ ಸಿಗಲಾರದು. ಹಾಗಾಗಿ ಕೈಗೆ ಸಿಕ್ಕಿದ ಮಕ್ಕಳ ಪುಸ್ತಕಗಳನ್ನು ತೆರೆದು ಓದಿರಿ. ಆಗ ನಿಮಗೆ ಮರೆತು ಹೋದ ಹೊಸ ಲೋಕವೇ ತೆರೆದುಕೊಳ್ಳುತ್ತದೆ. ಹಿಂದೆ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳಲ್ಲಿ ವಿದ್ಯಾರ್ಥಿಗಳಾಗಿದ್ದಾಗ ನೀವು ಅವಸರವಾಗಿ ಪಯಣಿಸಿದ ಚಿತ್ರಗಳು ಮನಸ್ಸಿನಲ್ಲೇ ಅರಳುತ್ತವೆ. ಇಂತಹ ಒಂದು ಪ್ರಯೋಜನವನ್ನು ತಪ್ಪಿಸಿಕೊಳ್ಳಬೇಡಿ. ಅದಲ್ಲದೆಯೂ ಅನೇಕ ಉಪಯೋಗಗಳಿವೆ.
ಮೊದಲನೆಯದಾಗಿ, ಮಕ್ಕಳಿಗೆ ಶಾಲೆಯಲ್ಲಿ ಏನನ್ನು ಕಲಿಸುತ್ತಾರೆಂದು ನಿಮಗೆ ತಿಳಿಯುತ್ತದೆ. ಈ ಅರಿವು ಹೆತ್ತವರಿಗಿರುವುದು ಅಗತ್ಯ. ಮಗುವು ಯಾವುದಾದರೂ ವಿಷಯದಲ್ಲಿ ಅಜ್ಞಾನವನ್ನು ಪ್ರದರ್ಶಿಸಿದರೆ “ಅದು ನಿನ್ನ ಪಾಠದಲ್ಲಿ ಉಂಟಲ್ವಾ? ಯಾಕೆ ಗೊತ್ತಿಲ್ಲ?” ಎಂತ ಕೇಳುವ ಅವಕಾಶವಿದೆ. ಇನ್ನು, ಮಗುವು ತಿಳಿಯಬೇಕೆಂದು ನೀವು ಭಾವಿಸುವ ವಿಷಯ ಪಠ್ಯ ಪುಸ್ತಕದಲ್ಲಿಲ್ಲದಿದ್ದರೆ  ಅದರ ತಿಳಿವಿಗಾಗಿ ನೀವು ಬೇರೆಯೇ ಪುಸ್ತಕವನ್ನು ತೆಗೆದುಕೊಟ್ಟು ಓದಿಸಬಹುದು. ನಿಮ್ಮ ಈ ಬಗೆಯ ಒಳಗೊಳ್ಳುವಿಕೆಗೆ ಭಾರೀ ಮಹತ್ವವಿದೆ.
ಎರಡನೇಯದಾಗಿ, ಮಕ್ಕಳ ಪಠ್ಯಗಳನ್ನು ಓದಿದ ಅರಿವಿನ ಮೂಲಕ ನಿಮ್ಮ ಮತ್ತು ಮಕ್ಕಳ ನಡುವೆ ಸಂಭಾಷಣೆಗೆ ವಿಷಯಗಳು ಸಿಗುತ್ತವೆ. ನೀವು ಮಕ್ಕಳೊಡನೆ ಮಾತಾಡಲು ಆರಂಭಿಸುತ್ತೀರಿ.  ಅವರ ಪಾಠಗಳ ಮೇಲೆ ನಿಮ್ಮ ವಿಶ್ಲೇಷಣೆಯನ್ನು ನೀಡುತ್ತೀರಿ. ನಿಮಗೆ ಕಲಿಸಿದ್ದಕ್ಕಿಂತ ಹೆಚ್ಚು ವಿಷಯಗಳಿದ್ದರೆ ಅದರ ಬಗ್ಗೆ ತಿಳಿಯುತ್ತೀರಿ. ನಿಮ್ಮ ಕಾಲದ ಪಠ್ಯ ಪುಸ್ತಕವೇ ಚೆನ್ನಾಗಿತ್ತು ಎಂದಾದರೆ ಆ ಮಾಹಿತಿಯನ್ನು ಮಕ್ಕಳೊಡನೆ ಹಂಚಿಕೊಂಡು ಹೆಮ್ಮೆ ಪಡುತ್ತೀರಿ. ಅಂತೂ ತಲೆಮಾರುಗಳ ನಡುವೆ ಮಾತುಕತೆಗೆ ಬೀಜಾಂಕುರವಾಗುತ್ತದೆ.
