ಅಡಿಕೆ ಮಾತ್ರೆ….! | ತೋಟಕ್ಕೆ ಕಳೆನಾಶಕ…..! | ಹೆಚ್ಚುತ್ತಿರುವ ಕ್ಯಾನ್ಸರ್‌ ರೋಗಿಗಳು…! | ಆಶೆಗಳ ಕೆಣಕದಿರು, ಪಾಶಗಳ ಬಿಗಿಯದಿರು…. | ಸಾವಯವ ಕೃಷಿಕ ಎ ಪಿ ಸದಾಶಿವ ಬರೆಯುತ್ತಾರೆ…. |

July 31, 2022
3:47 PM
ಕೃಷಿಕ ಎ ಪಿ ಸದಾಶಿವ ಅವರು ಸಾವಯವ ಕೃಷಿಕ. ಕೃಷಿಯನ್ನು ಯಥೇಚ್ಛವಾದ ರಾಸಾಯನಿಕ ಬಳಕೆಯ ಬಗ್ಗೆ ಆಗಾಗ ವಿಷಾದ ವ್ಯಕ್ತಪಡಿಸುತ್ತಾರೆ. ಅಡಿಕೆ ಕೃಷಿಕರ ಬಗ್ಗೆಯೂ ಆಗಾಗ ಹೇಳುವ ಎ ಪಿ ಸದಾಶಿವ ಅವರು ಅಡಿಕೆ ದಾಸ್ತಾನಿಗೆ ಮಾತ್ರೆ ಬಳಕೆ, ತೋಟಕ್ಕೆ ಕಳೆನಾಶಕ ಸಿಂಪಡಣೆಯ ಬಗ್ಗೆಯೂ ಅವರು ಹೇಳುತ್ತಾರೆ. ಕಾರಣ ಹಾಗೂ ಅವರ ಕಾಳಜಿ ಇಲ್ಲಿದೆ….

ಜೂನ್ ತಿಂಗಳ ಆರಂಭದಲ್ಲಿ ಮಗಳ ಅನಾರೋಗ್ಯದಿಂದ ಬೇಸತ್ತು, ಬೇಸರವನ್ನು ಹೋಗಲಾಡಿಸುವುದಕ್ಕೆ ಗದ್ದೆ ಬೇಸಾಯಕ್ಕೆ ಮನ ಮಾಡಿದ ವ್ಯಕ್ತಿಯೊಬ್ಬರ ಬಗ್ಗೆ ಬರೆದಿದ್ದೆ. ವಾರದ ಹಿಂದೆ ಅನಾರೋಗ್ಯಕ್ಕೆ ತುತ್ತಾದ ಪುತ್ರಿಯು ಕ್ಯಾನ್ಸರ್ ಕಾಯಿಲೆ ಉಲ್ಬಣಿಸಿ ಇಹಲೋಕ ಯಾತ್ರೆಯನ್ನು ಮುಗಿಸಿದ ಬಗ್ಗೆ ಹೇಳಿ ದುಃಖಿಸಿಕೊಂಡರು. ಅವರಿಗೆ ಸಾಂತ್ವನವನ್ನು ತಿಳಿಸಿದರೂ, ನನ್ನ ಅಂತರಂಗದಲ್ಲಿ ಸಮಾಜದಲ್ಲಿ ಉಲ್ಭಣಿಸುತ್ತಿರುವ ಅನೇಕ ಇಂತಹ ಕಾಯಿಲೆಗಳ ಪಟ್ಟಿ ಮನಸ್ಸಿಗೆ ಒಂದಷ್ಟು ವ್ಯಾಕುಲತೆಯನ್ನು ಮಾಡಿದ್ದಂತು ಸತ್ಯ.

