ಅಚ್ಚ ಹಸುರಿನ ಉರುಟುರುಟಾದ ರೂಪಾಯಿ ನಾಣ್ಯದಷ್ಟು ಗಾತ್ರದ ಎಲೆಗಳ ದಂಟುಗಳನ್ನು ಹೊಂದಿರುವ ಗಿಡ ಕರ್ಲೆಂಕಿ ಗಿಡವು ನೋಡಲು ಒಮ್ಮೆಲೇ ತಗತೆ ಗಿಡದಂತೆ ಕಾಣುತ್ತದೆ. ಆದರೆ ತಗತೆ ಗಿಡದಲ್ಲಿ ಎಲೆಗಳು ಸ್ವಲ್ಪ ಸಣ್ಣದಾಗಿದ್ದು ಒಂದಕ್ಕೊಂದು ತಾಗಿ ದಟ್ಟವಾಗಿರುತ್ತವೆ. ಕರ್ಲೆಂಕಿ ಗಿಡದಲ್ಲಿ ಎಲೆಗಳು ಸ್ವಲ್ಪ ದೊಡ್ಡದಾಗಿದ್ದು ವಿರಳವಾಗಿರುತ್ತವೆ. ಅಲ್ಲದೆ ಕರ್ಲೆಂಕಿ ಗಿಡವು ಸುಮಾರು ಹತ್ತು ಹದಿನೈದು ಅಡಿ ಎತ್ತರಕ್ಕೆ ಬೆಳೆಯುವ ವೈಲ್ಡ್ ಪ್ಲಾಂಟ್. ಇದನ್ನು ಕಾಡಿನಲ್ಲಿ ಪ್ರತ್ಯೇಕವಾಗಿ ಗುರುತಿಸಲು ಸಾಧ್ಯವಿದೆ.
ಕರ್ಲೆಂಕಿ ಗಿಡದ ಸಸ್ಯ ಶಾಸ್ತ್ರೀಯ ಹೆಸರಿಗಾಗಿ ಗೂಗಲ್ ನಲ್ಲಿ ಹುಡುಕಿದಾಗ ಎರಡು ಹೆಸರುಗಳು ಗೋಚರಿಸಿದುವು. ಒಂದು Robinia pseudoacacia, ಇನ್ನೊಂದು Phyllanthus tenellus (Mascarene Island leaf flower) ಎಂಬುದಾಗಿ. ಈ ಗಿಡ ಭಾರತದಲ್ಲಿ ಅಷ್ಟೇ ಅಲ್ಲದೆ ವಿಶ್ವದ ಬೇರೆ ಬೇರೆ ಪ್ರದೇಶಗಳಲ್ಲಿ ಕಂಡುಬರುತ್ತದೆಂದು ಗೂಗಲ್ ತಿಳಿಸುತ್ತಿದೆ.
ನನ್ನ ತಂದೆಯವರು 70 ವರ್ಷದವರಿದ್ದಾಗ ಅವರ ಹೊಟ್ಟೆ ನೋವು, ನುಲಿತದ ಸಮಸ್ಯೆಗೆ ನನ್ನಮ್ಮ ಕರ್ಲೆಂಕಿ ಗಿಡದ ತೊಗಟೆಯ ನಾರನ್ನು ಕುದಿಸಿ ಕಷಾಯವನ್ನು ಮಾಡಿ ಕೊಡುತ್ತಿದ್ದರು. ಅವರಿಗೆ ಶೀಘ್ರವಾಗಿ ಗುಣವಾಗುತ್ತಿತ್ತು. ಅಮ್ಮನಿಂದ ಪ್ರೇರಿತಳಾಗಿ ನಾನು ಈ ಗಿಡವನ್ನು ವಿಟ್ಲದ ಸಮೀಪದ ನನ್ನ ಅಜ್ಜನ ಮನೆಯ ಕಾಡಿನಿಂದ ತಂದು ನೆಟ್ಟು ಬೆಳೆಸಿದ್ದೇನೆ. ಈಗ ಇದರ ಮರಿಗಿಡಗಳು ಹತ್ತಾರು ಹುಟ್ಟಿವೆ. ಕರುಳು ಸಂಬಂಧಿ ಕಾಯಿಲೆಗಳಿಗೆ ಈ ಗಿಡದ ತೊಗಟೆ ಹಾಗೂ ಸೊಪ್ಪನ್ನು ನಾವು ಕಷಾಯದ ರೀತಿಯಲ್ಲಿ ಔಷಧಿ ಯಾಗಿ ಬಳಕೆ ಮಾಡುತ್ತೇವೆ. ಅಜೀರ್ಣವಾಗಿ ಹೊಟ್ಟೆ ಉಬ್ಬರಿಸಿದರೆ ಈ ಎಲೆಗಳ ಕಷಾಯ ಸೇವನೆ ಹಿತಕರ. ಜೀರಿಗೆಯೊಂದಿಗೆ ಈ ಗಿಡದ ಒಂದು ಹಿಡಿ ಎಲೆಗಳನ್ನು ಚೆನ್ನಾಗಿ ಕುದಿಸಿ ದಿನಕ್ಕೆರಡು ಬಾರಿಯಂತೆ ಖಾಲಿ ಹೊಟ್ಟೆಗೆ ಸೇವಿಸಿದರೆ ಅಜೀರ್ಣ ಸಮಸ್ಯೆ ಸರಿಯಾಗುತ್ತದೆ.
