ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಳೆದ ಕೆಲವು ಸಮಯಗಳಿಂದ ಸಮರ್ಥವಾದ ವಿಪಕ್ಷ ಕಾಣೆಯಾಗಿತ್ತು. ಎಲ್ಲೇ ಗಮನಿಸಿದರೂ ಯಾವುದೇ ವಿಷಯದ ಬಗ್ಗೆಯೂ ರಚನಾತ್ಮಕವಾದ ಟೀಕೆಗಳೇ ಇಲ್ಲ, ಸಲಹೆಗಳು ಇಲ್ಲ. ಜನಪರವಾದ ಸಂಗತಿಗಳ ಬಗ್ಗೆ ಧ್ವನಿಯೂ ಇಲ್ಲ. ಈಗ ಕೆಲವು ಸಮಯಗಳಿಂದ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಜನಪರವಾದ , ಜನರ ಸಮಸ್ಯೆಯ ಬಗ್ಗೆ ಧ್ವನಿ ಎತ್ತಲು ಕಾಂಗ್ರೆಸ್ ಆರಂಭಿಸಿದೆ. ಇತರ ಪಕ್ಷಗಳೂ ಜೊತೆ ಸೇರಿಕೊಂಡಿವೆ. ಈಗ ಸುಳ್ಯದಲ್ಲೂ ಅಂತಹ ವಾತಾವರಣ ಸೃಷ್ಟಿಯಾಗುತ್ತಿದೆ.ಹಾಗೆಂದು ಜನಪರವಾಗಿ ಧ್ವನಿ ಎತ್ತಲು ಪಕ್ಷಗಳೇ ಬೇಕಿಲ್ಲ, ಸಂಘಟನೆಗಳೂ ಸಾಕು. ಆದರೆ ಇಂದಿನ ಪರಿಸ್ಥಿತಿಯಲ್ಲಿ ಪಕ್ಷಗಳು, ಅಧಿಕಾರವೇ ಮುಖ್ಯ ಎನ್ನುವ ಸ್ಥಿತಿ ಇದೆ.
ಅನೇಕ ವರ್ಷಗಳ ಬಳಿಕ ಸುಳ್ಯದಲ್ಲಿ ಕಾಂಗ್ರೆಸ್ ಪಕ್ಷವು ಗಟ್ಟಿಯಾಗಿ ಮಾತನಾಡುತ್ತಿದೆ. ಅನೇಕ ವರ್ಷಗಳಿಂದಲೂ ಸುಳ್ಯದಲ್ಲಿ ಆಗದೇ ಇರುವ ಅಭಿವೃದ್ಧಿ ಕೆಲಸಗಳ ಬಗ್ಗೆ ಕಾಂಗ್ರೆಸ್ ಪ್ರಶ್ನೆ ಮಾಡಲು ಆರಂಭಿಸಿದೆ. ಇದಕ್ಕೆ ಸಹಜವಾಗಿಯೇ ಆಕ್ರೋಶದಿಂದ ಬಿಜೆಪಿ ಉತ್ತರಿಸುತ್ತಿದೆ. ಇದು ಸಹಜವೇ , ಇಂತಹ ಆಕ್ರೋಶ ಇರಬೇಕಾದ್ದು ಕೂಡಾ. ಅನೇಕ ವರ್ಷಗಳಿಂದ ಆಗದ ಕೆಲಸಗಳ ಬಗ್ಗೆ ಪ್ರಶ್ನಿಸಿದಾಗ ಸಿಟ್ಟು, ಆಕ್ರೋಶ ಸಹಜವೇ ಆಗಿದೆ. ಆದರೆ ಸುಳ್ಯದ ಮತದಾರರ ದೃಷ್ಟಿಯಿಂದ ಈ ಪ್ರಶ್ನೆಗಳು ಒಳ್ಳೆಯದೇ ಆಗಿದೆ. ವಿಪಕ್ಷವಾಗಿ ಕಾಂಗ್ರೆಸ್ ಮಾಡಬೇಕಾದ ಕೆಲಸ ಮಾಡುತ್ತಿದೆ. ಇದರಿಂದ ಸುಳ್ಯ ಅಭಿವೃದ್ಧಿಯೂ ಹೊಂದುತ್ತದೆ. ಓಡುವವರೂ, ಓಡಿಸುವವರೂ ಇದ್ದಾಗಲೇ ಅಲ್ಲೊಂದು ಗೌರವಯುತವಾದ, ಜನರಿಗೆ ಅಗತ್ಯವಾದ ಕೆಲಸಗಳು ಆಗುತ್ತವೆ. ಆದರೆ ಎರಡೂ ಪಕ್ಷಗಳ ನಾಯಕರ ಮಾತುಗಳು ಗೌರವಯುತವಾಗಿರಬೇಕಾದ್ದು ಮುಖ್ಯ.
ಈಚೆಗೆ ಸುಳ್ಯದ ಕಸದ ವಿಚಾರಗಳು ಭಾರೀ ಚರ್ಚೆಯಾಯಿತು. ಚಿತ್ರನಟ ಅನಿರುದ್ಧ ಅವರು ಪ್ರಧಾನಿಗಳ ಸ್ವಚ್ಛ ಭಾರತ ಯೋಜನೆಯಿಂದ ಪ್ರೇರಣೆಗೊಂಡವರು. ಅದಕ್ಕಾಗಿ ಅವರು ಅವರದೇ ಮಾದರಿಯಲ್ಲಿ ಅಭಿಯಾನವನ್ನು ಮಾಡುತ್ತಿದ್ದಾರೆ. ಉದ್ದೇಶ ಸ್ವಚ್ಛ ಭಾರತ. ಸುಳ್ಯದ ಕಸದ ಸಮಸ್ಯೆಯ ಬಗ್ಗೆ ಅವರೂ ಮಾತನಾಡಿದ ತಕ್ಷಣವೇ ಪ್ರಧಾನಿಗಳ ಪಕ್ಷದ ನಾಯಕರು ಕೆಂಡಾಮಂಡಲವಾಗುತ್ತಾರೆ, ಲಾರಿ ಕಳುಹಿಸಿ ಎನ್ನುತ್ತಾರೆ. ಇದೇ ಕಸದ ವಿಷಯದಲ್ಲಿ ವಿಪಕ್ಷ ಕಾಂಗ್ರೆಸ್ ಧ್ವನಿ ಎತ್ತುತ್ತದೆ. ಸಹಜವಾಗಿಯೇ ಧ್ವನಿ ಎತ್ತಬೇಕಾದ ವಿಷಯವೇ ಆಗಿದೆ. ಆದರೆ ಅದನ್ನು ಆಡಳಿತವು ಎದುರಿಸಿದ ರೀತಿ ಹಾಗೂ ಉತ್ತರಿಸಿದ ರೀತಿ ಅತ್ಯಂತ ಅಹಂಕಾರದಿಂದ ಕೂಡಿತ್ತು ಎನ್ನುವುದು ಯಾರು ಗಮನಿಸಿದರೂ ಹೇಳುತ್ತಾರೆ. ಈ ಸಮಸ್ಯೆಯ ಬಗ್ಗೆ ಎಷ್ಟು ಗೌರವಪೂರ್ವಕವಾಗಿ ಎಲ್ಲರನ್ನೂ ಸೇರಿಸಿಕೊಂಡು ಸುಳ್ಯದ ಕಸದ ಸಮಸ್ಯೆಗೆ ಭವಿಷ್ಯದಲ್ಲೂ ಪರಿಹಾರ ಸಿಗುವಂತೆ ಮಾಡಬಹುದಿತ್ತು ಎನ್ನುವ ಕಡೆಗೆ ಯೋಚಿಸಬೇಕಾಗಿತ್ತು. ಆದರೆ ಆ ಸಮಸ್ಯೆಗೆ ಭವಿಷ್ಯದಲ್ಲೂ ಏನು ಪರಿಹಾರ ಎನ್ನುವ ಬಗ್ಗೆ ಇಂದಿಗೂ ದೊಡ್ಡ ಪ್ರಶ್ನೆಯೇ ಉಳಿದಿದೆ.
