ಹಾಲು ಉತ್ಪಾದನೆಗೆ ಹಸು ಬೇಕು, ಹಸುಗಳಿಗೆ ಮೇವು ಬೇಕು, ಮೇವು ಬೆಳೆಯಲು ಭೂಮಿ ಬೇಕು. ಆದರೆ ಹಸುವನ್ನೇ ಸಾಕದೆ, ಸೂಕ್ಷ್ಮಜೀವಿಗಳ ಸಹಾಯದಿಂದ ಹಾಲಿನ ಪ್ರಮುಖ ಪ್ರೋಟೀನ್‌ಗಳನ್ನು ಉತ್ಪಾದಿಸಿದರೆ? ಇಂಪೀರಿಯಲ್ ಕಾಲೇಜ್ ಲಂಡನ್‌ನ ಹೊಸ ಅಧ್ಯಯನ ಈ ಪ್ರಶ್ನೆಗೆ ಕುತೂಹಲಕಾರಿ ಲೆಕ್ಕಾಚಾರ ನೀಡಿದೆ. ಆದರೆ ಇದು ಪ್ರಾಯೋಗಿಕವಾ..? ಈ ಪ್ರಶ್ನೆಗೆ ಉತ್ತರವಿಲ್ಲ..!
ಹಸುವಿನ ಹಾಲಿನ ಬದಲಿಗೆ precision fermentation ಮೂಲಕ ತಯಾರಿಸಲಾದ ಹಾಲನ್ನು ಬಳಸಿದರೆ, ಹಾಲು ಉತ್ಪಾದನೆಗೆ ಬೇಕಾಗುವ ಭೂಮಿಯ ಪ್ರಮಾಣ ಶೇ.94 ರಿಂದ 96 ರವರೆಗೆ ಕಡಿಮೆಯಾಗಬಹುದು ಎಂದು ಲಂಡನ್ ಆಧಾರಿತ ಅಧ್ಯಯನ ಅಂದಾಜಿಸಿದೆ. ಆದರೆ, ಇದು ಪ್ರಯೋಗಾಲಯದ ಉತ್ಪಾದನೆಗೆ ಸಂಬಂಧಿಸಿದ ಭವಿಷ್ಯದ ಮಾದರಿ ಲೆಕ್ಕಾಚಾರವಾಗಿದ್ದು, ನೇರವಾಗಿ ಭಾರತದ ಹೈನುಗಾರಿಕೆಗೆ ಅನ್ವಯಿಸುವ ಅಂಕಿ ಅಲ್ಲ.
‘Precision-fermented milk’ ಎಂದರೇನು? : ಇದು ಹಸುವಿನಿಂದ ಹಾಲು ಹಿಂಡುವ ವಿಧಾನವಲ್ಲ. ನಿರ್ದಿಷ್ಟ ಹಾಲಿನ ಪ್ರೋಟೀನ್‌ಗಳನ್ನು ತಯಾರಿಸಲು ಜೆನೆಟಿಕ್ ಎಂಜಿನಿಯರಿಂಗ್ ಮಾಡಲಾದ ಸೂಕ್ಷ್ಮಜೀವಿಗಳನ್ನು, ಉದಾಹರಣೆಗೆ ಈಸ್ಟ್ ಅಥವಾ ಬ್ಯಾಕ್ಟೀರಿಯಾಗಳನ್ನು ಬಯೋರಿಯಾಕ್ಟರ್‌ಗಳಲ್ಲಿ ಬೆಳೆಸಲಾಗುತ್ತದೆ. ಇವುಗಳಿಗೆ ಸಕ್ಕರೆ ಆಧಾರಿತ ಕಚ್ಚಾ ವಸ್ತು ನೀಡಲಾಗುತ್ತದೆ. ನಂತರ ಸೂಕ್ಷ್ಮಜೀವಿಗಳು ಹಾಲಿನಲ್ಲಿ ಕಂಡುಬರುವ ನಿರ್ದಿಷ್ಟ ಪ್ರೋಟೀನ್‌ಗಳನ್ನು ಉತ್ಪಾದಿಸುತ್ತವೆ. ಅಂತಹ ಪ್ರೋಟೀನ್‌ಗಳಲ್ಲಿ beta-lactoglobulin, ಅಂದರೆ ಹಾಲಿನ ಪ್ರಮುಖ whey protein, ಪ್ರಸ್ತುತ ವಾಣಿಜ್ಯ ಅಭಿವೃದ್ಧಿಯಲ್ಲಿ ಮುಂದಿರುವ ಉದಾಹರಣೆಯಾಗಿದೆ. ಸರಳವಾಗಿ ಹೇಳುವುದಾದರೆ, ಹಸುವಿನಿಂದ ಹಾಲು, ಹಾಲಿನಿಂದ ಪ್ರೋಟೀನ್ ಎನ್ನುವ ವಿಷಯಕ್ಕೆ ಬದಲಾಗಿ ಸೂಕ್ಷ್ಮಜೀವಿ ಅದರಿಂದ ಬಯೋರಿಯಾಕ್ಟರ್ ಇದರಿಂದ ಹಾಲಿನ ಪ್ರೋಟೀನ್ ಎಂಬ ಹೊಸ ಉತ್ಪಾದನಾ ವ್ಯವಸ್ಥೆ…!
ಶೇ.96 ಭೂಮಿ ಉಳಿತಾಯ ಹೇಗೆ? : Imperial College London ಅಧ್ಯಯನವು ಲಂಡನ್ ನಲ್ಲಿ ಒಂದು ಟನ್ ಹಾಲು ಉತ್ಪಾದಿಸಲು ಬೇಕಾಗುವ ಭೂಮಿಯನ್ನು ಹೋಲಿಕೆ ಮಾಡಿದೆ. ಹಸುವಿನ ಹಾಲಿಗೆ ಸುಮಾರು 0.294 ಹೆಕ್ಟೇರ್/ಟನ್ ಭೂಮಿ ಬೇಕಾಗುತ್ತದೆ ಎಂದು ಮಾದರಿ ಲೆಕ್ಕಾಚಾರ ಮಾಡಿದೆ. Precision-fermented milkಗೆ ಅಂದಾಜು 0.012–0.017 ಹೆಕ್ಟೇರ್/ಟನ್ ಭೂಮಿ ಬೇಕಾಗುತ್ತದೆ. ಇದರಿಂದ ಭೂ ಬಳಕೆ ಶೇ.94–96ರಷ್ಟು ಕಡಿಮೆಯಾಗಬಹುದು ಎಂದು ಅಧ್ಯಯನ ಹೇಳಿದೆ. ಇಲ್ಲಿ ದೊಡ್ಡ ವ್ಯತ್ಯಾಸ ಏನೆಂದರೆ ಹಸುಗಳನ್ನು ಸಾಕಲು ಬೇಕಾದ ಮೇವು ಮತ್ತು ಮೇಯಿಸುವ ಜಾಗದ ಬಹುಭಾಗವನ್ನು ಈ ಹೊಸ ವ್ಯವಸ್ಥೆಯಲ್ಲಿ ತಪ್ಪಿಸಬಹುದು.
100% ಹಾಲನ್ನೇ ಬದಲಿಸಿದರೆ? : ಅಧ್ಯಯನವು ಲಂಡನ್ ನಲ್ಲಿ 2050 ರ ಮೂರು ಸನ್ನಿವೇಶಗಳನ್ನು ಪರಿಗಣಿಸಿದೆ. ಹಸುವಿನ ಹಾಲಿನ 20% ಬದಲಿಸಿದರೆ ಸುಮಾರು 8.59 ಲಕ್ಷ ಹೆಕ್ಟೇರ್ ಭೂಮಿ ಮುಕ್ತವಾಗಬಹುದು, 50% ಬದಲಿಸಿದರೆ ಸುಮಾರು 21.47 ಲಕ್ಷ ಹೆಕ್ಟೇರ್ ಹಾಗೂ 100% ಬದಲಿಸಿದರೆ ಸುಮಾರು 42.94 ಲಕ್ಷ ಹೆಕ್ಟೇರ್ ಭೂಮಿ ಮುಕ್ತವಾಗಬಹುದು ಎಂದು ಮೂಲ ಅಧ್ಯಯನದ ಸಾರಾಂಶ ಅಂದಾಜಿಸಿದೆ.