Advertisement
Advertisement

ಅದಾಗಿ ಎರಡು ದಿನದಲ್ಲಿ ಪತ್ರಿಕೆ ಒಂದರಲ್ಲಿ, ಅತಿಯಾದ ಕಳೆ ನಿಯಂತ್ರಕದ ಬಳಕೆಯಿಂದಾಗುವ ದುಷ್ಪರಿಣಾಮಗಳ ಬಗ್ಗೆ ತಜ್ಞರ ಎಚ್ಚರಿಕೆಯ ಮಾತುಗಳು ಬಂದಿದ್ದವು. ಅತಿಯಾದ ರಾಸಾಯನಿಕಗಳ ಬಳಕೆ ಮತ್ತು ಆಹಾರ ಪದ್ಧತಿಯಿಂದ ಪುರುಷ ಮತ್ತು ಮಹಿಳೆಯರ ಬಂಜೆತನಕ್ಕೆ ಕಾರಣವಾಗಿ, ಭಾರತದ ಜನಸಂಖ್ಯೆ ಮುಂದಿನ 20 ವರ್ಷಗಳಲ್ಲಿ ತೀವ್ರವಾಗಿ ಕಡಿಮೆಯಾಗಬಹುದೆಂದು ಆಘಾತಕರ ಸುದ್ದಿಯು ಸಾಮಾಜಿಕ ಜಾಲತಾಣಗಳಲ್ಲಿ ಎಲ್ಲರನ್ನು ಆಲೋಚಿಸುವಂತೆ ಮಾಡಿತ್ತು.

ಈ ವಿಷಯ ಸತ್ಯ ಎಂಬುದಕ್ಕೆ ಕೆಲ ವರ್ಷಗಳ ಹಿಂದಿನ ಪ್ರಸಂಗವನ್ನು ಉದಾಹರಿಸುತ್ತಿದ್ದೇನೆ. ಯಾವುದೋ ಪತ್ರಿಕೆ ಒಂದರಲ್ಲಿ ನಾನು ಬೆಳೆಸಿದ ಕಾಡಿನ ಬಗ್ಗೆ ಲೇಖನ ಒಂದು ಬಂದಿತ್ತು. ನಮ್ಮ ಮನೆಯಲ್ಲಿರುವ ಪುತ್ರಂಜೀವಿ ಮರದ ಬಗ್ಗೆ ತಿಳಿಸುತ್ತಾ, ಸಂತಾನ ಹೀನರಿಗೆ ಇದರ ಔಷಧಿ ಆಗುವುದೆಂದು ಹೇಳಿದ್ದೆ. ಲೇಖನದಲ್ಲಿ ಅದನ್ನು ಬರೆದುದರಿಂದಾಗಿ ನನಗೆ ಬಂದ ದೂರವಾಣಿ ಕರೆಗಳು ಅಸಂಖ್ಯಾತ. ಸಮಾಜದಲ್ಲಿ ಅಷ್ಟೊಂದು ಸಂಖ್ಯೆಯ ನೋವುಗಳು ಇದೆ ಎಂಬ ಮೊದಲ ಅರಿವು ಅಂದು ನನಗಾಗಿತ್ತು. ನನಗೆ ಕೇಳಿದ ಜ್ಞಾನವೇ ವಿನಹ, ಔಷಧಿಯ ಬಗ್ಗೆ ಯಾವುದೇ ಅರಿವಿಲ್ಲ ಎಂಬುದನ್ನು ಅವರುಗಳಿಗೆ ವಿವರಿಸಿ ಹೇಳಬೇಕಾಯಿತು.

ಅಡಿಕೆ ಮಂಡಿ ಒಂದಕ್ಕೆ ಹೋದಾಗ, ಅಲ್ಲಿಗೆ ಬರುವ ಅಡಿಕೆ ಬೆಳೆಗಾರ ಡಾಕ್ಟರ್ ಒಬ್ಬರ ಅಭಿಪ್ರಾಯದಂತೆ ಸಾಧಾರಣ 10 ಮನೆಯಲ್ಲಿ ನಾಲ್ಕರಲ್ಲಿ ಕ್ಯಾನ್ಸರ್ ಪೇಷಂಟ್ ಇದ್ದಾರಂತೆ.ಕ್ಯಾನ್ಸರ್ ಚಿಕಿತ್ಸೆಗಾಗಿಯೇ ಸಹಾಯವನ್ನು ನಿರೀಕ್ಷಿಸಿ ಆಗಾಗ ಬರುವ ಮನವಿಗಳು ಸಂಖ್ಯೆ ಉಲ್ಭಣಿಸುತ್ತಿರುವುದರ ಸಂಕೇತ.