ಸುಳ್ಯದ ಯಾವುದೇ ಸಮಸ್ಯೆ ತೆಗೆದುಕೊಳ್ಳಿ , ವಿದ್ಯುತ್ ಸಮಸ್ಯೆ, ಗ್ರಾಮೀಣ ರಸ್ತೆಗಳ ಅವ್ಯವಸ್ಥೆ, ಅಡಿಕೆ ಹಳದಿ ಎಲೆರೋಗದ ಸಮಸ್ಯೆ, ನೆಟ್ವರ್ಕ್ ಸಮಸ್ಯೆಗಳು, ರಸ್ತೆ-ಸೇತುವೆ ಸಮಸ್ಯೆಗಳು , ಯುವಕರಿಗೆ ಉದ್ಯೋಗದ ವಿಷಯಗಳು .. ಹೀಗೇ ಯಾರು ಏನೇ ಹೇಳಲಿ, ಯಾರಿಗೇ ಬರೆಯಲಿ ಅದನ್ನು “ನಾವೇ ಮಾಡುವುದು” ಎನ್ನುವ ಅಧಿಕಾರವೋ.. ಅಹಂಕಾರವೋ ಕಳೆದ ಹಲವು ಸಮಯಗಳಿಂದ ಇದೆ. ಎರಡು ದಿನಗಳ ಹಿಂದೆ ನಡೆದ ಪತ್ರಿಕಾಗೋಷ್ಟಿಯನ್ನೂ ಗಮನಿಸಿದಾಗಲೂ ಅದೇ ಅಹಂಕಾರ ಕಾಣುತ್ತದೆ. ನಾವೇ ಮಾಡುವುದಾದರೂ ಅನೇಕ ವರ್ಷಗಳಿಂದಲೂ ಏಕೆ ಆಗಿಲ್ಲ ಎನ್ನುವ ಪ್ರಶ್ನೆಯನ್ನೂ ಕೇಳುವ ಹಾಗಿಲ್ಲ. ಕಳೆದ ಅನೇಕ ವರ್ಷಗಳಿಂದಲೂ ಒಂದೇ ಪಕ್ಷ ಅಧಿಕಾರಕ್ಕೆ ಬರುತ್ತಿದೆ, ಇಲ್ಲಿನ ಜನ ಪ್ರೀತಿಯಿಂದ ಗೆಲ್ಲಿಸುತ್ತಿದ್ದಾಗಲೂ ಹೋರಾಟ ಮಾಡಬೇಕಾದ್ದು ಮತ್ತೆ ಜನರೇ ಎಂದಾದರೆ ಇದರ ಅರ್ಥ ಏನು ? ಮೀಸಲು ಕ್ಷೇತ್ರಕ್ಕೆ ಸಾಕಷ್ಟು ಅನುದಾನ ತರಿಸಿಕೊಳ್ಳುವ ಶಕ್ತಿ ಇದೆ. ಈ ಹಿಂದೊಮ್ಮೆ ಜಿಲ್ಲಾ ಉಸ್ತುವಾರಿ ಸಚಿವರ ವಿರುದ್ದ ಹಕ್ಕುಚ್ಯುತಿ ಮಂಡಿಸಿ ಅನುದಾನ ತರಿಸಿಕೊಳ್ಳಲು ಕೂಡಾ ಸಾಧ್ಯವಾಗಲಿಲ್ಲವೇ ? ಹಾಗಿದ್ದರೂ ನಾವೇ ಎನ್ನುತ್ತಾ ಜನರನ್ನು, ಮತ ನೀಡಿದವರನ್ನು ಸತಾಯಿಸುವ ಉದ್ದೇಶ ಏನು ? ಹಾಗೆಂದು ಅದೇ ಪಕ್ಷದ ಪ್ರಮುಖರಿಗೆ ಅಗತ್ಯವಾದ ಕೆಲಸಗಳು ತಕ್ಷಣವೇ ಹೇಗೆ ಆಗುತ್ತವೆ ಎಂದು ಪ್ರಶ್ನಿಸುವುದು ಕೂಡಾ ಅನೇಕ ಬಾರಿ ಅಪರಾಧವಾಗಿ ಬಿಡುತ್ತದೆ.
