ಸಣ್ಣ ಸಣ್ಣದಾಗಿರೋ ಈ ಅಕ್ಕಿಯನ್ನು ಒಂದು ಹಿಡಿ ಕೈಲಿ ಹಿಡಿದ್ರೆ ಮನೆಯೆಲ್ಲಾ ಘಮ್ ಅನ್ನುತ್ತೆ. ಇನ್ನು ಬೇಯಿಸಿದ್ರೆ ಇಡೀ ಊರಿಗೇ ಪರಿಮಳ ಬೀರುತ್ತೆ. ಯಾಕೆಂದ್ರೆ ಈ ಅಕ್ಕಿ ಹೆಸರೇ ಪರಿಮಳ ಸಣ್ಣಕ್ಕಿ ಅಂತಾ. ಯೆಸ್, ಉತ್ತರ ಕನ್ನಡದ ಶಿರಸಿಯ ಮಂಜುಗುಣಿಯಲ್ಲಿ ಕಾಣಸಿಗೋ ಪರಿಮಳ ಸಣ್ಣಕ್ಕಿ ಅಪರೂಪದಲ್ಲಿ ಅಪರೂಪದ ಅಕ್ಕಿ. ಇದಕ್ಕೆ ಯಾವ ಕೆಮಿಕಲನ್ನೂ ಹಾಕಲ್ಲ, ಪರ್ಫ್ಯೂಮ್ ಸ್ಪ್ರೇನೂ ಮಾಡಲ್ಲ, ಆದ್ರೂ ಇದೊಂಥರ ಪರಿಮಳ ಸೂಸುವ ಅಕ್ಕಿ.
ಅಪರೂಪದ ತಳಿ
ಭಾರತದಲ್ಲಿ ಇಂತಹ ಭತ್ತ ಕಂಡು ಬರೋದು ಎರಡು ಕಡೆಗಳಲ್ಲಿ ಮಾತ್ರ ಅಂತಾರೆ ಇಲ್ಲಿನ ಸ್ಥಳೀಯರು. ಅದ್ರಲ್ಲಿ ಒಂದು ಪರಿಮಳ ಭರಿತ ಆಂಧ್ರದ ಆಮ್ಮದಾನಿಯಲ್ಲಿ, ಇನ್ನೊಂದು ಕರ್ನಾಟಕದ ಈ ಮಂಜುಗುಣಿಯಂತೆ.
ಫಸಲು ಕಡಿಮೆ
ವಿಶೇಷ ಅಂದ್ರೆ, ಮಾಮೂಲಿ ಅಕ್ಕಿ ಎಕರೆಗೆ ಒಂದು ಇಪ್ಪತ್ತೈದು ಮೂಟೆಯಾದರೂ ಇರುತ್ತದೆ. ಆದರೆ ಈ ಅಕ್ಕಿ ಬರೋದು 8 ರಿಂದ 12 ಮೂಟೆ ಮಾತ್ರ! ಹುಟ್ಟುತ್ತಲೇ ಪರಿಮಳ ಇಟ್ಕೊಂಡ ಇದಕ್ಕೆ ಭತ್ತವಾದಾಗ ಪರಿಮಳ ಇರಲ್ಲ. ಮತ್ತೆ ಭತ್ತ ಬಿರಿದು ಅಕ್ಕಿಯಾದಾಗ ಮಿಲ್ ತುಂಬಾ ಪರಿಮಳವೋ ಪರಿಮಳ. ಇನ್ನು ಮನೆಯಲ್ಲಿ ಸ್ಟವ್ ನಲ್ಲಿ ಬೇಯೋಕೆ ಇಟ್ರಂತೂ ನೀವ್ ಪರಿಮಳ ಸಣ್ಣಕ್ಕಿ ಅಡುಗೆಗೆ ಬಳಸ್ತಿದ್ದೀರ ಅಂತಾ ಪಕ್ಕಾ ಹೇಳ್ಬಹುದು. ಅಷ್ಟೊಂದು ಸುವಾಸನೆ ಮನೆ ತುಂಬಾ ಹರಡುತ್ತೆ.
ಯಾಕೆ ಬಳಸುತ್ತಾರೆ?
ಇದು ಈಗ ಅಳಿವಿನಂಚಿನಲ್ಲಿರುವ ಅಕ್ಕಿ, ಮಂಜುಗುಣಿಯ ರೇತಿ ಮಿಶ್ರಿತ ಮಣ್ಣಿಗೆ ಮಾತ್ರ ಸರಿ ಹೊಂದುವ ಈ ಭತ್ತದ ತಳಿ. ಇದರ ಬೆಳೆಯು ಗಿಡ್ಡವಾಗಿ ಧಾನ್ಯಗಳು ದೂರ ದೂರಕ್ಕೆ ಇರುತ್ತವೆ. ಇದನ್ನು ಹೆಚ್ಚಾಗಿ ಕ್ಷೀರಾನ್ನ,ಕೇಸರಿಬಾತ್ ಹಾಗೂ ಮಸಾಲೆ ಅನ್ನ ತಯಾರಿಸಲು ಮಾತ್ರ ಬಳಸುತ್ತಾರೆ.
ದರ ಹೀಗಿದೆ
ಶಿರಸಿ, ಕುಮಟಾ ಜನರಿಗೆ ಮಂಜುಗುಣಿ ಅಕ್ಕಿ ಅಚ್ಚುಮೆಚ್ಚು. ಕೆಜಿಗೆ 75-78ರೂಪಾಯಿ ಈಗಿನ ದರ. ಭವಿಷ್ಯದಲ್ಲಿ ಇನ್ನೂ ಹೆಚ್ಚಾಗಬಹುದು. ಇನ್ನು ಉತ್ತರ ಕನ್ನಡದ ಮುಂಡಗೋಡಿನ ಮಣ್ಣಿಗೂ ಈ ತಳಿ ಒಗ್ಗಬಹುದು ಎನ್ನೋದು ರೈತರ ಅಂಬೋಣ. ಇನ್ನು ಇದರ ಪರಿಮಳದ ಗುಟ್ಟು ಅರಿಯಲು, ಅದೆಷ್ಟೋ ಮಂದಿ ಸಂಶೋಧಕರು ಈ ಬೆಳೆಯ ಬಗ್ಗೆ ಅಧ್ಯಯನ ನಡೆಸಿದ್ದೂ ಇದೆ.
ಒಟ್ಟಿನಲ್ಲಿ ಪರಿಮಳ ಸಣ್ಣಕ್ಕಿ ಭಾರೀ ಪರಿಮಳ ಬೀರುವ ಅಕ್ಕಿಯಾದ್ರೂ, ಫಸಲು ನೀಡೋದಲ್ಲಿ ಚೌಕಾಸಿ ತೋರುತ್ತೆ. ಆದ್ರೆ ಊರಿಗೆಲ್ಲ ಸುವಾಸನೆಯ ಕಂಪು ಬೀರುವ ಈ ಅಕ್ಕಿಯ ಟೇಸ್ಟಿ ನೋಡುವ ಭಾಗ್ಯ ಸದ್ಯಕ್ಕಂತೂ ಕೆಲವೇ ಕೆಲವು ಮಂದಿಗಷ್ಟೇ ಲಭಿಸಿದೆ ಅನ್ನೋದೇ ವಿಶೇಷ.