ಯಾವ ದಿನದಂದು ಅನೇಕರು ಅಲ್ಲಿಲ್ಲಿ ಒಂದೇ ಸುಳ್ಳನ್ನು ಹೇಳುತ್ತಾರೆ?

November 5, 2025
8:48 PM

ಇದೊಂದು ಸಾಮಾನ್ಯ ಜ್ಞಾನದ ಪ್ರಶ್ನೆಯಂತಿದೆ ಅಲ್ವಾ? ಕಳೆದ ಶುಕ್ರವಾರ (31-10-2025) ನಮ್ಮ ಸ್ನೇಹ ಶಿಕ್ಷಣ ಸಂಸ್ಥೆಯಲ್ಲಿ ನಡೆಸಿದ ಸುಳ್ಯ ತಾಲೂಕು ಮಟ್ಟದ ರಸಪ್ರಶ್ನೆಯ ಕಾರ್ಯಕ್ರಮದ ಗುಂಗು ಇನ್ನೂ ನನ್ನಲ್ಲಿದೆ. ಹಾಗಾಗಿ ಪ್ರಶ್ನೆಯೊಂದು ಹೀಗೆ ಮೂಡಿದೆ. ವಿದ್ಯಾರ್ಥಿಗಳು ಓದಿರುವ ಪಠ್ಯಗಳಿಂದಲೇ ಆಯ್ದ ಮಾಹಿತಿಗಳನ್ನು ಆಧರಿಸಿ ಪ್ರಶ್ನೆಗಳನ್ನು ರೂಪಿಸಿದ್ದೆ. ಭಾಗವಹಿಸಿದ್ದ ವಿದ್ಯಾರ್ಥಿಗಳಿಗೂ ಶಿಕ್ಷಕರಿಗೂ ಅದು ಇಷ್ಟವಾಗಿತ್ತು. ಕೆಲವು ವಿದ್ಯಾರ್ಥಿಗಳಿಗೆ ಸರಿಯುತ್ತರ ನೀಡಿ ಖುಷಿಯಾಗಿತ್ತು. ತಾವು ಸರಿಯಾಗಿ ಪಾಠವನ್ನು ಓದಿದ್ದರೆ ಉತ್ತರಿಸಬಹುದಾಗಿತ್ತು ಎಂದು ಎನ್ನಿಸಿತೆಂದು ಇನ್ನು ಕೆಲವರು ಹೇಳಿದರು. ಏನಿದ್ದರೂ ಸಾಮಾನ್ಯ ಜ್ಞಾನದ ಸಂಗ್ರಹ ಪಠ್ಯಗಳಿಂದಲೇ ಆರಂಭವಾದರೆ ಅದು ವಿದ್ಯಾರ್ಥಿಗಳ ಸ್ಮರಣೆಯಲ್ಲಿ ದೃಢವಾಗಿರುತ್ತದೆ. ಇದಕ್ಕೆ ಸಾಕ್ಷಿ ಎಂಬಂತೆ ನಾವು ಸಂಘಟಿಸಿದ ಸ್ಪರ್ಧೆಯು ಯಶಸ್ವಿಯಾಯಿತು.

ಅದಾದ ಮರುದಿನವೇ ನನ್ನಲ್ಲಿ ಹುಟ್ಟಿದ ಈ ಪ್ರಶ್ನೆಗೆ ಉತ್ತರವು ಟಿ.ವಿ. ಗಳಲ್ಲಿ ಪ್ರಸಾರವಾಗುವ ಭಾಷಣಗಳಲ್ಲಿ ಹಾಗೂ ಪತ್ರಿಕೆಗಳಲ್ಲಿ ಪ್ರಕಟವಾದ ವಾರ್ತೆಗಳಲ್ಲಿ ಸಿಕ್ಕಿತು. ಅದೆಂದರೆ ರಾಜಕಾರಣಿಗಳು ಹಾಗೂ ಸಾಹಿತಿಗಳು ನವೆಂಬರ್ 1 ರಂದು ಕನ್ನಡದ ಕುರಿತಾಗಿ ಮಾತುಗಳಲ್ಲಿ ವ್ಯಕ್ತಪಡಿಸುವ ಕಳಕಳಿಗೆ ಅವರ ಕೃತ್ಯಗಳಲ್ಲಿ ಸಾಕ್ಷಿ ಸಿಗುತ್ತಿಲ್ಲ. ಉದಾಹರಣೆಗೆ “ಶಿಕ್ಷಣದಲ್ಲಿ ಕನ್ನಡದ ನಿರ್ಲಕ್ಷ್ಯದಿಂದ ಹಲವು ಸಮಸ್ಯೆಗಳು ತಲೆದೋರಿವೆ” ಎಂಬುದಾಗಿ ಮುಖ್ಯಮಂತ್ರಿಗಳಾದ ಶ್ರೀ ಸಿದ್ಧರಾಮಯ್ಯರೇ ಹೇಳಿದ್ದಾರೆ. ಆದರೆ ಕಳೆದ ವಾರವೇ ಅವರು ಕರ್ನಾಟಕದಲ್ಲಿ 900 ಸರಕಾರಿ ಶಾಲೆಗಳನ್ನು ಆಂಗ್ಲ ಮಾಧ್ಯಮಕ್ಕೆ ಪರಿವರ್ತಿಸಲು ಆಜ್ಞೆ ನೀಡಿದ್ದಾರೆ. ಹಾಗಿದ್ದರೆ ನಿರ್ಲಕ್ಷ್ಯ ಯಾರದ್ದು? ಕಳೆದ ಒಂದು ದಶಕದಲ್ಲಿ ಕರ್ನಾಟಕದಲ್ಲಿ ಮೂರು ಪಕ್ಷಗಳ ಸರಕಾರಗಳೂ ಯಾವ ಕಾಳಜಿಯೂ ಇಲ್ಲದೆ ಆಂಗ್ಲ ಮಾಧ್ಯಮದಲ್ಲಿ ಶಾಲೆಯನ್ನು ನಡೆಸುವುದನ್ನೇ ಉದ್ದೇಶವಾಗಿಟ್ಟುಕೊಂಡು ಕರ್ನಾಟಕ ಪಬ್ಲಿಕ್ ಸ್ಕೂಲ್ (ಕೆ.ಪಿ.ಎಸ್.) ಗಳನ್ನು ಸ್ಥಾಪಿಸಿದರು. ಅದು “ಬಡವರ ಮಕ್ಕಳಿಗೂ ಇಂಗ್ಲಿಷ್ ಬೇಕು, ಅದು ಕೇವಲ ಉಳ್ಳವರ ಮಕ್ಕಳ ಸೊತ್ತಾಗಬಾರದು” ಎಂಬ ಘೋಷಣೆಗೆ ಸರಕಾರ ಸ್ಪಂದಿಸಿದಂತೆ ಕಂಡು ಬಂತು. ಜನಸಾಮಾನ್ಯರಿಗೆ ಬೇಕಿತ್ತೋ ಅಥವಾ ಸರಿಯಾದ ಶಿಕ್ಷಣ ಕನ್ನಡದಲ್ಲೇ ಸಿಕ್ಕಿದ್ದರೆ ಸಾಕಿತ್ತೋ ಎಂಬ ಅಧ್ಯಯನವನ್ನೇ ಮಾಡಿಲ್ಲ. ಬದಲಿಗೆ ಸರಕಾರಿ ಶಾಲೆಗಳಿಗೆ ಮಕ್ಕಳ ಸಂಖ್ಯೆ ಕಡಿಮೆಯಾಗಲು ಕನ್ನಡ ಮಾಧ್ಯಮದಲ್ಲಿ ಕಲಿಸುವುದೇ ಕಾರಣವೆಂಬ ಒಂದೇ ತರ್ಕದ ನೆಲೆಯಲ್ಲಿ ಈ ಪರಿವರ್ತನೆಯನ್ನು ಮಾಡಲಾಯಿತು. ಇದನ್ನೇ ತಿರುಗಿಸಿ ಹೇಳಿದರೆ ಖಾಸಗಿ ಶಾಲೆಗಳು ಇಂಗ್ಲಿಷ್ ಮಾಧ್ಯಮದಲ್ಲಿ ಕಲಿಸುವುದರಿಂದಲೇ ಅಲ್ಲಿಗೆ ಪೆÇೀಷಕರು ಆಕರ್ಷಿತರಾಗುತ್ತಾರೆಂಬ ಸರಳೀಕೃತ ತರ್ಕವನ್ನು ಶಿಕ್ಷಣ ಇಲಾಖೆಯು ಮಂಡಿಸಿತು. ಖಾಸಗಿ ಶಾಲೆಗಳ ಆವರಣ, ಕಟ್ಟಡಗಳು, ತರಗತಿಗಳಲ್ಲಿ ನೀಡುವ ಸೌಲಭ್ಯಗಳು, ತರಗತಿಗೊಬ್ಬ ಶಿಕ್ಷಕರು, ನಿತ್ಯದ ಮನೆಕೆಲಸ, ಅದನ್ನು ತಿದ್ದುವುದು, ಪಾಠೇತರ ಕೌಶಲಗಳ ಕಲಿಕೆ, ಪಠ್ಯಪೂರಕ ಕೌಶಲಗಳ ಅಭ್ಯಾಸ ಹೀಗೆ ವಿವಿಧ ಚಟುವಟಿಕೆಗಳು ಇಂಗ್ಲಿಷ್ ಕಲಿಕೆಯೊಂದಿಗೆ ಸೇರಿಕೊಂಡಿವೆ. ಇದ್ಯಾವುದನ್ನೂ ಒದಗಿಸದೆ ಕೆ.ಪಿ.ಎಸ್. ಶಾಲೆಗಳನ್ನಾಗಿ ಸರಕಾರಿ ಶಾಲೆಗಳನ್ನು ಪರಿವರ್ತಿಸಿದರೂ ಜನರು ಪ್ರಶ್ನಿಸದೆ ‘ಇಂಗ್ಲಿಷ್ ಮಾಧ್ಯಮ’ ಎಂಬ ಒಂದು ಆಯಸ್ಕಾಂತಕ್ಕೆ ಆಕರ್ಷಿತರಾದರು. ದೂರದಲ್ಲಿದ್ದವರು ಮಕ್ಕಳನ್ನು ರಿಕ್ಷಾಗಳಲ್ಲಿ ಕಳಿಸತೊಡಗಿದರು. ಹೀಗೆ ಕೆ.