ಈ ಸೋಶಿಯಲ್ ಮೀಡಿಯಾಗಳು ನಮ್ಮ ಮನಸ್ಸಿಗೆ ಬಂದದ್ದನ್ನೆಲ್ಲಾ ಹೊರಹಾಕುವ ತಾಣಗಳಾದಂದಿನಿಂದ ಒಟ್ಟಾಗಿ ಜನರ ಮನಸ್ಸು ಎತ್ತ ಕಡೆ ಸಾಗುತ್ತಿದೆ ಎಂದು ಗುರುತಿಸುವುದು ಸ್ವಲ್ಪ ಸುಲಭ. ಈಗೀಗ ಗಮನಿಸಿದರೆ, ನಮ್ಮ ಮಾತುಗಳಲ್ಲಿ, ಯೋಚನೆಗಳಲ್ಲಿ ಅಸಂಬದ್ಧತೆ ಹೆಚ್ಚಾದಂತೆ ಭಾಸವಾಗುತ್ತಿದೆ. ಏನೇನೋ ಒದರುವುದರ ಬಗ್ಗೆ ಹೇಳುತ್ತಿಲ್ಲ. ಮೇಲ್ನೋಟಕ್ಕೆ ಅಸಂಬದ್ಧ ಅನ್ನಿಸುವಂತಹ ಹೇಳಿಕೆಗಳ ಮೂಲಕ ಏನನ್ನೋ ಧ್ವನಿಸುವ ಪ್ರಯತ್ನದ ಕುರಿತು ನಾ ಹೇಳಿದ್ದು. ಅಲ್ಲಿ ಕಾಳಜಿಯಿದೆ. ಆದರೆ, ಹೇಳುವ ರೀತಿಯಲ್ಲಿ ಅಸಂಬದ್ಧತೆಯಿದೆ. ಉದಾಹರಣೆಗೆ, ಚಂದ್ರಯಾನವನ್ನು ಮಂಗಳಯಾನವೆಂದು ಯಾರೋ ಹೇಳಿದ್ದನ್ನಿಟ್ಟುಕೊಂಡು ಮಂಗಳಯಾನವಾಗಿದ್ದರೆ ಹೇಗೇಗೆಲ್ಲ ಇರುತ್ತಿತ್ತು ಎಂದು ತೀರ ಅತಿಯಾಗಿ ವರ್ಣಿಸಿ, ಇದು ಮಂಗಳಯಾನವಲ್ಲವೇ ಅಲ್ಲ ಎಂದು ಧ್ವನಿಸುವಂತದ್ದು. ಸರ್ಕಾರವನ್ನು ಅಸಂಬದ್ಧ ಹೇಳಿಕೆಗಳ ಮೂಲಕ ಹೊಗಳಿಕೊಂಡು ಬೈಯುವಂತದ್ದು. ಫೇಸುಬುಕ್ಕಿನಲ್ಲಿ ಎದ್ದೆದ್ದು ಕಾಣುವ ಎಡ ಬಲದ ಜಗಳಗಳಲ್ಲಿ ಹೆಚ್ಚಿನವನ್ನೂ ಇದೇ ನೆಲೆಯಲ್ಲಿ ಗಮನಿಸಬಹುದು.
