ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಡಿ, ಉತ್ತರ ಪ್ರದೇಶದಲ್ಲಿ ಆಯ್ಕೆಯಾದ 21 ಲಕ್ಷ ರೈತರು ಈ ಯೋಜನೆಗೆ ಅನರ್ಹರು ಎಂದು ತನಿಖೆಯಲ್ಲಿ ತಿಳಿದು ಬಂದಿದೆ ಎಂದು ರಾಜ್ಯ ಕೃಷಿ ಸಚಿವ ಸೂರ್ಯ ಪ್ರತಾಪ್ ಶಾಹಿ ಹೇಳಿದ್ದಾರೆ.
ಕೇಂದ್ರದ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಡಿ ಉತ್ತರಪ್ರದೇಶದಲ್ಲಿ ಒಟ್ಟು 2.85 ಕೋಟಿ ರೈತರನ್ನು ಆಯ್ಕೆ ಮಾಡಲಾಗಿತ್ತು. ಇದೀಗ ಈ ಪೈಕಿ 21 ಲಕ್ಷ ಫಲಾನುಭವಿಗಳು ಅನರ್ಹರಾಗಿದ್ದಾರೆ. 1.71 ಕೋಟಿ ಫಲಾನುಭವಿಗಳ ಪರಿಶೀಲನೆ ಪೂರ್ಣಗೊಂಡಿದ್ದು, ಉಳಿದವರ ಪರಿಶೀಲನೆ ನಡೆಯುತ್ತಿದೆ ಎಂದು ಸೂರ್ಯ ಪ್ರತಾಪ್ ಶಾಹಿ ತಿಳಿಸಿದ್ದಾರೆ. ಯೋಜನೆಯಡಿ ಇದುವರೆಗೆ ಅನರ್ಹ ರೈತರಿಗೆ ನೀಡಿರುವ ಮೊತ್ತವನ್ನು ಅವರಿಂದ ವಸೂಲಿ ಮಾಡಲಾಗುವುದು ಎಂದು ಸಚಿವರು ಹೇಳಿದ್ದಾರೆ. ಪತಿ ಮತ್ತು ಪತ್ನಿ ಇಬ್ಬರೂ ಈ ಯೋಜನೆಯ ಪ್ರಯೋಜನವನ್ನು ಪಡೆಯುತ್ತಿರುವ ಇಂತಹ ಅನೇಕ ಪ್ರಕರಣಗಳಿವೆ. ಯೋಜನೆಗೆ ಅನರ್ಹರೆಂದು ಕಂಡುಬಂದವರಲ್ಲಿ ಆದಾಯ ತೆರಿಗೆ ಸಲ್ಲಿಸುತ್ತಿದ್ದ ಅನೇಕರು ಸೇರಿದ್ದಾರೆ ಎಂದು ಅವರು ವಿವರಿಸಿದರು.
ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿಯ ಮೂಲಕ ದೇಶದ ರೈತರಿಗೆ ನೆರವು ನೀಡುವ ಉದ್ದೇಶದಿಂದ ಕೇಂದ್ರ ಸರ್ಕಾರವು ಜಮೀನು ಹೊಂದಿರುವ ರೈತರ ಖಾತೆಗೆ ವರ್ಷಕ್ಕೆ 6000 ರೂಪಾಯಿಯನ್ನು ಮೂರು ಕಂತುಗಳ ಮೂಲಕ ಜಮೆ ಮಾಡುತ್ತದೆ. ಈಚೆಗೆ ಈ ಯೋಜನೆಯ ಮೂಲಕ ಅನೇಕ ಅನರ್ಹರೂ ಫಲಾನುಭವಿಗಳು ಇರುವುದರ ಬಗ್ಗೆ ದೂರುಗಳು ಬಂದಿತ್ತು. ಹೀಗಾಗಿ ದೇಶದಾದ್ಯಂತ ಪತ್ತೆ ಕಾರ್ಯ ಆರಂಭವಾಗಿತ್ತು. ಇದಕ್ಕಾಗಿ ಆಧಾರ್ ಲಿಂಕ್ ಸಹಿತ ವಿವಿಧ ಮಾರ್ಗಗಳನ್ನು ಸರ್ಕಾರ ಅನುಸರಿಸಿತ್ತು. ರಾಜ್ಯದಲ್ಲೂ ಈ ಪ್ರಕ್ರಿಯೆ ನಡೆಯುತ್ತಿದೆ.