Advertisement
ಸುದ್ದಿಗಳು

ನಾವು ತಿನ್ನುವ ಆಹಾರದಲ್ಲಿ ಕೀಟನಾಶಕ ಅವಶೇಷ – ಕರ್ನಾಟಕದಲ್ಲಿ 9,176 ಮಾದರಿಗಳಲ್ಲಿ 334 ಮಿತಿ ಮೀರಿವೆ – ದೇಶದ ಅಂಕಿ ಏನು ಹೇಳುತ್ತದೆ?

Share

ನಾವು ತಿನ್ನುವ ಹಣ್ಣು, ತರಕಾರಿ, ಧಾನ್ಯ ಮತ್ತು ಇತರ ಆಹಾರ ಉತ್ಪನ್ನಗಳಲ್ಲಿ ಕೀಟನಾಶಕ ಅವಶೇಷ ಎಷ್ಟಿದೆ? ಈ ಪ್ರಶ್ನೆಗೆ ಕೇಂದ್ರ ಸರ್ಕಾರ ನಡೆಸಿದ ರಾಷ್ಟ್ರೀಯ ಮಟ್ಟದ ಮೇಲ್ವಿಚಾರಣೆಯ ಅಂಕಿ ಹೊಸ ಚರ್ಚೆಗೆ ಕಾರಣವಾಗಿದೆ.

2023 ರಿಂದ 2026 ರವರೆಗೆ ದೇಶದ 23 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಂದ 70,652 ಆಹಾರ ಮಾದರಿಗಳನ್ನು ಪರೀಕ್ಷಿಸಲಾಗಿದ್ದು, ಅವುಗಳಲ್ಲಿ 2,223 ಮಾದರಿಗಳಲ್ಲಿ FSSAI ನಿಗದಿಪಡಿಸಿದ Maximum Residue Limit (MRL) ಗಿಂತ ಹೆಚ್ಚಿನ ಕೀಟನಾಶಕ ಅವಶೇಷ ಪತ್ತೆಯಾಗಿದೆ. ಅಂದರೆ ಪರೀಕ್ಷಿಸಿದ ಮಾದರಿಗಳಲ್ಲಿ ಶೇ.3.1ರಷ್ಟು ಮಿತಿ ಮೀರಿದ್ದವು.

ಕರ್ನಾಟಕದಲ್ಲಿ 334 ಮಾದರಿಗಳು :  ರಾಜ್ಯವಾರು ಸಂಖ್ಯೆಯಲ್ಲಿ ಕರ್ನಾಟಕ ಈ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದೆ. ಕರ್ನಾಟಕದಲ್ಲಿ 2023–2026ರ ಅವಧಿಯಲ್ಲಿ 9,176 ಮಾದರಿಗಳನ್ನು ಪರೀಕ್ಷಿಸಲಾಗಿದೆ. ಅದರಲ್ಲಿ 334 ಮಾದರಿಗಳಲ್ಲಿ ಕೀಟನಾಶಕ ಅವಶೇಷ ನಿಗದಿತ MRLಗಿಂತ ಹೆಚ್ಚಿತ್ತು. ಅಂದರೆ ಪರೀಕ್ಷಿಸಿದ ಮಾದರಿಗಳಲ್ಲಿ ಸುಮಾರು ಶೇ.3.6 ಮಿತಿ ಮೀರಿವೆ. ತೆಲಂಗಾಣದಲ್ಲಿ 8,198 ಮಾದರಿಗಳ ಪೈಕಿ 486, ಮಹಾರಾಷ್ಟ್ರದಲ್ಲಿ 5,295ರಲ್ಲಿ 260 ಮಾದರಿಗಳು ಮಿತಿ ಮೀರಿವೆ.

ಆದರೆ ಕೇವಲ ಒಟ್ಟು ಸಂಖ್ಯೆಯನ್ನು ನೋಡಿ ರಾಜ್ಯಗಳ ನಡುವೆ ಹೋಲಿಕೆ ಮಾಡುವುದು ಸರಿಯಲ್ಲ. ಪರೀಕ್ಷಿಸಿದ ಮಾದರಿಗಳ ಸಂಖ್ಯೆಯೂ ಭಿನ್ನವಾಗಿರುವುದರಿಂದ ಶೇಕಡಾವಾರು ಪ್ರಮಾಣವನ್ನೂ ಗಮನಿಸಬೇಕು. ದೇಶದ ಒಟ್ಟು 70,652 ಮಾದರಿಗಳಲ್ಲಿ 2,223 ಮಾತ್ರ MRL ಮೀರಿವೆ. ಅಂದರೆ ಸುಮಾರು 96.9% ಮಾದರಿಗಳು ನಿಗದಿತ ಮಿತಿಯೊಳಗಿದ್ದವು.