ಈ ಹಿಂದೆಯೂ, ಈಗಲೂ ಅನೇಕರು ಪ್ರಧಾನಿ ಕಾರ್ಯಾಲಯಕ್ಕೆ ಪತ್ರ ಬರೆಯುತ್ತಾರೆ. ಏಕೆ ಬರೆಯುತ್ತಾರೆ ಎಂದರೆ ಪ್ರಧಾನಿ ಕಚೇರಿಯಿಂದ ಪ್ರತಿಕ್ರಿಯೆ ಬರುತ್ತದೆ, ಸಮಸ್ಯೆ ಬಗೆಹರಿಸಲು ಹೇಳುತ್ತಾರೆ ಎನ್ನುವ ಕಾರಣದಿಂದ. ಆದರೆ ಅಲ್ಲಿನ ಕಾಳಜಿ ಇಲ್ಲಿಯವರೆಗೆ ಇದೆಯೋ ಎಲ್ಲವೋ ಎರಡನೆಯದು. ಪತ್ರಕ್ಕೆ ಹಿಂಬರವೂ ಬರುತ್ತದೆ, ಸುಳ್ಯ ತಲುಪಿದಾಗ “ನಾವೇ ಮಾಡುವುದು” ಎನ್ನುವ ಕಾರಣದಿಂದ ಅಧಿಕಾರಿಗಳು ಆ ಪತ್ರಕ್ಕೆ ಹೆಚ್ಚಿನ ಮಹತ್ವ ನೀಡುವುದು ಇದುವರೆಗೂ ಕಂಡುಬಂದಿಲ್ಲ. ಹೀಗಾಗಿ ಪತ್ರಕ್ಕೆ ಹಿಂಬರಹವಾಗಿ ” ಮಾಡಲಾಗುತ್ತದೆ… ಅನುದಾನ ಇಲ್ಲ… ಅನುದಾನ ನೀಡಿದರೆ ಮಾಡುತ್ತೇವೆ…” ಎಂಬ ಉತ್ತರಕ್ಕೆ ನಿಂತು ಬಿಡುತ್ತದೆ. ಈ ಹಿಂದೆ ಮಂಡೆಕೋಲಿನ ವಿದ್ಯಾರ್ಥಿನಿ ಕಾಡಾನೆ ಸಮಸ್ಯೆಗೆ ಬರೆದ ಪತ್ರಕ್ಕೆ ತಕ್ಷಣವೇ ಕ್ರಮ ಆಗಬೇಕು ಎಂದು ಪ್ರಧಾನಿ ಕಚೇರಿ ಸೂಚಿಸಿದರೂ ನಿರೀಕ್ಷಿತ ಫಲಿತಾಂಶ ಬಂದಿಲ್ಲ ಎಂದು ಆ ವಿದ್ಯಾರ್ಥಿನಿ ನಂತರ ಹೇಳಿದ್ದರು. “ನಾವೇ ಮಾಡುವುದು” ಎನ್ನುವ ಅಹಂಕಾರ ಪ್ರಜಾಪ್ರಭುತ್ವದಲ್ಲಿ ಒಳ್ಳೆಯದಲ್ಲ. ಏಕೆಂದರೆ ಮತದಾರರೇ ಇಲ್ಲಿ ಪ್ರಭುಗಳು.
ಈಚೆಗೆ ಗಮನಿಸಿ, ಸುಳ್ಯದ ಶಾಂತಿನಗರದ ಕ್ರೀಡಾಂಗಣದ ಸಮಸ್ಯೆ. ಇದನ್ನು ಕಾಂಗ್ರೆಸ್ ಪ್ರಶ್ನೆ ಮಾಡಿತು. ಸಹಜವಾಗಿಯೇ ರಾಜಕೀಯವಾಗಿಯೇ ಈ ಇಶ್ಯೂ ತೆಗೆದುಕೊಳ್ಳಲಾಯಿತು. ಆದರೆ ಅಲ್ಲಿ ಭಾಷಾ ಪ್ರಯೋಗಗಳನ್ನು ಗಮನಿಸಿದ್ದೀರಾ ?. ಜನರಿಗೆ ಆಗಬೇಕಾದ್ದು ಸಮಸ್ಯೆಗೆ ಪರಿಹಾರವೇ ಹೊರತು ರಾಜಕೀಯ ಕೆಸರೆರಚಾಟವಲ್ಲ. ಒಂದು ವೇಳೆ ಕಾಂಗ್ರೆಸ್ ಈ ಇಶ್ಯೂ ಬಗ್ಗೆ ಮಾತನಾಡದೇ ಇದ್ದಿದ್ದರೆ ಅಲ್ಲಿನ ಜನರ ಭಯಕ್ಕೆ ಉತ್ತರ ಏನು ? ಇಂದಿಗೂ ಆ ಸಮಸ್ಯೆಗೆ ಪರಿಹಾರ ದೊರೆತಿಲ್ಲ. ಆಡಳಿತ ಪಕ್ಷಗಳು ಸಹಜವಾಗಿಯೇ ತಮ್ಮ ವೈಫಲ್ಯ ಹೇಳುತ್ತವೆಯೇ ? ಆಗುತ್ತದೆ…. ಮಾಡುತ್ತೇವೆ.. ಎನ್ನುತ್ತಾ ಇರುವುದನ್ನೂ ಇದುವರೆಗೂ ಗಮನಿಸಿದವರೆಲ್ಲಾ ಹೇಳುತ್ತಾರೆ. ಈಗಲೂ ಅದೇ ಆಗುತ್ತಿದೆ.