ಪಿ.ಎಸ್. ನಾಮಾಂಕಿತ ಶಾಲೆಗಳಿಗೆ ಹತ್ತಿರದ ಸರಕಾರಿ ಶಾಲೆಗಳ ಮಕ್ಕಳನ್ನು ತಂದು ಸೇರಿಸಿದರು. ಕೆಲವು ಮಕ್ಕಳು ಖಾಸಗಿ ಶಾಲೆಗಳನ್ನು ಬಿಟ್ಟು ಸರಕಾರಿ ಕೆ.ಪಿ.ಎಸ್. ಗೆ ಸೇರಿದರು. ಏನಿದ್ದರೂ ಮಕ್ಕಳ ಸಂಖ್ಯೆ ಹೆಚ್ಚಿಸಲು ಇಂಗ್ಲಿಷ್ ಮಾಧ್ಯಮವನ್ನು ಅಳವಡಿಸುವ ಗಿಮಿಕ್ ನಡೆಯುತ್ತದೆಂದು ರುಜುವಾತಾಯಿತು. ಖಾಸಗಿಯವರನ್ನು ಸೋಲಿಸಲೆಂದು ಮಾಡಿದ ಈ ಉಪಾಯವು ತಮ್ಮದೇ ಶಾಲೆಗಳನ್ನು ಧೃವೀಕರಣಗೊಳಿಸಿ ಪಕ್ಕಾ ಸರಕಾರಿ ಕನ್ನಡ ಶಾಲೆಗಳನ್ನು ಮತ್ತಷ್ಟು ಕುಸಿಯುವಂತೆ ಮಾಡಿತು. ಅಂತಹ ಶಾಲೆಗಳತ್ತ ಲಕ್ಷ್ಯ ಹರಿಸದ ಶಿಕ್ಷಣ ಇಲಾಖೆಯು ಕೆ.ಪಿ.ಎಸ್. ಗಳು ಯಶಸ್ವಿಯೆಂಬ ಡೋಲು ಬಾರಿಸಿತು. ಹಾಗಾಗಿ ಹಳ್ಳಿಗಳ ಶಾಲೆಗಳ ಅಭಿವೃದ್ಧಿ ಮಂಡಳಿಗಳಿಂದಲೂ ನಮಗೂ ಇಂಗ್ಲಿಷ್ ಮಾಧ್ಯಮಕ್ಕೆ ಅನುಮತಿ ಕೊಡಿ ಎಂಬ ಬೇಡಿಕೆಗಳು ಬಂದುವು. ಇದು ತಮ್ಮ ಶಿಕ್ಷಣ ಸುಧಾರಣೆಯ ಸುಲಭ ಮಾರ್ಗವೆಂದು ಆಡಳಿತದಲ್ಲಿದ್ದ ರಾಜಕಾರಣಿಗಳು ಮತ್ತು ಶಿಕ್ಷಣಾಧಿಕಾರಿಗಳು ಭಾವಿಸುವಂತಾಯಿತು. ಪರೋಕ್ಷವಾಗಿ ಇದನ್ನು ಜನಪ್ರಿಯತೆ ಗಳಿಸುವ ಉಪಾಯವಾಗಿಯೂ ರಾಜಕಾರಣಿಗಳು ತಿಳಿದರು. ಹೀಗಾಗಿ ಜೆ.ಡಿ.ಎಸ್. ಆಡಳಿತದಲ್ಲಿ ಆರಂಭವಾದ ಈ ಕೃತ್ರಿಮವನ್ನು ಬಿ.ಜೆ.ಪಿ ಸರಕಾರವು ಮುಂದುವರಿಸಿತು; ಈಗ ಕಾಂಗ್ರೆಸ್ ಕೂಡಾ ಅದನ್ನೇ ಮಾಡುತ್ತಿದೆ. ಅಂದರೆ ಕನ್ನಡವನ್ನು ಮರೆಸುವ ಪ್ರಕ್ರಿಯೆಯನ್ನು ಶಿಕ್ಷಣದ ಮೂಲಕವೇ ಮಾಡತೊಡಗಿವೆ. ಹಾಗಿದ್ದರೂ ನವೆಂಬರ್ 1 ರಂದು ಮತ್ತು ಆ ತಿಂಗಳಿನಲ್ಲಿ ಕನ್ನಡದ ಸಂರಕ್ಷಣೆಯ ಡೊಂಗೀ ಪ್ರಲಾಪಗಳನ್ನು ಮಾಡುವಾಗ ಅವರಿಗೆ ಆತ್ಮವಂಚನೆಯ ನೋವು ಬಾಧಿಸುತ್ತಿಲ್ಲ ಎಂಬುದು ಕನ್ನಡ ಭಾಷೆಯ ದುರಂತ.