ಇದೆಲ್ಲಾ ಏಕೆ ನೆನಪಾಯಿದೆಂದರೆ, ಕೃಷಿ ಗುಂಪೊಂದರಲ್ಲಿ ಅಡಿಕೆ ದಾಸ್ತಾನಿನ ಬಗ್ಗೆ ತುಂಬಾ ಚರ್ಚೆಗಳು ನಡೆದಿತ್ತು. ಕ್ವಿಕ್ ಪಾಸ್( ಅಲ್ಯೂಮಿನಿಯಂ ಫೋಸ್ಪೈಡ್ ) ಮಾತ್ರೆಗಳನ್ನು ಹಾಕಿ ಡಬಲ್ ಪ್ಲಾಸ್ಟಿಕ್ ಹಾಕಿದರೆ ಎರಡು ವರ್ಷಕ್ಕೂ ಹಾಳಾಗದೆ ದಾಸ್ತಾನು ಉಳಿಸಿಕೊಳ್ಳುವ ವಿಧಾನವನ್ನು ಅನೇಕರು ಹಂಚಿಕೊಂಡಿದ್ದರು. ಅದರ ತೀವ್ರತೆಯ ಅರಿವು ಎಷ್ಟು ಜನಕ್ಕೆ ಇದೆ ಎಂಬ ಬಗ್ಗೆ ನನಗೆ ಗೊತ್ತಿಲ್ಲ. ಇದಾಗಿ ಎರಡು ದಿನದಲ್ಲಿ ಸಿಕ್ಕಿದ ಮಿತ್ರರೊಬ್ಬರ ಮಾತು ಮತ್ತಷ್ಟು ಯೋಚಿಸುವಂತೆ ಮಾಡಿತು.

ಪ್ರತಿ ಡಬಲ್ ಪ್ಲಾಸ್ಟಿಕ್ ಗೋಣಿಯೊಳಗೆ ಒಂದೊಂದು ಮಾತ್ರೆಯನ್ನು ಹಾಕಿ ಭದ್ರವಾಗಿ ಬಿಗಿದು ಕಟ್ಟಿದ ದಾಸ್ಥಾನು ಕೊಠಡಿಯೊಳಗೆ ಮನೆಯ ಬೆಕ್ಕೊಂದು ಸಂಜೆ ಹೊತ್ತು ಬಾಗಿಲು ತೆರೆದಾಗ ನುಗ್ಗಿತ್ತಂತೆ. ಬೆಕ್ಕು ಒಳ ಹೋದದ್ದು ಮನೆಯ ಯಜಮಾನರಿಗೆ ಅರಿವಿಗೆ ಬಂದದ್ದು ಬೆಳಗಿನ ಹೊತ್ತು. ಕೊಠಡಿಯ ಬಾಗಿಲು ತೆರೆದಾಗ ಒಳಗಿದ್ದ ಬೆಕ್ಕು ತನ್ನ ಕೊನೆಯ ಉಸಿರನ್ನು ನಿಲ್ಲಿಸಿತ್ತಂತೆ. ಸಾಮಾನ್ಯ ಎಲ್ಲಾ ಮನೆಗಳಲ್ಲಿಯೂ ನಡೆಯುವ ಘಟನೆ ಇದು. ಆದರೆ ಕೇವಲ 10-12 ಗಂಟೆಯ ಹೊತ್ತಿನಲ್ಲಿ ಬೆಕ್ಕು ಆಮ್ಲಜನಕದ ಕೊರತೆಯಾಗಿ ಉಸಿರುಗಟ್ಟಿ ಸಾಯಲು ಸಾಧ್ಯವೇ ಇಲ್ಲ. ಅಷ್ಟು ಭದ್ರವಾದ ರಕ್ಷಣೆಯಲ್ಲಿಯೂ ವಿಷಗಾಳಿ ಯಾವ ಪರಿಯಲ್ಲಿ ಗೋಣಿಯಿಂದ ಹೊರ ಸೂಸುತ್ತಿದೆ ಎಂಬುದಕ್ಕೆ ಈ ಘಟನೆ ಸಾಕ್ಷಿ. ಅದೇ ಕೊಠಡಿಗೆ ಅಡಿಕೆ ಮಾರಾಟ ಮಾಡಲೋ ಇನ್ನು ಯಾತಕ್ಕೋ ಆಗಾಗ ನಾವು ಹೋದಲ್ಲಿ ವಿಷ ಗಾಳಿ ನಮ್ಮ ಶರೀರವನ್ನು ಹೊಕ್ಕು ಯಾವ ದುಷ್ಪರಿಣಾಮವನ್ನು ಬೀರಬಹುದು ಎಂದು ಯೋಚಿಸಿದಾಗ, ಅನೇಕ ದುಃಖದ ಸಂಗತಿಗಳು ಕಣ್ಣೆದುರು ಬಂದು ನಿಲ್ಲುತ್ತವೆ.