ನನ್ನ ಒಂದು ಅನುಭವ ಹೀಗಿದೆ. ನಮ್ಮ ಶಾಲೆಯ ಏಳು ವರ್ಷದ ವಿದ್ಯಾರ್ಥಿನಿಗೆ ಹೊಟ್ಟೆ ನೋವಿನ ಸಮಸ್ಯೆ ಇತ್ತು. ಹೊಟ್ಟೆ ನೋವು ನಿವಾರಣೆಗಾಗಿ ಮಾಡಿದ ಯಾವುದೇ ಔಷಧಗಳೂ ಗುಣಾತ್ಮಕ ಫಲಿತಾಂಶ ನೀಡಿರಲಿಲ್ಲ. ಆ ಹುಡುಗಿ ಆಗಾಗ ಹೊಟ್ಟೆ ನೋವಿನಿಂದ ಒದ್ದಾಡುವುದು ಹೆತ್ತವರಿಗೆ ದೊಡ್ಡ ತಲೆನೋವಾಗಿತ್ತು. ಅವಳ ಅಮ್ಮ ನಮ್ಮ ಶಾಲೆಯಲ್ಲಿ ಶಿಕ್ಷಕಿಯಾಗಿದ್ದರು. ಬಹಳ ದಿನಗಳಿಂದ ಮುಚ್ಚಿಟ್ಟಿದ್ದ ತಮ್ಮ ಮಗಳ ಸಮಸ್ಯೆಯನ್ನು ಒಂದು ದಿನ ನನ್ನಲ್ಲಿ ಹೇಳಿಕೊಂಡರು. ನಾನವರಿಗೆ ಕರ್ಲೆಂಕಿ ಕಷಾಯವನ್ನು ಮಾಡಿ ಕುಡಿಸಲು ಹೇಳಿ ಅದರ ಎಲೆಗಳನ್ನು ಕೊಟ್ಟೆ. ಮೂರು ದಿನಗಳ ಕಷಾಯ ಸೇವನೆಯಿಂದ ಹುಡುಗಿಯ ಹೊಟ್ಟೆನೋವು ಕಡಿಮೆಯಾಯ್ತು. “ಸಸ್ಯ ಮೂಲ ಔಷಧಗಳಿಂದ ಯಾವುದೇ side effects ಬಾರದು, ಕಡಿಮೆಯಾಗುತ್ತದೋ ನೋಡೋಣ” ಎಂದು ಹೇಳಿಯೇ ಔಷಧ ಕೊಟ್ಟಿದ್ದೆ. ಮೂರೇ ದಿನಗಳಲ್ಲಿ ಕರ್ಲೆಂಕಿ ಕಷಾಯದ ಗುಣಾತ್ಮಕ ಫಲಿತಾಂಶವನ್ನು ಶಿಕ್ಷಕಿ ಹೇಳಿದಾಗ ನನಗೆ ಖುಷಿಯಾಯಿತು. ನನಗೆ ಪ್ರಯೋಗಾತ್ಮಕವಾಗಿ ಯಶಸ್ಸು ಸಿಕ್ಕಿದ ಅನುಭವವಾಯಿತು. ಇದಾಗಿ ೧೫ ವರ್ಷ ಕಳೆದಿದೆ. ಈಗ ಇಂಜಿನಿಯರ್ ಆಗಿ ಬೆಂಗಳೂರಿನಲ್ಲಿ ದುಡಿಯುತ್ತಿರುವ ಆಕೆಗೆ ಅಂದಿನಿಂದ ಇಂದಿನವರೆಗೆ ಮತ್ತೆಂದೂ ಹೊಟ್ಟೆನೋವು ಬರಲಿಲ್ಲ. ಇದು ಕರ್ಲೆಂಕಿ ಗಿಡದ ಉಪಯುಕ್ತತೆಗೆ ಸಾಕ್ಷಿ. ನಾನು ಇನ್ನೂ ಕೆಲವರಿಗೆ ಹೊಟ್ಟೆನೋವು ನಿವಾರಣೆಗೆ ಈ ಔಷಧ ನೀಡಿ ಗುಣಮುಖರಾದ ಉದಾಹರಣೆಗಳಿವೆ. ಹೊಟ್ಟೆಯಲ್ಲಿ ಅಸೌಖ್ಯ ವಾದಾಗಲೆಲ್ಲ ನಮ್ಮ ಮನೆಯಲ್ಲಿ ಈ ಕಷಾಯವನ್ನು ಮಾಡಿ ನಾವು ಕುಡಿಯುತ್ತೇವೆ. ಹಾಗಾಗಿ ನಮ್ಮಲ್ಲಿ ಆಲೋಪತಿ ಔಷಧದ ಅವಲಂಬನೆ ಇಲ್ಲ.