ಇತ್ತೀಚೆಗೆ ಒಂದು ಸಭೆಯಲ್ಲಿ ಸಚಿವರೊಬ್ಬರು ಕ್ಷೇತ್ರ ಶಿಕ್ಷಣಾಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡು ಹೇಳಿದ ಮಾತುಗಳು ಹೀಗಿವೆ. “ಖಾಸಗಿ ಶಾಲಾ ಶಿಕ್ಷಕರಿಗೆ ಹತ್ತು ಹದಿನೈದು ಸಾವಿರ ಮಾತ್ರ ಸಂಬಳ ಇರುತ್ತೆ. ಅವುಗಳಲ್ಲಿ ಮಕ್ಕಳ ಸಂಖ್ಯೆ ಹೆಚ್ಚಾಗುತ್ತೆ. ನಿಮಗೆ 50, 70 ಸಾವಿರ ಸಂಬಳ ಬರುತ್ತೆ. ಮಕ್ಕಳಿಗೆ ಊಟ, ಹಾಲು, ಮೊಟ್ಟೆ, ಬ್ಯಾಗು, ಬಟ್ಟೆ, ಬುಕ್ ಕೊಟ್ರೂ ಶಾಲೆಗೆ ಮಕ್ಕಳು ಬರಲ್ಲ ಅಂದ್ರೆ ಹೇಗೆ? ಶಿಕ್ಷಣಾಧಿಕಾರಿಗಳು ಏನ್ ಮಾಡ್ತಾ ಇದ್ದೀರಾ?” ಈ ಪ್ರಶ್ನೆಗೆ ಉತ್ತರಿಸದೆ ಶಿಕ್ಷಣಾಧಿಕಾರಿಗಳು ಮೌನವಾಗಿ ಕುಳಿತಿದ್ದರು. ಅದರ ಬದಲು “ಸಾರ್… ಎಲ್ಲಾ ಕೊಟ್ರೂ ಶಿಕ್ಷಕರನ್ನೇ ಕೊಡದಿದ್ರೆ ಶಾಲೆಗೆ ಆಕರ್ಷಣೆ ಇರೋದಿಲ್ಲಾ” ಎಂತ ಹೇಳಿ ಬಿಡಬೇಕಿತ್ತು. “ಇಂಗ್ಲಿಷ್ ಸರಿಯಾಗಿ ಕಲಿಸುವವರಿಲ್ಲದೆ ಇಂಗ್ಲಿಷ್ ಮಾಧ್ಯಮ ಮಾಡಬಾರದಿತ್ತು” ಎಂತ ಹೇಳಬೇಕಿತ್ತು. ಆದ್ರೆ ಅಲ್ಲಿದ್ದ ಯಾವ ಅಧಿಕಾರಿಯೂ ತಾವಾಗಿ ಯಾವುದೇ ಉತ್ತರವನ್ನು ನೀಡಿಲ್ಲ. ಅಪಘಾತದಲ್ಲಿ ಗಾಯಗೊಂಡು ನರಳುವಾತನನ್ನು ನೋಡಿ ಏನೂ ಸಹಕರಿಸದೆ ತಮ್ಮಷ್ಟಕ್ಕೆ ಅಲ್ಲಿಂದ ಜಾರಿ ಬಿಡುವವರಂತೆ ಆ ಸಭೆಯಲ್ಲಿ ಆಯುಕ್ತರು, ಡಿ.ಡಿ.ಪಿ.ಐ ಯವರು ಇದ್ದರೂ ಸಮಸ್ಯೆಯನ್ನು ಬಿಡಿಸಿ ಹೇಳ್ಳಿಲ್ಲ. ಆ ಮಂತ್ರಿಗಳು ತಾವು ಸಾಭ್ಯಸ್ಥರಂತೆ ಮತ್ತೊಂದಿಷ್ಟು ಭಾಷಣ ಮಾಡಿದರು. ವಾಸ್ತವದಲ್ಲಿ ಕೆ.