ಆಹಾರಧಾನ್ಯಗಳ ಕೊರತೆ ನೀಗಿಸಲು ಮತ್ತು ಕೃಷಿ ಕ್ಷೇತ್ರದಲ್ಲಿ ಬೆಳವಣಿಗೆ ಕಂಡುಕೊಳ್ಳಲು ಹೊರಹೊಮ್ಮಿದ ಹಸಿರುಕ್ರಾಂತಿಯ ಕೂಸೇ ಕೀಟನಾಶಕ.ಇದೀಗ ನಮ್ಮಲ್ಲಿ ಉಪಯೋಗ ಆಗುತ್ತಿರುವ ನಾನಾ ರೀತಿಯ ಕೀಟನಾಶಕಗಳು ನಮಗೆ ಸವಾಲನ್ನು ಒಡ್ಡುತ್ತಿವೆ.ಇದರ ಪರಿಣಾಮವಾಗಿ ಪ್ರಕೃತಿ ಮತ್ತು ಮನುಷ್ಯನ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿದೆ.ಈ ದೃಷ್ಟಿಯಿಂದ ನಮ್ಮಲ್ಲಿ ನಾನಾ ರೀತಿಯ ಕೀಟನಾಶಕಗಳ ಉಪಯೋಗ ಪ್ರಭಾವ ಇತ್ಯಾದಿ ವಿಚಾರಗಳ ಬಗ್ಗೆ ಅರಿತುಕೊಳ್ಳುವುದು ಸೂಕ್ತ.
ವಿಶ್ವದಲ್ಲಿ ಕೀಟನಾಶಕಗಳ ಬಳಕೆ : ವಿಶ್ವದಲ್ಲಿ ನಾನಾ ರೀತಿಯ ಕೀಟನಾಶಕಗಳ ಒಟ್ಟು ಬಳಕೆ ಸುಮಾರು 4.12 ಮಿಲಿಯ ಟನ್. ಇವುಗಳ ಬಳಕೆಯಲ್ಲಿ ಚೀನಾ ಅಗ್ರ ಸ್ಥಾನದಲ್ಲಿದೆ, ಇಲ್ಲಿ ಜಗತ್ತಿನ ಕೀಟನಾಶಕಗಳ ಒಟ್ಟು ಬಳಕೆಯ ಶೇಕಡಾ 43 ಬಳಕೆ ಆಗುತ್ತಿದೆ. ನಂತರದ ಸ್ಥಾನಗಳಲ್ಲಿ ಕ್ರಮವಾಗಿ ಶೇಕಡಾ 10 ಬಳಕೆ ಮಾಡುವ ಅಮೇರಿಕಾ, ಶೇಕಡಾ 9 ಬಳಕೆ ಮಾಡುವ ಬ್ರೆಜಿಲ್, ಶೇಕಡಾ 4 ಬಳಕೆ ಮಾಡುವ ಅರ್ಜೆಂಟೀನಾ ಮತ್ತು ಶೇಕಡಾ 2 ಬಳಕೆ ಮಾಡುವ ಕೆನಡಾಗಳಿವೆ. ಇದರ ಬಳಕೆಯ ದೃಷ್ಟಿಯಿಂದ ಭಾರತ ಶೇಕಡಾ 1 ಆಗಿ 12 ನೆ ಸ್ಥಾನದಲ್ಲಿದೆ.
ಭಾರತದಲ್ಲಿ ಕೀಟನಾಶಕಗಳ ಉತ್ಪಾದನೆ ಮತ್ತು ಬಳಕೆ : ನಮ್ಮಲ್ಲಿ ಇವುಗಳ ಉತ್ಪಾದನೆಯಲ್ಲಿ 318 ನೋಂದಾಯಿತ ಉದ್ದಿಮೆಗಳಿವೆ. ಇವು ಒಟ್ಟಾಗಿ ಸುಮಾರು 1,39,000 ಟನ್ ಕೀಟನಾಶಕಗಳನ್ನು ಉತ್ಪಾದಿಸುತ್ತಿವೆ. ಈ ಪ್ರಮಾಣದಲ್ಲಿ ಸುಮಾರು 58,000 ಟನ್ ಆಂತರಿಕವಾಗಿ ಬಳಕೆ ಆಗುತ್ತಿದೆ. ಇದರ ಪ್ರಕಾರ ನಮ್ಮಲ್ಲಿ ಒಂದು ಹೆಕ್ಟೇರ್ಗೆ ತಲಾ 0.31 ಕಿಲೋ ಬಳಕೆ ಆಗುತ್ತಿದೆ. ಪ್ರತಿದಿನ ಕೃಷಿ-ಗ್ರಾಮೀಣ-ಪರಿಸರ ಹಾಗೂ ಇತರ ಮಾಹಿತಿಗಾಗಿ ನಮ್ಮ “ದ ರೂರಲ್ ಮಿರರ್.ಕಾಂ”WhatsApp Channel ಗೆ ಇಲ್ಲಿ ಕ್ಲಿಕ್ ಮಾಡಿ….
ಯಾವ್ಯಾವ ಕೀಟನಾಶಕ ಎಷ್ಟೆಷ್ಟು ಬಳಕೆ? : ನಮ್ಮಲ್ಲಿ ಬಳಕೆ ಆಗುವ ಒಟ್ಟು ಕೀಟನಾಶಕಗಳಲ್ಲಿ ಶೇಕಡಾ 44 ಸಸ್ಯನಾಶಕ, ಶೇಕಡಾ 27 ಶಿಲೀಂದ್ರ ನಾಶಕ, ಶೇಕಡಾ 22 ಕೀಟನಾಶಕ, ಮತ್ತು ಶೇಕಡಾ 7 ಇತರೇ ನಾಶಕಗಳಾಗಿ ಬಳಕೆ ಆಗುತ್ತಿದೆ. ರಾಜ್ಯಗಳ ದೃಷ್ಟಿಯಿಂದ ಇವುಗಳ ಬಳಕೆಯನ್ನು ನೋಡುವುದಾದರೆ ಉತ್ತರ ಪ್ರದೇಶ ಮೊದಲನೇ ಸ್ಥಾನದಲ್ಲಿದ್ದರೆ, ನಂತರದ ಸ್ಥಾನಗಳಲ್ಲಿ ಕ್ರಮವಾಗಿ ಮಹಾರಾಷ್ಟ್ರ, ಪಂಜಾಬ್, ತೆಲಂಗಾಣ, ಹರ್ಯಾಣ ಮುಂತಾದವುಗಳು ಇವೆ. ಇನ್ನು ರಾಸಾಯನಿಕ ಕೀಟನಾಶಕಗಳ ಬಳಕೆ ಮಾಡುವ ಪ್ರಮಾಣದಲ್ಲಿ ಉತ್ತರ ಪ್ರದೇಶ ಶೇಕಡಾ 21.43, ಮಹಾರಾಷ್ಟ್ರ ಶೇಕಡಾ 15.80, ತೆಲಂಗಾಣ ಶೇಕಡಾ 8.91 ಆಗಿದೆ. ಕರ್ನಾಟಕದ ಪಾಲು ಶೇಕಡಾ 3.32 ಆಗಿದೆ. ಇನ್ನೊಂದೆಡೆಯಲ್ಲಿ ಜೈವಿಕ ಕೀಟನಾಶಕದ ಬಳಕೆಯಲ್ಲಿ ಶೇಕಡಾ 20.2 ರೊಂದಿಗೆ ಪಶ್ಚಿಮ ಬಂಗಾಳ ಮುಂಚೂಣಿಯಲ್ಲಿದೆ. ಕರ್ನಾಟಕದ ಪಾಲು ಇಲ್ಲಿ ಶೇಕಡಾ 6.03 ಆಗಿದೆ.