ಹೀಗಾಗಿ ಈ ಅಂಕಿಯನ್ನು ಎರಡು ರೀತಿಯಲ್ಲಿ ನೋಡಬಹುದು.  2,223 ಮಾದರಿಗಳು ಮಿತಿ ಮೀರಿರುವುದು ಆಹಾರ ಸುರಕ್ಷತೆಯ ಸಮಸ್ಯೆಯನ್ನು ತೋರಿಸುತ್ತದೆ ಇದು ಕಳವಳದ ಅಂಶ. ಪರೀಕ್ಷಿಸಿದ ಮಾದರಿಗಳ ಬಹುಪಾಲು ಸುಮಾರು 97% ನಿಗದಿತ MRL ಒಳಗಿದ್ದವು. ಹೀಗಾಗಿ ಇಡೀ ಆಹಾರವೇ ಅಸುರಕ್ಷಿತ ಎನ್ನುವ ಹಾಗಿಲ್ಲ. ಹಾಗಿದ್ದರೂ ಎಚ್ಚರ ಅಗತ್ಯ ಎನ್ನುವುದರ ಸೂಚನೆ ಇದು.

MRL ಎಂದರೇನು? : MRL (Maximum Residue Limit) ಎಂದರೆ ಆಹಾರದಲ್ಲಿ ಕಾನೂನುಬದ್ಧವಾಗಿ ಅನುಮತಿಸಲಾದ ಕೀಟನಾಶಕ ಅವಶೇಷದ ಗರಿಷ್ಠ ಮಟ್ಟ. ಇದು ಪ್ರತಿಯೊಂದು ಕೀಟನಾಶಕಕ್ಕೂ, ಪ್ರತಿಯೊಂದು ಬೆಳೆ/ಆಹಾರ ಉತ್ಪನ್ನಕ್ಕೂ ಒಂದೇ ಆಗಿರುವುದಿಲ್ಲ.  ಉದಾಹರಣೆಗೆ ಒಂದು ಕೀಟನಾಶಕಕ್ಕೆ ದ್ರಾಕ್ಷಿಯಲ್ಲಿ ಇರುವ MRL ಒಂದು ಮಟ್ಟವಾಗಿದ್ದರೆ, ಟೊಮ್ಯಾಟೊ ಅಥವಾ ಮೆಣಸಿನಕಾಯಿಯಲ್ಲಿ ಬೇರೆ ಮಟ್ಟವಾಗಿರಬಹುದು. FSSAI ವಿವಿಧ ಕೀಟನಾಶಕ ಮತ್ತು ಆಹಾರ ಉತ್ಪನ್ನಗಳಿಗೆ ಪ್ರತ್ಯೇಕ ಮಿತಿಗಳನ್ನು ನಿಗದಿಪಡಿಸುತ್ತದೆ. ಹೀಗಾಗಿ ಒಂದು ಮಾದರಿ MRL ಮೀರಿದೆ ಎಂದರೆ ಆ ಬೆಳೆ ಅಥವಾ ಆಹಾರದಲ್ಲಿರುವ ಪ್ರತಿಯೊಂದು ಉತ್ಪನ್ನವೂ ಅಪಾಯಕಾರಿ ಎಂದಲ್ಲ. ಅದು ನಿರ್ದಿಷ್ಟ ಮಾದರಿಯಲ್ಲಿ ನಿಗದಿತ ಕಾನೂನು ಮಿತಿ ಉಲ್ಲಂಘನೆಯಾಗಿದೆ ಎಂಬ ಸೂಚನೆ.