ಪಿ.ಎಸ್. ಗಳಲ್ಲಿ ‘ಉಭಯ ಭಾಷೆಗಳಲ್ಲಿ’ ಅಂದರೆ ಕನ್ನಡ ಮತ್ತು ಇಂಗ್ಲಿಷ್ ನಲ್ಲಿ ಪಠ್ಯಗಳನ್ನು ಕೊಟ್ಟು ಅದನ್ನು ಇಂಗ್ಲಿಷ್ ಮೀಡಿಯಂ ಎಂತ ಕರೆದು ಮಂತ್ರಿಗಳೇ ಮೋಸ ಮಾಡುತ್ತಿರುವಾಗ ಶಿಕ್ಷಣವನ್ನು ಹಳಿಗೆ ತರುವುದು ಯಾರ ಹೊಣೆ?

ಮೊನ್ನೆ ನಮ್ಮಲ್ಲಿ ನಡೆದ ಸ್ಪರ್ಧೆಯಲ್ಲಿ ಭಾಗವಹಿಸಿದ ಇಂಗ್ಲಿಷ್ ಮೀಡಿಯಂ ಶಾಲೆಗಳ ಮಕ್ಕಳಿಗೆ ಸರಳ ಕನ್ನಡದ ವಾಕ್ಯಗಳನ್ನು ಅರ್ಥಮಾಡಿಕೊಳ್ಳಲಾಗಲಿಲ್ಲ, ಅವರಿಗೆ ಅದನ್ನು ಇಂಗ್ಲಿಷ್ ಗೆ ತರ್ಜುಮೆ ಮಾಡಿ ಹೇಳಲಾಯಿತು. ಇಂಗ್ಲಿಷನ್ನು ಕಲಿತರೆ ಮಕ್ಕಳಿಗೆ ಕನ್ನಡ ಬರುವುದೇ ಇಲ್ಲವೆಂಬ ದೌರ್ಬಲ್ಯ ದಂಗುಬಡಿಸುತ್ತದೆ. ಅವರು ಅಷ್ಟೊಂದು ಕನ್ನಡವನ್ನು ಅವಗಣಿಸುವವರಾದರೆ ಅವರಿಗೆ ಕನ್ನಡಿಗರೆಂಬ ಖಿಚಿg ಯಾಕೆ? ಮಾತೃಭಾಷೆಯಲ್ಲಿಯೇ ಶಿಕ್ಷಣ ಎಂದು ರಾಜ್ಯೋತ್ಸವ ಭಾಷಣದಲ್ಲಿ ಹೇಳಿದ ಮುಖ್ಯಮಂತ್ರಿಗಳು ತನ್ನ ಅಧಿಕಾರಾವಧಿಯಲ್ಲಿ ಕನ್ನಡ ಶಾಲೆಗಳ ಸಬಲೀಕರಣಕ್ಕೆ ಪರಿಪೂರ್ಣ ಹೆಜ್ಜೆಯನ್ನೇ ಇಟ್ಟಿಲ್ಲ. ಆದರೆ ರಾಜ್ಯೋತ್ಸವದ ದಿನ ಎಲ್ಲ ಕ್ಷೇತ್ರಗಳ ಭಾಷಣಕಾರರು ತೋರುವ ಕನ್ನಡ ಕಳಕಳಿಗೆ ಆತ್ಮವಂಚನೆಯ ಲೇಪ ಇರುವುದರಿಂದ ಕನ್ನಡದ ಬೆಳವಣಿಗೆಗೆ ಹಿನ್ನಡೆಯಾಗಿದೆ. ನಿಜಕ್ಕೂ ಕನ್ನಡದ ಬೆಳವಣಿಗೆಗೆ ಶಿಕ್ಷಣ ಮಾಧ್ಯಮವೇ ಪಂಚಾಂಗವಾಗಬೇಕು.