ಮೂರನೇಯದಾಗಿ, ಐದನೇ ತರಗತಿಯ ತನಕ ಇರುವ ಪರಿಸರ ಅಧ್ಯಯನ ಪಠ್ಯವು ಮಕ್ಕಳಿಗೆ ಯಾವೆಲ್ಲ ಮಾಹಿತಿಗಳನ್ನು ನೀಡುತ್ತದೆ ಎಂಬುದನ್ನು ತಿಳಿಯುವುದು ಪೋಷಕರಿಗೆ ಅಗತ್ಯ. ಈ ತಿಳುವಳಿಕೆಯಿಂದ ತಾವು ಪ್ರತ್ಯೇಕವಾಗಿ ಕಲಿಸುವ ಸ್ಥಳೀಯ ವಿಷಯಗಳು ಬಾಕಿ ಉಳಿದಿದ್ದರೆ ಹೇಳಿ ಕೊಡಲು ಸಾಧ್ಯ. ಹಾಗೆಯೇ ನಿಮಗೆ ತಿಳಿಯದಿರುವ ಅನೇಕ ಮಾಹಿತಿಗಳು ಅವರಿಂದ ಸಿಗುತ್ತವೆ. ಪರಿಸರ ಅಧ್ಯಯನದಲ್ಲಿ ವಿಜ್ಞಾನ ಮತ್ತು ಸಮಾಜಗಳ ವಿಷಯಗಳು ಸಮ್ಮಿಳಿತವಾಗಿ ಸಿಗುತ್ತಿರುವುದನ್ನು ಪ್ರತ್ಯೇಕವಾಗಿ ಗಮನಿಸಬೇಕು. ಏಕೆಂದರೆ ವಿಜ್ಞಾನದ ಬೆಳವಣಿಗೆಯೊಂದಿಗೆ ಸಮಾಜದ ವಿಕಾಸವೂ ಆಗಿರುತ್ತದೆ.  ಮುಂದೆ ಆರನೇಯಿಂದ ವಿಜ್ಞಾನ ಪಠ್ಯಗಳಲ್ಲಿ ವಿಜ್ಞಾನ ಕ್ಷೇತ್ರದ ಬೆಳವಣಿಗೆಗಳು ಹಾಗೂ ಸಮಾಜ ಪಠ್ಯಗಳಲ್ಲಿ ಸಾಮಾಜಿಕ-ಆರ್ಥಿಕ-ರಾಜಕೀಯ ವಿಕಾಸ ಮತ್ತು ವಿದ್ಯಮಾನಗಳ ಮೇಲೆ ಬೆಳಕು ಚೆಲ್ಲಿದ್ದಾರೆ. ಇವುಗಳನ್ನು ನೀವು ಕೂಡಾ ಓಡುವುದರ ಮೂಲಕ ನಿಮ್ಮ ಮಕ್ಕಳೊಂದಿಗೆ ಚರ್ಚಿಸಿ ಆಧುನಿಕ ಜಗತ್ತಿನ ಆಗು ಹೋಗುಗಳನ್ನು ತಿಳಿಯಬಹುದು. ನಿಮ್ಮ ಮಕ್ಕಳಲ್ಲಿ ಸಂಶೋಧನಾಸಕ್ತಿ ಇದ್ದರೆ ಅದನ್ನು ನೀವು ಪ್ರೋತ್ಸಾಹಿಸಬೇಕು. ಅದಕ್ಕೆ ಅವರ ವಿಜ್ಞಾನ ಪುಸ್ತಕಗಳ ಓದುವಿಕೆ ಸಹಕಾರಿಯಾಗುತ್ತದೆ. ಇನ್ನು ಸಮಾಜ ಪುಸ್ತಕಗಳನ್ನು ಓದಿದರೆ ಸಮಾಜದ ಪರಿವರ್ತನೆಗಳ ಬಗ್ಗೆ ಹೆಚ್ಚಿನ ವಿಚಾರಗಳು ತಿಳಿಯುವುದಲ್ಲದೆ ಜೀವನ ಶಿಕ್ಷಣಕ್ಕಾಗಿ ನಿಮ್ಮ ಕುಟುಂಬದೊಂದಿಗೆ ಪ್ರವಾಸವನ್ನು ಯೋಚಿಸಬಹುದು. ಮಕ್ಕಳಿಗೆ ಇಂತಹ ಪ್ರವಾಸಗಳು ಹೆಚ್ಚು ಚೈತನ್ಯವನ್ನು ತುಂಬುವುದಲ್ಲದೆ ಜ್ಞಾನವನ್ನೂ ಬೆಳೆಸುತ್ತವೆ. ಮಕ್ಕಳು ಹೆಚ್ಚು ಮಾತಾಡುವವರಾಗಿ ತಿಳಿದುದನ್ನು ಸಮರ್ಥವಾಗಿ ವಿವರಿಸುವವರಾಗುತ್ತಾರೆ. ಬೆಳೆಯುತ್ತಿರುವ ಮಕ್ಕಳಿಗೆ ತಮ್ಮ ಮುಂದಿನ ಜೀವನದ ಗುರಿಗಳನ್ನು ನಿರ್ಧರಿಸುವುದಕ್ಕೂ ಇಂತಹ ಪ್ರವಾಸಗಳು ಉಪಯುಕ್ತವಾಗಬಹುದು. ಅದಲ್ಲದೆ ಇಂತಹ ಸಂದರ್ಭಗಳಲ್ಲಿ ತಮ್ಮ ಬಾಲ್ಯದ ಅನುಭವಗಳನ್ನು ಹೋಲಿಸಿ ಮಾಡುವ ಚರ್ಚೆಗಳು ಮಕ್ಕಳಲ್ಲಿ ಪಠ್ಯದ ಜ್ಞಾನವನ್ನು ಗಟ್ಟಿಗೊಳಿಸುತ್ತವೆ.
ನಿಮ್ಮ ಬಾಲ್ಯದಲ್ಲಿ ಕಂಡಿದ್ದ ನದಿಗಳಲ್ಲಿ ಮಕ್ಕಳ ಕಾಲಕ್ಕಾಗುವಾಗ ಸಾಕಷ್ಟು ನೀರು ಹರಿದಿದೆ. ನಿಮ್ಮ ಕಾಲದಲ್ಲಿ ಇದ್ದುದಕ್ಕಿಂತ ಈಗ ಕೃಷಿ ಭೂಮಿ ಸಾಕಷ್ಟು ವಿಸ್ತಾರವಾಗಿದೆ. ಹೊಸ ಹೊಸ ಕೃಷಿಗಳು ನೆಲೆಕಂಡಿವೆ. ರೋಗಗಳೂ ಬಂದಿವೆ. ಕೃಷಿ ಉಪಕರಣಗಳೂ ಹೊಸತು ಹೊಸತು ಬಂದಿವೆ. ನದಿಗಳಿಗೆ ಹೊಸ ಅಣೆಕಟ್ಟುಗಳು ಆಗಿವೆ. ಕೈಗಾರಿಕೆಗಳು ಸ್ಥಾಪನೆಯಾಗಿವೆ. ಅನೇಕ ಹೈಸ್ಕೂಲು, ಕಾಲೇಜುಗಳು, ವಿಶ್ವವಿದ್ಯಾಲಯಗಳು ತಲೆ ಎತ್ತಿವೆ. ವೈವಿಧ್ಯಮಯ ಕೋರ್ಸ್‍ಗಳು ಆರಂಭಗೊಂಡಿವೆ. ಹಳ್ಳಿಗಳ ಯುವಜನರು ಉದ್ಯೋಗಾರ್ಥಿಗಳಾಗಿ ನಗರಗಳಲ್ಲಿ ಮನೆ ಮಾಡಿದ್ದಾರೆ. ಈಗ ಹಳ್ಳಿಗಳಲ್ಲಿಯೂ ಕೃಷಿಯೇತರ ಆದಾಯಗಳ ಮೂಲಗಳು ಹೆಚ್ಚಾಗಿವೆ. ಈಗ ಅನೇಕ ವಸ್ತುಗಳು ಒಮ್ಮೆ ಉಪಯೋಗಿಸಿ ಎಸೆಯುವಂತಹದ್ದಾಗಿವೆ. ಅಮೇರಿಕಾದ  Throw away ಸಂಸ್ಕೃತಿ ಈಗ ನಮ್ಮಲ್ಲಿಯೂ ವ್ಯಾಪಿಸಿದೆ. ನಮ್ಮ ಗ್ರಾಮಗಳಲ್ಲಿಯೂ ಜೀವನ ಸಾಮ್ಯತೆ ತಪ್ಪಿ ಹೋಗಿದ್ದು ಜನಜೀವನದಲ್ಲಿ ಸಾಕಷ್ಟು  ಭಿನ್ನತೆ ಉಂಟಾಗಿದೆ. ಈ ಪರಿವರ್ತನೆಯ ಮಜಲುಗಳ ಪಕ್ಷಿನೋಟವು ಸಣ್ಣ ತರಗತಿಗಳ ಮಕ್ಕಳ ಪಠ್ಯಗಳಲ್ಲಿದೆ. ಅದನ್ನು ತಿಳಿದುಕೊಳ್ಳುವುದರಲ್ಲಿ ನಿಮಗೂ ನಿಮ್ಮ ಮಕ್ಕಳಿಗೂ ತುಂಬಾ ಪ್ರಯೋಜನವಿದೆ. ಮುಖ್ಯವಾಗಿ ಮಕ್ಕಳೊಂದಿಗೆ ಅರಿವಿನಲ್ಲಿ ನಿಮಗೆ level playing ಸಾಧ್ಯವಾಗುತ್ತದೆ.