ಈ ಭೂಮಿಯನ್ನು ಅರಣ್ಯ, ಕೃಷಿ, ಅಗ್ರೋಫಾರೆಸ್ಟ್ರಿ, ಹೆಡ್ಜ್‌ರೋ, ಜೈವಿಕ ವೈವಿಧ್ಯ ಸಂರಕ್ಷಣೆ ಮುಂತಾದ ಉದ್ದೇಶಗಳಿಗೆ ಬಳಸುವ ಸಾಧ್ಯತೆಯನ್ನೂ ಅಧ್ಯಯನ ಚರ್ಚಿಸುತ್ತದೆ.
ಇದು ‘ಹಸುಗಳ ಅಗತ್ಯವೇ ಇಲ್ಲ’ ಎಂದರ್ಥವೇ? : ಇದರ ಅರ್ಥ ಹಸುವೇ ಇಲ್ಲ ಎಂಬರ್ಥವಲ್ಲ ಎಂದೂ ಅದು ಹೇಳಿದೆ. ಇದು ಬಹಳ ಮುಖ್ಯವಾದ ವ್ಯತ್ಯಾಸ. ಅಧ್ಯಯನವು ಲಂಡನ್ ನಲ್ಲಿ precision fermentation ದೊಡ್ಡ ಪ್ರಮಾಣದಲ್ಲಿ ಅಳವಡಿಸಿಕೊಂಡರೆ ಭೂ ಬಳಕೆ ಹೇಗೆ ಬದಲಾಗಬಹುದು ಎಂಬುದನ್ನು ಮಾದರಿಯಲ್ಲಿ ಲೆಕ್ಕ ಹಾಕಿದೆ. ಇದು ಭಾರತದಲ್ಲಿ ನಾಳೆಯಿಂದ ಹೈನುಗಾರಿಕೆ ಮುಗಿದುಹೋಗುತ್ತದೆ ಎಂಬ ಭವಿಷ್ಯವಾಣಿಯೂ ಅಲ್ಲ…!
ಅಧ್ಯಯನದ ಲೇಖಕರೇ ಹೆಚ್ಚಿನ ಸಂಶೋಧನೆ ಅಗತ್ಯವಿದೆ ಎಂದು ಹೇಳಿದ್ದಾರೆ. Precision-fermented milk ಇನ್ನೂ ಹಸುವಿನ ಹಾಲಿಗೆ ಜೈವಿಕವಾಗಿ ಸಂಪೂರ್ಣ ಸಮಾನವಲ್ಲ. ಉದಾಹರಣೆಗೆ ಸ್ಯಾಚುರೇಟೆಡ್ ಕೊಬ್ಬಿನ ಪ್ರಮಾಣದಲ್ಲಿ ವ್ಯತ್ಯಾಸವಿದೆ.