ಈಗ ಮತ್ತೆ ಸುಳ್ಳಿನ ವಿಚಾರಕ್ಕೆ ಬರುವುದಾದರೆ ನವೆಂಬರ್ ತಿಂಗಳ ಒಂದನೇ ತಾರೀಕು. ಅತ್ಯಧಿಕ ಜನರು ಸುಳ್ಳು ಹೇಳುವ ದಿನ. ಆ ದಿನ ಕನ್ನಡ ರಾಜ್ಯೋತ್ಸವದ ಆರಂಭ. ಅನೇಕ ಕಡೆಗಳಲ್ಲಿ ಸಭೆ ಸಮಾರಂಭಗಳು ಏರ್ಪಾಡಾಗಿರುತ್ತವೆ. ಮಂತ್ರಿಗಳು, ಶಾಸಕರು, ಸ್ಥಳೀಯ ಜನಪ್ರತಿನಿಧಿಗಳು, ಅಧಿಕಾರಿಗಳು, ಸಾಹಿತಿಗಳು, ಶಿಕ್ಷಣಾಧಿಕಾರಿಗಳು, ಶಾಲಾ ಶಿಕ್ಷಕರು, ಹೀಗೆ ಎಲ್ಲರೂ ಆ ದಿನ ತಮ್ಮ ಮಾತುಗಳಲ್ಲಿ “ಸಂಸ್ಕೃತಿಯ ಉಳಿವಿಗಾಗಿ ಶಿಕ್ಷಣವು ಪ್ರಾಥಮಿಕ ಹಂತದಲ್ಲಿ ಕನ್ನಡ ಮಾಧ್ಯಮದಲ್ಲೇ ಇರಬೇಕು” ಎನ್ನುತ್ತಾರೆ. ಆದರೆ ವಾಸ್ತವದಲ್ಲಿ ಅವರು ತಮ್ಮ ಮಕ್ಕಳನ್ನೇ ಆಂಗ್ಲಮಾಧ್ಯಮದ ಶಾಲೆಗಳಿಗೆ ಕಳಿಸುತ್ತಿರುತ್ತಾರೆ. ಕೇಳುವ ಜನರಿಗೂ ಅವರು ಹೇಳುತ್ತಿರುವ ಸುಳ್ಳಿನ ಬಗ್ಗೆ ತಿಳಿದಿರುತ್ತದೆ. ಆದರೆ ಅವರು ಅಲ್ಲಿ ಮಾತಾಡುವವರಲ್ಲಿ “ಸತ್ಯವನ್ನೇ ಹೇಳಿ” ಎನ್ನುವುದಿಲ್ಲ. ಏಕೆಂದರೆ ಅವರೂ ತಮ್ಮ ಮಕ್ಕಳನ್ನು ಇಂಗ್ಲಿಷ್ ಮಾಧ್ಯಮಕ್ಕೇ ಕಳಿಸುತ್ತಾರೆ. ಹೀಗೆ ವೇದಿಕೆಯ ಮೇಲಿರುವವರೂ, ವೇದಿಕೆಯ ಮುಂದೆ ಇರುವವರೂ ಕನ್ನಡದ ಮಂತ್ರವನ್ನು ಜಪಿಸುತ್ತಾರೆಯೇ ಹೊರತು ಆ ಜಪದ ತಳದಲ್ಲಿ ಪ್ರಾಮಾಣಿಕ ಆಶಯದ ಸೆಲೆ ಇರುವುದಿಲ್ಲ.

Advertisement

ಒಬ್ಬ ಪಾಂಚಾಯತು ಮೆಂಬರನಿಗೆ ತನ್ನ ಮಕ್ಕಳಿಗೆ ಗ್ರಾಮದ ಪರಿಚಯ ಆಗಬೇಕೆಂಬ ನಿರೀಕ್ಷೆ ಇರುವುದಿಲ್ಲ. ಪಂಚಾಯತು ಅಧ್ಯಕ್ಷನಿಗೆ ತನ್ನ ಮಕ್ಕಳು ಊರವರ ಮಕ್ಕಳೊಂದಿಗೆ ಕಲಿಯಲಿ ಎಂಬ ಚಿಂತನೆ ಇರುವುದಿಲ್ಲ. ದೇಶ, ಭಾಷೆ, ಸಂಸ್ಕೃತಿಯ ಬಗ್ಗೆ ಮಾತಾಡುವ ಶಾಸಕರೂ ಮಕ್ಕಳನ್ನು ಕಳಿಸುವುದು ಸರಕಾರಿ ಶಾಲೆಗೆ ಅಲ್ಲ. ಒಬ್ಬ ಕನ್ನಡ ಮಾಧ್ಯಮದ ಸರಕಾರಿ ಶಾಲಾ ಶಿಕ್ಷಕನಿಗೆ ತನ್ನ ಮಗು ತನ್ನ ಶಾಲೆಯಲ್ಲೇ ಕಲಿಯಲಿ ಎಂಬ ಅಪೇಕ್ಷೆ ಇರುವುದಿಲ್ಲ. ಆತ ತನಗಿಂತ ಕಡಿಮೆ ಪ್ರತಿಭೆಯುಳ್ಳ ಶಿಕ್ಷಕರಿರುವ ಖಾಸಗಿ ಇಂಗ್ಲಿಷ್ ಮೀಡಿಯಂ ಶಾಲೆಗೆ ಮಗುವನ್ನು ತಲುಪಿಸಿ “ನೀನು ಭಾಗ್ಯಶಾಲಿ ಮಗನೇ” ಎಂದು ಮನದಲ್ಲೇ ಹಾರೈಸುತ್ತಾನೆ. ಏಕೆಂದರೆ ಸರಕಾರದಿಂದ ಉತ್ತಮ ವೇತನ ಪಡೆಯುವ ಆತನಿಂದ ಖಾಸಗಿ ಶಾಲೆಯ ಶುಲ್ಕ ಭರ್ತಿ ಮಾಡಲು ಸಾಧ್ಯವಾಗುತ್ತದೆ. ಒಬ್ಬ ಬೇಂಕ್ ನೌಕರ ತಾನು ಕನ್ನಡ ಮಾಧ್ಯಮದಲ್ಲಿ ಕಲಿತೇ ಹುದ್ದೆಗೆ ಅರ್ಹತೆ ಪಡೆದಿದ್ದರೂ ಆತನ ಮಗನಿಗೆ ಅದು ಬೇಡ. ಒಬ್ಬ ಕಂಟ್ರಾಕ್ಟರ್ರೂ, ಮೇಸ್ತ್ರಿಯೂ, ಕೂಲಿ ಕೆಲಸದವನೂ ಸರಕಾರಿ ಕನ್ನಡ ಶಾಲೆಯ ಬಗ್ಗೆ ತಿರಸ್ಕಾರ ಹೊಂದಿರುತ್ತಾರೆ. ವಿಚಿತ್ರವೆಂದರೆ ಅದೇ ಸರಕಾರಿ ಶಾಲೆಗಳನ್ನು “ಇನ್ನು ಮುಂದೆ ಇದು ಕೆ.ಪಿ.ಎಸ್. ಇಂಗ್ಲಿಷ್ ಮೀಡಿಯಂ” ಎಂದಾಗ ಉಚಿತದ ಆಮಿಶಕ್ಕೆ ಒಳಗಾಗಿ ಅಲ್ಲಿಗೆ ಸೇರಿಸುತ್ತಾರೆ. ಕನ್ನಡ ಭಾಷೆಯ ಬಗ್ಗೆ ಕೀಳರಿಮೆಯೋ, ಇಂಗ್ಲೀಷಿನ ವ್ಯಾಮೋಹವೋ! ಎರಡೂ ಸೇರಿ ನಮ್ಮ ಸಂಸ್ಕೃತಿಯನ್ನು ತಿಪ್ಪೆಗೆ ಸಾರಿಸಿದರೂ ಕೊನೆಗೆ ನವೆಂಬರ್ ತಿಂಗಳ ಮೊದಲ ದಿನ ಅತಿ ಹೆಚ್ಚು ಜನರು ಹೇಳುವ ಸುಳ್ಳು ಯಾವುದೆಂದರೆ “ಬಾರಿಸು ಕನ್ನಡ ಡಿಂಡಿಮವ!!!”. ನವೆಂಬರ್ ತಿಂಗಳಿಡೀ ಕನ್ನಡ ರಾಜ್ಯೋತ್ಸವ ಆಚರಿಸಬಹುದೆಂಬ ವಿನಾಯಿತಿ ಇರುವುದರಿಂದ ತಿಂಗಳಿಡೀ ಸುಳ್ಳು ಹೇಳಿಕೆಗಳಿಗೆ ಬರಗಾಲವಿಲ್ಲ.

