ಗಣೇಶೋತ್ಸವಕ್ಕೆ ಇನ್ನು ಕೆಲವೇ ದಿನಗಳು ಬಾಕಿ ಇವೆ. ಗಣಪನ ಭಕ್ತರಿಂದ ಗೌರಿ ಮತ್ತು ಗಣೇಶ ಮೂರ್ತಿಗಳಿಗಾಗಿ ಬೇಡಿಕೆಯೂ ಹೆಚ್ಚುತ್ತಿದೆ. ಪರಿಸರವಾದಿಗಳು ಹಾಗೂ ಸರ್ಕಾರದ ಸತತ ಜಾಗೃತಿಯಿಂದಾಗಿ ವರ್ಷದಿಂದ ವರ್ಷಕ್ಕೆ ಜನರಿಂದ ಪರಿಸರ ಸ್ನೇಹಿ ಮಣ್ಣಿನ ಮೂರ್ತಿ ಪ್ರತಿಷ್ಠಾಪನೆಗೆ ಆದ್ಯತೆ ಹೆಚ್ಚುತ್ತಿದೆ. ಹಲವು ಕಡೆ ಈ ಜಾಗೃತಿ ಬೆಳೆಯುತ್ತಿದೆ. ಬಳ್ಳಾರಿಯಲ್ಲಿ ವಿಶೇಷ ಅಭಿಯಾನದಲ್ಲಿ ಈ ಬಾರಿ ಗಣೇಶನ ಮೂರ್ತಿಯ ಮಣ್ಣಿನೊಳಗೆ ಹಲವು ರೀತಿಯ ಹಣ್ಣಿನ ಬೀಜಗಳನ್ನು ಹುದುಗಿಸಿಡಲಾಗಿದೆ. ಪೂಜೆಯ ಬಳಿಕ ಗಣಪತಿ ವಿಸರ್ಜನೆಯ ಬಳಿಕ ಗಿಡವಾಗಿ ಫಲ ನೀಡುವ ವಿಶೇಷ ಯೋಜನೆ-ಕಾಳಜಿಯನ್ನು ವಹಿಸಲಾಗಿದೆ.
ಚಿಕ್ಕಮಗಳೂರು ಜಿಲ್ಲೆಯಲ್ಲಿ ಕಲಾವಿದರು ಕೃತಕ ಬಣ್ಣ ಮತ್ತು ಪ್ಲಾಸ್ಟರ್ ಆಫ್ ಪ್ಯಾರಿಸ್ ರಹಿತ, ಮಣ್ಣಿನ ಗಣೇಶ ಮೂರ್ತಿಗಳ ತಯಾರಿಕೆಯಲ್ಲಿ ತೊಡಗಿದ್ದು, ಬಣ್ಣ ಬಣ್ಣದ ಮೂರ್ತಿಗಳು ನೋಡುಗರ ಕಣ್ಮನ ಸೆಳೆಯುತ್ತಿವೆ.
ಹಲವು ವರ್ಷಗಳಿಂದ ಮಣ್ಣಿನ ಗಣೇಶಮೂರ್ತಿ ಪ್ರತಿಷ್ಠಾಪನೆ ನಡೆಸಿಕೊಂಡು ಬರುತ್ತಿದ್ದು, ಭಕ್ತರು ಮತ್ತು ನಾಗರಿಕರಿಂದಲೂ ಮೆಚ್ಚುಗೆ ವ್ಯಕ್ತವಾಗುತ್ತಿದೆ ಎನ್ನುತ್ತಾರೆ ರಮೇಶ. ಗಣಪತಿ ಮೂರ್ತಿ ತಯಾರಿಕೆಯಲ್ಲಿ ತೊಡಗಿರುವ ಕಲಾವಿದೆ ಶಾರದಮ್ಮ ಮಾತನಾಡುತ್ತಾ, ವಿಘ್ನ ನಿವಾರಕ ವಿನಾಯಕನ ಮೂರ್ತಿಯಿಂದ ಪರಿಸರಕ್ಕೆ ಮಾರಕ ಆಗಬಾರದು ಎಂಬ ಉದ್ದೇಶದಿಂದ ಪರಿಸರ ಸ್ನೇಹಿ ಮೂರ್ತಿ ತಯಾರಿಕೆಗೆ ಆದ್ಯತೆ ನೀಡುತ್ತಿದ್ದೇವೆ ಎನ್ನುತ್ತಾರೆ.