ಅಧ್ಯಯನದ ದೊಡ್ಡ ಮಿತಿಯೂ ಇದೆ : ಈ ಲೆಕ್ಕಾಚಾರದಲ್ಲಿ ಕೆಲವು ಪ್ರಮುಖ ಊಹೆಗಳನ್ನು ಮಾಡಲಾಗಿದೆ. ಅಧ್ಯಯನವು ಹಾಲಿನ ವಿವಿಧ ಘಟಕಗಳಿಗೆ ಪ್ರೋಟೀನ್, ಕೊಬ್ಬು, ಕಾರ್ಬೋಹೈಡ್ರೇಟ್ ಬೇರೆ ಬೇರೆ ಕೃಷಿ ಮೂಲಗಳನ್ನು ಪರಿಗಣಿಸಿದೆ. ಅದರಲ್ಲೂ precision-fermented protein ಉತ್ಪಾದನೆಗೆ ಲಭ್ಯವಿದ್ದ conversion data ಬಹುತೇಕ beta-lactoglobulin ಕುರಿತದ್ದಾಗಿತ್ತು. ಅದೇ ಪ್ರಮಾಣದ ಪರಿವರ್ತನೆ ಎಲ್ಲಾ ಹಾಲಿನ ಪ್ರೋಟೀನ್‌ಗಳಿಗೂ ಭವಿಷ್ಯದಲ್ಲಿ ಸಾಧ್ಯವಾಗುತ್ತದೆ ಎಂದು ಊಹಿಸಲಾಗಿದೆ. ಇಂತಹ ಅಂಶಗಳು ಮುಂದಿನ ಸಂಶೋಧನೆಯೊಂದಿಗೆ ಬದಲಾಗಬಹುದು.
ರೈತರಿಗೆ ಏನು ಸಂದೇಶ : ಈಗ ಇಲ್ಲಿಯೇ ಈ ಅಧ್ಯಯನದ ಬಗ್ಗೆಯೇ ದೊಡ್ಡ ಚರ್ಚೆ ಆರಂಭವಾಗುತ್ತದೆ. ಹಾಲು ಉತ್ಪಾದನೆಗೆ ಪರ್ಯಾಯ ತಂತ್ರಜ್ಞಾನಗಳು ವೇಗವಾಗಿ ಅಭಿವೃದ್ಧಿಯಾದರೆ, ಭವಿಷ್ಯದಲ್ಲಿ ಹಾಲಿನ ಮಾರುಕಟ್ಟೆ ಎರಡು ದಿಕ್ಕುಗಳಲ್ಲಿ ಸಾಗಬಹುದು. ಸಾಂಪ್ರದಾಯಿಕ ಹೈನುಗಾರಿಕೆ ಹಾಗೂ ಹೊಸ ಆಹಾರ ತಂತ್ರಜ್ಞಾನ. ಇದರಿಂದ ಹಾಲಿನ ಮಾರುಕಟ್ಟೆಯಲ್ಲಿ ಹೊಸ ಸ್ಪರ್ಧೆ ಸೃಷ್ಟಿಯಾಗಬಹುದು.
ಆದರೆ ಮತ್ತೊಂದೆಡೆ, ಹೈನುಗಾರಿಕೆ ಕೇವಲ ಹಾಲು ಉತ್ಪಾದನೆಯಲ್ಲ. ಗ್ರಾಮೀಣ ಕುಟುಂಬಗಳ ಆದಾಯ, ಗೋಮಯ, ಸಾವಯವ ಗೊಬ್ಬರ, ಕರುಗಳ ಮೌಲ್ಯ, ಕೃಷಿ–ಪಶುಸಂಗೋಪನೆಯ ಸಂಯೋಜನೆ ಮತ್ತು ಸ್ಥಳೀಯ ಉದ್ಯೋಗ ಇವೆಲ್ಲವೂ ಅದರ ಭಾಗ. ಹೀಗಾಗಿ ಹಾಲಿನ ಒಂದು ಭಾಗವನ್ನು ಲ್ಯಾಬ್ ಆಧಾರಿತ ಉತ್ಪಾದನೆ ಬದಲಾಯಿಸಿದರೆ, ಅದರ ಸಾಮಾಜಿಕ ಮತ್ತು ಗ್ರಾಮೀಣ ಆರ್ಥಿಕ ಪರಿಣಾಮವನ್ನು ಕೇವಲ ‘ಭೂಮಿ ಉಳಿಯುತ್ತದೆ’ ಎಂಬ ಲೆಕ್ಕದಲ್ಲಿ ಅಳೆಯಲು ಸಾಧ್ಯವಿಲ್ಲ.