Advertisement
Advertisement

Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ಡಾ.ಚಂದ್ರಶೇಖರ ದಾಮ್ಲೆ

ಡಾ. ಚಂದ್ರಶೇಖರ ದಾಮ್ಲೆಯವರು ಸುಳ್ಯದ ನೆಹರು ಮೆಮೋರಿಯಲ್ ಕಾಲೇಜ್ ನಲ್ಲಿ ಸಮಾಜಶಾಸ್ತ್ರ ಪ್ರಾಧ್ಯಾಪಕರಾಗಿ 35 ವರ್ಷಗಳಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದವರು. ವೃತ್ತಿಯಲ್ಲಿರುವಾಗಲೇ ರಾಷ್ಟ್ರೀಯ ಸೇವಾ ಯೋಜನಾಧಿಕಾರಿಯಾಗಿ ಸಮಾಜಸೇವೆಯಲ್ಲಿ ತೊಡಗಿಕೊಂಡವರು. ಸಾಂಸ್ಕೃತಿಕ ಸಂಘದ ಮೂಲಕ ಮಕ್ಕಳಿಗೆ ಯಕ್ಷಗಾನ ನಿರ್ದೇಶಕನ, ಸುಳ್ಯದಲ್ಲಿ ಯಕ್ಷಗಾನ ಹಿತರಕ್ಷಣಾ ವೇದಿಕೆಯ ಸ್ಥಾಪನೆ, ಸಂಪೂರ್ಣ ಸಾಕ್ಷರತಾ ಆಂದೋಲನದಲ್ಲಿ ಸಂಪನ್ಮೂಲ ವ್ಯಕ್ತಿ, ಕನ್ನಡಮಾಧ್ಯಮದಲ್ಲಿ ಸ್ನೇಹ ಶಿಕ್ಷಣ ಸಂಸ್ಥೆಯ ಸ್ಥಾಪನೆ ಮುಂತಾದ ಸಮಾಜಮುಖಿ ಕಾರ್ಯಗಳಲ್ಲಿ ಸೇವೆ ನೀಡಿದವರು. ಶಿಕ್ಷಣದಲ್ಲಿ ಸೃಜನಶೀಲತೆಗೆ ಒತ್ತು ನೀಡುವ ದಾಮ್ಲೆಯವರು ಸಂಶೋಧಕರಾಗಿದ್ದು ಕನ್ನಡ ಇಂಗ್ಲಿಷ್ ಭಾಷೆಗಳಲ್ಲಿ ಕೃತಿ ರಚನೆ ಮಾಡಿದವರು. 'ನೆಲದನಂಟು' ಮತ್ತು "ಶಾಲೆ ಎಲ್ಲಿದೆ?" ಇವು ಇವರ ಪ್ರಸಿದ್ಧ ಕಾದಂಬರಿಗಳು. ಅನೇಕ ಪ್ರಶಸ್ತಿ ಸಮ್ಮಾನಗಳಿಂದ ಗೌರವಿಸಲ್ಪಟ್ಟ ದಾಮ್ಲೆಯವರಿಗೆ ಅಸಾಮಾನ್ಯ ಕನ್ನಡಿಗ ಪ್ರಶಸ್ತಿ, ಯಕ್ಷಮಂಗಳ ಪ್ರಶಸ್ತಿ, ಅರಣ್ಯಮಿತ್ರ ಮತ್ತು ಜಲಮಿತ್ರ ಪ್ರಶಸ್ತಿ, Nation Builder ಪ್ರಶಸ್ತಿ ಮುಂತಾದುವು ಲಭಿಸಿವೆ. ಹೊಸದಿಗಂತ ಪತ್ರಿಕೆಯಲ್ಲಿ "ಇದ್ಯಾಕೆ ಹೀಗೆ " ಅಂಕಣವನ್ನು ಬರೆಯುತ್ತಿದ್ದರು.

ಇದನ್ನೂ ಓದಿ

ಹೊಸರುಚಿ | ಬದನೆಕಾಯಿ ಪಲ್ಯ
January 3, 2026
9:07 AM
by: ದಿವ್ಯ ಮಹೇಶ್
ಆತ್ಮವಿಶ್ವಾಸ ಮತ್ತು ಸಂವಹನ ಕೌಶಲ್ಯ ವ್ಯಕ್ತಿತ್ವದ ಬೆನ್ನೆಲುಬು
January 2, 2026
7:42 PM
by: ಕುಮಾರಸುಬ್ರಹ್ಮಣ್ಯ ಮುಳಿಯಾಲ
“ಅಡಿಕೆ ಹಾನಿಕಾರಕ” ಅಪವಾದದ ವಿರುದ್ಧ ಧ್ವನಿ ಎತ್ತಿದರೆ “ಅಡಿಕೆ’ ಉಳಿಯಬಹುದು…!
January 2, 2026
11:06 AM
by: ಪ್ರಬಂಧ ಅಂಬುತೀರ್ಥ
ಕನ್ನಡ ಅನ್ನದ ಭಾಷೆ ಅಲ್ಲ ಎಂಬ ಮಿಥ್ಯೆ
January 1, 2026
6:05 PM
by: ಡಾ.ಚಂದ್ರಶೇಖರ ದಾಮ್ಲೆ

You cannot copy content of this page - Copyright -The Rural Mirror