ಇದೇನೂ ಹೊಸತಲ್ಲ. ತೀರ ಹತಾಶೆಯಿಂದ ಅಸಂಬದ್ಧತೆ ಹೆಚ್ಚಾಗುತ್ತದೆಂದು ಹಿಸ್ಟರಿಯೇ ತಿಳಿಸುತ್ತದೆ. ಮಹಾಯುದ್ಧದ ಸಮಯದಲ್ಲೂ ಜನರು ಹೋಪ್ ಕಳಕೊಂಡು ಅಸಂಬದ್ಧದ ಮೊರೆ ಹೋಗಿದ್ದರು. ಈಗಲೂ ಆಗುತ್ತಿರುವುದು ಅದೇ. ಸರಿಯಾಗಿ ಹೇಳಿ ಪ್ರಯೋಜನವಿಲ್ಲವೆಂಬ ಹತಾಶೆಯೇ ಕಾಳಜಿಯುಳ್ಳವರಿಗೆ ಅಸಂಬದ್ಧತೆಯ ದಿಕ್ಕು ತೋರಿಸಿದೆ ಅಷ್ಟೆ. ಒಬ್ಬಿಬ್ಬರಾದರೆ ಒಂದು ಲೆಕ್ಕ, ಏನೋ ಹುಚ್ಚು ಎಂದು ಸಾರಾಸಾಗಾಟಾಗಿ ತಳ್ಳಿಬಿಡಬಹುದು. ಆದರೆ, ಇದು ಹಾಗಲ್ಲವಲ್ಲ! ಒಟ್ಟಾಗಿ ಜನರು ಅಷ್ಟು ಹೋಪ್ ಕಳಕೊಳ್ಳುವಂತದ್ದು ಏನಾಗುತ್ತಿದೆ ಬೇಕಲ್ಲ?! ಹಲವಾರು ಉತ್ತರಗಳು, ಅದಕ್ಕೆ ಮತ್ತಷ್ಟು ದಿಕ್ಕುಗಳೂ.
ಈ “ಹಲವು” ಎನ್ನುವುದೇ ಒಂದು ದೊಡ್ಡ ಸಮಸ್ಯೆ. ಕೊನೆಯಿಲ್ಲದಷ್ಟು ಆಪ್ಷನ್ಸ್. ಹೆಂಗಸರು ಸೀರೆ ರಾಶಿಯಲ್ಲಿ ಸರಿಯಾದುದನ್ನು ಹುಡುಕಲು ಪರದಾಡಿದ ಹಾಗೆಯೇ ನಾವಿಂದು ಜೀವನವಿಡೀ ಪ್ರತಿ ಕ್ಷಣದಲ್ಲೂ ಕಾಣುವ ಆಪ್ಷನ್ಸ್ ಎದುರು ಪರದಾಡಬೇಕು. ಆಯ್ಕೆಯ ಸ್ವಾತಂತ್ರ್ಯ ಪ್ರತಿಯೊಬ್ಬರಿಗೂ ಇದೆ, ಬೇಕು ಎನ್ನುವುದರ ಇನ್ನೊಂದು ಮಗ್ಗುಲಲ್ಲಿ ಈ ಪರದಾಟವೂ ಇದೆ. ಅದಕ್ಕೇ ಜುಕರ್ಬರ್ಗ್ ತರದವರು ಈ ಆಯ್ಕೆಯ ರಗಳೆ ಬೇಡ ಅಂತ ಒಂದೇ ಬಣ್ಣದ ಬಟ್ಟೆ ಪ್ರತಿದಿನವೂ ಹಾಕುವುದಂತೆ. ಯಾರೋ ದೊಡ್ಡ ಸಿನಿಮಾ ನಿರ್ದೇಶಕ ಪ್ರತಿದಿನ ಅದದೇ ಊಟ ಮಾಡುತ್ತಾನಂತೆ. ದೊಡ್ಡವರು ಏನು ಮಾಡಿದರೂ ನಡೆಯುತ್ತದೆ. ನಾನು ನೀವು ಏನು ಮಾಡುವುದು ಹೇಳಿ! ಫೇಸುಬುಕ್ಕಿಂದ ಇನ್ಸ್ಟಾಗ್ರಾಮ್ಗೆ, ಅಲ್ಲಿಂದ ಹೊಸದಾಗಿ ಬಂದ ಥ್ರೆಡ್ಸ್ಗೆ, ಅಲ್ಲಿಂದ ಹಳೇಯ ವಾಟ್ಸಾಪಿಗೆ, ಯೂಟ್ಯೂಬಿಗೆ ಹಾರಿ ಹಾರಿ, ಎಲ್ಲಿ ಏನು ನೋಡುತ್ತಿದ್ದೇವೆ ತಿಳಿಯದೆ ಮತ್ತೆಲ್ಲಿಗೋ ಹಾರುತ್ತಿರುತ್ತೇವೆ. ನಿನ್ನ ಆಯ್ಕೆ ಯಾವ್ದೇ ಆಗಿದ್ದರೂ ಅದರಿಂದ ಉತ್ತಮವಾದುದು ಇಲ್ಲೇ ಪಕ್ಕದಲ್ಲಿದೆ ಎಂದು ಒಳಗಿಂದ ಕೇಳುತ್ತಲೇ ಇರುತ್ತದಲ್ಲಾ!