ಇದನ್ನು ನಾನು ಊಹಾತ್ಮಕವಾಗಿ ಹೇಳುತ್ತಿಲ್ಲ. ಈ ಅಕ್ಟೋಬರ್ ತಿಂಗಳಲ್ಲಿ ಅಂತಾರಾಷ್ಟ್ರೀಯ ಪ್ರಾಣಿಗಳ ದಿನಾಚರಣೆ  (International Animal Day) ಯ ಅಂಗವಾಗಿ ಒಂದು ಅಂತರ್ ಶಾಲಾ ಮಟ್ಟದ ಕ್ವಿಜ್ ನಡೆಸುವ ಯೋಜನೆ ಬಂತು. ಅದಕ್ಕಾಗಿ ಎಲ್ಲೆಲ್ಲಿಂದಲೋ ಪ್ರಶ್ನೆಗಳನ್ನು ರೂಪಿಸುವ ಬದಲು ಮಕ್ಕಳು ಶಾಲೆಯಲ್ಲಿ ಕಲಿತ ಪಠ್ಯಗಳಿಂದಲೇ ಪ್ರಶ್ನೆಗಳನ್ನು ರೂಪಿಸಿದರೆ ಸ್ಪರ್ಧಿಸುವ ಮಕ್ಕಳಿಗೆ ಅನುಕೂಲವೆಂಬ ದೃಷ್ಠಿಯಿಂದ 5, 6 ಮತ್ತು 7ನೇ ತರಗತಿಗಳ ಪಠ್ಯ ಪುಸ್ತಕಗಳನ್ನು ಶಾಲೆಯಿಂದ ತರಿಸಿ ಓದಿದೆ. ಅನೇಕ ವರ್ಷಗಳಲ್ಲಿ ಸಂಭವಿಸಿದ ಘಟನಾವಳಿಗಳ ಹಾಗೂ ಅವುಗಳ ಪರಿಣಾಮಗಳ ಸ್ಥೂಲ ಚಿತ್ರಣವು ನನಗೆ ದೊರಕಿತು. ಈ ರೀತಿಯ ಪಠ್ಯಗಳು ಎಳೆಯ ವಿದ್ಯಾರ್ಥಿಗಳಿಗೆ ನೀಡುವ ಅನೇಕ ಮಾಹಿತಿಗಳು ನಿಜಕ್ಕೂ ಅವರ ಸಾಮಾನ್ಯ ಜ್ಞಾನವನ್ನು ವಿಸ್ತರಿಸುತ್ತವೆ. ನನ್ನ ಈ ಅನುಭವವನ್ನು ಪೋಷಕರಲ್ಲಿ ಹಂಚಿಕೊಳ್ಳುವುದರ ಮೂಲಕ ಮನೆಯಲ್ಲಿ ಮಕ್ಕಳ ಶಿಕ್ಷಣಕ್ಕೆ ಹೊಸ ಆಯಾಮ ನೀಡಬಹುದೆಂಬ ನಿರೀಕ್ಷೆಯಲ್ಲಿದ್ದೇನೆ.