ಯಾವ್ಯಾವ ಬೆಳೆಗಳಲ್ಲಿ ಎಷ್ಟೆಷ್ಟು ಬಳಕೆ? : ನಮ್ಮಲ್ಲಿ ವ್ಯವಸಾಯವಾಗುವ ನಾರಿನ ಬೆಳೆಗಳಾದ ಹತ್ತಿ, ಸೆಣಬು ಇತ್ಯಾದಿಗಳ ಒಟ್ಟು ವಿಸ್ತೀರ್ಣದ ಶೇಕಡಾ 65 ಕ್ಕೇ, ಹಣ್ಣುಗಳ ಬೆಳೆಯ ವಿಸ್ತೀರ್ಣದ ಶೇಕಡಾ 50, ತರಕಾರಿಯ ಶೇಕಡಾ 46, ಸಂಬಾರ ಪದಾರ್ಥಗಳ ಶೇಕಡಾ 43, ಎಣ್ಣೆಕಾಳುಗಳ ಶೇಕಡಾ 20 ಮತ್ತು ದ್ವಿದಳ ಧಾನ್ಯಗಳ ಶೇಕಡಾ 23 ವಿಸ್ತೀರ್ಣಗಳಿಗೆ ಕೀಟನಾಶಕಗಳ ಬಳಕೆ ಆಗುತ್ತಿದೆ. .. …… ಮುಂದೆ ಓದಿ……
ಕೀಟನಾಶಕಗಳ ನಿಷೇಧಕ್ಕೆ ಸೂತ್ರ : ಭಾರತದಲ್ಲಿ ಹಲವು ಕೀಟನಾಶಕಗಳ ಉತ್ಪಾದನೆ, ಬಳಕೆ ಎಂಬಿತ್ಯಾದಿ ವಿಚಾರಗಳಿಗೆ ಸಂಬಂಧಿಸಿದಂತೆ ಮಾರ್ಚ್ 2024 ರ ಅಂತ್ಯಕ್ಕೆ ರೂಪಿಸಲ್ಪಟ್ಟ ಕಾನೂನು ಪ್ರಕಾರ 49 ಕೀಟನಾಶಕಗಳನ್ನು ಉತ್ಪಾದಿಸುವುದಕ್ಕೆ ನಿಷೇಧವಿದೆ, ಇದರೊಂದಿಗೆ ನಿಗದಿತ ಪ್ರಮಾಣದ ಬಳಕೆ ಮತ್ತು ರಫ್ತುಗಾಗಿ 5, ನಿಗದಿತ ಉತ್ಪಾದನೆಯನ್ನು ಮುಗಿಸುವ ತನಕದ 8 ಮತ್ತು ನೋಂದಣಿಗೆ ಅವಕಾಶವಿಲ್ಲದ 18 ಕೀಟನಾಶಕಗಳನ್ನು ಇಲ್ಲಿ ಹೆಸರಿಸಲಾಗಿದೆ. ಹೀಗಿದ್ದರೂ ಕೆಲವೊಂದು ಕೀಟನಾಶಕಗಳ ಉತ್ಪಾದನೆ ಸಾರ್ವಜನಿಕರ ಆರೋಗ್ಯ ದೃಷ್ಟಿಯಿಂದ ಮತ್ತು ಕೆಲವೊಂದು ಕೃಷಿ ಉತ್ಪನ್ನಗಳ ರಕ್ಷಣೆಗಾಗಿ ಮಾಡಲಾಗುತ್ತಿದೆ. ಉದಾಹರಣೆಗೆ ಡಿ. ಡಿ. ಟಿ,ಅಲ್ಯೂಮಿನಿಯಂ ಫಾಸ್ಫೇಟ್ ಇತ್ಯಾದಿ.
ಬಳಕೆಯಲ್ಲಿರುವ ಪ್ರಮುಖ ಕೀಟನಾಶಕಗಳು : ಆಪಲ್, ನೆಲಗಡಲೆ, ಗೋಧಿ ಇತ್ಯಾದಿಗಳಿಗೆ ಬಳಸುವ ಬೈಕನ್, ಟಿಲ್ಟ್, ಕಾಸ್ಮೋಸ್, ಪ್ರೋಪಿಜಾಲ್, ಮಂಕೋಜೆಬ್, ಮಲಾತಿಯಾನ್ ಇತ್ಯಾದಿಗಳನ್ನು ಕೆಲವು ಬೆಳೆಗಳಿಗೆ ಬಳಸಬಾರದೆಂದು ಇದ್ದರೂ ಇವುಗಳ ಬಳಕೆ ವ್ಯಾಪಕವಾಗಿದೆ. ನಮ್ಮಲ್ಲಿ ಬಳಕೆ ಆಗುವ ಪ್ರಮುಖ 5 ಕೀಟನಾಶಕಗಳೆಂದರೆ ಸಲ್ಫರ್, ಕ್ಲೋರಿಪಿರೈಫೋಸ್, 2.4 ಡಿ ಅಮೈನ್ ಸಾಲ್ಟ್, ಮೊಂಕೊಝೆಬ್ ಮತ್ತು ಮಲಾತಿಯನ್ ಆಗಿವೆ. ಇವನ್ನೆಲ್ಲ ಬೇರೆ ಬೇರೆ ಬೆಳೆಗಳಿಗೆ ನಿಷೇಧಿಸಲಾಗಿದ್ದರೂ ಇವುಗಳ ಉಪಯೋಗವಿಂದು ಆಗುತ್ತಿದೆ. ಅಧ್ಯಯನಗಳ ಪ್ರಕಾರ ಇವೆಲ್ಲಾ ಮಾನವನ ಮತ್ತು ಪ್ರಕೃತಿಯ ಆರೋಗ್ಯ ದೃಷ್ಟಿಯಿಂದ ಹಾನಿಕಾರಕ ಆಗಿದ್ದರೂ, ರೈತರು ತಮ್ಮ ಬೆಳೆ ರಕ್ಷಣೆಗಾಗಿ ಬಳಕೆ ಮಾಡುತ್ತಿದ್ದಾರೆ. ಪರಿಣಾಮವಾಗಿ ನಾವಿಂದು ಬಳಕೆ ಮಾಡುವ ಆಹಾರ, ಹಣ್ಣು ಮತ್ತು ತರಕಾರಿಗಳು ವಿಷಪೂರಿತ ಆಗುತ್ತಿದೆ. ಇದರೊಂದಿಗೆ ಮಾರುಕಟ್ಟೆಯಲ್ಲಿ ಹಣ್ಣು ಮತ್ತು ತರಕಾರಿಗಳ ತಾಜಾತನ ಉಳಿಸಿಕೊಳ್ಳಲು ನಾನಾ ರೀತಿಯ ರಾಸಾಯನಿಕಗಳ ಬಳಕೆ ಆಗುತ್ತಿದೆ.
ಅಧ್ಯಯನವೊಂದರ ಪ್ರಕಾರ ಪಶ್ಚಿಮ ಬಂಗಾಳದಲ್ಲಿ ತಾಯಂದಿರ ಹಾಲಲ್ಲಿ ನಮ್ಮಲ್ಲಿ ಬಳಕೆ ಆಗುವ ಕೀಟನಾಶಕಗಳಾದ ಕರಾಟೆ, ಬೈಫೆನ್ ಮುಂತಾದವುಗಳ ಅಂಶಗಳನ್ನು ಕಂಡುಕೊಂಡಿದ್ದು, ಇದೊಂದು ಆಘಾತಕಾರಿ ಅಂಶ ಆಗಿದೆ. ಇದರೊಂದಿಗೆ ನಮ್ಮಲ್ಲಿ ವಾರ್ಷಿಕವಾಗಿ ಸಾವಿರಾರು ಜನರು ಜೀವ ಕಳಕೊಳ್ಳಲು ಮತ್ತು ಆರೋಗ್ಯ ಸಮಸ್ಯೆಗಳನ್ನು ಹೊಂದಲು ಇವು ಕಾರಣ ಆಗುತ್ತಿವೆ.
ಮೇಲಿನ ಎಲ್ಲಾ ಅಂಶಗಳನ್ನು ಗಣನೆಗೆ ತೆಗೆದುಕೊಂಡಾಗ ನಾವಿಂದು ಬಳಸುವ ಆಹಾರ ಧಾನ್ಯಗಳು, ಹಣ್ಣು ಹಂಪಲು ಮತ್ತು ತರಕಾರಿಗಳನ್ನು ಶುಚಿಗೊಳಿಸಿ ಬಳಸಬೇಕು. ಇದರೊಂದಿಗೆ ನಮ್ಮ ಕೃಷಿಕರಿಗೆ ಕಾಲಕಾಲಕ್ಕೆ ಕೀಟನಾಶಕಗಳ ಬಳಕೆ ಬಗ್ಗೆ ಶಿಕ್ಷಣ ಮತ್ತು ತರಬೇತಿ ಇಲಾಖೆಗಳ ವತಿಯಿಂದ ಒದಗಿಸಬೇಕು. ಇಲಾಖೆಗಳು ಸಮಯಕ್ಕನುಗುಣವಾಗಿ ಬಳಕೆ ಮಾಡಬಹುದಾದ ಕೀಟನಾಶಕಗಳ ಬಗ್ಗೆ ಮಾಹಿತಿ ಒದಗಿಸುವ ಪ್ರಯತ್ನ ಮಾಡಬೇಕು. ಇದರೊಂದಿಗೆ ಜೈವಿಕ ಕೀಟನಾಶಕದ ಬಳಕೆಯ ಹೆಚ್ಚಳಕ್ಕೆ ಆದ್ಯತೆ ನೀಡಬೇಕು. ಇದರೊಂದಿಗೆ ಬೆಳೆಗಾರರು ಮತ್ತು ವಿತರಕರು ಕೀಟನಾಶಕಗಳ ಬಗ್ಗೆ ಸ್ವಯಂ ನಿರ್ಧಾರ ತೆಗೆದುಕೊಳ್ಳುವುದರ ಬದಲು ವಿಜ್ಞಾನಿಗಳ ಮತ್ತು ಇಲಾಖೆಗಳ ಮಾರ್ಗದರ್ಶನ ಪಡಕೊಳ್ಳಬೇಕು. ಇಷ್ಟು ಮಾತ್ರವಲ್ಲದೆ ಸರಕಾರ ನಿಷೇಧಿತ ಮತ್ತು ಹಾನಿಕಾರಕ ಕೀಟನಾಶಕಗಳ ಮಾರಾಟದ ಮೇಲೆ ಕಡಿವಾಣ ಹಾಕಬೇಕು.