ಇಲ್ಲೆಲ್ಲೋ ಮೂಲೆಯಂಗಡಿಯಲ್ಲಿ ಕುಳಿತಾಗಲೂ ದೂರದಲ್ಲೆಲ್ಲೋ ನಡೆದುದೆಲ್ಲ ಕೈಗೆಟಕುವಾಗ ಮಾರೆತ್ತರದಿಂದ ಲೋಟಕ್ಕೆ ಸರಿಯಾಗಿ ಚಹಾ ಹುಯ್ದ ಚಂದ್ರಣ್ಣ ಸಪ್ಪೆಯೇ. ಆ ಬಿಸಿ ಚಾಯ ಹೀರುವಾಗ ನಾಲಿಗೆ ಸುಟ್ಟುಕೊಂಡು ಕೈಗೆಲ್ಲಾ ಚೆಲ್ಲಿಕೊಳ್ಳುವ ನಮ್ಮ ಅಸಹಾಯಕತೆ ಇದ್ಯಲ್ಲಾ, ಅದು ಅಸಂಬದ್ಧತೆಯೆಡೆಗೆ ಮುಖಮಾಡಿಸುತ್ತೆ.
ಕೋವಿಡ್ ಬಂದುದು, ಲಾಕ್ಡೌನ್ ಆಗಿದ್ದು, ನಾವು ಬಯಸಿದಂತೆ ಏನೂ ಆಗದೆ ಎಲ್ಲವೂ ನಮ್ಮ ಕೈಮೀರಿದೆ ಅನ್ನಿಸಿದ್ದು, ನಮ್ಮ ನಮ್ಮ ಪ್ರೊನೌನ್ಗಳೂ ಆಯ್ಕೆಯ ವಿಷಯವಾಗಿದ್ದು, ಪ್ರತಿ ಮಾತಿನ ಮೇಲೂ ಪೊಲಿಟಿಕಲ್ ಕರೆಕ್ಟ್ನೆಸ್ ನ ಭಾರವಿಟ್ಟದ್ದು, ಎಲ್ಲಾದನ್ನು ಸಮರ್ಥನೆ ಮಾಡಬೇಕಿರುವುದು, ಎಲ್ಲಾದಕ್ಕು ಸ್ಪಷ್ಟೀಕರಣ ನೀಡಬೇಕಿರುವುದು, ಒಂದಲ್ಲ ಎರಡಲ್ಲ ತಲೆನೋವುಗಳು. ದಿನಂಪ್ರತಿ ಬೆಳೆಯುವ ಟೆಕ್ನಾಲಜಿ ಹಿಂದೆ ಒಂದಷ್ಟು ವರ್ಷಗಳಿಂದ ನಿರಂತರ ಓಡಬೇಕಿರುವ ಅನಿವಾರ್ಯತೆ ಇರುವುದು, ಓಡಿ ಓಡಿ ಸುಸ್ತಾದಾಗ ದಣಿವಾರಿಸಿಕೊಳ್ಳುವುದನ್ನೂ ಸಹಿಸದಿರುವುದು, ಎಲ್ಲವೂ ಮಾರ್ಕೆಟಿಂಗ್ ಅಡಿಯಲಿ ಸಿಕ್ಕಿ, ದುಡ್ಡು ತೆಗೆದುಕೊಂಡು ಸುಳ್ಳು ಹೇಳಿ-ಹೇಳಿ ಕೇಳಿ-ಕೇಳಿ ಯಾವುದನ್ನೂ ಪೂರ್ತಿಯಾಗಿ ನಂಬಲಾಗದಿರುವುದು, ಈಗಂತೂ ಎಐ ಮೂಲಕ ಸುಳ್ಳನ್ನು ಕಣ್ಣಿಗೆ ಕಟ್ಟುವಂತೆ ಸತ್ಯವಾಗಿಸಬಹುದಾದ್ದು, ಇನ್ಫಾರ್ಮೇಶನ್ ಆಗಿ ಅವೆಲ್ಲ ಸಾಧ್ಯವೆಂದು ತಿಳಿದಿದ್ದರೂ ಮತ್ತೆ ಮತ್ತೆ ಅದದೇ ಬಲೆಗೆ ಸಿಕ್ಕಿ ಹಾಕಿಕೊಳ್ಳುವುದನ್ನು ತಪ್ಪಿಸಲಾಗದಿರುವುದು, ಕೊನೇಗೆ, ಈ ಎಐ ಪವರ್ ಮುಂದೆ ಮನುಷ್ಯನಿಗೇ ಬೆಲೆ ಇಲ್ಲದಂತಾಗಿ ಒಂಥರಾ ಅಸ್ತಿತ್ವಕ್ಕೇ ಕುತ್ತು ಬಂದಂತಾಗಿರುವುದು ನಮ್ಮ ನಿಮ್ಮಂತವರಲ್ಲಿ ಅಸಹಾಯಕತೆ ಸೃಷ್ಟಿಸದೆ ಇನ್ನೇನು ಮಾಡೀತು? ಮಾತೆತ್ತಿದರೆ ಜಾತಿ ಧರ್ಮ ಲಿಂಗ ಎನ್ನುತ್ತಾ ನಾನು ನೀವು ಹೇಗೋ ಒಂದು ಹುಟ್ಟಿದ್ದೇ ತಪ್ಪು ಎಂಬಂತೆ ಮಿತಿಮೀರಿ ಬಿಂಬಿಸುತ್ತಿದ್ದರೆ ಇನ್ನೇನಾದೀತು!? ಯಾರದ್ದೋ ಯಾವುದೋ ಹೇಳಿಕೆಗೆ ನಮ್ಮ ನಿಮ್ಮನ್ನು ಧ್ವನಿಯೆತ್ತಿ ಖಂಡಿಸುತ್ತಿದ್ದರೆ ಇನ್ನೇನಾದೀತು!?
ಡಿಕನ್ಸ್ಟ್ರಕ್ಷನ್ನಿನ ಪರಿಣಾಮದ ಬಗ್ಗೆ ಎಷ್ಟು ಹೇಳಿದರೂ ನನಗೆ ಸಮಾಧಾನವೇ ಅನಿಸುವುದಿಲ್ಲವೆಂದು ಕಾಣುತ್ತದೆ. ಒಟ್ಟಿನಲ್ಲಿ ಒಂದು ತೆರನಾದ ಅಸಹಾಯಕತೆ. ಈ ಅರ್ಥವಾಗದ ಉದ್ದ ಪೋಸ್ಟ್ ಓದುವುದೋ ಅಥವಾ ಸ್ಕ್ರಾಲ್ ಮಾಡಿದರೆ ಸಿಗುವ ನಾಯಿಗೆ ಮುತ್ತಿಡುವ ರೀಲ್ಸ್ ನೋಡುವುದೋ? ಇದನ್ನೇ ಇನ್ನೂ ಚೆನ್ನಾಗಿ ಅಮೇರಿಕದವನೋ ಸೌತ್ ಆಫ್ರಿಕಾದವನೋ ಹೇಳೇ ಹೇಳಿರುತ್ತಾನೆಂದು ಗೊತ್ತೇ ಇದೆ. ಬೇಕಿದ್ದರೆ ಅದನ್ನೇ ಓದಬಹುದು, ಹುಡುಕಿದರೆ ಸಿಗುತ್ತದೆ ಕೂಡ, ಇದು ಯಾಕೆ?!