ಒಂದು ವರ್ಷಕ್ಕೆ ಹಾಳಾಗದಂತೆ ಭದ್ರ ಕವಚವನ್ನು ಪ್ರಕೃತಿ ನೀಡಿದ ಅಡಿಕೆಯಂತಹ ವಸ್ತುವಿಗೆ, ಈ ಪರಿಯ ವಿಷಪ್ರಾಶನ ನಮಗೆ ಬೇಕೆ? ಎಂಬ ಪ್ರಶ್ನೆ ಮುನ್ನೆಲೆಗೆ ಬರಬೇಡವೇ? ಡಬಲ್ ಚೋಲ್ನವರೆಗೆ ಕಾಯ್ದಿರಿಸುವ ಅಗತ್ಯವಿದೆಯೇ?

ಆಶೆಗಳ ಕೆಣಕದಿರು, ಪಾಶಗಳ ಬಿಗಿಯದಿರು, ಕ್ಲೇಶದ ಪರೀಕ್ಷೆಗಳಿಗೆನ್ನ ಕರೆಯದಿರು, ಬೇಸರದ ಪಾತಕ ಸ್ಮೃತಿಯ ಚುಚ್ಚದಿರು, ಎನ್ನುತ ಈಶನನು ಬೇಡುತಿರೋ ಮಂಕುತಿಮ್ಮ.

ಮಂಕುತಿಮ್ಮನ ಮಾತಿನಂತೆ ಯಾವುದೇ ದುರಾಸೆಗಳಿಗೆ ಬಲಿ ಬೀಳದೆ ಇರುವ ಮತಿ ಎಂದೆಂದಿಗೂ ಇರಲಿ ಎಂದು ಈಶನನ್ನು ಬೇಡಿಕೊಳ್ಳುವೆ.

ಬರಹ :
ಎ ಪಿ ಸದಾಶಿವ , ಕೃಷಿಕ
Advertisement
Advertisement
Advertisement

Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ಎ ಪಿ ಸದಾಶಿವ ಮರಿಕೆ

ಸಾವಯವ ಕೃಷಿಕರು, ಪುತ್ತೂರು ಕಳೆದ ಹಲವಾರು ವರ್ಷಗಳಿಂದ ಸಾವಯವ ಕೃಷಿ, ಗೋಆಧಾರಿತ ಕೃಷಿಯ ಮೂಲಕ ಗಮನ ಸೆಳೆದ ಕೃಷಿಕ ಇವರು.

ಇದನ್ನೂ ಓದಿ

ಮಾಯಾಮೃಗ ಮಾಯಾಮೃಗ….
January 30, 2026
7:35 AM
by: ಪ್ರಬಂಧ ಅಂಬುತೀರ್ಥ
ಅಂಕಗಳಾಚೆಗೂ ಒಂದು ಲೋಕವಿದೆ : ಇದು ಮಕ್ಕಳಿಗೆ ಬದುಕನ್ನು ಕಲಿಸುವ ಶಿಕ್ಷಣ
January 29, 2026
9:31 PM
by: ಮಹೇಶ್ ಪುಚ್ಚಪ್ಪಾಡಿ
ಮಕ್ಕಳಲ್ಲಿ ಗುಣ ಬೆಳೆಸುವ ಹೊಣೆ ಶಾಲೆಗಳಿಗಿಲ್ಲವೆ?
January 28, 2026
8:18 PM
by: ಡಾ.ಚಂದ್ರಶೇಖರ ದಾಮ್ಲೆ
ಹಳ್ಳಿ ಬದುಕು ಶಾಪವಲ್ಲ… ಸಮಾಜದ ಮನಸ್ಥಿತಿ ಶಾಪ…!
January 28, 2026
7:09 AM
by: ಮಹೇಶ್ ಪುಚ್ಚಪ್ಪಾಡಿ

You cannot copy content of this page - Copyright -The Rural Mirror