Advertisement
Advertisement

Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ಡಾ.ಚಂದ್ರಶೇಖರ ದಾಮ್ಲೆ

ಡಾ. ಚಂದ್ರಶೇಖರ ದಾಮ್ಲೆಯವರು ಸುಳ್ಯದ ನೆಹರು ಮೆಮೋರಿಯಲ್ ಕಾಲೇಜ್ ನಲ್ಲಿ ಸಮಾಜಶಾಸ್ತ್ರ ಪ್ರಾಧ್ಯಾಪಕರಾಗಿ 35 ವರ್ಷಗಳಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದವರು. ವೃತ್ತಿಯಲ್ಲಿರುವಾಗಲೇ ರಾಷ್ಟ್ರೀಯ ಸೇವಾ ಯೋಜನಾಧಿಕಾರಿಯಾಗಿ ಸಮಾಜಸೇವೆಯಲ್ಲಿ ತೊಡಗಿಕೊಂಡವರು. ಸಾಂಸ್ಕೃತಿಕ ಸಂಘದ ಮೂಲಕ ಮಕ್ಕಳಿಗೆ ಯಕ್ಷಗಾನ ನಿರ್ದೇಶಕನ, ಸುಳ್ಯದಲ್ಲಿ ಯಕ್ಷಗಾನ ಹಿತರಕ್ಷಣಾ ವೇದಿಕೆಯ ಸ್ಥಾಪನೆ, ಸಂಪೂರ್ಣ ಸಾಕ್ಷರತಾ ಆಂದೋಲನದಲ್ಲಿ ಸಂಪನ್ಮೂಲ ವ್ಯಕ್ತಿ, ಕನ್ನಡಮಾಧ್ಯಮದಲ್ಲಿ ಸ್ನೇಹ ಶಿಕ್ಷಣ ಸಂಸ್ಥೆಯ ಸ್ಥಾಪನೆ ಮುಂತಾದ ಸಮಾಜಮುಖಿ ಕಾರ್ಯಗಳಲ್ಲಿ ಸೇವೆ ನೀಡಿದವರು. ಶಿಕ್ಷಣದಲ್ಲಿ ಸೃಜನಶೀಲತೆಗೆ ಒತ್ತು ನೀಡುವ ದಾಮ್ಲೆಯವರು ಸಂಶೋಧಕರಾಗಿದ್ದು ಕನ್ನಡ ಇಂಗ್ಲಿಷ್ ಭಾಷೆಗಳಲ್ಲಿ ಕೃತಿ ರಚನೆ ಮಾಡಿದವರು. 'ನೆಲದನಂಟು' ಮತ್ತು "ಶಾಲೆ ಎಲ್ಲಿದೆ?" ಇವು ಇವರ ಪ್ರಸಿದ್ಧ ಕಾದಂಬರಿಗಳು. ಅನೇಕ ಪ್ರಶಸ್ತಿ ಸಮ್ಮಾನಗಳಿಂದ ಗೌರವಿಸಲ್ಪಟ್ಟ ದಾಮ್ಲೆಯವರಿಗೆ ಅಸಾಮಾನ್ಯ ಕನ್ನಡಿಗ ಪ್ರಶಸ್ತಿ, ಯಕ್ಷಮಂಗಳ ಪ್ರಶಸ್ತಿ, ಅರಣ್ಯಮಿತ್ರ ಮತ್ತು ಜಲಮಿತ್ರ ಪ್ರಶಸ್ತಿ, Nation Builder ಪ್ರಶಸ್ತಿ ಮುಂತಾದುವು ಲಭಿಸಿವೆ. ಹೊಸದಿಗಂತ ಪತ್ರಿಕೆಯಲ್ಲಿ "ಇದ್ಯಾಕೆ ಹೀಗೆ " ಅಂಕಣವನ್ನು ಬರೆಯುತ್ತಿದ್ದರು.

ಇದನ್ನೂ ಓದಿ

ಹೊಸರುಚಿ | ಬದನೆಕಾಯಿ ಪಲ್ಯ
January 3, 2026
9:07 AM
by: ದಿವ್ಯ ಮಹೇಶ್
ಆತ್ಮವಿಶ್ವಾಸ ಮತ್ತು ಸಂವಹನ ಕೌಶಲ್ಯ ವ್ಯಕ್ತಿತ್ವದ ಬೆನ್ನೆಲುಬು
January 2, 2026
7:42 PM
by: ಕುಮಾರಸುಬ್ರಹ್ಮಣ್ಯ ಮುಳಿಯಾಲ
“ಅಡಿಕೆ ಹಾನಿಕಾರಕ” ಅಪವಾದದ ವಿರುದ್ಧ ಧ್ವನಿ ಎತ್ತಿದರೆ “ಅಡಿಕೆ’ ಉಳಿಯಬಹುದು…!
January 2, 2026
11:06 AM
by: ಪ್ರಬಂಧ ಅಂಬುತೀರ್ಥ
ಕನ್ನಡ ಅನ್ನದ ಭಾಷೆ ಅಲ್ಲ ಎಂಬ ಮಿಥ್ಯೆ
January 1, 2026
6:05 PM
by: ಡಾ.ಚಂದ್ರಶೇಖರ ದಾಮ್ಲೆ

You cannot copy content of this page - Copyright -The Rural Mirror