ಕೀಟ ನಾಶಕಗಳು ಇಂದು ಕೃಷಿ ಚಟುವಟಿಕೆಗಳಿಗೆ ಅನಿವಾರ್ಯ. ಆದರೆ ಅವುಗಳ ಬಗ್ಗೆ ತಿಳುವಳಿಕೆ ಹೊಂದಿ ಬಳಕೆ ಮಾಡಿದರೆ ಪ್ರಕೃತಿ, ಮನುಷ್ಯ ಮತ್ತು ಇತರ ಜೀವಸಂಕುಲಗಳ ಮೇಲೆ ಆಗುವ ದುಷ್ಪರಿಣಾಮಗಳನ್ನು ತಪ್ಪಿಸಬಹುದು. ಈ ನಿಟ್ಟಿನಲ್ಲಿ ವಿಜ್ಞಾನಿಗಳ ಮತ್ತು ಇಲಾಖೆಗಳ ಸಲಹೆಗಳನ್ನು ಪಾಲಿಸಿದರೆ ಹಾನಿಯನ್ನು ಕಡಿಮೆ ಮಾಡಲು ಸಾಧ್ಯ. ಪ್ರತಿದಿನ ಕೃಷಿ-ಗ್ರಾಮೀಣ-ಪರಿಸರ ಹಾಗೂ ಇತರ ಮಾಹಿತಿಗಾಗಿ ನಮ್ಮ “ದ ರೂರಲ್ ಮಿರರ್.ಕಾಂ”WhatsApp Channel ಗೆ ಇಲ್ಲಿ ಕ್ಲಿಕ್ ಮಾಡಿ..
ಕೃಷಿ ಮತ್ತು ರೈತರ ಕಲ್ಯಾಣ ಇಲಾಖೆಯ ಕೇಂದ್ರದ ಸಮಗ್ರ ಕೀಟ ನಿರ್ವಹಣಾ ಕೇಂದ್ರಗಳು…
ಮನಸ್ಸಿದ್ದರೆ ಮಾರ್ಗ ಎಂಬ ಗಾದೆ ಮಾತು ನಾವು ಕೇಳಿದ್ದೇವೆ. ಆದರೆ, ಕೆಲವು ಜನರ…
ಕೆಲವು ಕಡೆಗಳಲ್ಲಿ ರೈತರು ತಮ್ಮ ಜಮೀನಿಗೆ ಹೋಗಲು ಸರಿಯಾದ ದಾರಿಯಿಲ್ಲದೆ ಪರದಾಟ ನಡೆಸಬೇಕಾಗುತ್ತದೆ.…
ಕೃಷಿ ಇಲಾಖೆಯು ರೈತರಿಗೆಂದು ವಿವಿಧ ಸಬ್ಸಿಡಿ ಯೋಜನೆಗಳನ್ನು ಜಾರಿಗೆ ತಂದಿದೆ. ಇದಕ್ಕೆ ಯಾವ…
ಮಹಿಳೆಯರ ಏಳಿಗೆಗೆ ಸರ್ಕಾರವೂ ಹಲವಾರು ರೀತಿಯ ಯೋಜನೆಯನ್ನು ಜಾರಿಗೊಳಿಸಿದೆ. ಇದೀಗ ಗ್ರಾಮೀಣ ಮಹಿಳೆಯರಿಗೆ…
17.12.2025 ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ : ಕರಾವಳಿ…