ಈಗ ಕೆಲವು ಸಮಯಗಳಿಂದ ಸುಳ್ಯದಲ್ಲಿ ಕಾಂಗ್ರೆಸ್ ರಚನಾತ್ಮಕವಾಗಿ ಮಾತನಾಡುತ್ತಿದೆ. ಜನರ ಸಮಸ್ಯೆಗಳ ಕಡೆಗೆ ಗಮನಹರಿಸುತ್ತಿದೆ. ಸುಳ್ಯದಲ್ಲಿ ಉಳಿದ ಪಕ್ಷಗಳ ಬಲ ಕಡಿಮೆಯಾದರೂ ಎಲ್ಲವೂ ಅವರ ಸಾಮರ್ಥ್ಯಕ್ಕೆ ಅನುಗುಣವಾಗಿ ಮಾತನಾಡುತ್ತಾರೆ. ಹಾಗೆ ಸರಿಯಾಗಿ ನೋಡಿದರೆ ಸುಳ್ಯದಲ್ಲಿ ಎಷ್ಟೇ ಸಮಸ್ಯೆಗಳು ಆದರೂ ಒಂದೇ ಒಂದು ಸರಿಯಾದ ಹೋರಾಟ ನಡೆದಿಲ್ಲ, ನಡೆದರೂ ಪೂರ್ತಿಯಾಗಿಲ್ಲ. ಎಲ್ಲಾ ಹೋರಾಟ, ಧ್ವನಿಗಳನ್ನು ಆಡಳಿತ ಪಕ್ಷವು ರಚನಾತ್ಮಕವಾಗಿಯೇ ತೆಗೆದುಕೊಳ್ಳಬೇಕೇ ವಿನಹ ಯಾರೋ ಬೀದಿಯಲ್ಲಿ ಹೋಗುವವರು, ಎಲ್ಲರೂ ಹಳದಿ ಕಣ್ಣಿನವರು ಎಂದು ಟೀಕಿಸುವುದು ದೌರ್ಬಲ್ಯ ತೋರಿಸುತ್ತದೆಯೇ ವಿನಹ ಇಚ್ಛಾಶಕ್ತಿಯನ್ನೂ ಅಲ್ಲ ಸಾಧನೆಯನ್ನೂ ಅಲ್ಲ.
ಸಮಸ್ಯೆಗಳ ವಿರುದ್ಧ ಧ್ವನಿ ಎತ್ತುವುದು ಹಾಗೂ ಧ್ವನಿ ಎತ್ತಿದರು ಎಂದ ಮಾತ್ರಕ್ಕೆ ಕೀಳು ಭಾಷೆಯಲ್ಲಿ ಟೀಕಿಸುವುದು, ವೈಯಕ್ತಿಕ ನಿಂದನೆಗಳನ್ನು ಮಾಡುವುದು ಕೂಡಾ ಅಸಹನೆಯೇ. ಮತ ಚಲಾಯಿಸಿ ಜನರೇ ಮೂಲಭೂತ ಸೌಲಭ್ಯಕ್ಕಾಗಿ ಹೋರಾಟ ಮಾಡಬೇಕಾಗಿ ಬಂದಿರುವುದು ಹಾಗೂ ಮೌನವಾಗಿ ಇರಬೇಕಾಗಿ ಬಂದಿರುವುದು ಕೂಡಾ ದುರಂತವೇ. ಇಂತಹ ಸಮಯದಲ್ಲಿ ಈಗ ವಿಪಕ್ಷವಾಗಿ ಕಾಂಗ್ರೆಸ್ ಧ್ವನಿ ಎತ್ತಲು ಆರಂಭಿಸಿದೆ. ಸುಳ್ಯದ ಮಟ್ಟಿಗೆ ಇದು ಒಳ್ಳೆಯ ಬೆಳವಣಿಗೆ. ಪ್ರಜಾಪ್ರಭುತ್ವದಲ್ಲಿ ಸಮರ್ಥ ವಿಪಕ್ಷವೂ ಅಗತ್ಯವಿದೆ. ಅಭಿವೃದ್ಧಿಯ ಕಾವಲುಗಾರನಾಗಿ ಕ್ಷೇತ್ರದ ಬೆಳವಣಿಗೆಗೆ ಬಹುದೊಡ್ಡ ಕೊಡುಗೆಯನ್ನೂ ನೀಡಲು ಸಾಧ್ಯವಿದೆ. ಇದು ಸುಳ್ಯದಲ್ಲಿ ಮುಂದುವರಿಯಲಿ, “ನಾವೇ ಮಾಡುವುದು” ಆದರೂ ಕೂಡಾ ಮತದಾರರೆಲ್ಲರೂ ಗಮನಿಸುವಂತಾಗಲಿ.