ಬಳ್ಳಾರಿ ಜಿಲ್ಲಾಡಳಿತ ಮತ್ತು ಹಂಪಿ ಕನ್ನಡ ವಿಶ್ವವಿದ್ಯಾಲಯದ ಸಹಯೋಗದಲ್ಲಿ ಪರಿಸರ ಸ್ನೇಹಿ ಮಣ್ಣಿನ ವೃಕ್ಷ ಗಣೇಶ ಮೂರ್ತಿ ರಚನಾ ಕಾರ್ಯಾಗಾರಕ್ಕೆ ಬಳ್ಳಾರಿ ನಗರದಲ್ಲಿ ಚಾಲನೆ ನೀಡಲಾಗಿತ್ತು. ಈ ವೇಳೆ ಹಂಪಿ ವಿಶ್ವವಿದ್ಯಾಲಯದ ದೃಶ್ಯ ಕಲಾ ವಿಭಾಗದ ಸಿಬ್ಬಂದಿ ಹಾಗೂ ಪ್ರಾಧ್ಯಾಪಕ ವರ್ಗ ಪಿಒಪಿ, ಕೃತಕ ಬಣ್ಣ ರಹಿತ ಸಾವಯವ ಗಣೇಶ ಮೂರ್ತಿ ರಚಿಸುವ ಕುರಿತು ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿದರು.
ಮಕ್ಕಳು ತಾವು ತಯಾರಿಸಿದ ಮೂರ್ತಿಯನ್ನು ಮನೆಗೆ ಕೊಂಡೊಯ್ದು ಪ್ರತಿಷ್ಠಾಪನೆ ಮಾಡಲಿದ್ದಾರೆ. ಗಣೇಶನ ಮೂರ್ತಿಯ ಮಣ್ಣಿನೊಳಗೆ ಹಲವು ರೀತಿಯ ನುಗ್ಗೆ, ಸೀತಾಫಲ, ಪೇರಳೆ ಇತ್ಯಾದಿ ಹಣ್ಣಿನ ಬೀಜಗಳನ್ನು ಹುದುಗಿಸಿದ್ದೇವೆ. ವಿಸರ್ಜನೆ ಬಳಿಕ ಇವು ಗಿಡ ಮರಗಳಾಗಿ ಪರಿಸರ ರಕ್ಷಣೆಗೆ ಕೊಡುವೆ ನೀಡಲಿವೆ ಎಂದು ಅರಣ್ಯ ಇಲಾಖೆ ಜಿಲ್ಲಾ ಉಪ ಸಂರಕ್ಷಣಾಧಿಕಾರಿ ಡಾ.ಬಸವರಾಜ ಹೇಳಿದ್ದಾರೆ. ಪ್ರತಿದಿನ ಕೃಷಿ-ಗ್ರಾಮೀಣ-ಪರಿಸರ ಹಾಗೂ ಇತರ ಮಾಹಿತಿ ಮತ್ತು ನ್ಯೂಸ್ ಎಲರ್ಟ್ ಗಾಗಿ ನಮ್ಮ “ದ ರೂರಲ್ ಮಿರರ್.ಕಾಂ” WhatsApp Channel ಗೆ ಇಲ್ಲಿ ಕ್ಲಿಕ್ ಮಾಡಿ ಸೇರಿಕೊಳ್ಳಿ…