ಮತ್ತೊಂದು ಪ್ರಶ್ನೆ: ಮುಕ್ತವಾಗುವ ಭೂಮಿ ಯಾರಿಗೆ? : ಇದು ರೈತರಿಗೆ ಬಹಳ ಮುಖ್ಯವಾದ ಪ್ರಶ್ನೆ. ಹೈನುಗಾರಿಕೆಗೆ ಬಳಸುತ್ತಿದ್ದ ಭೂಮಿ ಕಡಿಮೆಯಾದರೆ ಆ ಭೂಮಿಆಹಾರ ಬೆಳೆಗಳಿಗೆ ಹೋಗುತ್ತದೆಯೇ?, ಅರಣ್ಯವಾಗುತ್ತದೆಯೇ?, ಅಗ್ರೋಫಾರೆಸ್ಟ್ರಿಯಾಗುತ್ತದೆಯೇ?, ಜೈವಿಕ ವೈವಿಧ್ಯ ಸಂರಕ್ಷಣೆಗೆ ಬಳಸಲಾಗುತ್ತದೆಯೇ?, ಅಥವಾ ಬೇರೆ ಕೈಗಾರಿಕಾ/ನಗರ ಬಳಕೆಗೆ ಹೋಗುತ್ತದೆಯೇ? ಎಂಬುದು ನೀತಿ ನಿರ್ಧಾರಗಳ ಮೇಲೆ ಅವಲಂಬಿತ. ಆದ್ದರಿಂದ ಭೂಮಿ ಉಳಿಸುವ ತಂತ್ರಜ್ಞಾನಕ್ಕಿಂತ, ಉಳಿದ ಭೂಮಿಯನ್ನು ಹೇಗೆ ಬಳಸಲಾಗುತ್ತದೆ ಎಂಬುದು ಕೂಡ ಅಷ್ಟೇ ಮುಖ್ಯ.
ಹೈನುಗಾರಿಕೆಯ ಭವಿಷ್ಯಕ್ಕೆ ಹೊಸ ಪ್ರಶ್ನೆ : ಒಂದು ಕಡೆ ಹವಾಮಾನ ಬದಲಾವಣೆ, ಭೂಮಿ ಕೊರತೆ ಮತ್ತು ಆಹಾರ ಉತ್ಪಾದನೆಯ ಒತ್ತಡ. ಮತ್ತೊಂದು ಕಡೆ ಗ್ರಾಮೀಣ ಉದ್ಯೋಗ, ಸಣ್ಣ ರೈತರ ಆದಾಯ ಮತ್ತು ಹಾಲಿನ ಬೇಡಿಕೆ. ಈ ಎರಡರ ನಡುವೆ precision fermentation ಹೊಸ ತಂತ್ರಜ್ಞಾನವಾಗಿ ಪ್ರವೇಶಿಸುತ್ತಿದೆ. ಹೀಗಾಗಿ ಈಗಲೇ ಈ ಅಧ್ಯಯನ ಪ್ರಶ್ನೆಯಾಗಿ ಕಾಡಿದೆ.
ಪ್ರತಿದಿನ ಕೃಷಿ-ಗ್ರಾಮೀಣ-ಪರಿಸರ-ಹವಾಮಾನ ಬದಲಾವಣೆ ಹಾಗೂ ಇತರ ಮಾಹಿತಿಗಾಗಿ ನಮ್ಮ “ದ ರೂರಲ್ ಮಿರರ್.ಕಾಂ”WhatsApp Channel ಫಾಲೋಮಾಡಲು ಇಲ್ಲಿ ಕ್ಲಿಕ್ ಮಾಡಿ
A 2026 Imperial College London study estimates that precision-fermented milk could require 94–96% less land than conventional cow’s milk in the UK. The researchers modelled dairy proteins produced using engineered microorganisms and estimated that replacing 20%, 50% or 100% of UK cow’s milk could release roughly 859,000, 2.15 million or 4.29 million hectares respectively by 2050. However, the study is a UK modelling exercise with significant assumptions and should not be interpreted as a direct forecast for Indian dairy farming