ಇಂದಿಗೆ ಈ ಅಸಹಾಯಕತೆಯೇ ಒಂದು ಶಕ್ತಿ. ಅಸಂಬದ್ಧತೆ ಅದರ ವ್ಯಕ್ತ ರೂಪ. ಬೇಕಿದ್ದರೆ ಗಮನಿಸಿ, ಇಂದಿನ ಕಾಲಕ್ಕೆ ನಿಜವಾಗಿ ರಿಯಾಕ್ಟ್ ಮಾಡುತ್ತಿರುವ ಯಾರೇ ಆಗಿದ್ದರೂ ಅವರ ಕೃತಿಗಳಲ್ಲಿ ಅಸಂಬದ್ಧತೆಯ ಛಾಯೆ ಇರುತ್ತದೆ. ಅದವರ ಶೈಲಿಯಲ್ಲ. ಅದಿಂದಿನ ಮನಸ್ಥಿತಿ. ಈ ಮನಸ್ಥಿತಿ ಅವರವರ ಕೃತಿಗಳ ಮೂಲಕ ಹೊರಬರುತ್ತಿರುತ್ತದೆ, ನಿರ್ದಿಷ್ಟ ಕಾಲವನ್ನು ಹಿಡಿದಿಟ್ಟುಕೊಂಡಿರುತ್ತದೆ, ಬಿಂಬಿಸುತ್ತಿರುತ್ತದೆ. ಮುಂದೊಮ್ಮೆ ಇಂದಿನ ಪರಿಸ್ಥಿತಿಯ ಅಭ್ಯಸಿಸಲು ಯೋಗ್ಯ ವಸ್ತುವಾಗಿರುತ್ತದೆ. ಉಳಿದ ಚಂದ ಚಂದ ಗಿಡ ಪಡಗಳೆಲ್ಲ ನಾಳೆ ನಾಡಿದ್ದಿಗೇ ಬಾಡಿ ಹೋಗಿರುತ್ತವೆ.
ಸಿರಿಧಾನ್ಯಗಳ ಬಳಕೆ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಕೃಷಿ ಇಲಾಖೆ “ಸಿರಿಧಾನ್ಯ ಓಟ…
ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ ಉಂಟಾಗಿರುವ ಹಿನ್ನೆಲೆಯಲ್ಲಿ ಬೆಂಗಳೂರು ಸೇರಿದಂತೆ ರಾಜ್ಯದ ಹಲವೆಡೆ…
20.01.2025ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ : ದಕ್ಷಿಣ ಕರಾವಳಿ,…
ಬೀದರ್ ನ ಪಶುವೈದ್ಯಕೀಯ, ಪಶು ಹಾಗೂ ಮೀನುಗಾರಿಕೆ ವಿಶ್ವವಿದ್ಯಾಲಯದ 20 ನೇ ಸಂಸ್ಥಾಪನಾ…
ಕರ್ನಾಟಕದಲ್ಲಿ ಅಡಿಕೆಯು ಪ್ರಮುಖ ವಾಣಿಜ್ಯ ಬೆಳೆಯಾಗಿರುವುದು ಕೇಂದ್ರದ ಗಮನದಲ್ಲಿದೆ. ಈ ನಿಟ್ಟಿನಲ್ಲಿ ವಿದೇಶಗಳಿಂದ…
ಸಹಕಾರಿ ಕ್ಷೇತ್ರದಲ್ಲಿ ಹೆಸರುವಾಸಿಯಾಗಿರುವ ಅಂತರಾಷ್ಟ್ರೀಯ ಮಟ್ಟದ ಕ್ಯಾಂಪ್ಕೊ ಸಂಸ್ಥೆ "ಕಲ್ಪ" ಕೊಬ್ಬರಿ ಎಣ್ಣೆ…