ಮಾದರಿಗಳನ್ನು ಎಲ್ಲಿಂದ ಸಂಗ್ರಹಿಸಲಾಗಿದೆ? : ಮಾದರಿಗಳನ್ನು ಕೇವಲ ರೈತರ ಜಮೀನಿನಿಂದ ಮಾತ್ರ ತೆಗೆದುಕೊಳ್ಳಲಾಗಿಲ್ಲ. ರಿಟೇಲ್ ಅಂಗಡಿಗಳು, ಸಗಟು ಮಾರುಕಟ್ಟೆಗಳು, ಸಹಕಾರ ಸಂಸ್ಥೆಗಳು, APMC ಮಾರುಕಟ್ಟೆಗಳು, farm gate ಮತ್ತು ಸಾವಯವ ಉತ್ಪನ್ನಗಳ ಮಾರಾಟ ಕೇಂದ್ರಗಳಿಂದಲೂ ಮಾದರಿಗಳನ್ನು ಸಂಗ್ರಹಿಸಲಾಗಿದೆ.  ಪರೀಕ್ಷೆಯಲ್ಲಿ ಭಾಗವಹಿಸುವ 40 ಪ್ರಯೋಗಾಲಯಗಳು ಮಾದರಿಗಳನ್ನು ವಿಶ್ಲೇಷಿಸುತ್ತಿವೆ. ಮಾದರಿ ಸಂಗ್ರಹಿಸಿದ ಸ್ಥಳದ GPS ಮಾಹಿತಿಯನ್ನೂ ದಾಖಲಿಸಲಾಗುತ್ತಿದೆ. Farm-gate ಮಾದರಿಗಳಲ್ಲಿ ಬೆಳೆ ಬಂದ ಪ್ರದೇಶದವರೆಗೆ ಪತ್ತೆಹಚ್ಚುವ ವ್ಯವಸ್ಥೆ ಇದೆ.  ಇದು ರೈತರಿಂದ ಮಾರುಕಟ್ಟೆಯವರೆಗೆ ಪತ್ತೆಹಚ್ಚುವ ವ್ಯವಸ್ಥೆ ಬಲಪಡಿಸುವಲ್ಲಿ ಮಹತ್ವದ ಹೆಜ್ಜೆ.

ಇದಕ್ಕೆ ಕಾರಣ ರೈತ ಎಂದು ಹೇಳಬಹುದೇ? : ಒಂದು ಮಾದರಿಯಲ್ಲಿ ಹೆಚ್ಚಿನ ಅವಶೇಷ ಪತ್ತೆಯಾದರೆ ಅದರ ಹಿಂದೆ ಹಲವು ಕಾರಣಗಳಿರಬಹುದು. ಶಿಫಾರಸು ಮಾಡದ ಕೀಟನಾಶಕ ಬಳಕೆ, ಹೆಚ್ಚು ಪ್ರಮಾಣದಲ್ಲಿ ಸಿಂಪಡಿಸುವುದು, ಕೊಯ್ಲಿಗೆ ಮುನ್ನ ಅಗತ್ಯವಿರುವ ಸಮಯ ಪಾಲಿಸದಿರುವುದು, ನಿಷೇಧಿತ ಅಥವಾ ಅನುಮೋದನೆ ಇಲ್ಲದ ಉತ್ಪನ್ನ ಬಳಕೆ, ತಪ್ಪಾದ ಮಿಶ್ರಣ, ನಕಲಿ ಅಥವಾ ಕಳಪೆ ಗುಣಮಟ್ಟದ ಕೀಟನಾಶಕ, ಮಾರುಕಟ್ಟೆ ಅಥವಾ ಸಂಗ್ರಹಣೆಯ ಹಂತದಲ್ಲಿನ ಸಮಸ್ಯೆಗಳು ಕೂಡಾ ಕಾರಣ ಇರುತ್ತದೆ.  ಹೀಗಾಗಿ ಪರೀಕ್ಷಾ ಫಲಿತಾಂಶ ಬಂದ ತಕ್ಷಣ “ರೈತರು ಹೆಚ್ಚು ವಿಷ ಹಾಕುತ್ತಿದ್ದಾರೆ” ಎಂದು ಹೇಳುವುದು ಸರಿಯಲ್ಲ.  ಕೀಟನಾಶಕದ ಅವಶೇಷದ ಮೂಲವನ್ನು ಪತ್ತೆಹಚ್ಚುವುದು ಮುಖ್ಯ.

ರೈತರಿಗೆ ಸಲಹೆ ಏನು?:  ಕೇಂದ್ರ ಕೃಷಿ ಸಚಿವಾಲಯದ ಪ್ರಕಾರ MPRNL ಯೋಜನೆಯ ಫಲಿತಾಂಶಗಳನ್ನು ರಾಜ್ಯ ಕೃಷಿ ಇಲಾಖೆಗಳೊಂದಿಗೆ ಹಂಚಿಕೊಂಡು ರೈತರಿಗೆ ಅನುಮೋದಿತ ಕೀಟನಾಶಕಗಳನ್ನು ಶಿಫಾರಸು ಮಾಡಿದ ಪ್ರಮಾಣದಲ್ಲಿ ಮತ್ತು ಲೇಬಲ್ ಸೂಚನೆಯಂತೆ ಬಳಸುವುದು ಅಗತ್ಯವಾಗಿದೆ. ಸಿಕ್ಕಸಿಕ್ಕ ಔಷಧಿಗಳ ಸಿಂಪಡಣೆ ಮಾಡದಿರುವುದು ಹೆಚ್ಚು ಉತ್ತಮ. ಸರ್ಕಾರ ಕೂಡಾ ಈ ಬಗ್ಗೆ ಹೆಚ್ಚು ಕ್ರಮಗಳನ್ನು , ಮುಂಜಾಗ್ರತೆಗಳನ್ನು ಕೈಗೊಳ್ಳುತ್ತಿದೆ.