ನಮ್ಮಲ್ಲಿ ತಂದು ನೆಟ್ಟು ಬೆಳೆಸಿದ ಕರ್ಲೆಂಕಿ ಗಿಡ ಪೊದರು ಗಿಡವಾಗಿ ಬೆಳೆದಿತ್ತು. ಆದರೆ ಈಗ ಮೂಲ ಗಿಡ ಇಲ್ಲ. ಅದರ ಸುತ್ತ ಕೆಲವು ಮರಿಗಿಡಗಳು ಹುಟ್ಟಿಕೊಂಡಿವೆ. ತಾಯಿ ಗಿಡದಲ್ಲಿ ಹೂ, ಅಥವಾ ಕಾಯಿಗಳಾದದ್ದು ನಮ್ಮ ಗಮನಕ್ಕೆ ಬಂದಿಲ್ಲ. ಕರ್ಲೆಂಕಿ ಗಿಡಗಳನ್ನು ಮಾಡಲು ಅದರ ಗೆಲ್ಲು ನೆಟ್ಟರೆ ಬದುಕುವುದಿಲ್ಲ. ಬಹುಷಃ ಗಾಳಿಯಲ್ಲಿ ಬೀಜ ಪ್ರಸರಣದ ಮೂಲಕವೇ ಮರಿ ಗಿಡಗಳು ಆಗುತ್ತಿರಬಹುದು ಎಂದು ನನ್ನ ಭಾವನೆ.
ಮನೆಯಲ್ಲಿ ಊಟಕ್ಕಾಗಿ ಚಟ್ನಿ ಮಾಡುವಾಗ ನಾನು ಈ ಗಿಡದ ಚಿಗುರುಗಳನ್ನು ಉಪಯೋಗ ಮಾಡುತ್ತೇನೆ. ಅದು ಆರೋಗ್ಯಕ್ಕಾಗಿ ಆಹಾರದ ಮೌಲ್ಯವರ್ಧನೆ ಮಾಡುವ ಉಪಾಯವಾಗಿದೆ. ಈ ಎಲೆಗಳನ್ನು ಕಷಾಯಕ್ಕಾಗಿ ಕುದಿಸುವಾಗ ಅದಕ್ಕೆ ವಿಶೇಷ ಪರಿಮಳವೇನೂ ಇಲ್ಲ. ಹಸಿರಿರುವ ಎಲೆಗಳನ್ನು ಕುದಿಸಿದಾಗ ಕಂದು ಬಣ್ಣಕ್ಕೆ ತಿರುಗುತ್ತವೆ. ಕಷಾಯದ ಬಣ್ಣವೂ ನಸು ಕಂದು ಬಣ್ಣವಾಗಿ ಕಾಣುತ್ತದೆ.
ಸುಮಾರು 20 ವರ್ಷಗಳಿಂದ ನಮ್ಮ ಶಾಲಾ ಆವರಣದಲ್ಲಿ ಇರುವ ಈ ಗಿಡದ ಎಲೆಗಳ ಉಪಯೋಗ ಪಡಕೊಂಡವರು ಹಲವಾರು ಮಂದಿ. ಸೃಷ್ಠಿಕರ್ತ ಎಲೆ ಎಲೆಯಲ್ಲೂ ಒಂದಲ್ಲ ಒಂದು ಔಷಧೀಯ ಗುಣಗಳನ್ನು ಇರಿಸಿರುವುದು ಒಂದು ಸೋಜಿಗವೇ ಸರಿ.