ಕೀಟನಾಶಕ ಅವಶೇಷದ ನಿಯಂತ್ರಣ ರೈತನ ವಿರುದ್ಧದ ಕ್ರಮವಾಗಬಾರದು. ರೈತನಿಗೆ ಕೀಟ–ರೋಗ ನಿಯಂತ್ರಣ ಬೇಕು. ಗ್ರಾಹಕನಿಗೆ ಸುರಕ್ಷಿತ ಆಹಾರ ಬೇಕು. ಈ ಎರಡೂ ಅಗತ್ಯವಾಗಿರುವ ಕಾರಣದಿಂದ ರೈತರಿಗೆ ಸರಿಯಾದ ಮಾಹಿತಿಯ ಅಗತ್ಯ ಇದೆ. ಆರಂಭದಲ್ಲಿ ಸರಿಯಾದ ಕೀಟ ಗುರುತಿಸುವಿಕೆ, ಆ ಬಳಿಕ ಸೂಕ್ತ ಔಷಧಿ, ಸರಿಯಾದ ಪ್ರಮಾಣ ನಂತರ ಸರಿಯಾದ ಸಮಯದಲ್ಲಿ ಕೊಯ್ಲು ಇತ್ಯಾದಿಗಳ ಬಗ್ಗೆಯೂ ಮಾಹಿತಿ ನೀಡಬೇಕಿದೆ. ಇದರ ಜೊತೆಗೇ   ನಕಲಿ ಕೀಟನಾಶಕವೂ ದೊಡ್ಡ ಸಮಸ್ಯೆಯಾಗಿದೆ. ಹೀಗಾಗಿ ರೈತರು ಬಳಸುವ ಕೀಟನಾಶಕದ ಗುಣಮಟ್ಟವೂ ಅಷ್ಟೇ ಮುಖ್ಯ, ಈ ಬಗ್ಗೆಯೂ ಜಾಗೃತಿ ಅಗತ್ಯವಾಗಿದೆ.

ಸಂದೇಶ ಏನು? : ಇಂದು ಕೀಟನಾಶಕ ಬಳಕೆ ಇಲ್ಲದೆ ಸಂಪೂರ್ಣವಾಗಿ ವಾಣಿಜ್ಯ ಕೃಷಿ ನಡೆಸುವುದು ಎಲ್ಲ ಬೆಳೆಗಳಲ್ಲೂ ಸುಲಭವಲ್ಲ.  ರೈತನಿಗೆ ಕಡಿಮೆ ವೆಚ್ಚ, ಉತ್ತಮ ಬೆಳೆ ಮತ್ತು ಸುರಕ್ಷಿತ ಮಾರುಕಟ್ಟೆ ಬೇಕು. ಗ್ರಾಹಕನಿಗೆ ಸುರಕ್ಷಿತ ಆಹಾರ ಬೇಕು. ಹೀಗಾಗಿ ವೈಜ್ಞಾನಿಕ ಕೃಷಿ, ಉತ್ತಮ ಕೃಷಿ ಪದ್ಧತಿ, ಗುಣಮಟ್ಟದ ಕೀಟನಾಶಕ ಮತ್ತು ಪರಿಣಾಮಕಾರಿ ಪರೀಕ್ಷಾ ವ್ಯವಸ್ಥೆ, ಉತ್ತಮ ಮಾರುಕಟ್ಟೆ ದರ ಇದೆಲ್ಲವೂ ಅಗತ್ಯ ಇದೆ. ಸುರಕ್ಷಿತ ಆಹಾರದ ಮೊದಲ ಹೆಜ್ಜೆ ರೈತನ ಜಮೀನು. ನಂತರ ಅದರ ಜವಾಬ್ದಾರಿ ಮಾರುಕಟ್ಟೆಯಲ್ಲಿ.

ಪ್ರತಿದಿನ ಕೃಷಿ-ಗ್ರಾಮೀಣ-ಪರಿಸರ-ಹವಾಮಾನ ಬದಲಾವಣೆ ಹಾಗೂ ಇತರ ಮಾಹಿತಿಗಾಗಿ  ನಮ್ಮ “ದ ರೂರಲ್‌ ಮಿರರ್.ಕಾಂ”WhatsApp Channel  ಫಾಲೋಮಾಡಲು ಇಲ್ಲಿ ಕ್ಲಿಕ್‌ ಮಾಡಿ

Government monitoring under the National Pesticide Residue Monitoring Programme found pesticide residues above FSSAI-prescribed Maximum Residue Limits (MRLs) in 2,223 of 70,652 food samples collected across 23 states and Union Territories between 2023 and 2026. Karnataka recorded the highest absolute number, with 334 of 9,176 samples exceeding the limits, or about 3.6%. The data highlights the need for judicious pesticide use, stronger testing, traceability and wider adoption of Integrated Pest Management.

Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

Published by
ದ ರೂರಲ್ ಮಿರರ್.ಕಾಂ

Recent Posts

ಒಂದೇ ತೆಂಗಿನ ಮರದಿಂದ ₹10,000 ಆದಾಯ? ಮೌಲ್ಯವರ್ಧನೆಗೆ ಹೊಸ ದಾರಿ ತೋರಿದ ವಿಶ್ವ ತೆಂಗು ದಿನ

ಕಾಸರಗೋಡಿನ ICAR-CPCRIನಲ್ಲಿ ವಿಶ್ವ ತೆಂಗು ದಿನ–2026 ಆಚರಿಸಿ, ಹವಾಮಾನ ಅನಿಶ್ಚಿತತೆಯ ನಡುವೆ ತೆಂಗು…

4 hours ago

ಹವಾಮಾನ ವರದಿ | 02-09-2026 | ಉತ್ತರ ಭಾರತದ ವಾಯುಭಾರ ಕುಸಿತ ದುರ್ಬಲವಾಗುವ ಸಾಧ್ಯತೆ

ಕರಾವಳಿಯಲ್ಲಿ ಮುಂದಿನ ಎರಡು ದಿನ ಅಲ್ಲಲ್ಲಿ ಸಾಮಾನ್ಯ ಮಳೆಯಾದರೂ ಜೋರು ಮಳೆಯ ಸಾಧ್ಯತೆ…

9 hours ago

ಕೃಷಿಗೆ ಸಾಲ ಹೆಚ್ಚಿಸಿ – ಅಲ್ಪಾವಧಿ ಮಾತ್ರವಲ್ಲ, ದೀರ್ಘಾವಧಿ ಸಾಲವೂ ಬೇಕು – ಬ್ಯಾಂಕ್‌ಗಳಿಗೆ ನಿರ್ಮಲಾ ಸೀತಾರಾಮನ್ ಸೂಚನೆ

ಕೃಷಿ ಉತ್ಪಾದನೆ ಹೆಚ್ಚಿಸಲು ಬ್ಯಾಂಕ್‌ಗಳು ರೈತರಿಗೆ ಹೆಚ್ಚಿನ ಸಾಂಸ್ಥಿಕ ಸಾಲ ನೀಡಬೇಕು ಎಂದು…

16 hours ago

E20 ಎಫೆಕ್ಟ್‌ – ಪಶು ಆಹಾರದ ಬೆಲೆ ಏರಿಕೆ, ಹೈನುಗಾರರ ಲೆಕ್ಕಾಚಾರವೇ ಬದಲು..!

E20 ನೀತಿಯಡಿ ಎಥನಾಲ್ ಉತ್ಪಾದನೆಗೆ ಜೋಳ ಸೇರಿದಂತೆ ಧಾನ್ಯಗಳ ಬೇಡಿಕೆ ಹೆಚ್ಚುತ್ತಿರುವ ನಡುವೆ…

1 day ago

ಬರದ ನಡುವೆ ರೈತರ ಜಮೀನಿಗೆ ಸಿಎಂ ಭೇಟಿ – ಬೆಳೆ ಹಾನಿ ಪರಿಶೀಲನೆ

ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಗದಗ ಜಿಲ್ಲೆಯ ವಿವಿಧ ಗ್ರಾಮಗಳಿಗೆ ಭೇಟಿ ನೀಡಿ…

1 day ago

ಹವಾಮಾನ ವರದಿ | 01-09-2026 | ಯಾವ ಜಿಲ್ಲೆಗಳಲ್ಲಿ ಇನ್ನೂ ಮಳೆಯ ಸಾಧ್ಯತೆ…?

ಕರ್ನಾಟಕದಲ್ಲಿ ಮಳೆಯ ತೀವ್ರತೆ ಕ್ರಮೇಣ ಕಡಿಮೆಯಾಗುವ ಲಕ್ಷಣಗಳಿದ್ದು, ಸೆಪ್ಟೆಂಬರ್ 4ರಿಂದ ಕರಾವಳಿ ಮತ್ತು…

1 day ago